ಸವಿತಾ ನಾಗಭೂಷಣ
ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ.
ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ.
ಇಲ್ಲಿನ ಬರಹ ನಮ್ಮ ತಾಣದ ಅಧಿಕೃತ ನಿಲುವಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ನೋಟವನ್ನು ರೂಪಿಸಲು ಇಲ್ಲಿ ಚರ್ಚೆಗೆ ತೆರೆದಿಡಲಾಗಿದೆ.
ನಿಮ್ಮ ಫೀಡ್ ಬ್ಯಾಕ್ ಪ್ರಕಟಣೆಗೆ ಅರ್ಹವಾಗುವಂತಿರಲಿ, ಚರ್ಚೆಯನ್ನು ಬೆಳೆಸುವಂತಿರಲಿ, ಟೀಕೆ ಎಡಿಟ್ ಆಗುತ್ತದೆ..
ನಾನು ಪಿಯುಸಿ ಓದುತ್ತಿದ್ದಾಗ ಒಮ್ಮೆ ನನ್ನೂರಿನ ಸಾರ್ವಜನಿಕ ಗ್ರಂಥಾಲಯದ ಸದಸ್ಯಳಾಗಲು ಗ್ರಂಥಾಲಯದ ಕಚೇರಿಗೆ ಹೋಗಿ ಅರ್ಜಿ ತುಂಬಿ ಕೊಟ್ಟೆ. ಅಲ್ಲಿನ ಅಧಿಕಾರಿಯೊಬ್ಬರು ಅರ್ಜಿಯ ಮೇಲೆ ಕಣ್ಣಾಡಿಸಿ, ನಿನ್ನ ಹೆಸರು, ಮನೆ ನಂಬರು, ಮನೆ ಹೆಸರು ಬೀದಿ ಗಲ್ಲಿ ಊರು ಎಲ್ಲಾ ಬರೆದಿರುವೆ ನಿನ್ನ ತಂದೆಯ ಹೆಸರು ಇಲ್ಲ.. ಎಂದು ಕಟುವಾಗಿ ನುಡಿದು ಅರ್ಜಿ ವಾಪಸು ನೀಡಿದರು ಅನ್ನುವದಕ್ಕಿಂತ ಮುಖದ ಮೇಲೆ ಎಸೆದರು! ‘ನೀವು ಕೇಳಿರುವುದು ವಿಳಾಸ ಅದನ್ನು ಬರೆದಿರುವೆ, ಹೀಗೆ ಕೊಟ್ಟ ವಿಳಾಸಕ್ಕೆ ನನಗೆ ಪತ್ರಗಳನೇಕ ತಪ್ಪದೆ ಬರುವುದು’ ಎಂದು ಹೇಳಿದೆ. ಅದಕ್ಕವರು ನಿನಗೆ ತಂದೆ ಇಲ್ಲವೆ ? ಹಾಗೇ ಹುಟ್ಟಿರುವೆಯಾ? ಎಂದು ವ್ಯಂಗ್ಯವಾಗಿ ನುಡಿದು ಇನ್ನೂ ಪಿಯುಸಿ ಆಗಲೇ ಸ್ವತಂತ್ರ ಎಂದುಕೊಂಡು ಬಿಟ್ಟಿರುವಿಯೋ ಎಂದು ಹೇಳಿ ಡಾಟರ್ ಆಫ್ ಎಂದು ಬರೆಸಿಕೊಂಡು ಬುದ್ಧಿ ಹೇಳಿ ಅನ್ನುವದಕ್ಕಿಂತ ನಿಂದಿಸಿ ಸದಸ್ಯತ್ವ ನೀಡಿದರು. ನನ್ನ ಗೆಳತಿಯರಿಗೂ ಇದೇ ರೀತಿ ವರ್ತನೆ ತೋರಿದ್ದರು. ನೀವು ಹೆಣ್ಣು ಮಕ್ಕಳು, ಹಾಗೆ ಹೀಗೆ ಉಪದೇಶ ಬೇರೆ ಮಾಡಿದ್ದರು. ನನಗೆ ಎಷ್ಟು ಅವಮಾನ- ನೋವಾಗಿತ್ತು ಎಂದರೆ ಅದರ ಗಾಯ ಇನ್ನೂ ಮಾಸಿಲ್ಲ!
ಕಳೆದ ತಿಂಗಳು ಅಂದರೆ ಫೆಬ್ರುವರಿ 7-8 ರಂದು ಬಿಜೆಪಿ ಸಂಸದ ಶ್ರೀ ಸಿ.ಪಿ.ಜೋಶಿ ಲೋಕಸಭೆಯಲ್ಲಿ ಮಾತನಾಡುತ್ತಾ ‘ಸತಿ’ ಹೋದವರ ನಾಡಿನಿಂದ ಬಂದವನು ಎಂದು ‘ಹೆಮ್ಮೆಯಿಂದ’ ಉದ್ಗರಿಸಿ ನಂತರ ವಿರೋಧ ಪಕ್ಷಗಳ ಖಂಡಿಸಿದ ಮೇಲೆ, ಬೆಂಕಿಗೆ ಹಾರಿ ಆತ್ಮಾಹುತಿ ಮಾಡಿಕೊಂಡ ಸತೀಮಣಿಯರ ನಾಡಿನಿಂದ ಬಂದವನು ಎಂದು ಹೇಳಿದ್ದು, ‘ಸತಿ’ಎಂಬ ಪದವನ್ನು ಉಲ್ಲೇಖಿಸಿಲ್ಲ, ಹಿಂದಿಯಿಂದ ಅನುವಾದ ಮಾಡುವಾಗ ತಾವು ‘ಸತಿತ್ವ’ ಎಂದು ಹೇಳಿದ್ದನ್ನು ‘ಸತಿ’ ಎಂದು ಹೇಳಿರಬೇಕು ಎಂದು ತಿದ್ದುಪಡಿ ನೀಡಿದರು! ಸತಿ ಹೋಗುವುದು ಇವರಿಗೆ ಹೆಮ್ಮೆಯ ಸಂಗತಿಯಾದರೆ, ನಮಗೆ ಈ ಹೊತ್ತಿಗೂ ಎಡವಿದಲ್ಲೆಲ್ಲ ಸಿಗುವ (ಮಾಸ್ತಿ ಕಲ್ಲುಗಳ) ಮಹಾಸತಿಯರ ಬಗ್ಗೆ ವಿಷಾದವಿದೆ. ಪತಿಯೊಂದಿಗೆ ಬೂದಿಯಾದ ಎಳೆಯ ಜೀವಗಳ ನೋವು ಆಕ್ರಂದನ ಈ ಹೊತ್ತಿಗೂ ಕಿವಿಯಲ್ಲಿ ಅನುರಣಿಸಿದಂತಾಗುತ್ತದೆ. ‘ಕೈ ಕಾಲು ಕಟ್ಟಿ, ಚಿತೆಗೆ ಎಸೆಯುತ್ತಿದ್ದರಂತೆ! ಇದೆಲ್ಲ ಇವರಿಗೆ ಹೆಮ್ಮೆಯ, ಸಂತೋಷದ ವಿಷಯವೇ? ನಮ್ಮಲ್ಲಿ ಎಲ್ಲಾದರೂ ಯಾರಾದರೂ ಎಂದಾದರೂ ‘ಪತಿ’ ಹೋದದ್ದು ಇದೆಯೆ? ಹೆಂಡತಿಯ ಹಿಂದೆ ಹೋಗಿ ಬೆಂಕಿಗೆ ಹಾಕಿಕೊಂಡವರು ಇರುವರೆ? ‘ಮಹಾಪತಿ’ ಕಲ್ಲುಗಳು ಎಲ್ಲಿವೆ?
ಇದೀಗ ಮಹಿಳಾ ದಿನಾಚರಣೆಯಂದೇ ಕೋಲಾರದ ಸಂಸದ ಶ್ರೀ ಎಸ್.ಮುನಿಸ್ವಾಮಿ ಅವರು ‘ಏನಮ್ಮಾ ನಿನ್ನ ಹೆಸರು? ಹಣೆಗೆ ಏಕೆ ಬೊಟ್ಟು ಇಟ್ಟುಕೊಂಡಿಲ್ಲ? ಸುಜಾತಾ ಎಂಬ ಹೆಸರು ಇಟ್ಟುಕೊಂಡಿರುವೆ ನಿನ್ನ ಗಂಡ ಬದುಕಿದ್ದಾನೆ ತಾನೇ? ನಿನಗೆ ಕಾಮನ್ ಸೆನ್ಸ್ ಇಲ್ಲ. ಯಾರೋ ಕಾಸು ಕೊಡುತ್ತಾರೆಂದು ಮತಾಂತರ ಆಗಿಬಿಡುತ್ತೀಯಾ’ ಎಂದು ಸಾರ್ವಜನಿಕ ವಾಗಿ ನಿಂದಿಸಿರುವರು ಎಂದು (ಪ್ರಜಾವಾಣಿ 9.3.23) ಮುಖಪುಟದ ಸುದ್ದಿ ಓದಿದೆ.
ಇವರ ಕ್ಷೇತ್ರದಲ್ಲಿ ನೀರು, ನೆರಳು ರಸ್ತೆ, ಆಸ್ಪತ್ರೆ, ಹೊಟ್ಟೆಗೆ ಬಟ್ಟೆಗೆ ಇದೆಯೊ ಇಲ್ಲವೋ ಎಂದು ಕೇಳುವ ಬದಲು ತನ್ನ ಪಾಡಿಗೆ ತಾನು ಇರುವ, ಈ ದುಡಿಯುವ ಮಹಿಳೆ ಬೊಟ್ಟು ಇಟ್ಟುಕೊಂಡಿರುವಳೋ…ತಾಳಿಸರ?
ಗಾಜಿನಬಳೆ? ಕಾಲುಂಗುರ? ಎನ್ನುವ ಅಧಿಕಪ್ರಸಂಗ ಬೇಕೆ? ಎಲ್ಲರನ್ನೂ ‘ಮಾತೆ’ ಎಂದು ಗೌರವಿಸುವ ಬಿಜೆಪಿ ಪಕ್ಷವು, ಅಸಭ್ಯವಾಗಿ ಮಹಿಳೆಯ ಮೇಲೆ ರೇಗಾಡಿದ್ದಕ್ಕಾಗಿ ಸಂಸದರಿಗೆ ತಮ್ಮ ವರ್ತನೆ ತಿದ್ದಿಕೊಳ್ಳುವಂತೆ- ಸಾರ್ವಜನಿಕವಾಗಿ ಕ್ಷಮೆಕೋರುವಂತೆ ತಿಳಿ ಹೇಳುವುದೆ? ಕಾದು ನೋಡಬೇಕಿದೆ.
0 ಪ್ರತಿಕ್ರಿಯೆಗಳು