ಸಂತೋಷ ಕೌಲಗಿ
**
ಸುಮಾರು ಎಂಟು ವರ್ಷದ ಹಿಂದಿನ ಮಾತು. ಶಿವಗುರು ಎಂಬ ತಮಿಳು ಯುವಕ ನಮ್ಮಲ್ಲಿಗೆ ಭೇಟಿ ನೀಡಿದ್ದರು. ಚೆನೈನ ಒಂದು ಕಂಪನಿಯಲ್ಲಿ ಈತನಿಗೆ ಕೆಲಸ. ನಮ್ಮಲ್ಲಿ ಒಂದೆರಡು ದಿನ ಇದ್ದು ಇಲ್ಲಿನ ಕಾರ್ಯ ಚಟುವಟಿಕೆಗಳು, ವಿಚಾರ ಎಲ್ಲವನ್ನೂ ತಿಳಿದು ಪ್ರಭಾವಿತರಾದರು. ನಂತರ ಪದೇ ಪದೇ ನಮ್ಮಲ್ಲಿಗೆ ಬಂದು ಹೋಗ ತೊಡಗಿದರು. ನೇಕಾರರು ಎದುರಿಸುತ್ತಿರುವ ಕಷ್ಟಗಳು ಮತ್ತು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳ ತೊಡಗಿದರು. ತಲೆತಲಾಂತರದಿಂದ ಬಂದಿರುವ ನೇಯ್ಗೆ ಕೌಶಲ್ಯ ಈ ತಲೆ ಮಾರಿನೊಂದಿಗೆ ಅಂತ್ಯ ಕಾಣುತ್ತಿರುವ ದುಸ್ಥಿತಿಯನ್ನು ನೆನೆದು ಅವರಿಗೆ ಆತಂಕ ಮತ್ತು ಬೇಸರ ಉಂಟಯಿತು. ಕೈ ಮಗ್ಗದ ಉಳಿವಿಗೆ ತಾನು ಏನಾದರೂ ಮಾಡ ಬೇಕೆಂದು ತೀರ್ಮಾನಿಸಿ, ಚೆನೈನ ಕೆಲಸ ಬಿಟ್ಟು ತಮ್ಮ ಹುಟ್ಟೂರಾದ ಈರೋಡ್ ಬಳಿಯ ಚಿನ್ನಮಲೈಗೆ ಹೋಗಿ ಬಿಟ್ಟರು. ನೇಕಾರರ ಕುಟುಂಬದಿಂದ ಬಂದ ಶಿವಗುರು, ತನ್ನ ಅಪ್ಪ ಎಷ್ಟೋ ವರ್ಷಗಳ ಹಿಂದೆ ನೇಯ್ಗೆ ಮಾಡುತ್ತಿದ್ದ ಮಗ್ಗವನ್ನು ಮನೆಯ ಅಟ್ಟದಿಂದ ಕೆಳಗಿಳಿಸಿ, ಆರು ತಿಂಗಳಲ್ಲಿ ನೇಯ್ಗೆ ಕಲಿತು ಬಟ್ಟೆ ತಯಾರಿಸ ತೊಡಗಿದರು.
ಪತ್ನಿ ರೂಪಶ್ರೀ ಹಾಗೂ ಮಗಳೊಂದಿಗೆ ಶಿವಗುರು
ತನ್ನನ್ನು ಮದುವೆಯಾಗಿ ಬಂದ ರೂಪಶ್ರೀಯನ್ನೂ ನೇಯ್ಗೆಗೆ ಹಚ್ಚಿದರು. ತಾವು ತಯಾರಿಸಿದ ಬಟ್ಟೆಯನ್ನು ಗೆಳೆಯರ ಮೂಲಕ ತಮ್ಮ ಸಂಪರ್ಕದಲ್ಲಿ ಚೆನೈ ಮತ್ತು ಇತರ ನಗರಗಳಲ್ಲಿ ಮಾರತೊಡಗಿದರು. ಹೀಗೆ ಒಂದೆರಡು ವರ್ಷ ಕಳೆಯಿತು ಕೆಲಸ ಕೈಬಿಟ್ಟಿದ್ದ ನೇಕಾರರು ಶಿವಗುರುವಿನಿಂದ ಪ್ರಭಾವಿತರಾಗಿ ಮತ್ತೆ ನೇಯ್ಗೆ ಮಾಡಲು ಬಂದರು. ಸುಮಾರು ೧೨ ಜನ ನೇಕಾರರ ಗುಂಪಾಯಿತು. ಸೀರೆಗಳು, ಪಂಚೆ, ಅಂಗವಸ್ತ್ರ ಹೀಗೆ ಹಲವಾರು ಉತ್ಪನ್ನಗಳು ತಯಾರಿಸಿ ’ನುರುಪು’ ಹೆಸರಿನಲ್ಲಿ ಮಾರ ತೊಡಗಿದರು. ತಮಿಳಿನಲ್ಲಿ ನುರುಪು ಎಂದರೆ ನೂಲು.
ಈಗ ಮೊನ್ನೆ ಮುಂದಿನ ಹೆಜ್ಜೆಯಾಗಿ ಚಿನ್ನಮಲೈನಲ್ಲಿ ಗೆಳೆಯರ ನೆರವಿನಿಂದ ಒಂದು ಹಳೆಯ ಮನೆ ಖರೀದಿಸಿ ಅದನ್ನು ಬಹಳ ಸುಂದರವಾಗಿ ನವೀಕರಿಸಿ ಒಂದು ತರಬೇತಿ ಕೇಂದ್ರವನ್ನು ಸ್ಥಾಪಿಸಿ ನೇಕಾರರ ಮುಂದಿನ ಪೀಳಿಗೆಯನ್ನು ಕಟ್ಟುವ ಕೆಲಸವನ್ನು ಶಿವಗುರು ಕೈಗೊಂಡಿದ್ದಾರೆ.
‘ನುರುಪು’ ಅಂಗಡಿಯ ಪ್ರವೇಶ ದ್ವಾರ
ಅದರ ಉದ್ಘಾಟನೆಗೆ ನಾನು ಬರಲೇ ಬೇಕೆಂದು ಒತ್ತಾಯ ಪೂರ್ವಕವಾಗಿ ಆಹ್ವಾನ ನೀಡಿದ್ದರಿಂದ ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ಆಗದು ಎನ್ನಲಾಗದೆ ಹೋಗಿಬಂದೆ. ಸುರೇಂದ್ರ ಕೌಲಗಿ ಮತ್ತು ಗಿರಿಜಾ ಕೌಲಗಿ ಅವರಿಂದ ಪ್ರಭಾವಿತರಾಗಿರುವ ಶಿವಗುರು ತರಬೇತಿ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಅವರಿಬ್ಬರ ಫೋಟೋ ಇಟ್ಟು ಅದಕ್ಕೆ ಪೂಜೆ ಮಾಡಿ ಉಧ್ಘಾಟನಾ ಕಾರ್ಯಕ್ರಮ ಪ್ರಾರಂಭಿಸಿದ್ದು ನನ್ನ ಕಣ್ಣಲ್ಲಿ ನೀರು ತಂದಿತು.
ನಿಜವಾಗಿ ಗಾಂಧಿಯವರ ಮೆಚ್ಚಿನ ಕೆಲಸ ಮಾಡುತ್ತಿರುವ ಶಿವಗುರು, ರೂಪಶ್ರೀಗೆ ಒಳ್ಳೆಯದಾಗಲಿ ಎಂದು ಹರಸಿ ಬಂದೆ. ನೇಕಾರರಿಗೆ ಒಳ್ಳೆಯ ಕೂಲಿ ದೊರೆಯುವಂತೆ ಮಾಡಿ, ಅಸಲಿ ಕೈಮಗ್ಗ ದ ಬಟ್ಟೆಗಳನ್ನು ತಯಾರಿಸಿ ನ್ಯಾಯಯುತ ವ್ಯಾಪಾರ ಮಾಡುತ್ತಿರುವ ಶಿವಗುರು ಅವರ ನುರುಪು ಹ್ಯಾಂಡ್ಲೂಮ್ ನ ಬಟ್ಟೆಗಳು ಆನ್ ಲೈನ್ ನಲ್ಲೂ ಲಭ್ಯ. ಈ ಹಬ್ಬದ ದಿನಗಳ ಸಂದರ್ಭದಲ್ಲಿ ನುರುಪು ಬಟ್ಟೆ, ಸೀರೆ ಖರೀದಿಸುವ ಮೂಲಕ ಶಿವಗುರು ಅವರ ಈ ಸಾಹಸಕ್ಕೆ ನೀವೂ ಕೈ ಜೋಡಿಸ ಬಹುದು www.nurpu.in
ಬಟ್ಟೆ ನೇಯುವ ವೃತ್ತಿ ದೇಶದ ಪುರಾತನ ಗುಡಿ ಕೈಗಾರಿಕೆಯಲ್ಲಿ ಒಂದು, ಗಾಂಧೀಜಿಯವರ ಕನಸಿನ ಭಾರತದಲ್ಲಿ ಗುಡಿ ಕೈಗಾರಿಕೆಯ ಅಭಿವೃದ್ಧಿ ಮಾಡಬೇಕೆಂದು ಹಾಗೂ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದ್ದರೂ ಕೂಡ. ಕೈಗಾರಿಕೀಕರಣದ ಪ್ರತಿಫಲ ಇಂದು ಗುಡಿ ಕೈಗಾರಿಕೆಗಳ ಅವನತಿಗೆ ದಾರಿಯಾಯಿತು. ಇಂದು ಶಿವಗುರು ಅದನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿದ್ದಾರೆ. ಬೇರೆಯವರಿಗೂ ಮಾದರಿಯಾಗಲಿ.