ಗಾಂಧೀಜಿ ಖಳನಾಯಕರಾಗಿಬಿಟ್ಟರೆ?

ಜಾಣಗೆರೆ ವೆಂಕಟರಾಮಯ್ಯ

ಇತ್ತೀಚೆಗೆ ಮಹಾಶಯರೊಬ್ಬರು ವಾಟ್ಸಾಪ್‌ವೊಂದನ್ನು ಫಾರ್ವರ್ಡ್ ಮಾಡಿದ್ದರು. ಅದರಲ್ಲಿ ಗಾಂಧೀಜಿ ಕುರಿತಂತೆ ಡಾ. ಬಿ.ಆರ್. ಅಂಬೇಡ್ಕರ್ ವ್ಯಕ್ತಪಡಿಸಿದ್ದ ತೀರಾ ಕೀಳು ಮಟ್ಟದ ಅಭಿಪ್ರಾಯವಿತ್ತು. ಅದನ್ನು ಇನ್ನೊಬ್ಬರು ಸಮರ್ಥಿಸುತ್ತಾ ’೧೦೦೦ ಪರ್ಸೆಂಟ್ ನಿಜ’ ಎಂದು ಅನುಮೋದಿಸಿದ್ದರು. 

ಅದನ್ನು ಓದಿ ದಿಗ್ಭ್ರಮೆಗೊಂಡೆ. ದಿನವೆಲ್ಲಾ ಮನಸ್ಸು ವಿಷಾದದಿಂದ ನರಳಿತು. ಆ ಅಭಿಪ್ರಾಯದ ಸಾಚಾತನದ ಬಗ್ಗೆ ಯೋಚಿಸತೊಡಗಿದೆ. ಯಾರದೇ ಅಭಿಪ್ರಾಯಗಳನ್ನು ಅವರ ಕೃತಿಗಳಿಂದ ಅಧಿಕೃತವಾಗಿ ಹೆಕ್ಕಿ ಹೀಗೆ ದಾಖಲಿಸುವ ಪ್ರವೃತ್ತಿ ಇತ್ತಿತ್ತ ಕ್ಷೀಣಿಸಿದೆ. ತಮಗಾಗದ ವ್ಯಕ್ತಿಯನ್ನು ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತಾವೇ ಸೃಷ್ಟಿಸಿಬಿಡುವ ’ಅಭಿಪ್ರಾಯ’ವನ್ನು ಹರಿಯಬಿಡುವುದು ಚಾಳಿಯಾಗಿಬಿಟ್ಟಿದೆ. ಒಂದು ವೇಳೆ ಅಂಬೇಡ್ಕರರು ಇಂತಹ ಅಭಿಪ್ರಾಯವನ್ನು ದಾಖಲಿಸಿದ್ದರೆ, ಅದೆಂದೋ ಹೊರ ಬಂದಿರುತ್ತಿತ್ತು. ಅಂಬೇಡ್ಕರ್ ಮತ್ತು ಗಾಂಧೀಜಿಯವರ ನಡುವೆ ಅದೆಷ್ಟೇ ವಿಚಾರಗಳ ಬಗೆಗೆ ಭಿನ್ನಾಭಿಪ್ರಾಯಗಳಿದ್ದರೂ, ಪರಸ್ಪರರ ನಡುವೆ ಪ್ರೀತಿ-ಗೌರವಗಳು ಹೆಚ್ಚಾಗಿದ್ದವು. ಅವರ ನಡುವೆ ಕೀಳು ಭಾವನೆಗಳೆಂದೂ ಇಣುಕಿರಲಿಲ್ಲ. ಗಾಂಧೀಜಿ ಕೂಡಾ ಅಂಬೇಡ್ಕರರ ಮೇಧಾವಿ ಶಕ್ತಿ, ಪಾಂಡಿತ್ಯ ಮತ್ತು ಅಸ್ಪೃಶ್ಯರ ಪರವಾದ ಹೋರಾಟಗಳ ಕುರಿತಂತೆ ಗೌರವಾದರವನ್ನು ಹೊಂದಿದ್ದರು. ಸ್ವಾತಂತ್ರ್ಯ ಚಳವಳಿಯ ಬಗ್ಗೆ ಪರಸ್ಪರರಲ್ಲಿ ಭಿನ್ನ ದೃಷ್ಟಿಕೋನವಿದ್ದರೂ ಒಬ್ಬರನ್ನೊಬ್ಬರು ದ್ವೇಷಾಸೂಯೆಗಳನ್ನು ಹೊಂದಿರದೆ ಬ್ರಿಟಿಷರೊಡನೆ ತಮ್ಮದೇ ದಾರಿಯಲ್ಲಿ ಹೋರಾಟ ನಡೆಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ಶೋಷಿತ-ಅಸ್ಪೃಶ್ಯ ಸಮುದಾಯಕ್ಕೆ ಬದುಕಿನ ಸ್ವಾತಂತ್ರ್ಯ ಲಭಿಸಬೇಕೆಂಬುದು ಅಂಬೇಡ್ಕರರ ಆಗ್ರಹವಾಗಿದ್ದರೆ, ಮೊದಲು ದೇಶ ಸ್ವತಂತ್ರಗೊಳ್ಳಲಿ. ಆಮೇಲೆ ನಾವುಗಳೇ ಜಾತಿ-ಮತಗಳ ನಡುವಿರುವ ಭಿನ್ನ-ಭೇದಗಳನ್ನು ಪರಿಹರಿಸಿಕೊಳ್ಳಬಹುದೆಂಬುದು ಗಾಂಧೀಜಿಯವರ ಆಲೋಚನೆಯಾಗಿತ್ತು. 

ವಾಸ್ತವ ಸಂಗತಿ ಹೀಗಿರುವಾಗ ’ಗಾಂಧೀಜಿ ಅಂಬೇಡ್ಕರರ ಮಹಾನ್ ಶತ್ರುವಾಗಿದ್ದರು’ ಎಂಬಂತೆ ಬಿಂಬಿಸಲು ಹೊರಡುವುದು ಪೂರ್ವಾಲೋಚನೆಯಿಲ್ಲದ ವಿತಂಡತನವಾದೀತು. ಅದರಲ್ಲೂ ಈ ಹೊತ್ತಿನ ಆಡಳಿತಗಾರರಿಗೆ ಮತ್ತು ಅವರ ಬೆನ್ನಿಗೆ ನಿಂತಿರುವ ಸಂಘ ಪರಿವಾರದವರಿಗೆ ಗಾಂಧೀಜಿ ಅಪಥ್ಯವಾಗಿ ಪರಿಣಮಿಸಿದ್ದು, ಪ್ರತೀ ಹಂತದಲ್ಲಿ ಗಾಂಧೀಜಿಯನ್ನು ವಿವಿಧ ರೀತಿಯಲ್ಲಿ ಹಣಿಯುತ್ತಿರುವ ಷಡ್ಯಂತ್ರಗಳು ರಾಜಾರೋಷವಾಗಿ ಬಿಂಬಿಸುವ ಹುನ್ನಾರ ನಿರಂತರವಾಗಿ ನಡೆದಿವೆ. ದೇಶ ವಿಭಜನೆಗೂ, ಮುಸ್ಲಿಮರ ಅಟ್ಟಹಾಸಕ್ಕೂ ಗಾಂಧೀಜಿಯೇ ಕಾರಣವೆಂದು ಮುಲಾಜಿಲ್ಲದೆ ಆರೋಪಿಸುವ ದುರುಳ ಮನಸ್ಸುಗಳಿಗೆ ನೀರೆರೆಯುವಂತೆ ದಲಿತ ಸಮೂಹದ ಕೆಲವು ಸ್ವಹಿತಾಸಕ್ತಿಗಳು ಹೀಗೆ ಅವಹೇಳನ ಮಾಡುವುದನ್ನು ಕಂಡಾಗ ವ್ಯಥೆಯಾಗುತ್ತದೆ. ಹಾಗೇ ಗಾಂಧೀಜಿ ಮುಂದಿನ ದಿನಗಳಲ್ಲಿ ಈ ದೇಶದ ಪಾಲಿಗೆ ಖಳ ನಾಯಕನಾಗಿಬಿಡುವರೆ ಎಂಬ ಆತಂಕ ಕಾಡುತ್ತದೆ. 

’ಸೂರ್ಯ ಮುಳುಗದ ದೇಶದವರು’ ಎಂಬ ಅಹಂನಿಂದ ಬ್ರಿಟಿಷರು ಭಾರತವನ್ನು ಹಲವು ದಶಕಗಳು ನಿರ್ಭಿಡೆಯಿಂದ ಆಳಿದ ಕಾಲಘಟ್ಟ ಎಷ್ಟೊಂದು ಘೋರವಾಗಿತ್ತೆಂಬುದನ್ನು ಇವೊತ್ತಿನ ಯಾರೊಬ್ಬರೂ ಯೋಚಿಸುವ ಸ್ಥಿತಿಯಲ್ಲಿಲ್ಲ. ಅವರ ಆಡಳಿತಕ್ಕೆ ಯಾವುದೇ ಉಗ್ರವಾದ, ಹಿಂಸಾಕಾಂಡ ಸರಿಸಾಟಿಯಾಗಿ ನಿಲ್ಲಲಾರದೆ ಹೋಗಿದ್ದವು. ಉಗ್ರವಾಗಿ ಪ್ರತಿಭಟಿಸಿದವರನ್ನು ಕ್ರೂರವಾಗಿ ಹಿಮ್ಮೆಟ್ಟಿದರು. ಹಿಂಸಾಚಾರ ನಡೆಸಿದವರನ್ನು ನಿರ್ದಯವಾಗಿ ನೇಣಿಗೇರಿಸಿದರು. ಮುಂಚೂಣಿ ನಾಯಕರನ್ನು ಜೈಲಿಗಟ್ಟಿದರು. ಅಂತಹ ಕೆಟ್ಟ ಸ್ಥಿತಿಯಲ್ಲಿ ದೇಶವನ್ನು ಗುಲಾಮ ಮುಕ್ತಗೊಳಿಸಬೇಕೆಂಬ ಹಟ ತೊಟ್ಟಿದ್ದ ಗಾಂಧೀಜಿ ಮುಂದೆ ಕಂಡಿದ್ದು ಅಹಿಂಸಾತ್ಮಕ ಹೋರಾಟ ಮಾತ್ರವೇ. ಅದರಲ್ಲಿ ಸಹಸ್ರಾರು ಹೋರಾಟಗಾರ ಮುಖಂಡರ, ಲಕ್ಷಾಂತರ ಕಾರ್ಯಕರ್ತರ ಅಳಿವುಳಿವಿನ ಪ್ರಶ್ನೆ ಅಡಗಿತ್ತು. ಕಣ್ಣ ಮುಂದೆಯೇ ಜಲಿಯನ್ ವಾಲಾಬಾಗ್, ವಿಧುರಾಶ್ವತ್ಥ ಮುಂತಾದ ಭೀಕರ ಹತ್ಯಾಕಾಂಡಗಳನ್ನು ಬ್ರಿಟಿಷರು ನಡೆಸಿ ಅಟ್ಟಹಾಸ ಮೆರೆದಿದ್ದರು. ಗಾಂಧೀಜಿ, ನೆಹರೂ, ಪಟೇಲ್ ಮುಂತಾದ ಅನೇಕ ಮುಂಚೂಣಿ ನಾಯಕರು ವರ್ಷಗಟ್ಟಳೆ ಜೈಲುಗಳಲ್ಲಿ ಕೊಳೆಯುವಂತಾಯಿತು. ಅಷ್ಟರ ನಡುವೆಯೂ ಸ್ವಾತಂತ್ರ್ಯ ಚಳವಳಿ ನಡೆಯಲೇಬೇಕಿತ್ತು. 

ವಿಚಿತ್ರವೆಂದರೆ, ದೇಶದ ಕೆಲವಾರು ಜಾತಿವಾದಿ, ಮತೀಯವಾದಿ ಸಂಘ-ಸಂಸ್ಥೆಗಳು ಬ್ರಿಟಿಷರ ಆಪ್ತ ವಲಯದಲ್ಲಿ ತೂರಿಕೊಂಡಿದ್ದವು. ಬ್ರಿಟಿಷರು ನೀಡಿದ ಅಧಿಕಾರ ಮತ್ತಿತರ ಸೌಲಭ್ಯಗಳನ್ನು ನಾಚಿಕೆ ಬಿಟ್ಟು ಅನುಭವಿಸುತ್ತಾ ಹೋರಾಟಗಾರರ ವಿರುದ್ಧ ಬ್ರಿಟಿಷರಲ್ಲಿ ಪಿತೂರಿ ನಡೆಸುತ್ತಿದ್ದರು. ’ನಮಗೆ ಸ್ವಾತಂತ್ರ್ಯ ಬೇಡ’ ಎಂದು ಹೇಳಿಕೊಳ್ಳುತ್ತಾ, ಇನ್ನೊಂದು ಕಡೆ ’ಅಸ್ಪೃಶ್ಯರಿಗೆ, ಗುಲಾಮರಿಗೆ, ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯ ಸಿಗುವುದಾದರೆ, ನಮಗೆ ಅಂತಹ ಸ್ವಾತಂತ್ರ್ಯವೇ ಬೇಡ’ ಎಂದು ಬ್ರಿಟಿಷರ ಕಿವಿ ಊದುತ್ತಿದ್ದ ನೀಚತನವನ್ನು ಕಂಡು ಬ್ರಿಟಿಷರೇ ಬೆಚ್ಚಿಹೋಗಿದ್ದರು. ಆಗಲೇ ’ಈ ದೇಶದ ಜನರನ್ನು ನಾವು ಒಡೆದಾಳಬಹುದು’ ಎಂಬ ಲೆಕ್ಕಾಚಾರ ಬ್ರಿಟಿಷರಲ್ಲಿ ಮೊಳಕೆಯೊಡೆದಿತ್ತು. 

ಅಂತಹ ಸಂದಿಗ್ಧ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಶತ್ರುಗಳಾದ ಬ್ರಿಟಿಷರೊಡನಲ್ಲದೆ ಸ್ವಾರ್ಥಸಾಧಕ ತಮ್ಮವರನ್ನೂ ಎದುರಿಸುವ ಸಂಕಷ್ಟ ಎದುರಾಗಿತ್ತು. ಇನ್ನೊಂದು ಕಡೆ ’ನನ್ನ ಜನರಿಗೆ ಮೊದಲು ಬದುಕುವ ಹಕ್ಕಿನ ಸ್ವಾತಂತ್ರ್ಯ ಬೇಕಿದೆ’ ಎಂದು ಪಟ್ಟು ಹಾಕಿ ಹೋರಾಡುತ್ತಿದ್ದ ಅಂಬೇಡ್ಕರ್‌ರನ್ನು ಸಮಾಧಾನಪಡಿಸುವ ಹೊಣೆಗಾರಿಕೆಯೂ ಹೆಗಲ ಮೇಲಿತ್ತು. ಆಗ ಗಾಂಧೀಜಿ ಆರಿಸಿಕೊಂಡಿದ್ದೇ ಅಹಿಂಸಾತ್ಮಕ ಜನಾಂದೋಲನ. ಅದರಲ್ಲಿ ಯಶಸ್ವಿಯಾಗುವ ಹಂತ ತಲುಪುತ್ತಿದ್ದಾಗಲೇ ದೇಶದ ಮುಸ್ಲಿಮರ ಒಂದು ವರ್ಗದಿಂದ ಪ್ರತ್ಯೇಕತಾ ಧ್ವನಿ ಮೊಳಗಿತ್ತು. ಮುಸ್ಲಿಂ ಲೀಗ್ ಮತ್ತಿತರ ಸಂಘಟನೆಗಳು ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗಿಯಾಗುತ್ತಲೇ ಪ್ರತ್ಯೇಕ ರಾಷ್ಟ್ರದ ಆಸೆ ತುಂಬಿಕೊಂಡು ಕನವರಿಸತೊಡಗಿದ್ದವು. 

ಇಂತಹದೆಲ್ಲಾ ಗೊಂದಲಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ತುಂಬಿಕೊಂಡು ಮುಂಚೂಣಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಒಂದೆಡೆ ದಿಟ್ಟತನದಿಂದ ಹೋರಾಟವನ್ನು ಮುನ್ನಡೆಸಬೇಕಾಗಿತ್ತು. ಬ್ರಿಟಿಷರೊಡನೆ ಎಚ್ಚರದಿಂದ ನಡೆದುಕೊಳ್ಳಬೇಕಾಗಿತ್ತು. ಸ್ವಲ್ಪ ಎಡವಿದರೂ ಇಡೀ ಆಂದೋಲನ ದಿಕ್ಕಾಪಾಲಾಗಿ ಹೋಗಿಬಿಡುವ ಅಪಾಯವಿತ್ತು. ಆಗಲೇ ಗಾಂಧೀಜಿಯೊಡನೆ ವಲ್ಲಭಬಾಯ್ ಪಟೇಲ್, ಜವಾಹರಲಾಲ್ ನೆಹರೂ, ಮಹ್ಮದಾಲಿ ಜಿನ್ನಾ, ರಾಜಗೋಪಾಲಾಚಾರಿ, ಮೌಲಾನಾ ಆಜಾದ್ ಮೊದಲಾದ ಮುತ್ಸದ್ಧಿ ನಾಯಕರು ಹೆಗಲೆಣೆಯಾಗಿ ನಿಂತರು. ಆದರೆ, ಆಂದೋಲನ ನಿರ್ಣಾಯಕ ಹಂತ ತಲುಪಿದಾಗ ದೇಶ ವಿಭಜನೆಯ ಭೂತವು ಎದುರು ನಿಂತಿದ್ದನ್ನ ಕಂಡು ನಾಯಕರು ತತ್ತರಗುಟ್ಟಿದ್ದರು. ವಿಭಜನೆಯನ್ನು ತಪ್ಪಿಸಲು ಮುಸ್ಲಿಂ ನಾಯಕರೊಡನೆ ಹಲವು ಸಂಧಾನ ನಡೆಸಿದ್ದರು. ಯಾವುದೂ ಉಪಯೋಗಕ್ಕೆ ಬರದಿದ್ದಾಗ ’ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಿ ಪಟ್ಟದ ಆಸೆ’ ತೋರಿಸಲಾಯಿತು. ಅದನ್ನು ಮುಸ್ಲಿಂ ನಾಯಕರಿಗೆ ಬಿಟ್ಟುಕೊಡಲು ಪಟೇಲ್, ನೆಹರೂ ಮುಂತಾದ ನಾಯಕರೂ ಗಾಂಧೀಜಿ ಬೆನ್ನಿಗೆ ನಿಂತರು. ಅಂತಹ ಒತ್ತಾಸೆಯನ್ನು ಕೂಡಾ ಜಿನ್ನಾರಂತಹ ಮುತ್ಸದ್ಧಿ ನಾಯಕರು ನಿರಾಕರಿಸಿದ್ದು ವಿಶೇಷ. ’ಗಾಂಧೀಜಿ, ಈಗಾಗಲೇ ಹಿಂದೂ-ಮುಸ್ಲಿಮರ ನಡುವೆ ಅಸಮಾಧಾನ, ಬೇಗುದಿಗಳು ಹುಟ್ಟಿಕೊಂಡು ದುರಸ್ತಿ ಹಂತವನ್ನು ಮೀರಿ ನಿಂತಿವೆ. ಹಾಗಾಗಿ ನಾವು ಪ್ರತ್ಯೇಕವಾಗುವುದೇ ಸೂಕ್ತ ಮಾರ್ಗ’ ಎಂದ ಜಿನ್ನಾ ಮಾತಿಗೆ ಮೂಕರಾಗಿದ್ದರು. ಅದಾದ ಮೇಲೂ ದೇಶ ವಿಭಜನೆಯನ್ನು ತಪ್ಪಿಸಲು ಹಲವು ತೆರನ ಪ್ರಯತ್ನ ನಡೆಸಿ ವಿಫಲರಾಗಿದ್ದುಂಟು. 

ಇಂತಹ ಬೆಳವಣಿಗೆಗಳನ್ನು ಬ್ರಿಟಿಷರೊಡನೆ ಚಕ್ಕಂದವಾಡುತ್ತಿದ್ದ ಸ್ವಾತಂತ್ರ್ಯ ವಿರೋಧಿ ಶಕ್ತಿಗಳು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿದ್ದವು. ವಿಭಜನೆಯನ್ನು ತಪ್ಪಿಸಲು ಯಾವುದೇ ರೀತಿಯ ಸಲಹೆ-ಸೂಚನೆ ಕೊಡದೆ ತಟಸ್ಥವಾಗುಳಿದಿದ್ದೇ ಅಲ್ಲದೆ, ಮುಂದೆ ಇದೇ ಸಂಗತಿಯನ್ನು ಅಸ್ತ್ರವಾಗಿಟ್ಟುಕೊಂಡು ಈ ಮುಂಚೂಣಿ ನಾಯಕರನ್ನು ಹಣಿಯಬಹುದು, ಅವಮಾನಿಸಬಹುದು ಎಂಬ ದುರಾಲೋಚನೆ ಮಾಡುವುದೇ ಅವರ ಪರಮ ಕರ್ತವ್ಯವಾಗಿತ್ತು. 

ಅಂತಹ ಸ್ವಾತಂತ್ರ್ಯ ವಿರೋಧಿ ಶಕ್ತಿಗಳ ಮುಂದೆಯೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಹಾಗೇ ದೇಶವು ಭಾರತ ಮತ್ತು ಪಾಕಿಸ್ತಾನಗಳಾಗಿ ಹೋಳಾಯಿತು. ಮುಸ್ಲಿಮರು ಪಾಕ್‌ಗೆ, ಹಿಂದೂಗಳು ಭಾರತಕ್ಕೆ ತೆರಳುವ ಹಂತದಲ್ಲಿ ವ್ಯಾಪಕ ಹಿಂಸಾಚಾರ ನಡೆದು ಅಸಂಖ್ಯ ಸಾವು ನೋವುಗಳಾದವು. ಅದನ್ನು ಕಣ್ಣಾರೆ ಕಂಡ ಗಾಂಧೀಜಿ ಮತ್ತು ಇತರೆ ನಾಯಕರು ಕಣ್ಣೀರುಗರೆದರು. ಅದರಿಂದಾಗಿ ಎರಡೂ ದೇಶಗಳಲ್ಲಿ ಸ್ವಾತಂತ್ರ್ಯ ಸಂಭ್ರಮವೇ ಉಳಿಯಲಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಅಹರ್ನಿಶಿ ದುಡಿದು ಶ್ರಮಿಸಿದ್ದ ನಾಯಕರು ಮುಮ್ಮಲ ಮರುಗುತ್ತಿದ್ದರೆ, ಸ್ವಾತಂತ್ರ್ಯ ವಿರೋಧಿ ಶಕ್ತಿಗಳು ಮುಂದಿನ ದಿನಗಳಲ್ಲಿ ತಮ್ಮ ಪಾತ್ರ ಹೇಗಿರಬೇಕೆಂಬ ಹವಣಿಕೆಯಲ್ಲಿ ತೊಡಗಿದ್ದು ದುರಂತ. ಅವರ ಹವಣಿಕೆಯಂತೆ ಕೆಲವೇ ದಿನಗಳಲ್ಲಿ ಗಾಂಧೀಜಿ ಹತ್ಯೆಯೂ ನಡೆದುಬಿಟ್ಟಿತು. ಅವರನ್ನು ದೇಶವು ಹುತಾತ್ಮ ಪಟ್ಟಕ್ಕೇರಿಸುತ್ತಿದ್ದರೆ, ದುಷ್ಟ ಶಕ್ತಿಗಳು ಗಾಂಧೀಜಿಯನ್ನು ’ದೇಶ ವಿಭಜಕ ಖಳ’ನೆಂದು ಹಣೆಪಟ್ಟಿ ಕಟ್ಟಲು ಮುಂದಾದವು. 

ಅದನ್ನು ಈ ಹೊತ್ತಿನವರೆಗೂ ಹೇಳಿಕೊಂಡು ಬಂದು ಈಗ ಅಧಿಕಾರದ ಅಮಲಿನ ಶಕ್ತಿಯೊಡನೆ ’ಐತಿಹಾಸಿಕ ಸತ್ಯ’ವಾಗಿ ದಾಖಲಿಸಲು ಸಜ್ಜಾಗಿರುವುದನ್ನು ಕಾಣುವ ದುರಂತ ಭಾರತೀಯರದ್ದಾಗಿದೆ. ಗಾಂಧೀಜಿಯನ್ನು ಹತ್ಯೆಗೈದವನನ್ನು ದೈವತ್ವಕ್ಕೇರಿಸುವ, ಬ್ರಿಟಿಷರೊಡನೆ ಸಂಧಿ ಸಾಧಿಸಿ ಸುಖಲೋಲುಪ್ತರಾಗಿದ್ದವರನ್ನು ’ಸ್ವಾತಂತ್ರ್ಯ ವೀರ’ರೆಂದು ಹೊಸ ಇತಿಹಾಸ ರಚಿಸುವ ಹವಣಿಕೆಯನ್ನಿಟ್ಟುಕೊಂಡು ಹೊರಟಿರುವುದಲ್ಲದೆ, ಗಾಂಧೀಜಿಯನ್ನು ’ಖಳನಾಯಕ’ನಾಗಿ ಬಿಂಬಿಸುವ ದುರುಳ ಆಲೋಚನೆಯನ್ನೂ ಹೊಂದಿರುವುದು ಢಾಳಾಗಿ ಕಾಣಿಸುತ್ತಿದೆ.

ಗಾಂಧೀಜಿಯನ್ನು ಕಣ್ಮರೆಯಾಗಿಸುವ ಹುನ್ನಾರದೊಡನೆ ಅಧಿಕಾರಸ್ಥರು ಮತ್ತು ಸಂಘ ಶಕ್ತಿಗಳು ಒಟ್ಟಾಗಿದ್ದಾರೆ. ವಲ್ಲಭಬಾಯ್ ಪಟೇಲ್, ಸುಭಾಶ್‌ಚಂದ್ರ ಬೋಸ್ ಮುಂತಾದವರನ್ನು ಕತ್ತಲಿನಿಂದ ಬೆಳಕಿಗೆ ತರುತ್ತಿರುವ ನಾಟಕವಾಡುತ್ತಾ ಹೊರಟಿದ್ದಾರೆ. ದೇಶದ ಪ್ರಪ್ರಥಮ ಪ್ರಧಾನಿ ನೆಹರೂ ಮತ್ತು ದೇಶದ ಪಿತಾಮಹ ಗಾಂಧೀಜಿ ತಮ್ಮ ಆಜನ್ಮ ಶತ್ರುಗಳೆಂದು ಭಾವಿಸಿ ಇಬ್ಬರ ವ್ಯಕ್ತಿತ್ವ ಹರಣ ಮಾಡುತ್ತಾ ಸಾಗಿದ್ದಾರೆ. ಈಗಾಗಲೇ ನೆಹರೂ ಅವರ ತೇಜೋವಧೆಯನ್ನು ವ್ಯವಸ್ಥಿತವಾಗಿ ಮಾಡಿ ಮುಗಿಸಿದ್ದೇವೆಂದು ಭಾವಿಸಿ ಈಗ ಗಾಂಧೀಜಿ ವ್ಯಕ್ತಿತ್ವ ಹರಣಕ್ಕೆ ಕೈ ಹಾಕಿರುವುದು ನಿಚ್ಚಳವಾಗಿದೆ.

ವಿಶ್ವದ ಬಹುತೇಕ ದೇಶಗಳಲ್ಲಿ ಗಾಂಧೀಜಿ ಇಂದಿಗೂ ’ಶಾಂತಿದೂತ’ನಾಗಿ ಜೀವಂತವಾಗುಳಿದಿದ್ದಾರೆ. ಆದರೆ, ಭಾರತದ ಬಹುಪಾಲು ಜನತೆ ಗಾಂಧೀಜಿಯನ್ನು ಆರಾಧಿಸುವ ಕಾಲವನ್ನು ಇಲ್ಲವಾಗಿಸುವ ಪ್ರಯತ್ನ ನಡೆದಿದೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿದ್ದ ಗಾಂಧೀಜಿಯ ಜೀವಂತಿಕೆ ಇಂದಿಲ್ಲ. ಕ್ರಮೇಣ ಅವರ ವ್ಯಕ್ತಿತ್ವ ಹರಣದ ಕಾರ್ಯವನ್ನು ನಡೆಸುತ್ತಾ ಬಂದಿರುವ ದುರುಳ ಶಕ್ತಿಗಳು ಅವರ ಜಾಗಕ್ಕೆ ತಮ್ಮದೇ ’ಪಿಂಡ’ಗಳನ್ನು ಪ್ರತಿಷ್ಠಾಪಿಸುವ ಹವಣಿಕೆಯಲ್ಲಿವೆ. 

ಅಂದು ಸ್ವಾತಂತ್ರ್ಯ ವಿರೋಧಿಗಳಾಗಿದ್ದವರು ಇಂದು ’ದೇಶಭಕ್ತ’ರಾಗಿ ಮೆರೆಯುತ್ತಿದ್ದಾರೆ. ಎಂದೆಂದಿಗೂ ’ದೇಶಪ್ರೇಮಿ’ಗಳಾಗಿದ್ದವರನ್ನು ’ದೇಶದ್ರೋಹಿ’ ಪಟ್ಟ ಕಟ್ಟಿ ಮೂಲೆಗೆ ತಳ್ಳಲು ಕುತ್ಸಿತ ತಂತ್ರಗಳು ನಡೆಯುತ್ತಿವೆ. ದೇಶದ ಜನರನ್ನು ಹಿಂದೂ-ಮುಸ್ಲಿಂ ಎಂಬ ವಿಭಜನೆ ತಂತ್ರದೊಡನೆ ಪರಸ್ಪರ ಎತ್ತಿ ಕಟ್ಟುವ ಆಟೋಟಗಳು ಜರುಗುತ್ತಿವೆ. ’ಹಿಂದುಗಳೆಲ್ಲಾ ಒಂದು’ ಎಂದು ಘೋಷಣೆ ಮೊಳಗಿಸುತ್ತಾ ಅಲ್ಪಸಂಖ್ಯಾತರಲ್ಲಿ ಭಯಭೀತಿಯನ್ನು ಸೃಷ್ಟಿಸುವ ಕುತಂತ್ರಗಾರಿಕೆಯೂ ನಡೆದಿದೆ. ಭಾರತವನ್ನು ’ಹಿಂದೂ ರಾಷ್ಟ್ರ’ವಾಗಿ ಪರಿವರ್ತಿಸುವ ಭ್ರಮೆಯನ್ನು ಬಿತ್ತಿ, ರಾಜಕೀಯ-ಆರ್ಥಿಕ ಲಾಭವನ್ನು ತಮ್ಮದಾಗಿಸಿಕೊಳ್ಳುವವರ ಕೈ ಮೇಲಾಗಿರುವುದು ಸದ್ಯದ ದೊಡ್ಡ ಅಣಕದಂತಿದೆ. 

ಗಾಂಧೀಜಿ ಸ್ವಾತಂತ್ರ್ಯ ಆಂದೋಲನದ ಜೊತೆಜೊತೆಗೆ ದೇಶಕ್ಕೆ, ಜನತೆಗೆ ಹಲವಾರು ನೀತಿ-ತತ್ವ-ಸಿದ್ಧಾಂತಗಳನ್ನು ನೀಡಿದ್ದರು. ಅವೆಲ್ಲಾ ಅಂದಿಗೆ ಅಪ್ಯಾಯಮಾನವಾಗಿದ್ದವು. ’ಈಶ್ವರ ಅಲ್ಲಾ ತೇರೇ ನಾಮ್…ಸಬ್‌ಕೋ ಸನ್ಮತಿ ದೇ ಭಗವಾನ್’ ಎಂದಿದ್ದರು. ’ಅಸ್ಪೃಶ್ಯತೆ ಹಿಂದೂ ಧರ್ಮದ ಕಳಂಕ’ ಎಂದು ಜರೆದಿದ್ದರು. ’ಹಿಂದೂ-ಮುಸ್ಲಿಂ ಭಾಯಿ ಭಾಯಿ’ ಎಂದು ಘೋಷಿಸಿದ್ದರು. ’ಹಿಂದೂ-ಮುಸ್ಲಿಂ ಐಕ್ಯತೆ ಚಿರಾಯುವಾಗಲಿ’ ಎಂದು ಆಶಿಸಿದ್ದರು. ದೇಶದ ಅಸ್ಪೃಶ್ಯರನ್ನು ’ಹರಿಜನ’ರೆಂದು ಕರೆದು, ’ಅವರ ಕಲ್ಯಾಣವಾಗದ ಹೊರತು ರಾಮರಾಜ್ಯ ಸ್ಥಾಪನೆಯಾಗದು’ ಎಂದು ಎಚ್ಚರಿಸಿದ್ದರು. ಅಂಬೇಡ್ಕರ್‌ರ ಜ್ಞಾನವನ್ನು ಮೆಚ್ಚಿ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗುವಂತೆ ನೋಡಿಕೊಂಡಿದ್ದರು. ’ಹರಿಜನ’ ಎಂಬ ಪತ್ರಿಕೆಯನ್ನೇ ಪ್ರಕಟಿಸಿದ್ದರು. 

ಅಷ್ಟಾದರೂ ಗಾಂಧೀಜಿಯನ್ನು ’ಸವರ್ಣೀಯ ಹಿಂದೂ ಪಕ್ಷಪಾತಿ’ ಎಂದು ಜರೆಯಲಾಗುತ್ತಿದೆ. ಅತ್ತ ಕೆಲ ಹಿಂದೂಗಳು ಅವರನ್ನು ’ಮುಸ್ಲಿಂ ಪಕ್ಷಪಾತಿ’ ಎಂದು ಹಂಗಿಸುತ್ತಿದ್ದಾರೆ. ಗಾಂಧೀಜಿ ತಮ್ಮ ಸಹಸ್ರಾರು ಅನುಯಾಯಿಗಳಿಗೆ ’ಅಸ್ಪೃಶ್ಯರ ಏಳ್ಗೆಗಾಗಿ ದುಡಿಯಿರಿ’ ಎಂದು ಕರೆ ಕೊಟ್ಟ ದೆಸೆಯಿಂದ ನೂರಾರು ಮಂದಿ ಸವರ್ಣೀಯರು ತಮ್ಮ ಜೀವಮಾನವನ್ನೇ ಅದಕ್ಕಾಗಿ ಮುಡಿಪಾಗಿಟ್ಟು ಕೀರ್ತಿಶೇಷರಾಗಿರುವ ಉದಾಹರಣೆಗಳು ಸಾಕಷ್ಟಿವೆ. ಕರ್ನಾಟಕದಲ್ಲೇ ಮುದ್ಗಲ್ ರಂಗರಾವ್, ಆರ್.ಜಿ. ಅಯ್ಯರ್ ಮುಂತಾದವರನ್ನು ಕಾಣಬಹುದಾಗಿದೆ. 

ಹೀಗಿದ್ದೂ ಗಾಂಧೀಜಿ ಖಳನಾಯಕರಾಗಿಬಿಟ್ಟರೆ? ಸಂಘ ಪರಿವಾರಿಗಳಿಗೆ ಮತ್ತು ಅವರ ಹಂಗಿನಲ್ಲಿ ಅಧಿಕಾರದ ಮದವೇರಿಸಿಕೊಂಡಿರುವ ಬಿಜೆಪಿಗರಿಗೆ ಗಾಂಧೀಜಿ ಅಪಥ್ಯವಾಗುವುದರ ಹಿಂದಿನ ಗುಟ್ಟು ಈಗ ರಹಸ್ಯವಾಗುಳಿದಿಲ್ಲ. ’ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಗಾಂಧೀಜಿ ಅಲ್ಲ. ಸಹಸ್ರಾರು ಮಂದಿಯ ತ್ಯಾಗ-ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿತು. ಅದರಲ್ಲಿ ನಮ್ಮ ಪಾಲೂ ದೊಡ್ಡದಿದೆ’ ಎಂದು ಹೊಸ ಇತಿಹಾಸ ರಚಿಸಲು ಹೊರಟಿರುವ ಇವರು ’ಖೊಟ್ಟಿ ವೀರ’ರನ್ನು ಸೇರಿಸಲು ಮುಂದಾಗಿರುವುದು ವಿಷಾದದ ಸಂಗತಿ. 

ಗಾಂಧೀಜಿಯನ್ನು ಭಾರತ ಭೂಪಟದಿಂದ ಆಚೆಗೆ ಅಟ್ಟುವುದು ಸುಲಭ ಸಾಧ್ಯವಲ್ಲ. ಜನಮನದಲ್ಲಿ ಗಾಂಧೀಜಿ ಬೆರೆತು ಹೋಗಿದ್ದಾರೆ. ಅದಕ್ಕೂ ಮೇಲಾಗಿ ವಿಶ್ವದ ಬಹಳಷ್ಟು ದೇಶಗಳಲ್ಲಿ ಗಾಂಧೀಜಿ ಶಾಶ್ವತ ಸ್ಥಾನ ಪಡೆದಿರುವುದನ್ನು ಅಳಿಸುವುದು ಸಾಧ್ಯವೆ?

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: