ಕೆ ವಿ ಅಕ್ಷರ ಮೆಚ್ಚಿದ ನಂದಕುಮಾರ್ ‘ಜಾಲಿ ಮುಳ್ಳು’

ಈ ಭಾನುವಾರ ಸಂಜೆ ೫ಕ್ಕೆ ಜೋಗಿ ಅವರ ಕಣ್ಗಾವಲಿನಲ್ಲಿ ಎರಡು ಹೊಸ ಪ್ರತಿಭೆಗಳ ಕೃತಿಗಳು ಹೊರಬರುತ್ತಿವೆ.

ಅದರಲ್ಲಿ ಜಿ ಕೆ ನಂದಕುಮಾರರ ‘ಜಾಲಿ ಮುಳ್ಳು’ಸಹಾ ಒಂದು

ಆ ಕೃತಿಗೆ ಖ್ಯಾತ ನಾಟಕಕಾರ ಕೆ ವಿ ಅಕ್ಷರ ಬರೆದ ಮಾತುಗಳು ಇಲ್ಲಿವೆ-

ಕೆ ವಿ ಅಕ್ಷರ

ರಂಗಮಾಧ್ಯಮದಲ್ಲಿ ಕೆಲಸ ಮಾಡುವ ಜನರನ್ನು ಹಲವು ಕಾಲ ಸಮೀಪದಿಂದ ನೋಡುತ್ತ ಬಂದ ನನಗೆ ರಂಗಮಾಧ್ಯಮವೇ ಬೇರೆಲ್ಲ ಮಾಧ್ಯಮಗಳಿಗೆ ದಾರಿತೋರಿಸುವ ಮಾರ್ಗವೂ ಆಗುವ ಅಚ್ಚರಿ ಕಾಣಲಿಕ್ಕೆ ಸಿಕ್ಕಿದೆ. ರಂಗಭೂಮಿಯೆನ್ನುವುದು ಮೊದಲಿಗೆ ಒಂದು ಆಕರ್ಷಣೆ, ಆಮೇಲೆ ಹವ್ಯಾಸ, ಕೆಲ ಕಾಲದ ಬಳಿಕ ಅದು ಸಾಮಾಜಿಕ ಸಂಬಂಧಗಳನ್ನೆಲ್ಲ ಹಬ್ಬಿಸುತ್ತ ಹೋಗುವ ಜಾಲ, ಇನ್ನೂ ಹಲವು ಕಾಲ ಅಲ್ಲೇ ಇದ್ದರೆ ಅದು ಬಗೆಬಗೆಯ ಕಲಾವಲಯಗಳಿಗೆ ಕರೆದೊಯ್ಯುವ ಮಾರ್ಗದರ್ಶಿ ಮತ್ತು ಪ್ರಾಯಶಃ ಅಂತಿಮವಾಗಿ, ಅದು ನಮ್ಮನಮ್ಮದೇ ಅಂತರಂಗಕ್ಕೆ ಪ್ರವೇಶ ಮಾಡುವ ಬಾಗಿಲು. ಕಳೆದ ಮೂರೂವರೆ ದಶಕಗಳಿಂದ ನಾನು ಒಡನಾಡುತ್ತಿರುವ ರಂಗಭೂಮಿಯ ವಿದ್ಯಾರ್ಥಿಗಳು ಕ್ರಮೇಣ ಈ ಮಾರ್ಗಗಳಲ್ಲಿ ಮುನ್ನಡೆಯುವ ವಿಸ್ಮಯವನ್ನು ಕಂಡು ಈ ಪ್ರಸ್ತಾಪ ಮಾಡುತ್ತಿದ್ದೇನೆ. ಪ್ರಸ್ತುತ ಕಥೆಗಳ ಲೇಖಕ ಜಿ.ಕೆ. ನಂದಕುಮಾರ್ ಹಾಗೆ ಕಂಡ ವಿದ್ಯಾರ್ಥಿಗಳಲ್ಲೊಬ್ಬರು.

ಒಟ್ಟಾರೆ ಶಿಕ್ಷಣ ಎನ್ನುವುದೇ ಹಾಗಿರಬಹುದು, ಆದರೆ ರಂಗಭೂಮಿಯಲ್ಲಿಯಂತೂ ಕಲಿಸುವುದು ಮತ್ತು ಕಲಿಯುವುದರ ನಡುವೆ ವಿಶೇಷವಾದ ಫರಕಿಲ್ಲ. ನೀವೊಂದು ನಾಟಕದ ತಾಲೀಮಿಗೆ ಹೋದರೆ, ಆದರಲ್ಲಿ ಪಾಠ ಮಾಡುತ್ತಿರುವವರು ಯಾರು, ಕಲಿಯುವವರು ಯಾರು ಎಂಬುದು ಹಲವೊಮ್ಮೆ ಗುರುತು ಹತ್ತುವುದು ಕಷ್ಟ. ಮಾತ್ರವಲ್ಲ, ನಾಟಕಪ್ರಯೋಗವೊಂದನ್ನು ಮಾಡಿ ಮುಗಿಸಿದ ಮೇಲೂ ಕಲಿತದ್ದು ವಿದ್ಯಾರ್ಥಿಗಳೋ ಅಥವಾ ಶಿಕ್ಷಕರೋ – ಹೇಳುವುದು ಕಷ್ಟ.

ನಾನು ಕಂಡಂತೆ, ಇವತ್ತಿನ ಕನ್ನಡದ ಸಂದರ್ಭದಲ್ಲಿ ರಂಗಭೂಮಿಗೆ ಬರುವ ವಿದ್ಯಾರ್ಥಿಗಳು ಆರ್ಥಿಕವಾಗಿ ಸಬಲವಾದ ವರ್ಗಗಳಿಂದ ಬಂದವರಾಗಿರುವುದು ಅಪರೂಪ, ಮುಖ್ಯವಾಹಿನಿಯ ಶಿಕ್ಷಣದಲ್ಲಿ ಯಶಸ್ವಿಯಾಗಿರುವುದು ಇನ್ನೂ ಅಪರೂಪ. ಆದರೆ, ಅಂಥ ಕೆಲವು ‘ಸಾಮಾನ್ಯ’ರು ಕೇವಲ ಒಂದು ವರ್ಷದ ಶಿಕ್ಷಣ ಪಡೆದ ಮೇಲೆ ಹೇಗೆ ‘ಅಸಾಮಾನ್ಯ’ರಾಗುತ್ತಾರೆಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ.

ಏನೂ ವಿಶೇಷವಿಲ್ಲವೆಂದು ತೋರುವ ಹಲವು ವಿದ್ಯಾರ್ಥಿಗಳು ತರಬೇತಿಯ ವರ್ಷದ ತುದಿಗೆ, ವಿಶಿಷ್ಟವಾದ ಕಸುಬುಗಾರಿಕೆಯ ಹೊಳಪಿನಿಂದಲೂ ಸಾಮಾಜಿಕ ಬದ್ಧತೆಯ ಪ್ರಖರತೆಯಿಂದಲೂ ಆತ್ಮವಿಶ್ವಾಸದ ಪ್ರಭಾವಳಿಯಿಂದಲೂ ಹೊಳೆಯುತ್ತ – ಅರೆ, ಇವರು ಅವರೇನಾ – ಅನ್ನಿಸುವಂತೆ ನನಗೆ ಮಾಡಿದ್ದಾರೆ. ಹೂವಿನ ಹಡಗಲಿಯಂಥ ಊರಿಂದ ರಂಗವಿದ್ಯಾರ್ಥಿಯಾಗಿ ಬಂದ ನಂದಕುಮಾರರು ಕಳೆದ ನಾಲ್ಕಾರು ವರ್ಷಗಳಲ್ಲಿ ನಟನಾಗಿ, ಶಿಕ್ಷಕನಾಗಿ, ಸಂಘಟಕನಾಗಿ, ಮತ್ತೀಗ ಲೇಖಕನೂ ಆಗಿ ಬೆಳೆಯುತ್ತಿರುವುದು ಇಂಥ ಸಂತೋಷದ ವಿಸ್ಮಯಗಳಲ್ಲಿ ಒಂದು.

ಹಾಗೆ ನೋಡಿದರೆ, ಈ ಬೆಳವಣಿಗೆ ಪೂರ್ಣ ಅನಿರೀಕ್ಷಿತವೂ ಏನಲ್ಲ. ವಿದ್ಯಾರ್ಥಿಯಾಗಿದ್ದಾಗಲೇ ಒಂದು ದಿನ, ನಂದಕುಮಾರ್ ತಮ್ಮ ಕಥೆಗಳ ಕಟ್ಟಿನೊಂದಿಗೆ ನನ್ನ ಬಳಿ ಬಂದಿದ್ದರು. ಆ ಕಥೆಗಳನ್ನು ಓದಿ ನನಗೆ ತುಸು ವಿಚಿತ್ರ ಅನ್ನಿಸಿತ್ತು – ಕಾರಣ, ಕನ್ನಡದಲ್ಲಿ ಈಗ ಬರುತ್ತಿರುವ ಬಹುತೇಕ ಕಥೆಗಳ ಹಾಗೆ ಅವರು ಬರೆದಿರಲಿಲ್ಲ. ಹಲವೊಮ್ಮೆ ಅವು ತುಂಬ ಅವಸರದಲ್ಲಿ ಗೀಚಿದ ಹವ್ಯಾಸಿ ಬರಹಗಳಂತೆ ಕಂಡರೂ, ಅದರ ರೂಪದಲ್ಲಿಯೇ ಒಂದು ವಿಶೇಷ ನನಗೆ ಅವತ್ತೇ ಕಂಡಿತ್ತು.

ಈ ಕಥೆಗಳು ಸಮಕಾಲೀನ ಕನ್ನಡದ ಕಥೆಗಳಿಗಿಂತ ಹೆಚ್ಚು ಬಯಲುಸೀಮೆಯ ಹಳ್ಳಿಗಳಿಂದ ಸಂಗ್ರಹಿಸಿಕೊಂಡು ಬಂದ ಜಾನಪದ ಆಖ್ಯಾಯಿಕೆಗಳ ಹಾಗಿದ್ದವು. ಹಾಗಾಗಿ, ಅವರಿಗೆ ಯಾವ ರೀತಿಯಲ್ಲಿ ಪ್ರತಿಸ್ಪಂದಿಸಬೇಕು ಎಂಬುದು ಸ್ಪಷ್ಟವಾಗದೆ ನಾನು ಹಲವು ದಿನ ಅವರೊಂದಿಗೆ ಮಾತಾಡಿರಲಿಲ್ಲ. ಆಮೇಲೆ, ಅವರಿಂದಲೇ ಈ ಕಥೆಗಳು ಹೇಗೆ ಹುಟ್ಟಿದವು ಎಂಬ ಕಥೆಯನ್ನು ಕೇಳುತ್ತ, ಆ ಮಾತುಕತೆಯ ನಡುವೆಯೇ ನನಗೆ ಅನ್ನಿಸಿದ ಕೆಲವು ಸಂಗತಿಗಳನ್ನು ಅವರೊಂದಿಗೆ ಹಂಚಿಕೊಂಡಿದ್ದೆ.

ಈಗ ಈ ಸಂಕಲನ ನೋಡಿದರೆ, ನಾನು ಅವತ್ತು ಬೀಜರೂಪದಲ್ಲಿ ನೋಡಿದ ಒಂದು ಕಥನ ಶೈಲಿಯು ಇಲ್ಲಿ ಆಗಲೇ ಮೊಳೆಯಲಿಕ್ಕೆ ಆರಂಭ ಮಾಡಿದೆ. ನಿಜ, ಈ ‘ಕತಿಗುಳು’ ಒಂದಕ್ಕಿಂತ ಇನ್ನೊಂದು ಬೇರೆಯಾಗಿವೆ, ಪ್ರತಿಯೊಂದೂ ವಿಭಿನ್ನ ಅನುಭವಗಳ ಅನ್ವೇಷಣೆಗೆ ಹೊರಡುತ್ತದೆ. ಆದರೆ, ಎರಡು ಪ್ರಮುಖ ಅಂಶಗಳು ಈ ಎಲ್ಲ ಕಥೆಗಳಿಗೆ ಸ್ಥಾಯಿಯಾಗಿವೆ. ಒಂದು – ಬಳ್ಳಾರಿ ಪ್ರಾಂತ್ಯದ ಬಯಲುಸೀಮೆಯ ಭಾಷೆ, ಮತ್ತು ಎರಡು – ಒಂದು ಬಗೆಯ ಜಾನಪದ ನಿರೂಪಣೆಯ ಚೌಕಟ್ಟು.

ಈ ಎರಡು ವಿಶೇಷಗಳಲ್ಲಿ ಮೊದಲನೆಯದಾದ ಭಾಷೆಯನ್ನು ನಂದಕುಮಾರ್ ತಮ್ಮ ಊರಿನ ಪರಿಸರದಲ್ಲಿ ಕಲಿತದ್ದಾದರೂ, ಅಂಥ ಭಾಷೆಗೆ ಅವರ ಮನಸ್ಸನ್ನು ಹದಮಾಡಿದ್ದು ನಿಶ್ಚಿತವಾಗಿಯೂ ರಂಗಭೂಮಿಯೇ ಸರಿ – ಎಂದು ನನ್ನ ತಿಳುವಳಿಕೆ. ಇದು ಕೇವಲ ಉಪಭಾಷೆಯ ಬಳಕೆಯಲ್ಲಿ ಮಾತ್ರವಲ್ಲ, ಭಾಷೆಯನ್ನು ಆಡುವ ನುಡಿಯಾಗಿ ನುಡಿಸುವ ವಿಧಾನದಲ್ಲಿ ಸ್ಪಷ್ಟವಾಗಿ ನನಗೆ ಕಾಣಿಸಿದೆ. ಇನ್ನು ಜಾನಪದ ಮಾದರಿಯ ಕಥನ ಕ್ರಮವು ಈ ಕಥೆಗಳಿಗೆ ಒಂದು ವಿಶೇಷವಾದ ವೈಶಿಷ್ಟ್ಯವನ್ನಂತೂ ಕೊಟ್ಟಿದೆ – ಈ ಯಾವ ಕಥನವೂ ನಿಜವಾಗಿ ನಡೆದ ಕಥೆಯಲ್ಲ, ಬದಲು, ಕಟ್ಟಿದ ಕಥೆ – ಎಂಬ ಅವ್ಯಕ್ತ ಸಂವಹನೆ ಈ ಕಥನದೊಳಗೇ ಅಡಕವಾಗಿದೆ. ಉದಾಹರಣೆಗೆ ಇಲ್ಲಿಯ ಪ್ರತಿಯೊಂದು ಕಥೆಯೂ ಆರಂಭವಾಗುವುದು ಹೆಚ್ಚೂಕಮ್ಮಿ ‘ಒಂದಾನೊಂದು ಊರಿನಲ್ಲಿ…’ ಎನ್ನುವಂಥ ಮಾತುಗಳ ಮೂಲಕವೇ. ಅಂದಮಾತ್ರಕ್ಕೆ ಈ ಕಥನವು ಕೃತಕವೆಂದು ನಾವು ತಿಳಿಯಬೇಕಾಗಿಯೂ ಇಲ್ಲ, ಇದು ಸ್ವಭಾವೋಕ್ತಿಗಿಂತ ಭಿನ್ನವಾದ ಬೇರೆ ಬಗೆಯ ಕಥನವನ್ನು ಮಾಡುತ್ತಿದೆ ಎಂಬಂಥ ಸೂಚನೆ ಈ ಕತೆಗಳಲ್ಲಿರುವಂತೆ ತೋರುತ್ತದೆ.

ಹಾಗಂತ ನಂದ ಅವರ ಈ ಮೊದಲ ಕಥೆಗಳು ಇಂಥ ಹೊಸ ಬಗೆಯೊಂದನ್ನು ಸಂಪೂರ್ಣವಾಗಿ ಸಾಕ್ಷಾತ್ಕರಿಸಿಕೊಂಡಿವೆ – ಎಂದೇನೂ ನಾನು ಹೇಳಲಾರೆ. ಆದರೆ, ಈ ಕತೆಗಳು ತಮ್ಮ ನಿರೂಪಣೆಯ ಶಯ್ಯೆಯ ಮೂಲಕವೇ ಮಾತಾಡುತ್ತವೆ, ನಿರೂಪಿತ ಸಂಗತಿಯ ಮೂಲಕವಲ್ಲ – ಎಂಬುದಂತೂ ನನಗೆ ಗೋಚರವಾಗಿದೆ. ಆದ್ದರಿಂದಲೇ, ಹಲವು ವರ್ಷಗಳ ಹಿಂದೆ, ಮೊದಲನೆ ಬಾರಿ ಕಥೆಗಳ ಕಟ್ಟು ಹಿಡಿದು ನಂದಕುಮಾರ ಅವರು ನನ್ನ ಬಳಿ ಬಂದಿದ್ದಾಗ ಆಡಿದ ಮಾತುಗಳನ್ನೇ ಮತ್ತೆ ಆಡಿದ್ದೇನೆ – ಈ ಬಾರಿ ತುಸು ಹೆಚ್ಚು ಸ್ಪಷ್ಟತೆಯೊಂದಿಗೆ.

ಮತ್ತೆ, ನನ್ನ ಮಾತುಗಳು ಏನೂ ಇರಲಿ, ಅವರು ನಂಬಿರುವ ಮಾಧ್ಯಮವೇ ಅವರಿಗೆ ಮುಂದಿನ ಮಾರ್ಗವನ್ನು ತೋರಿಸುತ್ತದೆ ಎಂಬ ನಂಬುಗೆ ನನಗಿದೆ.

‍ಲೇಖಕರು Admin

December 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: