ಮಹೇಶ ಬಳ್ಳಾರಿ
**
(ಸೋಮವಾರ ಮಧ್ಯರಾತ್ರಿ ನನ್ನ ಹೊಸಮನೆ ಕಳ್ಳತನವಾಯಿತು. ಅವಿತ ನೋವುಗಳು ಕವಿತೆ ರೂಪದಲ್ಲಿ ಹೊರಬಂದಿದೆ.)
ಮಧ್ಯರಾತ್ರಿ ರಾಜಾರೋಷವಾಗಿ
ಆಗಂತುಕರು
ಕರೆಯದೇ ಇದ್ದರೂ
ಕೀಲಿ ಮುರಿದು ಒಳಗೆ ಬಂದರು
ತಿಜೋರಿ ಒಡೆದು
ಹೆಂಡತಿ-ಮಗನ ಒಂದಿಷ್ಟು ತುಂಡು ಬಂಗಾರ
ಕದ್ದು ಹೋದರಲ್ಲ ಎಂಬ ದುಃಖವಿಲ್ಲ
ಪಕ್ಕದಲ್ಲೇ ರಾಶಿ ರಾಶಿ ಪುಸ್ತಕಗಳಿದ್ದರೂ
ಕನಿಷ್ಟ ಒಂದಾದರೂ
ಒಯ್ಯಲಿಲ್ಲವಲ್ಲ ಎಂಬ ಬೇಸರವಷ್ಟೇ
‘ಕತ್ತಲರಾತ್ರಿ’ಯ ರಾತ್ರಿಯ ಕತ್ತಲು
ಹೊರಗೆ ಅಲಾಯಿ ಕಳ್ಳಳ್ಳಿಗಳ ಕುಣಿತ
ಮನೆಯೊಳಗೆ ಅಲಮಾರಿನಲ್ಲಿ ಕಳ್ಳರ
ತಕಧಿಮಿತ
ಹೊಸಮನೆಗೆ ಈಗತಾನೇ ನಾಲ್ಕು ತಿಂಗಳ
ಅಂಬೆಗಾಲು
ಅಸಲು, ಬಡ್ಡಿ ಹೊಂದಿಸಿ ಕಂತು
ಕಟ್ಟುವುದರೊಳಗೆ
ಮತ್ತೆ ಪ್ರತ್ಯಕ್ಷವಾಗುವ ಒಂದನೇ ತಾರೀಖು
ಗಾಯಕ್ಕೆ ಅಲ್ಲಲ್ಲ ಗಾಯಗಳಿಗೆ
ಮತ್ತೆ ಮತ್ತೆ ಬರೆ ಎಳೆಯುವುದೆಂದರೆ
ಕವಿಯ ಮನೆಗೆ ಕಳ್ಳನೂ ಬಂದ ಖುಷಿ ಇದೆ
ಒಂದಾದರೂ ಕವಿತೆ ಓದಲಿಲ್ಲವೆಂಬ
ಖೇದವೂ ಇದೆ
0 ಪ್ರತಿಕ್ರಿಯೆಗಳು