ಕೇಸರಿ ಹರವೂ
ಜಯಂತಿ ಮಾ…
ನಾನು ಸಹನಿರ್ದೇಶಕನಾಗಿ ಕನ್ನಡ ಚಿತ್ರಗಳಲ್ಲಿ ಅಭ್ಯಾಸ ಮತ್ತು ಕೆಲಸ ಮಾಡುತ್ತಿರುವಾಗ ಜಯಂತಿಯವರು ‘ಅಗ್ನಿಪರೀಕ್ಷೆ’ ಚಿತ್ರದಲ್ಲಿ ಒಂದು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಅದಕ್ಕೆ ಮೊದಲೂ ಪರಿಚಯವಿತ್ತು, ನಂತರ ಅವರೊಂದಿಗೆ ಮತ್ತೆ ಕೆಲಸ ಮಾಡುವ ಅವಕಾಶ ಸಿಗಲೇಯಿಲ್ಲ. ನಾನು ನಿರ್ಮಿಸಿದ ‘ಈಟಿವಿ’ಯ ಮೊದಲ ಧಾರಾವಾಹಿ ‘ಸರೋಜಿನಿ’ಯಲ್ಲಿ ಅವರನ್ನು ಒಂದು ಮುಖ್ಯ ಪಾತ್ರ ಮಾಡಿ ಎಂದು ಕೇಳಿಕೊಂಡಿದ್ದೆ.
ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಹಲವಾರು ಬಾರಿ ಓಡಾಡಬೇಕಾದ ಕಾರಣದಿಂದ ಮತ್ತು ಅವರದೇ ಆದ ವೈಯಕ್ತಿಕ ಸಮಸ್ಯೆಗಳಿಂದಾಗಿ ಅದು ಕೈಗೂಡಲಿಲ್ಲ. ಆ ನಂತರ ನಾನೂ ಸಹ ಆ ಧಾರಾವಾಹಿಯನ್ನು ಅರ್ಧಕ್ಕೇ ಬಿಟ್ಟು, ನನ್ನ ಸಹಾಯಕ ನಿರ್ದೇಶಕರಿಗೆ ಒಪ್ಪಿಸಿ ಬಂದಿದ್ದೆ.
ಜಯಂತಿ ಮಾ ಗೆ ನನ್ನ ಮೇಲೆ ಮೊದಲಿಂದಲೂ ಒಂದು ವಿಶಿಷ್ಟ ಬಗೆಯ ವಾಂಛೆಯಿತ್ತು. ನನ್ನ ಕೆಲಸ ಮತ್ತು ನಡವಳಿಕೆಯಲ್ಲಿ ಅದೇನು ಕಂಡಿದ್ದರೋ ಗೊತ್ತಿಲ್ಲ, ಅದೇಕೆಂದು ನಾನು ಹೇಳಲಾರೆ. ಅವರು ನನಗೆ ‘ಜಯಂತಿ ಮಾ’, ನಾನು ಅವರಿಗೆ ‘ಕೇಸರಿಯವರೇ…’
ಸೆಟ್ಸ್, ಹೊರಾಂಗಣ, ಡಬ್ಬಿಂಗ್ ಥಿಯೇಟರ್ – ಎಲ್ಲಿ ಕಂಡರೂ ಅವರೇ ಕರೆದು ಕೂರಿಸಿಕೊಂಡು ಮಾತಾಡಿಸಿ ಕಳಿಸೋರು.
ನಾನಂತೂ ಅವರ ವೃತ್ತಿಪರತೆಗೆ ಮಾರು ಹೋಗಿದ್ದೆ. ಅವರು ಅಭಿನಯದ ಒಂದೊಂದು ಹಂತದಲ್ಲೂ ಎಷ್ಟೆಲ್ಲ ಕಾಳಜಿ ವಹಿಸುತ್ತಿದ್ದರು ಎನ್ನುವುದನ್ನು ಕಂಡವರು ಮಾತ್ರ ಹೇಳಬಹುದು. ಮೇಕಪ್, ಕೇಶಾಲಂಕಾರ, ಉಡುಗೆ, ಅದಕ್ಕೆ ತಕ್ಕ ಒಡವೆಗಳು, ಮುಡಿವ ಹೂವು, ಉಗುರು ಪಾಲಿಶ್ ಬೇಕಿದ್ದರೆ ಅದು, ನಂತರ ಒಂದು ಶಾಟ್ ಗೆ ತಯಾರಾಗುವುದು, ಸಂಭಾಷಣೆ ಕಲಿಯುವುದು, ಆ ಸ್ಪಷ್ಟ ಉಚ್ಛಾರ, ಏರಿಳಿತಗಳು, ನಡಿಗೆ, ಭಂಗಿ… ಉಫ್! ಎಲ್ಲವೂ ಅಸಾಮಾನ್ಯ. ಈ ಸಾಲಿನಲ್ಲಿ ನಮ್ಮ ಅಂದಿನ ಅನೇಕ ನಟಿಯರು ಸೇರುತ್ತಾರೆ.
ಆದರೆ, ನನಗೆ ಅವರು ನಿಜಕ್ಕೂ ವಾಹ್! ಎನಿಸಿದ್ದು ಅವರು ಮಾತಿನ ಮರುಮುದ್ರಣದಲ್ಲಿ (ಡಬ್ಬಿಂಗ್) ತೊಡಗಿಸಿಕೊಳ್ಳುತ್ತಿದ್ದ ಶ್ರದ್ಧೆ. ಒಂದು ಲೂಪ್ ಅನ್ನು ಮೂರುನಾಲ್ಕು ಬಾರಿ ನೋಡುತ್ತಲೇ ಟೇಕ್ ಗೆ ತಯಾರಾಗಿಬಿಡೋರು. ಅವರಷ್ಟು ಕರಾರುವಾಕ್ಕಾಗಿ ಲಿಪ್ ಸಿಂಕ್ರೋನೈಜ್ ಮಾಡುವ ನಟಿಯನ್ನು ನಾನು ನೋಡಿಲ್ಲ. ಅದು ಬರೀ ಲಿಪ್ ಸಿಂಕ್ ಕೂಡಾ ಅಲ್ಲ, ಗಂಟಲ ಧ್ವನಿಪೆಟ್ಟಿಗೆಯ ಏರಿಳಿತಗಳನ್ನೂ ಅಷ್ಟೇ ಕರಾರುವಾಕ್ಕಾಗಿ, ಅದೇ ನಿಖರ ಸಮಯಕ್ಕೆ ಹೊಂದಿಸುವ ಪ್ರತಿಭೆ. ಇದರಿಂದ ಉಂಟಾಗುವ ಪರಿಣಾಮ ಮಾತ್ರ ಅತಿದೊಡ್ಡದು.
ಶೂಟಿಂಗಿನಲ್ಲಿ ಯಾವ ಧಾಟಿಯಲ್ಲಿ, ಯಾವ ಎತ್ತರದಲ್ಲಿ, ಯಾವ ಭಾವದಲ್ಲಿ ಒಂದು ಮಾತನ್ನು ಹೇಳಿದ್ದರೋ ಅಷ್ಟೇ ಪರಿಣಾಮಕಾರಿಯಾಗಿ ಇಲ್ಲಿಯೂ, ಕೆಲವೊಮ್ಮೆ ಇನ್ನೂ ಉತ್ತಮಗೊಂಡೂ ಹೊರಹೊಮ್ಮಿಸುವ ಛಾತಿ. ಹೇಗೆ ಇದು? ಎಂದು ಕೇಳಿದ್ದೆ. ‘ಶೂಟಿಂಗಿನಲ್ಲಿ ಸರಿಯಾಗಿ ಮಾಡಿದ್ರೆ ಸರಿಯಾದ ಡಬ್ಬಿಂಗ್ ಸಾಧ್ಯವಾಗುತ್ತೆ; ಶೂಟಿಂಗ್ ಆದಮೇಲೆ ಇದು ಡಬ್ಬಿಂಗಿಗೆ ಕೂಡಾ ಬರುತ್ತೆ ಅಂತಾನೂ ಆಗಲೇ ಗೊತ್ತಿರುತ್ತಲ್ಲ!’ ಎಂದು ಸಣ್ಣಗೆ ನಕ್ಕಿದ್ದರು. ಡಬ್ಬಿಂಗಿನಲ್ಲಿ ಅವರನ್ನು ಬಿಟ್ಟರೆ ನಾನು ಕಂಡಿದ್ದು ಅಕಾಲದಲ್ಲೇ ಮುರುಟಿಹೋದ ನಮ್ಮ ಅಗಾಧ ಪ್ರತಿಭೆ ಸರ್ವಮಂಗಳಾ.
ಚಿತ್ರರಂಗದ ಉತ್ತುಂಗ ಕಾಲದಲ್ಲಿ ವಿಜೃಂಭಿಸಿದ ಸ್ಟಾರ್ ಗಳ ಹಿಂದಿದ್ದ ಕಲಾವಂತಿಕೆ, ಶ್ರದ್ಧೆ, ಸಮಯಪ್ರಜ್ಞೆ, ಉತ್ಸಾಹ, ವಿನಯ… ಆಹ್! ಅದೊಂದು ಪರಂಪರೆಯೇ ಸರಿ. ಆ ಸಾಲಿನಲ್ಲಿ ಜಯಂತಿ ಮಾ ನಿಸ್ಸಂದೇಹವಾಗಿ ಮುಂದಿನ ಸಾಲಿನಲ್ಲಿ ನಿಂತವರು.
ಹೋಗಿ ಬನ್ನಿ ಜಯಂತಿ ಮಾ…
0 ಪ್ರತಿಕ್ರಿಯೆಗಳು