“ಕೋಲುಮಂಡೆ” ಯಲ್ಲಿ ನನಗೇನೂ ಅಶ್ಲೀಲ ಕಾಣಲಿಲ್ಲ..

ಚಲಂ ಹಾಡ್ಲಹಳ್ಳಿ

ತಂದೆ ಹಾಡ್ಲಹಳ್ಳಿ ನಾಗರಾಜ್ ಹಾಗೂ ಮಗ ಚಲಂ ಇಬ್ಬರೂ ಸಾಹಿತಿಗಳು. ಚಲಂ ಈಗಾಗಲೇ ತಮ್ಮ ಕಥೆ ಕವಿತೆಗಳ ಮೂಲಕ ಗಮನ ಸೆಳೆದಿದ್ದಾರೆ. ಒಂದಷ್ಟು ಕಾಲ ಪುಸ್ತಕ ಮಳಿಗೆ ಕೂಡಾ ನಡೆಸಿದ ಅನುಭವ ಇದೆ.

ಕೋಲುಮಂಡೆ… ನಮ್ಮ ಸಂಸ್ಕೃತಿಯ ಬಿಂಬಿಸುವ, ಅದರ ಮೂಲಕ ನಮ್ಮನ್ನು ಕಥಾಲೋಕದ ಮೂಲಕ ಆಧ್ಯಾತ್ಮದ ನೆಲೆಗೆ ತಂದು ನಿಲ್ಲಿಸುವ ಪದ. ಮಂಟೆಸ್ವಾಮಿ ಪರಂಪರೆಯೊಳಗೆ ಇಂತಹಾ ಸಹಸ್ರಾರು ಪದಗಳಿವೆ. ದುರಾದೃಷ್ಟವೆಂಬಂತೆ ಇದೂವರೆಗೂ ಈ ಪರಂಪರೆಯ ಒಂದಂಶವನ್ನು ಕೂಡ ಅದರ ವಾರಸುದಾರರಾದ ನಾವುಗಳು ಬಳಸಿಕೊಳ್ಳದಂತೆ, ಅದರ ಪ್ರಯೋಜನ ಪಡೆಯದಂತೆ ಕರಾರುವಕ್ಕಾಗಿ ನೋಡಿಕೊಂಡು ಬರಲಾಗುತ್ತಿದೆ. ಅದಕ್ಕೆ ಅಂತಲೇ ಒಂದು ದುಷ್ಟ ಇತಿಹಾಸವೂ ಇದೆ. ಆ ದುಷ್ಟ ಇತಿಹಾಸ ಪದೆಪದೇ ಮರುಕಳಿಸುತ್ತಲೇ ಇರುತ್ತದೆ. ಈಗ ಮತ್ತೊಂದು ರೂಪದಲ್ಲಿ ಮರುಕಳಿಸಿದೆ. ಅದು ಚಂದನ್ ಶೆಟ್ಟಿ ಎಂಬ ರ್ಯಾಪ್ ಸಿಂಗರ್ ಮೂಲಕ.

ಚಂದನ್ ಶೆಟ್ಟಿ ಕನ್ನಡ ರ್ಯಾಪ್ ಲೋಕದ ಮುಖ್ಯ ಹೆಸರು. ಈ ಹಿಂದೆ ಬಂದ ಈತನ ಹಾಡುಗಳು ಯುವ ಸಮುದಾಯದಲ್ಲಿ ಬೀರಿರುವ ಪ್ರಭಾವವನ್ನು ಯಾರೂ ಅಲ್ಲಗಳೆಯಲಾರರು. ‘ಮೂರೇ ಮೂರು ಪೆಗ್ಗಿಗೆ..” ಎಂಬ ಹಾಡಿನ ಮೂಲಕ ಶಾಲಾಕಾಲೇಜುಗಳ ವಾರ್ಷಿಕ ಕಾರ್ಯಕ್ರಮಗಳಲ್ಲಿ ಕೂಡ ಸ್ಪೇಸ್ ಮಾಡಿಕೊಂಡವನು. ಮಕ್ಕಳಿಗೆ ಕುಣಿಯಲು ಸಹಜವಾಗಿರುತ್ತದೆ ಎಂಬಂತೆ ಇರುವುದರಿಂದ ಶಾಲಾ ಸಿಬ್ಬಂದಿಯೇ ಈ ಹಾಡಿಗೆ ಮಕ್ಕಳಿಂದ ಹೆಜ್ಜೆ ಹಾಕಿಸಿರುವುದನ್ನು ನಾನು ಹೋದ ಎಲ್ಲಾ ಶಾಲಾ ಕಾರ್ಯಕ್ರಮಗಳಲ್ಲಿ ನೋಡಿದ್ದೇನೆ. ಬೇಸರವೂ ಕೂಡ ಆಗಿದೆ. ಮಕ್ಕಳಿಗೆ ನೃತ್ಯ ಮಾಡಲು ಇದಕ್ಕಿಂತಹಾ ಚಂದದ ಕನ್ನಡ ಹಾಡು ಇಲ್ಲವೇ ಎಂದು ಆಲೋಚಿಸಿದ್ದೇನೆ. ಮೂರೇ ಮೂರು ಪೆಗ್ಗಿನ ಚಂದನ್ ಶೆಟ್ಟಿಯ ಅಭಿರುಚಿ ಮಕ್ಕಳ ಕಾರಣಕ್ಕಾಗಿ ನನಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ.

ಆ ನಂತರ ಚಂದನ್ ಶೆಟ್ಟಿ ಮದುವೆಯಾದ. ಮದುವೆಗೂ ಮುನ್ನ ಮೈಸೂರು ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ನಿವೇದಿತಾ ಎಂಬ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡುವ ಮೂಲಕ ಸುದ್ದಿಯೂ ಆಗಿದ್ದ. ಅವನ ಎಲ್ಲಾ ನಡವಳಿಕೆಗಳು ಪ್ರಚಾರದ ಗಿಮಿಕ್ ಎಂದು ಒಮ್ಮೆ ಅನಿಸಿದರೆ ಮತ್ತೊಮ್ಮೆ ಅದು ಆತನ ಬಾಲಿಶ ವರ್ತನೆ ಅಂತಲೂ ಅನಿಸಿತ್ತು. ಅದಕ್ಕೆ ಕಾರಣ ಚಂದನ್ ಯಾವತ್ತು ಪ್ರಬುದ್ಧನಂತೆ ನಡೆದುಕೊಂಡಿಲ್ಲ. ಒಬ್ಬ ಹಾಡುಗಾರನಿಂದ, ಅದರಲ್ಲೂ ಕರ್ನಾಟಕದಲ್ಲಿ ಅಷ್ಟಾಗಿ ತೆರೆದುಕೊಳ್ಳದ ರ್ಯಾಪ್ ಹಾಡುಗಾರನೊಬ್ಬನಿಂದ ಸದ್ಯಕ್ಕೆ ಅಂತಹ ನಿರೀಕ್ಷೆ ಬೇಡ ಅಂತಲೂ ಅನ್ನಿಸಿದ್ದಿದೆ.

ಆದರೆ ಮೊನ್ನೆ ಅಂದರೆ ಗಣೇಶ ಹಬ್ಬದ ದಿನ ಬಂದ ಆತನ ಹೊಸ ಹಾಡು “ಕೋಲುಮಂಡೆ” ಅವನ ಮೇಲಿನ ನನ್ನ ಅಭಿಪ್ರಾಯಗಳನ್ನು ಬದಲಾಯಿಸುವಂತೆ ಮಾಡಿತು. ಯಾಕೆಂದರೆ ಅವನು ತನ್ನ ಹೊಸ ಪ್ರಾಜೆಕ್ಟಿಗೆ ಆಯ್ಕೆ ಮಾಡಿಕೊಂಡಿದ್ದು ನಮ್ಮ ನೆಲಮೂಲ ಸಂಸ್ಕøತಿಯ ಹಾಡನ್ನು. ಅಂತಹುದೊಂದು ಪ್ರಯತ್ನಕ್ಕೆ ಕೈಹಾಕಿದ್ದು ನನಗೆ ಖುಷಿಕೊಟ್ಟಿದ್ದು ಮಾತ್ರವಲ್ಲ, ನಮ್ಮ ಡಿ.ಆರ್.ನಾಗರಾಜ್ ಅವರು ಹೇಳುವಂತೆ ‘ಪ್ರತಿಸಂಸ್ಕೃತಿ’ಗೆ ಒಂದು ಕಾಣ್ಕೆ ಎಂದು ಅನಿಸಿತು.

ಮಂಟೆಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ, ಧರೆಗೆ ದೊಡ್ಡವರ ಕುರಿತಾಗಿ ನಮ್ಮ ಕಾಲಮಾನದ ಯುವಸಮುಧಾಯಕ್ಕೂ ಗೊತ್ತಿಲ್ಲ. ಈಗಿನ ಸಮುದಾಯಕ್ಕೂ ತಿಳಿದಿಲ್ಲ. ಅದು ಯಾಕೆ ಆಗಿದೆ ಎಂಬುದರ ಬಗ್ಗೆ ನಮ್ಮ ನೆಲಮೂಲ ಸಂಸ್ಕೃತಿಯ ವಾರಸುದಾರರೂ ತಲೆಕೆಡೆಸಿಕೊಂಡಂತೆ ಕಾಣುವುದಿಲ್ಲ.

ನಮ್ಮ ನಾಡಿನ ಬಹುದೊಡ್ಡ ಸಮುದಾಯವನ್ನು ಪ್ರತಿನಿಧಿಸುವ ಧರೆಗೆ ದೊಡ್ಡವರ ಸಂಸ್ಕೃತಿಯನ್ನು ಜನರಿಗೆ ಪರಿಚಯ ಸಹ ಆಗದಂತೆ ತಡೆದದ್ದು ಯಾವುದು ಎಂಬುದು ಮೊದಲೇ ಹೇಳಿದಂತೆ ಒಂದು ದುಷ್ಟ ಇತಿಹಾಸ. ಆ ಧರೆಗೆ ದೊಡ್ಡವರ ಜಾಗಕ್ಕೆ ಮತ್ಯಾರೋ ದೊಡ್ಡವರನ್ನು ತಂದು ಕೂರಿಸಿ ನಮ್ಮವರಿಂದಲೇ ಅವರನ್ನು ಪೂಜಿಸುವಂತೆ ಮಾಡುವಲ್ಲಿ ಯಶಸ್ವಿಯಾದ ಈ ವೈದಿಕ ಸಂಸ್ಕೃತಿಯ ಮುಂದೆ ಧರೆಗೆ ದೊಡ್ಡವರ ಹಿಂಬಾಲಕರು ಬಲಹೀನರಾದರು.

ಇದು ಒಂದು ಸಾಧ್ಯಂತವಾದ ಸತ್ಯ. ಇದರ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿ ಮಾಡಿದ ಈ “ಕೋಲುಮಂಡೆ” ಹಾಡನ್ನು ಕೂಡ ನೋಡುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ ಇಂತಹಾ ಒಂದು ವಿಭಿನ್ನವಾದ ಹಾಗು ರಚನಾತ್ಮಕವಾದ ಪ್ರಯೋಗದಿಂದ ಧರೆಗೆ ದೊಡ್ಡವರ ಸಮುದಾಯಕ್ಕೆ ಆಗಬಹುದಾದ ಲಾಭದಿಂದ ವಂಚಿತರನ್ನಾಗಿಸಿದಂತಾಗುತ್ತದೆ.

ಚಂದನ್ ಇಲ್ಲಿ ಹಾಡಿನ ಒಂದು ಸಾಲನ್ನು ಬದಲಾಯಿಸಿಲ್ಲ. ಆದರೆ ದೃಶ್ಯರೂಪದಲ್ಲಿ ಸಂಕವ್ವನನ್ನು ಅಶ್ಲೀಲವಾಗಿ ತೋರಿಸಿದ್ದಾರೆ ಎಂಬುದು ಇಲ್ಲಿನ ಪ್ರಮುಖ ಆರೋಪ. ನಾನು ನೋಡಿದಾಗ ನನಗೆ ಯಾವ ಅಶ್ಲೀಲವೂ ಕಾಣಿಸಲಿಲ್ಲ. ಮೊದಲಿನಿಂದಲೂ ಧರೆಗೆ ದೊಡ್ಡವರ ಸಂಸ್ಕೃತಿಯ ಪ್ರತಿಪಾದಕನಾದ ನನಗೆ ಇದರಲ್ಲಿ ಅಶ್ಲೀಲವಾಗಿ ಕಾಣಿಸುವಂತಹಾ ಯಾವ ಅಂಶವೂ ಕಾಣಲಿಲ್ಲ. ಯಾಕೆಂದರೆ ನಮ್ಮ ಧರೆಗೆ ದೊಡ್ಡವರ ನೆಲೆಗಟ್ಟಿನ ಆಧಾರದ ಮೇಲೆ ರೂಪುಗೊಂಡ ಜನಪದದಲ್ಲಿ ಅಶ್ಲೀಲತೆಗೆ ಜಾಗವೇ ಇಲ್ಲ. ಜನಪದದ ಮೂಲದಲ್ಲಿ ಲೈಂಗಿಕ ವಿಚಾರಗಳನ್ನು ಅಡಿಗಿಸಿಟ್ಟುಕೊಂಡಿದೆ. ಅದು ಆಗಾಗ ಪ್ರಖರವಾಗಿ ಪ್ರಕಟವೂ ಆಗುತ್ತದೆ. ನಾಗಮಂಡಲದಿಂದ ಹಿಡಿದು ಸಿಂಗಾರವ್ವನ ತನಕ ನಮ್ಮ ಜನಪದ ನಮ್ಮ ಹೆಣ್ಣು ಸಮುದಾಯದ ಕಾವ್ಯ. ನಮ್ಮ ಹೆಣ್ಣಿನ ಅಭಿವ್ಯಕ್ತಿ. ಬಹಳಷ್ಟು ತುಳಿತಕ್ಕೆ ಒಳಗಾದ ನಮ್ಮ ಸ್ತ್ರೀ ಜನಾಂಗದ ಕಷ್ಟಸುಖಗಳನ್ನು ಬಿಂಬಿಸುವ ಒಂದು ಸಶಕ್ತ ಮಾಧ್ಯಮ ನಮ್ಮ ಜನಪದ.

ಇಲ್ಲಿ ಸಂಕವ್ವನದೂ ಕೂಡ ಅಂತಹುದೇ ಒಂದು ಕತೆ. ಗಂಡನಿಂದ ಅನುಮಾನಿತಳಾದ ಒಬ್ಬಳು ಸುಂದರಿಯ ಕತೆ. ಅವಳ ಗಂಡ ಅನುಮಾನಿಸುವ ರೀತಿಯನ್ನು ದೃಶ್ಯಕ್ಕೆ ಚಂದನ್ ತಂದಿದ್ದಾನೆ. ಅದೂ ಕೂಡ ಅವನದೇ ಆದ ರ್ಯಾಪ್ ಶೈಲಿಯಲ್ಲಿ. ರ್ಯಾಪ್ ಮಾಧ್ಯಮ ಗೊತ್ತಿದ್ದವರು ಅಲ್ಲಿ ಸ್ಲೋಮೋಷನ್ನಿನಲ್ಲಿ, ಈಗಾಗಲೇ ಸಮಾಜದೊಳಗೆ ತುರುಕಿರುವ ಸೂಕ್ಷ್ಮ ಸಂವೇದನೆಯ ರೂಪದಲ್ಲಿ ದೃಶ್ಯಗಳನ್ನು ಕಟ್ಟಿಕೊಡಲಾಗುವುದಿಲ್ಲ. ಆತನ ಮಾಧ್ಯಮ ಯಾವ ಶೈಲಿಯನ್ನು ಕೇಳುತ್ತದೆಯೋ.. ಅದೇ ಶೈಲಿಯಲ್ಲಿ ರೂಪಿಸಿದ್ದಾನೆ. ಸಂಕವ್ವನ ಪಾತ್ರದ ನಂದಿನಿ ಕೂಡ ತುಂಬಾ ಮುದ್ದಾಗಿ ಕಾಣಿಸುತ್ತಾಳೆ.

ಆ ದೃಶ್ಯದಲ್ಲಿ ಅಶ್ಲೀಲತೆ ಏನು ಬಂತು ಎಂಬುದನ್ನು ನೋಡಿದವರೇ ಹೇಳಬೇಕು. ಯಾಕೆಂದರೆ ಅಶ್ಲೀಲತೆ ಎಂದರೆ ಯಾವುದು ಎಂದು ನಿರ್ದೇಶನ ಕೊಡುವವರು, ಇದೂವರೆಗೂ ಅಶ್ಲೀಲತೆಯ ಮಾನದಂಡ ರೂಪಿಸಿದವರು ಕೂಡ ಧರೆಗೆ ದೊಡ್ಡವರ ಸಂಸ್ಕೃತಿಯನ್ನು ಕಿತ್ತುಕೊಂಡ ದುಷ್ಟ ಇತಿಹಾಸದವರೇ ಎಂಬುದನ್ನು ನೆನಪಿನಲ್ಲಿಡಬೇಕು.

ಪ್ರತಿ ಬಾರಿ ಧರೆಗೆ ದೊಡ್ಡವರ ಸಂಸ್ಕೃತಿಯ ಯಾವುದೇ ಹಾಡು, ಯಾವುದೇ ಸನ್ನಿವೇಶ ಮುಖ್ಯವಾಹಿನಿಗೆ ಬಂದಾಗ ಇಂತಹಾ ತಗಾದೆಗಳು ಬರುತ್ತಲೇ ಇವೆ. ಒಟ್ಟಾರೆ ಇವರ ಉದ್ದೇಶ ಧರೆಗೆ ದೊಡ್ಡವರ ಸಂಸ್ಕೃತಿ ಪ್ರಚಾರವಾಗಬಾರದು. ಈಗಿನ ಸಮುದಾಯಕ್ಕೆ ಪರಿಚಯವಾಗಬಾರದು. ಹಾಗೇನಾದರೂ ಆದರೆ ತಾವು ಈಗ ನೆಟ್ಟಿರುವ ಸಂಸ್ಕೃತಿಗೆ ಧಕ್ಕೆಯಾಗುತ್ತದೆ ಎಂಬುದಷ್ಟೇ ಈ ವಿವಾದದ ಹಿನ್ನೆಲೆಯ ಉದ್ದೇಶ. ದುರಂತವೆಂದರೆ ಇದನ್ನು ವಿರೋಧ ಮಾಡುತ್ತಿರುವವರು ಕೂಡ ಧರೆಗೆ ದೊಡ್ಡವರು ಎಂದು ಎನಿಸಿಕೊಂಡ ಹಿನ್ನೆಲೆಯವರೇ. ಅಂತಹವರಿಗೆ ವಿರೋಧಿಸಲು ಎರಡು ಕಾರಣಗಳನ್ನು ಪ್ರಮುಖವಾಗಿ ನೋಡಬಹುದು.

ಒಂದು ಅವರು ಖುದ್ದು ಧರೆಗೆ ದೊಡ್ಡವರ ವಾರಸುದಾರರಾದರೂ ಅವರ ಪ್ರಭಾವ ಪೂರ್ತಿ ವೈದಿಕ ಹಿನ್ನೆಲೆಯದ್ದು. ಆ ಪ್ರಭಾವ ಈ ವಿರೋಧದ ಒಂದು ಭಾಗ. ಇನ್ನೊಂದು ಕಾರಣ ಮಡಿವಂತಿಕೆಯದ್ದು. ಈ ಮಡಿವಂತಿಕೆ ಕೂಡ ಅಲ್ಲಿಯದೇ ಪ್ರಭಾವ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಎಲ್ಲಿ ಹೆಚ್ಚು ಮಡಿವಂತಿಕೆ ಇದೆಯೋ.. ಅಲ್ಲೆಲ್ಲಾ ಅನುಮಾನ ಇಟ್ಟುಕೊಳ್ಳುವುದೇ ಬೇಡ. ಆ ಮಡಿವಂತಿಕೆ ಎಂಬುದು ಯಾವುದನ್ನೋ ಮುಗಿಸಲು ಇರುವ ಬಹಳ ಹಳೆಯ, ಜಾಣತನದ ತಂತ್ರ. ಅಂತಹಾ ಮಡಿವಂತಿಕೆಯ ತಂತ್ರದ ಪ್ರತಿಫಲವೇ ಈ ವಿರೋಧ.

ಚಂದನ್ ಶೆಟ್ಟಿ ಇನ್ನೂ ಹುಡುಗ. ಜವಬ್ದಾರಿ ಇನ್ನೂ ಅರಿವಿಗೆ ಬರಬೇಕಿದೆ ಎಂಬುದನ್ನು ಒಪ್ಪಿಕೊಳ್ಳುತ್ತಲೇ… ನೇಕಾರ ಜನಾಂಗಕ್ಕೆ ಸೇರಿದ ಚಂದನ್ ‘ಶೆಟ್ಟಿ’ ದೀಕ್ಷಿತರಿಗಿಂತ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಶೂದ್ರ ಸಮುದಾಯದಿಂದ ಬಂದ ಎಲ್ಲಾ ಹುಡುಗರ ಪ್ರಮುಖ ಸಮಸ್ಯೆ ಇದು. ಅವರ ಪ್ರತಿಭೆ ಏನಿದ್ದರೂ ಪಲ್ಲಕ್ಕಿಯ ಘನತೆ ಮರೆಸಲಿಕ್ಕೆ ಮೀಸಲಿರಬೇಕೇ ಹೊರತು.. ‘ಖಂಡಾಯ’ ಯ ಪ್ರಾಮುಖ್ಯತೆ ಬಗ್ಗೆ ಅಪ್ಪಿತಪ್ಪಿಯೂ ಕೂಡ ಬಳಸುವಂತಿಲ್ಲ. ಆದರೆ ಈಗ ಚಂದನ್ ಶೆಟ್ಟಿ ಅಂತಹಾ ಒಂದು ತಪ್ಪು ಮಾಡಿಬಿಟ್ಟಿದ್ದಾನೆ. ಎಲ್ಲರೂ ಬೆಟ್ಟಗುಡ್ಡಗಳ ಸಮೇತ ಮುರಿದುಕೊಂಡು ಆತನ ಮೇಲೆ ಬಿದ್ದಿದ್ದಾರೆ.

ಜನಪದವನ್ನು ಮಡಿವಂತಿಕೆಯ ಬಂಧನದಲ್ಲಿಡುತ್ತಾ ಅದರ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವವರ ಕೈ ಮೇಲಾಗುತ್ತಿರುವ ಈ ಸಂದರ್ಭದಲ್ಲಿ ಜನಪದವನ್ನು ಮುಂದಿನ ಜನಾಂಗಗಳಿಗೆ ದಾಟಿಸುವ ಕೆಲಸ ಮಾಡುತ್ತಿರುವ ಪ್ರತಿಭೆಗಳಿಗೆ ‘ಪರಂಜ್ಯೋತಿ’ ಶಕ್ತಿ ತುಂಬಬೇಕಿದೆ.

ಒಂದು ಭರವಸೆಯಿತ್ತು.. ಇನ್ನು ಶಾಲಾ ಮಕ್ಕಳು “ಮೂರೇ ಮೂರು ಪೆಗ್ಗಿಗೆ..” “ ಮೈ ನೇಮ್ ಈಸ್ ಶೀಲಾ..” ಹಾಡುಗಳಿಗೆ ಹೆಜ್ಜೆ ಹಾಕುವ ಬದಲಿಗೆ ‘ಕೋಲುಮಂಡೆ’ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ಆಶಿಸಿದ್ದೆ. ಅಷ್ಟರ ಮಟ್ಟಿಗೆ ಚಂದನ್ ರಚನಾತ್ಮಕವಾಗಿ ಅಪ್‍ಗ್ರೇಡ್ ಆಗಿದ್ದ… ಅದನ್ನು ಈ ಸಮಾಜ ಸಹಿಸದಾಯಿತು ಮಾತ್ರವಲ್ಲ ಆತನ ವಿಡಿಯೋ ಡಿಲೀಟ್ ಆಗುವ ಮೂಲಕ ಮತ್ಯಾವುದೋ ಒಂದು ಹೊಸ ಪ್ರತಿಭೆ ಧರೆಗೆ ದೊಡ್ಡವರ ಕಡೆಗೆ ಭಯದಿಂದ ನೋಡುವಂತಹಾ ವಾತಾವರಣ ನಿರ್ಮಾಣವಾಗಿರುವುದನ್ನು ಬಹುಶಃ ಮಂಟೆಸ್ವಾಮಿ ಬಹಳ ದಿನ ಸುಮ್ಮನೆ ನೋಡುತ್ತಾ ಕೂರುವುದಿಲ್ಲ ಎಂಬ ಭರವಸೆಯಿದೆ.

‍ಲೇಖಕರು Avadhi

August 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: