ಗಾಂಧಿ ದಿನಕ್ಕೆ ಬದುಕಿನ ಚಿತ್ರಗಳು

ಡಾ ರಾಜೇಗೌಡ ಹೊಸಹಳ್ಳಿ 

ಕಾರಿನಲ್ಲೇ ಸಾಮಾನ್ಯವಾಗಿ ತಿರುಗಾಡುವವರಿಗೆ ಸಾಮಾನ್ಯರ ಬದುಕಿನ ರೀತಿ ಅರಿವಿಗೆ ಬರದಿರಬಹುದು. 29.10.2013 ಸಂಜೆ ನೆಂಟರ ಮನೆಗೆ ಹೋಗಬೇಕಿತ್ತು. ರವೀಂದ್ರ ಕಲಾಕ್ಷೇತ್ರದ ಬಳಿ ಇದ್ದೆ ಕೆ.ಆರ್ ಮಾರ್ಕೆಟ್ ಬಳಿಯಿಂದ ನೇರವಾಗಿ ಬಿ.ಎಂ.ಟಿ.ಸಿ ಬಸ್ಸುಗಳು ಸಿಗುತ್ತವೆಂದು ಕೇಳುತ್ತಾ ಹೊರಟೆ. ಬೆಂಗಳೂರು ಹೊರಗೆ ನುಣ್ಣಗೆ ಒಳಗೆ ಹುಳುಕು ಹಣ್ಣು ಎಂದು ಅಲ್ಲಿ ಅರ್ಥವಾಗುವುದುಂಟು.

ಬಸ್ಸೇನೋ ಖಾಲಿ ಇತ್ತು. ಹೊರಟಿತು. ಹಿರಿಯ ನಾಗರೀಕರಿಗೆನ್ನುವ ಜಾಗದಲ್ಲೇ ಕುಳಿತೆ. ಪಕ್ಕದಲ್ಲಿ ಭಾರತ ದೇಶದ ಜನಸಾಮಾನ್ಯರ ಪ್ರತಿನಿಧಿಯಂತೆ ಒಬ್ಬಾತ ಕುಳಿತ. ಸರ್ಕಾರ ಒಂದು ರೂಪಾಯಿಗೆ ಒಂದು ಕೆಜಿಯಂತೆ ಅಕ್ಕಿ ಅಂತವರಿಗಲ್ಲವೆ! ಎನಿಸಿದ್ದುಂಟು. ಟಿಕೇಟ್ ತೆಗೆದುಕೊಂಡೆ ಆತನೂ ಟಿಕೇಟಿಗೆ ದುಡ್ಡು ಕೊಟ್ಟದ್ದನ್ನು ನಾನು ನೋಡಿರಲಿಲ್ಲ. ಕಂಡಕ್ಟರ್ ಹಿಂದಿರುಗಿ ಕೊಟ್ಟ ಹತ್ತು ರೂಪಾಯಿ ಕೈಲಿಡಿದು ಕೇಳಿದ.

ನಾನು ಕೊಟ್ಟಿದ್ದು ಐವತ್ತಲ್ಲವೇ? ಮ್ಯಾಲೆ ಐದು ರೂಪಾಯಿ ಚಿಲ್ಲರೇನೂ ಕೊಟ್ಟೆ ಟಿಕೇಟ್ ಹದಿನೈದಲ್ಲವೇ? ಇನ್ನೂ ನಲವತ್ತು ಕೊಡಿ ಎಂದನು ಹೌದೆ? ನೀವು ನೋಡಿದಿರಾ ಸಾರ್ ಎಂದು ಕಂಡಕ್ಟರ್ ನನ್ನ ಕೇಳಿದ. ನಾನು ನೋಡಿರಲಿಲ್ಲ ಸುಳ್ಳಾಕೆ ಹೇಳಲಿ ಎಂದು ಈತನೆಂದ. ಆಯ್ತಪ್ಪ ತಗೋ ಸತ್ಯ ಏನಿದ್ದರೂ ದೇವರು ನೋಡಿಕೊಳ್ತಾನೆ. ಎಂದು ಕಂಡಕ್ಟರ್ ಉಳಿದ 30 ರೂಪಾಯಿ ಕೊಟ್ಟು ಯಾಕೆ ಸುಳ್ಳು ಹೇಳಲಿ ಸಾರ್ ಎಂದು ಇದೇ ಪಕ್ಕದವನು ಹೇಳಿದ. ಸುಳ್ಳು ಹೇಳಿಲ್ಲ ಎಂದು ನನಗೂ ಅನಿಸಿತು. ಇಲ್ಲದಿದ್ದರೆ ಕಂಡಕ್ಟರ್ ಕೊಡುವ ದಾರಾಳಿಯೇ? ಅನಿಸಿದ್ದುಂಟು. ಈತನನ್ನು ನೋಡಿದರೆ ಊಟಮಾಡಿ ಎಷ್ಟೋ ದಿನವಾಯ್ತೊ ಎನಿಸಿದ್ದುಂಟು. ಆದರೆ ವಿಷಯ ಹಾಗಿರಲಿಲ್ಲ.

ನಾನು: ಯಾವೂರಪ್ಪ ನಿನ್ನದು

ಅವನು: ನಂಜನಗೂಡು

ನಾನು: ಮತ್ತೆ ಇಲ್ಲೆಲ್ಲಿಗೆ ಹೊರಟೆ?

ಅವನು: ನಮ್ಮ ಮನೆ ಬನಶಂಕರಿಲಿದೆ

ನಾನು: ಮತ್ತೆ ನಂಜನಗೂಡು ಅಂದೆ

ಅವನು: ಹೌದು ಅಲ್ಲಿ ನನ್ನೂರು. ಬಿರ್ಲಾ ನೂಲು ಕಂಪನಿಲಿ ಇದ್ದೆ. ಕಂಪನಿ ಮುಚ್ಚಿಹೋಯ್ತು ಬಂದೆ.

ನಾನು: ಯಾಕೆ?

ಅವನು: ಮೂರು ವರ್ಷ ಲಾಕ್ ಔಟ್ ಆಗಿತ್ತು. ಈಗ ಅವರೇನು ದೊಡ್ಡ ಜಾಗ ಅಲ್ಲವೆ ಸೈಟು ಮಾಡಿ ಮಾರತಾ ಅವ್ರೆ.

ನಾನು: ನಿಮಗೆ?

ಅವನು: ನಮಗೇನು! ಅಷ್ಟೋ ಇಷ್ಟೋ ಕೊಟ್ಟು ಹೊಗೆ ಹಾಕಿದ್ರು ಆಗ ಹತ್ತು ಸಾವಿರ ಸಂಬಳ ಬರ್ತಾ ಇತ್ತು

ನಾನು: ಹಂಗೇಕಾಯ್ತು.?

ಅವನು: ಲೀಡರುಗಳು ಚೆನ್ನಾಗಿ ಮೆಯ್ಕೊಂಡ್ರು. ಅಯ್ಯೋ ಕಾರ್ಮಿಕರ ಸಂಘ! ನಮ್ಮ ಹೊಟ್ಟೆ ಮೇಲೆ ಹೊಡಿತು.

ನಾನು: ಹಂಗಾದ್ರೆ ಕಾರ್ಮಿಕರ ಸಂಘದಿಂದ ಅನುಕೂಲವಾಗಲಿಲ್ಲವೇ?

ಅವನು: ಏನಾಗುತ್ತೆ ಬಿಡಿ ಮೇನೇಜ್ ಮೆಂಟಿನೋರು ಇರುವ ಲೀಡರುಗಳು ಎಲ್ಲಾ ಒಂದೇ ಅಲ್ಲವೆ.!

ನಾನು: ಜಮೀನು ಗಿಮೀನು ಇರಲಿಲ್ಲವೆ ನಿಮಗೆ?

ಅವನು: ಇತ್ತು ಮಗಳ ಮದ್ವೆಗಂತ ಭೋಗ್ಯ ಹಾಕಿದ್ದೀನಿ

ನಾನು: ಅಲ್ಲಿ ಬ್ಯಾರೆ ಕೆಲಸವಿರಲಿಲ್ಲವೇ?

ಅವನು: ಇರದೇ ಏನು ಬೆಂಗಳೂರಿಗೇನೋ ದುಡಿಬಹುದು ಅಂತಾ ಹೊಂಟಿವಿ.

ನಾನು: ಈಗ ಏನು ಮಾಡ್ತೀಯಪ್ಪಾ? ಎಲ್ಲಿಗೆ ಹೋಗಿದ್ದೆ?

ಅವನು: ಸ್ಮಶಾನಕ್ಕೆ ಹೋಗಿದ್ದೆ ಅಲ್ಲಿಗೇ ಈಗ ಶೂಟಿಂಗ್ ಹೋಗ್ತೀನಿ

ನಾನು: ಹಾ|| ಎಂತಾ ಸೂಟಿಂಗಪ್ಪ ಸಿನಿಮಾಕ್ಕೋ?

ಅವನು: ಹೂ ಇವತ್ತು ಸಿನಿಮಾ ಸೂಟಿಂಗ್ ಹೋಗಿದ್ದೆ. ಸೀರಿಯಲ್ಗೂ ಹೋಗ್ತೀನಿ. ಎಲ್ಲರೂ ಹೋಗ್ತೀವಿ

ನಾನು: ಏನು ಕೊಡ್ತಾರೆ?

ಅವನು: ದಿನಕ್ಕೆ ಮುನ್ನೂರೈವತ್ತು ಕೊಡ್ತಾರೆ. ಊಟ ತಿಂಡಿ ಮೂರು ಹೊತ್ತೂ ಉಂಟು.

ನಾನು: ಇವತ್ತು ಎಲ್ಲಿತ್ತಪ್ಪಾ ಸೂಟಿಂಗ್?

ಅವನು: ಅದೇ ಮೈಸೂರು ರಸ್ತೆ ಮಸಾಣದಲ್ಲಿ

ನಾನು: ಹೀರೋ ಯಾರಪ್ಪಾ?

ಅವನು: ಅದು ನಂಗೇನು ಗೊತ್ತು

ನಾನು: ಮತ್ತೆ ಅಲ್ಲಿ ನಿಂದಾ ಆಕ್ಟಿಂಗು?

ಅವನು: ನಮ್ಮದೇನಿದ್ದರೂ ನಿಂತ್ಕೊಂಡು ನೋಡೋದು ಅಯ್ಯೋ ಅಳೋರ್ಗೆ ನನ್ನಂತವರಿಗೆಲ್ಲಾ ಇದೇ ಕೂಲಿ. ಅಳೋದ್ನೋಡ್ಬೇಕು! ಕಣ್ಣಿಗೆ (ಗ್ಲಿಸರಿನ್) ಇದಾ ಹಾಕೆಂಡು ಅಳ್ತಾ ಹೆಂಗಸರು ಕೂರ್ಬೇಕು. ಆಯಪ್ಪಾ ಸತ್ತು ಹೋದೇನ ಪಾರ್ಟ್ ಮಾಡುವಾಗ ಬಿಡಿ ಅತ್ತಾಗೆ! ಅದು ಹೆಂಗೆ ಮಲಕ್ಯಂತಾನೋ ಹೆಣ ಇಡೋದರ ಮೇಲೆ ಅಯ್ಯಪ್ಪಾ! ಭಯವೇ ಇಲ್ಲ ಬಿಡಿ. ಆ ಕಡೆ ಇನ್ನೊಂದರಲ್ಲಿ ನಿಜವಾದ ಹೆಣ ಬರ್ತಾ ಇರ್ತವೆ. ಸುಡೋಕೆ ನೂಕ್ತಾ ಇರ್ತಾರೆ ಈ ಕಡೆ ಇವರು ಹಂಗೇ ಮಾಡಬೇಕಲ್ಲವೆ! ಹೆಣಕೆ ಬಟ್ಟೆ ಕಟ್ಟಿದಂಗೆ ಈ ಯಪ್ಪಂಗೆ ಕಟ್ಟಿರ್ತಾರೆ. ಮೂಗಿಗೆ ಅಳ್ಳೆ ಗಿಡಿದಿರುತ್ತಾರೆ ಅಲ್ಲಾಡದಂಗೆ ಮಲಗಿರಬೇಕಲ್ಲವೆ!

ನಾನು: ಹೆಣ ಬೆಂಕಿಗೆ ಹೋಗಬೇಕಲ್ಲ ಆಗ?

ಅವನು: ಕ್ಯಾಮರಾ ಆಫ್ ಮಾಡ್ತಾರೆ ಮತ್ತೆ ಹಂಗೆಂಗೆ ಅವರಿಗೆಲ್ಲಾ ಗೊತ್ತಲ್ವಾ! ಪೋಲಿಸುನೋರು ಜನಾನ ಕ್ಯಾಮರಾ ಕಡೆ ಬಿಡಲ್ಲ ಅಯ್ಯೋ ಸೀನ್ ತೆಗಿಯದೇ ಈ ವೊತ್ತಲ್ಲಾಯ್ತು. ಹೆಣದ ಅಡ್ಡೆ ಮೇಲೆ ಮಲಗೋದು ಅಂದ್ರೆ ಧೈರ್ಯ ಬೇಕಲ್ಲವೇ? ನಮ್ಮಂಥೋರ ಕೈಲಿ ಆದಾತೆ! ಆಯಪ್ಪ ಈದಪ್ಪ ಸರಿಯಾಗವನೆ ಬಿಡಿ! ಅದು ಹೆಂಗೆ ಮನೆಗೆ ಹೋಗಿ ನಿದ್ದೆ ಮಾಡ್ತಾನಪ್ಪಾ! ದೇವರೇ ಬಲ್ಲ. ನಮ್ಮಂಥೋರು ಬಿಡಿ ಹಿಂಗೆ ನಿಂತಿರೋದು ಕೈಬಾಯಿ ಹಿಂಗೆ ಮಾಡಿ ಆಕ್ಟ್ ಮಾಡೋದಲ್ಲವೆ. ಅಷ್ಟೇ ಪೊಲೀಸಿಗೆ ಹೇಳಿ ಅವರೂ ಬಂದಿರ್ತವೆ. ಕ್ಯಾಮರಾಕೆ ಇವರ್ಯಾರು ಬಿಳಕಿಲ್ಲ ಬುಡಿ

ನಾನು: ನಿಮಗೆಲ್ಲಾ ಇಂತಿಂಥ ಕಡೆ ಬರಬೇಕು ಅಂತಾ ಹೇಳೀರ್ತಾರಾ?

ಅವನ: ಹೌದಹುದು ಅಲ್ಲಿ ನೋಡಿ ಚೀಟಿಯೂ(ಜೋಬೊಳಗಿನಿಂದ ತೆಗೆದು) ಅವರದು ಇದೇ ನಂಬರ್ ಮೊಬೈಲ್ ನನ್ನದು ಅವರತ್ರಾನೇ ಇರ್ತದೆ. ಬೆಳಗ್ಗೆ ಇಂಥಾ ಕಡಿಕೆ ಬನ್ನಿ ಅಂತಾರೆ ಹೋಗ್ತೀವಿ. ಒಂದೆರಡು ಗಂಟೆ ಅಷ್ಟೇ ಸೂಟಿಂಗ್ ಹೋದೇಟಿಗೆ ತಿಂಡಿ ಕೊಡ್ತಾರೆ. ಮಧ್ಯಾಹ್ಯ ಊಟ ಕೊಡ್ತಾರೆ. ಈಗ ನೋಡಿ ಏಳೆಂಟು ಗಂಟೆಯಲ್ಲವೆ ಈಗಾಗಲೇ ಊಟ ಮಾಡೇ ಹೊಂಟಿದಿವಿ.

ನಾನು: ಹಂಗಾದರೆ ಮನೇಲಿ ಅಡಿಗೆ ಮಾಡಾಹಾಗಿಲ್ವಾ? ಯಾರ್ಯಾರಿದಾರೆ ಮನೇಲಿ? ಅದೇ ನನ್ನ ಹೆಂಡ್ತಿ ಅಲ್ಲೆಲ್ಲೋ ಮನೆ ಕೆಲಸಕೆ ಹೋಗ್ತಾಳೆ. ತಿಂಗಳಿಗೆ ಒಂದೆರಡು ಸಾವಿರ ಸಿಗುತ್ತೆ. ನನ್ನ ಮಗಳೂ ಅವಳೂ ಸೂಟಿಂಗಿಗೆ ಹೋಗ್ತಾಳೆ. ಈ ಹೊತ್ತು ಕುಂಬಳ ಗೋಡಿಗೆ ಹೋಗವಳೆ ಬರೋಹೊತ್ತೇ ಹತ್ತು ಗಂಟೆನೆ ಆಗಬಹುದು. ಅವಳಿಗೂ ಮುನ್ನೂರೈವತ್ತು ಕೊಡ್ತಾರೆ.

ಅವನು: ಮತ್ತೆ ಅಳಿಯಾ? ಈ ಮದುವೆಗೇನಾ ಜಮೀನ ಅಡಾ ಹಾಕಿದ್ದು?

ಅವನು: ಹೌದು ಅವನು ಟ್ಯಾಕ್ಟರ್ ಓಡಿಸ್ತಾನೆ ಎಲ್ಲಾ ಸೇರಿ ಒಂದೇ ಮನೇಲಿ ಇದಿವಿ.

ನಾನು: ಅವನಿಗೆ ಮಕ್ಕಳಪ್ಪಾ

ಅವನು: ಎರಡು ಇದಾವೆ. ಒಂದು ಗಂಡು ಒಂದು ಹೆಣ್ಣೆಂದು

ನಾನು: ಅವಕೆ ಸ್ಕೂಲಪ್ಪಾ?

ಅವನು: ಬೆಳಗ್ಗೆ ಎದ್ದು ಬ್ರೆಡ್ಡೋ ಅದೋ ಇದೋ ಕೊಟ್ಟು ಕಾಫಿ ಕುಡಿಸಿ ಕಳಿಸ್ತೀವಿ ಯಡಿಯೂರು ಕೆರೆ ಹತ್ತಿರ ಈ ಸ್ಕೂಲು. ಅಲ್ಲೇ ಮಧ್ಯಾಹ್ನದ ಊಟ ಅಲ್ಲವೆ! ಸಾಯಂಕಾಲ ನಾವೆಲ್ಲ ಬರೋ ಹೊತ್ತಿಗೆ ಬಂದಿರ್ತಾವೆ.

ನಾನು: ಸಾಯಂಕಾಲದ ಅಡಿಗೆ ಮಾತ್ರ ಮಾಡ್ತಿರೇ?

ಅವನು: ಹೌದಹುದು. ನಮ್ಮದೆಲ್ಲಾ ಅಲ್ಲೇ ಇಲ್ಲೇ ಆಗುತ್ತಲ್ಲ ಮನೇಲೂ ಮಾಡ್ತಿವಿ ಹೆಂಗೋ ಕಾಲ ಹಾಕಬೇಕಲ್ಲ!

ನಾನು: ಅಲ್ಲಪ್ಪ ಬೆಂಗಳೂರಿನಲ್ಲಿ ಈ ಮುಂಚೆ ಏನ್ಮಾಡ್ತಾ ಇದ್ದೆ.?

ಅವನು: ನಂಜನಗೂಡಿನಿಂದ ಹೊಂಟು ಮಿಲ್ಲಿನ ಕೆಲಸ ಮೈಸೂರು ಕೆ.ಆರ್ ಮಿಲ್ಲಲ್ಲಿ ನೋಡಿದೆ ನಾವಾಗೆ ಕೇಳ್ಕೊಂಡೋದರೆ ಏನು ಕೊಟ್ಟಾರು ಸಂಬಳ ಕಮ್ಮಿ ಅಂತಾವ ಬೆಂಗಳೂರಿಗೆ ಬಂದೆ. ನಮ್ಮಂಗೆ ಅದು ಏಸೇ ಜನ ಬಂದ್ರೂ ಅನ್ನಿ ಬಂದವನೇ ಸೆಕ್ಯೂರಿಟಿ ಕೆಲಸಕ್ಕೆ ಸೇರ್ಕೊಂಡೆ. ಅಲ್ಲಂತೂ ಬರಿ ಮೋಸ ಬಿಡಿ. 12 ಗಂಟೆ ಕೆಲಸ ಕೂತು ಕೂತು ಸಾಕಾಗಿ ಬಿಡೋದು ಅದೂ ಹೋಗಲಿ ಸರ್ಯಾಗಿ ಸಂಬಳ ಕೊಡೋದುಂಟೆ! ಮಲಗಿದ್ದೆಯಲ್ಲಾ! ಅಂತ ಕಟ್ ತಡವಾಗಿ ಬಂದಿಯಾ! ಅಂತಾ ಕಟ್ ಉಳಿಯದೇನು! ಅವರಿಗರ್ಧ ನಮಗರ್ಧ ಅವರಿಗೆ ಪುಕ್ಕಟೆ ದುಡ್ಡು. ನಮಗೆ ಮಾತ್ರ ಕಣ್ಣಿಗೆ ಎಣ್ಣೆ ಬಿಟ್ಕಂಡಿದ್ರು ಹಂಗೆಯಾ! ಕೆಲಸ ಬಿಟ್ಟು ಬಿಟ್ಟೆ ಇಲ್ಲಿಗೆ ಬಾ ಅಂತಾ ಯಾರೇ ಹೇಳಿದ್ರು ಬಂದು ಬಿಟ್ಟೆ

ನಾನು: ಅಲ್ಲಪ್ಪಾ ದಿನಾ ಇಲ್ಲಿ ಕೆಲಸ ಕೊಟ್ಟಾರೆಯೇ?

ಅವನು: ಇಲ್ಲೂ ತಿಂಗಳಲ್ಲಿ ಎಲ್ಲಾದಿನ ಕೆಲಸ ಸಿಗೋಕಿಲ್ಲ ಆದರೂ ಹದಿನೈದು ಇಪ್ಪತ್ತು ದಿನಕ್ಕೆ ಮೋಸ ಇಲ್ಲ. ಅದರಲ್ಲೂ ಕೆಲಸ ಕಡಿಮೆ. ಊಟ ತಿಂಡಿ ಆತವರ! ಹಂಗಾಗೇ ತಿರುಗಾಡ್ಕೊಂಡಿದ್ದು ಸಂಬಳ ತಗೊಳವಲ್ಲವರ!

ನಾನು: ಅಲ್ಲಪ್ಪ ಮನೆ ಮಾಡಿದಿನಿ ಅಂತೊಯಲ್ಲಾ ಎಷ್ಟು ಬಾಡಿಗೆ?

ಅವನು: ಮೂರು ಸಾವಿರ ಹ್ಯಂಗೇ ಆತದೆ

ನಾನು: ಮುಂದೇನಪ್ಪಾ ಊರಕಡೆ ಹೋಗೋದುಂಟೆ? ಬಿಸಿಲಲ್ಲಿ ಕೆಲಸ ಮಾಡಬೇಕೇನೋ?

ಅವನು: ನೋಡಬೇಕು ಗೇದು ಗೇದು ಹೊಟ್ಟೆತುಂಬಾ ಉಣ್ಣೋಕು ಕಣ್ಣುತುಂಬಾ ನಿದ್ದೆ ಮಾಡೋಕು ಪುಣ್ಯ ಬೇಕಲ್ಲವೆ!

ನಾನು: ಅಲ್ಲಿ ಜಮೀನು ಇದೆ ಅಂದ್ಯಲ್ಲಾ ಅದು ನಾಲೆ ಬಯಲೇ?

ಅವನು: ಹೌದಹುದು ವರ್ಷಕ್ಕೆ ಎರಡು ಬೆಳೆ. ಬೇಕಾದಂಗೆ ಬೆಳಿಬಹುದು

ನಾನು: ಕಬ್ಬುಗಿಬ್ಬು?

ಅವನು: ಎರಡು ಎಕರೆ ಇದೆಯಲ್ಲಾ ಎಕರೆಗೆ ಐವತ್ತು ಟನ್ ಬೆಳಿತಾರೆ. ಅಲ್ಲೆ ಶುಗರ್ ಪ್ರಾಕ್ಟರಿನೂ ಇದೆಯಲ್ಲಾ!

ನಾನು: ವಾಪಾಸು ಹೋಗಾಕೆ ಮನಸು ಮಾಡಿದಿಯಾ ಅನ್ನಪ್ಪಾ? ಹೆಂಡ್ತಿನೂ ಒಪ್ಪಾಳೆ?

ಅವನು: ಏನ್ರಪ್ಪಾ ಹೆಂಗೆ ಹೇಳೋದು ಎಲ್ಲಾ ಒಪ್ಪಿ ಮತ್ತೆ ಹಳ್ಳಿ ಕಡೆ ಹೋಗಬೇಕಲ್ಲಾ!

ನಾನು: ನಿನ್ನ ಹೆಂಡತಿ ನೀನು ಅಳಿಯ ಮಗಳು ಎಲ್ಲರಿಗೂ ಅಲ್ಲೇ ಸಂಬಳ ಸಿಗುತ್ತಿರಲಿಲ್ಲವೇ?

ಅವನು: ಸಾಲಾಯ್ತಲ ಸರಿಕರತವಾ ಇರೋದೆಂಗೆ ಅದೂ ಅಲ್ಲದೆ ಬೆಂಗಳೂರಲ್ಲಿ ಅದೇನೋ ಅಂತ ಹೇಳ್ತದ್ರಲಾ! ಬಂದು ಬಿಟ್ಟವ್ರಪ್ಪಾ

ನಾನು: ಇಲ್ಲಿ ಸರ್ಕಾರದ ಅಕ್ಕಿ ರೇಷನ್ ಅಂತಾದೇನಾದ್ರೂ ಉಂಟೇ/

ಅವನು: ಇಲ್ಲೇನಿದ್ದಾತು ಮಣ್ಣು! ಎಲ್ಲಾ ಕೊಂಡ್ಕೊಂಡ್ ತಿನ್ನಬೇಕಲ್ಲವೆ.!

ನಾನು: ಆಯ್ತು ಅಷ್ಟೋ ಇಷ್ಟೋ ದುಡ್ಡು ಉಳಿಸ್ತೀರೇನಪ್ಪಾ ಇಲ್ಲಿ?

ಅವನು: ಅಯ್ ದುಡ್ಡು ಉಳಿಸಕೋದ್ರಿ, ಹ್ಯಂಗೆ ಕಾಲ ಹಾಕ್ತ ಇದಿವ್ರಪ್ಪ. ಅಯ್ಯೋ ಸ್ಟಾಪ್ ಬಂತು ನಾನು ಇಳಿಬೇಕು ( ಇಳಿದೇ ಹೋದ ಭಾರತ ದೇಶದ ನಗರಮುಖಿ ಗ್ರಾಮೀಣ ಪ್ರತಿನಿಧಿ.)

ಭಾಗ-2

ಆತ ಇಳಿದು ಹೋದ ಮೇಲೆ ನಿಂತಿದ್ದ ಮತ್ತೊಬ್ಬ ಕೂರಬೇಕಲ್ಲವೆ! ಬಂದು ಕುಳಿತಾತ ಸ್ವಲ್ಪ ಬಿಗುಮಾನದಲ್ಲಿದ್ದರೂ ನನ್ನ ಕಡೆ ನೋಡಿ ಮುಸಿ ನಗೆ ಸೂಸಿದ್ದುಂಟು. ಈ ಹಿಂದಿನ ಸಂದರ್ಶನವನ್ನು ಗಮನಿಸುತ್ತಿದ್ದಿರಬೇಕು. ಸೀಟು ಸಿಕ್ಕಿದ್ದಕ್ಕೆ ಸಂತೋಷವಾಗಿರಲೂಬಹುದು.

ನಾನು: ನೀವು ಯಾವ ಕಡೆ?

ಅವರು: (ಇಲ್ಲಿ ಯಾಕೆ ಬಹುವಚನವೆಂದರೆ ಈತ ಭಾರತ ದೇಶದ ಸಂಪೂರ್ಣ ಪ್ರತಿನಿಧಿಯಂತೆ ಕಾಣುತ್ತಿರಲಿಲ್ಲ. ಅದೂ ಅಲ್ಲದೆ ಏಕವಚನವೇನಿದ್ದರೂ ದೇವರಿಗೆ ಅಥವಾ ಆತ್ಮೀಯವಾಗಿ ಸ್ಪಂದಿಸುವವರಿಗಲ್ಲವೇ!) ನಮ್ಮದು ಇಲ್ಲೇ ಬ್ಯಾಂಕ್ ಕಾಲೋನಿ.

ನಾನು: ಬ್ಯಾಂಕ್ನಲ್ಲಿದ್ದೀರಾ

ಅವರು: ಹೌದು ಕೆನರಾ ಬ್ಯಾಂಕಿನಲ್ಲಿದ್ದೇನೆ.

ನಾನು: ನೀವು ಯಾವ ಕಡೇವ್ರು?

ಅವರು; ನನ್ನದು ಸಾಗರ ಸಾಗರ ಹತ್ತಿರ ಹಳ್ಳಿ.

ನಾನು: ನೀವು ಹಳ್ಳ್ಳಿಯೋರೋ ಅಡಿಕೆ ತೋಟದವರೇ?

ಅವರು; ಹೌದು ಅಡಿಕೆ ತೋಟ ಇದೆ

ನಾನು: ನೀನಾಸಂ ಗೊತ್ತಲ್ಲವೆ.?

ಅವರು; ಹೌದಹುದು ಅದೇ ನನ್ನ ಹೆಂಡತಿ ಮನೆ. ಅದೇ ಊರು

ನಾನು: ಸುಬ್ಬಣ್ಣ ಎಂಥ ಪವಾಡ ಪುರುಷ ಅಲ್ಲವೆ! ಆ ಹಳ್ಳಿಲಿದ್ದುಕೊಂಡು!

ಅವರು; ಬಾಳ ದೊಡ್ಡ ಮನುಷ್ಯ; ಅವರು ಮನಸ್ಸು ಮಾಡಿದ್ರೆ ಎಲ್ಲೆಲ್ಲೋ ಇರಬಹುದಿತ್ತು; ಆದರೂ ಹಳ್ಳಿ ಆರಿಸಿಕೊಂಡು ಸಕ್ಸಸ್ ಆದ್ರಲ್ಲಾ ಅದು ಹೆಚ್ಚುಗಾರಿಕೆ ಅಲ್ಲವೆ.

ನಾನು: ಮಗ ಅಕ್ಷರ ಹಂಗ್ಯಾಕ್ರಿ? ಮನು ಕಾಲಕ್ಕೆ ಹಿಂದಿಂದಕ್ಕೆ ಚಲಿಸ್ತಾರೆ?

ಅವರು ; ನೀವೇಳೋದು ಸರಿ ಅನ್ನಿ ಅಪ್ಪನಂತಲ್ಲ! ಅಪ್ಪಾ ಬಿಡಿ ಗ್ರೇಟ್’ ಅಪ್ಪ ಮಾಡಿದರ ಮೇಲೆ ಕುಳಿತಿರೋದಲ್ಲವೆ! ಏನೇ ಆಗಲಿ ಅಪ್ಪಂಗೆ ಒಳ್ಳೆ ಹೆಸರು ತರಬೇಕು.

ನಾನು: ನಿಮ್ಮ ತಂದೆ ತಾಯಿ ಇದ್ದಾರೇ?

ಅವರು; ನಾನೊಬ್ಬನೇ ಮಗ ಅವರಿಲ್ಲಿಗೆ ಬರಲೊಲ್ಲರು ನಾವಲ್ಲಿಗೆ ಹೋಗಂಗಿಲ್ಲ ಏನು ಮಾಡುವುದು! ಕಾಲೈ ತಸ್ಮಾಯ ನಮಃ. ಬಸ್ ಸ್ಟಾಪ್ ಬಂತು ಇಳಿದು ಮುಂದಿನ ಸ್ಟಾಪ್ ಬಂತು ನಾನೂ ಇಳಿದು ಹೋದೆ.

ಗಾಂಧಿಯ ಗ್ರಾಮ ಭಾರತದ ಸಂಕೇತ ಚರಕ ತಾಳ ತಪ್ಪಿದೆ.

ಹತ್ತಿ ಗಿರಣಿ ಮತ್ತು ಭಾರೀ ಯಂತ್ರಗಳು ಮೂಲೆ ಸೇರಿವೆ. ಬೆಳಗ್ಗೆ ಎದ್ದು ಹಲ್ಲುಜ್ಜುವ ಪೇಸ್ಟ್ ನಿಂದ ಹಿಡಿದು ಸರ್ವಸ್ವವೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭವ್ಯ ಭಾರತವೆಂದು ಬೆಳಗುತ್ತಿದೆ ದೊಡ್ಡಣ್ಣ ದೊಣ್ಣೆ ಹಿಡಿದು ಗುಡಿಸಿಕೊಳ್ಳುತ್ತಿದ್ದಾನೆ. ಸರ್ಕಾರಗಳ ನಗರೀಕರಣದ ನೂಕು ನುಗ್ಗಲಿಗೆ ಕೈಚೆಲ್ಲಿದೆ.

ಸಿಂಗಾಪುರ್ ಮಾಡುತ್ತೇವೆ ಚೈನಾ ಹೊಳಪು ಮಾಡುತ್ತೇವೆ ಶ್ರೀರಾಮನರಮನೆ ಗುರುಮನೆ ಕಟ್ಟುತ್ತೇವೆ ಉಕ್ಕಿನ ಮುಷ್ಯನನ್ನು ಆಕಾಶದೆತ್ತರಕ್ಕೆ ನಿಲ್ಲಿಸುತ್ತೇವೆಂದು ಹೇಳುತ್ತಾ ಇವೆ. ಏನೂ ಮಾಡುವುದೂ ಬೇಡ ಅವರಿಗೇನೂ ಕೊಡುವುದೂ ಬೇಡ ದುಡಿಯುವುದು ಕಲಿಸಿ ಮಾರುಕಟ್ಟೆ ಸೃಷ್ಟಿಸಿದರೆ ಸಾಕು.

ಗ್ರಾಮ ಭಾರತ ಗಾಂಧೀಜಿ ಕನಸು ನನಸು ಮಾಡುತ್ತದೆ. ಎಂದು ತಿಳಿದರೆ ಸಾಕಲ್ಲವೆ! ಈ ಸಂದರ್ಶನ ಲೇಖನ ಇದಕ್ಕೊಂದು ಸೂಚನೆ. ಈ ನಂಜನಗೂಡಿನ ಆತ ಗ್ರಾಮ ಪರಿಸರ ತೊರೆದು ಮಸಣ ತಲ್ಲಣಕ್ಕೊಳಗಾಗಿದ್ದಾನೆ. ಹರಿವ ನೀರ ದೂರ ಸರಿಸಿ ಕೊಳಚೆಗೆ ಬಿದ್ದಿದ್ದಾನೆ. ಈ ತಲ್ಲಣಗಳಿಗೆ ಮರು ದಾರಿ ತೋರಿದುವುದೇ ಸರ್ಕಾರದ ಸಮಾಜದ ಜನಪದೀಯ ಚಿಂತನೆಯಾಗಬೇಕು. ಈಗಿನ ಗ್ರಾಮ ಬಾರತಕ್ಕೆ ಸಂಭ್ರಮಗಳಿಲ್ಲ ತಲ್ಲಣಗಳಿವೆ.

‍ಲೇಖಕರು Admin

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: