ಗಿರಿಧರ್ ಖಾಸನೀಸ್ ಕಥೆ- ಬಂಧಿಗಳು…

ಗಿರಿಧರ್ ಖಾಸನೀಸ್

ಮೃಗಾಲಯದಿಂದ ತಪ್ಪಿಸಿಕೊಂಡ ಹುಲಿಯೊಂದು ಹತ್ತಿರದಲ್ಲಿದ್ದ ಆಫೀಸಿನಲ್ಲಿ  ಬಚ್ಚಿಟ್ಟುಕೊಂಡಿದೆಯೆಂಬ ವದಂತಿ ಹಬ್ಬುತ್ತಿದ್ದಂತೆ ಆಡಳಿತವರ್ಗ ಬೇರೆ ಉಪಾಯವಿಲ್ಲದೆ ಎಲ್ಲರಿಗೂ ರಜೆ ಘೋಷಿಸಿತು – ಕಾವಲುಗಾರನಾದ ನಾರಾಯಣ ಒಬ್ಬನನ್ನು ಬಿಟ್ಟು.

ಹುಷಾರಾಗಿರು ಹುಲಿ ಕಂಡರೆ ತಕ್ಷಣ ತಿಳಿಸು ಅಂತ ಹೇಳಿ ಎಲ್ಲ ಹೋಗಿಬಿಟ್ಟರು. ಮಾಧ್ಯಮದವರು ಆಫೀಸಿನ ಮುಂದೆ ಎರಡು ದಿನ ಬಿಡಾರ ಬಿಟ್ಟು ಎಲ್ಲ ಫೇಕ್ ನ್ಯೂಸ್ … ಪಬ್ಲಿಸಿಟಿಗೋಸ್ಕರ … ಅಂತ ಶಪಿಸಿ ತಮ್ಮ ತಮ್ಮ ಕಚೇರಿಗಳಿಗೆ ಹಿಂತಿರುಗಿದರು.

ನಾರಾಯಣನಿಗೂ ಇದೆಲ್ಲ ಸುಳ್ಳಿರಬಹುದೆನಿಸಿತು. ಈಚೀಚೆಗೆ ಚಿರತೆಗಳು ನಗರಗಳಲ್ಲಿ ಕಾಣಿಸತೊಡಗಿವೆ ಎಂಬ ಸುದ್ದಿ ಬರುತ್ತಿದ್ದರೂ ಮೃಗಾಲಯದ ಹುಲಿ ಇಲ್ಲಿ ಅಡಗಿದೆ ಅಂದರೆ ನಂಬಲು ಸಾಧ್ಯವೇ? ಧೈರ್ಯ ಮಾಡಿ ಒಂದ ಮಾಡಲು ಆಫೀಸಿನೊಳಗಿದ್ದ ಶೌಚಾಲಯಕ್ಕೆ ಹೋಗಿ ಬರಲು ಶುರುಮಾಡಿದ ನಾರಾಯಣ. ಹುಲಿಯಿರಲಿ ಇಲಿಯೂ ಕಾಣದೆ ಸಮಾಧಾನವಾಯಿತು. ಹೆದರಬೇಡ ಅಂತ ಹೆಂಡತಿಗೆ ಹೇಳಿಕಳಿಸಿದ.

ಎಂದಿನಂತೆ ಇಂದು ಮುಂಜಾನೆ ಆಫೀಸಿನ ಒಳಗೆ ಹೋದ. ಇನ್ನೇನು ಶೌಚಾಲಯಕ್ಕೆ ಕಾಲಿಡಬೇಕು, ಗರ್ ಅನ್ನುವ ಸದ್ದು ಕೇಳಿ ಬೆಚ್ಚಿದೆ. ಯಾವಾಗಲೂ ಸೊಂಟದಲ್ಲಿರಬೇಕಾದ ಪಿಸ್ತೂಲನ್ನು ಹೊರಗೇ ಬಿಟ್ಟು ಬಂದಿದ್ದೇನೆ ಅಂತ ಮನವರಿಕೆಯಾದ ಕ್ಷಣವೇ ಮೈಯೆಲ್ಲಾ ಬೆವರಿ ಕೈಕಾಲುಗಳು ನಡುಗಿ ಹಲ್ಲುಗಳು ಕಟಕಟಿಸಿದವು. ಪ್ಯಾಂಟಿನಲ್ಲೆ ಉಚ್ಚೆ ಬಂದ ಹಾಗಾಯಿತು. ಉಸಿರು ಬಿಗಿ ಹಿಡಿದು ಪಕ್ಕದಲ್ಲಿದ್ದ ಸ್ಟೂಲ್ ಮೇಲೆ ಕುಕ್ಕರಿಸಿದ. 

ಹತ್ತು ನಿಮಿಷ ಕಳೆದಿರಬಹುದು. ಬೇಗ ಬೇಗ ನಡೆದರೆ ಹೊರಗೆ ಹೋಗಲು ಮೂರು ನಿಮಿಷ ಸಾಕು ಅಂತ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿ ಮೆಲ್ಲಗೆ ಏಳಲು ಪ್ರಯತ್ನಿಸಿದ. ಒಂದೊಂದೇ ಹೆಜ್ಜೆ ಇಡುತ್ತ ಜೆರಾಕ್ಸ್ ರೂಮಿನ ತನಕ ಹೇಗೋ ಬಂದಾಯಿತು. ಇನ್ನು ಎರಡು ನಿಮಿಷ ಸಾಕು. ಉಸಿರೆಳೆದುಕೊಂಡು ಮಾರುತಿಗೊಂದು ಹರಕೆ ಹೊತ್ತು, ಮೆಲ್ಲಗೆ ನಡೆಯುತ್ತಾ ಬಾಗಿಲನ್ನು ತಲುಪಿಯೇಬಿಟ್ಟ ಕೂಡ.

ಅವನ ದುರದೃಷ್ಟ – ಎಷ್ಟೇ ಪ್ರಯತ್ನಿಸಿದರೂ ಮುಚ್ಚಿದ ಕದ ತೆರೆಯಲೇ ಇಲ್ಲ! ಬೀಗ ಬದಲಾಯಿಸಿ ಬೀಗ ಬದಲಾಯಿಸಿ ಅಂತ ಎಷ್ಟು ಸಾರಿ ಬೇಡಿಕೊಂಡರೂ ಆಫೀಸಿನವರು ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ. ಈಗ ನಾನು ಹುಲಿ ಇಬ್ಬರೂ ಈ ದರಿದ್ರ ಆಫೀಸಿನಲ್ಲಿ ಬಂಧಿಗಳು ಎಂದು ದೃಢವಾಗಿ ಅಳು ಬಂದುಬಿಟ್ಟಿತು.

ನಿಧಾನವಾಗಿ ಹತ್ತಿರದ ಮ್ಯಾನೇಜರ್ ಕೊಠಡಿಯ ಕಡೆಗೆ ಕಾಲು ಹಾಕಿದ. ಇಣುಕಿನೋಡಿದ. ಮ್ಯಾನೇಜರ್ ಕುರ್ಚಿಯಲ್ಲಿ ಕುಳಿತ ಹುಲಿ ಅವನನ್ನು ನೋಡಿತು. ಒಳಗೆ ಬಾ ಅನ್ನುವಂತೆ ತಲೆ ಆಡಿಸಿತು. 

ಬವಳಿ ಬಂದಂತಾಗಿ ಬಾಗಿಲನ್ನೇ ಗಟ್ಟಿಯಾಗಿ ಹಿಡಿದು ನಿಂತ.  ಹುಲಿ ದೊಡ್ಡದಾಗಿ ಬಾಯಿ ತೆರೆದು ಆಕಳಿಸಿತು. 

ಅದರ ಬಾಯಿಯ ದುರ್ಗಂಧ ಮೂಗಿಗೆ ಅಪ್ಪಳಿಸಿ ಚಿಕ್ಕಂದಿನಲ್ಲಿ ಓದಿದ್ದ ಪುಣ್ಯಕೋಟಿ ಕಥೆ ನೆನಪಿಗೆ ಬಂತು. ‘ಒಂದು ಬಿನ್ನಹ ಹುಲಿಯೇ ಕೇಳು’ ಅಂತ ತೊದಲಿದ. ಮುಂದಿನ ಸಾಲು ನೆನಪಾಗಲಿಲ್ಲ. 

ಹುಲಿ ಮತ್ತೆ ಬಾಯಿ ತೆರೆದು ಆಕಳಿಸಿತು. 

‍ಲೇಖಕರು avadhi

April 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: