ಗೀತಾ ಜಿ ಹೆಗಡೆ ಕಲ್ಮನೆ ಕವಿತೆ- ಕುಂಟು ನೆಪವೊಡ್ಡಿ..

ಗೀತಾ ಜಿ ಹೆಗಡೆ ಕಲ್ಮನೆ

ಆಯಿಲ್ ಮಸಾಜ್ ಮಾಡಲು
ಅವನಿಗೆ ಹೇಳಿದ್ದೆ
ಕಾಯಿಸಿದ ಎಣ್ಣೆ ಬಿಂದಿಗೆ ತುಂಬ
ತುಂಬಿಸಿ ವರ್ಷಕ್ಕೆ ಆಗುವಷ್ಟು
ಸ್ಟಾಕ್ ಮಾಡಿದ್ದೇನೆ
ಎಂದು ಬೊಗಳೆ ಬಿಟ್ಟಿದ್ದು
ಬರೋಬ್ಬರಿ ವರ್ಷ
ಅರವತ್ತಾದಾಗ ಗಮನಕ್ಕೆ ಬಂತು.

ಹಿಡಿದ ಮಂಡಿ ಬೆಳಿಗ್ಗೆ
ಕಮಕ್ ಕಿಮಕ್ ಅಂದರೆ ಕೇಳಿ
ನೀವೂ ನೀವೂ ಅಂತ
ಒಂದೇ ಹಟ ಮುಂಡೇದಕ್ಕೆ
ಅರವತ್ತಕ್ಕೆ ಹೀಗೆಲ್ಲಾ ಆಗುವುದೆಂದು
ಅವರಿವರು ಹೇಳಿದ್ದು ನಂಬಿ
ಭಗವಂತನ ಧ್ಯಾನ ಮನ ತುಂಬ
ಕನಸಲ್ಲಿ ಬಂದ ಅವನಿಗೇ ಹೇಳಿದ್ದೆ
ಯಾವುದಕ್ಕೂ ಇರಲಿ
ಕಾಯಿಸಿಡೆಂದು…
ತಪ್ಪಾ?

ಯಾರು ಏನೆಂದರೂ ಧಿಕ್ಕರಿಸಿ
ಮೆರೆಯುವ ಹದಿಹರೆಯದ ವಯಸ್ಸು
ಏನಾಗಲ್ಲ ಬಿಡು ನಾನು ಗಟ್ಟಿ
ಅವನಂತೆ ನಾನೂ ಬೊಗಳೆ ಬಿಟ್ಟಿದ್ದು
ಗುರುವಿಗೆ ತಿರು ಮಂತ್ರ ಆಗೋಯ್ತು
ಈಗ ಒಂದೊಂದೇ ಜಪ್ತಿಗೆ ಬಂದ್ರೂ
ಮತ್ತೆ ಮತ್ತೆ ಅವನನ್ನೇ ಧ್ಯಾನಿಸೋದು
ಬೇಡಿಕೊಳ್ಳೋದು ಬಿಡೋಕೆ ಆಗ್ತಿಲ್ವೆ….
ಕಾರಣ ಮಗಳು ಅಂತಾಳೆ
“ಅಮ್ಮಾ ನಿನಗೆ ತಿಂಗಳಿಗೊಂದು
ಹೊಸಾ ಕಾಯಿಲೆ”

ಒಳಮನಸ್ಸು ಒಪ್ಪಿಕೊಂಡರೂ
ಮನದ ಮೂಲೆಯಲ್ಲಿ ಒಂಥರಾ ಹಿಂಸೆ
ಹಾಯಾಗಿ ಒಂದಿಷ್ಟು ವಾಕಿಂಗ್, ಯೋಗ,
ಮನೆಗೆಲಸ ಅದೂ ಇದೂ ಮಾಡಿಕೊಂಡು
ಇರಬೇಕೆನ್ನುವ ಉತ್ಸಾಹಕ್ಕೆ ಈ ಕಾಯಿಲೆಗಳು
ಸಮಾ ತಣ್ಣೀರು ಎರಚಿ ಚೆಂದ ನೋಡೋದು
ಮುಪ್ಪಿನ ಕಾಲದಲ್ಲಿ.

ಹೇಳದೆ ಕೇಳದೆ ಹೀಗೆ
ಆಗಾಗ ಬಿಡೇಯ ಇರದ ಬಂಟರಂತೆ
ವಕ್ಕರಿಸುವುದು ಕಂಡಾಗ
ಹೇಗಾದರೂ ಮಾಡಿ ಓಡಿಸಲು
ಪಣತೊಡುತ್ತೇನೆ
ಹಟಹೊತ್ತ ತಿವೀಕ್ರಮನಂತೆ.

ರಾತ್ರಿ ಮಲಗುವಾಗ ಮನದಲ್ಲೇ ನಿರ್ಧಾರ
ನಾಳೆಯಿಂದ ಇನ್ಟೈಮ್ ಏಳೋದು
ಇನ್ಟೈಮ್ ಮಲಗೋದು
ಆಹಾರ ಪಾನೀಯ ಉಪಹಾರ
ಎಲ್ಲ ಎಲ್ಲವೂ ಹೀಗೀಗೆ ಕಟ್ನಿಟ್
ನಡೆ ನುಡಿ ವ್ಯವಹಾರ ಎಲ್ಲದರಲ್ಲೂ
ಪಕ್ಕಾ ಶಿಸ್ತೋಶಿಸ್ತು
ಜಪ್ಪಯ್ಯಾ ಅಂದರೂ ಚಂಚಲ ಮನಸ್ಸಿಗೆ
ಮಣಿಯಲೇ ಬಾರದು.

ನನ್ನ ಬೆನ್ನಿಗೆ ನಾನೇ ಶಭಾಷ್
ಬೆನ್ನಿಗೆ ಬಾಗದ ನನ್ನ ಕೈಗೆ ಸಿಕ್ಕಿದ್ದು ಕಸರತ್ತು
ನೆಮ್ಮದಿ ಕಂಡುಕೊಂಡ ಮನಸ್ಸು
ಪೊಗದಸ್ತಾದ ನಿದ್ದೆಗೆ ಜಾರಿದ್ದು ದಿಟವಾದರೂ
ಚುಮು ಚುಮು ಬೆಳಗಿನ ಚಳಿಗೆ
ಧಿಗ್ಗನೆ ಎಚ್ಚರವಾಗಿ
ಗುಟುಕರಿಸಬೇಕು ಒಂದೇ ಒಂದು ಕಪ್
ಖಡಕ್ ಚಹಾ..
ಹೇಳಿತು ಚಂಚಲ ಮನಸ್ಸು
ಇವತ್ತೊಂದಿನ ಹೀರು ಪರವಾಗಿಲ್ಲ.

ಹಂಗಂಗೇ ಒಂದೊಂದೇ ಇವತ್ತು ಮಾತ್ರ
ಹೇಳಿಕೊಂಡು ಎಲ್ಲಾ ಸ್ವಾಹಾಹಾ
ಮತ್ತೆ ಎಲ್ಲವೂ ಎಂದಿನಂತೆ ಯಥಾಪ್ರಕಾರ.

ಕುಂಟು ನೆಪವೊಡ್ಡಿಕೊಂಡು
ಬುದ್ಧಿಯ ಮಾತು ಕೇಳದೆಯೇ
ನುಣುಚಿಕೊಳ್ಳುವ ಸ್ಥಿತಿ ನಂದೊಂದೇನಾ
ಅಥವಾ ನೀವೂ ನನ್ನ ಜೊತೆಗೆ ಇದ್ದೀರಾ?
ಕೊಂಚ ಹೇಳಿ ಆಯ್ತಾ…
ಇನ್ನೆಂತಕ್ಕಲ್ಲ
ಈ ಮನಸ್ಸಿನ ಸಮಾಧಾನಕ್ಕೆ!

‍ಲೇಖಕರು Admin

August 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: