ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನು ಐಡಿಯಾ ಕೊಡಲಾ?

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…

9

ಬೆಳಿಗ್ಗೆ ಬೇಗ ಎದ್ದು ಬ್ರಶ್ ಮಾಡಿ ಸ್ಟಡಿ ಟೇಬಲ್ ಗೆ ಹೋದೆ. ಸೊಳ್ಳೆಯೊಂದಿಗೆ ಮಾತಾಡಲು. ಪರೀಕ್ಷೆ ಮುಗಿದಿದ್ದರೂ ಒತ್ತಡದಲ್ಲಿ ಸೈನ್ಸ್ ಪ್ರೊಜೆಕ್ಟ ಕೊಟ್ಟೆ ಇರಲಿಲ್ಲ. “ಏನು ಸಮು ‘ರಾಯರ ಕುದರೆ ಬರತಾ ಬರತಾ ಕತ್ತೆ ಆಯ್ತು’ ಅಂತಾರಲ್ಲ ನಿನ್ನ ಕತಿ ಹಾಗೆ ಆಗಿದೆ, ಎಲ್ಲರೂ ಕೊಟ್ಟಾಗಿದೆ, ನಿನಗೆ ಕೊಡಲು ಆಗಿಲ್ಲೇನು, ನಾಳೆ ಕೊಡದಿದ್ದರೆ ಮಾರ್ಕ್ಸ್ ಎಂಟ್ರಿ ಮಾಡೊದಿಲ್ಲ” ಎನ್ನುವುದು ನೆನಪಾಗಿ ಅರ್ಧಮರ್ಧ ಬರೆದಿದ್ದ ಪ್ರೊಜೆಕ್ಟ ಹುಡುಕಾಡಿದೆ ಸಿಗಲಿಲ್ಲ. ಎಲ್ಲಾ ಕಿತ್ತಿ ಹಾಕಿದರೂ ಸಿಗಲಿಲ್ಲ. ಟೆನಶನ್ ಜಾಸ್ತಿ ಆಗ ಹತ್ತಿತು. ‘ಏನು ಮಾಡಲಿ, ಯಾವುದರ ಬಗ್ಗೆ ಬರಿಲಿ, ಟೈಮಿಲ್ಲ’ ಎಂದು ಯೋಚಿಸುತ್ತಾ ಕುಳಿತಾಗ
“ನಾನು ಐಡಿಯಾ ಕೊಡಲಾ?” ಎಂದು ಮೂಗಿನ ಮೇಲೆ ಬಂದು ಕುಳಿತ ಸೊಳ್ಳೆ ಹೇಳಿತು.
“ಅಯ್ಯೊ..ನಿನ್ನ ಜೊತೆ ಮಾತಾಡೋಣ ಅಂತ ಬಂದೆ…ಪ್ರೊಜೆಕ್ಟದು ನೆನಪಾಯಿತು ನೋಡು. ಬರದದ್ದು ಸಿಗತಾ ಇಲ್ಲಾ. ಟೆನ್‌ಶನ್ ಆಗತಿದೆ”
“ಗೊತ್ತಾಗುತ್ತೆ ನನಗೆ… ನಿನಗೆ ಯಾವುದರ ಮೇಲೆ ಇಂಟರೆಸ್ಟು…..! ಪರಿಸರ ತಾನೆ?”
“ಹೌದು…ಹೇಗೆ ಗೊತ್ತಾಯಿತು.?”
“ಮತ್ತೆ ಕೇಳಿದ್ದೆ ಕೇಳ್ತಿಯಲ್ಲ ಸಮು. ಇರಲಿ, ಅದೆ ನಿನ್ನ ತಲೆಯಲ್ಲಿ ಇದೆಯಲ್ಲ…ಮನುಷ್ಯನ ದೇಹದಲ್ಲಿ ಪತ್ರಹರಿತ್ತನ್ನು ಪ್ಲಾಂಟ್ ಮಾಡಿದ್ರೆ…ಹಸಿವೆ ಇರಲಾರದಂಗೆ ನೋಡಿಕೊಳ್ಳಬಹುದು”
“ಅದೇನೂ ಚಂದಿರುತ್ತೆ ಹಾಗಾದರೆ ಏನು ಸ್ವಾರಸ್ಯ ಇಲ್ಲ ಅಂದ್ರಲ್ಲ ಅಪ್ಪ, ಅದಕೆ ಅದಕ್ಕೆ ಮುಂದೆ ನೋಡಿದ್ರಾಯಿತು ಎಂದು ವೇಸ್ಟ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸುವ ಬಗ್ಗೆ ಬರೆದಿದ್ದೆ”
“ಅದೆ ಮಾಡಬೇಕಿತ್ತು, ಎಷ್ಟೋಜನ ಬಡವರು ಮಕ್ಕಳು ಊಟ ಇಲ್ಲದೆ ಬಳಲುತ್ತಿದ್ದಾರೆ ಅಂತವರಿಗಾದ್ರೂ ಉಪಯೋಗ ಆಗುತ್ತದೆ”
“ಹೌದು ನಿಮ್ಮಲ್ಲಿ ಹೀಗೆನಾ?”
“ಎಷ್ಟು ಬುದ್ಧಿ ಇದ್ರೂ ಉಪವಾಸದಿಂದ ಸಾಯೋರು ನೀವಷ್ಟ..ಜಗತ್ತಿನ ಯಾವ ಕ್ರೀಮಿ ಕೀಟ, ಪಕ್ಷಿ, ಪ್ರಾಣಿಗಳು ಹಸಿವಿನಿಂದ ಸಾಯಲ್ಲ”
“ನಿಮ್ಮಲ್ಲಿ ಹೇಗಿದೆ ವ್ಯವಸ್ಥೆ?”

“ನಮ್ಮಲ್ಲಿ ಏನೂ ಇಲ್ಲಪ್ಪ, ಇಡಿ ಲೋಕದ ಎಲ್ಲಾ ಕ್ರೀಮಿಕೀಟ ಜೀವಗಳಲ್ಲಿ..ಇರುವಷ್ಟು ಕಾಲ ಸಹಬಾಳ್ವೆ ನಡೆಸಿ ಹೋಗತೀವಿ.. ನೀವು ನೀವೆ ಗುದ್ದಾಡುವ, ದೂರ ಇಡುವ, ಕೊಲೆ ಮಾಡುವ, ಜಾಗಕ್ಕಾಗಿ ರಾದ್ಧಾಂತ ಮಾಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ”
“ನಿಮ್ಮದೆ ಚಲೊ ನಮ್ಮಲ್ಲಿನ ವ್ಯವಸ್ಥೆ ನೋಡಿದ್ರ ವಿಚಿತ್ರ ಅನಸ್ತದ,. ಮಾಡಬಾರದೆಲ್ಲ ಮಾಡತೀವಿ”
“ಅದಕ ನಿಮ್ಮ ಕವಿ ಪಾತ್ರೋಟ ಅವರು ಹೇಳ್ತಾರಲ್ಲ
‘ಮನುಷ್ಯನಲ್ಲಿ ಮಾತು ಉಂಟು,
ಮಾತಿನಂತೆ ಇಲ್ಲ ಮನ,
ಲಿಂಗ ವರ್ಣ ಜಾತಿ ಧರ್ಮ
ಹಾಳು ಕೊಂಪೆ ಅವನ ಮನ’ ಅಂತ
ಜಾತಿ, ಧರ್ಮ, ವರ್ಣ, ಲಿಂಗ ಒಂದ ಎರಡ…ಏನು ಬಡದಾಡತಿರಪ್ಪಾ…ಹಾಂ..ಹಾ೦..ನೆನಪಾಯಿತು ನೋಡು
’ಯಾಕೆ ಬಡದಾಡಿ ತಮ್ಮ ಮಾಯಾನೆಚ್ಚಿ
ಸಂಸಾರನೆಚ್ಚಿ
ನೀವ್ ಹೋಗೊ ದಾರಿಯೆ
ತಮ್ಮ ಕಣ್ಣು ಮುಚ್ಚಿ’ ಅಂತ ಕಡಕೋಳು ಮಡಿವಾಳಪ್ಪನವರು ಹೇಳಿಲ್ಲೇನು?” ಎಮದು ದೀರ್ಘವಾಗಿ ಒಂದೆ ಉಸಿರಿನಲ್ಲಿ ಹೇಳಿತು

“ಅಯ್ಯೊ.. ದೊಡ್ಡವರಿಗೆ ಹೇಳೊ ವಿಷಯ ನಮಗ ಹೇಳ್ತಿಯಲ್ಲ..ಅಪ್ಪನಂಗ ಎಲ್ಲಾ ನೀನು. ಬರಿ ತತ್ವ ಹೇಳಿದ್ದ ಹೇಳಿದ್ದು” ಎಂದೆ
“ಹೌದಾ…ಬೇಸರಾಯಿತಾ? ನಿಮಗೆ ಒಳ್ಳೆಯದು ಕೇಳೊದು ಅಂದ್ರ ಅಲರ್ಜಿ“ ಎಂದು ವ್ಯಂಗದಿ೦ದ ಮಾತಾಡಿ “ಇರಲಿ, ಅದು ಬಿಡು ಬೇರೆ ವಿಷಯ ಮಾತಾಡೋದು ಬೇಡ…ಸಮಯ ಆಗತಾದ..ಹೀಗೆ ಮಾಡು…ಒಂದು ಹೊಸ ಐಡಿಯಾ ಕೊಡತೀನಿ..ವರ್ಕಔಟ್ ಆಗಬಹುದು” ಎಂದಿತು.

ನಾನು ಆ ಮಾತನ್ನು ಬೆಳಸದೆ “ಏನು ಹೇಳು?” ಎಂದೆ.
“ಹ್ಞೂ೦….ಹೀಗೆ ಮಾಡು. ರಸ್ತೆಗಳಲ್ಲಿ ಗಿಡಗಳಲ್ಲಿ ಮಿಣುಕು ಹುಳುವಿನ ಡಿ.ಎನ್.ಎ ಅನ್ನು ಮರದಲ್ಲಿ ಅಳವಡಿಸಿದರೆ, ಅದು ರಾತ್ರಿ ಹೊತ್ತಿನಲ್ಲಿ ಹೊಳೆಯುವ ಗಿಡವಾಗುತ್ತದೆ. ಆಗ ಕರೆಂಟು ಹಾಕೋದೆ ಬೇಡ. ಪ್ರಯಾಣವೂ ಸುಲಭ ಎಂದಿತು. ಹಸಿರು ಎಲ್ಲ ಕಡೆ ಸಹಜವಾಗಿ ಉಳಿಸಬಹುದು” ಎಂದಿತು.
“ಅಮ್ಮಾ…! ಫೈನ್…ಎಂತಹಾ ತಲಿನೋ ನಿಂದು. ಮನುಷ್ಯನಾಗಿ ಹುಟ್ಟಿದ್ದರೆ ದೊಡ್ಡ ವಿಜ್ಞಾನಿಯಾಗಿ ಬಿಡುತ್ತಿದ್ದಿ ನೋಡು. ಎಷ್ಟು ಚಂದದ ಐಡಿಯಾ ಹೊಳದಾದ..ಇದರ ಬಗ್ಗೆ ಪ್ರೊಜೆಕ್ಟ ಮಾಡ್ತೀನಿ. ಗ್ಯಾರೆಂಟಿ…ಮೇಷ್ಟ್ರು ಖುಷಿ ಪಡತಾರ. ಪತ್ರಹರಿತ್ತು ಮನುಷ್ಯನಲ್ಲಿ ಪ್ಲಾಂಟು ಮಾಡೋದರ ಬಗ್ಗೆ ಇನ್ನೂ ಯೋಚಿಸಿ ಫೈನಲ್ ಮಾಡ್ತಿನಿ…ಹೌದು ನಿನ್ನ ಕೂಡಾ ಮಾತಾಡಲಿಕ್ಕೆ ಆಗ್ತಾನೆ ಇಲ್ಲವಲ್ಲ ಸೊಳ್ಳೆ ಫ್ರೆಂಡು…
“ಹೌದು ಸಮು ಏನೊ ಒಂದು ಅಡ್ಡ ಬರತಾವ.. ಇರಲಿ ಫಸ್ಟ್ ಸ್ಟಡಿ. ಮುಗಿಸು ನಾನು ಹೊರಗೆ ಹೋಗಿ ಊಟ ಮಾಡಿಕೊಂಡು ಬರತೀನಿ, ಬೇಗ ಪ್ರೊಜೆಕ್ಟ ಮುಗಿಸಿ ರೆಡಿಯಾಗು”
“ಆಯ್ತು ಆಯ್ತು ಅಷ್ಟು ಮಾಡು” ಎಂದು ಸೊಳ್ಳೆ ಕೊಟ್ಟ ಐಡಿಯಾ ಫಾಲೊ ಮಾಡತಾ ಪ್ರೊಜೆಕ್ಟ ಸ್ಟಾರ್ಟ ಮಾಡಿದ್ದು ಖರೆ ಮುಗಿಸಿದ್ದೆ ಗೊತ್ತಾಗಲಿಲ್ಲ. ಎಂತಹ ಐಡಿಯಾ ಕೊಡ್ತು ಸೊಳ್ಳೆ. ನನಗೆ ಯಾಕ ಇದು ಹೇಳಬೇಕು. ಸೊಳ್ಳೆನಾ ಸೊಳ್ಳೆ ರೂಪದ ಮತ್ಯಾವುದೊ? ಇಲ್ಲ… ಇಲ್ಲ..ಕೆಟ್ಟ ಜೀವಿಯಾಗಿದ್ರ ಏನೆಲ್ಲಾ ಸಹಾಯ ಯಾಕ ಮಾಡಬೇಕಿತ್ತು? ಹೌದು ಅದು ಬಂದ ಉದ್ದೇಶ ಆದರೂ ಏನೂ..? ಸೊಳ್ಳೆ ಮಾತಾಡೋದನ್ನ ಯಾರಾದರೂ ನಂಬತಾರ ಹೇಳಿದ್ರ? ಮೊನ್ನೆ ಮಾಮಾ ಮಾಮಿನ ‘ಸಮು ಜೋಕ್ ಮಾಡತಿದ್ದಾನ’ ಅಂತ ಹೇಳಿದ್ರು.. ಅದು ಏನೆ ಇರಲಿ ಬಿಡು ಇದರ ದೋಸ್ತಿಯಿಂದ ನನ್ನ ಬದುಕಲ್ಲಿ ಏನೊ ಖುಷಿ ಸಿಗತಿದೆ. ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಮುಗಸಿದ ಪ್ರೊಜೆಕ್ಟನ್ನು ನೀಟಾಗಿ ಡಿಸೈನ್ ಮಾಡುತ್ತಿದ್ದಾಗ
“ಏನೂ ಎಲ್ಲಾ ಪ್ರೊಜೆಕ್ಟ ಮುಗಿತಾ?”
“ಎಸ್ ಫ್ರೆಂಡು”
“ಮುಗಿಲೇಬೇಕು”
“ಹಾಂಗ೦ತೀಯಾ?”
“ಎರಡು ತಾಸಿನಲ್ಲಿ ಎಂದಾದರೂ ಯಾವುದಾದರೂ ಪ್ರೊಜೆಕ್ಟನ್ನ ಮುಗಿಸಿದ್ದೀಯಾ?”
“ಇಲ್ಲಲ…ಹೌದು ನನ್ನ ಮೈಂಡು ಓಡುವುದರಲ್ಲೂ ನಿನ್ನದೇನು ಪಾತ್ರ ಇದೆಯಾ?”
“ಇಲ್ಲಲ್ಲ”
“ನನ್ನ ಡೈಲಾಗ್..ನನಗಾ ಹೊಡಿತಿ..ಇಲ್ಲ ಇರಬೇಕು. ನಿನ್ನೆ ಎಕ್ಸಾಂನಲ್ಲಿ ನಾನು ಓದಿರದ ‘ಪ್ರೋಸು ಪೋಯಮ್’ ನ ಪ್ರಶ್ನೆಗಳಿಗೆ ನಾನು ಉತ್ತರಿಸಿದೆ”
“ನಕ್ಕು ಸುಮ್ಮನಾಯಿತು”
“ಸಮು, ನಾಷ್ಟ ಮಾಡಿ ರೆಡಿಯಾಗು ಟೈಮು ಆಯ್ತು” ಎಂದು ಅಡುಗೆ ಮನೆಯಿಂದ ಕೂಗಿದಳು.
“ಥ್ಯಾಂಕ್ಸು… ಫ್ರೆಂಡು, ನಿನ್ನಿಂದಲೆ ನನಗೆ ಇಂದು ಪ್ರೊಜೆಕ್ಟ ಮುಗಿಸುವಂತಾಯಿತು. ಬೇಗ ಬರತೀನಿ…ಸ್ವೀಟ್ ಮಾಡಿದ್ದಾರೆ. ತರತೀನಿ ಇಬ್ಬರೂ ತಿನ್ನೋಣ ”ಎಂದು ಹೇಳಿ ಹೋಗಿ ತಟ್ಟೆಯೊಡನೆ ಬಂದ.
“ಫ್ರೆ೦ಡು ಬಾ ಉಪ್ಪಿಟ್ಟು, ಜಾಮೂನ ತಿನ್ನೋಣ” ಎಂದು ಕರೆದು ಟೇಬಲ್ ಮೇಲೆ ಇಟ್ಟೆ.
ಸೊಳ್ಳೆ “ನಾನು ಹೊರಗೆ ಹೋಗಿ ಸ್ವಲ್ಪ ಊಟ ಮಾಡಿ ಬಂದೆ” ಎಂತು
“ನಿಜ ಹೇಳು ನಿಮಗೆ ರಕ್ತನೆ ಊಟ ಅಲ್ವಾ?’
“ಅಯ್ಯೊ ಫ್ರೆಂಡು ಎಷ್ಟು ಸರಿ ಹೇಳಬೇಕು. ನಮಗೇನು ನಿಮ್ಮ ರಕ್ತ ಬೇಕಿಲ್ಲ. ಮರ ಗಿಡ ಇದ್ದರೂ ಸಾಕು. ಗಿಡಗಳ ರಸವೇ ನಮ್ಮ ಊಟ. ನಮಗೆ ಮೊದಲ ಆಹಾರ ಹೂವಿನ ಮಕರಂದ. ನಾವು ಬೀಜ ಸಂಕುಲ ಉಳಿಯಲು ಪರೋಕ್ಷ ಕಾರಣವಾಗಿದ್ದೇವೆ.. ಸಾವಿರಾರು ಸಸ್ಯ ಪ್ರಭೇದಗಳಿಗೆ ಪ್ರಮುಖ ಪರಾಗ ಸ್ಪರ್ಶಕಗಳ ನಾವು”
“ಅಲ್ಲ, ನಿತ್ಯವೂ ನಿಮ್ಮಿಂದ ಕಡಿಸಿಕೊಂಡು ಒದ್ದಾಡತೀವಿ…ನಿಮಗೆ ಹೊಡೆದಾಗ ಸತ್ತ ಜಾಗದಲ್ಲಿ ರಕ್ತ ಬಿದ್ದಿರುತ್ತದೆ. ನೀವು ನೋಡಿದ್ರ ಹೀರಲ್ಲ ಅಂತೀರಿ” ಎಂದೆ.
“ಮೊನ್ನೆ ಹೇಳಿದೆನಲ್ಲ…ರಕ್ತ ಹೀರೊರೆಲ್ಲ ನಮ್ಮ ಫಿಮೇಲ್ ಫ್ಯಾಮಿಲಿ. ನಾವು ಗಂಡುಗಳು ಯಾರಿಗೂ ಕಚ್ಚುವುದಿಲ್ಲ. ನೀವು ಸಿಕ್ಕಾಗ ಸಿಕ್ಕಾಂಗೆ ತಿನ್ನುವಾಂಗ ಅವರು ರಕ್ತ ಹೀರೋಲ್ಲ. ಗರ್ಭಾಧಾರಣೆಯ ಟೈಮಿನಲ್ಲಿ, ಇಲ್ಲ ಮೊಟ್ಟೆ ಇಡುವಾಗ, ಇಟ್ಟಾಗ ಮಾತ್ರ ಪ್ರೋಟಿನ್‌ಗಾಗಿ ನಿಮ್ಮ ರಕ್ತ ಹೀರತಾರ”
“ಹೌದಾ..ನಿಮ್ಮಿಂದಾಗಿ ಅದೆಷ್ಟೊ ಲಕ್ಷ ಜನ ಸಾಯ್ತಾರೆ ಅಂತ ವರದಿ ಇವೆ….”
“ನಿಮ್ಮಿಂದನೂ ಎಷ್ಟು ಜೀವಕುಲ ಅಳಿದಿಲ್ಲ. ಮನುಷ್ಯರು ಎಂದ ಕೂಡಲೆ ಎಲ್ಲರೂ ಒಳ್ಳೆಯವರಾ….ನಮ್ಮಲ್ಲೂ ಹಾಗೆ”
“ಹೌದು ನೀವು ಯಾಕೆ ಹುಟ್ಟಿ ಎಲ್ಲರನ್ನೂ ಜೀವತಿಂತಿದ್ದೀರಿ? ಯಾಕ ಮನುಷ್ಯರಿಂದ ಪೀಡೆಗಳು ಎನ್ನುವ ಕೆಟ್ಟ ಹೆಸರು ಪಡೆದು ಕೊಂಡಿದ್ದೀರಿ”
“ಫ್ರೇ೦ಡು ಹಾಗನ್ನ ಬೇಡ. ಹೌದು…ಏನು ಅಂದಿ? ಯಾರಿಗೆ ಉಪಯೋಗ ಅಂತನಾ…? ಆಹಾರ ಸರಪಣಿಯ ವಿಷಯ ಗೊತ್ತಲ್ಲ ನಿನಗೆ”
“ಹಾಂ ಗೊತ್ತು”

“ಆ ಫುಡ್ ಚೈನ್‌ನ ಭಾಗ ನಾವು. ಮೀನು, ಕಪ್ಪೆ, ಜೇಡ, ಹಲ್ಲಿಗಳು ಅನೇಕ ಪ್ರಾಣಿಗಳಿಗೆ ಆಹಾರದ ಮೂಲವಾಗಿವಿ. ನಾವು ನೀರಿನಲ್ಲಿ ತ್ಯಾಜ್ಯವನ್ನು ಫಿಲ್ಟರ್ ಮಾಡಿ ಸಸ್ಯ ಜೀವನಕ್ಕೆ ಸಹಾಯ ಮಾಡತೀವಿ. ಕೊಳೆಯುತ್ತಿರುವ ಕೀಟಗಳನ್ನು ತಿಂದು ಶುದ್ಧೀಕರಿಸುತ್ತೀವಿ. ಸಾರಜನಕದಂತಹ ಪೊಷಕಾಂಶಗಳನ್ನು ತಯಾರಿಸುತ್ತೀವಿ. ನಾವಿಲ್ಲದಿದ್ದರೆ ಭೂಮಿಯ ಮೇಲೆ ಅರ್ಧದಷ್ಟು ಪಕ್ಷಿಗಳಿಗೆ ಉಳಿಗಾಲವೇ ಇರುವುದಿಲ್ಲ. ನಿನಗೆ ಗೊತ್ತಾ?”
“ಇವೆಲ್ಲ ನಮಗೆ ಗೊತ್ತೆ ಇಲ್ಲ ಫ್ರೆಂಡು….”
“ಅಷ್ಟ ಅಲ್ಲ ನಾವು ಈ ನೆಲದ ನಿಜವಾದ ಮೂಲನಿವಾಸಿಗಳು. ೨೦೦ ಮಿಲಿಯನ್ ವರ್ಷಗಳ ಹಿಂದಿನಿ೦ದ ಇದ್ದೇವೆ ಮುಂದೂ ಇರುತೀವಿ. ನಮಗ ನಿಮ್ಮ ರಕ್ತದ ಅವಶ್ಯಕತೆನ ಇರಲಿಲ್ಲ..ಕಾಡನ್ನು ಹಾಳ ಮಾಡಿದ್ರಿ..ಹವಾಮನ ಚೇಂಜ್ ಆಯ್ತು.. ನಾವು ಕಾಡಿನಿಂದ ನಾಡಿಗೆ ಶಿಫ್ಟ ಆದವಿ..ನಿಮ್ಮ ಜೊತಿಗೆ ಅಡ್ಜೆಸ್ಟ ಆದಿವಿ”
“ಇನ್ನೊಂದು ಇಂಟರೆಸ್ಟಿoಗ್ ವಿಚಾರ ಗೊತ್ತಾ?”
“ಏನು….?”
“ವಿಜ್ಞಾನಿಗಳು ನಮ್ಮಯ ಲಾಲಾರಸವನ್ನು ನಿಮ್ಮ ಹೃದಯದ ರಕ್ತನಾಳದ ಕಾಯಿಲೆಗೆಗೆ ಭವಿಷ್ಯದ ಚಿಕಿತ್ಸೆಯಾಗಿ ಪ್ರಯತ್ನಿಸುತ್ತಿದ್ದಾರೆ. ನಮ್ಮ ಲಾಲಾರಸ ನಿಮ್ಮ ರಕ್ತದ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಸಿಬಹುದು ಎನ್ನುವ ಲೆಕ್ಕಾಚಾರ ನಡೆಸಿದ್ದಾರೆ. ಹಾಗಾದರೆ ನಮ್ಮನ್ನ ಮುದ್ದಾಂ ಸಾಕತೀರಿ. ಹುಡುಕೊಂಡು ಬರತೀರಿ”
“ಹೌದಾ? ನಿಮಗೆಲ್ಲಾ ಹೇಗೆ ಗೊತ್ತಾಯ್ತು”
“ನಿನ್ನದು ವಿಕನೆಸ್ ಇದೆ ನೋಡು…ಎಲ್ಲಾ ಗೊತ್ತಿದ್ದು ಕೇಳ್ತಿದ್ದಿಯಾಲ್ಲಾ?” ಎಂದು ನಕ್ಕು “ಬೈದಿಬೈ ಜಾಮೂನು ಬಹಳ ಸಕತ್ ಆಗ್ಯಾದಪ. ಉಪ್ಪಿಟ್ಟೂ ಕೂಡಾ. ನಿಮ್ಮ ಮಮ್ಮಿಗೆ ಥ್ಯಾಂಕ್ಸು ಹೇಳು…ಮನುಷ್ಯರೆಲ್ಲ ಜಾಣರು ನೀವು ಬಗೆಬಗೆಯ ಸಿಹಿ ಶೋಧಸ್ತೀರಿ ತಿಂದು ಸಂಭ್ರಮಸ್ತೀರಿ. ನಾನು ಬೇಕರಿ, ಸ್ವೀಟ್ಸ ಅಂಗಡಿಯಲ್ಲಿಯೂ ಕುಳಿತು ಬಂದಿನಿ..ನೋಡಿನಿ”
“ನೀವು ಅಷ್ಟೆಲ್ಲ ತಿಂದ್ರು ಇಸ್ಸಿ ಮೇಲನೂ ಕುಳಿತು ಬರತೀರಪಾ?”
“ಹುಂ…ಅದನ್ನು ಟೇಸ್ಟ್ ನೋಡತೀವಿ. ನೀವು ಪ್ರಾಣಿಗಳನ್ನು ಕೊಂದು ತಿನ್ನಲ್ಲವೆ..?ನಾವು ಸತ್ತದ ಮೇಲೆ ಕುಳಿತು ಅವನ್ನ ಡಿಕಂಪೋಜಮಾಡಲಿಕ್ಕೆ ಹೆಲ್ಪ ಮಾಡ್ತೀವಿ. ಆದರ ನಿಮ್ಮದೂ ಮಾತ್ರ ಅಮ್ಮಾ ‘ವ್ಯಾಕ್ ವ್ಯಾಕ್”ಅಂತು
“ಅಂದ್ರೆ….ಆಕಳದ್ದು ನೀವು ಹಿಡುಕೊಂಡು ಪೂಜೆ ಮಾಡತೀರಿ ಮನೆ ಸಾರಸ್ತಿರಿ, ಗೊಬ್ಬರವಾಗಿ ಹೊಲಕ್ಕ ಹಾಕಲಿಕ್ಕೆ ಸಂಗ್ರಹಿಸ್ತೀರಿ… ‘ನೀನು ಯಾರಿಗಾದೆಯೋ ಎಲೆಮಾನವ ಹರಿಹರಿ ಗೋವು ನಾನು’ ಎಂದು ಪ್ರಶ್ನಿಸಿಲ್ಲವೆ…?”

ನಾನು ಅದರ ತಾರ್ಕಿಕ ವಿಚಾರಕ್ಕೆ ಗಪ್ಪಾಗುವುದಕ್ಕೂ ಅಪ್ಪಾ “ರೆಡಿ ಏನೋ?” ಅನ್ನುವುದಕ್ಕೂ ಸರಿ ಹೋಯ್ತು. ಬಿರುಸಿನ ಮಾತುಕತೆ ತಣ್ಣಗಾಯ್ತು. ಅದು ಏನೇನೊ ಹೇಳುತ್ತಿತ್ತು. ಎಲ್ಲ ಸತ್ಯವೆನಿಸಿ ನಾನು ಕೇಳಿಸಿಕೊಳ್ಳುತ್ತಿದೆ. “ಬಂದೆ ಪಾ..” ಎಂದು ನಡಿ ಹೋಗೋಣ ಎಂದು ಸೊಳ್ಳೆನ ಕೂಡ್ರಿಸಿ ಕೊಂಡು ಹೊರಟೆ.

ಈಗಲೂ ಅದೆ ಮಾತು ಅಪ್ಪ ಅಮ್ಮಂದು ‘ಯಾಕೆ ನಿಧಾನವಾಗಿ ನಡಿತಾ ಇದ್ದೀಯಾ?’
“ಏನಿಲ್ಲ ಅಂದ್ರು ಸಂಜೆ ಬರುವಾಗ ತೋರಿಸಿಕೊಂಡು ಬನ್ನಿ” ಎಂದು ಅಮ್ಮ ಕೂಗಿದಳು.
“ಏನಿಲ್ಲ…. ನಿಲ್ಲಪ್ಪ” ಎಂದು ಕೈಚೀಲ ಹಿಡಿದು ಓಡಿ ಹೋದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

April 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: