ವಿಜಯಕಾಂತ ಪಾಟೀಲ
ಗಾಂಧೀಜಿಯನ್ನು ಯಾರು ಹೇಗೆ ಪರಿಭಾವಿಸಿದರೂ, ಟೀಕಿಸಿದರೂ, ಅವಹೇಳನ ಮಾಡಿದರೂ ಇಂಡಿಯಾದಂತಹ ದೇಶದ ಮಟ್ಟಿಗಂತೂ ಅವರೊಂದು ಅನಿವಾರ್ಯ ಸಿದ್ಧಾಂತ-ತತ್ವ-ಸಾಂಗತ್ಯ ಎಂಬುದನ್ನಂತೂ ಬಹುಪಾಲು ಮಂದಿ ಒಪ್ಪಿಯೇ ಒಪ್ಪುತ್ತಾರೆ. ಆಗೂ ಈಗೂ ಮುಂದೂ ಅವರೆಂಬ ಅವರು’ ನಮಗೆ ಬೇಕೇ ಬೇಕು. ಬದಲಾದ ಕಾಲಕ್ಕೆ ಗಾಂಧಿಪ್ರಣೀತ ಚಿಂತನೆಗಳು ಒಮ್ಮೊಮ್ಮೆ ಅವಾಸ್ತವಿಕ ಅನ್ನಿಸಿದರೂ ಅವರ ಚಿಂತನೆಯ ಹಾದಿಯೊಳು ನಡೆದಾಗ ಅವರ ವಿಚಾರಗಳು ಎಂದಿಗೂ ನಮ್ಮ ಸದೃಢ ನಡೆಗೆ ಪೂರಕವೇ ಎನ್ನುವುದನ್ನು ಅಲ್ಲಗಳೆಯ ಲಾಗುವುದಿಲ್ಲ. ಅವರ ರಾಜಕೀಯ, ಸಾಮಾಜಿಕ, ಧಾರ್ಮಿಕ ಸೇರಿದಂತೆ ಆರ್ಥಿಕ ವಿಚಾರಗಳಲ್ಲೂ ಕೂಡ ನಮ್ಮತನದ ಅಸ್ತಿತ್ವ ಕಾಪಾಡಿಕೊಳ್ಳುವ, ನಮ್ಮವರನ್ನು ಸ್ವಾವಲಂಬಿಗಳನ್ನಾಗಿಸುವ ಮಹತ್ ತುಡಿತವೇ ಪ್ರಧಾನವಾಗಿದ್ದನ್ನು ನಾವು ಕಾಣುತ್ತೇವೆ ಮತ್ತು ಕಂಡಿದ್ದೇವೆ. ಹೀಗಾಗಿ ಗಾಂಧಿಯನ್ನು ರಾಜಕೀಯ ನಿಪುಣ ಎನ್ನಬೇಕೋ, ಸಮಾಜಮುಖಿ ಹಿತಚಿಂತಕ ಎನ್ನಬೇಕೋ, ಭಾರತದ ಧರ್ಮ ರಕ್ಷಕ ಎನ್ನಬೇಕೋ.. ನಾವು ಹೇಗೆ ಅವರನ್ನು ಭಾವಿಸುತ್ತೇವೆಯೋ ಹಾಗೇ ಈ ‘ಗಾಂಧೀ’ ಎಂಬ ತತ್ವನಿಷ್ಠ ಶಕ್ತಿಯೊಂದು ನಮ್ಮೊಳಗೆ ಅರಿವಿಲ್ಲದಂತೆ ಪ್ರವಹಿಸತೊಡಗುತ್ತದೆ. ಒಂದು ರೀತಿಯಲ್ಲಿ ಗಾಂಧೀ ನಮ್ಮೆಲ್ಲರ ಪಾಲಿಗೆ ನಿರಂತರವಾಗಿ ಅಂಟಿಕೊಂಡಿರುವ ಒಂದು ಸದ್ಗುಣವೂ ಹೌದು; ಹಾಗೇ ನಮ್ಮೊಳಗಿನ ಹರಿವ ಜೀವತೊರೆಯೂ ಹೌದು. ಈಗ ಸದ್ಯದಲ್ಲಿ ಒಬ್ಬ ಎಕನಾಮಿಸ್ಟ್ ಅರ್ಥಾತ್ ಅರ್ಥಶಾಸ್ತ್ರಜ್ಞನಾಗಿ ನಮ್ಮೆದುರು ಗಾಂಧೀ ಹೇಗೆ ನಿಂತಿದ್ದಾರೆ ಮತ್ತು ನಮ್ಮನ್ನು ಹೇಗೆ ಪ್ರಭಾವಿಸುತ್ತಾರೆ ಎಂಬುದು ಈ ಬರಹದ ಉದ್ದೇಶ.
ಮಹಾತ್ಮಾ ಗಾಂಧೀಜಿಯವರು ಸ್ಮಿತ್, ರಿಕಾರ್ಡೋ, ಕೇನ್ಸ್ ಅವರಂಥ ಶುದ್ಧ ಹಾಗೂ ವ್ಯವಸ್ಥಿತವಾದ ಆರ್ಥಿಕ ಚಿಂತಕರಲ್ಲದಿದ್ದರೂ ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮದೇ ಆದಂತಹ, ವಾಸ್ತವಿಕತೆಗೆ ಪೂರಕವಾದಂತಹ ಇಲ್ಲಿಯ ಜನಜೀವನ – ಪ್ರದೇಶಕ್ಕನುಗುಣವಾಗಿರುವಂತಹ ಆರ್ಥಿಕ ವಿಚಾರಗಳನ್ನೂ ಧೋರಣೆಗಳನ್ನೂ ಮೈಗೂಡಿಸಿಕೊಂಡಿರುವ ಧೀಮಂತ ವ್ಯಕ್ತಿ, ಭಾರತದ ಅರ್ಥವ್ಯವಸ್ಥೆಯ ಬಗ್ಗೆ ಅವರಿಗಿದ್ದಷ್ಟು ಕಾಳಜಿ ಕೆಲವೇ ಜನರಿಗಿತ್ತೆಂದು ಹೇಳಿದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಗಾಂಧೀಜಿಯವರ ವಿಚಾರಗಳನ್ನು ಗಮನಿಸಿದಾಗ ಭಾರತದ ಪ್ರಮುಖ ಸಮಸ್ಯೆಗಳಾದ ಬಡತನ, ನಿರುದ್ಯೋಗ ಮುಂತಾದವುಗಳ ನಿವಾರಣೆಗಾಗಿ ಮತ್ತು ಸರ್ವಜನರ ಏಳಿಗೆಯ ಸಲುವಾಗಿ ಅವರ ನಿಲುವುಗಳು ಯಾವುದೇ ಅರ್ಥಶಾಸ್ತ್ರ ಪ್ರವೀಣನಿಗಿಂತಲೂ ಭಿನ್ನ ಹಾಗೂ ಶೀಘ್ರ ಪರಿಹಾರಕಾರಕವಾಗಿದ್ದುದರಲ್ಲಿ ಸಂಶಯ ವಿರಲಿಲ್ಲ. ಗಾಂಧಿಯ ಅಂತಹ ಕೆಲವು ಆರ್ಥಿಕ ವಿಚಾರಗಳ ಸಂಕ್ಷಿಪ್ತ ಭಾವನೆಗಳನ್ನು ಕೆದಕಿ ನೋಡಿದಾಗ ಅವರ ಅಂತರ್ಯದ ಸುಲಭ ಪರಿಚಯ ಆಗುತ್ತದೆ.
ಗಾಂಧೀಜಿಯವರ ಅಭಿಪ್ರಾಯದಂತೆ, “ನಿಜವಾದ ಅರ್ಥಶಾಸ್ತ್ರ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತದೆ. ಮತ್ತು ಅದು ಎಲ್ಲರ ಹಿತವನ್ನು ವೃದ್ಧಿಸುತ್ತದೆ. ಅಂತೆಯೇ ಒಬ್ಬ ವ್ಯಕ್ತಿಯ ಅಥವಾ ರಾಷ್ಟ್ರದ ನೈತಿಕ ಹಿತವನ್ನು ನೋಯಿಸುವ ಆರ್ಥಶಾಸ್ತ್ರ ಅನೈತಿಕವಾದದ್ದು. ಹಾಗೂ ಪಾಪಕರ”. ಈ ಹಿನ್ನೆಲೆಯಲ್ಲಿಯೇ ಗಾಂಧಿ ಆರ್ಥಿಕ ವಿಚಾರಧಾರೆಯ ಒಂದಷ್ಟು ಎಳೆಗಳನ್ನು ಎಳೆದು ತಂದದ್ದು ಹೀಗಿದೆ:
ಖಾದಿ, ಗ್ರಾಮೀಣ ಸೌರವ್ಯೂಹದ ಸೂರ್ಯ
‘ಖಾದಿ ಗ್ರಾಮೀಣ ಸೌರವ್ಯೂಹದ ಸೂರ್ಯ’ನಿದ್ದಂತೆ. ಈ ಉದ್ಯಮದಿಂದ ಪಡೆಯುವ ಬೆಳಕು ಮತ್ತು ಇತರ ಸೌಲಭ್ಯಗಳಿಗೆ ಪ್ರತಿಯಾಗಿ ಖಾದಿ ಉದ್ಯಮಕ್ಕೆ ಬೆಂಬಲವಾಗಿ ನಿಂತಿರುವ ಉದ್ಯಮಗಳು ಈ ಸೌರವ್ಯೂಹದ ಉಪಗ್ರಹಗಳು, ಅವು ಖಾದಿಯನ್ನು ಕುರಿತ ಈ ವಿಶ್ಲೇಷಣೆಯು ಖಾದಿಯ ಪ್ರಾಮುಖ್ಯತೆಯನ್ನೂ ಅನಿವಾರ್ಯತೆಯನ್ನೂ ಬಿಂಬಿಸುತ್ತದೆ. ಖಾದಿಯ ಕುರಿತು ಅವರ ಇನ್ನೊಂದು ಅಭಿಪ್ರಾಯವೇನೆಂದರೆ, ಜನರು ನೂಲೇ ಹಣವೆಂಬ ಒಂದು ಕ್ರಮವನ್ನು ಒಪ್ಪಿ ಕೊಂಡರೆ, ನೂಲು ಕೋಟ್ಯಾಂತರ ರೂಪಾಯಿಗಳ ಸರಕನ್ನು ಕೊಳ್ಳುವ ಒಂದು ಸಾಧನವಾಗುತ್ತದೆ. ಭೌತಿಕ ಶ್ರಮ ಒಂದು ಸಂಪತ್ತಾಗಿ, ಇದು ಬಂಡವಾಳಸ್ಥರ ವಿರುದ್ಧ ಸುಲಭವಾಗಿ ಸ್ಪರ್ಧಿಸುತ್ತದೆ. ಅಂತೆಯೇ ಅವರ ದೃಷ್ಟಿಯಲ್ಲಿ ಚರಕ ‘ಆಹಿಂಸ ಪ್ರತೀಕ’ವಾಗಿತ್ತು ಮತ್ತು “ನೂಲುವುದರಿಂದಲೇ ಸ್ವರಾಜ್ಯ” ಅವರ ಮಂತ್ರವಾಗಿತ್ತು. “ಭಾರತದಂತಹ ವಿಶಾಲ ದೇಶಕ್ಕೆ, ಜನಸಂಖ್ಯೆಯ ಬಾಹುಳ್ಯವುಳ್ಳಂತಹ ರಾಷ್ಟ್ರಕ್ಕೆ ಗ್ರಾಮೀಣ ಸ್ವಯಂತೃಪ್ತತೆಯಿಲ್ಲದೇ ಮುಕ್ತಿಯಿಲ್ಲ’ ಎನ್ನುವ ಅವರ ಖಚಿತವಾದ ನಂಬಿಕೆಯು ಸ್ವಾವಲಂಬನೆಯ ಕುರಿತಾದ ಅವರ ಉತ್ಕಟವಾದಂತಹ ಮನದಿಂಗಿತದ ಪ್ರತಿರೂಪವಾಗಿಯೇ ಇದೆ.
ಸಹಕಾರೀ ಬೇಸಾಯ ಮತ್ತು ಸಮತಾ ತತ್ವ
ಒಬ್ಬರು ಪರರನ್ನು ಶೋಷಿಸಲಾಗದಂತಹ ಒಂದು ಗ್ರಾಮೀಣ ವ್ಯವಸ್ಥೆಯನ್ನು ಗಾಂಧೀಜಿ ಮನಗಂಡಿದ್ದರು. ಗ್ರಾಮೀಣ ವ್ಯವಸ್ಥೆ ವರ್ಗರಹಿತವಾಗಿರಬೇಕು. ಪ್ರತಿಯೊಂದು ಗ್ರಾಮವೂ ತನಗೆ ಬೇಕಾದುದೆಲ್ಲವನ್ನೂ ತಾನೇ ಉತ್ಪಾದಿಸಿಕೊಳ್ಳಬೇಕು. ಬೇರೆ ಗ್ರಾಮಗಳ ಮೇಲೆ ಅವಲಂಬವಾಗಬೇಕಾದರೂ ಅದು ಸಾಧ್ಯವಿದ್ದಷ್ಟು ಕಡಿಮೆ ಇರಬೇಕು. ಗಾಂಧೀ ನೆನಪಿಸಿದ್ದ ಗ್ರಾಮ ಅತ್ಯಂತ ಸಣ್ಣದೂ ಅಲ್ಲ. ತಾಲೂಕಿನಷ್ಟು ವಿಸ್ತಾರವೂ ಅಲ್ಲ. ಇವೆರಡರ ಮಧ್ಯದ್ದು. ಇಂತಹ ಗ್ರಾಮಗಳಲ್ಲಿ ಸಾಕಷ್ಟು ಗೃಹ ಕೈಗಾರಿಕೆಗಳಿರಬೇಕು. ಶಾಲೆ, ಸಭಾಭವನ, ಸಾಕಷ್ಟು ಗೋಸಂಪತ್ತು ಅವಶ್ಯ. ಸಾಧ್ಯವಿದ್ದಷ್ಟು ಎಲ್ಲ ಆರ್ಥಿಕ ಚಟುವಟಿಕೆಗಳು ಸಹಕಾರ ವ್ಯವಸ್ಥೆಯಲ್ಲಿ ನಡೆಯಬೇಕು. ಜಾತಿ ಪದ್ಧತಿ, ಅಸ್ಪೃಶ್ಯತೆಯನ್ನು ಗ್ರಾಮಜೀವನದಿಂದ ನಿರ್ಮೂಲನಗೊಳಿಸಬೇಕು. ಹೀಗೆಯೇ ಅವರ ಸಹಕಾರ ವಿಚಾರಕ್ಕೆ ಮೆರಗು ನೀಡುವ ಒಂದು ಸಾಮಾಜಿಕ ಸಮತಾ ತತ್ವವನ್ನು ಗಾಂಧೀ ರೂಪಿಸಿದ್ದರು. ‘ನಾವು ಸಹಕಾರಿ ಬೇಸಾಯವನ್ನು ಅಳವಡಿಸಿಕೊಳ್ಳದೇ ಕೃಷಿಯ ಲಾಭವನ್ನು ಸಮಗ್ರವಾಗಿ ಪಡೆಯುವುದು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ. ಗ್ರಾಮದ ನೂರಾರು ಕುಟುಂಬಗಳು ಒಟ್ಟಾಗಿ ಕೆಲಸ ಮಾಡುವುದು ಮತ್ತು ಅವರಿಗೆ ಬರುವ ಆದಾಯವನ್ನು ಹಂಚಿಕೊಳ್ಳುವುದು. ಇದು ಬಿಡಿ ಬಿಡಿಯಾಗಿ ಜಮೀನು ಬೇಸಾಯ ಮಾಡುವುದಕ್ಕಿಂತ ಉತ್ತಮವಲ್ಲವೇ? ಜಮೀನಿಗೆ ಅನ್ವಯವಾಗುವ ಈ ಮಾತು ಬಂಡವಾಳಕ್ಕೆ ಕೂಡ ಅನ್ವಯಿಸುತ್ತದೆ.’
ಉತ್ಪಾದನೆ ಮತ್ತು ವಿತರಣೆ
ವಿಶ್ವದ ಆರ್ಥಿಕ ಬಿಕ್ಕಟ್ಟಿಗೆ ಬೃಹತ್ ಪ್ರಮಾಣದ ಉತ್ಪಾದನೆಯೇ ಕಾರಣವೆಂಬುದು ಗಾಂಧೀಜಿ ಅಭಿಪ್ರಾಯವಾಗಿತ್ತು. ಅವರ ಮಾತುಗಳಲ್ಲಿ ಹೇಳುವುದಾದರೆ, ‘ಏಕಕಾಲದಲ್ಲಿ ದೊಡ್ಡ ಪ್ರಮಾಣದ ವಿತರಣೆಯಿಲ್ಲದೇ ನಡೆಯುವ ಬೃಹತ್ ಪ್ರಮಾಣದ ಉತ್ಪಾದನೆಯು ನಿಜವಾಗಿಯೂ ವಿಶ್ವವನ್ನು ದುರಂತಕ್ಕೀಡು ಮಾಡುತ್ತದೆ. ಬೃಹತ್ ಪ್ರಮಾಣದ ಉತ್ಪಾದನೆ ಅನುಭೋಗಿಯ ನೈಜ ಅಗತ್ಯತೆಯನ್ನು ಗಣನೆಗೆ ತೆಗೆದು ಕೊಳ್ಳುವುದೇ ಇಲ್ಲ. ಎಲ್ಲ ರಾಷ್ಟ್ರಗಳು ಈ ರೀತಿ ಬೃಹತ್ ಪ್ರಮಾಣದ ಉತ್ಪಾದನೆಗೆ ತೊಡಗಿದರೆ, ಅವುಗಳಿಗೆ ಬೇಕಾದ ವಿಶಾಲ ಮಾರುಕಟ್ಟೆ ಇರುವುದೇ ಇಲ್ಲ.
ಬಂಡವಾಳ ಶ್ರಮಿಕನ ಗುಲಾಮನಾಗಿರಬೇಕು
ಗಾಂಧಿಯವರ ಭಾವನೆಯಂತೆ, ಶ್ರಮವು ಎಲ್ಲ ವ್ಯಕ್ತಿಗಳಲ್ಲಿ ಒಗ್ಗಟ್ಟನ್ನು ಮೂಡಿಸುವ ಮತ್ತು ಎಲ್ಲ ಜನರ ಹಸಿವೆಯನ್ನು ಇಂಗಿಸುವ ಅತ್ಯಂತ ಪ್ರಬಲ ಸಾಧನ. ಅಂತೆಯೇ ಪ್ರತಿಯೊಬ್ಬನೂ ಶ್ರಮದ ಕೆಲಸವನ್ನು ಕೈಗೊಂಡರೆ, ಅರ್ಥ ವ್ಯವಸ್ಥೆಯಲ್ಲಿ ಸಮಾನತೆ ತನಗೆ ತಾನೇ ಏರ್ಪಾಡಾಗುತ್ತದೆ’ ಎಂಬುದು ಅವರ ನಂಬಿಕೆಯಾಗಿತ್ತು. ‘ಬಂಡವಾಳವು ಶ್ರಮದ ಅಥವಾ ಶ್ರಮಿಕನ ಗುಲಾಮನಾಗಿರಬೇಕೇ ಹೊರತು ಶ್ರಮದ ಒಡೆಯನಾಗಿರ ಬಾರದು.’ ಇದು ಅವರು ಕಂಡುಕೊಂಡ ಸತ್ಯವಾಗಿತ್ತು.
ಉದ್ಯೋಗ ಮತ್ತು ಯಾಂತ್ರೀಕರಣ
ಗ್ರಾಮೀಣ ವ್ಯವಸ್ಥೆಯಲ್ಲಿನ ಅಪೂರ್ಣ ಉದ್ಯೋಗ ಮತ್ತು ನಿರುದ್ಯೋಗಗಳನ್ನು ಹೋಗಲಾಡಿಸುವ ಏಕೈಕ ಮಾರ್ಗ ಗಾಂಧಿ ದೃಷ್ಟಿಯಲ್ಲಿ ಕೇವಲ ಖಾದಿ ಮತ್ತು ಗ್ರಾಮೀಣ ಉದ್ಯಮಗಳು. ಗಾಂಧಿಯವರಿಗೆ ಖಾದಿ ಮತ್ತು ಗ್ರಾಮೀಣ ಉದ್ಯಮ ಗಳೆರಡೂ ಆರ್ಥಿಕ ಸ್ವಾತಂತ್ರ್ಯದ ಕುರುಹುಗಳು. ಆದ್ದರಿಂದ ‘ರಾಷ್ಟ್ರಾದ್ಯಂತ ಉತ್ಪಾದನೆಯ ವಿಕೇಂದ್ರೀಕರಣವಾಗಬೇಕು. ಗೃಹ ಕೈಗಾರಿಕೆಗಳು ಮನೆಯೊಳಗೆ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಕೈಗಾರಿಕೆಗಳು ಗ್ರಾಮೀಣ ಪ್ರದೇಶದಲ್ಲಿರುವ ಕರಕೌಶಲ್ಯದ ಶ್ರೀಮಂತಿಕೆಯನ್ನು ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿವೆ ಎನ್ನುವುದನ್ನು ಮರೆಯಬಾರದು.’ ಎಂದು ಎಚ್ಚೆತ್ತುಕೊಳ್ಳುವ ಮಾರ್ಗವನ್ನು ಸೂಚಿಸಿದರು. ಎಲ್ಲ ಸಮರ್ಥ ಶರೀರಗಳಿಗೂ ಯಾಂತ್ರೀಕರಣದಿಂದ ಉದ್ಯೋಗ ಸಾಧ್ಯವಿಲ್ಲವೆನ್ನುವುದನ್ನು ಅವರು ಮನವರಿಕೆ ಮಾಡಿಕೊಂಡಿದ್ದರು. ‘ವಿದ್ಯುಚ್ಛಕ್ತಿ ಅಥವಾ ಅಣುಶಕ್ತಿಯನ್ನು ಬಳಸಿ ಎಲ್ಲರಿಗೂ ಉದ್ಯೋಗ ದೊರೆಯುವ ಔದ್ಯೋಗೀಕರಣ ನಡೆಯುವುದಾದರೆ ಅದಕ್ಕೆ ನನ್ನ ವಿರೋಧವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದರು.
ರಾಷ್ಟ್ರೀಯ ಯೋಜನೆ
‘ಯೋಜನೆ ಬಗ್ಗೆ ನನ್ನ ಭಾವನೆ ಪ್ರಸ್ತುತದಲ್ಲಿ ಪ್ರಚಲಿತವಿರುವ ವ್ಯವಸ್ಥೆಗಿಂತ ತುಂಬ ಭಿನ್ನವಾಗಿದೆ. ಯೋಜನೆ-ಔದ್ಯೋಗಿಕರಣದ ಹಾದಿಯಲ್ಲಿ ಮುಂದುವರೆಯುವುದು ನನಗೆ ಇಷ್ಟವಿಲ್ಲ. ನಮ್ಮ ಗ್ರಾಮಗಳು ಔದ್ಯೋಗಿಕ ರಣದ ಸೋಂಕನ್ನು ಹೊಂದಿರುವುದರಿಂದ ತಡೆಗಟ್ಟುವುದು ನನ್ನ ಉದ್ದೇಶ’. ಕೈಗಾರೀಕರಣ – ದೊಡ್ಡ ಪ್ರಮಾಣದ ಶೋಷಣೆಗೆ ಎಡೆಮಾಡಿಕೊಡುತ್ತೆನ್ನುವುದು ಗಾಂಧೀಜಿಯವರ ಅಭಿಪ್ರಾಯ ವಾಗಿತ್ತು. ಅವರ ಪ್ರಕಾರ, ‘ಬೃಹತ್ ಪ್ರಮಾಣದ ಔದ್ಯೋಗೀಕರಣ ಚುರುಕಾಗಿ ಅಥವಾ ಮಂದವಾಗಿ ಹಳ್ಳಿಗರನ್ನು ಶೋಷಿಸುತ್ತದೆ. ಏಕೆಂದರೆ ಔದ್ಯೋಗೀಕರಣವು ಸ್ಪರ್ಧೆ ಮತ್ತು ಮಾರುಕಟ್ಟೆಯ ಸಮಸ್ಯೆಗಳನ್ನು ತನ್ನ ಜೊತೆಯಲ್ಲೇ ತರುತ್ತದೆ. ಆದ್ದರಿಂದ ಹಳ್ಳಿಗಳು ಸ್ವಯಂತೃಪ್ತ ಉತ್ಪಾದನಾ ವಿಧಾನಗಳನ್ನು ಹೊಂದುವಂತೆ ಮಾಡಬೇಕು. ಗ್ರಾಮೀಣ ಉದ್ಯೋಗಗಳ ಸ್ವರೂಪವನ್ನು ಉಳಿಸಿಕೊಳ್ಳುವಂತಹ ಔದ್ಯೋಗೀಕರಣಕ್ಕೆ ನನ್ನ ಆಕ್ಷೇಪಣೆಯೇನೂ ಇಲ್ಲ. ಇವು ಅತ್ಯಾಧುನಿಕ ಯಂತ್ರಗಳನ್ನು ಬಳಸಿದರೂ ಅಡ್ಡಿಯಿಲ್ಲ. ಆದರೆ, ಇವು ಎಂದೂ ಶೋಷಣೆಯ ಸಾಧನವಾಗಬಾರದು’.
ಆರ್ಥಿಕ ಸಮಾನತೆಯ ಅಗತ್ಯ
ಗಾಂಧಿ ಅವರ ಪ್ರಕಾರ, ‘ಪ್ರತಿಯೊಬ್ಬರೂ ಸಮಾನ ಪ್ರಮಾಣದ ಸರಕುಗಳನ್ನು ಹೊಂದಿರು ವುದೇ ಆರ್ಥಿಕ ಸಮಾನತೆಯೆಂದು ಕಲ್ಪಿಸಿಕೊಳ್ಳಬಾರದು. ಪ್ರತಿಯೊಬ್ಬನೂ ಒಂದು ಸರಿಯಾದ ಮನೆ, ಊಟಕ್ಕೆ ಸಮತೋಲನ ಅಹಾರ, ಮೈ ಮುಚ್ಚಿಕೊಳ್ಳುವುದಕ್ಕಾಗಿ ಖಾದಿ, ಇದೇ ಆರ್ಥಿಕ ಸಮಾನತೆಯ ಅರ್ಥ. ಇಂದಿನ ಕ್ರೂರ ಆರ್ಥಿಕ ಅಸಮಾನತೆ ಯನ್ನು ಅಹಿಂಸಾತ್ಮಕ ವಿಧಾನದಿಂದ ಹೋಗಲಾಡಿಸುವುದೂ ಸಹ ಆರ್ಥಿಕ ಸಮಾನತೆಯ ಅಗತ್ಯ’
ಖಾಸಗಿ ಆಸ್ತಿ ಹಕ್ಕು ಮನ್ನಾ ಮಾಡಬೇಕು!
ಮಾನವನ ಪ್ರಗತಿಗೆ ಖಾಸಗಿ ಆಸ್ತಿ ಹಕ್ಕು ಅಗತ್ಯವಿಲ್ಲ ಎನ್ನುವುದು ಗಾಂಧೀಜಿಯ ಭಾವನೆ. ಇದಕ್ಕಾಗಿ ಎಲ್ಲ ಖಾಸಗಿ ಆಸ್ತಿ ಹಕ್ಕನ್ನು ಮನ್ನಾ ಮಾಡಬೇಕೆಂದು ಅವರ ಅಭಿಪ್ರಾಯ. ಆದರೆ, ಇದು ಒಂದು ಆದರ್ಶವೇ ಹೊರತು ವಾಸ್ತವವಲ್ಲ ಎನ್ನುವುದು ಅವರಿಗೆ ತಿಳಿಯದ ಸಂಗತಿಯೇನಲ್ಲ. ಆದ್ದರಿಂದ ಅವರು ಎಲ್ಲ ಖಾಸಗಿ ಆಸ್ತಿ ಹಕ್ಕನ್ನು ಟ್ರಸ್ಟಿನ ಸುಪರ್ದಿಯಲ್ಲಿಡಬೇಕೆಂದು ಸೂಚಿಸಿದರು.
ಜೀವನಾಧಾರ ಕೂಲಿ
ಅವರ ಅನಿಸಿಕೆಯಂತೆ, ‘ಶ್ರಮಕ್ಕೆ ಕನಿಷ್ಠ ಕೂಲಿ ಇರಲೇಬೇಕು; ಅದು ಜೀವನಾಧಾರ ಕೂಲಿ ಸಹ ಆಗಿರಬೇಕು. ಅಂತೆಯೇ, ‘ಯಾವುದಾದರೂ ಕಾರ್ಖಾನೆಯ ಶ್ರಮಿಕನಿಗೆ ಸಮತೋಲನ ಅಹಾರಕ್ಕೆ ಬೇಕಾದಷ್ಟು ಕೂಲಿಯನ್ನು ಕೊಡುವುದಕ್ಕಾಗದಿದ್ದರೆ ಅಂತಹ ಕಾರ್ಖಾನೆಯನ್ನು ಮುಚ್ಚಬೇಕು ಎಂಬುದು ಗಾಂಧೀಜಿಯ ವಿಚಾರವಾಗಿತ್ತು.
ಶ್ರಮವೇ ಹಣ
ಗಾಂಧೀಜಿ ದೃಷ್ಟಿಯಲ್ಲಿ ಹಣಕ್ಕೆ ತುಂಬಾ ಗೌಣವಾದ ಸ್ಥಾನ. ಶ್ರಮವೇ ಹಣ, ಶ್ರಮದಿಂದ ಉತ್ಪಾದಿತವಾಗುವ ವಸ್ತುವಿಗೆ ಪ್ರಮುಖ ಸ್ಥಾನ. ನೈತಿಕತೆ ಇಲ್ಲದ ಐಶ್ವರ್ಯಕ್ಕೆ ತಿರಸ್ಕಾರವಿರಬೇಕು ಎಂಬುದು ಕೂಡ ಅವರ ಉಗ್ರ ನಿಲುವಾಗಿತ್ತು.
ಹೀಗೇ ಹತ್ತು ಹಲವು ಸಮರ್ಥ ಮತ್ತು ಸ್ಥಿತಪ್ರಜ್ಞತೆಯಳ್ಳ ಆರ್ಥಿಕ ವಿಚಾರಗಳನ್ನು ಮಹಾತ್ಮಾಜೀಯವರು ಹೊಂದಿದ್ದರು. ಅಂತೆಯೇ ಅವುಗಳ ಅನುಷ್ಠಾನಕ್ಕಾಗಿ ಜೀವಾಂತ್ಯದ ಗಳಿಗೆಯವರೆಗೂ ಅವರು ಯಾವುದೇ ರೀತಿಯ ಅಧಿಕಾರ-ಅಂತಸ್ತುಗಳ ಬೆಂಬಲವಿಲ್ಲದೇ ಶಕ್ತಿ ಮೀರಿ ಶ್ರಮಿಸಿದರು. ಆದರೆ, ಅವರ ಕಾಲಾನಂತರದಲ್ಲಿ ಅವನ್ನೆಲ್ಲ ನಾವು ಎಷ್ಟರಮಟ್ಟಿಗೆ ಅಳವಡಿಸಿಕೊಂಡೆವು ಎಂಬುದೇ ನಮ್ಮ ಮುಂದಿರುವ ಸದ್ಯದ ಪ್ರಶ್ನೆಯಾಗಿದೆ. ಗಾಂಧೀ ಎಂಬುದೊಂದು ನಿರಾಕರಿಸಲಾಗದ ಸಂಗತಿ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಅವರ ಆರ್ಥಿಕ ವಿಚಾರಗಳ ಅಳವಡಿಕೆಯ ಬಗೆಗೆ ಇನ್ನಷ್ಟು ಚರ್ಚೆಯಾಗಬೇಕೆನಿಸುತ್ತದೆ.
****
0 ಪ್ರತಿಕ್ರಿಯೆಗಳು