ಕೆ ಪುಟ್ಟಸ್ವಾಮಿ ಓದಿದ ‘ಕೀಟಲೆಯ ದಿನಗಳು’

ಕೆ. ಪುಟ್ಟಸ್ವಾಮಿ

ತಮ್ಮ 60 ನಂತರ ಅಂಕಣಕಾರರಾಗಿ ಸ್ಫೋಟಿಸಿದವರು ಎಸ್ ಎನ್ ಲಕ್ಷ್ಮೀನಾರಾಯಣ. ಕೃಷಿ ಅಧ್ಯಯನ ಮಾಡಿ, ಅಣ್ಣ ಮಂಜುನಾಥ ದತ್ತ ಅವರಿಂದ ಪ್ರೇರೇಪಣೆ ಪಡೆದ ಲಕ್ಷ್ಮೀನಾರಾಯಣ ಅವರ ಆತ್ಮ ಕಥನ ಬೆಂಗಳೂರಿನಲ್ಲಿ ನಾಳೆ (09, ಭಾನುವಾರ) ಬಿಡುಗಡೆಯಾಗುತ್ತಿದೆ. ‘ಅಮೂಲ್ಯ ಪ್ರಕಾಶನ’ ಪ್ರಕಟಿಸಿರುವ ಈ ಕೃತಿಗೆ ಹಿರಿಯ ಲೇಖಕರಾದ ಕೆ ಪುಟ್ಟಸ್ವಾಮಿ ಅವರು ಬರೆದ ಮುನ್ನುಡಿ ಇಲ್ಲಿದೆ-


ಬಹಳ ಹಿಂದೆ, ಅಂದರೆ ಕ್ರಿಸ್ತಪೂರ್ವ ಐದನೇ ಶತಮಾನದಲ್ಲಿ ಗ್ರೀಸಿನಲ್ಲಿ ವಿಲಕ್ಷಣವಾದ ತತ್ವಜ್ಞಾನಿಯೊಬ್ಬನಿದ್ದ. ಹೆಸರು ಡಯೋಜೆನಿಸ್. ಸೈನೋಪ್ ನಗರದ ಡಯೋಜೆನಿಸ್ ಎಂದೇ ಆತ ಪ್ರಸಿದ್ಧ. ಜನರಿಗೆ ಸಿನಿಕ ಡಯೋಜೆನಿಸ್ ಎಂದೇ ಪರಿಚಿತ. ಆತನ ಬದುಕಿನ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಆದರೆ ಆತನ ವಿಲಕ್ಷಣ ಬದುಕಿನ ಬಗ್ಗೆ ಜನಜನಿತ ಕತೆಗಳಿವೆ. ಒಂದು ಕತೆಯ ಪ್ರಕಾರ ಈಗಿನ ಉತ್ತರ ಟರ್ಕಿಯ ಕಪ್ಪು ಸಮುದ್ರದ ಕರಾವಳಿ ನಗರ ಸೈನೋಪ್‌ನಲ್ಲಿ ಕ್ರಿ. ಪೂ ೪೧೨ರಲ್ಲಿ ಜನಿಸಿದ ಈತ ಹುಟ್ಟಾ ತಂಟೆಕೋರ. ರೂಢಿಯನ್ನು ಉಲ್ಲಂಘಿಸುವ, ಸಮಾಜ ಅಂಗೀಕರಿಸಿದ ಸಭ್ಯತೆ, ನಾಗರಿಕ ನಡತೆ, ನೀತಿ ಮೌಲ್ಯಗಳನ್ನು ಅಲ್ಲಗೆಳೆಯುವ ಹಾಗು ಪ್ರಸಿದ್ಧಿ, ಶ್ರೀಮಂತಿಕೆ, ಐಷಾರಾಮಿ ಬದುಕನ್ನು ತುಚ್ಛೀಕರಿಸುತ್ತಿದ್ದ ಸ್ವಭಾವದವನು. ಖೊಟ್ಟಿ ನಾಣ್ಯಗಳನ್ನು ಚಲಾವಣೆಗೆ ಬಿಟ್ಟು ನಾಣ್ಯಗಳನ್ನು ಅಪಮೌಲ್ಯಗೊಳಿಸಿದ ಆಪಾದನೆ ಹೊತ್ತ ಅವನ ಪೌರತ್ವವನ್ನು ರದ್ದುಮಾಡಿ, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ಪ್ರಭುತ್ವವು ಅವನನ್ನು ದೇಶಬಿಟ್ಟು ಓಡಿಸಿತು. ಸೈನೋಪ್‌ನಿಂದ ಓಡಿಬಂದ ಅವನು ಸೇರಿದ್ದು ತತ್ವಜ್ಞಾನಿಗಳ ಕೇಂದ್ರ ಗ್ರೀಸಿನ ಅಥೆನ್ಸ್ ಗೆ.

ಇನ್ನೊಂದು ಕತೆಯ ಪ್ರಕಾರ ಭವಿಷ್ಯ ನುಡಿಯುವ ಗ್ರೀಸಿನ ಡೆಲ್ಫಿಯ ಅಪೋಲೋ ದೇವಾಲಯಕ್ಕೆ ಒಮ್ಮೆ ಆತ ಹೋದಾಗ ನಾಣ್ಯಗಳನ್ನು ಅಪಮೌಲ್ಯಗೊಳಿಸಲು ಅವನಿಗೆ ದೇವವಾಣಿಯ ಆದೇಶವಾಯಿತಂತೆ. ಸೈನೋಪ್‌ಗೆ ಹೋಗಿ ಅದನ್ನು ಕಾರ್ಯಗತಗೊಳಿಸಿದ ಕಾರಣಕ್ಕೆ ದೇಶಭ್ರಷ್ಠನಾದ ಆತ ನಾಣ್ಯಗಳ ಬದಲಿಗೆ ರೂಢಿಗತವಾದ ರಾಜಕೀಯ, ಸಾಮಾಜಿಕ ನಂಬಿಕೆಗಳನ್ನು ವಿರೂಪಗೊಳಿಸುವ ಸಂಕಲ್ಪ ತೊಟ್ಟು ಅಥೇನ್ಸ್ ಗೆ ಬಂದು ಸ್ಥಾಪಿತ ಆಚರಣೆಗಳು, ಮೌಲ್ಯಗಳನ್ನು ಪ್ರಶ್ನಿಸುವ, ವ್ಯಂಗ್ಯ ಮಾಡುವ ಕಾರ್ಯವನ್ನೇ ಬದುಕಾಗಿಸಿಕೊಂಡನಂತೆ. ಗುರು ಆಂಟಿಸ್ತೆನೆಸ್‌ನಿಂದ ಸಿನಿಸಿಸಂ ತತ್ವದ ದೀಕ್ಷೆ ಪಡೆದ ಡಯೋಜೆನಿಸ್ ಅದನ್ನು ಅದರ ಪರಾಕಾಷ್ಟೆಗೆ ಒಯ್ದ. (ಸಿನಿಸಿಸಿಂ ಎಂದರೆ ನಿರಾಶಾವಾದವನ್ನು ತುಂಬುವ, ಸಕಲವನ್ನು ಸಂಶಯದಿಂದ ನೋಡುವ, ‘ಇದಾಗದು’ ಎಂದು ಕೈಚೆಲ್ಲಿ ಕೂಡುವ ವಾದ ಎಂಬರ್ಥದಲ್ಲಿ ಈಗ ಬಳಕೆಯಾಗುತ್ತಿದೆ. ಸಿನಿಕರನ್ನು ನಿರಾಶಾವಾದಿಗಳಿಗೆ ಸಂವಾದಿಯಾಗಿ ನೋಡುತ್ತಾರೆ. ಮೂಲದಲ್ಲಿ ಸಿನಿಸಿಸಂ ಎನ್ನುವುದು ಪುರಾತನ ಗ್ರೀಸ್ ದೇಶದಲ್ಲಿ ಆಚರಣೆಯಲ್ಲಿದ್ದ ಒಂದು ತತ್ವಜ್ಞಾನ ಶಾಖೆ. ಸಿನಿಕರ ಜೀವನದ ಉದ್ದೇಶ-ಶ್ರದ್ಧೆಯಿಂದ, ಪ್ರಕೃತಿಯ ಲಯಗಳ ಜೊತೆ ಬೆರೆತು ಬದುಕುವುದು. ರೂಢಿಗತ ಆಕಾಂಕ್ಷೆಗಳಾದ ಶ್ರೀಮಂತಿಕೆ, ಅಧಿಕಾರ, ಕೀರ್ತಿ ಇವೆಲ್ಲವನ್ನೂ ತಿರಸ್ಕರಿಸಿ ಬಡತನವನ್ನು ಆರಾಧಿಸುತ್ತಾ, ಭೋಗವಸ್ತುಗಳ ಹಂಗು ತೊರೆದು, ಸರಳ ಬದುಕಿಗೆ ಬದುಕನ್ನು ಅಣಿಗೊಳಿಸಲು ಪ್ರಜ್ಞಾಪೂರ್ವಕವಾಗಿ ಶಿಸ್ತು ರೂಢಿಸಿಕೊಳ್ಳುವುದು. ರೂಢಿಯು ಹೇರುವ ಠಕ್ಕುಗಳನ್ನು ಸಾರ್ವಜನಿಕವಾಗಿ ಟೀಕಿಸಿ ಬದುಕುವುದು. ಇಂದ್ರಿಯಗಳನ್ನು ಸಂಯಮಗೊಳಿಸಿ ಸುಖ ದುಃಖಗಳಿಗೆ ನಿರ್ಲಿಪ್ತವಾಗಿರಬೇಕೆಂಬ ತತ್ವವನ್ನು ಬೋಧಿಸಿದ ಸ್ಟಾಯಿಸಿಸಂ- ಸಿನಿಸಿಸಂ ತತ್ವದಿಂದ ಉದಯಿಸಿದ ಕವಲು.)

ಬಡತನದ ಬದುಕನ್ನೇ ಆನಂದದಿಂದ ಡಯೋಜೆನಿಸ್ ಆಲಂಗಿಸಿಕೊಂಡ. ಮಾರುಕಟ್ಟೆಯಲ್ಲಿ ದೊಡ್ಡ ಜಾಡಿಗಳಲ್ಲಿ ಇಲ್ಲವೇ ಉದ್ಯಾನದಲ್ಲಿ ಮಲಗುತ್ತಿದ್ದ. ಸಮಾಜವನ್ನು ಭ್ರಷ್ಟಗೊಳಿಸುವ, ದಾರಿತಪ್ಪಿಸುವ ಸಾಮಾಜಿಕ ಮೌಲ್ಯಗಳು ಮತ್ತು ಸಂಸ್ಥೆಗಳನ್ನು ಟೀಕಿಸಲು, ವ್ಯಂಗ್ಯ ಮಾಡಲು ತನ್ನ ಸರಳ ಬದುಕು ಮತ್ತು ಅಪಹಾಸ್ಯ ಮಾಡುವ ವರ್ತನೆಯನ್ನು ಬಳಸಿಕೊಂಡ. ನಿಸರ್ಗದ ವೈಪರೀತ್ಯಗಳಿಗೆ ತನ್ನನ್ನು ಒಡ್ಡಿಕೊಂಡು ದೇಹವನ್ನು ಹುರಿಗೊಳಿಸಿದ ಡಯೋಜೆನೆಸ್ ಇಷ್ಟ ಬಂದಕಡೆ, ಇಷ್ಟ ಬಂದ ರೀತಿಯಲ್ಲಿ ಮಲಗುತ್ತಿದ್ದ, ಉಣ್ಣುತ್ತಿದ್ದ. ತನ್ನನ್ನು ತಾನು ವಿಶ್ವಮಾನವನೆಂದು ಕರೆದುಕೊಂಡ. ಮಾತಿಗಿಂತಲೂ ಕೃತಿಯಲ್ಲಿ ತನ್ನ ವ್ಯಕ್ತಿತ್ವ ಮತ್ತು ನಂಬಿಕೆಯನ್ನು ತೋರುವುದು ಅತನಿಗಿಷ್ಟವಾಗಿತ್ತು. ತನ್ನ ಹುಚ್ಚು ವರ್ತನೆಗಳಿಂದ ಸಮಾಜದ ಪೊಳ್ಳುತನವನ್ನು ಬಯಿಲಿಗೆಳೆಯುವಲ್ಲಿ ಪ್ರಸಿದ್ಧನಾದ. ಆತ ಪ್ಲೇಟೋ, ಸಾಕ್ರೆಟೀಸನ ಬೋಧನೆಗಳನ್ನು ಗೇಲಿ ಮಾಡಿದ. ಅವರ ವ್ಯಾಖ್ಯಾನಗಳನ್ನು ಹರಿದು ಚಿಂದಿಮಾಡಿದ. ಅವರ ಸಭೆಯಲ್ಲಿ ಕುಳಿತು ಊಟ ಮಾಡುತ್ತಲೋ, ಹುಯಿಲೆಬ್ಬಿಸುತ್ತಲೋ ಭಂಗವುಂಟುಮಾಡುತ್ತಿದ್ದ. ವಿದ್ವಾಂಸರನ್ನು, ರಾಜರನ್ನೂ ಗೇಲಿಮಾಡುತ್ತಿದ್ದ ಅನೇಕ ಕತೆಗಳೂ ಇವೆ.

‘ಮನುಷ್ಯ ಎಂದರೆ ರೆಕ್ಕೆ ಪುಕ್ಕವಿಲ್ಲದ ಎರಡು ಕಾಲಿನ ಪ್ರಾಣಿ’ – ಇದು ಮನುಷ್ಯನ ಬಗೆಗೆ ಪ್ಲೇಟೋ ಮಾಡಿದ ವ್ಯಾಖ್ಯಾನ. ಮರುದಿನವೇ ಕೋಳಿಯೊಂದರ ರೆಕ್ಕೆ ಪುಕ್ಕ ತರಿದು ಅದನ್ನು ತೆಗೆದುಕೊಂಡು ಹೋಗಿ ಪ್ಲೇಟೋಗೆ ‘ಇದೋ ನೋಡಿಲ್ಲಿ ನಿಮ್ಮ ನೆಂಟ’ ಎಂದು ಕೊಟ್ಟ ಕತೆಯಿದೆ. ಆತ ಹಗಲಿನಲ್ಲಿ ಹೊತ್ತಿಸಿದ ಲಾಂದ್ರ ಹಿಡಿದು ಪ್ರಾಮಾಣಿಕರನ್ನು ಹುಡುಕಿಹೋದ ಪ್ರಸಂಗವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅವನ ಜನಪ್ರಿಯತೆಯನ್ನು ತಿಳಿದು ಭೇಟಿ ಮಾಡಲು ಬೆಳಗ್ಗೆಯೇ ಅವನಿದ್ದ ಉದ್ಯಾನಕ್ಕೆ ಪರಿವಾರದೊಡನೆ ಬಂದ ಅಲೆಕ್ಸಾಂಡರ್ ಚಕ್ರವರ್ತಿ ಅವನೆದುರು ನಿಂತು ಪರಿಚಯಿಸಿಕೊಂಡು ಏನು ಬೇಕಾದರೂ ಕೋರಿಕೋ ಎಂದಾಗ ‘ನನಗೂ ಸೂರ್ಯನಿಗೂ ಅಡ್ಡ ನಿಂತಿರುವ ನೀನು ಪಕ್ಕಕ್ಕೆ ಸರಿ’ ಎಂದು ಅಜ್ಙಾಪಿಸಿದ ಕತೆಯಂತೂ ಜನಜನಿತ.

ಡಯೋಜೆನೆಸ್‌ನ ಕತೆಗಳ ಸತ್ಯಾಸತ್ಯತೆಯು ಏನೇ ಇರಲಿ, ಪ್ರಭುತ್ವದ ಅಹಂಕಾರ, ಸಮಾಜದ ಢಾಂಬಿಕತೆ, ರೂಢಿಗತ ಮೌಢ್ಯ, ಹಣ, ಅಧಿಕಾರ, ಕೀರ್ತಿ ಇತ್ಯಾದಿ ದಾಹಗಳ, ಸಾಮಾಜಿಕ ಅಂಗೀಕಾರಗಳ ವಿರುದ್ಧ ಹಾದಿತಪ್ಪದ, ನಿಷ್ಠೆಯಿಂದ ಬದುಕುವ ಹಲವರು ವ್ಯಂಗ್ಯ, ವಿಡಂಬನೆಯ ಅಸ್ತ್ರವನ್ನು ಝಳಪಿಸುವುದು ಒಂದು ಆದಿಮ ವರ್ತನೆ ಎಂಬುದು ನಿಶ್ಚಿತ. ಅಂಥವರ ಸಂತತಿ ಎಂದೂ ಕೊನೆಯಾಗದು. ಡಯೋಜೆನೆಸ್‌ಗಳು ಮತ್ತೆ ಮತ್ತೆ ಜಗತ್ತಿನಲ್ಲಿ ಹುಟ್ಟುತ್ತಲೇ ಇರುತ್ತಾರೆ. ಅಂತಹ ಡಯೋಜೆನೆಸ್ ಗುಣವೇ ಸರ್ವಾಧಿಕಾರಕ್ಕೆ ಸೆಡ್ಡು ಹೊಡೆಯುವುದು ಕಾಲಕಾಲಕ್ಕೆ ಸಾಬೀತಾಗುತ್ತಲೇ ಇದೆ.

ಗೆಳೆಯ ಲಕ್ಷ್ಮೀನಾರಾಯಣ ಅವರ ಆತ್ಮಕತೆಯ ಸ್ವರೂಪದ ಅಂಕಣ ಬರಹಗಳನ್ನು ಓದುತ್ತಿದ್ದಾಗ ನನಗೆ ಡಯೋಜೆನೆಸ್ ಸದಾ ನೆನಪಾಗುತ್ತಿದ್ದ. ಇವು ಮನುಷ್ಯ ಸಮಾಜದ ಪೊಳ್ಳುತನ. ಡೌಲು, ಆಡಂಬರ ಪ್ರದರ್ಶನ, ಹುಸಿ ಪ್ರತಿಷ್ಠೆಗಳ ಬಲೂನಿಗೆ ಸೂಜಿ ಮೊನೆಯಾದ ಬರಹಗಳು. ಹಾಗೆಯೇ ಮನುಷ್ಯ ಸಮಾಜದ ಘನತೆ, ಮನುಷ್ಯ ಸಂಬಂಧಗಳ ಮಾರ್ದವತೆ, ಪ್ರೀತಿ, ಕಕ್ಕುಲಾತಿಗಳನ್ನು, ಗೆಳೆತನವು ತಂದುಕೊಡುವ ಅನುಭೂತಿಯನ್ನು, ಸರಳ ಬದುಕಿನ ಆನಂದವನ್ನು ಆರಾಧಿಸುವ ಆಶಯದ ಅಂತಃಕರಣವನ್ನು ತಟ್ಟುವ ಲೇಖನಗಳು. ಇಲ್ಲಿ ಸ್ಥಾಯಿಯಾಗಿರುವುದು ಹಾಸ್ಯ, ವಿಡಂಬನೆ, ವ್ಯಂಗ್ಯ, ವಿನೋದ, ಹಲವೆಡೆ ಕುಚೋದ್ಯ. ಈ ದೊಡ್ಡ ಸಂಪುಟದ ಪ್ರತಿ ಹಾಳೆಯಲ್ಲೂ ಗಾಢವಾಗಿ ತುಂಬಿಹೋಗಿರುವ ಈ ಹಾಸ್ಯ ರಸಾಯನ ಸಹಜವಾಗಿಯೇ ಡಯೋಜೆನೆಸ್‌ನನ್ನು ನೆನಪಿಗೆ ತರುತ್ತದೆ.

ಈ ಅಂಕಣ ಬರಹಗಳ ಸಂಗ್ರಹ ‘ಕೀಟಲೆಯ ದಿನಗಳು’ ಕೃತಿ ಬಗ್ಗೆ ಮುನ್ನುಡಿ ಬರೆಯಲು ಆರಂಭಿಸಿದಾಗ ಲಕ್ಷ್ಮೀನಾರಾಯಣನ ಬದುಕಿನ ಸಂಗತಿಗಳು ಮತ್ತು ಬರಹಗಳಲ್ಲಿನ ವಿವರಗಳ ನಡುವಿನ ಸಂಬಂಧಗಳ ಪ್ರಸ್ತಾಪವಿಲ್ಲದೆ ಬರೆಯುವ ಮುನ್ನುಡಿ ಅಪೂರ್ಣ ಎನಿಸಿತು. ಇದು ಪರಿಷ್ಕಾರಗೊಂಡ ಅಂಕಣಗಳ ಸಂಕಲನವಾದರೂ ಇಲ್ಲಿ ಬರುವ ಪಾತ್ರ, ಸ್ಥಳ, ಸನ್ನಿವೇಶ ಎಲ್ಲವೂ ಕಾಲದೇಶ ಬದ್ಧವಾದವು. ಎರಡು ವ್ಯಕ್ತಿಗಳ ಮೂಲ ಹೆಸರನ್ನು ಬದಲಿಸಿರುವುದು ಬಿಟ್ಟರೆ ಇಲ್ಲಿ ಅವರ ಜೊತೆ ಒಡನಾಡಿದ ವ್ಯಕ್ತಿಗಳೆಲ್ಲ ಸ್ವಂತ ಹೆಸರಿನಲ್ಲೇ ಹಾಜರಾಗಿದ್ದಾರೆ. ಇಲ್ಲಿ ಬರುವ ಸನ್ನಿವೇಶಗಳೆಲ್ಲವೂ ನಿಜ ಜೀವನದಲ್ಲಿ ಘಟಿಸಿದಂಥವು. ಬಹುತೇಕ ಘಟನೆಗಳಿಗೆ ಅವರು ಸಾಕ್ಷಿ. ಅನೇಕ ವೇಳೆ ನಿರೂಪಣೆ, ವಿವರಗಳು ಉತ್ಪ್ರೇಕ್ಷಿತವಾದಂತೆ ಕಂಡು ಬಂದರೂ ವಾಸ್ತವದಲ್ಲಿ ಅವನ್ನು ಅಂಡರ್ ಪ್ಲೇ ಮಾಡಿದ್ದಾರೆಂದು ನನಗನಿಸುತ್ತದೆ. ನಾನು ಲಕ್ಷ್ಮೀನಾರಾಯಣ ಅವರನ್ನು ಬಲ್ಲವನಾಗಿ, ಬದುಕಿನ ವಿವರಗಳನ್ನು ತಿಳಿದವನಾಗಿ ಕೃತಿಯ ಬಗ್ಗೆ ಬರೆಯುವುದು ಸರಿಯಲ್ಲವೆಂದು ತಿಳಿಹೇಳಿದರೂ ಒಪ್ಪದೆ ಆ ಜವಾಬ್ದಾರಿಯನ್ನು ನನ್ನ ಮೇಲೆ ಹೇರಿದ್ದಾರೆ. ಆದುದರಿಂದ ಅವರ ಜೀವನದ ಕೆಲವು ವಿವರಗಳನ್ನು ಕಟ್ಟಿಕೊಡುವ ಅಗತ್ಯವಿದೆ ಅನಿಸಿದೆ.

ಲಕ್ಷ್ಮೀನಾರಾಯಣ ನನಗೆ ಪರಿಚಯವಾದದ್ದು ಪದವಿ ಕಲಿಯುವ ಕಾಲಕ್ಕೆ(೧೯೭೬). ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನನಗಿಂತ ಒಂದು ವರ್ಷ ಹಿರಿಯ ವಿದ್ಯಾರ್ಥಿಯಾಗಿದ್ದ ಎಸ್.ಎನ್. ಲಕ್ಷ್ಮೀನಾರಾಯಣ ಇಡೀ ಕ್ಯಾಂಪಸ್ಸಿಗೆ ಚಿರಪರಿಚಿತ. ಅಪಾರ ಜೀವನೋತ್ಸಾಹ ಮತ್ತು ಅದಮ್ಯ ತುಂಟತನದಿಂದ ಪ್ರಸಿದ್ಧಿಯಾಗಿದ್ದ ಲಕ್ಷ್ಮೀನಾರಾಯಣ ಅವರನ್ನು ಕಂಡರೆ ಹುಡುಗರಿರಲಿ, ಸ್ವತಃ ಬೋಧಕ ಸಿಬ್ಬಂದಿಯೇ ಬೆಚ್ಚಿಬೀಳುತ್ತಿತ್ತು. ತಮ್ಮ ತುಂಟಾಟದಲ್ಲಿ ದಿನಕ್ಕೊಂದು ಪ್ರಯೋಗ ನಡೆಸುತ್ತಿದ್ದ ಕೀಟಲೆಗಳು ಅನೇಕ ಸಾರಿ ಉಪದ್ರವಕಾರಿಯಾಗಿದ್ದರೂ, ಸಾಹಸ, ರಂಜನೆ, ತಮಾಷೆ ತುಂಬಿರುತ್ತಿದ್ದವು. ಒಂದೇ ಹಾಸ್ಟಲಿನಲ್ಲಿ ಇದ್ದ ಕಾರಣ ಅವರ ಪ್ರಾಯೋಗಿಕ ಕೀಟಲೆಗಳಿಗೆ ಅಲ್ಲಿದ್ದ ನಾವೆಲ್ಲ ಸಾಕ್ಷಿಯಾಗುತ್ತಿದ್ದೆವು. ಅಪಾರ ಸಂಖ್ಯೆಯ, ಹಲವು ಹಿನ್ನೆಲೆಯ ಗೆಳೆಯರನ್ನು ಕಟ್ಟಿಕೊಂಡು ತಿರುಗುತ್ತಿದ್ದ ಲಕ್ಷ್ಮೀನಾರಾಯಣನ ತುಂಟತನದ ಪ್ರಸಂಗಗಳ ಪ್ರದರ್ಶನಕ್ಕೆ ಕಾಲೇಜು, ಹಾಸ್ಟಲ್, ಜಿಮ್, ಲೈಬ್ರರಿಗಳೆಲ್ಲ ರಂಗಭೂಮಿಯಾಗಿರುತ್ತಿದ್ದವು.

ಮಾತು, ವರ್ತನೆ ಮತ್ತು ಕ್ರಿಯೆಗಳ ಮೂಲಕ ಎಲ್ಲವನ್ನೂ ಗೇಲಿಗೊಳಪಡಿಸುವ, ತಮಾಷೆ ಮಾಡುವ ಲಕ್ಷ್ಮೀನಾರಾಯಣ ಎಂದೂ ಗಂಭೀರ ವಿದ್ಯಾರ್ಥಿಯಂತೆ ಕಾಣುತ್ತಿರಲಿಲ್ಲ. ತೊಂಡಿಗೆ ಕೂಡಬೇಕಿದ್ದ ಗೂಳಿಯಂತೆ ಕಾಣುತ್ತಿದ್ದರು. ಜಿಮ್‌ನಲ್ಲಿ ದೇಹ ದಂಡಿಸಿ ಹುರಿಗಟ್ಟಿದ ದೇಹವನ್ನು ಟೀ ಷರ್ಟ್ ನ ಎದೆಯ ಭಾಗ ತೆರೆದು, ಮಿಲಿಟರಿ ಕಟ್ ಮಾಡಿಸಿದ ತಲೆಯನ್ನು ಅಗತ್ಯಕ್ಕಿಂತ ಮೇಲೆತ್ತಿ, ತುಸು ಜಾಸ್ತಿಯೇ ಎದೆಯುಬ್ಬಿಸಿ ನಡೆಯುತ್ತಿದ್ದ ಲಕ್ಷ್ಮೀನಾರಾಯಣ ಆ ಕಾಲಕ್ಕೆ ಒಂದು ಹವಾ ಸೃಷ್ಟಿಸಿದ್ದರು. ವಾರಕ್ಕೆ ಹಲವು ಪರೀಕ್ಷೆಗಳನ್ನು ಎದುರಿಸಬೇಕಿದ್ದ ಟ್ರೈಮೆಸ್ಟರ್ ಪದ್ಧತಿಯ ಕೃಷಿ ಶಿಕ್ಷಣದಲ್ಲಿ ವಿದ್ಯಾರ್ಥಿಯು ಸದಾ ಅಧ್ಯಯನನಿರತನಾಗಬೇಕಿತ್ತು. ಶೇ. ೯೫ ಹಾಜರಿಯಿಲ್ಲದಿದ್ದರೆ ಪರೀಕ್ಷೆಯಲ್ಲಿ ಪಾಸಾದರೂ ನಪಾಸು ಎಂದೇ ಪರಿಗಣಿಸುವ ವಿಚಿತ್ರ ಪದ್ಧತಿ ಅದು. ಅಂಥ ಸನ್ನಿವೇಶದಲ್ಲಿ ಸದಾ ಗಲಾಟೆಯೆಬ್ಬಿಸುತ್ತಾ, ಬಿಂದಾಸಾಗಿ ತಿರುಗುತ್ತಾ ಇಡೀ ಕ್ಯಾಂಪಸ್ಸಿಗೆ ಅಪವಾದವಾಗಿದ್ದರು. ಆದರೆ ನಮಗೆ ಬಹಳಷ್ಟು ಕಾಲ ಅಪರಿಚಿನಾಗಿ ಉಳಿದಿದ್ದ ಇನ್ನೊಬ್ಬ ಲಕ್ಷ್ಮೀನಾರಾಯಣನೂ ಇದ್ದ. ಆತ ಓದಿನ ಗೀಳು ಹಿಡಿದ ಪುಸ್ತಕ ಪ್ರೇಮಿ. ಯೂನಿವರ್ಸಿಟಿಯ ಬಾಲ್ ಬ್ಯಾಡ್ಮಿಂಟನ್ ತಂಡದ ಆಟಗಾರ-ನಾಯಕ. ಕರ್ನಾಟಕ ತಂಡವನ್ನೂ ಪ್ರತಿನಿಧಿಸಿದ್ದ ಪ್ರತಿಭಾವಂತ ಕ್ರೀಡಾಪಟು. ಊಟ, ಓದು, ನಿದ್ರೆಯಲ್ಲಿ ವಿಚಿತ್ರವಾದ ಶಿಸ್ತು. ಗೆಳೆಯರನ್ನು ಅಪಾರವಾಗಿ ಪ್ರೀತಿಸುವ ಹೃದಯವಂತ. ಅವನ ಗೆಳೆತನದ ಸವಿ ಬಲ್ಲವರಿಗಷ್ಟೇ ಗೊತ್ತು. ಪದವಿ ವ್ಯಾಸಂಗ ಕಾಲದಲ್ಲಿ ಹೊರಗೆ ಕಾಣುತ್ತಿದ್ದ ವ್ಯಕ್ತಿಗೂ ಮನುಷ್ಯರೊಡನೆ ಇರಿಸಿಕೊಂಡಿದ್ದ ಭಾವನಾತ್ಮಕ ಸಂಬಂಧಗಳ ವ್ಯಕ್ತಿಗೂ ತಾಳಮೇಳವಾಗುತ್ತಿರಲಿಲ್ಲ. ಎಲ್ಲಿಯೂ ನೆಲೆಯಾಗುವುದಿಲ್ಲ ಎಂದು ನಂಬಿದ್ದ ಗೆಳೆಯರಿಗೇ ಆಘಾತವಾಗುವಂತೆ, ವೈಶ್ಯ ಬ್ಯಾಂಕಿನಲ್ಲಿ ಕೃಷಿ ಅಧಿಕಾರಿಯಾಗಿ, ೨೪ ವರ್ಷಗಳಲ್ಲಿ ಹದಿನೇಳು ಬಾರಿ ವರ್ಗವಾದರೂ ದೂಸರಾ ಮಾತಿಲ್ಲದೆ, ಹೊಸ ಊರು ಹೊಸ ಅನುಭವಗಳಿಗೆ ಮಂಟಪವೆಂದು ಭಾವಿಸಿ ಶಿಕ್ಷೆ ನೀಡಿ ಬೀಗಿದವರೇ ನಾಚಿಕೆಯಿಂದ ಬಾಗುವಂತೆ ಕರ್ತವ್ಯ ನಿರ್ವಹಿಸಿ ಅಚ್ಚರಿ ಮೂಡಿಸಿದರು. ಕೆಲಸದ ಏಕತಾನತೆ ಬಗ್ಗೆ ಗೊಣಗದೆ ಒಂದು ದಿನ ರಾಜೀನಾಮೆ ನೀಡಿ ಹೊರಬಂದು ಹೊಸ ಬದುಕಿಗೆ ಒಡ್ಡಿಕೊಂಡರು. ಅವರ ಇತ್ತೀಚಿನ ಸಾಹಸವೇ ‘ಹಾಸನ್ಮುಖಿ’ ಅಂಕಣ ಬರಹ.

ಆದರೆ ಬದುಕಿನುದ್ದಕ್ಕೂ ಬಿಂದಾಸಾಗಿ ಬಾಳಿದ ಲಕ್ಷ್ಮೀನಾರಾಯಣ ಅವರು ಅರವತ್ತರ ನಂತರ ಅಂಕಣ ಬರಹಗಾರರಾಗಿ ಸ್ಫೋಟಿಸುವರೆಂದು ಯಾರೂ ಊಹಿಸಿರಲಿಲ್ಲ. ಸಾಹಸಗಳ ಬೆನ್ನುತ್ತುವುದರಲ್ಲಿ ನಿಪುಣರಾದ ಅವರಿಗೆ ಮಾತ್ರ ಇಂಥವು ಸಾಧ್ಯ. ಈ ಕೃತಿಯನ್ನು ಓದಿ ಮುಗಿಸಿದಾಗ ಇದೊಂದು ಕಾಲಾನುಕ್ರಮಣಿಕೆಯನ್ನು ಧಿಕ್ಕರಿಸಿದ ಚದುರಿದ ಆತ್ಮ ಕಥನದಂತೆ ಕಾಣುತ್ತದೆ. ಆತ್ಮ ಕಥನದ ಲೇಪವಿದ್ದರೂ, ಈಗಾಗಲೇ ಹೇಳಿದಂತೆ ಸಕಲವನ್ನೂ ವಕ್ರ ದೃಷ್ಟಿಯಿಂದ ನೋಡಿ ನಗಾಡುವ ಡಯೋಜೆನೆಸ್ ಗುಣ ಇಲ್ಲಿ ಭದ್ರವಾಗಿ ನೆಲೆಯೂರಿದೆ. ವ್ಯಕ್ತಿ, ಘಟನೆ ಅಥವಾ ಯಾವುದೋ ಒಂದು ವಿಷಯವನ್ನು ತಿಳಿ ಹಾಸ್ಯದಲ್ಲಿ ನಿರೂಪಿಸುವ ಕನ್ನಡದ ಸಂದರ್ಭದಲ್ಲಿ ಹರಟೆ ಅಥವಾ ಲಲಿತ ಪ್ರಬಂಧ ಎನ್ನಬಹುದಾದ ವರ್ಗಕ್ಕೆ ಇಲ್ಲಿನ ಬರಹಗಳನ್ನು ಸೇರಿಸಬಹುದಾದರೂ ಆ ವರ್ಗೀಕರಣವನ್ನು ಮೀರುವ ಗುಣಗಳು ಇಲ್ಲಿನ ಲೇಖನಗಳಿಗಿದೆ. ಒಂದಂತೂ ಸತ್ಯ. ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಇದೊಂದು ಕನ್ನಡದಲ್ಲಿ ಸಂಭವಿಸಿದ ಹೊಸದೊಂದು ಮಾರ್ಗದ ಬರವಣಿಗೆ ಅನಿಸದಿರದು. ಲವಲವಿಕೆಯನ್ನೇ ಹೊದ್ದುಕೊಂಡ ಭಾಷೆಯು ಓದುಗನನ್ನು ಗಿರಗಿಟ್ಲೆ ಆಡಿಸಿ ಆನಂದದ ಅಮಲಿನಲ್ಲಿ ತೇಲಿಸುವುದಂತೂ ನಿಜ.

ಲಕ್ಷ್ಮೀನಾರಾಯಣ ಅವರು ತಮ್ಮ ಬದುಕಿನ ಚದುರಿದ ಚಿತ್ರಗಳನ್ನು ಇಲ್ಲಿ ಮೂರು ಭಾಗಗಳಲ್ಲಿ ಸಂಕಲಿಸಿದ್ದಾರೆ. ಪ್ರತಿಯೊಂದು ಭಾಗವು ಅವರ ಬದುಕಿದ ಬೇರೆ ಬೇರೆ ಸ್ಥಳಗಳಲ್ಲಿ ಘಟಿಸಿದ ಸನ್ನಿವೇಶಗಳನ್ನೊಳಗೊಂಡಿದೆ. ಮೊದಲ ಭಾಗದಲ್ಲಿ ಅವರು ಹುಟ್ಟಿದ ಹಾಸನ ನಗರದಲ್ಲಿನ ಬಾಲ್ಯ ಮತ್ತು ವಿದ್ಯಾಭ್ಯಾಸ, ಕೌಟುಂಬಿಕ ಬಾಂಧವ್ಯ, ಅಲ್ಲಿನ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಜನಪರ ಹೋರಾಟಗಳು ಮತ್ತು ಹಾಸನದ ಸುತ್ತಮುತ್ತಲಿನ, ವಿಶೇಷವಾಗಿ ಸಕಲೇಶಪುರದ ವಿಶಿಷ್ಟ ಜನರ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಬಾಲ್ಯಕಾಲದ ತುಂಟ ಹುಡುಗರ ಸಾಹಸಗಳು, ಕಳ್ಳತನಗಳು, ಶಾಲೆಯಲ್ಲಿನ ಪೇಚಿನ ಪ್ರಸಂಗಗಳು, ಸಕಲೇಶಪುರದ ರಸಿಕ ಜನರ ಮೋಜಿನ ಕತೆಗಳನ್ನು ಹೆಣೆದಿದ್ದಾರೆ. ತುಂಟ ಮಕ್ಕಳನ್ನು ಕಟ್ಟಿಕೊಂಡು ಹೆಣಗುವ ಸಕಲ ತಾಯಂದಿರ ಪ್ರತಿನಿಧಿಯನ್ನು ಅವರ ಅಮ್ಮನಲ್ಲಿ ಕಂಡಿದ್ದಾರೆ. ತಮ್ಮನ್ನು ತಿದ್ದಿ ತೀಡಿ ಬೆಳೆಸಿದ ಗುರುಗಳು ಮತ್ತು ರೈತ ನಾಯಕ ಪಾಂಡುರಂಗ ವಿಠಲರ ವ್ಯಕ್ತಿತ್ವವನ್ನು ಸಾರಿ ಹೇಳುವ ಆಪ್ತ ನುಡಿನಮನಗಳು ಸಹ ಈ ಭಾಗದಲ್ಲಿವೆ.

ಎರಡನೇ ಭಾಗವು ಕೃಷಿ ವಿಜ್ಞಾನ ಪದವಿ ಕಲಿಯಲು ಬಂದ ಮುಗ್ಧ ವಿದ್ಯಾರ್ಥಿಯ ಕಾಲೇಜು ಬದುಕು ಮತ್ತು ಬೆಂಗಳೂರು ನಗರದಲ್ಲಿನ ಆತನ ಹುಡುಕಾಟವನ್ನು ಒಳಗೊಂಡಿದೆ. ಮುಖ್ಯವಾಗಿ ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಹಾಸನದ ಬಡಾವಣೆ ಎಂದೇ ಕರೆಯುವ ಕೆಂಚಾಂಬ ಲಾಡ್ಜಿನ ಸುತ್ತಮುತ್ತ ಲೇಖಕ ಮತ್ತು ಗೆಳೆಯ ದೀಪಿ (ಪ್ರದೀಪ್) ಕೈಗೊಂಡ ಯಾತ್ರೆಗಳ, ಭೇಟಿಯಾದ ವ್ಯಕ್ತಿಗಳ, ಎದುರಿಸಿದ ಸನ್ನಿವೇಶಗಳ ಅಪರೂಪದ ವಿವರಗಳು ಇಲ್ಲಿವೆ. ಇಲ್ಲಿ ಲಕ್ಷ್ಮೀನಾರಾಯಣರ ಚಿತ್ರಕ ಶಕ್ತಿ ಪರಾಕಾಷ್ಠೆ ಮುಟ್ಟಿದೆ. ಎಪ್ಪತ್ತರ ದಶಕದ ಬೆಂಗಳೂರಿನ ಸಾಮಾಜಿಕ ಬದುಕಿನ, ಸಾಂಸ್ಕೃತಿಕ ಜಗತ್ತಿನ ಸೀಳು ನೋಟವೊಂದನ್ನು ಇಲ್ಲಿನ ಬರಹಗಳು ಕಟ್ಟುತ್ತವೆ.

ಬ್ಯಾಂಕಿನಲ್ಲಿನ ಅವರ ವೃತ್ತಿ ಬದುಕಿನ ಬವಣೆಗಳು ಮೂರನೆಯ ಭಾಗದಲ್ಲಿವೆ. ತಮ್ಮ ರಾಜಿಯಾಗದ ಪ್ರವೃತ್ತಿಯಿಂದಾಗಿ ೨೬ ವರ್ಷಗಳಲ್ಲಿ ಹದಿನಾರು ಬಾರಿ ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆಗೊಂಡ ಅವರು ತಾವು ಬದುಕಿದ ಸ್ಥಳಗಳಲ್ಲಿನ ಅನುಭವಗಳನ್ನು ದಾಖಲಿಸಿದ್ದಾರೆ. ಅವರ ಯಾತ್ರೆ ದೂರದ ಬಿಜಾಪುರದ ಕುಗ್ರಾಮ ತಾಂಬಾದಿಂದ ಹಿಡಿದು, ಮಧುಗಿರಿ, ಕೋಲಾರ, ಬಾಗೇಪಲ್ಲಿಯ ಪಾತಪಾಳ್ಯ, ಹಾಸನ, ಬಳ್ಳಾರಿಯ ಕಂಪ್ಲಿ, ತಮಿಳುನಾಡಿನ ಹೊಸೂರುವರೆಗೂ ವ್ಯಾಪಿಸಿದೆ. ಅಲ್ಲಿನ ವಿಶಿಷ್ಟ ಪರಿಸರ ಮತ್ತು ದೊರೆತ ಗೆಳೆಯರ ಜೊತೆಗಿನ ಮೋಜಿನ ಪ್ರಸಂಗಗಳು ಬೆಂಗಳೂರಿನ ಹಲಸಿನ ಹಣ್ಣಿನ ಪರಿಮಳ, ಬಿಜಾಪುರದ ಮಿರ್ಚಿ ಮಂಡಕ್ಕಿಯ ‘ಆಹಾ–ಖಾರ’ದ ಸವಿ, ಮಧುಗಿರಿಯ ‘ಕುಕ್ಕ ಮಾಂಸ’ದ ನರುಗಂಪು ಸೂಸಿಕೊಂಡೇ ಬರುತ್ತವೆ.

ಇಡೀ ಪುಸ್ತಕದಲ್ಲಿ ಸ್ಥಾಯಿಯಾಗಿ ಕಾಣುವ ಮತ್ತೊಂದು ಅಂಶವೆಂದರೆ ಅವರ ಗೆಳೆಯರ ಬಳಗ. ಇವರಿಗೆ ಸಾಟಿಯಾದಂತೆ ಗೆಳೆಯರು ದಂಡೂ ಇದೆ. ಹಾಸನದ ಪ್ರದೀಪ್, ಧರ್ಮರಾಜ್, ಮೂರ್ತಿ, ವಸಂತ, ಗಣಿ, ಹೆತ್ತೂರು ಅಶೋಕ್, ಕೆ ಟಿ ಗಿರಿ, ಕಜಿನ್ ರೋಹನ, ಕಾಲೇಜಿನ ಬ್ಯಾಟ್ರಿ ಕೃಷ್ಣಾರೆಡ್ಡಿ, ಹೆಗಡೆ, ಅಚ್ಯುತ, ಕೆಂಚಾಂಬದ ಮಣಿ, ಮರಹಾದಿಗೆ ಶಾಂತಪ್ಪ, ಹೀಗೆ ನಾನಾ ಹಿನ್ನೆಲೆಯ ಗೆಳೆಯರೊಡನೆಯ ಒಡನಾಟ ಇಲ್ಲಿ ಒಡಮೂಡಿದೆ. (ಹಾಗೆ ನೋಡಿದರೆ ಇಂದಿಗೂ ಸಂಕಷ್ಟದಲ್ಲಿರುವ ಗೆಳೆಯರ ಪಾಲಿಗೆ ಸಂತೈಸುವ ವ್ಯಕ್ತಿ. ಈಗಲೂ ಗೆಳೆಯರನ್ನು ಹುಡುಕಿಕೊಂಡು ಹೋಗಿ ಭೇಟಿ ಮಾಡುವ ವ್ರತ ಹಿಡಿದಿದ್ದಾರೆ).

ಹಾಸ್ಯ ಎಂದರೆ ಸಾಮಾನ್ಯವಾಗಿ ಅದು ತಮಾಷೆ (Joke, Jest), ವಿಡಂಬನೆ (Satire) ಕಟಕಿ (derision) ಕುಚೋದ್ಯ (Butt, Chaff), ವಿನೋದ (Humour), ವ್ಯಂಗ್ಯ (irony) ಅಣಕು (parody) ಹಾಸ್ಯ (Jape), ಕಟೂಕ್ತಿ (Wisecrack), ಚತುರೋಕ್ತಿ (Witticism), ಗೇಲಿ (Mock), ಅಪಹಾಸ್ಯ (Ridicule) ಮೂದಲಿಕೆ (Taunt), ಕೀಟಲೆ (Tease) ಇತ್ಯಾದಿ ಅಸಂಗತ ಭಾವಗಳನ್ನು ಅಡಕಗೊಳಿಸಿ ಸೃಷ್ಟಿಯಾಗುತ್ತದೆ. ಎಲ್ಲದಕ್ಕು ನಗುವುಕ್ಕಿಸುವ ಉದ್ದೇಶವಿದ್ದರೂ ಒಂದೊಂದು ಬಗೆಯು ಅದರ ನಿರ್ದಿಷ್ಟ ಗುರಿಯನ್ನು ಹೊಂದಿರುತ್ತದೆ. ಉದಾಹರಣೆಗೆ ವಿನೋದವು ಮನರಂಜನೆಯ ಉದ್ದೇಶದ ಹಾಸ್ಯವಾದರೆ ಸಮಾಜ, ಸಂಸ್ಥೆ, ವ್ಯಕ್ತಿಯ ದುರಾಚಾರ, ದ್ರೋಹ, ಅದೋಷಗಳನ್ನು ಎತ್ತಿ ಹಿಡಿದು ನಿಂದನೆಗೆ ಅಪಹಾಸ್ಯಕ್ಕೆ, ಗೇಲಿಗೆ ಒಳಪಡಿಸುವುದು ವಿಡಂಬನೆ. ಕುಚೋದ್ಯದ ಮೂಲವೇ ಚಾರಿತ್ರ್ಯಹರಣ. ವ್ಯಕ್ತ ನಿಂದನೆಗೆ ಬಳಕೆಯಾಗುವ ಹಾಸ್ಯಭಾವ ಮೂದಲಿಕೆ. ಸಮಾಜ ವಿರೋಧಿ ಮೌಲ್ಯಗಳಿಗಾಗಿ ಬಳಸುವ ವ್ಯಂಗ್ಯವು ಕಟಕಿಯಾಗುತ್ತದೆ. ಕನ್ನಡ ಹಾಸ್ಯ ಸಾಹಿತ್ಯ ಪರಂಪರೆಯಲ್ಲಿ ಈ ಎಲ್ಲ ಭಾವಗಳೂ ಬಳಕೆಯಾಗಿವೆ.

ಲಕ್ಷ್ಮೀನಾರಾಯಣ ಅವರ ಬರಹದಲ್ಲಿ ಈ ಎಲ್ಲ ಅಂಶಗಳಿದ್ದರೂ ಬೇರೆಲ್ಲ ವಿನೋದ ಸಾಹಿತ್ಯದ ಬರಹಗಾರರಿಗಿಂತ ಭಿನ್ನವಾಗುವುದು ಅವರಿಗಿರುವ ಪ್ರಖರವಾದ ಸಾಮಾಜಿಕ ಕಳಕಳಿಯಿಂದ, ಅವರದು ಸಮಾಜವನ್ನು ಸೂಕ್ಷ್ಮವಾಗಿ ಪರಿವೀಕ್ಷಿಸುವ ಮನಸ್ಸು. ನಮ್ಮ ಸಮಾಜದ ಎಲ್ಲ ವಿವರಗಳನ್ನು ಅದು ಗ್ರಹಿಸಬಲ್ಲದು. ನಮ್ಮ ಗ್ರಾಮೀಣ ಬದುಕು, ಅದು ತರುವ ಕೀಳರಿಮೆ, ಅಲ್ಲಿನ ಹೊಲಸುತನ, ವಿದ್ಯಾಭ್ಯಾಸದ ಸ್ವರೂಪ, ರಾಜಕೀಯ ಕ್ಷೇತ್ರದ ಢಾಂಭಿಕತನ, ಶಿಕ್ಷಣ ಕ್ಷೇತ್ರದ ಮಾಲಿನ್ಯ, ಸಮಾಜದಲ್ಲಿ ಸೃಷ್ಟಿಯಾಗುವ ವಿಕೃತಗಳೆಲ್ಲವನ್ನೂ ಮನಸ್ಸು ಗ್ರಹಿಸಿದೆ. ಅವರ ಬರಹಗಳ ಉದ್ದೇಶ ನಗಿಸುವುದು ಮಾತ್ರವಲ್ಲ. ಅಲ್ಲಿ ಗೇಲಿ ಮುಖ್ಯವಲ್ಲ. ತಮಾಷೆ ಅನುಷಂಗಿಕವಾದರೂ ಅವರು ತಲುಪಲು ಉದ್ದೇಶಿಸಿರುವ ಗುರಿಯೇ ಬೇರೆ. ಒಟ್ಟು ಸಮಾಜದ ಅಸಾಂಗತ್ಯ, ಮನೆ ಮಾಡಿ ಕುಳಿತಿರುವ ದೌರ್ಬಲ್ಯ, ಜನರ ಕುಟಿಲತೆ, ಆವರಿಸಿರುವ ಮೌಡ್ಯ, ಪ್ರಮುಖವಾಗಿ ಶಿಕ್ಷಣ, ಸಮಾಜ, ಆಡಳಿತ ಮತ್ತು ರಾಜಕೀಯ ರಂಗದಲ್ಲಿ ಆಗುತ್ತಿರುವ ಅನಾಹುತುಗಳಿಂದ ರೊಚ್ಚಿಗೆದ್ದ ಮನಸ್ಸು ತನ್ನ ಪ್ರತಿಭಟನೆಯನ್ನು ದಾಖಲಿಸಲು ಆಯ್ದುಕೊಂಡಿರುವ ಮಾರ್ಗವಿದು. ಅಲ್ಲದೆ ಹಲ್ಲುಕಚ್ಚಿ ಓದಿ, ದುಡಿದು ಜೀವನ ಸಾಗಿಸುವ ಲೋಕಮಾನ್ಯ ಜೀವನ ವಿಧಾನವೇ ಅವರಿಗೆ ಅಸಂಗತ ಎನ್ನಿಸಿದೆ. ರೂಢಿಗತ ಮೌಲ್ಯಗಳು ಮೌಢ್ಯದಂತೆ ಕಂಡಿವೆ. ಶಾಲಾಶಿಕ್ಷಣ ವಿಧಾನವೇ ಹಿಂಸೆಯಾಗಿದೆ. ಅದನ್ನು ಪ್ರತಿಭಟಿಸುವ ಮಾರ್ಗವಾಗಿ ಅವರು ಹಾಸ್ಯವನ್ನು ಬದುಕು ಮತ್ತು ಬರಹಗಳಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ ಎನಿಸುತ್ತದೆ. ಅವರ ವಿಡಂಬನೆ, ಗೇಲಿ, ತಮಾಷೆ, ವ್ಯಂಗ್ಯದ ಹಿಂದೆ ‘ಸುಧಾರಣೆ’ಯಾಗಬೇಕೆಂಬ ಹಂಬಲವಿದೆ. ಅವರ ಸಾಹಿತ್ಯವು ಹಾಸ್ಯವನ್ನು ಬಳಸಿಕೊಂಡು ಮಾಡಿರುವ ರಚನಾತ್ಮಕ ಸಾಮಾಜಿಕ ವಿಮರ್ಶೆ. ಜೊತೆಗೆ ಅವರ ಜನಪರ ಹೊರಾಟಗಳ ಒಲವು, ಮಾನವೀಯ ಕಾಳಜಿಗಳು ಇಲ್ಲಿ ಹಾಸ್ಯ ಲೇಪನದೊಡನೆ ಉದ್ದೀಪನಗೊಂಡಿವೆ.. ಇದಕ್ಕೆ ಈ ಕೃತಿಯಲ್ಲಿ ಹೇರಳ ದೃಷ್ಟಾಂತಗಳು ದೊರೆಯುತ್ತವೆ.

ಇನ್ನುಲಕ್ಷ್ಮೀನಾರಾಯಣ ಅವರ ಭಾಷೆಯ ಬಳಕೆ ಬಗ್ಗೆ ಹೇಳಲೇಬೇಕು. ಅವರ ಭಾಷೆ ನೇರ, ಸರಳ, ಮತ್ತು ಅಪೂರ್ವವಾದ ಲವಲವಿಕೆಯ ಭಾಷೆ. ಭಾವಗಳಿಗೆ ಬಲ(Energy) ತುಂಬುವ ಭಾಷೆ. ಪದಗಳೊಡನೆ ಆಟವಾಡುವ(Pun ) ಕಲೆ ಅವರಿಗೆ ಸಿದ್ಧಿಸಿದೆ. ಅವರ ಬರಹದಲ್ಲಿ ವ್ಯಂಗ್ಯೋಕ್ತಿ, ಕಟೂಕ್ತಿ, ಚತುರೋಕ್ತಿ, ಸರಸೋಕ್ತಿಯ ಜೊತೆಗೆ ರಸಿಕೋಕ್ತಿಗಳೂ ತುಂಬಿವೆ (ಈ ಸಾಲು ರಚನೆಯ ಹಿಂದೆ ಅವರ ಕೃತಿಯ ಓದಿದ ಪ್ರಭಾವವೇ ಇರಬಹುದು!)ಹಾಸನದ ಆಡುಭಾಷೆಯ ಸಹಜ ಲಯವನ್ನು ಅವರು ಗದ್ಯದಲ್ಲಿ ತರುತ್ತಾರೆ. ಸುಲಿದ ಬಾಳೆಯ ಹಣ್ಣಿನಂದದಿ ಭಾಷೆ ಸರಳವಾಗಿ ಸಂವಹನಶೀಲವಾಗಿದೆ. ಅನಗತ್ಯ ಗೊಂದಲಗಳಿಲ್ಲದೆ ನೇರವಾಗಿ ಕಥನ ಕಟ್ಟುವ ಶೈಲಿ ಅವರದು. ಪ್ರಾದೇಶಿಕ ನುಡಿಗಟ್ಟಿನ ಜೊತೆಗೆ ಆಧುನಿಕ ನುಡಿಗಟ್ಟನ್ನೂ ಸೃಷ್ಟಿಸಿದ್ದಾರೆ. ಆಧುನಿಕ ಗಾದೆಗಳನ್ನೂ ಹೆಣೆದಿದ್ದಾರೆ.

ಎತ್ತುಗೆಗಾಗಿ ಕೆಲವಷ್ಟನ್ನು ಮಾತ್ರ ಹೇಳುತ್ತೇನೆ. ‘ಮಾಂಸ’ ಅಂದ್ರೆ ಭಾನುವಾರದ ತರಕಾರಿ’; ಕುಡುಕರ ಕೂಟವೇ ‘ಗುಂಡು ಮೇಜಿನ ಪರಿಷತ್ತು’; ಪೂಜಾರಿ ಕಸುಬು ‘ಶೂನ್ಯ ಬಂಡವಾಳ ಉದ್ದಿಮೆ’; ಮರದಲ್ಲಿ ಒಂದೂ ಹಣ್ಣು ಬಿಡದೆ ಕದಿಯುವವರು ’ಬೋಳುವಾರರು’; ನಿತ್ಯ ಕ್ಲಬ್‌ಗೆ ಭೇಟಿ ನೀಡುವವರು ‘ಸಂಜೇವರರು’; ಕೋಳಿಹಿಡಿಯುವ ಹುಡುಗರು ‘ಕತ್ತು ಕುಯ್ಕ ಕಾರ್ಯಪಡೆ’ಯ ಸದಸ್ಯರು; ಕುಡುಕರ ಸಂಕೇತ ಬಾಷೆಯಲ್ಲಿ ಅಮಿತಾಬ್ ಬೀಯರ್ ಬಾಟಲ್ ಆದ್ರೆ ಕ್ವಾರ್ಟರ್ ಬಾಟಲ್- ದ್ವಾರಕೀಶ್; ಹೊಸವರ್ಷಕ್ಕೆ ಸ್ವಗತ ಕೋರುವ ಮೋಜೇ ‘Midnight Misadventure’; ಡಬಲ್ ಪದವಿ ಪಡೆದೂ ಸಾಮಾಜಿಕ ಬದ್ಧತೆ ಇಲ್ಲದ ವಿದ್ಯಾವಂತ ಕೇವಲ ‘ನೂರಕ್ಷರಿ’; ಇನ್ನು ಇವರು ಸೃಷ್ಟಿಸಿರುವ ಆಧುನಿಕ ಗಾದೆಗಳೂ ಸಂದರ್ಭವನ್ನು ವಿವರಿಸುವ ಪರಿಭಾಷೆಯಾಗಿ ಅಲ್ಲಲ್ಲಿ ಹೊಳೆಯುತ್ತವೆ. ‘ಬೆಂಗಳೂರಿಗೆ ಬಂದೋನು ಕೆಂಚಾಂಬಾಕ್ಕೆ ಬಾರದಿರುವನೇ?!’, ಕೆಂಚಾಂಬ ಲಾಡ್ಜ್ ಮತ್ತು ಹಾಸನಿಗರ ಸಂಬಂಧವನ್ನು ಹೇಳಿದರೆ, ಆಗತಾನೆ ಇಸ್ಪೀಟ್ ಆಡುವವರ ಶಿಶುಗೀತೆ’ ಒಂದು ಎರಡು ಹದಿಮೂರೆಲೆ ಹರಡು’. ಇನ್ನು ಭೂಮಿ ಮತ್ತು ಆರ್ಥಿಕ ಸಹಾಯವನ್ನು ನಿರುದ್ಯೋಗಿ ಕೃಷಿ ಪದವೀಧರರಿಗೆ ನೀಡಬೇಕೆಂಬ ಒತ್ತಾಯದ ಘೋಷಣೆ-‘ಬ್ಬೇಕೇ ಬ್ಬೇಕೂ ಚಂಚಲೆ, ಬ್ಬೇಕೇ ಬ್ಬೇಕು ವಸುಂಧರೆ!!’ ಇಂಥ ಅಸಂಖ್ಯಾತ ಚತುರೋಕ್ತಿಗಳು, ಅಪಾರ ಸಂಖ್ಯೆಯ ಗಾದೆಗಳು ಒಂದು ಅಧ್ಯಯನಕ್ಕಾಗುವಷ್ಟು ತುಂಬಿವೆ. ಓದುಗರು ಕೃತಿಯನ್ನು ಓದಿಯೇ ಸವಿಯಬೇಕು.

ನಿರಂತರವಾಗಿ ಕೀಟಲೆಯ ವರ್ತನೆಯನ್ನು ಉಳಿಸಿಕೊಂಡಿದ್ದರೂ ಲಕ್ಷ್ಮೀನಾರಾಯಣ ಅಪಾರ ಜೀವನೋತ್ಸಾಹದ ಕುಟುಂಬದ ವ್ಯಕ್ತಿ. ತಾಯಿಯ ಮತ್ತು ಅಣ್ಣ ಮಂಜುನಾಥ ದತ್ತ ಅವರ ಅಪಾರ ಪ್ರಭಾವವಿರುವ ಆವರದು ನಿಜಕ್ಕೂ ಹೆಂಗರಳು. ಮಹಿಳೆಯರ ಘನತೆಯ ಬಗ್ಗೆ ಅಪಾರ ಗೌರವ. ಕೀಟಲೆಯ ದಿನಗಳಲ್ಲಿ ಎಂದೂ ಮಹಿಳೆಯರನ್ನು ಹಾಸ್ಯದ ನೆಪದಲ್ಲಿ ಅವಹೇಳನ ಮಾಡಿದವರಲ್ಲ. ಬರಹದಲ್ಲೂ ಅಷ್ಟೆ. ಸಂಕಷ್ಟದ ಗೆಳೆಯರನ್ನು ಸಂತೈಸುವ ನೆಂಟನಾಗಿ ಪ್ರಸಿದ್ಧ. ತಮ್ಮ ಕೌಟುಂಬಿಕ ಬಾಂಧವ್ಯವನ್ನು ಸರಳತೆ, ಪ್ರಾಮಾಣಿಕತೆ, ಪ್ರೀತಿಯ ನೆರಳಿನಲ್ಲಿಯೇ ಕಾಪಾಡಿಕೊಂಡಿದ್ದಾರೆ. ತಮ್ಮಂತೆಯೇ ಮಗನಿಗೆ ಅಂತರ್ಜಾತಿ ಮತ್ತು ಸರಳ ಮದುವೆ ಮಾಡಿಸಿದ್ದಾರೆ. He is a man totally committed to his family. ಇದಕ್ಕೆ ಕೃತಿಯಲ್ಲಿಯೇ ಅನೇಕ ದೃಷ್ಟಾಂತಗಳು ಸಿಗುತ್ತವೆ. ಇದು ವಿಚಿತ್ರ ಎನಿಸಿದರೂ ಸತ್ಯ. ಬದುಕು ಬರಹಗಳಿಂದ ಅವರ ಜೀವನವನ್ನು ಪ್ರತ್ಯೇಕಿಸಲು ಆಗದ ಕಾರಣಕ್ಕೆ ಕೃತಿಯ ಬಗ್ಗೆ ಹೇಳುವಾಗ ಅವರ ವೈಯಕ್ತಿಕ ಬದುಕಿನ ವಿವರಗಳ ಪ್ರಸ್ತಾಪ ಅನಿವಾರ್ಯವಾಗಿದೆ.

ಹೀಗೆ ನಗೆಯುಕ್ಕಿಸುವ, ವಿಷಾದ ತುಂಬುವ, ಕಾಡುವ, ಕೆಣಕುವ, ಚಿಂತನೆಗೆ ಹಚ್ಚುವ ಕನ್ನಡಕ್ಕೆ ವಿಶಿಷ್ಟ ಬಗೆಯ ಆತ್ಮ ಕಥನವೊಂದನ್ನು ನೀಡಿರುವ ಲಕ್ಷ್ಮೀನಾರಾಯಣ ಅವರಿಗೆ ಅಭಿನಂದನೆಗಳು. ಮುನ್ನುಡಿ ತುಸು ದೀರ್ಘವಾದುದಕ್ಕೆ ಕ್ಷಮೆ ಇರಲಿ. ಲಕ್ಷ್ಮೀನಾರಾಯಣರ ಕ್ರಿಯಾಶೀಲತೆ ಮತ್ತಷ್ಟು ಪ್ರಜ್ವಲಿಸಲಿ.

‍ಲೇಖಕರು avadhi

July 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: