ಗಾಂಧೀಜಿ ಕಲ್ಪನೆಯ ಸ್ವರಾಜ್ಯ ಹಾಗೂ ಸ್ವಾತಂತ್ರ್ಯ…

[ಸ್ವಾತಂತ್ರ್ಯ ಪೂರ್ವದಲ್ಲೆ ಅಂದರೆ, ಸುಮಾರು ೧೯೨೪ರ ಸಂದರ್ಭದಿಂದ ದೇಶಕ್ಕೆ ಸ್ವಾತಂತ್ರ್ಯ ಘೋಷಣೆ ಆಗುವವರೆಗೆ ಮಹಾತ್ಮ ಗಾಂಧೀಜಿಯವರು “ಸ್ವರಾಜ್ಯ” ಹಾಗೂ “ಸ್ವಾತಂತ್ರ್ಯ”ದ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಹೇಳುತ್ತಿದ್ದ ಹಾಗೂ ತಮ್ಮ “ಯಂಗ್ ಇಂಡಿಯಾ”, “ಹರಿಜನ” ಮೊದಲಾದ ಪತ್ರಿಕೆಯಲ್ಲಿ ಬರೆಯುತ್ತಿದ್ದ ಬರಹಗಳ ಸಂಗ್ರಹ ರೂಪ ಇಲ್ಲಿದೆ. ಈ ಚಿಂತನೆಗಳ ಮೂಲಕ ಗಾಂಧಿಯವರ ಮನಸ್ಸನ್ನು ಆವರಿಸಿದ್ದ ಕನಸುಗಳು ಜನಮನಕ್ಕೆ ತಲುಪಬೇಕೆಂಬ ಆಶಯ ಇತ್ತು. ಇಲ್ಲಿ ಅವರ ಮಾತುಗಳನ್ನು ಯಥಾವತ್ ಪ್ರಕಟಿಸಲಾಗಿದೆ. – ಅತಿಥಿ ಸಂಪಾದಕ.]

***

“ಸ್ವರಾಜ್ಯ”ವೆಂಬ ಶಬ್ದ ವೇದದಲ್ಲಿದೆ. 

ಪವಿತ್ರವಾಗಿದೆ, ‘ತನ್ನನ್ನು ತಾನೆ ಆಳುವದು’ ‘ಆತ್ಮನಿಗ್ರಹ’ ಎಂಬುದೆ ಈ ಶಬ್ದದ ಅರ್ಥ. ಸ್ವಾತಂತ್ರ್ಯವೆಂಬುದಕ್ಕೆ ಎಲ್ಲ ಬಂಧನಗಳನ್ನು ಬಿಸುಟುವದು ಎಂಬ ಅಪಾರ್ಥವನ್ನು ಹಲವರು ಭಾವಿಸಿದ್ದಾರೆ.

***

ಜನತೆಯ ಅನುಮತಿಯಿಂದ ಭಾರತದ ಆಡಳಿತವನ್ನು ಸಾಗಿಸುವುದಕ್ಕೆ ನಾನು ‘ಸ್ವರಾಜ್ಯ’ವೆಂದು ಹೇಳುವೆನು. ಈ ಅನುಮತಿಯನ್ನು ಪ್ರೌಢ ಮತದಾನದಿಂದ ನಿರ್ಧರಿಸಬೇಕು. ಪ್ರೌಢ ಮತದಾನದಲ್ಲಿ ಭಾಗವಹಿಸುವ ಸ್ತ್ರೀ-ಪುರುಷರು, ಇಲ್ಲಿಯೆ ಹುಟ್ಟಿ ಬೆಳೆದವರಿರಲಿ ಅಥವಾ ಈ ದೇಶದಲ್ಲಿ ನೆಲೆಸಿದವರಿರಲಿ, ಅವರು ರಾಷ್ಟ್ರದ ಸೇವೆಯಲ್ಲಿ ತಮ್ಮ ಶಾರೀರಿಕ ಶ್ರಮವನ್ನು ಅರ್ಪಿಸಿರಬೇಕು. ಹಾಗೂ ತಮ್ಮ ಮತದಾನದ ಹಕ್ಕನ್ನು ನೋಂದಾಯಿಸಿರಬೇಕು. ನಾಲ್ಕು ಜನರ ಕೈಯಲ್ಲಿ ಅಧಿಕಾರ ಬಂದರೆ ಅದು ಸ್ವರಾಜ್ಯವೆನಿಸದು. ಅಧಿಕಾರದ ದುರುಪಯೋಗವಾದಲ್ಲಿ, ಅದಕ್ಕೆ ಪ್ರತಿಕಾರ ಮಾಡುವ ಶಕ್ತಿಯು ಎಲ್ಲರಿಗೂ ಪ್ರಾಪ್ತವಾಗಬೇಕು. ಇದೇ ನಿಜವಾದ ಸ್ವರಾಜ್ಯದ ಆಗಮನವಾಗಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಅಧಿಕಾರವನ್ನು ನಿಯಂತ್ರಿಸಿ ಅದನ್ನು ತಮ್ಮ ಅಧೀನದಲ್ಲಿ ಹೇಗೆ ಇಟ್ಟುಕೊಳ್ಳಬೇಕೆಂಬ ಸಾಮರ್ಥ್ಯವನ್ನು ಸಾಮಾನ್ಯ ಜನತೆಗೆ ತಂದು ಕೊಡುವುದಕ್ಕೆ ಸ್ವರಾಜ್ಯ ಪ್ರಾಪ್ತಿಯೆನ್ನಬಹುದು.

***

ನಮ್ಮ ಆಂತರಿಕ ಬಲ ಹಾಗೂ ಅತಿ ವಿಷಮ ಪರಿಸ್ಥಿತಿಯನ್ನು ಎದುರಿಸುವ ನಮ್ಮ ಸಾಮರ್ಥ್ಯ ಇವುಗಳನ್ನೇ ಸ್ವರಾಜ್ಯವು ಪೂರ್ಣವಾಗಿ ಅವಲಂಬಿಸಿರುವದು. ಅದನ್ನು ಪಡೆಯಲು ಹಾಗೂ ಉಳಿಸಿಕೊಳ್ಳಲು ನಿರಂತರವಾದ ಪರಿಶ್ರಮವಿಲ್ಲದೆ ಹೋದರೆ, ಅಂಥ ಸ್ವರಾಜ್ಯವು ಮಾತಿಗೆ ಬಾರದ್ದಾಗುವದು. ಅಂತೆಯೆ ನನ್ನ ಮಾತು ಕೃತಿಗಳಿಂದ ಒಂದು ಸಂಗತಿಯನ್ನು ನಾನು ಯಾವಾಗಲೂ ಎತ್ತಿ ತೋರಿಸುತ್ತಿರುವೆ, ಅದೆಂದರೆ ರಾಜಕೀಯ ಸ್ವರಾಜ್ಯ ಬಹುಸಂಖ್ಯಾತ ಸ್ತ್ರೀಪುರುಷರಿಗಾಗಿ, ಸ್ವತಂತ್ರವಾದ ಆಡಳಿತವು ವ್ಯಕ್ತಿಯ ಆತ್ಮನಿಯಂತ್ರಣಕ್ಕಿಂತಲೂ ಬೇರೆಯಾಗಿರುವುದಿಲ್ಲ. ಆತ್ಮನಿಯಂತ್ರಣವನ್ನು ಪಡೆಯುವ ಸಾಧನಗಳಿಂದಲೆ, ನಾವು ಸ್ವರಾಜ್ಯವನ್ನೂ ಸಾಧಿಸಬೇಕಾಗುವದು.

***

ಸ್ವರಾಜ್ಯವೆಂದರೆ ಸರಕಾರದ ನಿಯಂತ್ರಣದಿಂದ ದೂರವಾಗಿರಲು ಸತತವಾದ ಪ್ರಯತ್ನವೆನ್ನಬಹುದು. ಈ ನಿಯಂತ್ರಣವು ದೇಶೀಯ ಇಲ್ಲವೆ ವಿದೇಶೀಯವಾಗಿರಬಹುದು. ಜೀವನದ ಪ್ರತಿಯೊಂದು ಸಣ್ಣ ಮಾತಿಗೆ ಜನತೆ ಸರಕಾರದ ಮುಖ ನೋಡುತ್ತ ಕುಳಿತರೆ ಅಂಥ ಸ್ವರಾಜ್ಯವು ನಗೆಗೀಡಾಗುವದು.

***

ನಮ್ಮ ನಾಗರಿಕತೆಯ ಅಂತಃಸತ್ವವನ್ನು ಯಥಾವತ್ತಾಗಿ ಕಾಯ್ದಕೊಳ್ಳುವದೆ ನನ್ನ ‘ಸ್ವರಾಜ್ಯವಾಗಿದೆ. ನಮ್ಮ ದೇಶದ ಭವಿಷ್ಯದಲ್ಲಿ ನನಗೆ ಅನೇಕ ಸಂಗತಿಗಳನ್ನು ರೂಪಿಸಬೇಕಾಗಿದೆ, ಆದರೆ ಅವುಗಳಿಗೆಲ್ಲ ಭಾರತೀಯ ಸಂಸ್ಕೃತಿಯೆ ತಳಹದಿಯಾಗಬೇಕು.

***

ಸ್ವಂತದ ಲಾಭವನ್ನು ಬದಿಗಿಟ್ಟು, ಎಲ್ಲ ಸಂಗತಿಗಳಿಗಿಂತಲೂ ರಾಷ್ಟ್ರ ಮುಖ್ಯವೆಂದು ತಿಳಿದುಕೊಳ್ಳುವ ನಿಷ್ಠಾವಂತ ಹಿತವೇ ಮಾತ್ರ ಸ್ವರಾಜ್ಯವನ್ನು ನಡೆಯುವ ಆಡಳಿತವೆ ದೇಶಾಭಿಮಾನದಿಂದ ಪ್ರೇರಿತರಾದ ಜನರು ಉಳಿಸಿಕೊಳ್ಳಬಲ್ಲರು. ಬಹುಸಂಖ್ಯಾತ ಜನರಿಂದ ಸ್ವರಾಜ್ಯವಲ್ಲವೇ? ಈ ಬಹುಸಂಖ್ಯಾತ ಜನರೆ ನೀತಿಬಾಹಿರ ಹಾಗೂ ಸ್ವಾರ್ಥಿಗಳಾಗಿದ್ದರೆ, ಇಂಥವರು ನಡೆಸುವ ಆಡಳಿತವು ಅನರ್ಥಕಾರಿ ಯಾಗುವದು.

***

ನನ್ನ ಕನಸಿನ ಸ್ವರಾಜ್ಯದಲ್ಲಿ ಜಾತಿ-ಮತಪಂಥಗಳ ಭೇದಭಾವ ವಿಲ್ಲ. ಅದು ವಿದ್ಯಾವಂತರ ಇಲ್ಲವೆ ಹಣವಂತರ ಕೈಸೊತ್ತೂ ಆಗದು. ಒಕ್ಕಲಿಗನನ್ನು ಒಳಗೊಂಡು ಸ್ವರಾಜ್ಯವು ಎಲ್ಲರ ಹಿತಸಾಧನೆಗಾಗಿ, ಅಂಗಹೀನರು, ಅಂಧರು, ಅನ್ನವಿಲ್ಲದೆ ಬಳಲುವ ಅಸಂಖ್ಯ ಜನತೆಯ ಕಲ್ಯಾಣಕ್ಕಾಗಿ ಅದು ಇರುವದು.

***

ಭಾರತೀಯ ಸ್ವರಾಜ್ಯವೆಂದರೆ ಬಹುಸಂಖ್ಯಾಕರಾದ ಹಿಂದುಗಳ ಆಳ್ವಿಕೆ ಎಂದು ಹೇಳುವುದುಂಟು. ಇದಕ್ಕಿಂತಲೂ ಹೆಚ್ಚಿನ ಪ್ರಮಾದವು ಯಾವುದೂ ಆಗದು. ಈ ಸಂಗತಿಯು ನಿಜವೆ ಆದರೆ, ನಾನು ಮಾತ್ರ ಅದನ್ನು ಎಂದಿಗೂ ಸ್ವರಾಜ್ಯವೆಂದು ಕರೆಯಲಾರೆನು. ಹಾಗೂ ನನ್ನ ಶಕ್ತಿ ಸರ್ವಸ್ವವನ್ನೆಲ್ಲ ಉಪಯೋಗಿಸಿ ಅದನ್ನು ವಿರೋಧಿಸುವೆನು.

***

ಸ್ವರಾಜ್ಯವು ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡಬೇಕು. ಜೀವನವನ್ನು ಶುದ್ಧಗೊಳಿಸಬೇಕು, ನಾಗರಿಕತೆಯನ್ನು ಸ್ಥಿರಗೊಳಿಸಬೇಕು. ಹೀಗಾಗದಿದ್ದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ಖಾಸಗಿ ಇಲ್ಲವೆ ಸಾರ್ವಜನಿಕವಾದ ಎಲ್ಲ ಕೃತಿಗಳಲ್ಲಿ ನೀತಿಮತ್ತೆಗೆ ನಾವು ಪ್ರಾಧಾನ್ಯವನ್ನು ಕೊಡುವದೆ ನಮ್ಮ ನಾಗರಿಕತೆಯ ಸಾರಸರ್ವಸ್ವವಾಗಿದೆ.

***

ಬಡವ ಬಲ್ಲಿದರಿಗೆ, ಸಿರಿವಂತ ಜಮೀನುದಾರನಿಗೆ, ಭೂಮಿಯಿಲ್ಲದ ಬೇಸಾಯಗಾರನಿಗೆ, ಸಮಾಜದ ಎಲ್ಲ ಅಂತಸ್ತಿನಲ್ಲಿರುವ ಜನರಿಗೆ ಜಾತಿ-ಮತ-ಪಂಥಗಳ ಭೇದವಿಲ್ಲದೆ ಹಿಂದೂ, ಮುಸ್ಲಿಮ್, ಫಾರ್ಸಿ, ಕ್ರಿಶ್ಚಿಯನ್, ಜೈನ, ಯಹುದಿ ಹಾಗೂ ಸಿಖ್ ಮೊದಲಾದ ಎಲ್ಲ ಜನರಿಗೂ ಸ್ವರಾಜ್ಯದ ಪ್ರಯೋಜನವು ಸಮಾನವಾಗಿ ದೊರೆಯುವಂತಾಗುವದೇ ಪೂರ್ಣ ಸ್ವರಾಜ್ಯ.

***

ನನ್ನ ಕನಸಿನ ಸ್ವರಾಜ್ಯವು ಬಡವರ ಸ್ವರಾಜ್ಯವಾಗಿದೆ. ಅರಸರಿಗೂ ಎಲ್ಲರಿಗೂ ಇರುವ ಜೀವನ ಸೌಕರ್ಯಗಳು ಹಣವಂತರಿಗೂ ಸಮಾನವಾಗಿ ದೊರೆಯುವಂತಾಗಬೇಕು. ಹೀಗೆಂದ ಮಾತ್ರಕ್ಕೆ, ಎಲ್ಲರಿಗೂ ಅರಮನೆಗಳು ದೊರೆಯಬೇಕೆಂಬ ಅರ್ಥವಲ್ಲ. ನಿಜವಾದ ಸುಖಕ್ಕೆ ಈ ಅರಮನೆಗಳ ಅಗತ್ಯವೂ ಇರುವುದಿಲ್ಲ. ಸಾಮಾನ್ಯನಾದ ನನಗೆ, ನಿಮಗೆ ಈ ಅರಮನೆಗಳಲ್ಲಿ ದಿಕ್ಕೆಟ್ಟಂತಾಗಬಹುದು. ಆದರೆ ಸಿರಿವಂತರಿಗೆ ಜೀವನದ ಅನುಕೂಲತೆಗಳು ಮಾತ್ರ ದೊರೆಯಬೇಕು. ಸ್ವರಾಜ್ಯದಲ್ಲಿರುವ ಎಲ್ಲರಿಗೂ ಈ ಅನುಕೂಲತೆಗಳು ದೊರೆಯುವವರಿಗೆ ಸ್ವರಾಜ್ಯವು ಎಂದಿಗೂ ಪೂರ್ಣ ಸ್ವರಾಜ್ಯವಾಗದು. 

***

ಪೂರ್ಣ ಸ್ವರಾಜ್ಯದ ನನ್ನ ಕಲ್ಪನೆಯೆಂದರೆ ದೂರದಲ್ಲಿ ಸಿಡಿದು ನಿಲ್ಲುವ ಪ್ರತ್ಯೇಕತೆಯ ಸ್ವಾತಂತ್ರ್ಯವಾಗಿಲ್ಲ. ಅದು ಗೌರವಯುತವಾದ ಹಿತಕರವಾದ ಸ್ವಾತಂತ್ರ್ಯವಾಗಿದೆ. ನನ್ನ ರಾಷ್ಟ್ರೀಯತೆಯು ಎಷ್ಟೇ ಪ್ರಬಲವಾಗಿದ್ದರೂ, ಪ್ರತ್ಯೇಕತೆಯ ಭಾವನೆಯಿಂದ ಕೂಡಿಲ್ಲ. ಅದರಿಂದ ಯಾವುದೇ ವ್ಯಕ್ತಿಗಾಗಲಿ, ರಾಷ್ಟ್ರಕ್ಕಾಗಲಿ ಹಾನಿಯಾಗುವಂತಿಲ್ಲ. ಕಾನೂನಿನ ತತ್ತ್ವಗಳು ಹೆಚ್ಚಾಗಿ ನೈತಿಕವೆ ಆಗಿರುವವು. ನಿನ್ನ ಆಸ್ತಿಯನ್ನು ನಿನ್ನ ನೆರೆಯವರಿಗೆ ಅಪಾಯಕರವಾಗದಂತೆ ಉಪಯೋಗಿಸು’ ಎನ್ನುವ ನಿತಾಂತ ಸತ್ಯದಲ್ಲಿ ನನ್ನ ನಂಬಿಕೆಯಿದೆ.

***

ಸಾಮಾನ್ಯ ಜನತೆಯಲ್ಲಿ ಜಾಗೃತಿಯಾಗಬೇಕು; ತಮ್ಮ ಹಿತ ಏತರಲ್ಲಿದೆ ಎಂಬುದರ ಸರಿಯಾದ ತಿಳಿವಳಿಕೆ ಅವರಲ್ಲಿ ಉಂಟಾಗಬೇಕು; ಜಗತ್ತೇ ವಿರೋಧಿಸಿದರೂ ತಮ್ಮ ಹಿತವನ್ನು ಸಾಧಿಸುವ ಶಕ್ತಿಯು ಅವರಲ್ಲಿ ಬರಬೇಕು; ಹಾಗೂ ಪೂರ್ಣ ಸ್ವರಾಜ್ಯದ ಮುಖಾಂತರವಾಗಿ ನಮ್ಮಲ್ಲಿ ಎಲ್ಲರೂ ಒಂದಾಗುವ ಭಾವನೆ ಬೆಳೆಯಬೇಕು; ಒಳಗಿನ ಇಲ್ಲವೆ ಹೊರಗಿನ ಅತಿಕ್ರಮಣಗಳಿಂದ ಬಿಡುಗಡೆಯಾಗಬೇಕು; ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿಯು ಪ್ರಗತಿಪರವಾಗಿ ಸುಧಾರಿಸಬೇಕು.

***

ಸ್ವರಾಜ್ಯದ ನನ್ನ ತಿಳುವಳಿಕೆಯ ಬಗ್ಗೆ ತಪ್ಪು ತಿಳುವಳಿಕೆಯಾಗಬಾರದು. ಪರಕೀಯ ನಿಯಂತ್ರಣದಿಂದ ನಾವು ಸಂಪೂರ್ಣವಾಗಿ ಸ್ವತಂತ್ರರಾಗಬೇಕು  ಎಂಬುದು ನನ್ನ ಅಭಿಪ್ರಾಯವಾಗಿದೆ. ಒಂದು ತುದಿಯಲ್ಲಿ ರಾಜಕೀಯ ಸ್ವಾತಂತ್ರ್ಯ ಇನ್ನೊಂದು ತುದಿಯಲ್ಲಿ ಆರ್ಥಿಕ ಸ್ವಾವಲಂಬನ – ಸ್ವರಾಜ್ಯವು ಹೀಗೆ ದ್ವಿಮುಖವಾಗಿದೆ. ಇವುಗಳಲ್ಲಿ ಒಂದು ನೈತಿಕ ಹಾಗೂ ಸಾಮಾಜಿಕವಾಗಿದೆ; ಅದಕ್ಕೆ ಪ್ರತಿಯಾದ ಇನ್ನೊಂದು ಅತ್ಯುದಾತ್ತ ದೃಷ್ಟಿಯ ಧರ್ಮವಾಗಿದೆ. ಈ ಧರ್ಮವು ಹಿಂದು, ಇಸ್ಲಾಮ್, ಕ್ರಿಸ್ತಮತ ಮುಂತಾದ ಎಲ್ಲ ಧರ್ಮಗಳನ್ನೂ ಒಳಗೊಂಡಿದೆ. ಇಷ್ಟೇ ಏಕೆ? ಇವುಗಳಿಗಿಂತಲೂ ಅದು ಮಿಗಿಲಾಗಿರುತ್ತದೆ. ‘ಸ್ವರಾಜ್ಯದ ಚೌಕೋನ’ವೆಂದು ಇದನ್ನು ಕರೆಯಬಹುದು. ಅಸತ್ಯದ ಬಾಧೆಯು ಯಾವುದೆ ಕೋನಕ್ಕೆ ತಟ್ಟಿದರೂ, ಈ ಚೌಕೋನದ ಆಕಾರ ಕೆಟ್ಟುಹೋಗುವದು.

***

ಸ್ವರಾಜ್ಯವನ್ನು ಸತ್ಯ-ಅಹಿಂಸೆಗಳಿಂದಲೇ ಪಡೆಯಬೇಕು, ಅದಕ್ಕಾಗಿ ಸತ್ಯ-ಅಹಿಂಸೆಗಳಿಂದಲೆ ದುಡಿಯಬೇಕು. ಅದನ್ನು ಸತ್ಯ ಅಹಿಂಸೆಗಳಿಂದಲೇ ಉಳಿಸಿಕೊಳ್ಳಬೇಕು, ಎನ್ನುವದು ನಮಗೆಲ್ಲರಿಗೂ ದೃಢವಾಗಿ ಮನವರಿಕೆಯಾದರೆ, ನಾನು ಎಣಿಸಿದ ಸ್ವರಾಜ್ಯದ ಉದಯವಾಗುವದು ಅಸತ್ಯ ಹಾಗೂ ಹಿಂಸೆಯ ಸಾಧನಗಳಿಂದ ನಿಜವಾದ ಪ್ರಜಾರಾಜ್ಯವು ಸಾಮಾನ್ಯ ಜನತೆಯ ಸ್ವರಾಜ್ಯವು ಎಂದಿಗೂ ಸಾಧಿಸಲಾರದು. 

***

ಅಹಿಂಸೆಯನ್ನೇ ಆಧರಿಸಿದ ಸ್ವರಾಜ್ಯದಲ್ಲಿ ಜನರು ತಮ್ಮ ಹಕ್ಕು ಬಾಧ್ಯತೆಗಳೇನೆಂದು ತಿಳಿದುಕೊಳ್ಳುವ ಅಗತ್ಯವಿಲ್ಲ; ಆದರೆ ತಮ್ಮ ಕರ್ತವ್ಯಗಳೇನೆಂಬುದನ್ನು ತಿಳಿದುಕೊಳ್ಳುವದು ಅಗತ್ಯವಾಗಿರುವುದು. ಪ್ರತಿ ಯೊಂದು ಕರ್ತವ್ಯಕ್ಕೂ ಅದಕ್ಕೆ ಪ್ರತಿಯಾದ ಹಕ್ಕು ಬಾಧ್ಯತೆ ಇರುವದು. ಸರಿಯಾದ ಕರ್ತವ್ಯ ಪಾಲನೆಯಿಂದ ಒದಗುವಂಥವುಗಳೇ ನಿಜವಾದ ಹಕ್ಕು ಬಾಧ್ಯತೆಗಳು. ಆದುದರಿಂದ ತಾವಿರುವ  ಸೇವೆ ಮಾಡುವವರಿಗೆ ಮಾತ್ರ ಹಕ್ಕು ಬಾಧ್ಯತೆಗಳನ್ನು ಪಡೆಯುವ ಅಧಿಕಾರ ಉಂಟು. ಇಂಥವರೇ ತಾವು ಪಡೆದಿರುವ ಹಕ್ಕು ಬಾಧ್ಯತೆಗಳನ್ನು ಸರಿಯಾಗಿ ವಿನಿಯೋಗಿಸಬಲ್ಲರು. ಸುಳ್ಳು ಹೇಳುವದು, ಮೊಂಡುತನ ಮಾಡುವದು, ಪ್ರತಿಯೊಬ್ಬನ ಹಕ್ಕು ಎನಿಸಬಹುದು. ಆದರೆ ಹೀಗೆ ಮಾಡುವವನಿಗೂ ಸಮಾಜಕ್ಕೂ ಕೂಡಿಯೆ ಇದರಿಂದ ಹಾನಿಯಾಗುವದೆಂಬುದನ್ನು ತಿಳಿಯಬೇಕು. 

ತಮ್ಮ ಕರ್ತವ್ಯ ಪಾಲನೆಯಿಂದ  ಅಧಿಕಾರಗಳನ್ನು ಪಡೆದ ಜನರು ಅಂಥ ಅಧಿಕಾರಗಳನ್ನು ತಮ್ಮ ಸ್ವಾರ್ಥಕ್ಕಾಗಿ ಎಂದಿಗೂ ಉಪಯೋಗಿಸದೆ, ಸಮಾಜದ ಸೇವೆಗಾಗಿಯೇ ವಿನಿಯೋಗಿಸುವರು. ವ್ಯಕ್ತಿಗಳ ‘ಸ್ವರಾಜ್ಯ – ಸ್ವನಿಯಂತ್ರಣ’ದ ಸಮುಚ್ಚಯವೆ ಜನತೆಯ ಸ್ವರಾಜ್ಯವೆನ್ನಬಹುದು. ರಾಷ್ಟ್ರದ ನಾಗರಿಕರಾದ ವ್ಯಕ್ತಿಗಳು ತಮ್ಮ ಕರ್ತವ್ಯಗಳನ್ನು ಸರಿಯಾಗಿ ಮಾಡುವುದರಿಂದ ಈ ಬಗೆಯ ಸ್ವರಾಜ್ಯದ ನಿರ್ಮಾಣವಾಗುವದು. ಇಂಥ ಸ್ವರಾಜ್ಯದಲ್ಲಿ ಯಾರೂ ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆಯೆ ಯೋಚಿಸುವುದಿಲ್ಲ. ತಮ್ಮ ಕರ್ತವ್ಯಗಳನ್ನು ಹೆಚ್ಚೆಚ್ಚು ನಿಷ್ಠೆಯಿಂದ ಮಾಡುತ್ತ ಹೋದಂತೆ ಹಕ್ಕು ಬಾಧ್ಯತೆಗಳು ಅಗತ್ಯವೆನಿಸಿದಾಗ್ಗೆ ತಾವಾಗಿಯೇ ಅವರ ಬೆನ್ನು ಹತ್ತುವವು.

***

ಅಹಿಂಸೆಯ ಮೇಲೆ ನಿಂತ ಸ್ವರಾಜ್ಯದಲ್ಲಿ ಯಾರು ಯಾರಿಗೂ ಶತ್ರುಗಳಾಗುವುದಿಲ್ಲ. ಸಾರ್ವತ್ರಿಕ ಧೈಯ ಸಾಧನೆಗಾಗಿ ಪ್ರತಿಯೊಬ್ಬ ಸ್ತ್ರೀ ಪುರುಷರು ಯೋಗ್ಯವಾದ ತಮ್ಮ ತಮ್ಮ ಕಾಣಿಕೆಯನ್ನು ಸಲ್ಲಿಸುವರು. ಎಲ್ಲರಿಗೂ ಓದು ಬರಹ ಬರುವದು. ಹಾಗೂ ಅವರ ಜ್ಞಾನವು ದಿನದಿನಕ್ಕೆ ಹೆಚ್ಚಾಗುತ್ತ ಹೋಗುವದು. ಕಾಯಿಲೆ, ಬೇಸರಿಕೆಗಳು ತೀರಾ ಕಡಿಮೆಯಾಗುವಂತೆ ನೋಡಿಕೊಳ್ಳಲಾಗುವದು. ಯಾರೂ ಪರಾವಲಂಬಿ ಯಾಗುವದಿಲ್ಲ. ದುಡಿಯಬೇಕೆನ್ನುವವರಿಗೆ ಯಾವಾಗಲೂ ಕೆಲಸ ದೊರೆಯುವದು. ಇಂಥ ಆಡಳಿತದಲ್ಲಿ, ಜೂಜು, ಕುಡಿತ, ಹಾಗೂ ವರ್ಗ ದ್ವೇಷಗಳಿಗೆ ಆಸ್ಪದ ದೊರೆಯಲಾರದು. ಸಿರಿವಂತರು ತಮ್ಮ ಸಂಪತ್ತನ್ನು ಜಾಣತನದಿಂದ ಲೋಕೋಪಕಾರಕ್ಕಾಗಿ ಉಪಯೋಗಿಸುವರು. ಕೇವಲ ವೈಭವ ಪ್ರದರ್ಶನ ಇಲ್ಲವೆ ಸುಖೋಪ ಭೋಗಕ್ಕಾಗಿ ಅದನ್ನು ಹಾಳು ಮಾಡುವದಿಲ್ಲ. ಬೆರಳಿನಿಂದ ಎಣಿಸುವಷ್ಟು ಜನರು ಝಗಝಗಿಸುವ ಅರಮನೆಯಲ್ಲಿ ವಾಸಿಸುವಂಥ ಬಹುಸಂಖ್ಯಾತರು ಗಾಳಿ ಬೆಳಕಿಲ್ಲದ ಕಿರುಕೋಣೆಗಳಲ್ಲಿ ಕಷ್ಟಕರವಾದ ಜೀವನವನ್ನು ಸಾಗಿಸುವಂಥ ಪರಿಸ್ಥಿತಿಯು ಎಂದಿಗೂ ಒದಗುವುದಿಲ್ಲ. ಅಹಿಂಸೆಯ ಸ್ವರಾಜ್ಯದಲ್ಲಿ ಹಕ್ಕು ಬಾಧ್ಯತೆಗಳಿಗೆ ಅತಿಕ್ರಮಣದ ಆತಂಕವಿಲ್ಲ, ಬೇರೊಂದು ರೀತಿಯಲ್ಲಿ ಹೇಳುವುದಾದರೆ ಯಾರಿಗೂ ಇಲ್ಲಿ ಅನ್ಯಾಯದ ಅಧಿಕಾರ ದೊರೆಯುವಂತಿಲ್ಲ. ಆಸ್ತಿಯನ್ನು ಬಲಾತ್ಕಾರದಿಂದ ತಿರುಗಿ ಪಡೆಯುವ ಅಪಹರಿಸಿದ ಪ್ರಶ್ನೆಯೇ ಉಂಟಾಗದು.

——————***—————***————-

ನನ್ನ ಕಲ್ಪನೆಯ ಸ್ವಾತಂತ್ರ್ಯ

————————————

ನನ್ನ ಕಲ್ಪನೆಯ ಸ್ವರಾಜ್ಯದ ಬಗೆಗೆ ಯಾವ ತಪ್ಪು ಆಗದಿರಲಿ – ಪರದಾಸ್ಯದಿಂದ ಸಂಪೂರ್ಣ ಬಿಡುಗಡೆ ಹೊಂದುವುದು ಹಾಗೂ ಆರ್ಥಿಕವಾಗಿ ಪೂರ್ಣ ಸ್ವತಂತ್ರವಾಗುವುದೇ ಸ್ವರಾಜ್ಯ. ಹೀಗೆ, ಇದರ ಒಂದು ಅಂಚು ರಾಜಕೀಯ ಸ್ವಾತಂತ್ರ್ಯವಾಗಿದ್ದು ಮತ್ತೊಂದು ಅಂಚು ಆರ್ಥಿಕ ಸ್ವಾತಂತ್ರ್ಯವಾಗಿದ್ದರೆ, ಅದಕ್ಕೆ ಇನ್ನೂ ಎರಡು ಅಂಚುಗಳುಂಟು. ಅವುಗಳಲ್ಲೊಂದು ಅಂಚೆಂದರೆ ನೈತಿಕ ಮತ್ತು ಸಾಮಾಜಿಕ ಅರ್ಥಾತ್ ಅತ್ಯಂತ ಶ್ರೇಷ್ಠ ಮತವೆನಿಸಿದ ಧರ್ಮವಾಗಿದೆ. ಈ ಧರ್ಮವು ಹಿಂದೂ, ಮುಸ್ಲಿಂ, ಕ್ರೈಸ್ತ ಮೊದಲಾದ ಮತಗಳನ್ನೆಲ್ಲ ಒಳಗೊಂಡಿದ್ದು, ಅವೆಲ್ಲಕ್ಕೂ ಮೇಲಿನವಾಗಿದೆ. ಅದನ್ನು ‘ಸತ್ಯಧರ್ಮ’ ಎಂಬ ಹೆಸರಿನಿಂದ ಗುರುತಿಸಿಕೊಳ್ಳಬೆಕು. ಅದು ಯಾವ ಬದಲಾವಣೆಗೂ  ನಾಶಕ್ಕೂ ಒಳಗಾಗದೆ ಸರ್ವವ್ಯಾಪಿಯಾಗಿದೆ. ನೈತಿಕ ಮತ್ತು ಸಾಮಾಜಿಕ ಉದ್ಧಾರಕ್ಕೆ ‘ಅಹಿಂಸೆ’ ಎಂದು ಕರೆಯಬಹುದು. ಹೀಗೆ ನನ್ನ ಕಲ್ಪನೆಯ ಸ್ವಾತಂತ್ರವು ನಾಲ್ಕು ಅಂಚುಗಳುಳ್ಳ ಒಂದು “ಚಚೌಕ”ದಂತಿದೆ ಎನ್ನಬಹುದು. ಅದರ ಯಾವುದೊಂದೇ  ಅಂಚು ಅಥವಾ ತುದಿಯು ಸರಿಯಾಗಿಲ್ಲದೆ ಹೋದರೆ, ಚಚೌಕವು ಕೆಟ್ಟು ಹೋಗುವುದು. ಸತ್ಯ ಮತ್ತು ಅಹಿಂಸೆಯನ್ನು ಆಚರಣೆಗೆ ತಾರದೆ, ದೇವರಲ್ಲಿ ನಿಜವಾದ ಶ್ರದ್ಧೆ ಇಡದೆ, ಈ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನೂ, ತನ್ಮೂಲಕವಾಗಿ ನೈತಿಕ ಮತ್ತು ಸಾಮಾಜಿಕ ಉದ್ದಾರವನ್ನೂ ಸಾಧಿಸಲಾರೆವು.

ಬ್ರಿಟಿಷ್ ಪಾರ್ಲಿಮೆಂಟಿನ ಅನುಕರಣೆಯಾಗಲೀ, ರಶಿಯಾದ ಸೋವಿಯೆಟ್ ರಾಜ್ಯ, ಇಟೆಲಿಯ ಫ್ಯಾಸಿಸ್ಟ್ ಅಳಿಕೆ ಇಲ್ಲವೆ ಜರ್ಮನಿಯ ನಾಝಿ ಪದ್ಧತಿಯ ಅನುಕರಣೆಯಾಗಲೀ ನನ್ನ ಕಲ್ಪನೆಯ ರಾಜಕೀಯ ಸ್ವಾತಂತ್ರ್ಯವಾಗಲಾರದು. ಅವೆಲ್ಲ ಅವರ ಅಭಿರುಚಿಗೆ ತಕ್ಕುದಾದ ಪದ್ಧತಿ ಇರಬೇಕು. ಅವರದೇನಿರಬೇಕೆಂಬುದನ್ನು ನಾನು ಹೇಳಲಾರೆನು. ಆದರೂ, ʼನೀತಿವಂತನೇ ಬಲವಂತ’ನೆಂಬ ನೈತಿಕ ಶಕ್ತಿಯ ಆಧಾರದಮೇಲೆ ರಚಿತವಾದ ಜನತಾ ಸರಕಾರವೇ “ರಾಮರಾಜ್ಯ”ವೆಂದು ನಾನು ಬಣ್ಣಿಸಿದ್ದೇನೆ.

ಹಾಗೆಯೇ, ಆಧುನಿಕ ಪಾಶ್ಚಿಮಾತ್ಯ ಔದ್ಯಮೀಕರಣದ ಫಲವು ಆರ್ಥಿಕ ಸ್ವಾತಂತ್ರ್ಯವಲ್ಲ. ನನ್ನ ದೃಷ್ಟಿಯಲ್ಲಿ, ಭಾರತೀಯರ ಆರ್ಥಿಕ ಸ್ವಾತಂತ್ರ್ಯವೆಂದರೆ, ಪ್ರತಿಯೊಬ್ಬ ಭಾರತೀಯ ಸ್ತ್ರೀ-ಪುರುಷನೂ ತನ್ನ ಸ್ವಂತ ಪ್ರಯತ್ನಗಳಿಂದ ಆರ್ಥಿಕವಾಗಿ ಉತ್ತಮ ಸ್ಥಿತಿಗೆ ಬರುವುದು. ಈ ಪದ್ಧತಿಯ ಪ್ರಕಾರ ಎಲ್ಲ ಸ್ತ್ರೀ-ಪುರುಷರಿಗೂ ಸಾಕಷ್ಟು ಹೊಟ್ಟೆ ಬಟ್ಟೆಗೆ ಸಿಕ್ಕುವಂತಾಗುವುದು. ಲಕ್ಷಾಂತರ ಜನರಿಗೆ ಈಗ ದೊರೆಯದಿರುವ ಹಾಲು ಬೆಣ್ಣೆಯೂ ಸಿಗುವಂತಾಗುವುದು.

*****

ಬಡವರ ಸ್ವಾತಂತ್ರ

ನನ್ನ ಕಲ್ಪನೆಯ ಸ್ವಾತಂತ್ರ್ಯವು ಬಡವನ ಸ್ವಾತಂತ್ರ್ಯ. ಜೀವನಾವಶ್ಯಕ ವಸ್ತುಗಳೆಲ್ಲವೂ ಅರಸರಿಗೂ ಹಣ ಇದ್ದವರಿಗೂ ದೊರೆಯುವಂತೆ ಬಡಜನರಿಗೂ ದೊರೆಯಬೇಕು. ಹಾಗೆಂದ ಮಾತ್ರಕ್ಕೆ, ಬಡವರಿಗೆ ಅರಮನೆಗಳು ಸಿಗಬೇಕೆಂತಲ್ಲ. ಅರಮನೆಗಳಿಂದ ನನಗಾಗಲೀ ಬಡಜನರಿಗಾಗಲೀ ಉಪಯೋಗವಿಲ್ಲ. ಶ್ರೀಮಂತನು ಅನುಭವಿಸುವ ಸುಖವಸ್ತುಗಳೆಲ್ಲವೂ ಬಡವನಿಗೂ ಸಿಗಬೇಕು. ಹಾಗಾಗುವವರೆಗೆ ಸ್ವಾತಂತ್ರ್ಯವು ಪೂರ್ಣ ಸ್ವಾತಂತ್ರವೆನಿಸಲಾರದೆಂಬ ಬಗೆಗೆ ನನಗೆ ಯಾವ ಸಂದೇಹವೂ ಇಲ್ಲ.

*****

ವ್ಯಕ್ತಿ ಸ್ವಾತಂತ್ರ

ವ್ಯಕ್ತಿ ಸ್ವಾತಂತ್ರಕ್ಕೆ ನಾನು ಬೆಲೆಗೊಡುತ್ತೇನೆ. ಆದರೂ ಮನುಷ್ಯನು ಸಾಮಾಜಿಕ ಜೀವಿಯೆಂಬುದನ್ನು ಮರೆಯಬಾರದು. ಸಾಮಾಜಿಕ ಪ್ರಗತಿಗೆ ಅನುಕೂಲವಾಗುವಂತೆ ಆತನು ತನ್ನ ವ್ಯಕ್ತಿತ್ವವನ್ನು ಹೊಂದಿಸಿಕೊಳ್ಳುತ್ತ ಬಂದುದರಿಂದಲೇ ಈಗಿನ ಸ್ಥಾನಕ್ಕೆ ಬಂದಿದ್ದಾನೆ. ಅನಿಯಂತ್ರಿತ ವ್ಯಕ್ತಿ ಸ್ವಾತಂತ್ರವೆಂಬುದು ಕಾಡಿನಲ್ಲಿರುವ ಮೃಗದ ಪಾಶವೀ ನೀತಿಯಾಗುವುದು.

****

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: