ಸಿದ್ಧರಾಮ ಕೂಡ್ಲಿಗಿ
ಸಾಹೇಬ್ರ ನಂದೊಂದ್ ಫೋಟೊ ತೆಗೀರಿ ” ಎಂದು ನನ್ನ ಹಿಂಬಂದಿಯಿಂದ ಕೂಗೊಂದು ಕೇಳಿದಾಗ, ನಾನು ಯಾರದು ಎಂದು ಟಿವಿ ಧಾರವಾಹಿಗಳಂತೆ ನಿಧಾನವಾಗಿ ತಿರುಗದೆ ಬೇಗನೇ ತಿರುಗಿ ಕುತೂಹಲದಿಂದ ನೋಡಿದರೆ, ಬಣ್ಣ ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಲಂಬಾಣಿ ಹೆಣ್ಣುಮಗಳೊಬ್ಬಳು ನನ್ನನ್ನು ಕೂಗಿ ಕರೆದದ್ದು ಕಂಡು ಅಚ್ಚರಿಯೆನಿಸಿತು.
ಮಧ್ಯವಯಸ್ಸಿನ ಆ ಹೆಣ್ಣುಮಗಳು ತನ್ನ ವರ್ಣಮಯ ಲಂಬಾಣಿ ದಿರಿಸಿನಲ್ಲಿ ಇನ್ನೂ ಅಂದವಾಗಿ ಕಾಣುತ್ತಿದ್ದಳು. ಆಕೆಯ ಮುಂದೆ ಒಂದು ಪುಟ್ಟ ಬಿದಿರಿನ ಪುಟ್ಟಿ. ಅದೊಂದು “ಮೊಬೈಲ್” ಅಂಗಡಿ ಇದ್ದಂತೆ. ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಅದನ್ನು ಮುಂದಿಟ್ಟುಕೊಂಡು ವ್ಯಾಪಾರ ಮಾಡಬಹುದು.
ಇದೆಲ್ಲ ನಡೆದದ್ದು, ಕೊಪ್ಪಳದ ಜಾತ್ರೆಯಲ್ಲಿ ಸಾಕಾಗುವಷ್ಟು ತಿರುಗಿದ ನಂತರ ಕೊನೆಗೆ ಇನ್ನೇನು ಮನೆಯ ಕಡೆ ತಿರುಗಬೇಕು ಅನ್ನುವುದರೊಳಗೇ ಈ ದನಿ ನನ್ನ ಕಿವಿಗೆ ಬಿದ್ದದ್ದು.

ಹಾಗೆ ಕರೆದಿದ್ದ ಆ ಹೆಣ್ಣುಮಗಳ ದಿರಿಸೇ ಅತ್ಯಂತ ಸುಂದರವಾಗಿತ್ತು. ಅದರಲ್ಲಿ ಕನ್ನಡಿಗಳು ಬೇರೆ ಫಳಫಳನೆ ಹೊಳೆಯುತ್ತಿದ್ದವು. ಪಕ್ಕದಲ್ಲಿಯೇ ಜಾತ್ರೆಯ ಲಕ್ಷಾಂತರ ರೂ.ಗಳ ಅಂಗಡಿಗಳು, ಹೊರಗೆ ದಾರಿಯ ಬದಿಯಲ್ಲಿ ಈ ಹೆಣ್ಣುಮಗಳ ಪುಟ್ಟ ವ್ಯಾಪಾರದ ಅಂಗಡಿ. ಎಲ್ಲವೂ ಅಜಗಜಾಂತರ. ಲಕ್ಷಾಂತರ ರೂ.ಗಳ ವಸ್ತುಗಳ ಜಾತ್ರೆಯ ಅಂಗಡಿಗಳೆಲ್ಲಿ, ಈಕೆಯ ಪುಟ್ಟ ವ್ಯಾಪಾರಾದ ಜಗತ್ತೆಲ್ಲಿ.
ಕುತೂಹಲದಿಂದ ಆಕೆಯನ್ನೇ ನೋಡುತ್ತ ಕೇಳಿದೆ ” ಏನವ್ವ ಕರ್ದೆ ? “. ” ಸಾಹೇಬ್ರ ಆಗ್ಲಿಂದೂ ನೋಡ್ಲಾಕತ್ತೀನಿ, ಫೋಟೊ ತೆಗಿತಿದ್ರಿ, ನಂದೂ ಫೋಟೊ ತೆಗೀತೇರೇನ್ ? ” ಎಂದು ಕೇಳಿದಳು. ನನಗೆ ” ಇಲ್ಲಿ ಯಾವುದೂ ಅಮುಖ್ಯವಲ್ಲ ” ಎಂಬ ಮಾತು ನೆನಪಿಗೆ ಬಂತು. ” ಆಯ್ತವಾ ಅದೇನು ದೊಡ್ಡ ವಿಷಯ ” ಎಂದು ಆಕೆಯ ಹಾಗೂ ಆಕೆಯ ಪುಟ್ಟ ಪುಟ್ಟಿಯನ್ನು ಕ್ಲಿಕ್ಕಿಸಿದೆ. ನಂತರ ಕೆಮರಾದಲ್ಲಿ ಆಕೆಯ ಫೋಟೊ ತೋರಿಸಿದೆ. ಅದು ಎಷ್ಟು ಖುಷಿಪಟ್ಟಳೋ ಆ ಹೆಣ್ಣುಮಗಳು. ನನಗೆ ಆ ಕ್ಷಣದಲ್ಲಿ ಅದು ಎಲ್ಲ ಮಾನ ಸನ್ಮಾನಗಳಿಗಿಂತ ದೊಡ್ಡದು ಎನಿಸಿಬಿಟ್ಟಿತು.
” ಏನೈತವ್ವ ನಿನ್ನ ಪುಟ್ಟಿಯೊಳಗ ? ” ಎಂದು ಕೇಳಿದೆ. ” ಬರ್ರಿ ಸಾಹೇಬ್ರ ನೆಲ್ಲಿಕಾಯಿ, ಶೇಂಗಾ, ಕಡ್ಲಿ, ಮಾವಿನಕಾಯಿ ಹೋಳ ಎಲ್ಲಾ ಐತ್ರಿ ” ಎಂದು ಖುಷಿಯಿಂದ ತೋರಿಸಿದಳು. ಆಕೆಯ ಬಳಿ ಏನಾದರೂ ತೆಗೆದುಕೊಳ್ಳಲೇಬೇಕೆನಿಸುವಂತ ಪ್ರೀತಿ ಉಕ್ಕಿಬಂತು. ಮನೆಯಾಕೆಯೂ ಪಕ್ಕಕ್ಕೇ ನಿಂತಿದ್ದಳು ” ನೆಲ್ಲಿಕಾಯಿ ತೊಗೋಳ್ಳೊಣ್ರಿ ” ಎಂದಳು. ಒಂದು ಪ್ಲಾಸ್ಟಿಕ್ ಡಬ್ಬಿ ಅದರೊಳಗೆ ನೆಲ್ಲಿಕಾಯಿಗೆ ಉಪ್ಪು, ಖಾರ ಹಚ್ಚಿ ಇಟ್ಟಿದ್ದಳು. ಅದನ್ನೇ ಖರೀದಿಸಿದೆವು. ಮತ್ತೊಂದು ಪ್ಲಾಸ್ಟಿಕ್ ಡಬ್ಬಿಯೊಳಗೆ ಮಾವಿನಕಾಯಿಯ ಹೋಳು, ಅದಕ್ಕೂ ಉಪ್ಪು, ಖಾರ ಸವರಿ ಇಟ್ಟಿದ್ದಳು. ಮತ್ತೊಂದೆರಡು ಪ್ಲಾಸ್ಟಿಕ್ ಚೀಲಗಳಲ್ಲಿ ಹುರಿದ ಶೇಂಗಾ ಹಾಗೂ ಗಿಡದಿಂದ ಅದೇ ತಾನೇ ಕಿತ್ತು ಇಟ್ಟಿರುವ ಕಡ್ಲೆಕಾಯಿಗಳು ಕಂಡವು.

ಎಲ್ಲರೂ ” ಪಾಪ್ಕಾರ್ನ್, ಚಿಪ್ಸ್, ಕುರ್ ಕುರೆಗಳ ವಿದೇಶಿ ಪ್ಯಾಕೆಟ್ ಸಂಸ್ಕೃತಿಗೆ ಅಂಟಿಕೊಳ್ಳುತ್ತಿರುವಾಗ, ಒಂದು ಪುಟ್ಟಿಯೊಳಗೆ ನಮ್ಮ ದೇಶಿ ಸಂಸ್ಕೃತಿಯೇ ಅಡಗಿ ಕೂತು ಪ್ರಸ್ತುತ ಸ್ಥಿತಿಯ ವಿಶಾದ ಭಾವವನ್ನು ರಾಚುತ್ತಿದೆಯೇನೋ ಎನಿಸಿಬಿಟ್ಟಿತು.”
ಬಡತನದಲ್ಲೂ, ಅಂತಹ ಮಹಾನ್ ಸ್ಪರ್ಧೆಯಲ್ಲೂ, ಬಿಸಿಲಲ್ಲಿ ಕೂತ ಆ ಹೆಣ್ಣುಮಗಳ ನಗುಮೊಗ ನನ್ನ ಮನದಾಳದಲ್ಲಿ ಸ್ಥಾಪಿತವಾಗಿಬಿಟ್ಟಿತು. ಮರೆಯಲಾಗದ ಅಪ್ಪಟ ನಿರ್ಮಲ ನಗುಮೊಗಗಳಲ್ಲಿ ಆ ಹೆಣ್ಣುಮಗಳ ಮೊಗವೂ ಒಂದು.
0 ಪ್ರತಿಕ್ರಿಯೆಗಳು