ಕೌಟುಂಬಿಕ ಕ್ರೀಡಾಕೂಟ ಕ್ರಿಕೆಟ್…

ಕುಶ್ವಂತ್‌ ಕೋಳಿಬೈಲು

೧. ಕೊಡಗಿನ ಗೌಡ ಕುಟುಂಬಗಳ (Family/Clan) ನಡುವೆ ದಶಕಗಳಿಂದ ನಡೆಯುತ್ತಾ ಬಂದಿರುವ ಕ್ರಿಕೆಟ್ ಪಂದ್ಯಾಟಗಳ ಅನೇಕ ನೆನಪುಗಳು ನನ್ನ ಹೃದಯದಲ್ಲಿ ಇನ್ನೂ ತಾಜಾ ಇದೆ. ನನ್ನ ಮನೆತನವಾದ ಕೋಳಿಬೈಲು ಕುಟುಂಬಸ್ಥರು ಇಂದು ಅನೇಕ ದೇಶ ಮತ್ತು ರಾಜ್ಯಗಳಲ್ಲಿ ಹಂಚಿ ಹೋಗಿದ್ದಾರೆ. ಈ ಕ್ರಿಕೆಟ್ ಕ್ರೀಡಾ ಕೂಟದ ನೆಪದಲ್ಲಿ ನನಗೆ ನನ್ನದೇ ಕುಟುಂಬದ ಅನೇಕ ಅಪರಿಚಿತರು ಪರಿಚಿತರಾದರೆಂದರೆ ಅದು ಸುಳ್ಳಲ್ಲ.

ಊರಿಂದ ದೂರ ಇದ್ದ ಅನೇಕರಿಗೆ ಈ ಕ್ರೀಡಾಕೂಟ ತಮ್ಮ ಕುಟುಂಬದವರ ಮತ್ತು ಜನಾಂಗದವರೊಡನೆ ಬಾಂಧವ್ಯ ಬೆಸೆಯಲು ವೇದಿಕೆಯಾಗಿದೆ. ಈ ವಾರ್ಷಿಕ ಕ್ರೀಡಾಕೂಟ ಒಂದು ರೀತಿ ಕೌಟುಂಬಿಕ ಮತ್ತು ಸಾಂಸ್ಕೃತಿಕ ಸಮ್ಮಿಲನವೆಂದರೆ ತಪ್ಪಲ್ಲ‌. ಕ್ರಿಕೆಟ್ ನೆಪದಲ್ಲಿ ಪ್ರತಿ ವರ್ಷ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡಿನಲ್ಲಿ ಬಹಳಷ್ಟು ನಡೆಯುತ್ತದೆ. ಮಕ್ಕಳ ಕ್ರಿಕೆಟ್ ಒಂದೆಡೆಯಾದರೆ ಮೈದಾನದಲ್ಲಿ ಮಹಿಳೆಯರು ಕಷ್ಟಸುಖ ಮಾತನಾಡಿಕೊಳ್ಳುತ್ತಾರೆ, ಅಂಕಲ್ಗಳು ಅರೆಭಾಷೆ ಗೌಡರ ರಾಷ್ಟ್ರೀಯ ವಾಹನವಾದ ಮಾರುತಿ ಓಮ್ನಿಯ ಡಿಕ್ಕಿಯ ಹಿಂದೆ ನಿಂತು ನಮ್ಮ ರಾಷ್ಟ್ರೀಯ ಪಾನೀಯವಾದ MCBಯನ್ನು ಗಟಕ್ಕನೆ ಗುಟುಕೇರಿಸಿ ಏನೂ ಆಗಿಲ್ಲವೆಂಬಂತೆ ಬಂದು ತಮ್ಮ ಪತ್ನಿಯರ ಬಳಿ ಕುಳಿತುಕೊಳ್ಳುತ್ತಾರೆ.

ತಮ್ಮ ಅಣ್ಣತಮ್ಮಂದಿರ ಆಟಕ್ಕೆ ಚಪ್ಪಾಳೆ ತಟ್ಟುತ್ತಿರುವ ಸುಂದರಿಯರು ಅಪ್ಪಿ ತಪ್ಪಿ ನಮ್ಮ ಪ್ರಪೋಸಲ್ ಆಂಟಿಯರ ಕಣ್ಣಿಗೆ ಬಿದ್ದರೆ ಅವರು ಮುಂದಿನ ಟೂರ್ನಮೆಂಟ್ ಬರುವಾಗ ಕತ್ತಿನಲ್ಲಿ ಕರಿಮಣಿ ಹಾಕಿ ಹೊಸಾ ತಂಡವೊಂದಕ್ಕೆ ಚಪ್ಪಾಳೆ ತಟ್ಟುತ್ತಿರುತ್ತಾರೆ. ಕಾಫಿ ತೋಟ, ಕೆಲಸದವರ ಸಮಸ್ಯೆ, ಮಕ್ಕಳ ಓದು ಮತ್ತಿತ್ತರ ವಿಚಾರಗಳ ಬಗ್ಗೆ ಅಂಕಣದ ಹೊರಗೆ ವಿಚಾರ ವಿನಿಮಯ ನಡೆಯುತ್ತದೆ. ಗೆದ್ದಾಗ ಸಂಭ್ರಮ ಪಡುತ್ತಾರೆ, ಸೋತಾಗ ಕುಗ್ಗದೆ ಮರುವರ್ಷ ಮತ್ತಷ್ಟು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

2013ರ ಬೇಸಿಗೆಯಲ್ಲಿ ಈ ಟೂರ್ನಿ ನಡೆಯುತ್ತಿದ್ದ ಸಮಯದಲ್ಲಿ ಕರ್ನಾಟಕ ವಿಧಾನಸಭೆಯ ಫಲಿತಾಂಶವೂ ಬಂದಿತ್ತು. ಕೇಸರಿ ಪಡೆಯ ಅಭಿಮಾನಿಗಳು ಕೆಲ ನಿಮಿಷಗಳ ಕಾಲ ಆಟ ನಿಲ್ಲಿಸಿ, ಪಾಟಾಕಿ ಸಿಡಿಸಿ ಬೋಪಯ್ಯಣ್ಣ ಮತ್ತು ರಂಜನಣ್ಣನಿಗೆ ಜೈಕಾರ ಹಾಕಿದ್ದನ್ನು ಮತ್ತು ಅಲ್ಪ ಅಂತರದಲ್ಲಿ ಸೋತ ಬಿಟಿ ಪ್ರದೀಪ್ ಬೆಂಬಲಿಗರು ಕಂಬನಿ ಮಿಡಿದದ್ದನ್ನೂ ಈ ಕ್ರೀಡಾಕೂಟದ ಅಂಕಣ ನೋಡಿದೆ‌. ಅಸಲಿಗೆ ಕ್ರಿಕೆಟ್ ಇಲ್ಲಿ ನೆಪಮಾತ್ರ. ಅದರ ಹೊರತಾಗಿಯೂ ಕೊಡಗು ಗೌಡ ಯುವ ವೇದಿಕೆಯವರು ನಡೆಸುತ್ತಿರುವ ಈ ಕ್ರೀಡಾಕೂಟದಲ್ಲಿ ಬಹಳಷ್ಟು ವಿಚಾರ ಮತ್ತು ವ್ಯವಹಾರಗಳಿಗೆ ವೇದಿಕೆಯಾಗಿದೆ.

೨. ಪ್ರತಿ ವರ್ಷ ಒಂದೊಂದು ಗೌಡ ಕುಟುಂಬದವರು ಈ ಕ್ರೀಡಾಕೂಟವನ್ನು ಕೊಡಗು ಗೌಡ ಯುವ ವೇದಿಕೆಯವರ ಸಹಯೋಗದಲ್ಲಿ ನಡೆಸುತ್ತಾ ಬಂದಿದ್ದಾರೆ. ಕೊರೊನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ಈ ಫ್ಯಾಮಿಲಿ ಕ್ರಿಕೆಟ್ ಕ್ರೀಡಾಕೂಟ ನಡೆದಿರಲಿಲ್ಲ. ಕಳೆದ ಬೇಸಿಗೆಯಲ್ಲಿ 2021ರ ಸಾಲಿನ ಈ ಕ್ರೀಡಾಕೂಟ ಶುರುವಾಗಿದ್ದರೂ ಕೊರೋನಾ ಎರಡನೇ ಅಲೆಯ ಕಾರಣಕ್ಕೆ ಅದು ಅನಿರ್ದಿಷ್ಟವಾಗಿ ಮುಂದೂಡಲಾಗಿ ಈಗ ಮತ್ತೆ ಅರ್ಧಕ್ಕೆ ನಿಂತಿದ್ದ ಕ್ರೀಡಾಕೂಟವನ್ನು ಈ ತಿಂಗಳು ಪುನಃ ಮುಂದುವರಿಸಲಾಗುತ್ತಿದೆ.

೩. ವಿವಿಧ ಫ್ಯಾಮಿಲಿಗಳ ನೇತೃತ್ವದಲ್ಲಿ ಪ್ರತಿ ವರ್ಷ ನಡೆವ ಈ ಕ್ರಿಕಟ್ ಹಬ್ಬವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿದ ಕೀರ್ತಿ ಕಟ್ಟೆಮನೆಯವರಿಗೆ( ?2013 ) ಸಲ್ಲುತ್ತದೆ. ಆವರು ನೇತೃತ್ವದಲ್ಲಿ ಆ ವರ್ಷ ಪಂದ್ಯಾಟವನ್ನು ಬಹಳ ಸೊಗಸಾಗಿ ಆಯೋಜಿಸಿದ್ದರು‌. ಬಾಲಾಡಿ ತಂಡದವರು ಈ ಕ್ರೀಡಾಕೂಟವನ್ನು ಆಯೋಜಿಸಿದಾಗ ( 2014) ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ನನ್ನನ್ನು ಅತಿಥಿಯಾಗಿ ಆಹ್ವಾನಿಸಿ ಸನ್ಮಾನ ಮಾಡಿದ ನೆನಪು ನನ್ನಲ್ಲಿ ಇನ್ನೂ ಹಸಿರಾಗಿದೆ.

೪. ಪ್ರತಿ ವರ್ಷ ಸುಮಾರು ನೂರಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ಈ ಕ್ರೀಡಾಕೂಟದಲ್ಲಿ ನಮ್ಮ ಕೋಳಿಬೈಲು ತಂಡ 2013, 2014ರ ಸಮಯದಲ್ಲಿ ಟೂರ್ನಿ ಗೆಲ್ಲದಿದ್ದರೂ ಅನೇಕ ಉತ್ತಮ ತಂಡಗಳಿಗೆ ನೀರು ಕುಡಿಸಿ ಕ್ವಾಟರ್ ಫೈನಲ್ ತಲುಪುತ್ತಿತ್ತು. ಆಗ ತಂಡದ ಸಕ್ರೀಯ ಸದಸ್ಯರಾಗಿದ್ದ ಯುವಕರೆಲ್ಲರೂ ಈಗ ಕೆನಡಾ ಅಮೇರಿಕಾ ಮತ್ತು ಗಲ್ಫ್ ರಾಷ್ಟ್ರಗಳನ್ನು ಸೇರಿದ ಕಾರಣ ನಮ್ಮ ತಂಡ ಈಗ ಹೆಚ್ಚುಕಮ್ಮಿ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ. ಈ ಟೂರ್ನಿಗಾಗಿ ನಾನು ಅನೇಕ ಬಾರಿ ರಜೆಯನ್ನು ಹೊಂದಿಸಿಕೊಂಡು ಮುಂಬೈ, ಝಾನ್ಸಿ ಮತ್ತು ಉತ್ತರಭಾರತದಿಂದ ಬಂದಿದ್ದೇನೆ.

ಯಾವುದೋ ವರ್ಷ ನಾನು ಉತ್ತಮವಾಗಿ ಆಡಿದಾಗ ‘ಆಕರ್ಷಕ ಮೇಜರ್ ಗೇಮ್’ ಎಂದು ಪತ್ರಕರ್ತ ಕಿಶೋರ್ ರೈ ಪತ್ರಿಕೆಯೊಂದರಲ್ಲಿ ಸುದ್ದಿ ಮಾಡಿದ ನೆನಪು. ಅನೇಕ‌ ಸಿಹಿ ಮತ್ತು NotSoಸಿಹಿ ನೆನಪುಗಳು ಆ ಮ್ಯಾನ್ಸ್ ಕಾಂಪೌಂಡ್ ಗ್ರೌಂಡಿನಲ್ಲಿದೆ. ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಒಂದು ಬಾರಿ ಈ ಕ್ರೀಡಾಕೂಟದ ಮ್ಯಾಚ್ ಆಡಲು ಕೆಂಪು ಬಸ್ಸ್ ಹತ್ತಿ ಬಂದು ಇಲ್ಲಿ ಮೊದಲ ಬಾಲಿಗೆ ಔಟಾಗಿ ಪುನಃ ಕೆಂಪು ಬಸ್ ಹತ್ತಿ ಅಂದೇ ರಾತ್ರಿ ಮಂಗಳೂರು ತಲುಪಿದ್ದೆ. ಒಂದು ಶೂನ್ಯ ಸಂಪಾದನೆಗಾಗಿ ಒಂದೇ ದಿನದಲ್ಲಿ ಮುನ್ನೂರು ಕಿಮಿ ಪ್ರಯಾಣಿಸಿದ್ದೆ. ಒಂದು ಬಾರಿ ಪಾಣತಲೆ ಮನೆತನದ ತಂಡದವರೊಂದಿಗೆ ಪಂದ್ಯ ಟೈಯಾದಾಗ ಸೂಪರ್ ಓವರಿನಲ್ಲಿ ನಾನು ಹೊಡೆಯುವ ಪ್ರತಿಯೊಂದು ಸಿಕ್ಸರಿಗೆ ಸಾವಿರ ರುಪಾಯಿ ಘೋಷಿಸಿದ ನನ್ನ ಸ್ನೇಹಿತರೊಬ್ಬರು ಖಾಸು ಕಳೆದುಕೊಂಡಿದ್ದರು.

೫. ದಶಕಗಳಿಂದ ಈ ಕ್ರೀಡಾಕೂಟದಲ್ಲಿ ನಾನು ಭಾಗವಹಿಸುತ್ತಿರುವ ಕಾರಣ ನಮ್ಮ ಕೆಲವು ಹಳೇಯ ಅಭ್ಯಾಸಗಳನ್ನು ಅಷ್ಟು ಸುಲಭವಾಗಿ ಕಳಚಿಕೊಳ್ಳಲು ಆಗುವುದಿಲ್ಲ. ಮ್ಯಾಚ್ ಶುರುವಾಗುವ ಮೊದಲು ಎಲ್ಲಾ ಆಟಗಾರರ ಸಾಮೂಹಿಕ ಮೂತ್ರವಿಸರ್ಜನೆಗೆ ಮಾಡುವ ಪೊದೆಯೊಂದಿದೆ ಮ್ಯಾನ್ಸ್ ಕಾಂಪೌಂಡ್ ಕ್ರೀಡಾಂಗಣದ ಮೂಲೆಯಲ್ಲಿದೆ.ಈಗ ಅಲ್ಲಿ ಟಾಯ್ಲೆಟ್ಗಳ ನಿರ್ಮಾಣವಾಗಿದ್ದರೂ ಅದರ ಹಿಂದೆ ಹೋಗಿ ಪೊದೆಗೆ ಉಚ್ಚೆಮಾಡುವ ಹಳೇ ಚಾಳಿ ಬಿಡದ ಅನೇಕ ಹಿರಿಯ ಅನುಭವಿ ಆಟಗಾರರು ಇಂದಿಗೂ ನಿಮಗೆ ನೋಡಲು ಸಿಗುತ್ತಾರೆ.

೬. ಇಂದು ಪಂದ್ಯಾಟ ಶುರುವಾಗುವುದಕ್ಕೂ ಮೊದಲು ನಮ್ಮ ತಂಡದ ಭಾವಚಿತ್ರ ತೆಗೆದಾಗ ನಾವು ಕಷ್ಟಪಟ್ಟು ಹೊಂದಿಸಿದ ಬರ್ತಿ ಹನ್ನೊಂದು ಜನರಿದ್ದರು. ನನ್ನ ಜೊತೆಗೆ ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಆಡಿಕೊಂಡು ಬಂದ ಅನೇಕ ಹಿರಿಯ ಆಟಗಾರರು ಮಾಯವಾಗಿ ತಂಡಕ್ಕೆ ಬಂದಿದ್ದ ಹೊಸಾ ಶಾಲಾ ಕಾಲೇಜು ಹುಡುಗರು ಜೊತೆಯಾಗಿದ್ದರು. ನಾನು ಕ್ರಿಕೆಟ್ ಬಿಡುತ್ತೇನೆಂದರು ಕ್ರಿಕೆಟ್ ನನ್ನನ್ನು ಅಷ್ಟು ಸುಲಭಕ್ಕೆ ಬಿಡುತ್ತಿಲ್ಲ. ಮುಂದಿನ ತಿಂಗಳು ಹಾಸನದಲ್ಲಿ ವೈದ್ಯಕೀಯ ಕಾಲೇಜುಗಳ ತಂಡಗಳ ನಡುವೆ ನಡೆವ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟಕ್ಕೆ ಹೋಗಬೇಕಿದೆ. ಮುಂದಿನ ತಿಂಗಳು ರೋಟರಿಯವರು ಹುಣಸೂರಿನಲ್ಲಿ ಆಯೋಜಿಸಿರುವ ಕ್ರಿಕೆಟ್ ಟೂರ್ನಿಗೆ ನನ್ನನ್ನು ಬಿಡದೆ ಕರೆದುಕೊಂಡು ಹೋಗುವ ಸಲುವಾಗಿ ಮಿತ್ರ ಪೊನ್ನಚ್ಚನ ಮಧುರವರು ಈಗಲೇ ಪೀಲ್ಡಿಂಗ್ ಸೆಟ್ ಮಾಡುತ್ತಿದ್ದಾರೆ.

೭. ಗೌಡ ಕೌಟುಂಬಿಕ ಕ್ರಿಕೆಟ್ ಪಂದ್ಯಾಟದಲ್ಲಿ ವಯಸ್ಸಿನ ಬೇಧವಿಲ್ಲದೆ ಜನರು ಆಟವಾಡುತ್ತಾರೆ. ಕೆಲವು ತಂಡದಲ್ಲಿ ಅಪ್ಪ ಮಗ ಇಬ್ಬರೂ ಜೊತೆಗೆ ಅಡುವುದನ್ನು ನಾನು ನೋಡಿದ್ದೇನೆ‌. ಈ ಬಾರಿ ಕಾಲೇಜಿಗೆ ರಜೆಯಿಲ್ಲದೆ ಅನೇಕ ಯುವ ಅಟಗಾರರು ಕೈಕೊಟ್ಟ ಕಾರಣ ಇಂದು ನಡೆಯುತ್ತಿದ್ದ ಪಂದ್ಯಗಳಲ್ಲಿ ನಾನು ಬಾಲಕನಿದ್ದಾಗ ಮಿಂಚುತ್ತಿದ್ದ ನನಗಿಂತ ಬಹಳ ಹಿರಿಯ ಆಟಗಾರರಾಗಿರುವ ಕೆದಂಬಾಡಿ ದಿಲ್ಲಿ ಮತ್ತು ಬಾಳಾಡಿ ಚಿನ್ನ ಆಡುತ್ತಿದ್ದದ್ದು ನೋಡಿ ನಾನು ಮತ್ತೆ ಬಾಲಕನಾದೆ. ನಾವಿಂದು ಸೋತು ಪಂದ್ಯಾವಳಿಯಿಂದ ಹೊರಗೆ ಬಿದ್ದರೂ ಮೈದಾನದಲ್ಲಿದ್ದಷ್ಟು ಕ್ಷಣ ನಾನು ಹತ್ತು ವರ್ಷ ಹಿಂದಕ್ಕೆ ಹೋಗಿ ಮತ್ತೆ ಕಾಲೇಜು ಹುಡುಗನಂತೆ ಉತ್ಸಾಹಿಯಾಗಿದ್ದೆ. ಅಂಕಣದಲ್ಲಿ ಒಂದು ಸಿಕ್ಸರ್ ಎತ್ತಿ ಮತ್ತೆ ಗತಕಾಲದ ಸವಿನೆನಪುಗಳನ್ನು ಮೆಲುಕು ಹಾಕಿದೆ..

ನಾವು ವಯಸ್ಸಾಯಿತು ಎಂದು ಆಟ ಬಿಡುತ್ತೇವಾ ?? ಅಥವಾ ಅಟಬಿಟ್ಟ ಕಾರಣಕ್ಕೆ ವಯಸ್ಸಾಗುವುದೇ ಎಂಬ ಅನುಮಾನಗಳೊಂದಿಗೆ ಆಟ ಮುಗಿಸಿದೆ!!!

‍ಲೇಖಕರು Admin

November 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: