ಜಿ ಎನ್ ಮೋಹನ್
‘ಕೋಡಂಗಿಗೆ ಇನ್ನು ಕೆಲಸವಿಲ್ಲ’- ನಾನು ಬರೆದ ಕವಿತೆ ಇದು.
ಜಗತ್ತೇ ಕೋಡಂಗಿಗಳಂತೆ ಕುಣಿಯುವವರಿಂದ ತುಂಬಿ ಹೋದಾಗ ನಿಜವಾದ ಕೋಡಂಗಿಗೇನು ಕೆಲಸ?.
ಈ ಪ್ರಶ್ನೆ ನನ್ನ ಮುಂದೆ ಮತ್ತೆ ಬಂದದ್ದು ಬಿ ಎನ್ ಮಲ್ಲೇಶ್ ಬರೆದ ‘ತೆಪರೇಸಿ ರಿಟರ್ನ್ಸ್’ ಪುಸ್ತಕವನ್ನು ಹಿಡಿದು ಕೂತಾಗ.
‘ಕಗ್ಗತ್ತಲ ಕಾಲದಲ್ಲೂ ಬರೆಯುವುದುಂಟೆ, ಹೌದು ಬರೆಯಲಿಕ್ಕಿದೆ ಕಗ್ಗತ್ತಲ ಕಾಲದ ಬಗ್ಗೆ..’ ಎಂದಿದ್ದು ಬ್ರೆಕ್ಟ್. ಆದರೆ ಈಗ ಇರುವುದು ಕೋಡಂಗಿಗಳ ಕಾಲದಲ್ಲಿ. ಕೋಡಂಗಿ ಎನ್ನುವುದು ಈಗ ನಿಜದ ಗುರುತಾಗಿ ಹೋಗಿದೆ. ಆ ಕಾರಣಕ್ಕಾಗಿಯೇ ಆ ಗುರುತಿನ ಬ್ಯಾಡ್ಜ್ ಹೊಂದಲು ಎಲ್ಲೆಡೆ ಇನ್ನಿಲ್ಲದ ಪೈಪೋಟಿ. ಮೂಗಿನ ಮೇಲೆ ನಿಂಬೆಹಣ್ಣು ಸಿಕ್ಕಿಸಿಕೊಳ್ಳಬೇಕೆಂದೇನಿಲ್ಲ, ಮುಖಕ್ಕೆ ಬಣ್ಣ ಹಚ್ಚಿಕೊಳ್ಳಬೇಕೆಂದೇನಿಲ್ಲ, ವಿಚಿತ್ರ ವೇಷ ತೊಡಬೇಕೆಂದೂ ಇಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟುಗಳೂ, ವಾಟ್ಸ್ ಅಪ್- ಟೆಲಿಗ್ರಾಮ್- ಸಿಗ್ನಲ್ ಗಳಲ್ಲಿ ಮುಂದಕ್ಕೆ ತಳ್ಳುವ ವಿಷಯಗಳೂ, ವೇದಿಕೆಗಳ ಮೇಲಿಂದ ಕೊಡುವ ಭಾಷಣಗಳೂ, ರೂಪಿಸುವ ನೀತಿಗಳೂ, ಮನೆ ಮಂದಿ ತಮಗಾಗಿ ರೂಪಿಸಿಕೊಂಡಿರುವ ಗ್ರೂಪ್ ಗಳಲ್ಲಿ ಆಗುವ ಚರ್ಚೆಗಳೂ, ಕಚೇರಿಗಳಲ್ಲಿ ಉಕ್ಕುವ ಉನ್ಮಾದಗಳೂ..
– ಈ ಎಲ್ಲವೂ ನಮ್ಮನ್ನು ಮೂಗಿನ ಮೇಲೆ ನಿಂಬೆಹಣ್ಣು ಇಲ್ಲದ ಕೋಡಂಗಿಗಳನ್ನಾಗಿ ಮಾಡಿದೆ.
ಅತಿ ಹೆಚ್ಚು ಕೋಡಂಗಿತನ ಈಗ ಹೆಚ್ಚು ಗೌರವಕ್ಕೆ, ಬಿರುದಿಗೆ, ತಕ್ಕ ಸ್ಥಾನ ಮಾನ ದೊರಕಲು ಅರ್ಹತೆಯಾಗುತ್ತಿದೆ.
ನಾನು ಬರೆದಿದ್ದೆ-
… ಈಗ ಕಾಲ ಬದಲಾಗಿದೆ
ನಗಿಸಲು ಎಲ್ಲರೂ ಸಿದ್ಧರಿದ್ದಾರೆ
ಒಂದು ಮಾತು ಹೇಳಿದರೂ
ನಗಬೇಕೆಂಬ ನಿಯಮವಿದೆ
ಮನಸ್ಸು ಹೇಗಾದರೂ ಇರಲಿ
ಸದಾ ಮುಗುಳ್ನಗುವ ಸುಂದರಿಯರಿದ್ದಾರೆ
ಮುಗುಳ್ನಗು ಉಕ್ಕಲೆಂದೇ ಟೂತ್ ಪೇಸ್ಟ್ ಗಳಿವೆ…
…ಹಾಗಾದರೆ ಇನ್ನು ನಾನೇಕೆ ಸ್ವಾಮಿ
ಅದಕ್ಕಾಗಿಯೇ ನಿಂತಿದ್ದೇನೆ
ನಿಮಗೆ ಹೇಳಿ ಹೋಗಲು
ಬಟ್ಟೆ ಬದಲಾಯಿಸಬೇಕು
ಟೋಪಿ ತೆಗೆದಿಡಬೇಕು ಬೇಗ ಬಣ್ಣ ಒರೆಸಬೇಕು
ಮೂಗಿನ ಮೇಲಿದೆಯಲ್ಲ ನಿಂಬೆಹಣ್ಣು
ಅದನ್ನು ಕಳಚಿಡಬೇಕು
ನೀವು ನಗಲೆಂದೇ ಮಾಡುತ್ತಿದ್ದ ಚೇಷ್ಟೆ
ಬದಿಗಿರಿಸಬೇಕು
ಈಗ ಕಾಲ ಬದಲಾಗಿದೆ
ಕೋಡಂಗಿಗೆ ಇನ್ನು ಕೆಲಸವಿಲ್ಲ…
ಅದೇ ರೀತಿ ಕೆಲಸವಿಲ್ಲದಂತಾಗಿ ಹೋದವನು ತೆಪರೇಸಿ. ‘ತೆಪರೇಸಿ’ ಕನ್ನಡ ಕಂಡ ಬೆಸ್ಟ್ ‘ಕ್ರಿಟಿಕ್’. ನಮ್ಮ ಮನಸ್ಸಿನೊಳಗೆ ಒಬ್ಬ ನ್ಯಾಯಾಧೀಶ, ಒಬ್ಬ ಪೊಲೀಸ್ ಇರಬೇಕು ಎಂದು ಹಿರಿಯರೊಬ್ಬರು ಹೇಳುತ್ತಿದ್ದರು. ಅವರಿಬ್ಬರೂ ನಮ್ಮ ಅಂತರಂಗದ ಶುದ್ಧತೆಯನ್ನು ಕಾಯುವ ವಾಚ್ ಡಾಗ್ ಗಳು. ಇವರ ಜೊತೆಗೆ ಒಬ್ಬ ‘ತೆಪರೇಸಿ’ಯೂ ಇರಬೇಕು ಎಂದು ನಾನು ಆ ಪಟ್ಟಿಗೆ ಇನ್ನೊಂದನ್ನು ಸೇರಿಸಿದೆ.
‘ತೆಪರೇಸಿ ರಿಟರ್ನ್ಸ್’ ಅನುಗಾಲದ ಗೆಳೆಯ ಬಿ ಎನ್ ಮಲ್ಲೇಶ್ ಒಂದು ದಶಕಕ್ಕೂ ಹೆಚ್ಚು ಕಾಲ ಬರೆದ ರಾಜಕೀಯ ವಿಡಂಬನೆಯ ಸಂಕಲನ. ರಂಗಭೂಮಿಯಲ್ಲಿರುವವರಿಗೆ ಚೆನ್ನಾಗಿ ಗೊತ್ತು ಕಾಮಿಡಿ ಎಷ್ಟು ಕಷ್ಟ ಅಂತ. ನೋಡಲು ಸರಳವಾಗಿ, ಅತಿ ಸಲೀಸು ಅನ್ನುವಂತಿದ್ದರೂ ಮುಖದ ಮೇಲೆ ಮುಗುಳ್ನಗು ತರಿಸಬೇಕು, ಒಳಗನ್ನು ಕಲಕಬೇಕು ಎನ್ನುವುದು ಸುಲಭವಲ್ಲ. ಕವಿತೆ ಬರೆಯುತ್ತಿದ್ದ, ಅದರಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ಮಲ್ಲೇಶ್ ಇದ್ದಕ್ಕಿದ್ದಂತೆ ವಿಡಂಬನೆಯ ಕೈ ಕುಲುಕಿದ. ಇದರಿಂದ ಕಾವ್ಯಕ್ಕೆ ಖಂಡಿತಾ ನಷ್ಟವಾಯಿತು. ಆಯಿತಲ್ಲ ಎಂದು ತುಂಬಾ ನೋವು ಪಟ್ಟುಕೊಳ್ಳದಷ್ಟು ವಿಡಂಬನೆಗೆ ಒಂದು ಘನತೆ ತಂದುಕೊಟ್ಟ.
ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದಲ್ಲಿ ನಾವಿಬ್ಬರೂ ಕವಿತೆಯನ್ನು ಕೈನಲ್ಲಿ ಹಿಡಿದು ಮುಖಾಮುಖಿಯಾದವರು. ಅದೇ ಕಾರಣವಾಗಿ ಕ್ರೈಸ್ಟ್ ಕಾಲೇಜಿನ ಆವರಣದ ಆಚೆಯೂ ನಮ್ಮ ಕಾವ್ಯ ಬಾಂಧವ್ಯ ಮುಂದುವರೆಯಿತು. ಜಿ ಎಸ್ ಸದಾಶಿವರ ಕಣ್ಗಾವಲಿನಲ್ಲಿ ಈತ ಪಿ ಟಿ ಉಷಾ ಬಗ್ಗೆ ಬರೆದ ಕವಿತೆ ‘ಸುಧಾ’ದಲ್ಲಿ ಪ್ರಕಟವಾದಾಗ ನಾವೆಲ್ಲರೂ ಇವನ ಕವಿತೆಯ ಶಕ್ತಿಗೆ ಬೆರಗಾಗಿದ್ದೆವು. ‘ಬೇರು ಒಣಗಿದೆ ಪ್ರೀತಿ’ ಕವನ ಸಂಕಲನ ರೂಪುಗೊಳ್ಳಲು ಕೈ ಜೋಡಿಸಿದ್ದೆವು. ಕವಿತೆಯ ಸಹವಾಸವೇ ಸಾಕು ಎನ್ನುವಂತೆ ಮಲ್ಲೇಶ್ ರಾತ್ರೋರಾತ್ರಿ ಮಗ್ಗುಲು ಬದಲಿಸಿಬಿಟ್ಟ. ನಮಗೇನೂ ಆಶ್ಚರ್ಯವಾಗಲಿಲ್ಲ. ಆತನ ಜೊತೆ ಸಾಕಷ್ಟು ಇಳಿಸಂಜೆಗಳನ್ನು ಕಳೆದ ನಮಗೆ ಆತನ ನವಿರಾದ ಹಾಸ್ಯದ ಸ್ಪರ್ಶ ಸಿಕ್ಕಿತ್ತು. ಗಂಭೀರವಾಗಿ ಮುಖ ಮಾಡಿಕೊಂಡೇ ಆತ ನಮ್ಮೆದುರು ತೆಪರೇಸಿ, ಗುಡ್ಡೆ, ದುಬ್ಬೀರ, ಪರಮೇಶಿ… ಹೀಗೆ ಅನೇಕ ಪಾತ್ರಗಳನ್ನು ನಡೆಸಿಕೊಂಡು ಬಂದು ಬಿಡುತ್ತಿದ್ದ. ನಾವು ಬಿಟ್ಟ ಕಣ್ಣು ಬಿಟ್ಟುಕೊಂಡು ಆತನ ಮಾತು ಕೇಳುತ್ತಾ ಕೂರುತ್ತಿದ್ದೆವು.
ಮಲ್ಲೇಶ್ ಪತ್ರಿಕೆಯ ಸಂಪಾದಕನಾಗಿ, ಟೆಲಿವಿಷನ್ ಚಾನಲ್ ನ ಪ್ರತಿನಿಧಿಯಾಗಿ ಸದಾ ಸುದ್ದಿಯ ಮೇಲೆ ಕಣ್ಣಿಟ್ಟಿರುವಾತ. ಪ್ರತೀ ದಿನ ನಾವು ಓದುವ ಸುದ್ದಿಗೆ ತನ್ನ ಒಳಗಣ್ಣಿನ ಮೂಲಕ ವಿಶೇಷ ಆಯಾಮ ನೀಡಿ, ಮಸಾಲೆ ರುಬ್ಬಿ ಪತ್ರಿಕೆಯ ಅಂಕಣದಲ್ಲಿ ಆಟ ಆಡಿಕೊಳ್ಳಿ ಎಂದು ಬಿಟ್ಟುಬಿಡುತ್ತಿದ್ದ. ಈತ ಕವಿಯೂ ಆದ ಕಾರಣ ಇವನ ವಿಡಂಬನೆಗೆ ತನ್ನದೇ ಆದ ಸ್ಪೆಷಲ್ ಟಚ್ ಇತ್ತು.
‘ನಮ್ಮೊಳಗೊಬ್ಬ ನಾಜೂಕಯ್ಯ’ ಅಂತ ಟಿ ಎನ್ ಸೀತಾರಾಮ್ ಅವರ ನಾಟಕ ಇದೆ. ನನ್ನನ್ನು ಅತಿಯಾಗಿ ಕಾಡಿದ ನಾಟಕ ಇದು. ಆ ನಾಟಕ ನೋಡಿದಂದಿನಿಂದ ನನ್ನೊಳಗೂ, ಇನ್ನೊಬ್ಬರೊಳಗೂ, ಈ ಸಮಾಜದಲ್ಲೂ ಇರಬಹುದಾದ ನಾಜೂಕಯ್ಯಂದಿರನ್ನು ನನಗೆ ಗೊತ್ತೇ ಇಲ್ಲದಂತೆ ಹುಡುಕಲು ಶುರು ಮಾಡಿಬಿಟ್ಟಿದ್ದೇನೆ. ಈಗ ‘ತೆಪರೇಸಿ’. ಬಿ ಎನ್ ಮಲ್ಲೇಶ್ ರಾಜಕೀಯ ವಿಡಂಬನೆ ಬರೆಯಲು ಶುರು ಮಾಡಿದಂದಿನಿಂದ ನಮ್ಮೊಳಗೊ ಒಬ್ಬ ತೆಪರೇಸಿ ಇದ್ದಾನೇನೋ ಎಂದು ಹುಡುಕಿ ನೋಡಲು ಆರಂಭಿಸಿದ್ದೇನೆ. ತೆಪರೇಸಿ ಎನ್ನುವವನು ‘ನಾನು, ನೀನು, ಆನು, ತಾನು’ ಎಲ್ಲರ ಸಂಗಮ. ಈತ ಸಮಾಜದ ಚಿಕಿತ್ಸಕ. ‘ಗುಂಡಿನ ಮತ್ತೇ ಗಮ್ಮತ್ತು’ ಎಂದುಕೊಂಡಿರುವ ತೆಪರೇಸಿ ಸಮಾಜದ ಒಳಗನ್ನು ಅಂತರಂಗದ ಅಥವಾ ಅನುಭವದ ಕಣ್ಣಿಂದ ಅಳೆಯಬಲ್ಲ ವ್ಯಕ್ತಿ. ‘ಸಮುದಾಯ’ ರಂಗತಂಡ ಅಭಿನಯಿಸಿದ ಆಂಟನ್ ಚೆಕೋವ್ ನ ‘ಕತ್ತಲೆ ದಾರಿ ದೂರ’ ನಾಟಕ ನೋಡಿದ್ದೆ. ಅದರಲ್ಲಿ ಬರುವ ಹುಚ್ಚಾಸ್ಪತ್ರೆಯಲ್ಲಿ ಇರುವವರೆಲ್ಲರೂ ಸ್ವಸ್ಥ ಮನಸ್ಸಿನವರೇ, ಸಮಾಜದಲ್ಲಿರುವವರೇ ಅಸ್ವಸ್ಥರು. ಅಂತೆಯೇ ಈ ತೆಪರೇಸಿ ಪ್ರಪಂಚವೂ. ಸದಾ ಅಮಲಿನಲ್ಲಿರುವ ತೆಪರೇಸಿ ಮಾತ್ರ ನೇರವಾಗಿ ನೋಡಬಲ್ಲ, ನೇರವಾಗಿ ಇದ್ದೇವೆ ಎಂದುಕೊಂಡವರ ನೋಟವೇ ಅಡ್ಡಾದಿಡ್ಡಿ.
Two is a company, Three is a crowd ಎನ್ನುತ್ತಾರೆ. ನಾನು ಮತ್ತು ಮಲ್ಲೇಶ ಮಾತ್ರ ಇದ್ದ ಜಗತ್ತಿನೊಳಗೆ ಅದ್ಯಾವಾಗ ಈ ತೆಪರೇಸಿ ತೂರಿಕೊಂಡನೋ..?? ಈಗ ನಾವಿಬ್ಬರು ಮಾತಿಗೆ ಕೂತರೂ ಅಲ್ಲಿ ತೆಪರೇಸಿ ಸುಳಿಯದೆ ಬಿಡುವುದಿಲ್ಲ. ಮಲ್ಲೇಶನ ಒಳಗಿರುವ ಸ್ವಸ್ಥ ಸಮಾಜದ ಹಲುಬುವಿಕೆಗೆ, ಆತನ ಒಳನೋಟಕ್ಕೆ, ಬೆನ್ನು ಬಿಡದೆ ಗೆಳೆತನವನ್ನು ಕಾಯ್ದುಕೊಳ್ಳುವ ಆತನ ಅಗಾಧ ಪ್ರೀತಿಗೆ ಶರಣು.
0 Comments