ಸಿದ್ಧರಾಮ ಕೂಡ್ಲಿಗಿ
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರಾದ ಸಿದ್ದರಾಮ ಹಿರೇಮಠ ಅವರು ಪ್ರಾಧ್ಯಾಪಕರು. ಕನ್ನಡದ ವಿಶಿಷ್ಟ ಬರಹಗಾರರು. ಕನ್ನಡದ ವಿವಿಧ ಸಾಹಿತ್ಯದ ಪ್ರಕಾರದಲ್ಲಿ ವಿಭಿನ್ನ ಕೊಡುಗೆ ನೀಡಿದ್ದಾರೆ.
ಗಜಲ್ ನ ಮೂಲ ಫಾರಸಿ ಭಾಷೆಯ ಜಾನಪದ ಕಾವ್ಯ ಪ್ರಕಾರದಲ್ಲಿದೆ ಎನ್ನಲಾಗುತ್ತದೆ. ಫಾರಸಿಯಲ್ಲಿ ಗಜಲ್ ಎಂದರೆ ಜಿಂಕೆ ಎಂದರ್ಥ. ಓಡಾಡುವ ಜಿಂಕೆಗೆ ಬಾಣ ಬಿಟ್ಟಾಗ ಹೊರಡಿಸುವ ರ‍್ತನಾದವೇ ಕರುಣಾರಸದ ಗಜಲ್ ಎನ್ನಲಾಗುತ್ತದೆ. ಗಜಲ್ ಗಳಿಗೆ ಅರಸರ ಆಸ್ಥಾನದ ಹೊಗಳುಭಟ್ಟರ ಪ್ರಶಂಸೆಯ ಖಾಸಿದಾ ಎಂಬ ಆರನೇ ಶತಮಾನದ ಅರಬ್ಬಿ ಪದ್ಯಗಳ ಮೂಲವೆಂದೂ ಹೇಳಲಾಗುತ್ತದೆ.
ಮತ್ತೊಂದು ಮೂಲದ ಪ್ರಕಾರ, ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬರ ಕಸೀದ ಎಂಬ ಕಾವ್ಯ ಪ್ರಕಾರದ ಪೀಠಿಕೆಯ ದ್ವಿಪದಿಗಳಿಂದ ಗಜಲ್ ರಚಿತವಾದವೆಂದು ಹೇಳುವರಾದರೂ ಅದು ಬೆಳೆದದ್ದು ಈರಾನ್‌ನ ಚಾಮ ಎಂಬ ಕಾವ್ಯ ಪ್ರಕಾರದಿಂದ ಎಂದೂ ಕೆಲವು ವಿದ್ವಾಂಸರು ಹೇಳುತ್ತಾರೆ. ಮುಂದೆ ಫಾರ್ಸಿ ಭಾಷೆಯಿಂದ ರ‍್ದು ಭಾಷೆಯಲ್ಲಿ ಬಂದ ಗಜಲ್ ಈ ದೇಶದ ಲೋಕಗೀತೆ, ರೀತಿ ರಿವಾಜುಗಳು, ಋತು, ನೀರು, ಗಾಳಿ, ಹಸಿರು, ನೆಲ, ಹೂ, ಹಬ್ಬ ಹೀಗೆ ಅನೇಕ ವಿಷಯಗಳನ್ನೊಳಗೊಂಡ ಇದು ಭಾರತೀಯ ಕಾವ್ಯವಾಗಿದೆ. ಗಜಲ್ ಕೇವಲ ಪ್ರೀತಿ, ಪ್ರೇಮಕ್ಕೆ ಸಂಬಂಧಿಸದೇ, ಆಂತರಿಕ ತುಡಿತ, ಜೀವನದ ಅಸ್ಥಿರತೆ, ಸಾಮಾಜಿಕ ವಿಚಾರ, ದೈವಿಕತೆ, ಬ್ರಹ್ಮಜ್ಞಾನ ಹೀಗೆ ಹತ್ತು ಹಲವು ವಿಷಯಗಳನ್ನು ಹೊಂದಿರಹುದು.
ಗಜಲ್ ಷೇರ್ ಎಂಬ ದ್ವಿಪದಿಯಲ್ಲಿದ್ದು ಒಂದು ದ್ವಿಪದಿಗೂ ಮತ್ತೊಂದು ದ್ವಿಪದಿಗೂ ಸಂಬಂಧವಿರಬೇಕೆಂಬುದಿಲ್ಲ. ಒಂದು ಗಜಲ್ ಸಾಧಾರಣವಾಗಿ ಐದರಿಂದ ಇಪ್ಪತ್ತೈದು ದ್ವಿಪದಿಗಳನ್ನು ಹೊಂದಿರಬಹುದು. ಪ್ರತಿ ದ್ವಿಪದಿಯೂ ಸ್ವತಂತ್ರ ಭಾವವನ್ನು ಹೊಂದಿರಬಹುದಾದರೂ ಇಡೀ ಗಜಲ್ ಒಂದು ಮುಖ್ಯ ವಿಷಯವನ್ನು ಹೇಳುತ್ತಿರುತ್ತದೆ. ಮುತ್ತುಗಳು ಪ್ರತ್ಯೇಕವಾದರೂ ಅದನ್ನು ಬಂಧಿಸಿದ ದಾರ ಒಂದೇ ಎಂಬಂತೆ ಪ್ರತ್ಯೇಕವಾದ ದ್ವಿಪದಿಗಳಿದ್ದರೂ ಅದನ್ನು ಒಂದು ವಿಚಾರ ಬಂಧಿಸಿರುತ್ತದೆ. ಅಲ್ಲದೆ ಗಜಲ್‌ನ ಆರಂಭದ ದ್ವಿಪದಿಯ ಸಾಲುಗಳು ಅಂತ್ಯಪ್ರಾಸವನ್ನು ಹೊಂದಿರಬೇಕು ಹಾಗೂ ಉಳಿದ ಪ್ರತಿ ದ್ವಿಪದಿಗಳ ಎರಡನೆಯ ಸಾಲು ಅಂತ್ಯ ಪ್ರಾಸವನ್ನು ಹೊಂದಿರಬೇಕೆಂಬುದು ಸರಳವಾದ ನಿಯಮ. ಇದಲ್ಲದೆ ಪ್ರತಿಯೊಂದು ಸಾಲುಗಳೂ ಅಂತ್ಯಪ್ರಾಸವನ್ನು ಹೊಂದಿರುವ ಸಾಧ್ಯತೆಗಳೂ ಇವೆ. ಭಾರತೀಯ, ಫಾರ‍್ಸಿ, ಅರೇಬಿಕ್ ಈ ಮೂರೂ ಮಿಶ್ರಣಗಳನ್ನೊಳಗೊಂಡ ಉರ್ದು ಗಜಲ್ ಕಾವ್ಯ ಪ್ರಕಾರಕ್ಕೆ ಮಹತ್ವದ ಕೊಡುಗೆಯನ್ನು ನೀಡಿತು.
ಗಜಲ್ ಗೇಯತೆಯನ್ನು ಹೊಂದಿರುವುದರಿಂದಲೂ ಲಯ ಬೇಕೆಂಬ ಉದ್ದೇಶಕ್ಕಾಗಿಯೂ ಪ್ರತಿ ಸಾಲನ್ನು ಮಾತ್ರಾಗಣದಲ್ಲಿ ರಚಿಸುವ ಅಗತ್ಯತೆಯಿದೆ. ಮೊದಲ ಸಾಲಿನಿಂದ ಕೊನೆಯ ಸಾಲಿನವರೆಗೂ ಸಮಾನವಾದ ಮಾತ್ರೆಗಳನ್ನು ಅನುಸರಿಸಬೇಕಾಗುವುದು. ಇದರ ಉದ್ದೇಶ ಲಯ ಹಾಗೂ ಗೇಯತೆ. ಇದನ್ನು ಹೊರತುಪಡಿಸಿಯೂ ಗಜಲ್‌ಗಳು ರಚನೆಯಾಗಿವೆ ಆ ಮಾತು ಬೇರೆ. ಉರ್ದುವಿನಲ್ಲಿ ಗಜಲ್‌ಗೆ ಸಂಬಂಧಿಸಿದಂತೆ ನೂರಾರು ಛಂದಸ್ಸುಗಳಿವೆ. ಅವುಗಳನ್ನೆಲ್ಲ ಕನ್ನಡಕ್ಕೆ ತರಲು ಸಾಧ್ಯವಿಲ್ಲ, ಕನ್ನಡ ಜಾಯಮಾನಕ್ಕೆ ಹೊಂದುವಂತೆ ನಾವು ಮಾತ್ರಾ ಗಣಗಳನ್ನು ಮಾತ್ರ ಬಳಸಿ ಗಜಲ್‌ಗಳನ್ನು ರಚಿಸಬಹುದಾಗಿದೆ ಎಂದು ಶಾಂತರಸರು ತಮ್ಮ ಗಜಲ್ ಮತ್ತು ಬಿಡಿ ದ್ವಿಪದಿ ಕೃತಿಯ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿಯೇ ಇನ್ನೂ ಹೊಸ ಹೊಸ ಛಂದಸ್ಸುಗಳಿಗೆ ಅವಕಾಶಗಳಿವೆ.
ಗಜಲಿನ ಮಹತ್ವ
ಗಜಲಿನ ಮಹತ್ವದ ವಿಷಯ ಮೋಹ, ಅನುರಾಗ. ಸಾಮಾನ್ಯವಾಗಿ ಪ್ರೇಯಸಿಯನ್ನು ಕುರಿತು ಇರುವ ಗಜಲ್‌ಗಳಲ್ಲಿ ಪ್ರೇಯಸಿ ಒಂದು ವ್ಯಕ್ತಿಯಾಗಿ ಕಾಣಿಸದೇ, ಕುರುಹನ್ನಾಗಿ ಬಳಸಲಾಗುತ್ತದೆ. ಲೌಕಿಕ ಪ್ರೇಮದ ಜೊತೆಯೇ ಆಧ್ಯಾತ್ಮಿಕ ಪ್ರೇಮದೆಡೆ ಕರೆದೊಯ್ಯುವುದು ಗಜಲ್‌ಗಳ ವಿಶೇಷತೆ.
ಗಜಲ್ ಎಂಬ ಹೆಸರೇ ನವಿರಾದ ಭಾವವನ್ನು ಹೊಮ್ಮಿಸುವಂತಹದು. ನವಿಲುಗರಿಯ ಸ್ಪರ್ಶದಂತಹದ್ದು. ಪ್ರೀತಿ, ಪ್ರೇಮ, ಅದರೊಂದಿಗೆ ಆಧ್ಯಾತ್ಮ ಗಜಲ್‌ನ ಸ್ಥಾಯಿ ಭಾವ. ಯಾವುದೇ ಕಾವ್ಯ ಪ್ರಕಾರವೂ ಸಾಹಿತ್ಯದಲ್ಲಿ ಒಂದು ಪ್ರಮುಖ ಪ್ರಕಾರವಾಗಿ ಹೊರಹೊಮ್ಮಲು ಸಮಯ ತೆಗೆದುಕೊಳ್ಳುತ್ತದೆ. ಕೆಲವು ಕಾವ್ಯ ಪ್ರಕಾರಗಳು ಬೆಳವಣಿಗೆಯ ಹಂತದಲ್ಲಿಯೇ ಮುರುಟಿಹೋದರೆ, ಕೆಲವು ಬೃಹದಾಕಾರವಾಗಿ ಬೆಳೆದುಬಿಡುವದನ್ನು ಕನ್ನಡ ಕಾವ್ಯ ಪರಂಪರೆಯಲ್ಲಿ ಕಾಣಬಹುದು. ಬೆಳೆಯಲು, ಮುರುಟಲು ಇದಕ್ಕೆ ಹಲವಾರು ಕಾರಣಗಳೂ ಇರುತ್ತವೆ.
ಗಜಲ್ ಎಂದರೆ ಮಧುರವಾದ ನೋವು, ಮನಸಿಗೆ ನಾಟುವ ಬಾಣ, ಹೃದಯಕ್ಕೆ ತಾಕುವಂತಹದ್ದು, ಅಲ್ಲಿ ಹಿತವಾದ ನೋವು ಅಡಗಿರುತ್ತದೆ, ಹಂಬಲ ಇರುತ್ತದೆ, ಕೋರಿಕೆ ಇರುತ್ತದೆ, ಎಲ್ಲವೂ ಮೃದು, ಮಧುರತೆಯಿಂದ ಕೂಡಿರಬೇಕಾಗುತ್ತದೆ.
ಒಂದು ದ್ವಿಪದಿ ಗಜಲಿನ ಒಂದು ಅಂಗವಾಗಿರುವಂತೆ, ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಬೇರೆ ಘಟಕವಾಗಿರುವುದೇ ಅದರ ಮಹತ್ವ ಮತ್ತು ಇತರೆಡೆಗಳಲ್ಲಿ ಕಾಣದ ವೈಶಿಷ್ಟ್ಯ. ಇಂತಹ ಬೇರೆ ಬೇರೆ ದ್ವಿಪದಿಗಳನ್ನು ಕೂಡಿಸಿ ರಚಿತವಾದ ಗಜಲ್‌ನ ಹಿಂದಿರುವ ಶಕ್ತಿ ಯಾವುದು? ಬೇರೆ ಬೇರೆ ಬಣ್ಣಗಳಿಂದ ಕೂಡಿದ ಹೂಗಳ ಹಾರಕ್ಕೆ ಇದನ್ನು ಹೋಲಿಸಲಾಗುತ್ತದೆ. ಬೇರೆ ಬಣ್ಣದ ಹೂಗಳ ಅಸ್ತಿತ್ವ ಬೇರೆಯಾಗಿದ್ದರೂ ಅವುಗಳನ್ನು ಬಂಧಿಸಿರುವ ದಾರ ಮಾತ್ರ ಒಂದೇ ಆಗಿರುತ್ತದೆ. ಕವಿಯ ಆಂತರಂಗಿಕ ಭಾವಗಳು, ಸಂವೇದನೆಗಳು ಗಜಲಿನ ದ್ವಿಪದಿಗಳನ್ನು ಹೆಣೆದು ಕಟ್ಟಿರುತ್ತದೆ. ಕವಿಯ ಅಂತ:ಶಕ್ತಿಯ ಆಧಾರ ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ-ಹೂವಿನ ಹಾರದ ದಾರದಂತೆ. ಸ್ವಾರ್ಥ ಕವಿಯಾದವನು ಮಾತ್ರ ಇಂತಹ ಆಂತರಂಗಿಕ ದಾರವನ್ನು ಸೃಷ್ಟಿಸಬಲ್ಲ.
ಗಜಲ್ ಗೇಯ ಪ್ರಕಾರವಾಗಿರುವುದರಿಂದ ಇದನ್ನು ಮಧುರವಾಗಿ ಹಾಡಬಹುದು. ಉರ್ದು ಅಥವಾ ಹಿಂದಿಯಲ್ಲಿನಂತೆ ಕನ್ನಡದಲ್ಲಿ ಗಜಲ್‌ನ ಜಾಯಮಾನಕ್ಕೆ ಒಗ್ಗುವ ರೀತಿಯಲ್ಲಿ ಹಾಡುವವರು ಇರುವರಾದರೂ ಬೆರಳೆಣಿಕೆಯಷ್ಟು ಎನ್ನಬಹುದು. ಗಜಲ್ ಗೇಯತೆಯುಳ್ಳ ಕಾವ್ಯ ಪ್ರಕಾರ. ಇದನ್ನು ಭಾವಪೂರ್ಣವಾಗಿ ಹಾಡಬಹುದು. ಗಜಲ್‌ನ ಮತ್ತೊಂದು ವೈಶಿಷ್ಟ್ಯವೆಂದರೆ, ಮೃದು, ಮಧುರ ಭಾವ ಹಾಗೂ ಶಬ್ದಗಳು. ಉರ್ದು ಸಂಸ್ಕೃತಿಯಿಂದ ಗಜಲ್ ಬಂದಿದೆಯಾದ್ದರಿಂದ, ನಮ್ಮಲ್ಲಿನ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಬಳಸಲಾಗುವ ಶಬ್ದಗಳ ಬಗ್ಗೆಯೂ ಇಲ್ಲಿ ಹೇಳಲೇಬೇಕಾಗುತ್ತದೆ. ಉರ್ದು ಸಾಹಿತ್ಯದಲ್ಲಿ ಮಧುಶಾಲೆ, ಸಾಕಿ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಪಡೆದಿವೆ. ಮಧುಶಾಲೆ ಎಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ಅರ್ಥ. ಆದರೆ ಉರ್ದು ಕಾವ್ಯದಲ್ಲಿ ಮಧುಶಾಲೆಗೆ ತನ್ನದೆ ಆದ ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು, ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇದು ಕೇವಲ ಮದ್ಯ ಮಾರುವ ಅಂಗಡಿಯಾಗಿರದೆ ಕವಿಗಳು ಮಧುಪಾನ ಮಾಡುತ್ತ ಮಾತನಾಡುತ್ತಿದ್ದರು, ಸಂಭಾಷಿಸುತ್ತಿದ್ದರು. ಅದೊಂದು ಚಿಂತನಕೂಟವಾಗಿತ್ತು. ಅಲ್ಲಿ ಚರ್ಚೆ ನಡೆಯುತ್ತಿತ್ತು.
ಗಜಲ್ ಗಳಲ್ಲಿ ಬಳಸಲಾಗುವ ಸಾಕಿ ಎಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಎಂಬರ್ಥವಿದೆ. ಸಾಕಿ ಗಂಡೂ ಆಗಿರಬಹುದು, ಹೆಣ್ಣೂ ಆಗಿರಬಹುದು. ಗಜಲ್‌ಗಳಲ್ಲಿ ಅನೇಕ ಕಡೆ ಸಾಕಿಯನ್ನು ಪುಲ್ಲಿಂಗವೆಂದೇ ಪ್ರಯೋಗಿಸಲಾಗಿದೆ. ಕೆಲವು ಕವಿಗಳಲ್ಲಿ ಸಾಕಿ ದೇವರ ರೂಪಕವಾಗಿಯೂ ಪ್ರಯೋಗವಾಗಿದೆ. ಮಧುಶಾಲೆ, ಸಾಕಿ ಕಲ್ಪನೆಯಾಗಿರಲೂ ಸಾಧ್ಯವಿದೆ. ಇಲ್ಲಿ ಉಜ್ವಲವಾದ ಪ್ರತಿಭೆ, ಲೋಕಾನುಭವ, ಕಲ್ಪನಾಶಕ್ತಿ ಮಾತ್ರ ಕೆಲಸ ಮಾಡುತ್ತದೆ. ಮದ್ಯ ಇಲ್ಲಿ ಅಮಲು ಬರಿಸುವ ಪೇಯ. ಅದು ಪ್ರೇಮರಸವಾಗಿರಬಹುದು ಅಥವಾ ಭಕ್ತಿರಸವಾಗಿರಬಹುದು. ಅಮಲು ಎಂದರೆ ಸೂಫಿಗಳ ಪ್ರಕಾರ ಪರವಶತೆ, ತನ್ನನ್ನು ತಾನು ಮರೆಯುವುದು, ಪ್ರೇಮೋನ್ಮಾದದಲ್ಲಿ ಲೀನವಾಗುವುದು, ಆತ್ಯಂತಿಕ ಸುಖ ಪಡೆಯುವುದು.
ಈಗ ಎಲ್ಲರಿಗೂ ಗಜಲ್ ಬರೆಯುವ ಹುಮ್ಮಸ್ಸು. ಆದರೆ ಹೃದಯದ ಭಾಷೆಯನ್ನರಿಯದೇ ಬರೆಯುವ ಗಜಲ್ ಗಳು ನನ್ನ ದೃಷ್ಟಿಯಲ್ಲಿ ಆತ್ಮವಿಲ್ಲದ ದೇಹಗಳಿದ್ದಂತೆ. ಗಜಲ್ ನ ಮೂಲ ಉದ್ದೇಶವೇ ಹೃದಯವನ್ನು ತಲುಪುವುದು. ಅಲ್ಲೊಂದು ಮಧುರ ನೋವನ್ನು ಮೀಟುವುದು. ಆದರೆ ಇತ್ತೀಚೆಗೆ ಬರೆಯುವ ಗಜಲ್ ಗಳಲ್ಲಿ ಇದಾದುವುದೂ ಕಾಣುತ್ತಿಲ್ಲ. ಯುವ ಗಜಲ್ ಕಾರರು ಅಥವಾ ಹೊಸಬರು ಗಜಲ್ ಬರೆಯುವಾಗ ಹಿರಿಯರ ಗಜಲ್ ಗಳನ್ನು ಓದಬೇಕು, ಛಂದಸ್ಸನ್ನು ಅರಿಯಬೇಕು, ಗಜಲ್ ನಲ್ಲಿ ಲಯ ತರಲು ಯತ್ನಿಸಬೇಕು, ಅದಕ್ಕಿಂತ ಮುಖ್ಯವಾಗಿ ಹೃದಯಗಳನ್ನು ತಲುಪುವ, ಹೃದಯದಾಳವನ್ನು ಅರಿಯುವ ಯತ್ನ ಮಾಡಬೇಕು. ಬರೆದದ್ದೆಲ್ಲ ಗಜಲ್ ಆಗುವುದಿಲ್ಲ, ಪ್ರಾಸ ಇರುವವೆಲ್ಲ ಗಜಲ್ ಗಳಲ್ಲ ಎಂಬುದನ್ನು ಅರಿಯಬೇಕಾಗಿದೆ. ಹೊಸ ಪ್ರಯೋಗಗಳು ನಡೆದಿವೆಯಾದರೂ ಅವೆಲ್ಲ ಆತ್ಮವನ್ನೇ ಬಿಟ್ಟು ದೇಹದ ಬಗ್ಗೆ ಸಂಶೋಧನೆ ನಡೆಸಿದಂತೆ. ಕನ್ನಡದ ಗಜಲ್ ಎಂದರೆ ಕನ್ನಡದ ಗಜಲ್ಲೇ ಆಗಿರಲಿ. ಬಲವಂತವಾಗಿ ಗಜಲ್ ನಲ್ಲಿ ಉರ್ದು, ಹಿಂದಿ, ಇಂಗ್ಲೀಷ್ ಪದಗಳನ್ನು ಸೇರಿಸುವುದನ್ನು ಬಿಡಬೇಕು. ಕನ್ನಡದಲ್ಲಿಯೂ ಮೃದು, ಮಧುರ ಭಾವದ ಪದಗಳಿವೆ ಎಂಬುದನ್ನು ತೋರಿಸಬೇಕು.
ಕೆಲವರು ದಾಖಲೆಗಾಗಿ ಬರೆಯುತ್ತಿದ್ದಾರೆ. ಇದೂ ಸಹ ಸರಿಯಲ್ಲ. ಬರವಣಿಗೆ ದಾಖಲೆಗಾಗಿ ಆದರೆ ಹೇಗೆ ? ಸಾಹಿತ್ಯದಲ್ಲಿ ದಾಖಲೆಗೆ ಹೊರಡುತ್ತೇನೆನ್ನುವುದು ಪ್ರಚಾರಪ್ರಿಯತೆಯ ಗೀಳಲ್ಲದೆ ಮತ್ತೆನಲ್ಲ. ದಾಖಲೆಗಾಗಿ ಬರೆಯೋದು ಸಾಹಿತ್ಯವಾಗಲಾರದು, ಹಿರಿಯ ಕವಿಗಳಾರೂ ದಾಖಲೆಗಾಗಿ ಬರೆದಿಲ್ಲ ಎಂಬುದು ನೆನಪಿಸಿಕೊಳ್ಳಬೇಕಾಗಿದೆ. ಇಂಥ ಕಸರತ್ತುಗಳೆಲ್ಲ ಅಗ್ಗದ ಪ್ರಚಾರಪ್ರಿಯತೆಯೆಂದೇ ಅನಿಸಿಕೊಳ್ಳುತ್ತವೇ ಹೊರತು ಸತ್ವಯುತವಾದುದ್ದಲ್ಲ.
ಅದೇನೇ ಇರಲಿ ಗಜಲ್ ಎಂದರೇ ಪ್ರೀತಿ. ಯಾವತ್ತಿಗೂ ಪ್ರೀತಿಯೇ ಜಗತ್ತಿನಲ್ಲಿ ಸ್ಥಾಯಿ ಭಾವವಾಗಿದೆ. ಸಾಮಾಜಿಕ ಕಳಕಳಿ, ಕಾಳಜಿ, ಬಂಡಾಯ, ಪ್ರತಿಭಟನೆ ಎಲ್ಲದರ ಹಿಂದೆಯೂ ಪ್ರೀತಿ ತುಡಿಯುತ್ತಿರುತ್ತದೆ. ಭಾರತೀಯ ಕಾವ್ಯ ಪರಂಪರೆಯಲ್ಲಿ ಉರ್ದು ಭಾಷೆಯಲ್ಲಿನ ಗಜಲ್ ಕಾವ್ಯ ಪ್ರಕಾರಕ್ಕೆ ಎಷ್ಟೊಂದು ಪ್ರಾಮುಖ್ಯತೆಯಿದೆಯೋ ಅದೇ ರೀತಿಯಲ್ಲಿಯೇ ಕನ್ನಡ ಕಾವ್ಯ ಪರಂಪರೆಯಲ್ಲಿಯೂ ಗಜಲ್ ತನ್ನದೇ ಆದ ದೃಢವಾದ ಹೆಜ್ಜೆಗಳನ್ನೂರುತ್ತಿದೆ. ಅದು ಗಟ್ಟಿ ಹೆಜ್ಜೆಗಳನ್ನೂರುತ್ತ ನಡೆಯಲಿ ಎಂದೇ ಬಯಸುವೆ. ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ. ಜೊಳ್ಳು ತೂರಿಹೋಗಿ, ಗಟ್ಟಿಕಾಳು ಉಳಿಯುತ್ತವೆ. ಕಾಲದ ಮುಂದೆ ಯಾರೂ ದೊಡ್ಡವರಲ್ಲ. ನಾವೆಲ್ಲರೂ ಚಿಕ್ಕವರೇ ಎಂದು ವಿನೀತವಾಗಿ ಹೇಳಬಯಸುತ್ತೇನೆ.
0 ಪ್ರತಿಕ್ರಿಯೆಗಳು