ಗುರುವಿನ ಗುಲಾಮರಾಗಿರಲಿಲ್ಲ..

ಡಾ. ಸಬಿತಾ ಬನ್ನಾಡಿ

**

ಅದು ನಾನ್ ಸಿಲೆಬಸ್ ಕ್ಲಾಸ್. ಮಧ್ಯಾಹ್ನ ಎರಡು ಗಂಟೆಗೆ ಶುರು ಆದರೆ ಸಂಜೆ ನಾಲ್ಕು, ನಾಲ್ಕೂವರೆ, ಐದು ಎಷ್ಟು ಬೇಕಾದರೂ ಆಗಬಹುದು. ಒಂದು ದಿನಕ್ಕೆ ಒಬ್ಬರೇ ಟೀಚರ್ರು. ತರಗತಿ ಬಿಟ್ಟ ಮೇಲೂ ಕಾರಿಡಾರ್‌ನಲ್ಲಿ ದುಂಡಗೆ ನಿಂತು ಚರ್ಚೆ ಮುಂದುವರಿಯಬಹುದು. ಸಿಲೆಬಸ್ ಕ್ಲಾಸನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೆವೊ ಇದನ್ನೂ ಅಷ್ಟೇ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೆವು. ಇದು ಪರೀಕ್ಷೆಗೂ ಇಲ್ಲ, ಅಂಕಕ್ಕೂ ಇಲ್ಲ ಎಂದು ಗೊತ್ತಿದ್ದೂ ಇಲ್ಲಿ ಮಾಡುವ ಟೆಸ್ಟ್ಗಳನ್ನೂ ಅಷ್ಟೇ ಶ್ರದ್ಧೆಯಿಂದ ಬರೆಯುತ್ತಿದ್ದೆವು. ಎಷ್ಟು ಅಂಕಗಳು ಬರಬಹುದು ಎಂದು ಕಾತರತೆಯಿಂದ ಕಾಯುತ್ತಿದ್ದೆವು.

ಇಷ್ಟಾಗಿ ನಮಗೆ ಈ ಕ್ಲಾಸ್ ತೆಗೆದುಕೊಳ್ಳುತ್ತಿದ್ದವರನ್ನು ನಾವು ಬೆಳಿಗ್ಗೆ ಸಿಲೆಬಸ್ ಕ್ಲಾಸ್, ತೆಗೆದುಕೊಳ್ಳುತ್ತಿದ್ದ ಟೀಚರ್‌ಗಳಷ್ಟೇ ಗೌರವದಿಂದ ಕಾಣುತ್ತಿದ್ದವು. ಹಾಗೆ ನೋಡಿದರೆ ಅವರು ಟೀಚರುಗಳೇ ಅಲ್ಲ. ಅವರು ಪಿಎಚ್‌ಡಿ ಸ್ಕಾಲರ್ಸ್. ಆದರೆ ಜಗತ್ತಿನ ಇತ್ತೀಚಿನ ಚಿಂತನೆ, ಸಿದ್ಧಾಂತ, ಹೊಸ ಪುಸ್ತಕಗಳು, ಹೊಸ ಮಾದರಿಯ ವಿಮರ್ಶೆಗಳು, ಕವಿತೆಗಳು ಇವೆಲ್ಲವನ್ನೂ ಮುಕ್ತವಾಗಿ ಚರ್ಚಿಸಲು ಸಾಧ್ಯವಾಗುವುದು ಇಲ್ಲೇ ಆಗಿರುವುದರಿಂದ ನಮ್ಮ ಕುತೂಹಲಕ್ಕೆ ಇಂಬು ನೀಡುತ್ತಿತ್ತು. ಜೊತೆಗೆ ಅದುವರೆಗೂ ನಾವು ತಿಳಿದಿದ್ದುದಕ್ಕಿಂತ ಬೇರೆಯೇ ಏನನ್ನೋ ಇವರು ಹೇಳುತ್ತಿದ್ದಾರೆ ನಮ್ಮನ್ನು ಗೊಂದಲಕ್ಕೆ ದೂಡುತ್ತಿದ್ದಾರೆ ಎನ್ನುವುದರ ಜೊತೆಗೇ ನಾವೇನೋ ಹೊಸದನ್ನು ತಿಳಿದುಕೊಳ್ಳುತ್ತಿದ್ದೇವೆ ಎಂಬ ಜಂಬವೂ ನಮ್ಮೊಳಗೆ ಸೇರಿಕೊಳ್ಳುತ್ತಿತ್ತು.

ಅದರ ನಡು ನಡುವೆ ಎಂತ ಹೇಳ್ತಿದಾರೋ? ಯಾವುದು ಸರಿಯೋ? ಯಾವುದು ತಪ್ಪೋ? ಎಂಬ ಗೊಣಗಾಟವೂ ಅವರ ಮುಂದೆಯೇ ನಡೆಯುತ್ತಿತ್ತು. ಆದರೆ ಯಾರೊಬ್ಬರಾಗಲೀ ಒಂದೇ ಒಂದು ದಿನವೂ ತರಗತಿ ತಪ್ಪಿಸಿದ್ದೆಂಬುದು ಇಲ್ಲವೇ ಇಲ್ಲ. ಇದೆಲ್ಲಾ ನಮ್ಮ ಕನ್ನಡ ಎಂ.ಎ ತರಗತಿಯಲ್ಲಿ ನಡೆಯುತ್ತಿದ್ದುದು. ಆ ತರಗತಿಗಳಿಗೆ ಮಾತ್ರವಲ್ಲ ಇಡೀ ಎರಡು ವರ್ಷಗಳಲ್ಲಿ ಬೆಳಿಗ್ಗಿನ ತರಗತಿಗಳಿಗೂ ಒಬ್ಬರೇ ಒಬ್ಬರು ಗೈರು ಹಾಜರಾದುದು ನನಗೆ ನೆನಪಿಗೇ ಬರುತ್ತಿಲ್ಲ. ನಾನಂತೂ ಒಂದು ತರಗತಿಗೂ ಗೈರು ಹಾಜರಾಗಿಲ್ಲ.

ಅದು ಬದಿಗಿರಲಿ. ನಿಮಗೆ ಅಚ್ಚರಿಯೂ ಆಗಬಹುದು. ಎರಡೂ ವರ್ಷಗಳಲ್ಲಿ ನಿಗಧಿತ ತರಗತಿ ನಡೆಯದ ದಿನವೇ ಇರಲಿಲ್ಲ. ಅರೆ! ಏನು ಸ್ಟೂಡೆಂಟ್ಸ್ಗೆ ಆರೋಗ್ಯ ಚೆನ್ನಾಗಿ ಇರುತ್ತಿತ್ತೇನೋ ಹಾಗಾದರೆ ಮೇಷ್ಟರು ಮೇಡಂಗಳಿಗೂ ಒಂದು ದಿವಸವಾದರೂ ರಜೆ ಹಾಕುವ ಪ್ರಮೇಯ ಬರಲಿಲ್ಲವೇ? ಅವರು ಸೆಮಿನಾರು ಅದು ಇದು ಅಂತ ಹೋಗಲೇ ಇಲ್ಲವೇ ಅಂತ ಒಂದು ಪ್ರಶ್ನೆ ಬರುವುದು ಅತ್ಯಂತ ಸಹಜ. ಹೌದು, ಅವರು ರಜೆ ಹಾಕಿದರೂ ಇಲ್ಲಿ ಎಲ್ಲಾ ತರಗತಿಗಳೂ ನಡೆಯುತ್ತಿದ್ದವು. ಹೇಗೆ ಎಂದರೆ ವಿಭಾಗದಲ್ಲಿರುವ ರಿಸರ್ಚ್ ಸ್ಕಾಲರ್‌ಗಳು, ರಿಸರ್ಚ್ ಅಸಿಸ್ಟೆಂಟ್‌ಗಳು ಯಾರಾದರೂ ಬಂದು ಏನಾದರೂ ಪಾಠ ಮಾಡುತ್ತಲೇ ಇದ್ದರು.

ಮಂಗಳೂರು ವಿವಿಯ ಪ್ರವೇಶ ದ್ವಾರದ ನೋಟ.

ಒಂದು ಉದಾಹರಣೆ ಕೊಡುವೆ. ಒಮ್ಮೆ ಆಗ ರಿಸರ್ಚ್ ಅಸಿಸ್ಟೆಂಟ್ ಆಗಿದ್ದ ಶಿವರಾಮ ಶೆಟ್ಟರು ಬಂದು ಎಲ್ಲರಿಗೂ ತುಳುವಿನ ಆಟಿಕಳಂಜದ ಬಗ್ಗೆ ಸಂವಾದದ ರೂಪದ ತರಗತಿ ತೆಗೆದುಕೊಂಡರು. ಕುಂದಾಪುರ ಕಡೆಯ ನನಗೆ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. ಈ ತರಗತಿಯಿಂದಲೇ ಗೊತ್ತಾಗಿದ್ದು. ಈಗಿನ ಮಕ್ಕಳಾದರೆ ಇದು ಪರೀಕ್ಷೆಗೆ ಬರುತ್ತಾ? ಸುಮ್ನೆ ಏನೇನೋ ಪಾಠ ಮಾಡ್ತಾರಪ್ಪ ಅನ್ತಿದ್ರೋ ಏನೋ. ಇನ್ನೂ ಒಂದು ವಿಶೇಷವನ್ನು ಹೇಳಲೇ ಬೇಕು. ಅದೆಂದರೆ ಯಾರೇ ರಜೆ ಹಾಕಿರಲಿ ಅವರ ಬದಲಿಗೆ ತರಗತಿ ತೆಗೆದುಕೊಳ್ಳುವವರು ರಜೆ ಹಾಕಿದವರ ಸಿಲೆಬಸ್‌ನ್ನು ಪಾಠ ಮಾಡುತ್ತಿರಲಿಲ್ಲ. ಅದು ವಿಭಾಗದ ಎಚ್ ಓ ಡಿ ಬೇಕಾದರೂ ಆಗಿರಲಿ. ಅವರು ಮುಂದೆ ತಮ್ಮ ತಮ್ಮ ತರಗತಿಯನ್ನು ವಿಶೇಷ ಕ್ಲಾಸ್, ತೆಗೆದುಕೊಂಡು ತಾವೇ ಮುಗಿಸಿಕೊಡುತ್ತಿದ್ದರು.

ಇಷ್ಟೆಲ್ಲ ಕ್ಲಾಸ್, ಆದ ಮೇಲೆ ವಿಶೇಷ ಕ್ಲಾಸ್! ಹ್ಞಾಂ ಅದರ ಕತೆ ಆಮೇಲೆ ಹೇಳುವೆ. ೧೯೮೬ ರಿಂದ ೮೮ರ ತನಕ ನಾನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಮಾಡಿದೆ. ಆಗ ಪ್ರೊ. ಬಿ.ಎ. ವಿವೇಕ ರೈ ವಿಭಾಗದ ಮುಖ್ಯಸ್ಥರಾಗಿದ್ದರು. (ಈಗ ಅಧ್ಯಕ್ಷರು ಎಂದು ಕರೆಯಲಾಗುತ್ತದೆ.) ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ರ ತನಕ ತರಗತಿಗಳಿರುತ್ತಿದ್ದವು. ಶನಿವಾರ ಸೆಮಿನಾರುಗಳು. ಮಧ್ಯಾಹ್ನದ ನಾನ್ ಸಿಲೆಬಸ್ ಕ್ಲಾಸ್ ಮುಗಿದ ಮೇಲೆ ಸಂಜೆ ಓಡಿ ಹೋಗಿ ಹಾಸ್ಟೆಲ್‌ನಲ್ಲಿ ಕಾಫಿ/ಸ್ನಾಕ್ಸ್ ತಿಂದು ಮತ್ತೆ ಕ್ಯಾಂಪಸ್‌ಗೆ ಬಸ್ ಅಥವಾ ಕಾಲ್ನಡಿಗೆಯಲ್ಲಿ ಬಂದು ಲೈಬ್ರೆರಿಗೆ ಹೋಗುತ್ತಿದ್ದೆವು.

ಲೋಕಲ್ ಆಗಿ ಓಡಾಡುವವರು ಆರು ಏಳು ಗಂಟೆಯ ಹೊತ್ತಿಗೆ ಮನೆಗೆ ಹೋಗುತ್ತಿದ್ದರು. ನಾವು ಮೊದಲು ಪೀರಿಯಾಡಿಕಲ್ಸ್ ಗಾಗಿ ಇರುವ ಲೈಬ್ರೆರಿಗೆ ಹೋಗಿ ಒಂದಿಷ್ಟು ಮ್ಯಾಗಜ್ಹೀನ್, ಪತ್ರಿಕೆಗಳನ್ನು ಓದಿ ನಂತರ ನಮ್ಮ ವಿಭಾಗದ ಪ್ರತ್ಯೇಕ ಲೈಬ್ರೆರಿಯಲ್ಲಿ ರಾತ್ರಿ ಒಂಬತ್ತರ ತನಕವೂ ಓದುವುದು, ನೋಟ್ಸ್ ಮಾಡಿಕೊಳ್ಳುವುದು ಮಾಡಿಕೊಳ್ಳುತ್ತಿದ್ದೆವು. ಲೈಬ್ರೆರಿಯನ್ ಸಮಯ ಆಯಿತು ಏಳಿ ಅನ್ನುವ ತನಕ ನಾವು ಏಳುತ್ತಿರಲಿಲ್ಲ. ಒಮ್ಮೆ ಒಬ್ಬ ಇನ್ನೂ ಐದು ನಿಮಿಷ ಇದೆ ಅಂತ ಜಗಳ ಬೇರೆ ಆಡಿದ್ದ. ರಜಾ ದಿನಗಳಲ್ಲಿ ನಾವು ಬೆಳಿಗ್ಗೆ ತಿಂಡಿ ತಿನ್ನುವ ಮೊದಲೇ ಲೈಬ್ರೆರಿ ಬಾಗಿಲಲ್ಲಿ ಕ್ಯೂ ನಿಂತು ಸೀಟು ಕಾದಿರಿಸಿ ನಂತರ ಹಾಸ್ಟೆಲ್‌ನಲ್ಲಿ ತಿಂಡಿಗೆ ಕ್ಯೂ ನಿಂತು ತಿಂಡಿ ತಿಂದು ಲೈಬ್ರೆರಿಗೆ ಓಡಿ ಬಂದು ಓದಿಕೊಳ್ಳುತ್ತಿದ್ದೆವು. (ಹಾಗಂತ ಬರೀ ಓದು ಕುಡಿಮಿಗಳಾಗಿರುತ್ತಿರಲಿಲ್ಲ. ಆಟ/ ನಾಟಕ/ ಸ್ಪರ್ಧೆಗಳು/ ಉತ್ಸವಗಳು/ ಸೆಮಿನಾರ್‌ಗೆ ಬೇರೆ ಊರಿಗೆ ಹೋಗುವುದು/ ಇಂಗ್ಲಿಷ್‌ನ ಸಿ.ಎನ್.ರಾಮಚಂದ್ರನ್‌ರು ಕನ್ನಡ ಪುಸ್ತಕದ ಟೈಟಲ್ ಹೇಳಿದರೆ ಲೇಖಕರನ್ನು ಹೇಳುತ್ತಿರಲಿಲ್ಲ, ಲೇಖಕರನ್ನು ಹೇಳಿದರೆ ಟೈಟಲ್, ಮರೆತಿರುತ್ತಿದ್ದರು – ಆ ಪುಸ್ತಕಗಳನ್ನು ಹುಡುಕಿಕೊಡುವುದು / ಇದರೊಂದಿಗೆ ವಯೋ ಸಹಜ ಕೀಟಲೆಗಳು/ ಕೆಲವರು ಭವಿಷ್ಯದ ಬಾಳ ಸಂಗಾತಿಗಳ ಆಯ್ಕೆಯನ್ನೂ – ಎಲ್ಲವನ್ನೂ ಮಾಡುತ್ತಿದ್ದೆವು.) ರಾತ್ರಿ ಗುಂಪು ಗುಂಪಾಗಿ ಹಾಸ್ಟೆಲ್‌ಗೆ ವಾಪಾಸಾಗುತ್ತಿದ್ದೆವು.

ಇದೂ ಈಗಿನವರಿಗೆ ಅಚ್ಚರಿಯಾಗಬಹುದು. ಏನೆಂದರೆ ಆಗ ಲೇಡೀಸ್ ಹಾಸ್ಟೆಲ್ ರಾತ್ರಿ ಹತ್ತು ಗಂಟೆಯ ತನಕವೂ ತೆರೆದಿರುತ್ತಿತ್ತು. ಅದಕ್ಕಿಂತ ತಡವಾಗಿ ಬಂದರೆ ಮಾತ್ರ ವಿಚಾರಣೆ/ ಪನಿಶ್‌ಮೆಂಟ್! ಈಗ ಅದೇ ಹಾಸ್ಟೆಲ್ ಸಂಜೆ ಆರುಗಂಟೆಗೇ ಮುಚ್ಚುತ್ತಿದೆ! ಈಗ ಆರು ಗಂಟೆಯ ನಂತರ ಲೈಬ್ರೆರಿಗೆ ಹೋಗಬೇಕೆಂದರೆ ವಾಚ್‌ಮನ್‌ಗಳ ಕಾವಲಿನಲ್ಲಿ ವಿದ್ಯಾರ್ಥಿನಿಯರು ಓಡಾಡುವುದನ್ನು ನಾನೀಗ ವಾಸ ಮಾಡುತ್ತಿರುವ ಆಸುಪಾಸಿನ ಕುವೆಂಪು ಯುನಿವರ್ಸಿಟಿಯಲ್ಲಿ ನೋಡುತ್ತಿದ್ದೇನೆ. ಹೆಚ್ಚೇಕೆ ನನ್ನ ಮಗಳೇ ಮಂಗಳೂರಿನಲ್ಲಿ ಈ ನಿರ್ಬಂಧದ ಕಾರಣದಿಂದ ಹಾಸ್ಟೆಲ್ ಬಿಟ್ಟು ಪಿ.ಜಿ ಸೇರಿಕೊಂಡಿದ್ದಳು. ಕಾಲ ಮುಂದೆ ಹೋಯಿತೋ ಹಿಂದೆ ಹೋಯಿತೋ ಎಂದು ದಿಗ್ಭ್ರಮೆಯಾಗುತ್ತದೆ ನನಗೆ. ಇನ್ನೂ ಒಂದು ಮಾತು ಸೇರಿಸುವುದಾದರೆ ನಾನು ಓದುತ್ತಿದ್ದ ಕಾಲದಲ್ಲಿ ಹಲವು ಹುಡುಗಿಯರು ಮಿನಿಸ್ಕರ್ಟ್ ಧರಿಸುತ್ತಿದ್ದರು. ಈ ಕಾರಣಕ್ಕೆ ಅವರು ಯಾವುದೇ ರೀತಿಯ ತೊಂದರೆಗೆ ಒಳಗಾಗಿದ್ದೇ ಇಲ್ಲ. ಬದಲಿಗೆ ಅವರನ್ನು ಮಾಡರ್ನ್ ಹುಡುಗಿಯರು ಎಂದು ಗುರುತಿಸಲಾಗುತ್ತಿತ್ತು ಅಷ್ಟೇ! ಇದನ್ನೆಲ್ಲಾ ಹಾಕಿಕೊಳ್ಳಲು ಮನೆಯಲ್ಲಿ ಪರ್ಮಿಶನ್ ಇಲ್ಲದ ನಾವು ಅವರನ್ನು ನೋಡಿ ಸಂತೋಷ ಪಡುತ್ತಿದ್ದೆವೇ ಹೊರತು ಅದರಿಂದಾಚೆ ಇನ್ನೇನೂ ನನಗೆ ನೆನಪಿಲ್ಲ. ಅಂದಿನ ದಿನಗಳಲ್ಲಿ ನಮಗೆ ಈಗಿನಂತೆ ಅತ್ಯಾಚಾರ ಇತ್ಯಾದಿಗಳ ಭಯ ಆವರಿಸಿರಲಿಲ್ಲ. ಭಯ ಇದ್ದುದು ಕಳ್ಳ ಕಾಕರ ಬಗೆಗೆ ಮಾತ್ರ. ಬಿಟ್ಟರೆ ರಸ್ತೆ ಅಳೆಯುತ್ತಿದ್ದ ಕುಡುಕರ ಬಗೆಗೆ! ಇನ್ನು ವಿದ್ಯಾವಂತರು, ಓದುತ್ತಿರುವವರು ಅಂದರೆ ಎಷ್ಟೊಂದು ಗೌರವ ಇತ್ತೆಂದರೆ ಅದು ನಮಗೊಂದು ಕೋಡು ಎಂಬಂತಿತ್ತು.

ಒಮ್ಮೆ ನಮ್ಮ ಹಾಸ್ಟೆಲ್‌ಗೆ ಒಬ್ಬಳು ಹುಡುಗಿ ಊರಿಂದ ಬರುವಾಗ ತಡವಾಗಿ ರಾತ್ರಿ ಹತ್ತೂ ಕಾಲು ಆಗಿತ್ತು. ಚಿಕ್ಕ ಹುಡುಗನಂತಿದ್ದ ವಾಚ್‌ಮನ್ ಬಹಳ ಪೊಗರು ತೋರಿಸಿದ. ಏನೇ ಆದರೂ ಒಳಗೆ ಬಿಡುವುದಿಲ್ಲ ಅಂದ. ಅರೆರೇ! ಲೇಡೀಸ್ ಹಾಸ್ಟೆಲ್‌ಗೆ ಯಾಕೆ ಹುಡುಗರನ್ನು ವಾಚ್‌ಮನ್ ಮಾಡಬೇಕು? ಹುಡುಗಿರಯನ್ನು ಯಾಕೆ ಮಾಡಬಾರದು ಅಂತ ಆ ರಾತ್ರಿ ನನಗೆ ಸಿಟ್ಟಿನ ನಡುವೆ ವಿಚಾರ ಹಾದು ಹೋಗಿತ್ತು. ಈಗಲೂ ನನಗನ್ನಿಸುವುದುಯಾಕೆ ಟ್ರಾನ್ಸ ಜಂಡರ್ ಮಹಿಳೆಯರನ್ನು ವಾಚ್‌ವುಮನ್‌ಗಳಾಗಿ ನೇಮಿಸಬಾರದು? ನಾವಿನ್ನೂ ಎಲ್ಲಿದ್ದೇವೆ? ಅದಿರಲಿ ಕೊನೆಗೆ ಈಗ ಅವಳನ್ನು ರಾತ್ರಿ ಒಬ್ಬಳೇ ಹೊರಗೆ ಬಿಡಲಾಗುತ್ತದೆಯೇ? ನಾವು ಚುರುಕಾಗಿ ತಲೆ ಓಡಿಸಲು ತೊಡಗಿದೆವು. ಕೊಣಾಜೆ ಎಂದರೆ ಆಗ ಊರ ಹೊರಗಿನ ಹಳ್ಳಿ. ಅಲ್ಲಿ ಬೇರೆ ಮನೆಗಳೂ ಇರುವುದಿಲ್ಲ. ವಾಪಾಸು ಮಂಗಳೂರಿಗೆ ಹೋಗಲು ಬಸ್ಸೂ ಇರುವುದಿಲ್ಲ. ಇರುವುದು ಅಧ್ಯಾಪಕರ ನಿವಾಸಗಳು ಮಾತ್ರ. ಆಗ ಕ್ವಾಟ್ರಸ್‌ನಲ್ಲಿದ್ದ ಕನ್ನಡ ವಿಭಾಗದವರೆಂದರೆ ಗುಂಡ್ಮಿ ಚಂದ್ರಶೇಖರ ಐತಾಳರೊಬ್ಬರೇ. ಅವರ ಮನೆಗೆ ಇವಳನ್ನು ಕಳಿಸೋಣ ಅನ್ನಿಸಿತು. ಅವಳು ಮಾತ್ರ ಹಿಂಜರಿದಳು. ಇಷ್ಟು ರಾತ್ರಿಯಲ್ಲಿ ಹೇಗೆ ಹೋಗುವುದು ಅಂತ ಅಳುಕಿದಳು. ಆ ಪೋರ ವಾಚ್‌ಮನ್‌ನನ್ನೇ ಹಿಡಿಯಾಗಿ ಕೇಳಿಕೊಂಡಳು. ಅವನ ಪೊಗರು ಈಗ ಇನ್ನೂ ಹೆಚ್ಚಾಯಿತು. ಅವನಿಗೆ ಅವನ ಅಧಿಕಾರ ಚಲಾಯಿಸಲು ಈಗ ಅಪೂರ್ವ ಅವಕಾಶವೊಂದು ಸಿಕ್ಕಿತ್ತು.

ನನ್ನದೋ ಆಗ ಬಹಳ ಸಿಟ್ಟಿನ ಸ್ವಭಾವ. ಅದರಲ್ಲೂ ಹೆಣ್ಣುಮಕ್ಕಳ ವಿಷಯದಲ್ಲಿ ಏನಾದರೂ ಆದರೆ ಸಹಿಸಲೇ ಸಿದ್ಧವಿಲ್ಲದವಳು. ನಾನು ಸೀದಾ ಹಿಂದೆ ನಮ್ಮ ಕಿಚನ್ ಹತ್ತಿರ ಹೋದೆ. ಅಲ್ಲಿನ ಅಡುಗೆಯವರಿಗೆ ಹಿಂದಿನ ಬಾಗಿಲು ತೆರೆಯಿರಿ ಎಂದೆ. ಅವರು ಹೆದರಿದರು. ಒಪ್ಪಲಿಲ್ಲ. ಮೆತ್ತಗೆ ಡೈನಿಂಗ್ ಹಾಲ್‌ಗೆ ಹೋಗಿ ಅಲ್ಲಿನ ಗಾಜಿನ ಕಿಟಕಿಯನ್ನು ಸರಿಸಿ ಅವಳನ್ನು ಅಲ್ಲಿಂದ ಹತ್ತಿಸೋಣ ಅಂತ ಐಡಿಯಾ ಮಾಡಿ ಮುಂದೆ ಬಂದೆ. ಅವಳಿಗೆ ಮೆತ್ತಗೆ ನಮ್ಮ ಯೋಜನೆ ಹೇಳಿದೆ. ಅಷ್ಟರಲ್ಲಿ ಇನ್ನೂ ಒಂದು ಐಡಿಯಾ ಮಾಡಿ ಅವನಿಗೆ ವಾರ್ಡನ್ ಹತ್ತಿರ ಹೋಗಿ ಹೇಳು. ಅವರು ಒಪ್ಪದಿದ್ದರೆ ಅವಳನ್ನು ಯಾರದಾದರೂ ಮನೆಗೆ ಬಿಡು ಎಂದು ಎಲ್ಲ ಸೇರಿ ಗದರಿಸಿದೆವು. ಅಂತಿಮವಾಗಿ ಆತ ಇದೊಂದೇ ಸಲ ಅಂತ ಬಾಗಿಲು ತೆರೆದ. ಓಹೋ ಏನೋ ಹೇಳಲು ಹೋಗಿ ಇನ್ನೇನೋ ಪುರಾಣ ನಡುವೆ ಉಪಕತೆಯಾಗಿ ಸೇರಿತು. ಇರಲಿ, ಮತ್ತೆ ನಮ್ಮ ತರಗತಿ ವಿಷಯಕ್ಕೆ ಹೋಗುತ್ತೇನೆ.  ಇದನ್ನು ಸ್ವಾರಸ್ಯಕರ ಸಂಗತಿಯಿಂದಲೇ ಪುನರಾರಂಭಿಸುತ್ತೇನೆ. ನಮ್ಮ ಸಿಲೆಬಸ್‌ನಲ್ಲಿ ಅಡಿಗರ ಭೂಮಿಗೀತ ಕವಿತೆ ಇತ್ತು. ಬೆಳಗಿನ ತರಗತಿಯಲ್ಲಿ ಇದನ್ನು ಪುರುಷೋತ್ತಮ ಬಿಳಿಮಲೆಯವರು ಆರಂಭಿಸಿದರು. ಅದೇ ವಾರ ಮಧ್ಯಾಹ್ನದ ತರಗತಿಯಲ್ಲಿ ಶಿವರಾಮ ಪಡಿಕ್ಕಲ್ ಆರಂಭಿಸಿದರು. ಮತ್ತೆ ಅದೇ ವಾರ ಮಧ್ಯಾಹ್ನದ ತರಗತಿಯಲ್ಲಿ ಕೇಶವ ಶರ್ಮ ಕೂಡಾ ಆರಂಭಿಸಿದರು. ತಮಾಷೆಯೆಂದರೆ ಈ ಮೂರೂ ಜನರಿಗೆ ಇನ್ನಿಬ್ಬರು ಈ ಪಾಠ ಮಾಡುತ್ತಿರುವುದು ತಿಳಿದಿರಲಿಲ್ಲ. ನಾವೂ ಯಾರಿಗೂ ಇದನ್ನು ಹೇಳಲೂ ಇಲ್ಲ. ಮೂರೂ ಜನರ ಪಾಠ ಕೇಳುತ್ತಲೇ ಇದ್ದೆವು.

ಆದರೆ ನಮ್ಮ ನಮ್ಮೊಳಗೇ ಮಾತಾಡುತ್ತಿದ್ದವು. ಈ ಮೂವರಲ್ಲಿ ಯಾರು ಹೇಳುವುದು ಸರಿ? ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರಲ್ಲ? ಅಂತ. ಪರೀಕ್ಷೆಗೆ ಮೂರನ್ನೂ ಸೇರಿಸಿ ಬರೆದು ಬಿಡುವ ಐಡಿಯಾ ಕೂಡಾ ನಮ್ಮೊಳಗಿತ್ತು. ಹೀಗೇ ಪಾಠ ನಡೆಯುತ್ತಲೇ ಇತ್ತು. ನೀವು ಖಂಡಿತಾ ಊಹಿಸಲಾರಿರಿ. ಈ ಮೂವರೂ ಸುಮಾರು ಒಂದು ತಿಂಗಳು ಇದೊಂದೇ ಕವಿತೆಯನ್ನು ಪಾಠ ಮಾಡುತ್ತಲೇ ಇದ್ದರು. ಒನ್ ಫೈನ್ ಡೇ ಇವರಲ್ಲಿ ಬಿಳಿಮಲೆಯವರಿಗೆ ಮೊದಲು ಗೊತ್ತಾಯ್ತು. ‘ಅವರು ಪಾಠ ಮಾಡ್ತಿದ್ದಾರಲ್ಲಾ ಬಿಡಿ. ನಾನು ಬೇರೆ ಪಾಠ ಶುರು ಮಾಡ್ತೇನೆ’ ಅಂತ ನಿಲ್ಲಿಸಿಬಿಟ್ಟರು. ಕೊನೆಗೆ ಪಡಿಕ್ಕಲ್ ಮಾಡ್ತಾನಲ್ಲಾ, ಶರ್ಮಾ ಮಾಡ್ತಾನಲ್ಲಾ ಅಂತ ಅವರುಗಳೂ ನಿಲ್ಲಿಸಿದರು. ಒಟ್ಟಿನಲ್ಲಿ ಒಂದು ತಿಂಗಳ ನಂತರವೂ ಕವಿತೆಯ ಪಾಠ ಅಪೂರ್ಣವಾಗಿ ನಿಲ್ಲುವಲ್ಲಿಗೆ ಪಾಠ ಮುಕ್ತಾಯವಾಯಿತು! ನಾವ್ಯಾರೂ ತಲೆ ಕೆಡಿಸಿಕೊಳ್ಳದೆ ಪರೀಕ್ಷೆಗೆ ಉತ್ತರ ಬರೆದೆವು! ಇನ್ನು ನಮ್ಮ ಸಿಲೆಬಸ್‌ನ್ನು ಈಗಿನ ವಿದ್ಯಾರ್ಥಿಗಳಿಗೆ ಹೇಳಿದರೆ ಅವರು ತಲೆತಿರುಗಿ ಬೀಳುವುದು ಗ್ಯಾರೆಂಟಿ. ಮೊದಲ ಸೆಮ್‌ನಲ್ಲಿ ಪಂಪನ ಎರಡೂ ಕಾವ್ಯಗಳು ಸಮಗ್ರ – ಅಂದರೆ ಸುಮಾರು ೧ ಸಾವಿರ ಪದ್ಯಗಳು, ೫೦ ಸಣ್ಣಕತೆಗಳು, ೫ ಬೃಹತ್ ಕಾದಂಬರಿಗಳು ಜೊತೆಗೆ ಭಾಷಾಶಾಸ್ತ್ರ, ಶಾಸನ/ತುಳು ಅಧ್ಯಯನ, ಛಂದಸ್ಸು ಇತ್ಯಾದಿ. ದ್ವಿತೀಯದಲ್ಲಿ ಇನ್ನಷ್ಟು ಶಾಸ್ತ್ರ, ಸಾಹಿತ್ಯ, ಬೇಂದ್ರೆಯವರ ‘ಒಲವೆ ನಮ್ಮ ಬದುಕು’ ಸಮಗ್ರ, ಪಾಶ್ಚಾತ್ಯ/ಪೌರಾತ್ಯ ಕಾವ್ಯಮೀಮಾಂಸೆಗಳು, ವಿಮರ್ಶೆಗಳು ಇತ್ಯಾದಿ ಇತ್ಯಾದಿ. ವಿಮರ್ಶೆಯಲ್ಲಿ ಆಗ ಸ್ತ್ರೀವಾದ ಸಿಲೆಬಸ್‌ಲ್ಲಿ ಇರಲಿಲ್ಲ. ಆದರೆ ಆಗಿನ್ನೂ ಅದು ಪ್ರವೇಶ ಪಡೆದಿತ್ತು. ಹೀಗಾಗಿ ಅದನ್ನೂ ಓದಿಸಿದರು.

ಬಿ ಎ ವಿವೇಕ ರೈ

ಇವುಗಳಲ್ಲಿ ವಿವೇಕ ರೈ ಯವರ ಪಾಠ ವಿಶೇಷವಾದುದು. ಅವರು ಸಮಗ್ರ ಪಂಪನನ್ನು ಪ್ರಥಮ ವರ್ಷವೂ, ಮೀಮಾಂಸೆ, ವಿಮರ್ಶೆಗಳನ್ನು ದ್ವಿತೀಯ ವರ್ಷವೂ ಪಾಠ ಮಾಡುತ್ತಿದ್ದರು. ವಿಭಾಗದ ಮುಖ್ಯಸ್ಥರಾಗಿ, ಇನ್ನೂ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಆಗಾಗ ಅವರಿಗೆ ತರಗತಿ ತೆಗೆದುಕೊಳ್ಳಲಾಗುತ್ತಿರಲಿಲ್ಲ. ಅದಕ್ಕಾಗಿ ಕೊನೆಯಲ್ಲಿ ಅವರು ಸ್ಪೆಶಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಅದು ಯಾವಾಗ ಎಂದರೆ ಎಲ್ಲಾ ತರಗತಿಗಳು ಮುಗಿದು ರಜೆ ಆರಂಭ ಆದಾಗ. ಅವರ ವಿಶೇಷ ತರಗತಿ ಬೆಳಿಗ್ಗೆ ೯ಕ್ಕೆ ಆರಂಭ ಆಗುತ್ತಿತ್ತು. ಹನ್ನೊಂದು ಗಂಟೆಗೆ ಒಂದು ಬ್ರೇಕ್. ಮಧ್ಯಾಹ್ನ ಒಂದು ಗಂಟೆಗೆ ಊಟಕ್ಕೆ ಬಿಡುವು. ಎರಡು ಗಂಟೆಯಿಂದ ಶುರು. ನಾಲ್ಕು ಗಂಟೆಗೆ ಟೀ ಬ್ರೇಕ್ ಮತ್ತೆ ರಾತ್ರಿ ಏಳು ಗಂಟೆಗೆ ಮುಕ್ತಾಯ. ಒಮ್ಮೊಮ್ಮೆ ಏಳೂವರೆ ಆಗುವುದೂ ಇತ್ತು. ಅಂದರೆ ಬೆಳಿಗ್ಗೆ ೯ರಿಂದ ರಾತ್ರಿ ೭ರ ತನಕ ಒಬ್ಬರೇ ಪಾಠ ಮಾಡುತ್ತಿದ್ದರು, ಅದೂ ನಿಂತುಕೊಂಡೇ ಪಾಠ ಮಾಡುತ್ತಿದ್ದರು! ಅವರದೇ ಒಂದು ಲಯದಲ್ಲಿ ಪಾಠ ಮಾಡುವಾಗ ಎಲ್ಲೂ ಅಬ್ಬರವಿಲ್ಲ, ಓಡಾಟ ಇಲ್ಲ. ಹಾಗೇ ಅಲ್ಲಿಂದಲೇ ಬೋರ್ಡ್ ಕಡೆ ತಿರುಗಿ ಹೀಗೇ ನಮ್ಮನ್ನುದ್ದೇಶಿಸಿ ಪಾಠ. ಈಗ ನನಗೇ ಅದನ್ನು ನಂಬಲಾಗುತ್ತಿಲ್ಲ. ಇದು ಸಿಲೆಬಸ್ ಮುಗಿಯುವ ತನಕವೂ ವಾರಗಟ್ಟಲೆ ನಡೆಯುತ್ತಿತ್ತು. ನಮಗೆ ಒಂದು ದಿನವೂ ಬೇಸರ ಆಗಿದ್ದೇ ಇಲ್ಲ. ಈಗನಿಸುತ್ತಿದೆ, ಅದು ಹೇಗೆ ಅವರು ಹಾಗೆ ನಿರಂತರವಾಗಿ ನಿಂತು ಪಾಠ ಮಾಡಿದರು? ಮೂರು ಗಂಟೆ ನಿರಂತರ ಕ್ಲಾಸ್ ಇದ್ದಾಗ ಕೊನೆ ಕೊನೆಗೆ ನಮ್ಮ ಗಂಟಲು ನೋಯತೊಡಗುತ್ತದೆ. ಅಂತದ್ದರಲ್ಲಿ ಅದು ಹೇಗೆ ಏಳೆಂಟು ಗಂಟೆ ಪಾಠ ಮಾಡಿದರು? ಅದೂ ಹಳೆಗನ್ನಡ ಮತ್ತು ಪಾಶ್ಚಾತ್ಯ ಮೀಮಾಂಸೆ? ನಾವಾದರೂ ಬೇಸರಿಸದೇ ಒಂದು ನಿಮಿಷವೂ ವಿಳಂಬ ಮಾಡದೆ ತರಗತಿಗೆ ಬಂದು ಕುಳಿತುಕೊಳ್ಳುತ್ತಿದ್ದೆವು. 

ಏಳುಗಂಟೆಗೆ ಬಿಡದಿದ್ದರೂ ಕೈಗಡಿಯಾರ ಬಿಡಿ, ಪರಸ್ಪರ ಮುಖವನ್ನೂ ನೋಡಿಕೊಳ್ಳದೆ ಪಾಠ ಕೇಳುತ್ತಿದ್ದೆವಲ್ಲ? ಇಂದು ಇಂತಹ ವಿದ್ಯಾರ್ಥಿಗಳು ಸಿಗುವುದನ್ನು ಕನಸಿನಲ್ಲೂ ಕಾಣಲಾರೆವು. ಓಹ್! ಎಂತಾ ಅಧ್ಭುತ ಅನುಭವ. ಇಷ್ಟೆಲ್ಲಾ ಮಾಡಿದ ಮೇಲೂ ಸೆಂಡಾಫ್‌ನಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಅಭಿಪ್ರಾಯ ಹೇಳಬಹುದಿತ್ತು. ಅಧ್ಯಾಪಕರ ಕೊರತೆಯನ್ನು ಪಟ್ಟಿಮಾಡಬಹುದಿತ್ತು. ಅದನ್ನು ಕೇಳಿಸಿಕೊಂಡು ಬೇಸರವಾದರೂ ಅವರು ಸುಮ್ಮನಿರುತ್ತಿದ್ದರು. ಆದರೆ ನಮ್ಮ ಬ್ಯಾಚ್‌ನವರು ಒಂದು ನಿರ್ಧಾರ ಮಾಡಿದೆವು. ನಾವು ಎರಡು ವರ್ಷಗಳಲ್ಲಿ ಏನು ಕಲಿತೆವು? ಬರುವಾಗ ಹೇಗಿದ್ದೆವು? ಹೋಗುವಾಗ ಏನಾದೆವು? ಎಂಬುದನ್ನು ಮಾತ್ರ ಹೇಳೋಣ ಎಂದು ಅದರಂತೆಯೇ ನಡೆದುಕೊಂಡೆವು. ನಾವು ಸೆಕೆಂಡ್ ಇಯರ್‌ನಲ್ಲಿರುವಾಗ ನಮಗೆ ಅರವಿಂದ ಮಾಲಗತ್ತಿಯವರು ಬಂದರು. ಅವರಿಗೆ ವಿಶ್ವವಿದ್ಯಾಲಯದಲ್ಲಿ ನಾವು ಮೊದಲ ಬ್ಯಾಚ್. ಇವರು ಹೊಸದಾಗಿ ಬಂದಿದ್ದರಿಂದ ನಮಗೆ ಹಳಬರಾಗಿದ್ದ ಯಶೋಧಾ ಮೇಡಂ ಹೋಗಿದ್ದರು. ಮಾಲಗತ್ತಿಯವರಿಗೆ ಯದ್ವಾ ತದ್ವಾ ಪ್ರಶ್ನೆಗಳನ್ನು ಕೇಳಿ ಅವರಿಗೆ ಇರುಸು ಮುರುಸು ಮಾಡುವ ಯೋಜನೆಯೊಂದು ನಮಗಿತ್ತಾದರೂ ಅದು ಯಶಸ್ಸು ಕಾಣದೆ ಇವರು ಇನ್ನೊಂದು ರೀತಿಯ ವಿಶಿಷ್ಟ ವ್ಯಕ್ತಿಯಾಗಿ ನಮಗೆ ಕಾಣಿಸಿದರು. ಅವರೊಂದಿಗೆ ನಮಗೊಂದು ರೀತಿಯ ಸಲುಗೆ. ತಮ್ಮ ಅಮ್ಮನೊಂದಿಗೆ ಇದ್ದ ಅವರ ವಿಶಾಲವಾದ ಕ್ವಾಟ್ರಸ್‌ಗೆ ದಾಳಿ ಇಟ್ಟು ಹಾಡು ಗೀಡು ಅಂದ್ಕೊಂಡು, ಸೌತ್ ಇಂಡಿಯನ್ ಟೂರ್‌ಲ್ಲಿ ಅವರನ್ನು ಪೀಡಿಸಿಕೊಂಡು ಇದ್ದೆವು.

ಆಗವರು ಗೌರ್ಮೆಂಟ್ ಬ್ರಾಹ್ಮಣ ಬರೆವ ಸಿದ್ಧತೆಯಲ್ಲಿದ್ದರು. ಅವರ ಕಾರ್ಯ ಕಾದಂಬರಿ ಆಗ ಬಿಡುಗಡೆಯಾಗಿ ವಿದ್ಯಾರ್ಥಿಗಳಾದ ನಾನು ಮತ್ತು ಕರುಣಾಕರ ಪೇಪರ್ ಬೇರೆ ಪ್ರೆಸೆಂಟ್ ಮಾಡಿ ಅದು ಪುಸ್ತಕವಾದ ಮಧುರ ನೆನಪು ನಮ್ಮೊಳಗಿದೆ. ಮತ್ತೆ ನಮಗೆ ಹೆಚ್ಚಾಗಿ ಶಾಸ್ತ್ರಗಳ ಪಾಠ ಮಾಡುತ್ತಿದ್ದುದು ಸಬೀಹಾ ಮೇಡಂ, ಸುಬ್ರಹ್ಮಣ್ಯ ಭಟ್ ಮತ್ತು ಚಿನ್ನಪ್ಪ ಗೌಡರು. ಚಿನ್ನಪ್ಪರು ಕೂಡಾ ದ್ವಿತೀಯ ವರ್ಷದಲ್ಲಿ ಬಂದವರು. ಸಬೀಹಾ ಮೇಡಂ ಭಾಷಾ ಶಾಸ್ತ್ರಕ್ಕೆ ಇಂಗ್ಲಿಷ್ ರೆಫರೆನ್ಸ್ ಬುಕ್ ಹೇಳುತ್ತಿದ್ದರು. ನಾವು ಅವರಿಗೆ ತಿಳಿಯದಂತೆ ಕನ್ನಡ ಬುಕ್ ಓದುತ್ತಿದ್ದೆವು! ಹೌದು, ನಾವು ಯಾರ ಕಾಲಿಗೂ ಬಿದ್ದವರಲ್ಲ. ಸರಸ್ವತಿ ಪೂಜೆ ಮಾಡಿದವರಲ್ಲ. ನಾವು ಗುರುಶಿಷ್ಯ ಸಂಬಂಧವನ್ನು ಕ್ರಿಯೆಯಾಗಿ ಆಚರಿಸಿದವರು. ಪಾಠ ತಪ್ಪಿಸುವ ಗುರುಗಳೂ, ಕ್ಲಾಸು ತಪ್ಪಿಸುವ ಶಿಷ್ಯರೂ ಇರುವ ಈ ಕಾಲದಲ್ಲಿ ಗುರು ಪೂರ್ಣಿಮೆಗಳು ಬಹಳ ಸದ್ದು ಮಾಡುತ್ತಿವೆ. ಈಗ ವಿದ್ಯೆ ಮಾರಿಕೊಳ್ಳುವ ಸಂಸ್ಥೆಗಳಲ್ಲಿ ಸಾಲಾಗಿ ಅಧ್ಯಾಪಕರನ್ನು ಕೂರಿಸಿ ವಿದ್ಯಾರ್ಥಿಗಳಿಂದ ಪಾದ ಪೂಜೆ ಮಾಡಿಸುವುದನ್ನು ನೋಡಿದಾಗ ನಾವೆಲ್ಲಾ ಇಂತಹ ಆಷಾಢಭೂತಿತನಗಳಿಂದ ಪಾರಾಗಿದ್ದ ನಿಜವಾದ ಆಧುನಿಕ ಕಾಲದಲ್ಲಿ ಬದುಕಿದ್ದೆವಲ್ಲಾ ಎಂದು ಸಂತೃಪ್ತಿಯಾಗುತ್ತದೆ.

‍ಲೇಖಕರು Admin MM

September 5, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಸಿರಾಜ್‌ ಅಹಮದ್

    ಬಹಳ ಚೆನ್ನಾಗಿದೆ. ನಿಜವಾದ ಅಧ್ಯಾಪಕರು ,ಕಾಲೇಜು, ವಿಶ್ವವಿದ್ಯಾಲಯಗಳು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: