~ಗುಲ್ಝಾರ್.
~ಅನು- ಡಾ.ಲಕ್ಷ್ಮಣ ವಿ ಎ
**
1987 ರಲ್ಲಿ ಗುಲ್ಜಾರರಿಂದ ನಿರ್ದೇಶಿತವಾದ ‘ಇಜಾಜತ್’ ಚಿತ್ರದ .. ಮೇರಾ ಕುಛ ಸಾಮಾನ್ .. ಇಂದಿಗೂ ಕಾವ್ಯ ಹಾಗು ಪ್ರೇಮಿಗಳ ಮತ್ತು ಕಾವ್ಯ ಪ್ರೇಮಿಗಳ ಫೇವರೀಟ್ ಹಾಡು.ಈ ಹಾಡನ್ನು ಬರೆದವರೂ ಗುಲ್ಜಾರ್ ರೆ….
ಸಂಗೀತ ನಿರ್ದೇಶನ ಆರ್ ಡಿ ಬರ್ಮನ್ ಹಾಡಿದವರು ಆಶಾಜೀ.
*****
*ಮೇರಾ ಕುಛ ಸಾಮಾನ್ …..*
ನನ್ನ ಕೆಲ ವಸ್ತುಗಳು ನಿಮ್ಮ ಬಳಿ ಇವೆ
ಶ್ರಾವಣದ ಕೆಲ ಒದ್ದೆ ಒದ್ದೆ ದಿನಗಳು
ನಿಮ್ಮ ಬಳಿ ಇವೆ
ಮತ್ತು ನನ್ನ ಪತ್ರಕ್ಕಂಟಿಕೊಂಡ ರಾತ್ರಿ
ಹಾಗೆ ಇರಬಹುದು ಆ ಕತ್ತಲೆ ಬೆಳಗಿಸಿ
ನನ್ನ ವಸ್ತು ನನಗೆ ವಾಪಸು ಮರಳಿಸಿ
ತರಗೆಲೆಗಳು …..!?
ಇನ್ನೂ ಇರಬಹುದಲ್ವ ?
ರೆಂಬೆಯಿಂದ ಕಳಚಿಕೊಂಡ ಎಲೆಯ
ನಿಟ್ಟುಸಿರಿನೊಂದಿಗೆ
ಮರಳಿದ್ದೆ ಒಂದು ದಿನ
ಆ ಎಲೆಯ ನಿಟ್ಟುಸಿರು ನನ್ನ ಕಿವಿಯೊಳಗಿನ್ನೂ
ಕಂಪಿಸುತ್ತಿದೆ
ಆ ರೆಂಬೆ ಮುರಿದು ಕಳಿಸಿ
ನನ್ನ ವಸ್ತು ನನಗೆ ಮರಳಿಸಿ
ಒಂದೇ ಕೊಡೆಯ
ಸೂರಿನಡಿ ಅರ್ಧರ್ಧ ನೆನೆದು
ಇನ್ನರ್ಧ ಒಣಗಿ
ಒಣ ಮೈಯಿಂದ ನಾನು ಮರಳಿದ್ದೆ
ಒದ್ದೆ ಮೈ ಆ ಹಾಸಿಗೆಯಲ್ಲಿನ್ನೂ
ಹೊರಳಾಡುತಿರಬಹುದು ಅದನ್ನೂ
ಕಳಿಸಿ
ನನ್ನ ವಸ್ತು ನನಗೆ ಮರಳಿಸಿ
ನೂರಾ
ಹದಿನಾರು ಹುಣ್ಣಿಮೆ ಇರುಳು
ನಿನ್ನ ಒಂದು ಭುಜದ ಮಚ್ಚೆ
ಒದ್ದೆ ಮೆಹಂದಿಯ ಘಮ
ಮುದ್ದು ಮದ್ದಾದ ಆರೋಪ
ಆಣೆ ಪ್ರಮಾಣ
ಎಲ್ಲಾ ನೆನಪಿಟ್ಟುಕೊಂಡು ಮರೆಯದೆ
ಕಳಿಸು
ನನ್ನ ವಸ್ತು ನನಗೆ ಮರಳಿಸು
ಒಂದೇ
ಒಂದು ಕೊನೆಯ ಕೋರಿಕೆ
ನೀನು ಕಳಿಸಿದ ಎಲ್ಲವನ್ನೂ
ಮಣ್ಣು ಮಾಡಿ
ನಾನೂ ಅಲ್ಲೇ ಚಿರ ನಿದ್ರೆಗೆ ಜಾರುವೆ
ನನಗೆ ಅನುಮತಿ ಕೊಡು
0 ಪ್ರತಿಕ್ರಿಯೆಗಳು