ಕೇರಳದ ಆಟೋದಲ್ಲಿ ಪೌಲೋ ಕೋಯ್ಲೋ..

ಎಂ ನಾ ಚಂಬಲ್ತಿಮಾರ್

ಸಂಪಾದಕರು, ಕಣಿಪುರ ಮ್ಯಾಗಝಿನ್

ಪ್ರಪಂಚಕ್ಕೆ ವೈರಲ್ ಸುದ್ದಿಯಾದ ಕತೆ..!

ಕೇರಳದ ಎರ್ನಾಕುಳಂ ಮಹಾನಗರದಲ್ಲಿ ಸರದಿ ಸಾಲಿಟ್ಟ ಬಾಡಿಗೆ ರಿಕ್ಷಾ ಒಂದರ ಹೆಸರು, ‘ಅಲ್ ಕೆಮಿಸ್ಟ್’…! ಆಟೋ ರಿಕ್ಷಾಕ್ಕೆ ಹೀಗೊಂದು ಹೆಸರು ಯಾರಿಡುತ್ತಾರೆ..?

ನಕ್ಕವರು ಮತ್ತು ಕೀಟಲೆ ಮಾತಿಂದ ಹಂಗಿಸಿದವರೇ ಜಾಸ್ತಿ! ಆದರೆ ಹೀಗೊಂದು ಹೆಸರಿಟ್ಟ ರಿಕ್ಷಾ ಮಾಲಕ/ಚಾಲಕನ ಹೆಸರು ಪ್ರದೀಪ್.
ಈ ಮನುಷ್ಯನಿಗೆ ರಿಕ್ಷಾ ಬಾಡಿಗೆ ಮಾಡಿ ಸಿಕ್ಕ ಆದಾಯದಿಂದ ಮನೆಯನ್ನ ಸಾಕಿ ಸಲಹೋದು ನಿತ್ಯ ಕಸುಬು. ಆದರೆ ಅಭಿರುಚಿಯಲ್ಲಿ ಈತನೊಬ್ಬ ಒಳ್ಳೆಯ ಓದುಗ, ಸಾಹಿತ್ಯ ಪ್ರೇಮಿ..!

ಇವರ ಸಾಹಿತ್ಯ ಪ್ರೀತಿಯ ಗಾಢತೆ ಎಷ್ಟಿದೆಯೆಂದರೆ ಅದು ಸಾಮಾನ್ಯ ರಂಜನೆಯ ವಿಕೃತ ಓದಲ್ಲ.. ಜಗದ್ವಿಖ್ಯಾತ ಲೇಖಕರ ಉತ್ಕೃಷ್ಟ ಮಾನನೀಯ ಕೃತಿಗಳನ್ನು ತಪಸ್ಸಿನಂತೆ ಓದುವ ತನ್ಮಯತೆಯ ಧ್ಯಾನನಿಷ್ಟತೆ! ಹೀಗೆ ಓದುತ್ತಾ ಓದುತ್ತಾ ಒಂದೊಮ್ಮೆ ಇವರ ಕೈಗೆ ಸಿಗುವುದೇ ಬ್ರೆಝಿಲಿಯನ್ ಮೂಲದ ವಿಶ್ವಪ್ರಸಿದ್ದ ಲೇಖಕ ಪೌಲೋ ಕೋಹ್ಲೋ ವಿರಚಿತ ‘ಅಲ್ಕೆಮಿಸ್ಟ್,’ ಕೃತಿಯ ಮಲಯಾಳಂ ಅನುವಾದ. ಅದನ್ನೋದಿದ್ದೇ ತಡ… ಪ್ರದೀಪರಿಗೆ ಪೌಲೋ ಕೋಯ್ಲೋ ಮತ್ತೇನು ಬರೆದಿದ್ದಾರೆಂದು ತಿಳಿಯುವ, ಅದನ್ನೋದುವ ಚಪಲ ಮತ್ತು ಅತ್ಯುತ್ಸಾಹ ಮೂಡಿತು.
ಪೌಲೋ ಕೊಯ್ಲೋ ಬರೆದದ್ದು ಏನೇನು ಮಲಯಾಳಕ್ಕೆ ಅನುವಾದಗೊಂಡಿದೆಯೋ ಅದೆಲ್ಲವನ್ನೂ ದುಡ್ಡು ತೆತ್ತು ತರಿಸಿ ಓದಿಯೇ ಬಿಟ್ಟರು!
ಲೇಖಕನ ಅಪ್ಪಟ ಅಭಿಮಾನಿಯಾದರು..! ಅಲ್ಲಿಂದಲೇ ಆರಂಭ…

ರಿಕ್ಷಾ ಚಾಲಕ ಪ್ರದೀಪನ ಹೃದಯ ಮಂದಿರದಲ್ಲಿ ಪೌಲೋ ಪ್ರತಿಷ್ಠೆ ನಡೆಯಿತು! ರಿಕ್ಷಾದಲ್ಲಿ ಆತ ಮತ್ತು ಕೃತಿಯದ್ದೇ ಹೆಸರು ಮುದ್ರಿಸಿದ್ದೂ ನಡೆಯಿತು. ಇದು ಆರಂಭಕ್ಕೆ ರಿಕ್ಷಾ ಸ್ಟಾಂಡಿನ ಇತರ ಚಾಲಕರಿಗೆ ಏನೆಂದೇ ಅರ್ಥವಾಗಿಲ್ಲ. ಸಾಮಾನ್ಯ ಜನತೆಗೂ ಗೊತ್ತಾಗಿಲ್ಲ. ಆದರೆ ಇಂಥ ಹೆಸರಿನ ಪುಸ್ತಕ ಪ್ರೀತಿಯ ರಿಕ್ಷಾ ಚಾಲಕನ ಕುರಿತ ಯಾವಾಗ ಮಲಯಾಳಂ ದೃಶ್ಯ, ಮುದ್ರಣ ಮಾಧ್ಯಮಗಳು ಗಮನ ಹರಿಸಿ ಕಾಳಜಿ, ಕಳಕಳಿಯ ವರದಿ ಮಾಡಿದವೋ ಅದೇ ಫಥದಲ್ಲಿ ಇಂಗ್ಲೀಷ್ ಮಾಧ್ಯಮಗಳೂ ಸುದ್ದಿ ಬರೆದವು… ಅಲ್ಲಿಂದೀಚೆಗೆ ಇದು ಸಾಹಿತ್ಯ ಪ್ರೇಮಿಗಳ, ವಾಚನಾಭಿರುಚಿಯ ಜನರ ಗಮನ ಸೆಳೆಯಿತು!

ಇಷ್ಟೇ ಅಲ್ಲ.. ಅದ್ಹೇಗೋ ಈ ಸುದ್ದಿ ರಾಜ್ಯವಲ್ಲ, ದೇಶದ ಗಡಿ ದಾಟಿತು. ಎಲ್ಲೋ ಕುಳಿತಿದ್ದ ಲೇಖಕ ಪೌಲೋ ಕೊಹ್ಲೋ ಸ್ವತಃ ಕೇರಳದ ರಿಕ್ಷಾ ಚಾಲಕ ಪ್ರದೀಪನ ಅಭಿಮಾನ ಪ್ರಶಂಸಿಸಿ ಅಭಿನಂದನೆ ಸಲ್ಲಿಸಿ ‘ಇದು ಭಾರತದ ಕೇರಳ’ಎಂದು ಟ್ವೀಟ್ ಮಾಡಿದರು.. ಅದು ರಾತ್ರಿ ಬೆಳಗಾಗುವುದರೊಳಗೆ ಜಗತ್ತಿನ ವಾಚಿಕಾಭಿರುಚಿಯ ಮನುಜ ಕುಲದ ಮನದ ಬಾಗಿಲು ಬಡಿಯಿತು… ಎರ್ನಾಕುಳಂ ನ ರಿಕ್ಷಾ ಚಾಲಕ ಪ್ರಪಂಚದ ಕೌತುಕದ ಸುದ್ದಿಕತೆಯಾದ.. !

ಇಷ್ಟಕ್ಕೆಲ್ಲ ಕಾರಣ ‘ಅಲ್ಕೆಮಿಸ್ಟ್’ ಕೃತಿಯ ಓದು… ಅದು ಮನುಷ್ಯ ಬದುಕನ್ನು ಉತ್ತೇಜಿಸುವ, ಈಗಾಗಲೇ 70 ಭಾಷೆಗಳಲ್ಲಿ 6 ಕೋಟಿಗೂ ಅಧಿಕ ಮಾರಾಟವಾದ ಮತ್ತು ಆಗುತಲೇ ಇರುವ ಅನನ್ಯ ಕೃತಿ. ಅದು ಪಯಣಿಗನೊಬ್ಬನ ತಿರುಕನ ಕನಸಿನಂಥ ಕತೆ. ಹತಾಶ ಮನದೊಳಗೆ ಸ್ಫೂರ್ತಿಯ ಕಿಡಿ ಎಬ್ಬಿಸುವ ಕತೆ. ಜಗತ್ತಿನ 70ಕ್ಕೂ ಅಧಿಕ ಭಾಷೆಗಳಲ್ಲಿ ತರಂಗವೆಬ್ಬಿಸಿದ ಕೃತಿ. ಅಂಥಾ ಕೃತಿಯಿಂದ ಬದುಕೇ ಬದಲಾಯಿಸಿಕೊಂಡ ರಿಕ್ಷಾ ಚಾಲಕ ಕೇರಳದ ಪ್ರದೀಪ ಓರ್ವ ಸಹೃದಯೀ ಸಾಹಿತ್ಯಾಸಕ್ತ.

ಓದಿನಿಂದ ಅರಿವು ಆರ್ಜಿಸಿದ ಜನಸಾಮಾನ್ಯರ ನಡುವಣ ಚಿಂತಕ! ರಿಕ್ಷಾ ಚಾಲಕರ ಸಾಲಿನಲ್ಲೇ ನೋಟಕ್ಕೆ ಮತ್ತು ಅಭಿರುಚಿಗೂ ಈ ಮನುಷ್ಯ ಭಿನ್ನ. ನೋಡಿದರೆ ಬುದ್ಧಿಜೀವಿ ಥರಾ ಕಂಡರೂ ಜೀವನೋಪಾಯಕ್ಕೆ ನಿತ್ಯ ರಿಕ್ಷಾ ಬಾಡಿಗೆ ಓಡಲೇ ಬೇಕು. ಹಾಗಂತ ಈ ಅಭಿರುಚಿಯಿಂದ ತೊಂದರೆಯೇನೂ ಆಗಿಲ್ಲ. ಮಹಾನಗರದಲ್ಲಿ ಇವರ ರಿಕ್ಷಾವನ್ನೇ ಹುಡುಕಿ ಬರುವವರಿದ್ದಾರೆ. ಅದರಲ್ಲಿ ಸಿನಿಮ ನಿರ್ದೇಶಕರು, ಸಂಗೀತಜ್ಞರು, ಸಾಹಿತಿ, ಚಿಂತಕರು, ಕವಿ-ಕಲಾವಿದರು, ಪತ್ರಕರ್ತರು ಎಲ್ಲರೂ ಒಳಗೊಂಡಿದ್ದರೆ.

ಎಲ್ಲರಿಗಿಂತ ಭಿನ್ನ ಬಾಡಿಗೆದಾರರು ಸಿಗುವುದೇ ಇವರಿಗೆ! ಯಾರೇ ರಿಕ್ಷಾ ಏರಲಿ ಅವರಿಗೆ ಓದಿನಾಸಕ್ತಿ ಇದ್ದರೆ ಆಟೋ ರಿಕ್ಷಾದೊಳಗೆ ಸಣ್ಣ ಪುಸ್ತಕ ಸಂಗ್ರಹ ಇದ್ದೇ ಇದೆ. ಸಂಗೀತ ಪ್ರಿಯರಾದರೆ ಕ್ಲಾಸಿಕ್ ಇದೆ. ಅದಲ್ಲ ಮಾತುಕತೆಯಾದರೆ ಸಾಹಿತ್ಯ ಸಂವಾದ, ಕೃತಿಯ ಮರುಮಥನಗಳೇ ನಡೆಯುತ್ತದೆ! ಪ್ರದೀಪರ ರಿಕ್ಷಾದೊಳಗಣ ಈ ಪಯಣದ ಕತೆ ಈಗ ಜಗತ್ತಿನ ಸುದ್ದಿ..!! ಇದನ್ನೆಲ್ಲ ತಿಳಿದೂ, ತಿಳಿದೂ ನಾನು ಹಂಚದಿದ್ದರೆ ಹೇಗೆ..???

‍ಲೇಖಕರು Admin

September 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: