ಗಂಗಾಧರ ಕೊಳಗಿ ʼಕತ್ತಲೆಕಾನುʼ ಹಾಗೂ ʼಮಿಸ್ಡ್ ಕಾಲ್ʼ ಬಿಡುಗಡೆ ಫೋಟೋ ಆಲ್ಬಂ…

ಅಭಿವೃದ್ಧಿಯ ಕುರಿತಾಗಿ ಭಿನ್ನ ಆಲೋಚನೆಗಳಿವೆ. ಅಭಿವೃದ್ಧಿ ಕುರಿತು ವಿಶ್ಲೇಷಿಸುವಾಗ ಅವರ ಮಾತಿನಲ್ಲಿ, ಕೃತಿಯಲ್ಲಿ ಅವರವರ ದೃಷ್ಟಿಕೋನ ವ್ಯಕ್ತವಾಗುತ್ತದೆ. ತನ್ನಷ್ಟಕ್ಕೆ ತಾನಿರುವ ಪರಿಸರದ ಮೇಲೆ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಎಂತಹ ದುಷ್ಪರಿಣಾಮ ಆಗಬಹುದು ಎನ್ನುವುದನ್ನು ಕತ್ತಲೆಕಾನು ಕೃತಿ ಬಿಂಬಿಸುತ್ತದೆ ಎಂದು ಕವಿ, ಕಾದಂಬರಿಕಾರ ಗಜಾನನ ಶರ್ಮಾ ಹುಕ್ಕಲು ಹೇಳಿದರು.

ಸಿದ್ದಾಪುರದ ಬಾಲಭವನದಲ್ಲಿ ಸಂಸ್ಕೃತಿ ಸಂಪದ, ಪ್ರಯೋಗ ಸ್ವಯಂ ಸೇವಾ ಸಂಸ್ಥೆ, ಕವಿತಾ ಪ್ರಕಾಶನದ ಸಹಯೋಗದಲ್ಲಿ ಸಾಹಿತಿ ಗಂಗಾಧರ ಕೊಳಗಿ ಅವರ ʼಕತ್ತಲೆಕಾನುʼ ಕಾದಂಬರಿಯ ಎರಡನೇ ಮುದ್ರಣ ಹಾಗೂ ʼಮಿಸ್ಡ್ ಕಾಲ್ʼ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿ ಕೊಳಗಿ ಅವರ ಕೃತಿಗಳಲ್ಲಿ ವಿಕೃತಿಯಿಲ್ಲ. ಕತೆಗಳೂ ಕೂಡ ವಿಶಿಷ್ಠವಾಗಿವೆ. ಕತೆಯೊಂದರಲ್ಲಿ ಬರುವ ಹಾರುವ ಗಾಳಿಪಟ ಮಾತ್ರ ನಮಗೆ ಕಾಣುತ್ತದೆ. ಆದರೆ ಅದನ್ನು ನಿಯಂತ್ರಿಸುವ ನೂಲು ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ. ಕೊಳಗಿಯವರ ಕೃತಿಗಳಲ್ಲಿ ಸಹ ಗಾಳಿಪಟದ ನೂಲಿನಂತೆ ನೇಪಥ್ಯದಲ್ಲಿದ್ದು ಜೀವನದ ಘಟನೆಗಳನ್ನು ಸದ್ದಿಲ್ಲದೇ ಸುಲಲಿತವಾಗಿ ಕಟ್ಟಿಕೊಡಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ ಮಾತನಾಡಿ ಸಮಾಜಕ್ಕೆ ಅಗತ್ಯವಾದ ವಿಷಯವನ್ನು ಪಾಮರರಿಗೂ ಅರ್ಥವಾಗುವಂತೆ ಬರೆಯುವುದು ಮುಖ್ಯ. ಗಂಗಾಧರ ಕೊಳಗಿಯವರ ಕತೆಗಳಲ್ಲಿ ಹುಡುಕಾಟವಿದೆ. ಈ ಕತೆಗಳನ್ನು ಕಾದಂಬರಿಯಾಗಿ ವಿಸ್ತರಿಸುವಷ್ಟು ವಿಷಯ ಅಡಕವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಸಂಸ್ಕೃತಿ ಸಂಪದದ ಮುಖ್ಯಸ್ಥ ದೊಡ್ಮನೆ ವಿಜಯ ಹೆಗಡೆ ಮಾನವೀಯ ಸಂಬಂಧಗಳನ್ನು ತೋರಿಸುವ ಶಕ್ತಿ ಕೊಳಗಿಯವರ ಸಾಹಿತ್ಯಕ್ಕಿದೆ ಎಂದರು.

ಈ ಸಂದರ್ಭದಲ್ಲಿ ಯಲ್ಲಾಪುರ ಡಿಎಫ್‍ಒ ಎಸ್.ಜಿ.ಹೆಗಡೆ, ಚಂದ್ರಶೇಖರ ಹೆಬ್ಬಾರ ಉಡುಪಿ, ಲಕ್ಷ್ಮೀನಾರಾಯಣ ಕಲಗಾರ ಅವರುಗಳಿಗೆ ಗೌರವ ಅರ್ಪಣೆ ನಡೆಯಿತು. ಗೌರವ ಸ್ವೀಕರಿಸಿದ ಡಿಎಫ್‍ಒ ಎಸ್.ಜಿ.ಹೆಗಡೆ ಮಾತನಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ವಾಸ್ತವವಾಗಿ ಚಿತ್ರಿಸಿದ ಕೃತಿಗಳು ಸಮಾಜದ ಕಣ್ಣು ತೆರೆಸುತ್ತವೆ. ಸಿದ್ದಾಪುರದಲ್ಲಿಯ ಕತ್ತಲೆಕಾನು ಪ್ರಪಂಚದಲ್ಲಿಯೇ ವಿಶಿಷ್ಟ ತಳಿಗಳನ್ನು, ಜೀವಜಂತುಗಳನ್ನು ಹೊಂದಿದ ತಾಣವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ. ಬಾಲಭವನದ ಆವಾರದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರವರ ಭಾವ, ಸದಭಿರುಚಿಗೆ ತಕ್ಕಂತೆ ವಿಚಾರ ಮಾಡುವಲ್ಲಿ ಸಾಹಿತ್ಯ ರಚನೆಯಲ್ಲಿ ಬದಲಾವಣೆಯಿರುತ್ತದೆ. ರಾಮಾಯಣ ಮಹಾಭಾರತ ಕತೆಗಳ ತಿರುಳೂ ಸಹ ಕಾನೂನಿನ ಚೌಕಟ್ಟಿನೊಳಗೆ ವ್ಯವಹರಿಸುವಂತೆ ಪಾಠಮಾಡುತ್ತ ಅವುಗಳನ್ನು ಮೀರಿದರೆ ಎಂತಹ ಅನಾಹುತಕ್ಕೆ ಕಾರಣವಾಗುವುದೆಂಬುದನ್ನು ತಿಳಿಸುತ್ತವೆ. ಕನ್ನಡವನ್ನು ಬಳಸುವ ಮೂಲಕವೇ ಅದನ್ನು ಬೆಳೆಸಬೇಕಾದ ಅಗತ್ಯತೆ ಇದೆ ಎಂದರು. ಕೃತಿಕಾರ ಗಂಗಾಧರ ಕೊಳಗಿ ಸ್ವಾಗತಿಸಿದರು. ಪ್ರೊ|ಎಂ.ಕೆ.ನಾಯ್ಕ ನಿರ್ವಹಿಸಿದರು. ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ವಂದಿಸಿದರು.

ಸಾಹಿತಿ ಗಂಗಾಧರ ಕೊಳಗಿಯವರ ಕೃತಿಗಳನ್ನು ಗಜಾನನ ಶರ್ಮಾ, ರವೀಂದ್ರ ಭಟ್ಟ ಬಿಡುಗಡೆ ಮಾಡಿದರು. ನ್ಯಾಯಾಧೀಶರಾದ ತಿಮ್ಮಯ್ಯ ಜಿ., ದೊಡ್ಮನೆ ವಿಜಯ ಹೆಗಡೆ, ಗಂಗಾಧರ ಕೊಳಗಿ ಉಪಸ್ಥಿತರಿದ್ದರು.

‍ಲೇಖಕರು Admin

November 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: