ಗಮನಿಸಲೇ ಬೇಕಾದ ಅಧ್ಯಯನ ಕೃತಿ ಎಂ ಎಸ್ ವಿದ್ಯಾ ಅವರ ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’

 ಡಾ.ಎಂ.ಎಸ್. ಆಶಾದೇವಿ

ಶ್ರೀಮತಿ ಎಂ.ಎಸ್. ವಿದ್ಯಾ ಅವರ ಪಿ ಹೆಚ್ ಡಿ ಪ್ರಬಂಧ ಕೃತಿರೂಪದಲ್ಲಿ ಇತ್ತೀಚೆಗೆ ಪ್ರಕಟವಾಗಿದೆ. ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’ – ಸಾಹಿತ್ಯ ಮತ್ತು ಪ್ರಯೋಗ.

ಇದು ಈ ತನಕ ಯಾರೂ ಗಂಭೀರವಾಗಿ ಅಧ್ಯಯನ ಮಾಡದ ವಿಷಯವಾಗಿಯೇ ಉಳಿದಿತ್ತು. ಈ ಅಂಶವೇ ಅನೇಕ ಸಂಗತಿಗಳನ್ನು ಹೇಳುತ್ತದೆ. ಕನ್ನಡವೂ ಸೇರಿದಂತೆ ಭಾರತೀಯ ಮಾನವಿಕ ಅಧ್ಯಯನಗಳಲ್ಲಿ ಹಾಸ್ಯವು ಅಧ್ಯಯನದ ವಸ್ತುವಾಗಿರುವುದು ಕಡಿಮೆಯೇ, ಚರ್ಚೆಗಳಲ್ಲಿ ಮಾತ್ರ, ಶುದ್ಧ ಹಾಸ್ಯವು ಕಣ್ಮರೆಯಾಗುತ್ತಿರುವುದರ ಬಗೆಗೆ ವಿಷಾದವು ವ್ಯಕ್ತವಾಗುತ್ತದೆಯೇ ಹೊರತು, ಹಾಸ್ಯ ಪ್ರಜ್ಞೆಯ ಬಗೆಗೆ, ಹಾಸ್ಯವು ನಮ್ಮ ಸಂವೇದನೆಯ ಒಂದು ಭಾಗವಾಗುವುದರ ಬಗೆಗೆ, ಅದರ ಮಹತ್ವದ ಬಗೆಗೆ, ಅದು ಜೀವನಕ್ಕೆ ತಂದುಕೊಡಬಹುದಾದ ಜೀವಂತಿಕೆ ಮತ್ತು ಸೌಂದರ್ಯದ ಬಗೆಗೆ ನಾವು ಗಮನ ಹರಿಸಿರುವುದುದು ಕಡಿಮೆಯೇ.

ಇತ್ತೀಚೆಗೆ ಮಾತ್ರ ಅಸಹಜ ಬೆಳವಣಿಗೆಯಂತೆ ಕಾಣುವ ಲಾಫಿಂಗ್ ಕ್ಲಬ್‍ಗಳು ತಲೆಯೆತ್ತಿವೆ. ಆದರೆ ಒಳಗಿಲ್ಲದೇ ಇರುವುದು ಹೊರಗೆ ಕಾಣಿಸಿಕೊಳ್ಳುವುದು ಮಾತ್ರ ಹಾಸ್ಯಕ್ಕಿಂತ ಹೆಚ್ಚಾಗಿ ಹಾಸ್ಯಾಸ್ಪದವಾಗಿ ಕಾಣಿಸುವುದೇ ಹೆಚ್ಚು. ನಗುವನ್ನು ನೀವು ಕೇವಲ ಔಷಧಿ ಎಂದು ತಿಳಿಯುವುದರಲ್ಲಿ ಅದಕ್ಕಿರುವ ಔಷಧಿಯ ಗುಣವೂ ಕಾಣೆಯಾಗುತ್ತದೆ! ಎಂದರೆ, ‘ನಗುವ ನಗಿಸುವ ಧರ್ಮ’ ನಿಜಕ್ಕೂ ಧರ್ಮವೇ ಹೌದು. ಅದಕ್ಕಿರಬೇಕಾದ ಮೂಲ ಗುಣವೆಂದರೆ, ತನ್ನನ್ನೇ ನಗುವಿನ ವಸ್ತುವಾಗಿಸಿಕೊಳ್ಳುವ ಮನೋಧರ್ಮ. ಈ ಮನೋಧರ್ಮವಿಲ್ಲದೆ ಶುದ್ಧ ಹಾಸ್ಯ ಹುಟ್ಟಲಾರದು.

ಕಲಾಮಾಧ್ಯಮಗಳಲ್ಲಿ ಇತ್ತೀಚೆಗೆ ಹಾಸ್ಯದ ಸ್ವರೂಪವೇ ಬದಲಾಗುತ್ತಿರುವುದಕ್ಕೆ ಮೂಲ ಕಾರಣ ಇದೇ ಇರಬಹುದು ಅನ್ನಿಸುತ್ತದೆ. ಹಾಸ್ಯವು ಯಾವಾಗ ಬೇರೆಯವರ ಮಿತಿ, ಮೂರ್ಖತನ, ದೌರ್ಬಲ್ಯಗಳನ್ನು ಉದ್ದೇಶಿಸುತ್ತದೆಯೋ ಅಂತ ಹೊತ್ತಿನಲ್ಲೆಲ್ಲ ಅದು ಅಮಾನವೀಯವಾಗಿ, ಅನಾಗರಿಕವಾಗಿ ಕಾಣಿಸುತ್ತ ಅಪಹಾಸ್ಯವಾಗಿ ಬದಲಾಗಿ ಬಿಡುತ್ತದೆ. ಮನಸ್ಸನ್ನು ಅರಳಿಸಿ, ಉದ್ದೀಪಿಸುವ ಹಾಸ್ಯದ ಶಕ್ತಿ ಕುಂದಿ ಅದು ಮನಸ್ಸಿನಲ್ಲಿ ಉಳಿಯುವ ಕಹಿ ನೆನಪಾಗುವ ಸಾಧ್ಯತೆಗಳು ಹೆಚ್ಚುತ್ತಾ ಹೋಗುತ್ತವೆ.

ವಿದ್ಯಾ ಅವರ ಕೃತಿ ಈ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ತನ್ನ ತಾತ್ವಿಕತೆಯನ್ನು ಕಟ್ಟುತ್ತಾ ಹೋಗುತ್ತದೆ. ನಿಜ, ರಂಗಭೂಮಿಯಲ್ಲಿ ಹಾಸ್ಯವು ತಾನಾಗಿ ಅರಳಿದ ಹೂವಾಗಿರುವ ಸಂದರ್ಭಗಳು ತುಸು ಕಡಿಮೆಯೇ. ಅದು ನಿರ್ದಿಷ್ಟ ಪ್ರೇಕ್ಷಕರನ್ನು ಉದ್ದೇಶಿಸಿದ್ದೂ ಹೌದು. ಅದೊಂದು ತಾಂತ್ರಿಕ ಅಗತ್ಯದಂತೆ ಕಂಡವರೇ ಹೆಚ್ಚು. ನಾಟಕ, ಸಿನೆಮಾ ಮಾಧ್ಯಮಗಳಲ್ಲಿಯಂತೂ ಅದು ಸೂತ್ರಗಳಲ್ಲಿ, ನಿಯಮಗಳಲ್ಲಿ ಒಂದು ಎಂಬಂತೆಯೂ ಕಾಣಿಸಿಕೊಳ್ಳುತ್ತದೆ. ಈ ಎಲ್ಲ ಕಾರಣಗಳಿಗಾಗಿ ಹಾಸ್ಯದ ವಿಷಯವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕಾದ ಸ್ಥಿತಿ ಎದುರಾಗಿದೆ. ಹಾಸ್ಯಕ್ಕೆ ಎದುರಾಗಿರುವ ಇಂಥ ಸಂಕಷ್ಟದ ಹೊತ್ತಿನಲ್ಲಿ ಇದನ್ನು ತಮ್ಮ ಅಧ್ಯಯನದ ವಸ್ತುವಾಗಿ ತೆಗೆದುಕೊಂಡದ್ದಕ್ಕೆ ನಾವು ವಿದ್ಯಾ ಅವರನ್ನು ಮೊದಲಿಗೆ ಅಭಿನಂದಿಸಬೇಕು.

ಭಾರತೀಯ ಹಿನ್ನೆಲೆಯಲ್ಲಿ ಈ ವಿದ್ಯಮಾನವನ್ನು ವಿದ್ಯಾ ಅವರು ಅವಲೋಕಿಸುವುದರ ಮೂಲಕ ತಮ್ಮ ಅಧ್ಯಯನವನ್ನು ಆರಂಭಿಸಿದ್ದಾರೆ. ಇದು ಇಡೀ ಅಧ್ಯಯನಕ್ಕೆ ಬೇಕಾದ ತಳಹದಿಯನ್ನು ಕಟ್ಟುವುದರಲ್ಲಿ ಯಶಸ್ವಿಯಾಗಿದೆ. ಕಾಳಿದಾಸ, ಭಾಸ, ಭವಭೂತಿ ಮೊದಲಾದವರು ಹಾಸ್ಯವನ್ನು ತಮ್ಮ ನಾಟಕಗಳ ಅಭಿನ್ನವಾಗಿಸಿಕೊಳ್ಳಲು ನಡೆಸಿದ ಪ್ರಯತ್ನವನ್ನು ಗುರುತಿಸಿರುವುದು, ಇನ್ನೇನಲ್ಲದಿದ್ದರೂ ಹಾಸ್ಯವು ರಂಗಕೃತಿಯ ಅಭಿನ್ನ ಭಾಗವಾಗುವುದು ಅದನ್ನೊಂದು ಯಶಸ್ವಿ ರಂಗಪ್ರಯೋಗವಾಗಿಸುತ್ತದೆ ಎನ್ನುವುದರ ಸ್ಪಷ್ಟವಾದ ಅರಿವು ಅವರಿಗಿತ್ತು ಎನ್ನುವುದನ್ನು ತೋರಿಸುತ್ತದೆ.

ಹಾಸ್ಯದ ಅಳವಡಿಕೆಯಲ್ಲಿ ಅವರ ಸೋಲು ಗೆಲುವುಗಳ ಪ್ರಶ್ನೆಯಷ್ಟೇ, ಹಾಸ್ಯವನ್ನು ಕುರಿತ ಅವರ ಪ್ರೀತಿಯೂ ಅಷ್ಟೇ ಮುಖ್ಯವಾದುದು. ಶಕಾರನ ಪಾತ್ರವಂತೂ ಹಾಸ್ಯಕ್ಕೊಂದು ಶಾಶ್ವತ ರೂಪಕ ಎನ್ನುವಷ್ಟು ಪ್ರಸಿದ್ಧವಾದುದು. ಆದರೆ ಅವನ ಹಾಸ್ಯದಲ್ಲಿ ಮನುಷ್ಯನ ದುರಾಸೆ, ಕ್ರೌರ್ಯಗಳೂ ವ್ಯಕ್ತವಾಗುತ್ತವೆ. ಹೀಗಾಗಿ ಅವನ ಹಾಸ್ಯವು ನಕ್ಕು ಮರೆತು ಬಿಡುವ ಬಗೆಯದ್ದಲ್ಲ. ಅದು ನಮ್ಮನ್ನು ಇನ್ನೊಂದು ಅರಿವಿನತ್ತಲೂ ಕೊಂಡೊಯ್ಯುವ ವಾಹಕವೂ ಆಗುತ್ತದೆ. ಒಟ್ಟೂ ನಾಟಕದಲ್ಲಿ ಇದು ಬೇರೆಯೇ ಆಗಿ ನಿಲ್ಲುವುದಿಲ್ಲ. ನಾಟಕದ ಆಶಯವನ್ನು ಇನ್ನೊಂದು ನೆಲೆಯಲ್ಲಿ ಧ್ವನಿಸುತ್ತಾ ಹೋಗುತ್ತದೆ. ಹೀಗಾಗಿ ಇವನು ಕೇವಲ ಕೋಡಂಗಿಯ ಸೀಮಿತತೆಯಲ್ಲಿ ಕಾಣಿಸಿಕೊಳ್ಳದೆ ವ್ಯವಸ್ಥೆಯ ಶಕ್ತ ಪ್ರತಿನಿಧಿಯೂ ಆಗಿ ಬಿಡುತ್ತಾನೆ. ಇದೊಂದು ಮಹತ್ವದ ಅಂಶ. ಸರ್ಕಸ್‍ನಲ್ಲಿನ ಜೋಕರ್ ಗಳು ತಮ್ಮ ಪೆದ್ದುತನದಿಂದ, ಅಸಾಮರ್ಥ್ಯದಿಂದ ಗಮನ ಸೆಳೆಯುವ ಮೂಲಕವೇ ಬಹುಸಂಖ್ಯಾತರ ಪ್ರತಿನಿಧಿಗಳಾಗುತ್ತಾರಷ್ಟೆ. ಹಾಗೆಯೇ ಹಾಸ್ಯಪಾತ್ರಗಳೂ ಕೂಡ. ದುರಂತ ನಾಟಕಗಳಲ್ಲಿ ಕಾಮಿಕ್ ರಿಲೀಫ್‍ನಂತೆ ಕಾಣಿಸಿಕೊಳ್ಳುವ ಪಾತ್ರಗಳಾದರೂ, ನಮ್ಮನ್ನು ನಕ್ಕು ನಗಿಸುತ್ತಲೇ ಮುಂದಿನ ವಾಸ್ತವಕ್ಕೆ ನಮ್ಮನ್ನು ಸಜ್ಜುಗೊಳಿಸುತ್ತಾರೆ.

ವಿದ್ಯಾ ಅವರು ತಮ್ಮ ಕೃತಿಯುದ್ದಕ್ಕೂ ಕನ್ನಡದ ಎಲ್ಲ ಮಹತ್ವದ ನಾಟಕಕಾರರನ್ನೂ, ಅವರ ನಾಟಕಗಳನ್ನೂ ವಿವರವಾಗಿ ಚರ್ಚಿಸುತ್ತಾರೆ. ಅವರ ಹಾಸ್ಯದ ಸನ್ನಿವೇಶಗಳನ್ನು, ಕೃತಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸನ್ನಿವೇಶಗಳಲ್ಲಿಯೂ ಇಟ್ಟು ನೋಡುವ ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ಟಿ.ಪಿ. ಕೈಲಾಸಂ ಅವರ ನಾಟಕಗಳು, ಅವುಗಳ ಹಾಸ್ಯದ ಭಾಷೆ ಮತ್ತು ಧೋರಣೆಯೇ ಹೇಗೆ ಕನ್ನಡ ರಂಗಭೂಮಿಯ ಮಹತ್ವದ ಪಲ್ಲಟಕ್ಕೆ ಕಾರಣವಾಯಿತೆಂಬುದನ್ನು ವಿವರವಾಗಿ ಗುರುತಿಸುವುದು ಕನ್ನಡ ರಂಗಭೂಮಿ ಪರಂಪರೆಯ ಮೈಲಿಗಲ್ಲೊಂದನ್ನು ಸ್ಪಷ್ಟವಾಗಿ ಗುರುತಿಸುವುದಕ್ಕೆ ನೆರವಾಗುತ್ತದೆ.

ಪರ್ವತವಾಣಿ, ಕಂಬಾರ, ಪ್ರೇಮಾ ಕಾರಂತ, ಆರ್.ಕಲ್ಯಾಣಮ್ಮ, ಚಂಪಾ, ಶ್ರೀರಂಗ ಮೊದಲಾದವರ ನಾಟಕಗಳನ್ನು ಕುರಿತಂತೆ ಕೇವಲ ಅಭಿಪ್ರಾಯ ಮೂಲವಾದ ನಿಲುವುಗಳನ್ನು ತಳೆಯುವ ಬದಲು ವಿದ್ಯಾ ಬಿಡಿ ಬಿಡಿ ನಾಟಕಗಳನ್ನು ಚರ್ಚಿಸುವ ಪ್ರಯತ್ನ ಮಾಡುತ್ತಾರೆ. ಇದರಿಂದಾದ ಒಂದು ದೊಡ್ಡ ಲಾಭವೆಂದರೆ ನಾಟಕದಿಂದ ನಾಟಕಕ್ಕೆ ನಾಟಕಕಾರರ ದೃಷ್ಟಿಕೋನಗಳು ಬದಲಾಗುವುದನ್ನು ಗ್ರಹಿಸಲು ಸಾಧ್ಯವಾಗಿರುವುದು. ಆದರೆ ವಿದ್ಯಾ ಅವರ ಕೃತಿಯ ಕೆಲವು ತೊಡಕುಗಳನ್ನು ನಾವಿಲ್ಲಿ ಗಮನಿಸಬೇಕು. ಹಾಸ್ಯವು ಭಾರತೀಯ ಲೋಕದೃಷ್ಟಿಯ ಭಾಗವೇ ಎನ್ನುವ ಮೂಲಭೂತ ಸಂಗತಿಯನ್ನು ಇದು ಚರ್ಚಿಸುವುದಿಲ್ಲ. ಹಾಗೆಯೇ ಎಳೆದು ತಂದ ಹಾಸ್ಯವು ರಂಗಪಠ್ಯವನ್ನು ದುರ್ಬಲಗೊಳಿಸುವ ಮಹತ್ವದ ಅಂಶಗಳನ್ನೂ ಗಂಭೀರವಾಗಿ ಚರ್ಚಿಸಿದ್ದರೆ ಸಹಜ ಹಾಸ್ಯದ ಅನನ್ಯತೆಯನ್ನು ಸ್ಥಾಪಿಸುವುದು ಸಾಧ್ಯವಾಗುತ್ತಿತ್ತು. ಬಿಡಿಬಿಡಿಯಾದ ಚಿತ್ರಗಳು ಇಡಿಯಾದ ಚಿತ್ರವನ್ನು ಕಟ್ಟಿಕೊಡುವಲ್ಲಿ ಸೋತಿವೆ. ಸಮಗ್ರ ಗ್ರಹಿಕೆಯೊಂದನ್ನು ಈ ಕಾರಣದಿಂದ ಮಂಡಿಸುವುದು ಸಾಧ್ಯವಾಗಿಲ್ಲ ಎನಿಸುತ್ತದೆ.

ಆದರೆ ನಾಟಕಕಾರರ ಭಾಷೆ, ತಂತ್ರ ಮತ್ತು ಶೈಲಿಗಳು ಹಾಸ್ಯದ ಸ್ವರೂಪದಲ್ಲಿ ತರುವ ಬದಲಾವಣೆಗಳನ್ನೂ ವಿದ್ಯಾ ಗಮನಿಸಿ, ಚರ್ಚೆಗೆ ಎತ್ತಿಕೊಂಡಿದ್ದಾರೆ. ಇದರಿಂದ ಕೃತಿಗೆ ವಿಸ್ತಾರ ಮತ್ತು ವೈವಿಧ್ಯತೆ ಒದಗಿ ಬಂದಿದೆ. ಕನ್ನಡದ ಸಾಹಿತ್ಯಾಸಕ್ತರು ಗಮನಿಸಲೇ ಬೇಕಾದ ಅಧ್ಯಯನ ಕೃತಿಯೊಂದನ್ನು ನೀಡಿರುವ ಡಾ.ಎಂ.ಎಸ್. ವಿದ್ಯಾ ಅವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.

‍ಲೇಖಕರು nalike

July 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. C.p umamani.

    ಅಭಿನಂದನೆಗಳು ವಿದ್ಯಾ ಮೇಡಂ.ನಿಮಗೆ ಒಳ್ಳೆಯದಾಗಲಿ.

    ಪ್ರತಿಕ್ರಿಯೆ
    • Dr. Manonmani

      ಕಲಾರಂಗ ಹಾಗೂ ಸಾಹಿತ್ಯರಂಗಗಳ ಅನುಭವದಲ್ಲಿ ಮಿಂದೆದ್ದ ಡಾ.ಎಂ.ಎಸ್. ವಿದ್ಯಾ ಅವರಿಂದ ರಚಿತವಾಗಿರುವ ಪ್ರಸ್ತುತ ಕೃತಿ, ಈ ಎರಡೂ ಅಧ್ಯಯನ ಕ್ಷೇತ್ರಗಳಲ್ಲಿ ಚಿರಕಾಲ ಉಳಿಯುವ ಅಪೂರ್ವ ಕೃತಿಯೆನಿಸಿದೆ. ಅಭಿನಂದನೆಗಳು.
      ಕನ್ನಡ ರಂಗಭೂಮಿ ಪರಂಪರೆಯ ಮೈಲುಗಲ್ಲೆನಿಸುವ ಈ ಕೃತಿಯ ಒಳನೋಟಗಳನ್ನು ಕುರಿತು ಚರ್ಚಿಸಿರುವ ಡಾ. ಎಂ .ಎಸ್. ಆಶಾದೇವಿ ಅವರ ಬರಹ ವಿಶೇಷ ವಾಗಿದೆ.

      ಪ್ರತಿಕ್ರಿಯೆ
  2. Dr. Manonmani

    ಕಲಾರಂಗ ಹಾಗೂ ಸಾಹಿತ್ಯರಂಗಗಳ ಅನುಭವದಲ್ಲಿ ಮಿಂದೆದ್ದ ಡಾ.ಎಂ.ಎಸ್. ವಿದ್ಯಾ ಅವರಿಂದ ರಚಿತವಾಗಿರುವ ಪ್ರಸ್ತುತ ಕೃತಿ, ಈ ಎರಡೂ ಅಧ್ಯಯನ ಕ್ಷೇತ್ರಗಳಲ್ಲಿ ಚಿರಕಾಲ ಉಳಿಯುವ ಅಪೂರ್ವ ಕೃತಿಯೆನಿಸಿದೆ. ಅಭಿನಂದನೆಗಳು.
    ಕನ್ನಡ ರಂಗಭೂಮಿ ಪರಂಪರೆಯ ಮೈಲುಗಲ್ಲೆನಿಸುವ ಈ ಕೃತಿಯ ಒಳನೋಟಗಳನ್ನು ಕುರಿತು ಚರ್ಚಿಸಿರುವ ಡಾ. ಎಂ .ಎಸ್. ಆಶಾದೇವಿ ಅವರ ಬರಹ ವಿಶೇಷ ವಾಗಿದೆ.

    ಪ್ರತಿಕ್ರಿಯೆ
  3. Padmashree Josalkar

    Congratulations Vidya. Eagerly awaited book. Best wishes for the same.

    ಪ್ರತಿಕ್ರಿಯೆ
  4. Suma

    ಹಲೋ, ವಿದ್ಯಾ, ಎಷ್ಟು ವರ್ಷದ ತಪಸ್ಸು! Great. ಹೃತ್ಪೂರ್ವಕ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: