ಗಿರಿಧರ ಖಾಸನೀಸ
—-
ಮರುಭೂಮಿಯ ಮಧ್ಯದಲ್ಲಿ
ಒಂಟೆಯ ಮೇಲೆ ಒಂಟಿ ಸವಾರ. ಮಠ ಮಠ ಮಧ್ಯಾಹ್ನ.
ನೆತ್ತಿಯ ಮೇಲೆ ಸೂರ್ಯ.
ಮರಳು. ಬಿಸಿಗಾಳಿ. ಮರೀಚಿಕೆ.
ಮರಳಲ್ಲಿ ತೆವಳಿತೊಂದು ಮುದಿಹಾವು.
ಆಕಾಶದಲ್ಲಿ ತೇಲಾಡಿತೊಂದು ಹದ್ದು.
ಬಾಯಾರಿದ ಒಂಟೆ,
ಹಸಿದ ಹದ್ದು,
ದಣಿದ ಹಾವು.
ಕಲಾವಿದ ಕುಂಚವನ್ನು
ಕೆಳಗಿಟ್ಟು ಮೈಮುರಿದ.
ಹಾವು ಹೆಡೆ ಎತ್ತಿತು.
ಹದ್ದಿನ ಕಣ್ಣು ಚುರುಕಾಯಿತು.
{ }
ಇಬ್ಬರು ಪ್ರಯಾಣಿಕರು.
ನೆತ್ತಿಗೇರಿದ ಬಿಸಿಲು.
ಕುಂಟನ ಬೆನ್ನಿಗೆ ಕುರುಡ ಕೂತಿದ್ದಾನೆ.
ಸ್ವಲ್ಪ ಹೊತ್ತು ಸುಧಾರಿಸಿದರೆ ಹೇಗೆ
ಅಂದ ಕುರುಡ.
ಕುಂಟನಿಗೂ ಅದೇ ಬೇಕಿತ್ತು.
ನೆರಳಲ್ಲಿ ಕೂತು ಬುತ್ತಿಯನ್ನು ಬಿಚ್ಚಿದ.
ಕುರುಡನಿಗೆ ತಿನ್ನಿಸಿದ. ತಾನೂ ತಿಂದ.
ಪಕ್ಕದಲ್ಲೇ ಹರಿದ ನೀರಿನಲ್ಲಿ ಕಾಲನ್ನು ಆಡಿಸಿದ.
ಹಸಿದ ಮೊಸಳೆ ಅದನ್ನು ಕಚ್ಚಿಕೊಂಡು ಹೋಯಿತು.
ನಿದ್ದೆಯಿಂದ ಎದ್ದ ಕುರುಡ ಕುಂಟನಿಗಾಗಿ ಕಾದ.
ಅವನ ಹೆಸರು ಹಿಡಿದು ಕೂಗಿದ. ಉತ್ತರ ಬರಲಿಲ್ಲ.
ಮಾರನೇ ದಿನ ಕುರುಡ ಕಿವುಡನೊಬ್ಬನ ಕೈ ಹಿಡಿದ.
ಪ್ರಯಾಣ ಮುಂದುವರೆಸಿದ.
ಕಿವುಡನ ಕೈ ಸ್ಪರ್ಶ
ಕುರುಡನಿಗೆ ಹುಚ್ಚು ಹಿಡಿಸಿತು.
{ }
ರೈಲು ಅತಿವೇಗದಲ್ಲಿ ಚಲಿಸುತ್ತಿತ್ತು.
ಹೊದಿಕೆ ಸರಿಸಿ ಪ್ಯಾಂಟು ಕಳಚಿ
ಶೌಚಾಲಯಕ್ಕೆ ಹೋದೆ.
ವಾಪಸ್ ಬಂದಾಗ ನನ್ನ ಜಾಗದಲ್ಲಿ
ಬೇರೊಬ್ಬರು ಮಲಗಿದ್ದರು.
ಮೆಲ್ಲಗೆ ಹೊದಿಕೆ ಸರಿಸಿ ನೋಡಿದೆ.
ಆಶ್ಚರ್ಯವಾಯಿತು.
ನಿಂತವನು ನಾನೇ
ಮಲಗಿದವನೂ ನಾನೇ
ಹೋದವನೂ ನಾನೇ
ಬಂದವನೂ ನಾನೇ
ಹತ್ತಿದವನು ನಾನೇ
ಇಳಿಯುವವನೂ ನಾನೇ.
ಹಾಗಾದರೆ ಶೌಚಾಲಯದಲ್ಲಿ
ಬಿಟ್ಟು ಬಂದೆನಲ್ಲ
ಅವನಾರು?
0 ಪ್ರತಿಕ್ರಿಯೆಗಳು