ಕೊಪ್ಪಳ ಜಾತ್ರೆ ಅಕ್ಷಯ ಪಾತ್ರೆ…

ಸಂಗಮೇಶ್‌ ಮೆಣಸಿನಕಾಯಿ

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ, ಗಜೇಂದ್ರಗಡ ಬಳಿಯ ಕಾಲಕಾಲೇಶ್ವರ (ಅಲ್ಲಿನ ಆಡುಭಾಷೆಯಲ್ಲಿ ಕಳಕಪ್ಪನ ಜಾತ್ರೆ) ಜಾತ್ರೆ, ಬದಾಮಿ ಬನಶಂಕರಿ ಜಾತ್ರೆ ಎಂಬ ಶಬ್ದಗಳು ಕಿವಿಗೆ ಬಿದ್ದಾಕ್ಷಣ ನನ್ನ ಮನಸ್ಸು ಮಳೆ ಬರುವ ಮುಂಚಿನ ಮಯೂರಿಯಾಗುತ್ತದೆ.

ಅದರಲ್ಲೂ ಕೊಪ್ಪಳ ಜಾತ್ರೆ ನನಗೆ ಬಹುವಾಗಿ ಕಾಡುವ ಜಾತ್ರೆ. ನಮ್ಮ ತಂದೆ ಭಾನಾಪುರದಲ್ಲಿ ರೈಲ್ವೆ ನೌಕರಿ ಮಾಡುವಾಗ ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಆಗಾಗ ಹೋಗುತ್ತಿದ್ದೆವು. ಮಠದ ಹಿಂದಿನ ಬೆಟ್ಟದ ಮೇಲೆ ಕುಳಿತು ಊಟ ಮಾಡಿ-ಆಟ ಆಡಿ ಬರೋದೆಂದರೆ ಎಲ್ಲಿಲ್ಲದ ಹಿಗ್ಗು. ಇನ್ನು ಗವಿಸಿದ್ದೇಶ್ವರ ಜಾತ್ರೆ ಎಂದರೆ ಕಾತುರದಿಂದ ಕಾಯುತ್ತಿದ್ದ ದಿನಗಳವು.

ತೇರಿನ ದಿನ ಆಗ ಸಾವಿರಾರು ಜನ ಸೇರುತ್ತಿದ್ದರು. ತೇರಿಗೆ ಉತ್ತತ್ತಿ-ಬಾಳೆಹಣ್ಣು ಎಸೆದು, ಬೇರೆಯವರು ಎಸೆದದ್ದನ್ನು ಲಗುಬಗೆಯಿಂದ ಆಯ್ದುಕೊಂಡು ಪ್ರಸಾದ ಎಂದು ತಿಂದು ಭಾನಾಪುರ ದಾರಿ ಹಿಡಿಯುತ್ತಿದ್ದೆವು!

ಒಮ್ಮೆ ನಾನು ಆ ಜಾತ್ರೆಯಲ್ಲಿ ತಪ್ಪಿಸಿಕೊಂಡು ಬಿಟ್ಟಿದ್ದೆನಂತೆ. ನನಗಂತೂ ಆ ಘಟನೆ ಒಂದಿಷ್ಟೂ ನೆನಪಿಲ್ಲ. ಅಪ್ಪ-ಅವ್ವ ಹೇಳುತ್ತಿದ್ದುದಷ್ಟೇ ಗೊತ್ತು. ಅರ್ಧ ಗಂಟೆ ಅಪ್ಪ-ಅವ್ವನಿಂದ ಕಳೆದು ಹೋಗಿದ್ದ ನಾನು ಅಳುತ್ತಿರುವುದನ್ನು ಕಂಡು ಯಾರೋ ಪೊಲೀಸರಿಗೆ ತಿಳಿಸಿದಾಗ, ಪೊಲೀಸರು ತಮ್ಮ ವಾಹನದಲ್ಲಿ ಕೂಡಿಸಿಕೊಂಡು ಧ್ವನಿವರ್ಧಕದಲ್ಲಿ ಒಂದು ಮಗು ಸಿಕ್ಕಿರುವ ಬಗ್ಗೆ ಅನೌನ್ಸ್ ಮಾಡುತ್ತಿದ್ದರಂತೆ.

ಜಾತ್ರೆಯ ಗದ್ದಲದಲ್ಲಿ ಯಾರಿಗೆ ಕೇಳಿಸಬೇಕು? ನಮ್ಮ ಅಪ್ಪಾಜಿ ನನ್ನನ್ನು ಹುಡುಕುತ್ತ ತಿರುಗುವಾಗ ಪೊಲೀಸ್ ವಾಹನದಲ್ಲಿದ್ದ ನನ್ನನ್ನು ನೋಡಿ ಎತ್ತಿಕೊಂಡು ಬಂದರಂತೆ. ನಾನು ಅತ್ತು ಅತ್ತು ಕಣ್ಣು ಕೆಂಪಗಾಗಿದ್ದುವಂತೆ. ಪೊಲೀಸರು ನನಗೆ ಬಿಸ್ಕಿಟ್ ಕೊಟ್ಟು ಸಮಾಧಾನ ಮಾಡಿದ್ದರಂತೆ. ಆಗ ನಾನು ೩-೪ ವರ್ಷದವನಿರಬೇಕು.

ಅಷ್ಟಿಷ್ಟು ತಿಳಿವಳಿಕೆ ಬಂದ ಮೇಲಿನ ಕತೆ ಹೇಳುವುದಾದರೆ ತೇರಿನ ದಿನ ಬಂದು ಉತ್ತತ್ತಿ-ಬಾಳೆಹಣ್ಣು ಎಸೆದು ಆವತ್ತು ಓಡಾಡುತ್ತಿದ್ದ ‘ಗುರಪ್ಪನ ಬಸ್ಸು’ ಎಂಬ ಖಾಸಗಿ ಬಸ್ ಹತ್ತಿ ರಾತ್ರಿ ಹೊತ್ತು ಭಾನಾಪುರ ತಲುಪುತ್ತಿದ್ದೆವು. ಉಳಿದಂತೆ ಅವತ್ತು ಯಾವುದೇ ಆಟಿಗೆ ಸಾಮಾನು, ಫಳಾರದ ಖರೀದಿ ಏನೂ ಇಲ್ಲ.

ತೇರಿನ ಕಳಸ ಐದು ದಿನಕ್ಕೆ ಇಳಿದ ನಂತರ ನಮ್ಮ ತಾಯಿ ಕಡೆಯ ಸಂಬಂಧಿಯಾಗಿದ್ದ ನಿವೃತ್ತ ಶಿಕ್ಷಣಾಧಿಕಾರಿ ದಿ. ಬಸಪ್ಪ ಅಂಗಡಿ, ಇಂದಿನ ತಲೆಮಾರಿನವರಿಗೆ ಹೇಳಬೇಕೆಂದರೆ ಕೊಪ್ಪಳದ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಲಲಿತಾ ಅಂಗಡಿ ಅವರ ತವರು ಮನೆಯಲ್ಲಿ ಒಂದೆರಡು ದಿನ ಉಳಿದುಕೊಂಡು ಜಾತ್ರೆ ಮಾಡುತ್ತಿದ್ದವು. ಲಲಿತಾ ಅಂಗಡಿ ನನಗೆ ಸಂಬಂಧದಲ್ಲಿ ಕಕ್ಕಿ (ಚಿಕ್ಕಮ್ಮ) ಆಗಬೇಕು. ಒಂದು ದಿನ ಗದ್ದುಗೆಯ ದರ್ಶನ, ತೊಟ್ಟಿಲು ಆಡೋದು, ಅವ್ವನ ಬಳೆ ಖರೀದಿ ಮತ್ತು ಸಿನಿಮಾ ನೋಡುವುದು.

ಮತ್ತೊಂದು ದಿನ ನಮ್ಮ ಆಟಿಗೆ ಸಾಮಾನುಗಳ ಖರೀದಿ. ಸುಂದರಂ ಫೋಟೊ ಸ್ಟುಡಿಯೊಗೆ ಹೋಗಿ ಫೊಟೊ ತೆಗೆಸಿಕೊಳ್ಳೋದು! ಚಷ್ಮಾ, ವಾಚು, ಗಿರಗಿಟ್ಟಿ, ಕಾರು, ಲಾರಿ, ಬಂಡಿ, ಬಲೂನು, ತುತ್ತೂರಿ, ಲಟಿಪಿಟಿ, ಪಿಚ್ಚರ್ ಡಬ್ಬಿ, ಚೆಂಡು, ಡಮರು, ಸೀಟಿ ಹೀಗೆ ಕಂಡದ್ದೆಲ್ಲವನ್ನು ಬೇಡುವ ಮನಸ್ಸು ಒಂದೆಡೆ. ‘ಈಗ ಇದನ್ನಷ್ಟ ತೊಗೊ, ಅದು ಬೇಡ…’ ಎನ್ನುವ ಅಪ್ಪನ ಅಪ್ಪಣೆ ಮತ್ತೊಂದೆಡೆ. ಎಷ್ಟೋ ಸಾರಿ ಅಂದುಕೊಳ್ಳುತ್ತಿದ್ದೆ-‘ದೊಡ್ಡವನಾದ ನಂತರ ಈ ಜಾತ್ರೆಗೆ ಬಂದು ಎಲ್ಲ ತರಹದ ಒಂದೊಂದು ಆಟಿಗೆ ಸಾಮಾನು ತೊಗೊಂಡುಬಿಡ್ತೀನಿ!’

ನಮ್ಮಪ್ಪಾಜಿ ಕೆಲವೊಮ್ಮೆ ಎಲ್ಲ ಸಾಮಾನುಗಳನ್ನು ನನಗೆ-ತಮ್ಮನಿಗೆ ಒನ್-ಬೈಟೂ ಕೊಡಿಸವರು. ಉದಾಹರಣೆಗೆ ಚಕ್ಕಡಿ, ಕಾರು, ಚಷ್ಮಾ, ವಾಚು ಎಲ್ಲವೂ ಒಂದೊಂದೇ. ಅಂದರೆ ಎಲ್ಲ ಆಟಿಗೆಗಳು ಇಬ್ಬರಿಗೂ ಸಿಗಲಿ ಎಂಬ ಉದ್ದೇಶ ಅವರದು. ಅದೇ ನಮಗೆ ಜಗಳಕ್ಕೆ ಕಾರಣವಾಗಿ ಬಿಡೋದು. ನನಗೆ ಕಾರು ಬೇಕೆನ್ನಿಸಿದಾಗ ತಮ್ಮನಿಗೂ ಅದೇ ಬೇಕು ಅನ್ನಿಸೋದು; ನನಗೆ ಚಷ್ಮಾ ಧರಿಸುವ ಆಸೆ ಆದಾಗ ಅವನಿಗೂ ಅದೇ ಆಸೆ ಆಗೋದು! ಜಗಳ ಬಗೆ ಹರಿಸಲು ಅಪ್ಪನ ಒಡ ಕಟ್ಟಿಗೆಯೊಂದನ್ನು ಬಿಟ್ಟರೆ ಬೇರೆ ಯಾರಿಂದಲೂ-ಯಾವುದರಿಂದಲೂ ಸಾಧ್ಯವಾಗುತ್ತಿರಲಿಲ್ಲ.

ಈಗ ಅಪ್ಪನ ಜಾಗದಲ್ಲಿ ನಾನಿದ್ದೀನಿ, ನನ್ನ ಜಾಗದಲ್ಲಿ ನನ್ನ ಮಕ್ಕಳಿದ್ದಾರೆ ಕಾಲಾಯ ತಸ್ಮೈ ನಮಃ ಅಪ್ಪಾಜಿ ಭಾನಾಪುರದಿಂದ ಆಲಮಟ್ಟಿಗೆ ವರ್ಗವಾದ ನಂತರವೂ ಕೆಲವು ವರ್ಷ ಕೊಪ್ಪಳ ಜಾತ್ರೆಗೆ ಬರುತ್ತಿದ್ದೆವು. ಲಲಿತಾ ಅಂಗಡಿ ಅವರ ತಾಯಿ ಗಂಗಮ್ಮ, ನಮ್ಮ ತಾಯಿಯನ್ನು ಸ್ವಂತ ಮಗಳಂತೆ ನೋಡಿಕೊಳ್ತಿದ್ರು, ನಮ್ಮನ್ನು ಸ್ವಂತ ಮೊಮ್ಮಕ್ಕಳಂತೆ ನೋಡಿಕೊಳ್ತಿದ್ರು. ಅವರು ಕೊರ್ಲಹಳ್ಳಿ ವೀರಭದ್ರಪ್ಪನವರ ಮನೆ ಬಳಿ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅದು ಅವರ ಬಾಡಿಗೆ ಮನೆ ಅಂತ ನನಗೆ ಗೊತ್ತಾದದ್ದು ಎಷ್ಟೋ ವರ್ಷಗಳ ನಂತರ. ನಾವು ನಮ್ಮದೇ ಮನೆ ಎಂಬಂತೆ ಅವರ ಮನೆಗೆ ಹೋಗಿ ಗದ್ದಲ ಹಾಕತಿದ್ವಿ!

ಮುಂದೆ ನಾನು ಹಿಂದಿ ಬಿ.ಎಡ್. ಮಾಡಲು ಕೊಪ್ಪಳಕ್ಕೆ ಹೋದಾಗ ಅದೇ ಮೊದಲ ಬಾರಿಗೆ ಕೊಪ್ಪಳಕ್ಕೆ ಬಂದಿದ್ದ ನನ್ನ ಹಲವು ಸಹಪಾಠಿಗಳಿಗೆ ಕೊಪ್ಪಳದ ಗವಿಸಿದ್ದೇಶ್ವರ ಮಠ, ಗಡಿಯಾರ ಕಂಬ, ಪ್ಯಾಟಿ ಈಶ್ವರ ದೇವಸ್ಥಾನ, ಕುಂಬಾರ ಓಣಿ ಮೂಲಕ ಮಠಕ್ಕೆ ಹೋಗುವ ದಾರಿ, ಸರದಾರ ಗಲ್ಲಿ, ಹಸನ್ ರೋಡ್, ಕನಕಾಚಲ ಟಾಕೀಸು, ಸ್ಟಾರ್ ಟಾಕೀಸು, ಶಾರದಾ ಟಾಕೀಸು, ಮಳಿಮಲ್ಲಪ್ಪ ದೇವಸ್ಥಾನ, ಅಶೋಕನ ಶಿಲಾಶಾಸನ ಎಲ್ಲವೂ ನಮ್ಮದೇ ಎಂಬಂತೆ ತೋರಿಸಿದ್ದೆ. ನಮ್ಮ ತಂದೆಗೆ ಹೈಸ್ಕೂಲ್ ಶಿಕ್ಷಣ ಮುಗಿದ ನಂತರ ಕೆಲವು ತಿಂಗಳ ತಮ್ಮ ಹಾಸ್ಟೆಲ್‌ನಲ್ಲಿ ಅನ್ನ-ಆಶ್ರಯ ನೀಡಿದ್ದ ಸ್ವಾತಂತ್ರ್ಯ ಯೋಧ ಶಂಕ್ರಪ್ಪ ಬಂಗಾರಶೆಟ್ಟರ ಮನೆಯನ್ನು ‘ಅವರು ನಮಗ ಅಜ್ಜ ಆಗಬೇಕು, ಅದು ಬಂಗಾರಶೆಟ್ಟರ ಮನೆ…’ ಅಂತ ಹೆಮ್ಮೆಯಿಂದ ತೋರಿಸುತ್ತಿದ್ದೆ.

ಬಿ.ಎಡ್. ಓದುವಾಗ ನಮ್ಮ ಗೆಳೆಯರ ಗುಂಪು ಜಾತ್ರೆಗೆ ಪ್ರತಿದಿನ ಭೇಟಿ ನೀಡುತ್ತಿತ್ತು. ಜಾತ್ರೆಗೆ ಬಂದವರನ್ನು, ಅದರಲ್ಲೂ ಹುಡುಗಿಯರನ್ನು ನೋಡುವುದೇ ಒಂದು ಸಡಗರ! ನಂಬುತ್ತೀರೋ ಇಲ್ಲವೋ, ಮಠದ ಹಿಂದಿನ ಬೆಟ್ಟದ ಮೇಲೆ ಒಂದು ದೊಡ್ಡ ಬಂಡೆ ಇದೆ. ಅದರ ಮೇಲೆ ಕುಳಿತು ಹಾಡು ಹಾಡುತ್ತಿದ್ದೆವು. ಕೆಳಗೆ ಇರುವ ಜನಜಾತ್ರೆಗೆ ನಮ್ಮ ಹಾಡು ಕೇಳಿಸದು; ಅವರ ಗದ್ದಲ ನಮಗೆ ಕಾಡಿಸದು! ನಮ್ಮ ಈ ‘ಜಾತ್ರಾ ಸಂಗೀತ ಕಾರ್ಯಕ್ರಮಕ್ಕೆ’ ನಮ್ಮ ಕಾಲೇಜಿನ ಉಪನ್ಯಾಸಕರೂ ಒಂದೆರಡು ದಿನ ಬಂದು ಆಸ್ವಾದಿಸಿದರು!

ಗವಿಮಠದ ಇಂದಿನ ಪೀಠಾಧಿಪತಿಗಳು ನನ್ನ ಮಟ್ಟಿಗೆ ಇವತ್ತಿಗೂ ಪರ್ವತ ದೇವರೇ. ಆಗಿನ್ನೂ ಶ್ರೀ ಶಿವಶಾಂತವೀರ ಸ್ವಾಮಿಗಳ ಬಳಿ ಸಂಸ್ಕಾರ-ತರಬೇತಿ ಪಡೆಯುತ್ತಿದ್ದ ಪರ್ವತ ದೇವರು ನನಗೆ ಬಹಳ ಆತ್ಮೀಯರಾಗಿದ್ದರು. ಅವರು ಆಗ ಬಿ.ಎ. ವಿದ್ಯಾರ್ಥಿ. ಅಂತರ್-ಕಾಲೇಜು ಮಟ್ಟದ ನಿಬಂಧ-ಭಾಷಣ ಸ್ಪರ್ಧೆಗಳಲ್ಲಿ ನಾವು ಎದುರಾಗುತ್ತಿದ್ದೆವು. ಮೊದಲೆರಡು ಬಹುಮಾನಗಳಲ್ಲಿ ಒಂದು ಅವರಿಗೆ-ಮತ್ತೊಂದು ನನಗೆ ನಿಶ್ಚಿತವಾಗಿ ಸಿಗುತ್ತಿತ್ತು. ಪ್ರತಿ ಸೋಮವಾರದ ಶಿವಾನುಭವದ ನಂತರ ಅವರ ಕೋಣೆಯಲ್ಲಿ ನಮ್ಮ ಚರ್ಚೆ-ಜಿಜ್ಞಾಸೆ ಮುಂದುವರಿಯುತ್ತಿತ್ತು.

ವಚನ-ವಚನಕಾರರು, ಆಧ್ಯಾತ್ಮ, ಸಮಾಜ ಇವೇ ವಿಷಯಗಳ ಸುತ್ತ ನಮ್ಮ ಚರ್ಚೆ ನಡೆಯೋದು. ನನಗೆ ಅವರಲ್ಲಿ ಸಾಮಾಜಿಕ ನಾಯಕತ್ವದ ಕಿಡಿ ಆಗಲೇ ಕಾಣುತ್ತಿತ್ತು. ‘ಇವರು ಮುಂದೆ ಹೇಗೂ ದೊಡ್ಡವರಾಗುತ್ತಾರೆ, ಈಗಲೇ ಸಾಕಷ್ಟು ಕೆದಕಿಬಿಡೋಣ’ ಅಂದೊಕೊಂಡು ಸಿಕ್ಕಾಪಟ್ಟೆ ಕೆದಕುತ್ತಿದ್ದೆ. ಹಾಗೆ ಕೆಣಕಿದಾಗ ಅವರ ಪೂರ್ವಾಶ್ರಮದ ಕೆಲವು ಸತ್ಯಗಳು ತಿಳಿದವು. ಅವರು ಎಂಥ ಬಡತನದಿಂದ ಬಂದವರೆಂದರೆ ಗಿರಣಿಯಲ್ಲಿ ಬಿದ್ದಿರುವ ಹಿಟ್ಟು ಆಯ್ದುಕೊಂಡು ಬಂದಾಗಲೇ ಅವರ ತಾಯಿ ರೊಟ್ಟಿ ಬಡೆಯೋದು. ಅದುವರೆಗೆ ಅವರು ನೋಡಿದ್ದು ಎರಡು ಸಿನಿಮಾ. ಒಂದು-ಸಿದ್ಧಲಿಂಗೇಶ್ವರ ಮಹಾತ್ಮೆ ಅಂದಿನ ಶ್ರೀಗಳ ಜೊತೆಗೇ ಟಾಕಿಸಿನವರ ಆಹ್ವಾನದ ಮೇರೆಗೆ ಹೋಗಿದ್ದು. ಇನ್ನೊಂದು ಓರಗೆಯ ಹುಡುಗರ ಜೊತೆ ದೇವರಾಜ್ ಅಭಿನಯದ ಚಿತ್ರ; ಹೆಸರು ನನಗೆ ಮರೆತು ಹೋಗಿದೆ, ಬಹುಶಃ ಕಿಡ್ನ್ಯಾಪ್ ಇರಬೇಕು.

ಅವರನ್ನು ತಮ್ಮ ಮಠಕ್ಕೆ ಕಳಿಸಿಕೊಡುವಂತೆ ಒಂದೆರಡು ದೊಡ್ಡ ಮಠದ ಸ್ವಾಮಿಗಳು ಮನವಿ ಮಾಡಿದ್ದರು. ಆದರೆ ಅಂದಿನ ಶ್ರೀಗಳು ಇವರನ್ನು ಬಿಟ್ಡುಕೊಟ್ಟಿರಲಿಲ್ಲ.

ಈಗ ಪರ್ವತ ದೇವರು ನನ್ನನ್ನು ಕೆಲವೊಮ್ಮೆ ತುಂಬಾ ಆತ್ಮೀಯವಾಗಿ ಮಾತನಾಡಿಸುತ್ತಾರೆ. ತುಂಬು ಸಭೆಯಲ್ಲಿ ಪ್ರೇಕ್ಷಕರ ಮಧ್ಯದಲ್ಲಿದ್ದರೂ ಗುರುತು ಹಿಡಿದು ನನ್ನನ್ನು ಕರೆತರಲು ತಮ್ಮ ಸೇವಕರಿಗೆ ಹೇಳುತ್ತಾರೆ. ಮತ್ತೆ ಕೆಲವೊಮ್ಮೆ ನಾನೇ ಮುಂದೆ ಹೋಗಿ ನಿಂತರೂ ಪರಿಚಯ ಇಲ್ಲದಂತೆ ಮಾತನಾಡುತ್ತಾರೆ. ಆಗ ನಾನು, ನನ್ನ ಕೆಲಸ ಎಷ್ಟು ಇರುತ್ತೋ ಅಷ್ಟು ಮಾಡಿಕೊಂಡು ಎದ್ದುಬರುತ್ತೇನೆ.

ಅದೇನೆ ಇರಲಿ, ಈಗ ಮತ್ತೆ ಕೊಪ್ಪಳ ಜಾತ್ರೆಗೆ ಹೋಗುವ ಯೋಚನೆ ಕಳೆದ ಒಂದೆರಡು ವರ್ಷಗಳಿಂದ ತುಂಬಾ ಕಾಡುತ್ತಿದೆ. ಈಗ ನಮಗೆ ಆತಿಥ್ಯ ನೀಡಲು ಮತ್ತೊಂದು ಅಂಗಡಿ ಮನೆತನ, ಬೀಗರಾದ Mahesh Angadi Angadi ಸಿದ್ಧರಿದ್ದಾರೆ! ನನ್ನೊಂದಿಗೆ ಬಿ.ಎಡ್. ಓದಿದ ಹಲವು ಸಹಪಾಠಿಗಳಿದ್ದಾರೆ. ‘ಕೊಪ್ಪಳಕ್ಕೆ ಬಂದರೆ ನಮ್ಮನ್ನ ಭೇಟಿ ಆಗದೇ ಹೋಗಬ್ಯಾಡ್ರಿ’ ಎನ್ನುವ ಹಿರಿಯರಾದ Allamaprabhu Bettadur ಮಹಾಂತೇಶ ಮಲ್ಲನಗೌಡರ ಕೊಪ್ಪಳ ಗುರುಗಳಾದ ಹೆಚ್.ಎಸ್.ಪಾಟೀಲ ಇದ್ದಾರೆ. ‘ಎಲ್ಲರ ಭೇಟಿ ಮುಗಿಸಿ, ನಮ್ಮ ಕಡೆ ರಾತ್ರಿಗೆ ಬರ್ರಿ, ಅಷ್ಟೊತ್ತಿಗೆ ನಮ್ಮ ಕೆಲಸಾನೂ ಮುಗಿದಿರುತ್ತ…’ ಎನ್ನುವ Gangadhar Bandihal ಸೇರಿದಂತೆ ಹಲವು ಸಹೋದ್ಯೋಗಿ ಮಿತ್ರರಿದ್ದಾರೆ. ಆದರೆ ಕೊರೋನಾ ಆಸ್ಪದ ನೀಡುತ್ತಿಲ್ಲ!

ಈ ಜಾತ್ರೆ ಈಗ ಬೆಳೆದಿರುವ ಪರಿ ಅಗಾಧವಾದದ್ದು. ಹೆಸರಾಂತ ವಿಜ್ಞಾನಿ ಸಿ.ಎನ್.ಆರ್. ಅವರ ಪ್ರಕಾರ ಇದು ದಕ್ಷಿಣ ಭಾರತದ ಪುರಿ ಜಗನ್ನಾಥ ಜಾತ್ರೆ. ಇನ್ನೂ ಅನೇಕರು ಇದನ್ನು ಉತ್ತರದ ರಾಜ್ಯಗಳಲ್ಲಿ ನಡೆಯುವ ಮಹಾಕುಂಭ ಮೇಳಕ್ಕೆ ಹೋಲಿಸುತ್ತಾರೆ. ಈ ಜಾತ್ರೆಯ ರಥೋತ್ಸವಕ್ಕೆ ಇತ್ತೀಚಿನ ವರ್ಷಗಳಲ್ಲಿ ಐದಾರು ಲಕ್ಷ ಜನ ಸೇರತೊಡಗಿದ್ದರು. ಮಠದ ಆಡಳಿತ ಮಂಡಳಿ ಈ ಜನರ ಸೆರುವಿಕೆಯನ್ನು ಹಲವು ಸಾಮಾಜಿಕ ಜಾಗೃತಿಗಳಿಗಾಗಿ ಬಳಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ.

ಇಂಥ ಜಾತ್ರೆಗೆ ಮುಂದಿನ ವರ್ಷವಾದರೂ ಸಾಂಕ್ರಾಮಿಕದ ಕರಿನೆರಳು ಬೀಳದಿರಲಿ. ಮತ್ತೆ ಜನರ ಜಾತ್ರೆ ಮರುಕಳಿಸಲಿ.

‍ಲೇಖಕರು Admin

January 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: