ಗಾಂಧಿ ಕಣ್ಣಿನಲ್ಲಿ ಗಾಂಧಿ…

ವಿಕ್ರಮ ವಿಸಾಜಿ 

ಇತ್ತೀಚಿನ ಕಾದಂಬರಿಯೊಂದನ್ನು ಓದಿ ಏನೋ ವಿಚಿತ್ರ ಅನ್ನಿಸಿ ಸುಮ್ಮನೆ ಕೂತಿದ್ದೆ. ಬರವಣಿಗೆಯ ಆಳದಲ್ಲಿ ಇಂಥ ಮನಸ್ಸು ಇರಬಾರದೆನಿಸಿತ್ತು. ಹಾಗಾದರೆ ಬರವಣಿಗೆಯಲ್ಲಿ ವಿಕಾರವಾದದ್ದು ಇರಲೇಬಾರದೆ? ಹಾಗೇನೂ ಇಲ್ಲ. ಆದರೆ ಈ ವಿಕಾರವೂ ಕೂಡ ತನ್ನ ಆತ್ಯಂತಿಕ ಸ್ಥಿತಿಯಲ್ಲಿ ಒಂದು ಸೂಕ್ಷ್ಮವಾದ ನೋಟವನ್ನು ಬಿಟ್ಟುಕೊಡುವಂತಿರಬೇಕು. ಇಲ್ಲವಾದರೆ ನಾವು ಬರಹದಲ್ಲಿ ಗೋರಿಗಳನ್ನು ಮಾತ್ರ ಕಟ್ಟುತ್ತೇವೇನೊ. ಕೆಲ ಬರಹಗಳಿಗೆ ವಿಶೇಷ ಗುಣವಿರುತ್ತದೆ. ನಮ್ಮ ವ್ಯಕ್ತಿತ್ವವನ್ನು ಕ್ಷಣ ನಿಂತು ಪರೀಕ್ಷಿಸಿಕೊಳ್ಳುವ ಸಣ್ಣ ಉಮೇದೊಂದನ್ನು ಇವು ಸೃಷ್ಟಿ ಮಾಡುವುದುಂಟು. ವ್ಯಕ್ತಿತ್ವ ವಿಕಸನ ಕುರಿತು ಬರುತ್ತಿರುವ ಜನಪ್ರಿಯ ಕೃತಿಗಳ ಕುರಿತು ನಾನು ಹೇಳುತ್ತಿಲ್ಲ. ಇಂಥ ಉಮೇದನ್ನು ನಾವು ಹೇಗೆ ಕಾರ್ಯಗತಗೊಳಿಸಬೇಕೆನ್ನುವುದು ಬೇರೆ ಸಂಗತಿ. ಕೃತಿಯೊಂದು ಒಂದು ಕ್ಷಣವಾದರೂ ಹೀಗೆ ಡಿಸ್ಟರ್ಬ್ ಮಾಡುತ್ತದಲ್ಲ ಯಾಕೆ? ನಮ್ಮ ಸಂವೇದನೆಯನ್ನು ಬೆಳೆಸುವ ಅಥವಾ ಅದು ಕೆಡದಂತೆ ಕಾಪಾಡುವ ಈ ಗುಣ ಅದಕ್ಕೆ ಹೇಗೆ ದಕ್ಕಿತು? ಗಾಂಧೀಜಿ, ಅಂಬೇಡ್ಕರ್ ಅವರ ಬರಹದ ತುಂಬಾ ಇಂಥ ಗುಣವಿದೆ. ಈ ಪಟ್ಟಿಯಲ್ಲಿ ಇನ್ನೂ ಹಲವಾರು ಜನರಿದ್ದಾರೆ. ಬಾಪು ತಮ್ಮ ಬರಹಗಳಲ್ಲಿ ಪ್ರತಿಕ್ಷಣ ಕೂಡ ಹೇಗೆ ತಳಮಳ ಪಟ್ಟಿದ್ದಾರೆಂಬುದು ನೆನಪಿಸಿಕೊಂಡರೆ ಅಚ್ಚರಿಯಾಗುವುದು. ಅವರ ತೀವ್ರವಾದ ಆತ್ಮಪರೀಕ್ಷೆಯ ಗುಣವೇ ಈ ತಳಮಳಕ್ಕೆ ಕಾರಣ. ಮನುಷ್ಯ ತನ್ನ ಒಳದೃಷ್ಟಿ ಕಾಣಿಸುವುದನ್ನು ಬಲವಾಗಿ ನಂಬಿ ನಡೆದರೆ ಅದೇ ಆತ್ಮಪರೀಕ್ಷೆ ಎಂಬ ನಿಲುವು ಬಾಪುವಿಗೆ ಇದ್ದಂತಿದೆ. ರಾಜಕಾರಣ, ಧರ್ಮ, ಸಮಾಜದ ಎಲ್ಲ ತರಹದ ಹೇರಿಕೆಯನ್ನವರು ನಿರಾಕರಿಸಿದರು. ಈ ಎಲ್ಲವಕ್ಕೆ ಒಳದೃಷ್ಟಿಯೊಂದು ತೆರೆಯುವುದನ್ನೇ ಕಾಯುತ್ತಿರುವಂತೆ ಬಾಪು ಬದುಕಿದ್ದು, ಬರೆದದ್ದು ನೆನಪಾಗುತ್ತಿದೆ. ಹೊಸ ಹೊಸದನ್ನು ಹೀಗೆ ಕಂಡುಕೊಳ್ಳುವ ವಿಸ್ಮಯ ಜೀವನದುದ್ದಕ್ಕೂ ಬಾಪು ಉಳಿಸಿಕೊಂಡಿದ್ದರು. 

ಹಿಮಾಲಯದಲ್ಲೊ ದುರ್ಗಮ ಕಾಡುಗಳಲ್ಲೊ ತೀರ್ಥಕ್ಷೇತ್ರಗಳೆಲ್ಲೊ ಬಾಪು ಆತ್ಮಪರೀಕ್ಷೆ ಮಾಡಿಕೊಳ್ಳಲಿಲ್ಲ. ಇಂಥ ಆತ್ಮಪರೀಕ್ಷೆಗಳ ಬಗೆಗೆ ಅವರಿಗೆ ಗುಮಾನಿ ಕೂಡ ಇತ್ತು. ದಿನದಿನದ ಬದುಕಿನ ಜಂಜಾಟಗಳ ನಡುವೆಯೇ ಆತ್ಮಪರೀಕ್ಷೆಯ ತಾಣವಿದೆಯೆಂಬುದು ಬಾಪುಗೆ ಮನದಟ್ಟಾಗಿತ್ತು. ಕನ್ಯಾಕುಮಾರಿಗೆ ಹೋದಾಗಲೂ ಅವರನ್ನು ಕಾಡಿದ್ದು- ದೇವಾಲಯದ ಗರ್ಭಗೃಹಕ್ಕೆ ಎಲ್ಲರಿಗೂ ಯಾಕೆ ಪ್ರವೇಶವಿಲ್ಲ? ಎಂಬ ಸಂಗತಿ. ಅಸ್ಪೃಶ್ಯರ ಮೇಲೆ ವಿಧಿಸಿರುವ ಈ ನಿರ್ಬಂಧವನ್ನು ಕುರಿತು ಯೋಚಿಸಿದ್ದು ಹೀಗೆ ‘ಈ ರೂಢಿಯು ಪುರಾತನ ಕಾಲದಿಂದ ಅನುಸರಿಸಿಕೊಂಡು ಬಂದದ್ದೆ? ಹಾಗಿರಲಿಕ್ಕೆ ಸಾಧ್ಯವೇ ಇಲ್ಲ ಅಂತ ನನ್ನ ಒಳದನಿಯು ಚೀರಿ ಹೇಳುತ್ತಿತ್ತು. ಅಲ್ಲದೇ ಪ್ರಾಚೀನ ಕಾಲದಿಂದ ಬಂದಿದ್ದರೆ ಆಗಲೂ ಅದು ಪಾಪಕಾರ್ಯವೇ. ಪಾಪಕಾರ್ಯವು ತನ್ನ ಪ್ರಾಚೀನತ್ವದಿಂದ ಪಾಪಹಿತವಾಗುವುದಿಲ್ಲ ಅಥವಾ ಸದ್ಗುಣವಾಗುವುದಿಲ್ಲ. ಆದ್ದರಿಂದ ಈ ವಿಷದೋಷವನ್ನು ಪ್ರತಿಭಟಿಸಬೇಕಾದದ್ದದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ ಎಂಬುದು ನನಗೆ ಮತ್ತೂ ಬಲವತ್ತರವಾಗಿ ಮನದಟ್ಟಾಯಿತು’ ಬಾಪು ಉಪದೇಶದ ಧಾಟಿಯಲ್ಲಿ ಬರೆದದ್ದು ಕಡಿಮೆ. ತನ್ನ ಒಳಗಿನ ಸದ್ಗುಣ ಮತ್ತು ಕೆಡಕನ್ನು ಅರಿಯುತ್ತ ಬರೆದದ್ದೆ ಹೆಚ್ಚು. ಏನಾದರೂ ಸೂಚನೆ ಕೊಡುವ ಸಂದರ್ಭ ಬಂದರೂ ಅದು ತಳಮಳದಲ್ಲೇ ಅಭಿವ್ಯಕ್ತಗೊಂಡಿದೆ ‘ನಾವು ನಮ್ಮ ಬುದ್ದಿಯನ್ನು ಇನ್ನೊಬ್ಬರ ಕೈಯಲ್ಲಿ ಕೊಟ್ಟುಕೊಂಡರೆ ನಾವು ನಡೆದು ತಲುಪುವ ಸ್ಥಿತಿಯು ಹೊರಟಾಗಿನ ಸ್ಥಿತಿಗಿಂತ ಹೆಚ್ಚು ಕೆಟ್ಟದಾಗಿರುತ್ತದೆ. ಮತ್ತು ನಾನು ಹೇಳಿದ್ದು ಮತ್ತು ಮಾಡಿದ್ದೆಲ್ಲವನ್ನೂ ಈ ದೇಶವು ಸ್ವಂತ ಯೋಚನೆಯನೆಯಿಲ್ಲದೆ ಕುರುಡಾಗಿ ಅನುಕರಿಸುತ್ತ ಬಂದಿದೆ ಎಂಬುದು ನನಗೆ ತಿಳಿದರೆ, ಅದರಿಂದ ನನಗೆ ತೀವ್ರ ಖೇದವುಂಟಾಗುತ್ತದೆ’ ಬಾಪುವಿನ ಆತ್ಮಪರೀಕ್ಷೆ ಆತ್ಮರತಿಯಾಗದೆ ಇರುವುದಕ್ಕೆ ಅವರ ಇಂಥ ಸ್ವಭಾವ ಕಾರಣ. ತನ್ನ ಕೌಟುಂಬಿಕ ಬದುಕಿನಲ್ಲೂ ಬಾಪು ಈ ಎಚ್ಚರ ಕಳೆದುಕೊಳ್ಳಲಿಲ್ಲ. ಒಮ್ಮೆ ಹಿರಿಯ ಮಗ ಹರಿಲಾಲನ ವ್ಯವಹಾರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಕೀಲರೊಬ್ಬರು ಬರೆದ ಪತ್ರ ಅವರ ಕೈ ತಲುಪುತ್ತದೆ. ಅದಕ್ಕೆ ಬಾಪುವಿನ ಉತ್ತರ ನೋಡಿ ‘ಯಾವುದೇ ದುಷ್ಪ್ರವೃತ್ತಿಯ ಬಗ್ಗೆ ನನಗೆ ಸಮ್ಮತಿಯಿರುವುದಿಲ್ಲ. ಒಳ್ಳೆಯದೆಲ್ಲದರ ಜೊತೆಯೂ ನಾನು ಸಹಕರಿಸುತ್ತೇನೆ. ಕೆಟ್ಟುದೆಲ್ಲದರ ಜೊತೆಗೂ ಅಸಹಕಾರ ಹೂಡಲು ಬಯಸುತ್ತೇನೆ. ಅದು ನನ್ನ ಹೆಂಡತಿಯಲ್ಲಿರಲಿ ಮಕ್ಕಳಿರಲಿ ಅಥವಾ ಸ್ವತ ನನ್ನಲ್ಲೇ ಇರಲಿ. ಒಳ್ಳೆಯದು ಕೆಟ್ಟದು ಈ ಎರಡರಲ್ಲಿ ಯಾವುದೊಂದನ್ನೂ ನಾನು ಮುಚ್ಚಿಟ್ಟು ಕಾಪಾಡಲು ಬಯಸುವುದಿಲ್ಲ. ನಮ್ಮಲ್ಲಿರುವ ಸಮಸ್ತ ಕೆಡುಕನ್ನೂ ಪ್ರಪಂಚವು ಕಾಣಬೇಕು ಅಂತ ನನ್ನಅಪೇಕ್ಷೆ’.

ತನ್ನ ಹೋರಾಟದ ಹಾದಿಯ ಬಗೆಗೆ ಬಾಪುಗೆ ಬಲವಾದ ನಂಬಿಕೆ. ತನ್ನ ಜೊತೆ ಯಾರಾದರೂ ಬರಲಿ ಅಥವಾ ಬರದಿರಲಿ ತಾನು ಒಬ್ಬಂಟಿಯಾಗಿ ಸಾಗುವ ಪ್ರಮಾಣ ಮಾಡಿದ್ದಾರೆ. ಈ ಪ್ರಮಾಣವನ್ನು ಮತ್ತೆಮತ್ತೆ ನೆನಪಿಸಿ ಕೊಳ್ಳವುದುಂಟು. ‘ನನಗೆ ಈ ದಾರಿಯಲ್ಲಿ ಮುಂದೆ ಸಾಗುವುದಲ್ಲದೇ ಹಿಂತಿರುಗುವುದೆಂಬುದಿಲ್ಲ. ವಿಫಲನಾಗಿ ಆಶ್ರಮಕ್ಕೆ ಹಿಂದಿರುಗುವುದಕ್ಕಿಂತ ನಾನು ನಾಯಿಯ ಸಾವು ಸತ್ತೇನು; ಸತ್ತ ನನ್ನ ಮೂಳೆಗಳನ್ನು ನಾಯಿಗಳು ನೆಕ್ಕುತ್ತಿರಲಿ’ ಬಹುಶಃ ತಮ್ಮ ಬರಹಗಳಲ್ಲಿ ಬಾಪು ಬಳಸಿದ ಅತ್ಯಂತ ಹಿಂಸ್ರಕ ಸಾಲು ಇದೇ ಇರಬಹುದೇನೊ. ಈ ಹಿಂಸ್ರಕ ಸಾಲನ್ನು ಬಳಸಿದ್ದು ಕೂಡ ತನ್ನ ಸಂದರ್ಭದಲ್ಲಿ.  

ಮೊನ್ನೆ ಜನೆವರಿ ಮೂವತ್ತರಂದು ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ರಾಜಮೋಹನ ಗಾಂಧಿ ಧಾರವಾಡದಲ್ಲಿದ್ದರು. ಜಿ.ಎನ್.ದೇವಿ ಮತ್ತು ರಾಜೇಂದ್ರ ಚೆನ್ನಿ ಏರ್ಪಡಿಸಿದ ದಕ್ಷಿಣಾಯಣದ ಸಂವಾದದಲ್ಲಿ ಭಾಗವಹಿಸಲು ಮಡದಿ ಉಷಾ ಗಾಂಧಿ ಜೊತೆ ಬಂದಿದ್ದರು. ಜನೆವರಿ ಮೂವತ್ತು ಚಾರಿತ್ರಿಕ ದುಃಖದ ದಿನ. ಮಹಾತ್ಮ ಗಾಂಧೀಜಿಯನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ ದಿನ. ಹುತಾತ್ಮ ದಿನ ಕೂಡಾ ಹೌದು. ಅದೇ ದಿನ ಹಿರೇಮಲ್ಲೂರು ಈಶ್ವರನ್ ಕಾಲೇಜು ತನ್ನ ನೂರಾರು ವಿದ್ಯಾರ್ಥಿಗಳೊಂದಿಗೆ ಅವರನ್ನು ಬರಮಾಡಿಕೊಂಡಿತು. ರಾತ್ರಿ ಇಕ್ಕೆಲಗಳಲ್ಲಿ ನೂರಾರು ಮೊಂಬತ್ತಿಯ ಬೆಳಕಿನೊಳಗೆ ರಾಜಮೋಹನ ಗಾಂಧಿ ಮೌನವಾಗಿ ನಡೆದು ಬರುತ್ತಿದ್ದರು. ವಿಚಿತ್ರವೆಂದರೆ ಅವರು ನಡೆದು ಬಂದ ಹಾದಿಯ ಕೂಗಳತೆಯಲ್ಲಿಯೆ ಹತ್ಯೆಯಾದ ಎಂ.ಎಂ.ಕಲಬುರ್ಗಿಯವರ ಮನೆಯಿತ್ತು. ಮಹಾತ್ಮ ಗಾಂಧೀಜಿ ಕೊಲೆಯಾದ ದಿನ ಎಂ.ಎಂ.ಕಲಬುರ್ಗಿಯವರು ಕೊಲೆಯಾದ ಊರಿನಲ್ಲಿ ರಾಜಮೋಹನ ಗಾಂಧಿ ಹೆಜ್ಜೆ ಹಾಕುತ್ತಿದ್ದರು. 

ಒಳಗೆ ಪುಟ್ಟ ಸಭಾಂಗಣದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಅವರು ಮಾತಿಗೆ ನಿಂತರು. ಗಾಂಧೀಜಿ ಕೊಲೆಯಾದ ದಿನ ತಾನೇನು ಮಾಡುತ್ತಿದ್ದೆ ಅಂತ ನೆನಪಿಸಿಕೊಂಡರು. ತುಂಬಾ ಸಣ್ಣ ವಯಸ್ಸು. ಶಾಲೆಯಲ್ಲಿ ಕ್ರೀಡಾ ಸ್ಪರ್ಧೆಗಳು. ಎತ್ತರದ ದೇಹ ಉದ್ದನೆಯ ಕಾಲುಗಳ ತನಗೆ ಪ್ರಶಸ್ತಿ ಬರುವುದು ಖಚಿತವೆಂದು ಭಾವಿಸಿದ್ದರು. ಆದರೆ ಕೆಲ ಹೊತ್ತಿನಲ್ಲೆ ಯಾರೊ ಬಂದು ಅವರನ್ನು ಕರೆದುಕೊಂಡು ಹೊರಟರು. ದಾರಿಯಲ್ಲಿ ಗಾಂಧೀಜಿ ಅವರಿಗೆ ಗುಂಡು ಹೊಡೆದ ಮಾತು ಕಿವಿಗೆ ಬಿತ್ತು. ಇದೆಲ್ಲ ಏನೆಂದು ಅರಿಯದ ವಯಸ್ಸು. ತಂದೆ ದೇವದಾಸ ಗಾಂಧಿ ಜೊತೆ ಗಾಂಧೀಜಿಯವರ ದೇಹ ಇರುವಲ್ಲಿಗೆ ಬಂದರು. ನೋಡುತ್ತಾರೆ ಗಾಂಧೀಜಿಯವರ ಸುತ್ತಾ ನೆಹರು, ರಾಜಾಜಿ, ಪಟೇಲ್ ಮತ್ತು ಹಲವಾರು ಜನ ಸೇರಿದ್ದಾರೆ. ಗಾಂಧೀಜಿ ದೇಹದ ಮೇಲೆ ಹೂವಿನ ಹಾರಗಳಿವೆ. ಬಹುಶ: ಗಾಂಧೀಜಿ ಮಲಗಿರಬೇಕು ಇನ್ನೇನು ಕೆಲವೇ ಕ್ಷಣಗಳಲ್ಲಿ ಎದ್ದು ನಡೆಯುತ್ತಾರೆ ಅಂತಲೇ ನಂಬಿದ್ದರು. ಆದರೆ ಹಾಗೆ ಆಗಲೇ ಇಲ್ಲ. ಅವರು ಮಲಗಿರುವ ಗಾಂಧೀಜಿಯನ್ನು ಕಂಡದ್ದೆ ಕಡಿಮೆ. ಓದುತ್ತಲೊ, ಬರೆಯುತ್ತಲೊ, ಭಾಷಣ ಮಾಡುತ್ತಲೊ, ಮಾತುಗಳನ್ನು ಆಲಿಸುತ್ತಲೊ, ನಡೆಯುತ್ತಲೊ, ಕಸಗುಡಿಸುತ್ತಲೊ ಇರುವ ಗಾಂಧೀಜಿ ಹೀಗೆ ನಿಸ್ತೇಜರಾಗಿ ಮಲಗಿರುವ ಚಿತ್ರ ಅವರನ್ನು ಗಲಿಬಿಲಿಗೊಳಿಸಿತ್ತು. ಹಲವಾರು ವ?ಗಳು ಕಳೆದ ಮೇಲೆ ಗಾಂಧೀಜಿ ನಡೆದ ದಾರಿಯಲ್ಲಿ ತಾನು ನಡೆಯಬೇಕು ಅನ್ನುವ ನಿರ್ಧಾರ ಮೊಳೆಯಿತು. ಕೈಲಾದಷ್ಟು ನಡೆಯುತ್ತಾ ಬರುತ್ತಿರುವೆ ಅಂದರು. ನಾನಷ್ಟೆ ಅಲ್ಲ ಜಗತ್ತಿನಾದ್ಯಂತ ಎಷ್ಟೆಲ್ಲ ಜನ ಅವರ ದಾರಿಯಲ್ಲಿ ಸಾಗುತ್ತಿದ್ದಾರೆ. ನೋಡಿ ಅಂತ ಮದ್ಯನಿರೋಧಕ್ಕಾಗಿ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಕಡೆ ಬೊಟ್ಟು ಮಾಡಿದರು. ಗಾಂಧೀಜಿ ಕುಟುಂಬವೆಂದರೆ ನಾವಷ್ಟೆ ಅಲ್ಲ. ಸತ್ಯ ನುಡಿಯುವ, ಸರಳವಾಗಿ ಬದುಕುವ, ಅಸಂಗ್ರಹ ಗುಣವಿರುವ, ಅಹಿಂಸೆಯಲ್ಲಿ ನಂಬಿಕೆಯಿಟ್ಟಿರುವವರೆಲ್ಲರೂ ಗಾಂಧಿ ಕುಟುಂಬದವರೆ ಅಂತ ಒಂದು ಕ್ಷಣ ಮೌನವಾದರು. 

ಮತ್ತೆ ಅವರ ಮಾತು ಮುಂದುವರೆಯಿತು; ಅಲ್ಲಿ ಸ್ವರ್ಗದಲ್ಲಿ ಗಾಂಧೀಜಿ ಸ್ವಲ್ಪ ಹೆಮ್ಮೆ ಪಡುತ್ತಿರಬೇಕೆನೊ. ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಇವರ ಸಾಲಿನಲ್ಲಿ ನಿಂತುಕೊಳ್ಳುವ ಭಾಗ್ಯ ನನ್ನದಾಯಿತಲ್ಲ ಎಂದು. ಸತ್ಯಕ್ಕಾಗಿ, ನ್ಯಾಯಕ್ಕಾಗಿ ಮಡಿದವರ ಸಾಲಿನಲ್ಲಿ ಗಾಂಧೀಜಿ. ರಾಜಮೋಹನ ಗಾಂಧಿ ಮತ್ತೆ ಮೌನದ ಚಿಪ್ಪಿನಲ್ಲಿ ಸೇರಿಕೊಂಡರು. ಅವರ ಮಾತು ಆಲಿಸುತ್ತಿದ್ದವರ ಕಣ್ಣಾಲಿಗಳು ತುಂಬಿಕೊಂಡವು. ಒಮ್ಮೆ ಗಾಂಧೀಜಿ ಮುಸ್ಲಿಂರ ಸಭೆಯಲ್ಲಿ ಹೇಳಿದರಂತೆ; ನೀವು ಪ್ರಾರ್ಥಿಸಿ, ನನ್ನನ್ನು ಯಾರಾದರೂ ಹತ್ಯೆಗೈದರೆ ಆ ಹತ್ಯೆಗಾರರನ್ನು ನಾನು ಕ್ಷಮಿಸಲೆಂದು ಪ್ರಾರ್ಥಿಸಿ. ನೀವು ಈ ಮುದುಕನಿಗೆ ಸಲ್ಲಿಸುವ ಬಹುದೊಡ್ಡ ಗೌರವವಿದು ಎಂದು ಭಾವಿಸುವೆ…. ಕಣ್ಣಾಲಿಗಳನ್ನು ತಡೆಯುವುದು ಎಷ್ಟುಕಷ್ಟ. 

ಗಾಂಧೀಜಿ ಹತ್ಯೆಯಾದಾಗ ಅಂಬೇಡ್ಕರ್ ನೊಂದುಕೊಂಡರು. ಕಣ್ಣೀರು ಹಾಕಿದರು. ಮತ್ತವರು ಗಾಂಧೀಜಿಯವರ ಕಟುವಿಮರ್ಶಕರಾಗಿದ್ದರು. ಇಬ್ಬರ ಮನಸ್ಸಿನಲ್ಲೂ ಜಿನುಗುತ್ತಿದ್ದ ಪ್ರ್ರೀತಿ ಎಂಥದ್ದು? ಪ್ರೀತಿಯ ಇಂಥ ಜಿನುಗುವಿಕೆ ಸಾಧ್ಯವಾದದ್ದು ಹೇಗೆ? ಅಂತ ಸದಾ ಯೋಚಿಸುವೆ. ನನ್ನ ಮನಸ್ಸು ಆರ್ದ್ರಗೊಳ್ಳುತ್ತದೆ. ಭಿನ್ನಮತಗಳ ಜೊತೆಗೆ ಸಹಬಾಳ್ವೆ, ಸಹಅಸ್ತಿತ್ವ, ಸಹಗೌರವ ಕಲಿತೆ. ಗಾಂಧೀಜಿ ಅವರಿಗೆ ಪ್ರಾರ್ಥನೆ ಅಂದರೆ ಇಷ್ಟ. ಅವರ ಪ್ರಾರ್ಥನೆಯಲ್ಲಿ ಗೀತೆ, ಕುರಾನು, ಗುರುಬಾಣಿ, ಕಬೀರನ ದೋಹೆ ಎಲ್ಲವೂ ಇರುತಿತ್ತು. 

ರಾಜಮೋಹನ ಗಾಂಧಿ ಮತ್ತೆ ಬಾಲ್ಯಕ್ಕೆ ಜಾರಿದರು; ಚಿಕ್ಕವನಾಗಿದ್ದಾಗ ಗಾಂಧೀಜಿಯನ್ನು ನಮಿಸಲು ಬಾಗುತ್ತಿದ್ದೆ. ಯಾರೇ ಆಗಲಿ ಕಾಲಿಗೆ ಬೀಳುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ನಾನು ಕಾಲಿಗೆ ಬಿದ್ದರೆ ಬೆನ್ನಿನ ಮೇಲೆ ಜೋರಾಗಿ ತಟ್ಟುತ್ತಿದ್ದರು. ಆ ಪೆಟ್ಟು ನನಗೀಗಲೂ ನೆನಪಿದೆ. ವಿಚಿತ್ರವೆಂದರೆ ಹಕ್ಕಿಯಂತೆ ನಿದ್ದೆ ಮಾಡುತ್ತಿದ್ದ, ಅತ್ಯಂತ ಕಡಿಮೆ ಉಣ್ಣುತ್ತಿದ್ದ, ತೆಳ್ಳಗೆ ಕಡ್ಡಿಯಂತಿದ್ದ ಈ ಮುದುಕನ ಅಂಗೈಯಲ್ಲಿ ಇಷ್ಟು ಶಕ್ತಿ ಹೇಗೆ ಅಂತ ನನಗೆ ಅಚ್ಚರಿ. ನಾನೊಮ್ಮೆ ಹೊಸ ಕನ್ನಡಕ ಧರಿಸಿದ್ದೆ. ಗಾಂಧೀಜಿ ಹತ್ತಿರ ಕರೆದರು. ಯಾಕೆ ಈ ಹೊಸ ಕನ್ನಡಕ? ಅಂದರು. ನನಗೆ ಕಣ್ಣಿನ ಸಮಸ್ಯೆಯಿದೆ ಎಂಬುದು ನಿಮಗೆ ಗೊತ್ತಿಲ್ಲವೆ? ಸ್ವಲ್ಪ ಸಿಟ್ಟಿನಿಂದಲೇ ನುಡಿದೆ. ಅದಕ್ಕೆ ಗ್ಲಾಸು ಬದಲಿಸಿದರೆ ಸಾಕಿತ್ತು, ಫ್ರೇಮು ಬದಲಿಸುವ ಅಗತ್ಯವೇನಿತ್ತು? ಫ್ರೇಮಿನ ದುಡ್ಡು ವ್ಯರ್ಥ ಮಾಡುವುದು ತಪ್ಪಲ್ಲವೇ? ಅಂದರು. ಸಂಗ್ರಹ ಗುಣ ಮತ್ತು ದುಂದುವೆಚ್ಚ ಅವರಿಗೆ ಇಷ್ಟವಾಗದ ಸಂಗತಿಗಳು. ಸಣ್ಣ ಸಣ್ಣ ವಿಷಯಗಳಲ್ಲೂ ಅವರ ಲೆಕ್ಕಾಚಾರವಿರುತ್ತಿತ್ತು. ಅನಿವಾರ್ಯವಲ್ಲದ ಖರ್ಚುಗಳು ಅನೈತಿಕ ಎಂಬ ಭಾವ ಅವರದು. ನಾನು ದೊಡ್ಡವನಾಗುತ್ತ ಬಂದಂತೆ ಇದೆಲ್ಲ ಎಷ್ಟು ನಿಜ ಅಂತ ಅನ್ನಿಸಿತು. ದೇಶಕ್ಕೆ ಅನಗತ್ಯ ಹೊರೆಯಾಗುವ ಯೋಜನೆಗಳೆಲ್ಲ ಅನೈತಿಕ. ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವ ಯೋಜನೆಗಳೆ ನಮ್ಮ ಆದ್ಯತೆಯಾಗಬೇಕು. ಇಲ್ಲವಾದರೆ ದೇಶ ಸಾಲದ ಹೊರೆಯಲ್ಲಿ ನಲುಗುತ್ತದೆ. ಇದು ಕೇವಲ ನಮ್ಮ ಪ್ರಶ್ನೆಯಲ್ಲ. ಭಾರತದ ಮುಂಬರುವ ಪೀಳಿಗೆಯ ಪ್ರಶ್ನೆಯೂ ಹೌದು. ನಮ್ಮ ಹಿರಿಯರ ತಲೆಯ ಮೇಲಿರುವ ಸಾಲದ ಹೊರೆ ಇಳಿಸಬೇಕೆ ಹೊರತು ಬರುವ ಪೀಳಿಗೆಯ ಮೇಲೆ ಸಾಲದ ಹೊರೆ ಹೊರಿಸಬಾರದು. ಹಾಗೇ ಮಾಡುವ ಯಾವ ನೈತಿಕ ಹಕ್ಕೂ ನಮಗಿಲ್ಲ. ರಾಜಮೋಹನ್ ಗಾಂಧಿ ವಿಷಾದದಲ್ಲಿ ಮುಳುಗಿಹೋದರು. 

ಗಲ್ಲದ ಮೇಲೆ ಕೈಯಿಟ್ಟು ಮತ್ತೆ ಮಾತಿಗೆ ತೊಡಗಿದರು; ಗಾಂಧೀಜಿ ಸಿದ್ಧಾಂತಗಳನ್ನು ಕಂಡುಹಿಡಿಯಲಿಲ್ಲ. ಸಾಮಾನ್ಯ ಜನರ ಆಳದಲ್ಲಿರುವ ಒಳ್ಳೆಯತನ, ಜೀವನಮೌಲ್ಯಗಳನ್ನು ಹೆಕ್ಕಿದರು. ಅವುಗಳನ್ನು ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಂಡರು. ಹೀಗೆ ಅಳವಡಿಸಿಕೊಳ್ಳುವ ಸುಖ-ದು:ಖಗಳನ್ನು ಬರಹದಲ್ಲಿ ಹಂಚಿಕೊಂಡರು. ಎಲ್ಲಾ ಆಸೆಗಳನ್ನು ಕಳೆದುಕೊಂಡಿದ್ದ ಈ ಮುದುಕ ಆರೋಗ್ಯಕಾರಿ ಸಮಾಜಕ್ಕಾಗಿ ಸುಪ್ತ ಕನಸುಗಳನ್ನು ಕಟ್ಟಿಕೊಂಡಿದ್ದ. ಅಂಥ ಕನಸುಗಳ ಸಾಕಾರಕ್ಕಾಗಿ ಹತ್ತು ಹಲವು ದಾರಿಗಳನ್ನು ಹುಡುಕುತ್ತಿದ್ದ ಮತ್ತು ಚಡಪಡಿಸುತ್ತಿದ್ದ. ಆದರೆ ವೇದಿಕೆಗಳಲ್ಲಿ, ಗುಂಪು ಚರ್ಚೆಗಳಲ್ಲಿ ತನ್ನ ಚಡಪಡಿಕೆ ಅದುಮಿಟ್ಟುಕೊಂಡು ನಿರಾಳವಾಗಿ ಕೂಡುತ್ತಿದ್ದ, ಮಾತಾಡುತ್ತಿದ್ದ. ಆಳದಲ್ಲಿ ಚಡಪಡಿಕೆಯೇ ಅವರ ಸ್ಥಾಯಿಗುಣವಾಗಿತ್ತು. ಅವರನ್ನು ಹತ್ತಿರದಿಂದ ನೋಡಿದ್ದರಿಂದ, ಅವರ ಬರಹಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಓದಿದ್ದರಿಂದ ಆ ಚಡಪಡಿಕೆ ನನ್ನೆದೆಗೆ ಸದಾ ನಾಟುತ್ತಲೇ ಇದೆ. ಈ ದಣಿವರಿಯದ ಮುದುಕನನ್ನು ಬಿಟ್ಟರೆ ನಾನಂತೂ ನಿರ್ಜೀವವಾಗಿ ಬಿಡುತ್ತೇನೆ. ರಾಜಮೋಹನ ಗಾಂಧಿ ಹೀಗೆ ಹೇಳಿ ನಮಸ್ಕರಿಸಿ ಖುರ್ಚಿಯ ಮೇಲೆ ಕ್ಷಣ ಕಣ್ಣುಮುಚ್ಚಿ ಕುಳಿತರು. ಏನೊ ಮಾತಾಡಲೆಂಬಂತೆ ಎದ್ದು ಬಂದ ಜಿ.ಎನ್.ದೇವಿ ಮೌನವಾಗಿ ಎಲ್ಲರಿಗೂ ನಮಸ್ಕರಿಸಿ ಎಲ್ಲ ದಿಕ್ಕಿಗೆ ತಿರುಗಿ ಇನ್ನು ಮಾತಿನ ಅಗತ್ಯವಿಲ್ಲ ಅಂತ ಸನ್ನೆಯಲ್ಲೆ ಸೂಚಿಸಿ ತಾವೂ ಕುಳಿತರು. ಗಾಂಧೀಜಿಗೆ ಇಷ್ಟವಾಗಿದ್ದ ‘ವೈಷ್ಣವ ಜನತೊ ತೇನೇ ಕಹಿಯೆ ಜೆ’ ಪ್ರಾರ್ಥನೆ ಪುಟ್ಟ ಸಭಾಂಗಣದಲ್ಲಿ ಅಲೆಅಲೆಯಾಗಿ ತೇಲಿಬರುತ್ತಿತ್ತು. 

***

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: