ಗಜಾನನ ಶರ್ಮ
ಚಿತ್ರಗಳು: ಗಜಾನನ ಶರ್ಮಾ ಹಾಗೂ ಕಲ್ಪನಾ ನಾಗನಾಥ್ ಸಂಗ್ರಹದಿಂದ
—
ಕಡಲಾಚೆಯ ಅಮೆರಿಕದಲ್ಲಿ ನಡೆದ ನಾವಿಕ ಏಳನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡ ಭಾಗ್ಯ, ಅಚ್ಚರಿ, ಆನಂದ ಮತ್ತು ಅನುಬಂಧ….
ಒಮ್ಮೊಮ್ಮೆ ಬದುಕಿನಲ್ಲಿ ಅದೃಷ್ಟ ಹೇಗೆಲ್ಲ ಒದಗಿ ಬರುತ್ತವೆ ಎಂಬುದಕ್ಕೆ ಪ್ರಸ್ತುತ ನಮ್ಮ ಅಮೆರಿಕ ಪ್ರವಾಸದಲ್ಲಿ ನಡೆದ ಈ ಘಟನೆಯೇ ಒಂದು ಸಾಕ್ಷಿ. ನಾವು ದಂಪತಿಗಳಿಬ್ಬರೂ ಅಮೆರಿಕ ದೇಶಕ್ಕೆ ಪ್ರವಾಸ ಹೊರಟಾಗ ಖಂಡಿತ ಇದನ್ನೆಲ್ಲ ನಿರೀಕ್ಷಿಸಿರಲಿಲ್ಲ. ಹೋಲಿಕೆಯ ತಕ್ಕಡಿಯನ್ನು ಬದಿಗಿಟ್ಟು, ಬರಿಗಣ್ಣಿನಲ್ಲಿ ಈ ದೇಶವನ್ನು ಕಣ್ತುಂಬ ನೋಡಿ ಹಿಂತಿರುಗುವುದಷ್ಟೇ ನಮ್ಮ ಉದ್ದೇಶವಾಗಿತ್ತು.
ಕಳೆದ ಮೂರು ತಿಂಗಳು ಈ ಬೃಹತ್ ದೇಶವನ್ನು ನೋಡುತ್ತ, ಈ ನೆಲದ ಸಮೃದ್ಧಿ, ಸಂಸ್ಕೃತಿ, ಚರಿತ್ರೆ ಮತ್ತು ಪ್ರಾಕೃತಿಕ ವೈಶಿಷ್ಟ್ಯಗಳನ್ನು ಕಣ್ತುಂಬಿಕೊಳ್ಳುತ್ತ, ಬಂಧು ಮಿತ್ರರ ಜೊತೆಗೆ ಒಡನಾಡುತ್ತ ಸಾಗುವ ಸಂದರ್ಭದಲ್ಲಿ ನಾವು ಅನುಭವಿಸಿದ ಮೊದಲ ಮಹದಚ್ಚರಿ ಇಲ್ಲಿ ನಮ್ಮವರು ಬದುಕು ಕಟ್ಟಿಕೊಂಡ ಬಗೆ. ಆಸ್ಟಿನ್ ನಗರದಿಂದ ಆರಂಭವಾದ ನಮ್ಮ ಪ್ರವಾಸ, ಟೆಕ್ಸಾಸ್, ನ್ಯೂಯಾರ್ಕ್, ವಾಷಿಂಗ್ಟನ್, ಫಿಲಾಡೆಲ್ಫಿಯಾ, ನಯಾಗರ, ಕ್ಯಾಲಿಫೋರ್ನಿಯಾ, ಮಿನಿಯಾಪೋಲಿಸ್ ಹೀಗೆ ಹದಿನಾಲ್ಕು ರಾಜ್ಯಗಳ ಹತ್ತೆಂಟು ನಗರ, ನ್ಯಾಶನಲ್ ಪಾರ್ಕ್ಸ್, ಕಾಡು ಮೇಡು ಬೆಟ್ಟ ಗುಡ್ಡ, ಸರೋವರ, ಹಳ್ಳಿ ಹೀಗೆ ಸಾಕಷ್ಟು ಸ್ಥಳಗಳಲ್ಲಿ ಸಾಗಿತ್ತು. ನಾವು ಕಂಡಂತೆ, ತಿಳಿದಂತೆ ಅಮೆರಿಕದಲ್ಲಿ ಅತ್ಯಂತ ಹೆಚ್ಚು ಸರಾಸರಿ ಆದಾಯ ಉಳ್ಳ ಸಮುದಾಯವೆಂದರೆ ಭಾರತೀಯರು.
ಇದರಲ್ಲಿ ಕನ್ನಡಿಗರೂ ಕಡಿಮೆಯಿಲ್ಲ. ಯಾವುದೇ ನಗರಕ್ಕೆ ಹೋದರೂ ಕನ್ನಡಿಗರಿಲ್ಲದ ಬಡಾವಣೆಗಳಿಲ್ಲ. ಇತ್ತೀಚೆಗೆ ಅಮೆರಿಕೆಗೆ ಬಂದವರಿಗೆ ತವರಿನ ಸಂಪರ್ಕ ತುಂಡಾಗದಷ್ಟು ಸಮೃದ್ಧ ವ್ಯವಸ್ಥೆ ಎಲ್ಲಡೆಯಲ್ಲೂ ಇದೆ. ಇನ್ನು ನಮ್ಮ ಕನ್ನಡಿಗರ ಸಂಖ್ಯೆಯೂ ಕಡಿಮೆಯೇನಿಲ್ಲ. ಹತ್ತಿರ ಹತ್ತಿರ ಒಂದು ಲಕ್ಷದಷ್ಟು ಕನ್ನಡಿಗರಿದ್ದಾರೆ ಮತ್ತು ಎಲ್ಲಡೆಯಲ್ಲೂ ಪಸರಿಸಿದ್ದಾರೆ ಎಂಬುದು ನಮ್ಮಲ್ಲಿ ವಿಸ್ಮಯ ಹುಟ್ಟಿಸಿತ್ತು. ನಾವು ಹೋದ ಬಹುತೇಕ ಊರಿನಲ್ಲಿ ನಮಗೆ ಕನ್ನಡಿಗರು ಸಿಕ್ಕಿದರೆಂಬುದು ಉತ್ಪ್ರೇಕ್ಷೆಯಲ್ಲ.
ಅದರಲ್ಲೂ ನಾವಿಕ ಸಂಘಟನೆಯ ಏಳನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ದೊರೆತದ್ದು ನಮ್ಮ ದೊಡ್ಡ ಅದೃಷ್ಟ ಮತ್ತು ನಮಗೆ ಅತ್ಯಂತ ಸಂತಸ ಉಂಟುಮಾಡಿದ ಸಂಗತಿ.
ಹೌದು, ನಾವು ಪ್ರವಾಸ ನಿರತರಾಗಿದ್ದ ಸಂದರ್ಭದಲ್ಲಿ ಹಲವು ಗೆಳೆಯರು, ನಾವಿಕ ವಿಶ್ವ ಕನ್ನಡ ಸಮ್ಮೇಳನದ ಕುರಿತು ಹೇಳಿದರು. ಕೆಲವರು ನಮ್ಮ ಕುರಿತು ಸಮ್ಮೇಳನದ ಸಂಘಟಕರಿಗೂ ಹೇಳಿರಬೇಕು. ಅದರ ಪರಿಣಾಮ ಸೆಪ್ಟೆಂಬರ್ ತಿಂಗಳ ಒಂದು, ಎರಡು ಮತ್ತು ಮೂರನೇ ದಿನಾಂಕದಂದು ನಡೆಯುವ ಏಳನೇ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಬರಲು ಅದರ ಅಧ್ಯಕ್ಷರಾದ ಮಂಜುನಾಥ ರಾವ್ ಮೈಸೂರು, ಸ್ವತಃ ನಾವಿರುವಲ್ಲಿಗೆ ಆಗಮಿಸಿ ಆಹ್ವಾನಿಸಿದರು. ಇನ್ನೊಬ್ಬ ಪ್ರಮುಖರಾದ ವಲ್ಲೀಶ ಶಾಸ್ತ್ರಿಗಳು ದೂರವಾಣಿ ಕರೆ ಮಾಡಿ ಆಹ್ವಾನಿಸಿದರು. ನಿಮ್ಮ ಕಾದಂಬರಿಗಳ ಕುರಿತು ಒಂದು ಸಂವಾದ ಏರ್ಪಡಿಸುತ್ತೇವೆ ಎಂದರು. ಈ ನಡುವೆ ನನ್ನನ್ನು ಸಂಪರ್ಕಿಸಿ ಆತ್ಮೀಯತೆ ತೋರಿದ ಕ್ಯಾಲಿಫೋರ್ನಿಯಾದ ಸಂಜೋತಾ ಪುರೋಹಿತ ನಾವಿಕದ ಏಳನೇ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ “ಮಂದಾರ” ಕ್ಕೆ ಲೇಖನವೊಂದನ್ನು ಕೊಡಲು ಕೇಳಿದರು. ಸರಿ, ನಾನು ಚೆನ್ನಭೈರಾದೇವಿ ಕಾದಂಬರಿಗೆ ಪ್ರಮುಖ ಆಕರವಾಗಿದ್ದ ಮಹತ್ವದ ಲೇಖನವೊಂದರ ಕರ್ತೃ ಡಾ ಹ್ಯನ್ಹಾ ಚಾಪೆಲ್ ವೋಜೋಸ್ಕಿಯವರು ನನ್ನನ್ನು ತಮ್ಮ ಮನೆಗೆ ಆತ್ಮೀಯವಾಗಿ ಆಹ್ವಾನಿಸಿ, ಸತ್ಕರಿಸಿದ ಕುರಿತು ಲೇಖನವೊಂದನ್ನು ಬರೆದುಕೊಟ್ಟೆ.
ಈ ನಡುವೆ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ಹಾಡನ್ನು ಕೇಳಿ ಅದನ್ನು ಇಷ್ಟಪಟ್ಟಿದ್ದ ಹಲವು ಸ್ನೇಹಿತರು ನಾವಿಕದ ಕುರಿತು ಒಂದು ಆಶಯ ಗೀತೆ ಬರೆದುಕೊಡಲು ಕೇಳಿದರು. ಅದನ್ನೂ ಬರೆದುಕೊಟ್ಟೆ. ಅದನ್ನು ಬಹಳವಾಗಿ ಮೆಚ್ಚಿಕೊಂಡ ಸ್ಮರಣ ಸಂಚಿಕೆಯ ಸಮಿತಿ ಅದನ್ನೂ ಸಂಚಿಕೆಯಲ್ಲಿ ಪ್ರಕಟಿಸಲು ನಿರ್ಧರಿಸಿದರು.
ಆಹ್ವಾನಿಸಿದ ಗೆಳೆಯರು ಹೋಟೆಲ್ಲಿನಲ್ಲಿ ಕೊಠಡಿ ಮತ್ತು ರಿಜಿಸ್ಟ್ರೇಶನ್ ವ್ಯವಸ್ಥೆ ಮಾಡಿ ಆಸ್ಟಿನ್ ನಗರದ ಸ್ಯಾನ್ ಮಾರ್ಕೋಸ್ ಉಪನಗರಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಿದರು. ಸರಿ, ಇದೆಲ್ಲ ಕೇವಲ ಆತ್ಮ ಶ್ಲಾಘನೆಯ ವಿಷಯವಾದರೆ ಸಮ್ಮೇಳನದ ಸಂದರ್ಭದಲ್ಲಿ ಕಂಡದ್ದು ನಿಜಕ್ಕೂ ಮಹದಚ್ಚರಿ. ಆಸ್ಟಿನ್ ನಗರದಿಂದ ಸ್ಯಾನ್ ಆಂಟೋನಿಯೋ ನಗರಕ್ಕೆ ಹೋಗುವ ಅಂತರ ರಾಜ್ಯ ಹೆದ್ದಾರಿಯ ಪಕ್ಕದ ಹತ್ತು ಮಹಡಿಗಳ ಬೃಹತ್ ಎಂಬಸಿ ಹೋಟೆಲ್, ಹಿಲ್ಟನ್ ಸೆಪ್ಟೆಂಬರ್ ಒಂದರಂದು ಕನ್ನಡ ಮಯವಾಗಿತ್ತು. ನನ್ನ ಪ್ರಿಯ ಶಿಷ್ಯೆ ಜ್ಯೋತಿ ರಾಮಕೃಷ್ಣ ಮತ್ತು ಆಕೆಯ ಪತಿ ವೇಣುಗೋಪಾಲ ಸೆಪ್ಟೆಂಬರ್ ಒಂದರ ಬೆಳಿಗ್ಗೆ, ನಮ್ಮ ಬಂಧು ಮತ್ತು ಅಮೆರಿಕದ ಆತಿಥೇಯ ರವೀಶನ ಮನೆಗೆ ಬಂದು ನಮ್ಮಿಬ್ಬರನ್ನೂ ಸ್ಯಾನ್ ಮಾರ್ಕೋಸ್ ಉಪನಗರಕ್ಕೆ ಕರೆದೊಯ್ದರು.
ಪ್ರಾಯಶಃ ಅದುವರೆಗೂ ಕನ್ನಡ ಎಂಬ ಪದವನ್ನೇ ಕೇಳಿರಬಹುದಾದ ಸಾಧ್ಯತೆ ಇಲ್ಲದ ಹಿಲ್ಟನ್ ಹೋಟೆಲ್ ಅಂದು ಕನ್ನಡಮಯವಾಗಿತ್ತು. ಹೋಟೆಲ್ ಪ್ರವೇಶ ಧ್ವಾರದಲ್ಲೇ ಕನ್ನಡದಲ್ಲಿ ಹೆಬ್ಬಾಗಿಲು ಎಂಬ ಫಲಕವಿತ್ತು. ಒಳಗೆ ಹೋಗುತ್ತಿದ್ದಂತೆ ಕನ್ನಡದ ಶಿಲ್ಪಕಲೆಯನ್ನು ಬಿಂಬಿಸುವ ಕಲ್ಲಿನ ರಥದ ಮಾದರಿ ನಿರ್ಮಿಸಲ್ಪಟ್ಟಿತ್ತು. ಎರಡನೇ ತಾರೀಖಿನ ಬೆಳಿಗ್ಗೆ ಉದ್ಘಾಟನಾ ಸಮಾರಂಭ. ನಾವಿಕದ ಅಧ್ಯಕ್ಷರಾದ ಮಂಜುನಾಥ್ ರಾವ್ ನನಗೆ ಸರ್, ದಯವಿಟ್ಟು ನೀವೂ ಉದ್ಘಾಟನಾ ಸಮಾರಂಭದಲ್ಲಿ ಇರಬೇಕು. ಕನ್ನಡ ಸಾಹಿತಿಗಳ ಪರವಾಗಿ ನಿಮ್ಮ ಉಪಸ್ಥಿತಿ. ನೀವು, ಖ್ಯಾತ ನಟ ಶಿವರಾಜ್ ಕುಮಾರ್ ಮತ್ತು ಸ್ಯಾನ್ ಮಾರ್ಕೋಸ್ ಮೇಯರ್ ಸಮಾರಂಭದ ಉದ್ಘಾಟಕರು ಎಂದಾಗ ನನಗೆ ರೋಮಾಂಚನ ಮತ್ತು ಸಂಕೋಚ ಎರಡೂ ಒಟ್ಟಿಗೇ ಉಂಟಾಗಿತ್ತು. ಸರಿ, ಆ ದಿನ ಸಂಜೆ ಸುಮಾರು ಮೂರು ಸಾವಿರ ಸಂಖ್ಯೆಯ ಸುಖಾಸನವುಳ್ಳ ಪುನೀತ್ ರಾಜಕುಮಾರ್ ಸಭಾಂಗಣದಲ್ಲಿ ಧಾರವಾಡದ ಖಾನ್ ಸಹೋದರರಿಂದ ಭಕ್ತಿ ಗೀತೆಗಳ ಗಾಯನದೊಂದಿಗೆ ಸಮ್ಮೇಳನ ಅನಧಿಕೃತವಾಗಿ ಆರಂಭವಾಗಿತ್ತು.
ಅಂದು ಸಂಜೆ ( ಸೆಪ್ಟೆಂಬರ್ ಒಂದು) ಅಮೆರಿಕದ ಟೆಕ್ಸಾಸ್ ರಾಜ್ಯದ ರಾಜಧಾನಿ ಆಸ್ಟಿನ್ನಿನ ಉಪನಗರ ಸ್ಯಾನ್ ಮಾರ್ಕೋಸ್ ಉಪನಗರದ ಭವ್ಯ ಸಭಾಂಗಣದಲ್ಲಿ ಕನ್ನಡದ ಭಕ್ತಿ ಗೀತೆಗಳ ರಸಧಾರೆ. ಅಷ್ಟು ಹೊತ್ತಿಗೆ ಎರಡು ಸಾವಿರಕ್ಕೂ ಹೆಚ್ಚು ಕನ್ನಡಿಗರು ಬಂದು ಸೇರಿದ್ದರಲ್ಲದೆ ಇಡೀ ಹೋಟೆಲ್ ತುಂಬ ಕನ್ನಡದ ಕಲರವ. ಎಲ್ಲಿ ನೋಡಿದರೂ ಕನ್ನಡವೇ ಕನ್ನಡ. ನಮಗಂತೂ ಅಮೆರಿಕದಲ್ಲಿ ಇದ್ದೇವೆ ಎಂಬುದೇ ಮರೆತು ಹೋಗಿತ್ತು. ಸ್ಯಾನ್ ಮಾರ್ಕೋಸಿನ ಎಂಬಸಿ ಹೋಟೆಲ್ ಹಿಲ್ಟಟನ್ ನಲ್ಲಿ ಖಾನ್ ಸಹೋದರರು ಕೃಷ್ಣಾ ನೀ ಬೇಗನೆ ಬಾರೋ ಎಂದು ಕೃಷ್ಣನನ್ನು ಕರೆದರು! ಸುಶ್ರಾವ್ಯವಾಗಿ ‘ಹರಿ ಕುಣಿದಾ ನಮ್ಮ ಹರಿ ಕುಣಿದಾ’ ಎಂದು ಶ್ರೀಹರಿಯನ್ನು ಕಣಿಸಿದರು…. ಶಿಶನಾಳ ಷರೀಫ್ ಅಜ್ಜನ ಅನಭಾವವನ್ನು ಹಾಡಿದರು. ರಾತ್ರಿ ಉತ್ತರ ಕರ್ನಾಟಕದಿಂದ ಹಿಡಿದು ಮಲೆನಾಡು, ಕರಾವಳಿಗಳ ಸ್ವಾದವುಳ್ಳ ಸುಗ್ರಾಸ ಭೋಜನ. ಅದ್ಧೂರಿ ಹೋಟೆಲ್ಲಿನಲ್ಲಿ ಸಾವಿರ ಸಾವಿರ ಕನ್ನಡಿಗರ ಜೊತೆ ನಮ್ಮ ವಾಸ್ತವ್ಯ….
ಮರು ದಿನ ಮುಂಜಾನೆ ಅದ್ಧೂರಿ ಮೆರವಣಿಗೆ. ಕರ್ನಾಟಕದ ಸಂಸೃತಿ ಪರಂಪರೆಗಳ ಅನಾವರಣ. ಅಂದ ಚಂದ ಅಲಂಕಾರಗಳ ಮೆರವಣಿಗೆ. ಐತಿಹಾಸಿಕ ಪುರುಷರ ವೇಷತೊಟ್ಟವರು, ಕೀಲು ಕುದುರೆ, ಯಕ್ಷಗಾನ, ಕಲೆ, ಶಿಲ್ಪ ಏನೆಲ್ಲ….! ನಟ ಶಿವರಾಜ್ ಕುಮಾರ್ ದಂಪತಿಗಳ ನೇತೃತ್ವದಲ್ಲಿ ಅದ್ಧೂರಿಯ ಮೆರವಣಿಗೆ ಮುಗಿದು ಸಮ್ಮೇಳನ ಸಭಾಂಗಣಕ್ಕೆ ಅತಿಥಿಗಳು ಮತ್ತು ಸದಸ್ಯರುಗಳ ಆಗಮನ…
ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಅಪರೂಪದ ಅದೃಷ್ಟ ಒದಗಿದ್ದ ನನ್ನನ್ನೂ ವೇದಿಕೆಗೆ ಆಹ್ವಾನಿಸಿದರು. ಶಿವರಾಜ್ ಕುಮಾರ್ ದಂಪತಿಗಳು ಮತ್ತು ಸ್ಯಾನ್ ಮಾರ್ಕೋಸ್ ಮೇಯರ್ ಪಕ್ಕದಲ್ಲಿ, ನನ್ನನ್ನೂ ಕುಳ್ಳಿರಿಸಿದರು. ಮೊದಲಿಗೆ ನಾವಿಕದ ಅಧ್ಯಕ್ಷ ಮಂಜುನಾಥ ರಾವ್ ಎಲ್ಲರನ್ನೂ ಸ್ವಾಗತಿಸಿದರು. ವೇದಿಕೆಯಲ್ಲಿದ್ದವರೆಲ್ಲ ಸೇರಿ ದೀಪೋಜ್ವಾಲನೆ ನಡೆಸಿ ಸಮ್ಮೇಳನವನ್ನು ಉದ್ಘಾಟಿಸಿದೆವು. ನಂತರ ಶಿವರಾಜ್ ಕುಮಾರ್, ಮೇಯರ್ ಇಬ್ಬರೂ ಮಾತನಾಡಿದ ಮೇಲೆ ಮಾತನಾಡುವ ಸರದಿ ನನ್ನದು. ಆರು ನಿಮಿಷಗಳ ಕಾಲ ಮಾತನಾಡಿದೆ. ಅದಾದ ಮೇಲೆ ನನ್ನಿಂದ ಸ್ಮರಣ ಸಂಚಿಕೆ “ಮಂದಾರ”ದ ಬಿಡುಗಡೆ ಮಾಡಿಸಿದರು, ನಟ ಶಿವರಾಜ್ ಕುಮಾರರಿಗೆ ಒಂದುಪ್ರತಿ ನೀಡಲು ಕೋರಿದರು. ಅದಾದ ಮೇಲೆ ಶಿವರಾಜ್ ಕುಮಾರರಿಗೆ ನಾವಿಕದ ಅಧ್ಯಕ್ಷರು, ಅದರ ನಂತರ ನನಗೆ ಶಿವರಾಜ ಕುಮಾರ ಸನ್ಮಾನ ಮಾಡಿದರು…ನಂತರ ನಾವಿಕದ ನಿಯೋಜಿತ ಅಧ್ಯಕ್ಷ ಸದಾಶಿವ ಅವರು ವಂದನಾರ್ಪಣೆಗೈದರು…
ಇಡೀ ಉದ್ಘಾಟನಾ ಸಮಾರಂಭದ ಉದ್ದಕ್ಕೂ ಸಂಕೋಚ ನನ್ನನ್ನು ಮೆತ್ತಿಕೊಂಡಿತ್ತು. ಕನ್ನಡದಲ್ಲಿ ಎಂಥೆಂತಹ ಉದ್ದಾಮ ಸಾಹಿತಿಗಳು ಹಿರಿಯರೆಲ್ಲ ಇದ್ದಾರೆ. ಅವರ ನಡುವೆ ಈ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರತಿನಿಧಿಸಲು ನಾನೆಷ್ಟು ಅರ್ಹ ಎಂಬ ಪ್ರಶ್ನೆ ನನ್ನೊಳಗನ್ನು ಇರಿಯುತ್ತಲೇ ಇತ್ತು. ಹಾಗಿದ್ದೂ ಅದು ನಾನು ಬಯಸದೇ ಬಂದ ಭಾಗ್ಯವಾಗಿತ್ತು. ನಾನಾಗಿ ಬಯಸಿದ್ದಲ್ಲ, ತಾನಾಗಿ ಬಂದಿದೆ, ಬಂದದ್ದನ್ನು ಅನುಭವಿಸುವುದಷ್ಟೇ ನನ್ನ ಹೊಣೆ ಎಂಬ ನಿರ್ಲಿಪ್ತ ಭಾವದಲ್ಲಿ ಅದನ್ನು ನಿಭಾಯಿಸಿದೆ…
ಮುಂದಿನ ಕಾರ್ಯಕ್ರಮಗಳೆಲ್ಲ ಅವಿಸ್ಮರಣೀಯ. ರಘು ದೀಕ್ಷಿತ್ ,ಅರ್ಜುನ್ ಜನ್ಯ, ಬೀಟ್ ಗುರು…ಹೀಗೆ ಕನ್ನಡದ ಮಹಾನ್ ಪ್ರತಿಭೆಗಳ ಶ್ರೇಷ್ಠತೆಯ ಅನಾವರಣ. ಸಮಮೇಳನಕ್ಕೆ ಬಂದಿದ್ದ ಮೂರು ಸಾವಿರಕ್ಕೂ ಹೆಚ್ಚು ಕನ್ನಡಿಗರ ಮೈ ತುಂಬ ಕನ್ನಡದ ಕರೆಂಟು. ಅಮೆರಿಕದಲ್ಲಿ ಹುಟ್ಟಿ ಬೆಳೆದ ನೂರಾರು ಮಕ್ಕಳ ಹಾಗೂ ಹಿರಿಯರ ಪ್ರತಿಭಾ ಪ್ರದರ್ಶನ ಸಮ್ಮೇಳನದ ಪ್ರಮುಖ ಆಕರ್ಷಣೆ. ಇಲ್ಲಿಗೆ ಬಂದು ಬದುಕು ಕಟ್ಟಿ ಕೊಳ್ಳುವುದರ ಜೊತೆ ಕನ್ನಡವನ್ನೂ ಕಟ್ಟುವ ಕೆಲಸ ಮಾಡುತ್ತಿರುವ ಇಲ್ಲಿನ ಕನ್ನಡದ ಮನಸ್ಸುಗಳು ಯಾವುದೇ ಮಾಪನದಲ್ಲೂ ಒಳನಾಡಿನ ಕನ್ನಡಿಗರಿಗೆ ಕಡಿಮೆಯಿಲ್ಲವೆಂದು ಯಾರಿಗಾದರೂ ಅನ್ನಿಸಿದರೆ ಅದರಲ್ಲಿ ಕಿಂಚಿತ್ತೂ ಉತ್ಪ್ರೇಕ್ಷೆಯಿಲ್ಲ ಎನ್ನುವಂತಿದ್ದವ ಅವರ ಕಲಾ ಪ್ರದರ್ಶನಗಳು. ಮೂರನೆಯ ದಿನ ಕ್ಯಾಲಿಫೋರ್ನಿಯಾದ ಗುರು ಕೃಷ್ಣಮೂರ್ತಿಯವರು ವಿದ್ವತ್ ಪೂರ್ಣವಾಗಿ ನನ್ನೊಡನೆ ಒಂದು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಇಡೀ ಸಮ್ಮೇಳನ ನಮಗೊಂದು ರೋಮಾಂಚನದ ಅನುಭವ. ನೂರಾರು ಜನ ಪರಿಚಿತರಾದರು. ನೂರಾರು ಜನ ಆತ್ಮೀಯವಾಗಿ ಆಹ್ವಾನಿಸಿದರು. ಕಡಲಾಚೆಯಲ್ಲಿದ್ದೂ ಕನ್ನಡಿಗರ ಹೃದಯ ವೈಶಾಲ್ಯಕ್ಕೆ, ಆತ್ಮೀಯತೆಗೆ ಆತಿಥ್ಯದ ಗುಣಗಳಿಗೆ ಉದಾಹರಣೆಯಾಗಿ ನಮ್ಮೊಡನೆ ಬೆರೆತು, ಹೊರನಾಡಿನ ಕನ್ನಡಿಗರ ಹಿರಿತನದ ಹಿತಾನುಭವ ನಮಗುಂಟಾಗಲು ಕಾರಣರಾದರು…
ನಿಜ ಇವರೆಲ್ಲ ಕನ್ನಡ ನೆಲದಿಂದ ಬಹುದೂರ ಇದ್ದರೂ ತಾವು ಮೆಟ್ಟುವ ನೆಲ ಕರ್ನಾಟಕ ಎಂಬ ಭಾವದಲ್ಲಿದ್ದಾರೆ.
ನೀ ಮೆಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಈ ಭಾವದಲ್ಲಿ ಬದುಕುವ ಸಾವಿರಾರು ಕನ್ನಡಿಗರ ಅನುಬಂಧವನ್ನು ಅನುಭವಿಸುವುದು ಅನೂಹ್ಯ ಭಾಗ್ಯವಲ್ಲದೆ ಇನ್ನೇನು?
ದೊರೆ ಮೂವರಿರುವಲ್ಲಿ ಸರಿಯಿಹುದೆ ಸೋಜಿಗವು ।
ಕೊರತೆ ಹೆಚ್ಚಿಕೆಗಳಿರಲಚ್ಚರಿಯದೇನು? ॥
ಬರಲಿ ಬರುವುದು; ಸರಿವುದೆಲ್ಲ ಸರಿಯಲಿ; ನಿನಗೆ ।
ಪರಿವೆಯೇನಿಲ್ಲೆಲವೊ – ಮಂಕುತಿಮ್ಮ
ಬಂದದ್ದನ್ನು ಬಂದಂತೆ ಬಾಗಿಲು ತೆರೆದು ಸ್ವೀಕರಿಸುವುದಷ್ಟೇ ನಮ್ಮ ಹೊಣೆ, ಅಲ್ಲವೇ…
0 ಪ್ರತಿಕ್ರಿಯೆಗಳು