ಕೇಶವ ಮಳಗಿ ಅನುವಾದಿತ ಕವಿತೆಗಳು…

ಮೂಲ : ಫ್ರೆಡರಿಕೋ ಗಾರ್ಸಿಯಾ ಲೋರ್ಕಾ

ಕನ್ನಡಕ್ಕೆ : ಕೇಶವ ಮಳಗಿ

ಫ್ರೆಡರಿಕೋ ಗಾರ್ಸಿಯಾ ಲೋರ್ಕಾ (1898-1936)
ಲೋಕೋತ್ತರ ಸ್ಪಾನಿಶ್‌ ಕವಿ, ಅಲ್ಪಾಯುಷಿ ಫ್ರೆಡರಿಕೋ ಗಾರ್ಸಿಯಾ ಲೋರ್ಕಾ ‘ಕರಾಳ ಪ್ರೀತಿಯ ಸುನೀತಗಳು’: ಸಾನೆಟ್ಸ್‌ ಆಫ್‌ ಡಾರ್ಕ್‌ ಲವ್‌- ಬರೆದಿದ್ದು ಸುಮಾರು 1935ರ ಸುಮಾರು, ಮರಣಿಸುವ ಒಂದು ವರ್ಷದ ಮೊದಲು. ಈ ಸರಣಿಯಲ್ಲಿ ಹನ್ನೊಂದು ಕವಿತೆಗಳು ಇದ್ದವು ಎನ್ನಲಾಗಿದೆ.

ಅಪ್ರಕಟಿತ ಹಸ್ತಪ್ರತಿಯ ಈ ಕವಿತೆಗಳು ಮೊದಲಬಾರಿಗೆ ಬೆಳಕು ಕಂಡಿದ್ದು 1983ರಲ್ಲಿ. ಈ ಹಸ್ತಪ್ರತಿ ಕೂಡ ಲೋರ್ಕಾನ ಕರಡು ಕವಿತೆಗಳು ಎಂದು ಗುರುತಿಸಲಾಗಿದೆ. ಆನಂತರ ಪರಿಷ್ಕರಿಸಿದ ಕವಿತೆಗಳು ಕಾಲನಲ್ಲಿ ಕಣ್ಮರೆಯಾಗಿವೆ. ಹೀಗಾಗಿ, ಈ ಕರಡು ಕವಿತೆಗಳು ಕೊಂಚ ಅಮೂರ್ತವಾಗಿ ಕಂಡರೆ ಅಚ್ಚರಿಯೇನಿಲ್ಲ.

1 ಪ್ರೇಮಿ ಮಲಗಿದ್ದಾಳೆ ಕವಿಯ ಎದೆಯ ಮೇಲೆ

ನಾನೆಷ್ಟು ಪ್ರೀತಿಸುವೆ ನಿನ್ನ ನೀನೆಂದಿಗೂ ಅರಿಯಲಾರೆ
ಏಕೆಂದರೆ ನೀನು ನನ್ನೊಳಗೆ ಮಲಗಿ ನಿದ್ರಿಸುತಿರುವೆ.
ಕಬ್ಬಿಣದ ಗಡಸು ದನಿಯಲ್ಲಿ
ನನ್ನ ಕಣ್ಣೀರನ್ನು ನಿನ್ನಿಂದ ಮರೆ ಮಾಡುವೆ ನಾನು.
ನನ್ನ ಮಜ್ಜೆ ಮತ್ತು ನಸುಕಿನ ಚುಕ್ಕೆಯನು ಚುಚ್ಚುವ ನಿಯಮ
ನನ್ನ ನೋವಿಯ ಎದೆಯನ್ನೀಗ ತಿವಿಯುತಿದೆ.
ನಿನ್ನ ಕಠೋರ ಆತ್ಮದ ರೆಕ್ಕೆಗಳು
ಕ್ಷೋಬೆಯ ಪದಗಳಲಿ ಹೆಪ್ಪುಗಟ್ಟಿವೆ.
ನಿನ್ನ ದೇಹ, ನನ್ನ ನೋವು
ಬೆಳಕಿನ ಕುದುರೆ ಹಸಿರು ಹೂವಿನೆಸಳಿನೊಂದಿಗೆ
ಕೆನೆಯಲಿ, ಎಂದು ಜನ ಉದ್ಯಾನದಲಿ ಕಾದಿಹರು.
ಇರಲಿ, ನನ್ನ ಬದುಕೇ, ನೀನು ನಿದ್ರಿಸು.
ನನ್ನ ಕೆಟ್ಟ ನೆತ್ತರಿನ ರಾಗವನು ಪಿಟೀಲಿನಲಿ ಕೇಳು!
ತಮ್ಮ ಸಮಯವನು ಪಣಕಿಟ್ಟು
ಅವರೆಲ್ಲ ಹಿಂಬಾಲಿಸುವರು ನಮ್ಮನು!

(El amor duerme en el pecho del poeta
The Lover Asleep on the Poet’s Breast.)

2. ನಿದ್ರೆಯಿರದ ಇರುಳ ಪ್ರೀತಿ

ಆಗಸದಲಿ ಇರುಳು. ನಾವಿಬ್ಬರು. ಹುಣ್ಣಿಮೆ.
ನಾನು ಕಣ್ಣಿರು ಹನಿಸಿದೆ, ನೀನು ನಕ್ಕೆ.
ನಿನ್ನ ತಿರಸ್ಕಾರ ದೈವವಾಗಿತ್ತು!
ನನ್ನ ಗೋಳಾಟದ ಗಳಿಗೆಗಳು
ಸರಪಳಿಯ ಪಾರಿವಾಳವಾಗಿದ್ದವು!
ಇಳೆಯ ಮೇಲಿದೆ ಇರುಳು. ನಾವಿಬ್ಬರು. ಹರಳುಗಟ್ಟಿದೆ ಯಾತನೆ.
ನೀನು ಎಲ್ಲೋ ದೂರದಲಿ ರೋಧಿಸುತಲಿರುವೆ.
ನನ್ನ ನೋವು-ಯಾತನೆ ಸಂಕಟಗಳು
ನಿನ್ನ ಬೇನೆಯ ಸಡಿಲ ಉಸುಕಿನ ಹೃದಯದ ಬಿಗಿ ಹಿಡಿತದಲ್ಲಿವೆ.
ನಸುಕು, ಹಾಸಿಗೆಯಲ್ಲಿ ನಮ್ಮಿಬ್ಬರನು ಕೂಡಿತು.
ನಮ್ಮ ಬಾಯಿಯಲಿ ಚಂಚಲ ನೆತ್ತರಿನ ಹೆಪ್ಪು!
ಮುಚ್ಚಿದ ಮೊಗಸಾಲೆಯ ಮೇಲಿಂದ ನೇಸರನು ಇಣುಕಿದ.
ನನ್ನ ಮರೆಮಾಚಿದ ಹೃದಯದ ಮೇಲೆ
ಬದುಕಿನ ಎಸಳುಗಳು ಕುಡಿಯೊಡೆದವು.
(Noche arriba los dos, con luna llena/
The night above. We two. Full moon.)

‍ಲೇಖಕರು Admin

May 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಂಬನಿ…

ಕಂಬನಿ…

2 ಪ್ರತಿಕ್ರಿಯೆಗಳು

 1. prathibha nandakumar

  ಚೆನ್ನಾಗಿದೆ ಮಳಗಿ . ಆದರೆ ಹೆಚ್ಚಿನ ಸ್ಪ್ಯಾನಿಷ್ ಕವಿತೆಗಳಿಗೆ ಆಗುವಂತೆ ಬೇರೆ ಬೇರೆ ಅನುವಾದಕರ ಪಠ್ಯ ಬೇರೆ ಬೇರೆ ಥರ ಇರುತ್ತೆ. ಲೋರ್ಕಾನ ನಾಟಕದ ಅನುವಾದ ಮಾಡಿದ ಒಬ್ಬರು ಹೇಳಿದ್ದರು – ಹಲವು ಇಂಗ್ಲಿಷ್ ಅನುವಾದಗಳನ್ನು ಓದಿದ ಮೇಲೇ ಅದರ ಅರ್ಥ ಹೊಳೆದದ್ದು ಅಂತ. ಹಾಗೆಯೇ ಅವನ ಕವನ ಕೂಡಾ. ಇದರ ಹಲವು ಅನುವಾದಗಳನ್ನು ಹೋಲಿಸಿ ನೋಡಿ ಮಾಡಬೇಕಾಗುತ್ತದೆ.

  ಕಬ್ಬಿಣದ ಗಡಸು ದನಿಯಲ್ಲಿ
  ನನ್ನ ಕಣ್ಣೀರನ್ನು ನಿನ್ನಿಂದ ಮರೆ ಮಾಡುವೆ ನಾನು.

  ಇದು ಇನ್ನೊಂದು ಇಂಗ್ಲಿಷ್ ಅನುವಾದದಲ್ಲಿ ಹೀಗಿದೆ :

  And I try to hide you, even as I weep,
  haunted by a voice of penetrating steel.

  ಇಲ್ಲಿ ಅವನು, ‘ಚುಚ್ಚುವ ಕತ್ತಿಯಂತಹ (ಸ್ಟೀಲ್=ಕತ್ತಿ) ದನಿ ಕಾಡುತ್ತಿದ್ದರೂ ಅಳುತ್ತಲೇ ಅವಳನ್ನು ಅಡಗಿಸಿಡುತ್ತೇನೆ’ ಎನ್ನುತ್ತಿದ್ದಾನೆ. ಇಲ್ಲಿ ಚುಚ್ಚುವ ದನಿ ಬೇರೆ ಯಾರದೋ (ತಂದೆತಾಯಿ?)

  ತೋಟದಲ್ಲಿ ನರ್ತಿಸುತ್ತಿರುವ ಗುಂಪು ಕಾಣುತ್ತಿದೆ,
  ಹಸಿರು ಕೂದಲ ಬೆಳಕಿನ ಕುದುರೆಯ ಮೇಲೆ ಬರುವ
  ನಿನ್ನ ಶವಕ್ಕಾಗಿ ಮತ್ತು ನನ್ನ ಶಿಕ್ಷಿಸಲ್ಪಟ್ಟ ಪಾಪಗಳಿಗಾಗಿ ಕಾಯುತ್ತಿದೆ.

  But sleep on, my love. Let the violins
  sing of blood that runs in a broken stream
  while the mob waits, it waits, to bring us in.

  ಗುಂಪು ಕಾಯುತ್ತಿರುವಾಗ ಪಿಟೀಲುಗಳು ಹಾಡಲಿ
  ಹರುಕು ನಾಳಗಳಲ್ಲಿ ಹರಿಯುವ ರಕ್ತ ಕುರಿತು ,
  ಕಾಯುತ್ತಿದೆ ಗುಂಪು, ನಮ್ಮನ್ನು (ಒಳತರಲು) (ಸೆರೆಹಿಡಿಯಲು)

  To bring us in ಅನ್ನುವುದಕ್ಕೆ ‘ನಮ್ಮನ್ನು ಸೆಳೆಯಲು’ ಅನ್ನುವ ಅರ್ಥವೂ ಇದೆ. To entice people to enter a place ಮತ್ತು To arrest someone (and bring them into the police station) ಎನ್ನುವ ಅರ್ಥವೂ ಇದೆ “ನಮ್ಮನ್ನು ಸೆರೆಹಿಡಿಯಲು” ಎಂದೂ ಆಗುತ್ತದೆ.

  ಈ ಕವನದ ಹತ್ತು ಬೇರೆ ಬೇರೆ ಇಂಗ್ಲಿಷ್ ಅನುವಾದಗಳನ್ನು ನೋಡಿದರೆ ಒಬ್ಬೊಬ್ಬರ ಅನುವಾದ ಒಂದೊಂದು ಥರ ಇದೆ.
  Sleep on, beloved. Do you hear? My blood maintains
  a kind of broken rhythm underneath rough music from the violins.
  They lie in wait, the violators. Soon the agony begins.

  ಅದಕ್ಕೇ ಲೋರ್ಕಾ ಅನುವಾದ ಬಹಳ ದೊಡ್ಡ ಸವಾಲು.

  ಪ್ರತಿಕ್ರಿಯೆ
 2. prathibha nandakumar

  ಅನುವಾದ ಕುರಿತ ಅಕಾಡೆಮಿಕ್ ಚರ್ಚೆಯ ದೃಷ್ಟಿಯಿಂದ ಪ್ರತಿಕ್ರಿಯಿಸಿದೆ. ದಯವಿಟ್ಟು ಟೀಕೆ ಅಂದುಕೊಳ್ಳಬೇಡಿ ಪ್ಲೀಸ್.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: