ಗಿರಿಧರ್ ಖಾಸನೀಸ್ ಅವರ ನಾಲ್ಕು ಅತಿ ಸಣ್ಣ ಕಥೆಗಳು

ಗಿರಿಧರ್ ಖಾಸನೀಸ್

—-

1. ಪರದೆಗಳು

ಮಂಗಳವಾರ ಮಧ್ಯಾಹ್ನದ ಶೋ

ನೋಡಲು ಚಿತ್ರಮಂದಿರಕ್ಕೆ ಹೋದೆ. 

ಟಿಕೆಟ್ ಕೌಂಟರ್ ಹುಡುಗಿ ಮೊಬೈಲ್ನಲ್ಲಿ ಮಾತುಕತೆ ನಡೆಸಿದ್ದಳು. 

ಒಂದು ಬಾಲ್ಕನಿ ಟಿಕೆಟ್ ಕೊಡಮ್ಮ.’

ಅವಳ ಗಮನ ಸೆಳೆಯಲು ಸ್ವಲ್ಪ ಜೋರಾಗಿ ಹೇಳಿದೆ.

ಮಾತು ನಿಲ್ಲಿಸಿ ನನ್ನ ಕಡೆ ತಿರುಗಿದಳು.

ದಿಟ್ಟಿಸಿ ನೋಡಿದಳು. ಕಣ್ಣು ದೊಡ್ಡದಾಯಿತು.

ಸಾರ್ ನೀವು… ಅನ್ನುತ್ತಾ ಮೊಬೈಲನ್ನು ಕೆಳಗಿಟ್ಟಳು.

ಒಂದು ನಿಮಿಷ ಸರ್ … ಅನ್ನುತ್ತಾ ಮ್ಯಾನೇಜರ್ ಕೊಠಡಿಯತ್ತ ಧಾವಿಸಿದಳು.

ಮ್ಯಾನೇಜರ್ ಓಡುತ್ತಾ ಹೊರಬಂದ. ಅವನ ಜೊತೆ ಇನ್ನಿಬ್ಬರು ಹುಡುಗರು. ನನ್ನ ಕೈ ಕುಲಕಿದ.

ಸಾರ್, ಎಂಥಾ ಆಶ್ಚರ್ಯ.  ನೀವು ನಮ್ಮ ಚಿತ್ರಮಂದಿರಕ್ಕೆ ಬಂದಿರೋದು ನಮ್ಮ ಪುಣ್ಯ. ಒಂದು ಮಾತು ಹೇಳಿದ್ರೆ ಮನೆಗೇ ಕಾರ್ ಕಳಿಸುತ್ತಿದ್ದೆ. ಬನ್ನಿ ಸರ್… ಒಳಗೆ ಬನ್ನಿ … ನಮ್ಮ ಜೊತೆ ಒಂದು ಗ್ರೂಪ್ ಫೋಟೋ ಆಗಬಹುದಾ ಸರ್…’

ಭಲವಾದ ಫ್ಲಾಶ್ ಲೈಟ್ ಕಣ್ಣಿಗೆ ಹೊಡೆಯಿತು.

ಟಿಕೆಟ್ ತಗೊಳ್ಳಿ… 

ಕೌಂಟರ್ ಹುಡುಗಿ ಸಿಡುಕಿದಳು.

ಚಿಲ್ಲರೆ ಕೊಟ್ಟು ಮೊಬೈಲ್ನಲ್ಲಿ ಮಾತು ಮುಂದುವರೆಸಿದಳು.

‘ಯಾರೋ ಮುದುಕಪ್ಪಾ ಕಣೆ … ಶೋ ಶುರು ಆಗೊಕ್ಕೆ ಇನ್ನೂ ಅರ್ಧ ಘಂಟೆ ಇದೆ. ಥೇಟರ್ ಖಾಲೀ ಹೊಡೀತಿದೆ. ಹೇಳಿ ಕೇಳಿ ಡಬ್ಬಾ ಪಿಕ್ಚರ್.  ಆ ವಯ್ಯನಿಗೆ ಮಾತ್ರ ಏನವಸರ ಅಂತೀ…’

{ }

2. ಪರೀಕ್ಷೆ

ಒಂದು ಹುದ್ದೆ. ಮೂವರು ಅಭ್ಯರ್ಥಿಗಳು. 

ಮೇಜಿನ ಮೇಲೊಂದು ಗಾಜಿನ ಬಾಟಲಿ.  ಅದರೊಳಗೆ ಎರಡು ಚೇಳುಗಳು.

ಮುಂದೆ ಏನಾಗುತ್ತದೆ ಎಂಬುದು ಪರೀಕ್ಷಕನ ಪ್ರಶ್ನೆ. 

ಮೊದಲ ಅಭ್ಯರ್ಥಿ:

‘ಬಲಿಷ್ಠವಾದ ಚೇಳು ಇನ್ನೊಂದನ್ನು ತಿಂದು ಹಾಕುತ್ತದೆ.’

ಎರಡನೇ ಅಭ್ಯರ್ಥಿ:

‘ಎರಡು ಚೇಳುಗಳೂ ಕಚ್ಚಾಡಿ ವಿಷಕಾರುತ್ತಾ ಸಾಯುತ್ತವೆ.’

ಮೂರನೇ ಅಭ್ಯರ್ಥಿ ಕಣ್ಣು ಮುಚ್ಚಿ ಕುಳಿತಿದ್ದಾನೆ.

ಕಣ್ಣು ತೆರೆಯದೆ ನಿಧಾನವಾಗಿ ಹೇಳುತ್ತಾನೆ:

ಮುಂದೆ ಏನು ಬೇಕಾದರೂ ಆಗಬಹುದು.

ಯಾವುದೇ ಶ್ರಮವಿಲ್ಲದೆ ಸಿಕ್ಕ ಪ್ರತ್ಯೇಕತೆ ಚೇಳುಗಳನ್ನು ಉದ್ರೇಕಿಸುತ್ತದೆ. ತಾವು ಬಂಧಿಗಳೆಂಬುದನ್ನೂ ಮರೆತು ನಿರ್ಲಜ್ಜ ಕಾಮಕೇಳಿಯಲ್ಲಿ ತೊಡಗಿಸುತ್ತದೆ.

ಪ್ರೇಮ ಕಡಿಮೆಯಾಗಿ ಹೊಟ್ಟೆ ಚುರುಚುರು ಅಂದಾಗ ಅಸಹನೆ ಸಹಜ. ಸಣ್ಣದಾಗಿ ಶುರುವಾದ ಕಿರಿಕಿರಿಗಳು ಮುಂದೆ ಕಚ್ಚಾಡಲು ಪ್ರಚೋದಿಸುತ್ತವೆ. ಬಲಿಷ್ಠವಾದ ಗಂಡು ಹೆಣ್ಣು ಚೇಳಿನ ಮೇಲೆ ಇನ್ನೇನು ಪ್ರಹಾರ ಮಾಡಬೇಕು ಅನ್ನುವಾಗ ಅವಳು ಗರ್ಭಿಣಿ ಎಂಬ ವಿಷಯ ಗೊತ್ತಾಗುತ್ತದೆ. ಹತಾಶನಾದ ಅವನು ತನ್ನ ಪ್ರಾಣವನ್ನು ಅರ್ಪಿಸಲು ರೆಡಿ ಆಗುತ್ತಾನೆ. ಇವೆಲ್ಲ ಬಾಟಲಿಯಲ್ಲಿ ಸಾಧ್ಯ.

ಆದರೆ ಹೊರ ಜಗತ್ತೊಂದಿದೆಯಲ್ಲ. ಸಣ್ಣ ಭೂಕಂಪವಾಗುತ್ತದೆ.  ಮೇಜು ಅಲ್ಲಾಡಿ  ಬಾಟಲಿ ಕೆಳಗುರುಳಿ ಬೀಳುತ್ತದೆ.  ಚೇಳುಗಳು ತಪ್ಪಿಸಿಕೊಂಡು ಓಡಿ ಹೋಗುತ್ತವೆ. 

ಅದೇ ಭೂಕಂಪದ ತೀವ್ರತೆ ಸ್ವಲ್ಪ ಹೆಚ್ಚಾಯಿತೆನ್ನಿ…  ಇಡೀ ಕಟ್ಟಡ ಕುಸಿದು ನಾವು ನಾಲ್ವರೂ ಅದರಡಿಯಲ್ಲಿ ಸಿಲುಕುತ್ತೇವೆ.  ಕೈಕಾಲು ಮುರಿದು, ಬೆನ್ನುಹುರಿ ಬಿರುಕು ಬಿಟ್ಟು, ತಲೆ ಒಡೆದು ರಕ್ತ ಸುರಿಯುತ್ತಾ ಸಾವು-ಬದುಕಿನ ನಡುವೆ ಒದ್ದಾಡುವಾಗ ಪ್ರಶ್ನಾರ್ಥಕ ಚಿಹ್ನೆಯಂತೆ ಬಳುಕುವ ವಿಷಭರಿತ ಬಾಲ ಆಡಿಸುತ್ತ ಹಸಿದ ಚೇಳುಗಳು ನಮ್ಮ ಮೂಗಿನ ತುದಿಯಲ್ಲಿ ನಿಲ್ಲುತ್ತವೆ.  ಆಗ ಯಾವ ಹುದ್ದೆ, ಸರ್, ಯಾವ ಪರೀಕ್ಷೆ?’

{ }

3. ರಿಪೋರ್ಟ್

ಆಸ್ಪತ್ರೆಯ ಕ್ಯಾಂಟೀನಿನಲ್ಲಿ ಕೂತು ಡಾಕ್ಟರರ ಮಾತುಗಳನ್ನು ಮೆಲಕುಹಾಕಿದೆ. ನಿಮ್ಮ ರಿಪೋರ್ಟ್ ಬಂದಿದೆ.  ನಾಟ್ ಲುಕಿಂಗ್ ಗುಡ್, ವೆಂಕಟೇಶ್. ವೈದ್ಯಕೀಯವಾಗಿ ಏನನ್ನೂ ಮಾಡಲೂ ಸಾಧ್ಯವಿಲ್ಲ. ಈ ಸ್ಥಿತಿಯಲ್ಲಿ ನೋವನ್ನು ಕಡಿಮೆ ಮಾಡುವುದು ಹೇಗೆ. ನಮ್ಮ ಮುಂದಿರುವ ಪ್ರಶ್ನೆ ಅದೊಂದೇ.

ಕಾಫಿ ತಣ್ಣಗಾಯಿತು.

ಪಕ್ಕದ ಟೇಬಲ್ಲಿನಲ್ಲಿ ಚಿಕ್ಕ ಹುಡುಗ ಚಂಡಿ ಹಿಡಿದಿದ್ದ. ಸಮಾಧಾನಪಡಿಸಲು ಅವನ ಅಮ್ಮ ಹರಸಾಹಸ ಪಡುತ್ತಿದ್ದಳು.  ‘ಹಠ ಮಾಡಬೇಡ ಪುಟ್ಟ. ಸಾಯಂಕಾಲ ಐಸ್ ಕ್ರೀಮ್ ಕೊಡಿಸ್ತೀನಿ. ಗಾಡ್ ಪ್ರಾಮಿಸ್. ಈಗಲೇ ಬೇಕು ಅಂದರೆ ಹೇಗೆ. ಇದು ಆಸ್ಪತ್ರೆ ಅಲ್ಲವಾ. ಡಾಕ್ಟರ್ ನೋಡಿದರೆ ಬೈಯಲ್ಲವಾ…’

ಅಷ್ಟರಲ್ಲಿ ಒಬ್ಬ ನರ್ಸ್ ಮಿಸ್ಟರ್ ವೆಂಕಟೇಶ್ ಮಿಸ್ಟರ್ ವೆಂಕಟೇಶ್ ಎಂದು ಕೂಗುತ್ತಾ  ಓಡಿ ಬಂದಳು.  ಕುಳಿತಲ್ಲಿಂದ ಕೈ ಎತ್ತಿದೆ.

ಸರ್. ನಿಮ್ಮ ಮೊಬೈಲಿಗೆ ಎಷ್ಟು ಕಾಲ್ ಮಾಡಿದರೂ ಕನೆಕ್ಟ್ ಆಗ್ತಿಲ್ಲ. ಬನ್ನಿ, ನಿಮ್ಮನ್ನು ಡಾಕ್ಟರ್ ಕರೀತಿದ್ದಾರೆ. ತಕ್ಷಣವೇ ಬರಬೇಕಂತೆ. ನಿಮ್ಮ ರಿಪೋರ್ಟ್ ಮತ್ತೆ ನೋಡಬೇಕಂತೆ. ನಿಮ್ಮ ರಿಪೋರ್ಟ್ ಇನ್ನೊಬ್ಬ ವೆಂಕಟೇಶ್ ಅನ್ನೋರ ರಿಪೋರ್ಟ್ ಜೊತೆ ಮಿಕ್ಸ್ ಅಪ್ ಆಗಿರಬಹುದೇ ಚೆಕ್ ಮಾಡಬೇಕಂತೆ. ಡಾಕ್ಟರ್ ಕಾಯ್ತಿದ್ದಾರೆ. ಪ್ಲೀಸ್ ಕಮ್…’

ನರ್ಸಮ್ಮನ ಹಿಂದೆ ಹೊರಟೆ.

ಬಾಗಿಲ ಬದಿಯಲ್ಲಿದ್ದ ಕೌಂಟರ್ ದಾಟುತ್ತಿದ್ದಂತೇ ಏನೋ ಹೊಳೆಯಿತು.

ಸಿಸ್ಟರ್ ಒಂದು ನಿಮಿಷ ಅಂದೆ.

ಕೌಂಟರಿಗೆ ವಾಪಸ್ ಹೋಗಿ ನೂರು ರೂಪಾಯಿ ತೆಗೆದು ಕ್ಯಾಶಿಯರ್ಗೆ ಕೊಟ್ಟುಹೇಳಿದೆ.

ಚಾಕಲೇಟ್ ಐಸ್‌ಕ್ರೀಂ. ಅಲ್ಲಿ ನೋಡಿ. ಆ ಚಿಕ್ಕ ಹುಡುಗನಿದ್ದಾನಲ್ಲ… ಆ ಟೇಬಲ್ಲಿಗೆ ಕಳಿಸಿ. ಈಗಲೇ.’  

{ }

4. ಮಳೆ

ಈಗ ಮನೆಯಲ್ಲಿ ನಾವಿಬ್ಬರೇ. ಅಮ್ಮ ಹೋಗಿ ಹದಿನೈದು ದಿನ ಕಳೆದಿವೆ. 

ಬಂಧು ಬಳಗ ಬಂದು ಅಪ್ಪನಿಗೆ ನನಗೆ ಸಾಂತ್ವನ ಹೇಳಿ ಹೋಗಿದ್ದಾರೆ.

‘ಶೀ ವಾಸ್ ಆ ಗುಡ್ ವುಮನ್.’

ನಲವತ್ತು ವರ್ಷ ಒಟ್ಟಿಗೆ ಸಂಸಾರ ಮಾಡಿದ ಮೇಲೆ ಅಪ್ಪನ ಅಂತಿಮ ತೀರ್ಪು.

ನಾನೇನೂ ಹೇಳಲಿಲ್ಲ. ಏನು ಹೇಳೋದು?

ಅಮ್ಮನ ಕೊನೆಯ ಮೂರು ವರುಷ ಎಲ್ಲರ ಸಹನೆಯನ್ನು ಪರೀಕ್ಷಿಸಿತ್ತು.

ಡಾಕ್ಟರ್ ಮಾರ್ಫಿನ್ ಕೊಟ್ಟು ನೋವನ್ನು ಅಂತ್ಯಗೊಳಿಸೋಣ ಅಂದರು.

ಅಪ್ಪ ಹೂ ಅನ್ನಲಿಲ್ಲ ಉಹೂ ಅನ್ನಲಿಲ್ಲ. ಇಂಜೆಕ್ಷನ್ ಕೊಟ್ಟು ಮಲಗಿಸಿದರು.

ಆಗಲೂ ಅವರ ಮುಖದಲ್ಲಿ ದುಃಖ ಕೋಪ ಉದ್ವೇಗ ಕಾಣಲಿಲ್ಲ. 

ಅಮ್ಮನ ಕಣ್ಣುಗಳನ್ನು ದಾನ ಮಾಡಿದೆವು. ಒಳ್ಳೆ ರೇಷ್ಮೆ ಸೀರೆ ಉಡಿಸಿ ಕಳಿಸಿಕೊಟ್ಟೆವು.

ಹೋಗೋ ಮುಂಚೆ ನನ್ನ ಕೈ ಹಿಡಿದು ‘ಅಪ್ಪನನ್ನು ಚೆನ್ನಾಗಿ ನೋಡಿಕೋ ಕಂದ,’ ಅಂತ ಅವಳು ಹೇಳಿದ್ದು ಚೆನ್ನಾಗಿ ನೆನಪಿದೆ.

ಈಗ ಮನೆಯಲ್ಲಿ ಮೌನ ರಾಗ. ಅಪ್ಪ ಎದ್ದರು. ಒಳಗೆ ಹೋಗಿ  ಮಲಗಿದರು.

ಐದು ನಿಮಿಷ ಆಗಿರಬಹುದು. ಮುಸಮುಸ ಅಂತ ಧ್ವನಿ ಕೇಳಿಸಿತು.

ನಿನ್ನೆ ಸಂಜೆಯೂ ಹೀಗೆ ಆಗಿತ್ತು.

ಅವರ ಪಕ್ಕ ಹೋಗಿ ಕೂತಿದ್ದೆ. ವೃದ್ಧಾಪ್ಯ ಒಂದು ಶಾಪ ಕಣೋ ಅಂದಿದ್ದರು.

ಅಮ್ಮನ ಫೋಟೋದ ಪಕ್ಕದಲ್ಲಿದ್ದ ಹಣತೆಗೆ ಎಣ್ಣೆ ಹಾಕಿದೆ.

ಬಾಲ್ಕನಿಗೆ ಹೋಗಿ ನಿಂತೆ. ಸಣ್ಣಗೆ ಮಳೆ ಶುರುವಾಗಿತ್ತು. 

ಮುಖದ ಮೇಲೆ ನೀರಿನ ಹನಿಗಳು ಬಿದ್ದವು. 

ಇಪ್ಪತ್ನಾಕು ವರ್ಷಗಳ ಹಿಂದೆ ಹೀಗೇ ಮಳೆ ಬಂದಿತ್ತು.

ಮರದ ಬುಡದಲ್ಲಿ ಯಾರೋ ಮಗುವೊಂದನ್ನು ಮಲಗಿಸಿ ಹೋಗಿದ್ದರು.

ಆ ದಿನ ಆ ಮಗು ಅಮ್ಮನ ಕಣ್ಣಿಗೆ ಬೀಳದೆ ಇದ್ದಿದ್ದರೆ ಇವತ್ತು ನಾನಿಲ್ಲಿ ಇರುತ್ತಿದ್ದೆನೇ?

{ }

‍ಲೇಖಕರು avadhi

September 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: