ಗಿರೀಶ್ ಕಾಸರವಳ್ಳಿಯವರೊಂದಿಗೆ ಚಿತ್ರಾ ಸಂತೋಷ ಸಂದರ್ಶನ…

ಚಿತ್ರಾ ಸಂತೋಷ

ನಾದದ ನವನೀತ ಪಂ ವೆಂಕಟೇಶ್ ಕುಮಾರ್…
ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ ಸಾಕ್ಷ್ಯಚಿತ್ರ

ಹಿಂದೂಸ್ತಾನಿ ಸಂಗೀತದ ಅಗ್ರಗಣ್ಯ ಗಾಯಕ ಪದ್ಮಶ್ರಿ ಪಂ. ವೆಂಕಟೇಶ್ ಕುಮಾರ್ ಅವರ ಬದುಕು-ಸ್ವರಸಾಧನೆಯ ಕುರಿತ ‘ನಾದದ ನವನೀತ ಪಂ. ವೆಂಕಟೇಶ್ ಕುಮಾರ್’ ಎಂಬ 43 ನಿಮಿಷದ ಸಾಕ್ಷ್ಯಚಿತ್ರ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಹೊರಬಂದಿದೆ. ಇದನ್ನು ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತರುತ್ತಿದೆ. ಈ ಸಂದರ್ಭದಲ್ಲಿ ಕಾಸರವಳ್ಳಿಯವರು ವಿಜಯಕರ್ನಾಟಕ ಲವಲವಿಕೆಯೊಂದಿಗೆ ಮನದಾಳ ಬಿಚ್ಚಿದ್ದಾರೆ.

ಮೊದಲ ಬಾರಿ ಸಂಗೀತಾಧರಿತ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದೀರಿ. ಇದಕ್ಕಾಗಿ ಮಾಡಿಕೊಂಡ ತಯಾರಿ?

ನಾವು ತಪ್ಪು ಮಾಡಬಾರದಲ್ವ? ಹಾಗಾಗಿ ಈ ಚಿತ್ರಕ್ಕೆ ತುಂಬಾ ಜನ ಸಂಗೀತ ಬಲ್ಲವರು ಸಾಥ್ ನೀಡಿದ್ದಾರೆ. ವೆಂಕಟೇಶ್ ಕುಮಾರ್ ಅವರನ್ನು ಹತ್ತಿರದಿಂದ ಕಂಡವರು, ಅವರ ಹಾಡುಗಳನ್ನು ಕೇಳಿ ತಾವೇ ಹಾಡಾದವರು ಜೊತೆಯಾಗಿದ್ದಾರೆ. ಚಿಕ್ಕಂದಿನಿಂದಲೇ ನಾನೂ ವೆಂಕಟೇಶ್ ಕುಮಾರ್ ಅವರನ್ನು ಕೇಳುತ್ತಾ ಬೆಳೆದಿದ್ದರಿಂದ ಚಿತ್ರ ಮಾಡುವುದು ಬಹಳ ಖುಷಿಯ ವಿಚಾರವೂ ಆಗಿತ್ತು.

ಈ ಚಿತ್ರದಲ್ಲಿನ ವಿಶೇಷತೆ ಏನು?

ಚಿತ್ರದಲ್ಲಿ ಅವರ ಜೀವನಕಥನ ಹೆಚ್ಚಿಲ್ಲ. ಅವರು ಗಾಯಕರಾಗಿ, ಪ್ರಾಧ್ಯಾಪಕರಾಗಿ, ಆಕಾಶವಾಣಿಯಲ್ಲಿ ಏನೇನು ಕೆಲಸ ಮಾಡಿದ್ದಾರೆಂದು ಬೇರೆ ಬೇರೆ ಆಯಾಮಗಳಲ್ಲಿ ಒಂದೊಂದು ಅಧ್ಯಾಯ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಸಾಧನೆಯ ದಾರಿಯಲ್ಲಿ ಅವರ ನಿಷ್ಠೆ, ಸರಳ ವ್ಯಕ್ತಿತ್ವ, ಭೀಮಸೇನ ಜೋಷಿಯವರು ನಮ್ಮಲ್ಲಿ ಹಾಡಪ್ಪ ಎಂದು ಕರೆದು ಸವಾಯಿ ಗಂಧರ್ವ ಉತ್ಸವದಲ್ಲಿ ಹಾಡಿಸಿದ್ದು, ತದನಂತರ ವೆಂಕಟೇಶ್ಕುಮಾರ್ ಜೀವನ ಬದಲಾಗಿದ್ದುಘಿ ಮೊದಲಾದ ವಿಶೇಷ ಸಂದರ್ಭಗಳ ಜೊತೆಗೇ ಅವರ ಅನನ್ಯ ಗುರುಭಕ್ತಿ ಮತ್ತು ತನ್ನ ಸಹಧರ್ಮಿಣಿಯನ್ನು ನೆನೆಸಿಕೊಳ್ಳುವ ಪರಿಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕಷ್ಟದಲ್ಲೇ ಬದುಕು ಕಟ್ಟಿದ ಅವರು ಸಾಧನೆಗೆ ಗುರುಗಳು ಮತ್ತು ಪತ್ನಿಯೇ ಕಾರಣ ಎನ್ನುತ್ತಾರೆ. ಇನ್ನೊಂದೆಡೆ ಅವರ ಪತ್ನಿ ಹೇಳುತ್ತಾರೆ: ‘ನಮ್ಮ ಆರಂಭಿಕ ಜೀವನದಲ್ಲಿ ನಮ್ಮಲ್ಲಿ ಎರಡೇ ಪಾತ್ರೆಗಳಿದ್ದವು: ಒಂದು ಅನ್ನಕ್ಕೆ, ಇನ್ನೊಂದು ಸಾಂಬಾರಿಗೆ’ ಎಂದು! ಈಗಿನ ತಲೆಮಾರಿನವರು ಇಂಥ ಸಾಧಕರನ್ನು ಅರಿಯುವ ಉದ್ದೇಶದಿಂದ ಚಿತ್ರ ನೋಡಬೇಕು.

ನಿಮಗೆ ಹಿಂದೂಸ್ತಾನಿ ಸಂಗೀತದ ನಂಟೇನಾದರೂ?

ನಾನು ಶಿವಮೊಗ್ಗದವ. ನಮ್ಮಲ್ಲಿ ದಕ್ಷಿಣಾದಿ ಹೆಚ್ಚು. ಆದರೆ, ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಯಾಗಿದ್ದಾಗ ಭಾಸ್ಕರಚಂದ್ರ ಎಂಬ ಮೇಷ್ಟ್ರಿದ್ದರು. ಅವರು ಹಿಂದೂಸ್ತಾನಿಯ ಕಟ್ಟಾ ಅಭಿಮಾನಿ. ನಮಗವರು ಹಿಂದೂಸ್ತಾನಿ ಸಂಗೀತದ ಪ್ರೀತಿ ಹುಟ್ಟಿಸಿದ್ದರು. ನಾನೂ ಕಛೇರಿಗಳಿಗೆ ಹೋಗಲು ಶುರುಮಾಡಿದೆ. ಅದು ಎಷ್ಟರಮಟ್ಟಿಗೆ ಎಂದರೆ ಪುಣೆಯಲ್ಲಿದ್ದಾಗ ಸವಾಯಿ ಗಂಧರ್ವ ಸಂಗೀತೋತ್ಸವ ತಪ್ಪಿಸಿದವನಲ್ಲ. ಹೋಗ್ತಾ ಹೋಗ್ತಾ ಜೋಷಿ, ಉಸ್ತಾದ್ ಆಮೀರ್ಖಾನ್, ಪರ್ವೀನ್ ಸುಲ್ತಾನಾ, ಕಿಶೋರಿ ಅಮೋನ್ಕರ್, ಲಕ್ಷ್ಮೀ ಶೇಖರ ಮೊದಲಾದವರ ಗಾಯನ ಹೆಚ್ಚು ಆಕರ್ಷಿಸಿತು. ಆ ಕಾಲದ ದಿಗ್ಗಜ ಆಮೀರ್ಖಾನ್ರ ದ್ರುಪದ್ ಗಾಯನವನ್ನು ಬಹಳ ಕೇಳಿದೆ. ಜೊತೆಗೆ ಮರಾಠಿ ರಂಗಸಂಗೀತ ಕೂಡ ಪ್ರೀತಿ ಹೆಚ್ಚಿಸಿತು. ಹಾಡಲು ಬರದಿದ್ದರೂ, ಹಿಂದೂಸ್ತಾನಿ ಸಂಗೀತದ ಒಳ್ಳೆಯ ಕೇಳುಗನಾದೆ. ಯಾವುದೇ ರಾಗ ಕೇಳುತ್ತಿದ್ದರೆ ಇವತ್ತಿಗೂ ಒಂದೊಳ್ಳೆ ಭಾವ ನನ್ನೊಳಗೆ ಹಾಡಾಗಿ ಮತ್ತೊಂದು ಹೊಸ ಕೆಲಸವನ್ನು ಉತ್ಸಾಹದಿಂದ ಮಾಡಲು ಸ್ಫೂರ್ತಿಯಾಗುತ್ತದೆ.

ವೆಂಕಟೇಶ್ ಕುಮಾರ್ ಬಗ್ಗೆ ಸಾಕ್ಷ್ಯಚಿತ್ರವೇನೋ ಬಂತು. ಆದರೆ, ಕಲಾಕಾರರನ್ನು ಪರಿಚಯಿಸುವಲ್ಲಿ ಕರ್ನಾಟಕ ಸರಕಾರ ಇನ್ನೂ ಬಹಳ ಹಿಂದೆ ಬಿದ್ದಿದೆ ಎಂದನಿಸುವುದಿಲ್ಲವೇ?

ಸರಕಾರದವರು ಸಾಕ್ಷ್ಯಚಿತ್ರಗಳನ್ನು ಮಾಡುತ್ತಾರೆ, ಆದರೆ 10 ನಿಮಿಷ-15 ನಿಮಿಷದ ಸಾಕ್ಷ್ಯಚಿತ್ರ ಮಾಡಿದರೆ ಅದರಲ್ಲಿ ಸಾಧಕರ ಬದುಕು ಕಟ್ಟಲಾಗುವುದಿಲ್ಲ. ಮೊದಲ ಬಾರಿ ಯಕ್ಷಗಾನ ಕ್ಷೇತ್ರದಲ್ಲಿ ಪದ್ಮಶ್ರೀ ಬಂದಾಗ ಸರಕಾರಕ್ಕೆ ಕೇಳಿದೆ, ಚಿತ್ರ ಮಾಡಲು ನನಗೆ ದುಡ್ಡುಕೊಡಬೇಡಿ, ಆದರೆ ಚಿತ್ರ ತಯಾರಿಯ ಖರ್ಚು ಕೊಡಿ ಎಂದು, ಆದರೆ ಸರಕಾರ ಅದಕ್ಕೆ ಕಿವಿಗೊಡಲಿಲ್ಲ! ಕುಮಾರ ಗಂಧರ್ವ, ಜೋಷಿ, ಮನ್ಸೂರರ ಬಗ್ಗೆ ಸಾಕ್ಷ್ಯಚಿತ್ರಗಳು ಬಂದಿವೆ. ಆದರೆ, ರಾಜಗುರು, ದೊರೆಸ್ವಾಮಿ ಅಯ್ಯಂಗಾರ್ ಬಗ್ಗೆ ಯಾರು ಮಾಡಿದರೋ ಗೊತ್ತಿಲ್ಲ. ಸಂಗೀತದಂಥ ಕಲಾರಂಗದಲ್ಲಿನ ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸವನ್ನು ಸರಕಾರಗಳು ಮಾಡಲೇಬೇಕು.

‍ಲೇಖಕರು Admin

August 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: