ಒಂದು
ಅರ್ಧ ಘಂಟೆ ಕಾದರೂ
ಬೇಟೆ ಸಿಗದೆ ಮುನಿಯನಿಗೆ ಬೇಸರವಾಯಿತು.
ಪ್ಲಾಸ್ಟಿಕ್ ಚೀಲದ ಕಡೆ ನೋಡಿದ.
ನಾಲ್ಕಾರು ಇಚ್ಕೆ ಪಿಚ್ಕೆ ಮೀನುಗಳು ಕಣ್ಣು ತೆರೆದು ಬಿದ್ದಿದ್ದವು.
ಹೆಂಡತಿ ಮಕ್ಕಳಿಗೆ ಏನು ಹೇಳಲಿ ಅಂದುಕೊಂಡ.
ಗಾಳ ಎಳೆದಂತಾಯಿತು. ಎಚ್ಚೆತ್ತು ಗಮನಿಸಿದ. ಆಸೆ ಚಿಗುರಿತು.
ಶಿವನೇ ಈಗ ಕೈ ಬಿಡಬೇಡ. ಒಂದೇ ಒಂದು ಒಳ್ಳೆ ಮೀನು ಸಾಕು.
ಮತ್ತೇನೂ ಕೇಳೋದಿಲ್ಲ.
ಕ್ಷಣ ಕ್ಷಣಕ್ಕೆ ಗಾಳದ ಬಿಗಿತ ಹೆಚ್ಚುತ್ತಿದೆ.
ದಪ್ಪ ಮೀನಿರಬೇಕು.
ಬಾ ಬಾ ಮುದ್ದಿನ ಮೀನೆ. ನಿನ್ನ ಮೇಲೆ ನನಗೇನೂ ದ್ವೇಷವಿಲ್ಲ.
ನಿನ್ನ ಪೌರುಷ ನೀನು ತೋರಿಸು. ನನಗೇನು ಬೇಜಾರಿಲ್ಲ.
ನಾನು ಮಾತ್ರ ನಿನ್ನನ್ನು ಬಿಟ್ಟು ಮನೆಗೆ ಹೋಗಲಾರೆ…
ಮುನಿಯ ಒಂದು ತುದಿ, ಮೀನು ಇನ್ನೊಂದು ತುದಿ.
ಟೆನ್ಷನ್ ಹೆಚ್ಚಾಯಿತು. ಜಗ್ಗಾಟ ಮುಂದುವರೆಯಿತು.
ಮುನಿಯ ಗಾಳವನ್ನು ಜೋರಾಗಿ ಎಳೆದ.
ತೋರುಬೆರಳಿನ ಚರ್ಮ ಸುಲಿದು ರಕ್ತ ಒಸರಿದಂತಾಯಿತು.
ಕೋಪದಿಂದ ತನ್ನೆಲ್ಲ ಶಕ್ತಿ ಸೇರಿಸಿ ಮತ್ತೊಮ್ಮೆ ಜಗ್ಗಿದ.
ಬೆರಳು ತುಂಡಾಯಿತು.
ಕೈಯಿಂದ ಗಾಳ ಕಳಚಿ ಆಳೆತ್ತರಕ್ಕೆ ಜಿಗಿಯಿತು.
ಮುನಿಯ ಚೀರುತ್ತಾ ಕೆಳಗೆ ಬಿದ್ದ.
ಕೊಕ್ಕೆಯ ತುದಿಯಲ್ಲಿ ಮೀನು ಸಾವು ಬದುಕಿನ ನಡುವೆ
ವಿಲವಿಲ ಒದ್ದಾಡಿತು.
{ }
ಎರಡು
ಚಂಡಮಾರುತದ ಮುನ್ಸೂಚನೆ
ಬಂದ ದಿನವೇ ದೋಣಿಯನ್ನು ಎಳೆದು ತಂದ ಗುಬೇರ ಹೆಂಡತಿ ಮಕ್ಕಳನ್ನು ಮಾವನ ಮನೆಗೆ ಕಳಿಸಿದ.
ಹೊರಗೆ ಜೋರು ಮಳೆ. ಇನ್ನೂ ಆರು ಘಂಟೆ ಆಗಿಲ್ಲ ಆದರೂ ಕತ್ತಲೆ. ಕಡಲತೀರದಲ್ಲಿ ನರಪಿಳ್ಳೆ ಇಲ್ಲ. ಮನೆಯಲ್ಲಿ ಕರೆಂಟ್ ಇಲ್ಲ.
ಲೈಟ್ ಹೌಸಿನ ಕಡೆ ನೋಡಿದ.ಗೆಳೆಯ ಗುಣಸೇಗರನಿಗೆ ಅಲ್ಲಿ ರಾತ್ರಿಯ ಡ್ಯೂಟಿ. ಬೇಜಾರು ಕಳೆಯಲು ಅವನಲ್ಲಿಗೆ ಹೋಗಿ ಬರಲೇ? ಗುಬೇರ ಯೋಚಿಸಿದ. ರೈನ್ ಕೋಟ್ ಧರಿಸಿ ಒಂದು ರಮ್ ಬಾಟಲಿಯನ್ನು ಜೇಬಿಗಿಳಿಸಿ ಬೀದಿಗಿಳಿದ.
ಲೈಟ್ ಹೌಸಿನ ಬುಡ ತಲುಪುವ ಮುನ್ನ ಸಮುದ್ರವನ್ನು ಗಮನಿಸಿದ. ಚಂಡಮಾರುತ ಬಡಿದರೆ ಏನೆಲ್ಲಾ ಅನಾಹುತ ಆಗಬಹುದೆಂದು ಯೋಚಿಸಿದ.
ಸ್ವಲ್ಪ ದೂರದಲ್ಲಿಬಂಡೆಯ ಮೇಲೆ ಎರಡು ಆಕೃತಿಗಳು ಕಂಡ ಹಾಗನಿಸಿ ಚಕಿತನಾದ. ಯಾರಿರಬಹುದು ಇಷ್ಟು ಹೊತ್ತಿನಲ್ಲಿ? ಈ ಮಳೆಯಲ್ಲಿ? ಸದ್ದು ಮಾಡದೆ ಅವರನ್ನು ಗಮನಿಸಿದ.
ಅರೆ! ಒಬ್ಬಗೆಳೆಯ ಗುಣಸೇಗರ ಅಲ್ಲವಾ?
ಇನ್ನೊಬ್ಬ… ಅಲ್ಲ ಇನ್ನೊಬ್ಬಳು… ಮಲ್ಲಿ!
ಗರ ಬಡಿದ ಗುಬೇರ ನಿಂತ ಬಂಡೆಯ ಮೇಲೆ ಕುಸಿದು ಕುಳಿತ.
ಮಲ್ಲಿ… ಎಂದು ಕೂಗಲು ಬಾಯಿ ತೆರೆದ.
ಅಷ್ಟರಲ್ಲಿ ಅವರಿಬ್ಬರೂ ಎದ್ದರು. ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಲೈಟ್ ಹೌಸಿನ ಕಡೆ ನಡೆಯತೊಡಗಿದರು. ಬಂಡೆಗಳನ್ನು ದಾಟುವಾಗ ಸೇಗರ ಜಾರಿ ಬಿದ್ದ. ನೋವಿನಿಂದ ಚೀರಿದ. ಮಲ್ಲಿ ಕೈ ಹಿಡಿದು ಕೂಡಿಸಿದಳು. ಕಾಲಿನಿಂದ ಒಸರಿದ ರಕ್ತ ಒರೆಸಿದಳು. ಎದೆಗಾನಿಸಿಕೊಂಡು ಸಂತೈಸಿದಳು. ಕಷ್ಟಪಟ್ಟು ಎದ್ದು ನಿಂತರು. ಗುಬೇರನನ್ನು ನೋಡಿ ಬೆಚ್ಚಿಬಿದ್ದರು.
ಮಳೆ ಜೋರಾಯಿತು. ಎದೆ ಸೀಳುವ ಗುಡುಗುಸಿಡಿಲು.
ಅವನನ್ನು ಅಲ್ಲೇ ಬಿಟ್ಟು ಬಂದು ಬಿಡು ಮಲ್ಲಿ, ನಾನು ನಿನ್ನನ್ನು ಕ್ಷಮಿಸುವೆ ಅಂತ ಗುಬೇರ ಮನಸಿನಲ್ಲಿ ಅಂದುಕೊಂಡದ್ದು ಅವರಿಬ್ಬರಿಗೂ ಕೇಳಿಸಿತು. ಹಾಗೆಯೇ ಮಾಡು ಮಲ್ಲಿ ಮುಂದಿನ ಜನುಮದಲ್ಲಿ ಒಂದಾಗೋಣ ಅಂದ ಸೇಗರ. ಇಲ್ಲ ಇಲ್ಲ ನಾ ನಿನ್ನ ಬಿಡಲಾರೆ, ಅದೂ ಈ ಸ್ಥಿತಿಯಲ್ಲಿ… ಮಲ್ಲಿ ಸೇಗರನ ಕೈಯನ್ನು ಗಟ್ಟಿಯಾಗಿ ಹಿಡಿದಳು.
ಭೋರ್ಗರೆವ ಕಡಲು ಧಪಧಪನೇ ಸುರಿದ ಮಳೆ ಅಪ್ಪಳಿಸಲಿರುವ ಚಂಡಮಾರುತವನ್ನು ದೃಢೀಕರಿಸಿದವು.
{ }
ಮೂರು
ನಿನ್ನೆಗಿಂತ ಇಂದು ಕಡಲು ಶಾಂತವಾಗಿತ್ತು.
ಬೀಚಿನಲ್ಲಿ ಅಲೆದಾಡಿ ರೂಮಿಗೆ ಬಂದುಶಾಂತರಸ ಸ್ನಾನ ಮಾಡಿದ.
ಮೈವೊರೆಸಿಕೊಳ್ಳುತ್ತಾ ಕಿಟಕಿಯ ಹತ್ತಿರ ಹೋಗಿ ನಿಂತ.
ದೂರದಲ್ಲಿ ಬಂಡೆಯ ಮೇಲೆ ಯುವತಿಯೊಬ್ಬಳು ಕೂತಿದ್ದು ಕಾಣಿಸಿತು.
ಅವಳ ತಲೆ ಕೂದಲು ಗಾಳಿಯಲ್ಲಿ ತೂರಾಡುತ್ತಿದ್ದವು.
‘ಯಾರು ಈ ಹುಡುಗಿ? ಒಬ್ಬಳೇ ಕೂತು ಏನು ಮಾಡುತ್ತಿದ್ದಾಳೆ?’
ಲ್ಯಾಪ್ ಟಾಪ್ ತೆಗೆದು ಬಂದ ಮೆಸೇಜುಗಳಮೇಲೆ ಕಣ್ಣಾಡಿಸಿದ. ಕೆಲಸಕ್ಕೆ ಬಾರದವು ಅನಿಸಿತು. ಶರ್ಟಿನ ಗುಂಡಿ ಹಾಕಿಕೊಳ್ಳುತ್ತಾ ಬಾಲ್ಕನಿಗೆ ಬಂದು ನಿಂತ. ಕತ್ತಲಾಗತೊಡಗಿತ್ತು. ಕತ್ತು ಹಿಗ್ಗಿಸಿ ಇಣುಕಿದ. ಅವಳು ಇನ್ನೂ ಅಲ್ಲೇ ಕೂತಿದ್ದಳು.
ಕಾಲಿಗೆ ಚಪ್ಪಲಿ ಏರಿಸಿ ಇರಲಿ ಅಂತ ಕೈಯಲ್ಲಿ ಟಾರ್ಚು ಹಿಡಿದು ಕೆಳಗಿಳಿದು ಬಂದ.
‘ಏನು ಸರ್, ಮತ್ತೆ ಬೀಚಿಗೆ ಹೊರಟ ಹಾಗಿದೆ. ಹುಷಾರು. ಮಳೆ ಬರಬಹುದು.ಕತ್ತಲೆ ಬೇರೆ,’ ಅಂದ ರೂಮ್ ಬಾಯ್ ರವಿಕುಮಾರ.
ಶಾಂತರಸ ಬಂಡೆಯನ್ನು ತೋರಿಸಿ ಅವಳು ಯಾರು ಎಂದು ಕೇಳಿದ.
‘ಒಹ್ ಬಿಡಿ ಸರ್. ಯಾರೋ ಹುಡುಗಿ ಆಗಾಗ ಬಂದು ಕೂಡ್ತಾಳೆ. ನಾವು ಹತ್ತಿರ ಹೋದರೆ ಮಾಯವಾಗ್ತಾಳೆ. ನಮ್ಮ ಕಡಲಲ್ಲಿ ಅನೇಕ ರಹಸ್ಯಗಳಿವೆ. ಇದೂ ಒಂದು.ಬನ್ನಿ ಒಂದು ಡ್ರಿಂಕ್ ಫಿಕ್ಸ್ ಮಾಡ್ತೀನಿ,’ ಅಂದಕುಮಾರ.
‘ಆಯ್ತು. ವೋಡ್ಕಾ ಲೆಮನ್ ಕಾರ್ಡಿಯಲ್ ತಗೊಂಬಾ. ಮೂಲೆ ಟೇಬಲ್ ನಲ್ಲಿ ಕೂತಿರ್ತೀನಿ.’
ಕುಮಾರ ಒಳಗೆ ಹೋದ. ಶಾಂತರಸ ಬೀಚಿನತ್ತನಡೆದ.
ಅವಳ ಪಕ್ಕ ಹೋಗಿ ಕೂತ. ಅಲೆಯೊಂದು ಬಂದು ಅಪ್ಪಳಿಸಿತು. ಬಂಡೆಯಿಂದ ಜಾರಿದ ಶಾಂತರಸನನ್ನು ಯುವತಿ ಹಿಡಿದೆಳೆದು ಮತ್ತೆ ತನ್ನ ಪಕ್ಕ ಕೂಡಿಸಿಕೊಂಡಳು. ಅವನ ಕೈ ಕಾಲುಗಳನ್ನು ತಡವಿದಳು. ಗಲ್ಲ ಸವರಿದಳು. ನೀಲಿ ಕಣ್ಣಿನ ಬೆಡಗಿ ಕತ್ತಲಲ್ಲೂ ಕೆಂಪಗೆಕಂಗೊಳಿಸಿದಳು.
ಗಾಳಿ ಜೋರಾಗಿ ಬೀಸಿತು. ಬಾನಲ್ಲಿ ಬೆಳ್ಳಿ ಮಿಂಚು. ಅದರ ಹಿಂದೆಯೇ ದೈತ್ಯಾಕಾರದ ಅಲೆ! ಶಾಂತರಸ ಕೆಂಗೆಟ್ಟು ನೋಡಿದ. ಯುವತಿ ಅವನ ಅಪ್ಪುಗೆಯಿಂದ ಬಿಡಿಸಿಕೊಂಡು ನೀರಿಗೆ ಜಿಗಿದಳು. ಮತ್ಸ್ಯಕನ್ಯೆಯ ಹಿಂಭಾಗ ಮಿಣಮಿಣ ಹೊಳೆಯುತ್ತಾ ನೀರಿನಲ್ಲಿ ಮರೆಯಾಯಿತು.
‘ಏನು ಸರ್, ಕುರ್ಚಿಯಲ್ಲೇ ನಿದ್ದೆ ಮಾಡಿಬಿಟ್ಟಿರಿ? ನಿಮ್ಮ ಡ್ರಿಂಕ್ ಫಿಕ್ಸ್ ಮಾಡಿ ಹತ್ತು ನಿಮಿಷ ಆಯಿತಲ್ಲ,’ ಅಂದ ರವಿಕುಮಾರ.
{ }
0 ಪ್ರತಿಕ್ರಿಯೆಗಳು