ಯಶಸ್ವಿಗೊಂಡ ಚಂದ್ರಯಾನದ ಖುಷಿಯಲ್ಲಿ ನನ್ನ
“ಸೂರ್ಯ ಜೀತಕಿದ್ದಾನೆಯೇ…? ” ಎಂಬ ಕವನ ಸಂಕಲನದ ಒಂದು ಕವಿತೆ
ಸಂಧ್ಯಾ ಹೊನಗುಂಟಿಕರ್
ಗಾಜಿನ ಬೆರಣಿಯ ತೋರಿಸಿ
ಅಮ್ಮನಿತ್ತ ತುತ್ತು ನಾಲಿಗೆಯಲ್ಲಿ
ಇನ್ನೂ ಹೊರಳಾಡುತ್ತಿದೆ.
ಛದ್ಮ ವೇಷದ ಈತನ
ನೆನಪು ಕಾಲಕಾಲಕ್ಕೆ
ಕಾಡುತ್ತಲೇ ಇದೆ
ಕಾಲೇಜಿನ ಕಿವಿಯಲ್ಲಿ
ರಿಂಗಣಿಸಿದ ಕಾವ್ಯ
ತುಂಡು ರೊಟ್ಟಿ, ಬೆಳ್ಳಿ ತಟ್ಟೆ
ತೇಲುವ ಬೆಣ್ಣೆ, ಆಗಸದ ಕಣ್ಣು
ರಮ್ಯ, ರಸಿಕ, ರೋಮಾಂಚನಕ್ಕೆ
ಉಪಮಾನವಷ್ಟೇ..
ಚಂದ್ರಮತಿ, ಚಂದ್ರಮುಖಿ
ಗುರುಪತ್ನಿಯ ಭೋಗಿಸಿದ ಜಾರ
ತುಡುಗ, ತುಂಟ
ಮೋಡದೊಡನೆ ಚೆಲ್ಲಾಟ
ಮೋಹಕ ಮನಸ್ಸು, ಭಾವದೊಡನೆ ಲೀನ
ಲಗ್ನ ಕುಂಡಲಿಯಲ್ಲಿ
ಮಂಗಳನವಾಸ
ಗಂಡನಿಗೆ ದೋಷ
ಅಮ್ಮನಿಗೆ ಹೊಳೆದುದುಪಾಯ
ವರ್ಷಕ್ಕೆರಡು ಚಂದ್ರನು ಉಪವಾಸ
ಬೆಳ್ಳಿ ಹಬ್ಬದವರೆಗೂ
ಗಂಡನಾಯಸ್ಸು ಗಟ್ಟಿ
ಪಡೆದ ದೇವರ ಪಟ್ಟ
ನೆಲದ ಎದೆಯಿಂದ
ತಿದಿಯೊತ್ತಿ ಪುಟಿದು
ಹಂಡೆ ಶಕ್ತಿಯನ್ನುಂಡು
ಕೋಟಿ ಮೈಲಾಚೆ
ಒಡೆದು ಬೆರಗಿನ ಗೋಡೆ
ಹೆಮ್ಮೆ ಹೊತ್ತು ಚಿಮ್ಮಿದ
ಚಂದ್ರಯಾನ
ಆಗಸಕ್ಕೆ ಏಣಿ
ಪಾತಾಳಕ್ಕೆ ಕನ್ನ
ದೂರದೂರಿನ ಠಾವಿಗೆ
ಹಾವು ಏಣಿ ಆಟ
ಕಂಡ ಕನಸು ಬಿತ್ತಿ
ಮುತ್ತಿನ ತೆನೆಗೆ
ಕಾಯ್ವ ಚಿತ್ತ
ದೇಶದ ಎದೆಯತ್ತ
ಜಗದ ಕಣ್ಣು ಸುತ್ತ
ಮಥಿಸಿದ ಉತ್ತರಕೆ
ಕಾತರದ ಪುಳಕ
ಚಂದ್ರನೂ ಬೇರಲ್ಲ
ಅದೇ ಕಲ್ಲು ಅದೇ ಮಣ್ಣು
ಕಟ್ಟಬಹುದೇ ಅಲ್ಲೂ
ಮನೆ ಮಠ ಮಸಣ ?
ಠಾವು ಸಿಕ್ಕಿತು
ಉಳದಿತೇ ಭಾವ?
0 ಪ್ರತಿಕ್ರಿಯೆಗಳು