ಕೆ ನಲ್ಲತಂಬಿ ಸರಣಿ- ಐಸ್ ರಾಜನ ಪತನ!

ಮೂಲ: ಎಸ್ ರಾಮಕೃಷ್ಣ 

ಕನ್ನಡಕ್ಕೆ: ಕೆ ನಲ್ಲತಂಬಿ 

4

ಕಲ್ಕತ್ತಾದಲ್ಲಿ ತೆರಿಗೆ ಇಲ್ಲದೆ ಅನುಮತಿಸಲಾದ ಐಸ್ ದಿಮ್ಮಿಗಳಿಗೆ, ಬೊಂಬಾಯಿ ಬಂದರು ತೆರಿಗೆ ವಿಧಿಸಿತು. ನೈಋತ್ಯ ಮಾರುತ ಪರ್ವಗಳಲ್ಲಿ ಐಸ್ ತುಂಬಿಕೊಂಡು ಬರುವ ಹಡಗುಗಳಿಗೆ 110ರೂಪಾಯಿಗಳು ತೆರಿಗೆ ವಿಧಿಸಲಾಯಿತು. ಅದೇ ತೆರಿಗೆ  ಈಶಾನ್ಯ ಮಾರುತದ ಕಾಲದಲ್ಲಿ ಅರ್ಧವಾಗಿ ಕಡಿಮೆ ಮಾಡಿ 55ರೂಪಾಯಿಗಳು ಮಾತ್ರವೇ ವಿಧಿಸಲಾಯಿತು. ಅದರೊಂದಿಗೆ, ಲೈಟ್ ಹೌಸ್ ತೆರಿಗೆಯಾಗಿ 15ರೂಪಾಯಿಗಳೂ, ಆರಕ್ಷಣ ತೆರಿಗೆಯಾಗಿ 10ರೂಪಾಯಿಗಳೂ ವಿಧಿಸಲಾಯಿತು. ಅಂದು 450 ಗ್ರಾಂ ತೂಕವುಳ್ಳ ಐಸ್ ಗೆಡ್ಡೆಯ ಬೆಲೆ ನಾಲ್ಕು ಆಣೆಗಳು. 

ಮದರಾಸಿಗೆ ಐಸ್ ದಿಮ್ಮಿಗಳು ಬಂದಿಳಿದಾಗ, ಅದಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಯಿತು. ಟೂಡರ್ ತನ್ನ ಐಸ್ ಗೆಡಂಗುಗಳನ್ನು ಕಲ್ಕತ್ತಾ, ಬೊಂಬಾಯಿ, ಮದರಾಸ್ ಮುಂತಾದ ಮೂರು ನಗರಗಳಲ್ಲಿ ನಿರ್ಮಾಣಿಸಿದನು. ಹಾಗೆ ಟೂಡರ್ ಕಟ್ಟಿದ ಕಟ್ಟಡ ಚೆನ್ನೈನಲ್ಲಿ ಇಂದು ‘ವಿವೇಕಾನಂದರ್ ಇಲ್ಲಮ್’ ಆಗಿರುವ ಐಸ್ ಹೌಸ್! 

ಐಸ್ ಹೌಸ್ ಕಟ್ಟಡ ಅಂದು ಸಮುದ್ರದ ಪಕ್ಕದಲ್ಲಿ ಇತ್ತು. ಕಾಲಕ್ರಮೇಣ ಕಡಲು ಇಳಿತಗೊಂಡಿದ್ದರಿಂದ ಇಂದು ಕಡಲಿನಿಂದ ದೂರ ಸರಿದಿದೆ! 

ಆ ಕಾಲದಲ್ಲಿ ಈ ಕಟ್ಟಡದಲ್ಲಿ ಜನ ನೋಡಿ ಆನಂದಪಡಲು ಐಸ್ ದಿಮ್ಮಿಯೊಂದನ್ನು ಒಂದು ಗಾಜಿನ ಪೆಟ್ಟಿಗೆಯಲ್ಲಿ ಇಟ್ಟಿದ್ದರಂತೆ. ಆ ಕಾಲದಲ್ಲಿ, ಔತಣಗಳಲ್ಲಿ ಐಸ್ ಬೆರೆಸಿದ ಪಾನೀಯವನ್ನು ಕೊಡುವುದು ಗೌರವ ಎಂದು ಪರಿಗಣಿಸಲಾಗಿತ್ತು. 

ವೈದ್ಯಕೀಯ ಕಾರಣವನ್ನು ಹೇಳಿ ಐಸ್ ಗೆಡ್ಡೆಗಳನ್ನು ಕೊಂಡು, ಸ್ವಂತ ಉಪಯೋಗಕ್ಕೆ ಬಳಸಿಕೊಂಡದ್ದಾಗಿ ಒಬ್ಬರ ಮೇಲೆ ದೂರು ನೀಡಲಾಗಿತ್ತು. 1834ರಲ್ಲಿ ಇದ್ದ ಈ ಸ್ಥಿತಿ ಮುಂದಿನ ಐದು ವರ್ಷಗಳಲ್ಲಿ ಬದಲಾಗಿ, ಮೆಲ್ಲಗೆ ಐಸ್ ವ್ಯಾಪಾರ ಬಿಸಿಯಾಗಲಾರಂಭಿಸಿತು. ಬೊಂಬಾಯಿ, ಕಲ್ಕತ್ತ ಮದರಾಸ್ ಮುಂತಾದ ನಗರಗಳಲ್ಲಿ ಹೊಸ ಹೊಸದಾಗಿ ಐಸ್ ವ್ಯಾಪಾರಿಗಳು ಸೃಷ್ಟಿಯಾದರು. ಅದಕ್ಕಾಗಿ ಗೋದಾಮುಗಳು ನಿರ್ಮಾಣವಾದವು. 

ಬೇಸಿಗೆ ಕಾಲದಲ್ಲಿ ಐಸ್ ಕೊಂಡುಕೊಳ್ಳಲು ನುಗ್ಗಾಟ, ಜಗಳಗಳು ನಡೆದದ್ದು ಅಲ್ಲದೇ, ಬೆಲೆ ಸಹ ವಿಪರೀತ ಹೆಚ್ಚಾಯಿತು. ಅಂದು ಪ್ರಾರಂಭವಾದ ಐಸ್ ಗೆಡ್ಡೆಯ ವ್ಯಾಪಾರ 1880ನೇಯ ಇಸವಿಯವರೆಗೆ 47 ವರ್ಷಗಳು ಬಹಳ ಮುಖ್ಯವಾದ ಉದ್ಯಮವಾಗಿ ನಡೆಯಿತು. ಈ ಸ್ಥಿತಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಬೆಂಟಿಂಕ್ (Bentinck) – ಟೂಡರ್ ಇಬ್ಬರೂ ಒಂದು ಒಪ್ಪಂದ ಮಾಡಿಕೊಂಡರು. ಅದರಂತೆ ಟೂಡರ್, ಐಸ್ ದಿಮ್ಮಿಗಳನ್ನು ಜೋಪಾನವಾಗಿ ಶೇಕರಿಸಿಡಲು ಈಸ್ಟ್ ಇಂಡಿಯಾ ಕಂಪನಿಯೇ ಒಂದು ಸ್ಥಳವನ್ನು ಮೀಸಲಾಗಿ ನೀಡಿತು. ವಿಲಿಯಮ್ ಬೆಂಟಿಂಕ್ ಒಂದು ಹೆಜ್ಜೆ ಮುಂದೆ ಹೋಗಿ, ಐಸ್ ಹೊತ್ತು ತರುವ ಹಡಗುಗಳ ಕ್ಯಾಪ್ಟನ್-ಗೆ ಒಂದು ಚಿನ್ನದ ಕಪ್ ಬಹುಮಾನವಾಗಿ ನೀಡಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದರು. 

ಅಮೇರಿಕದಿಂದ 1856ರಿಂದ 1882ರವರೆಗೆ, 4,75,000 ಟನ್ ಐಸ್ ದಿಮ್ಮಿಗಳನ್ನು  ಹಡಗಿನಲ್ಲಿ ಭಾರತಕ್ಕೆ ಕೊಂಡು ತರಲಾಯಿತು. ಅದರಲ್ಲಿ 1,21,000 ಟನ್ ದಾರಿಯಲ್ಲಿಯೇ ಕರಗಿಹೋಯಿತು. 3,53,450 ಟನ್ ಐಸ್ ದಿಮ್ಮಿಗಳು ಭಾರತ ಮತ್ತು ಅಕ್ಕಪಕ್ಕದ ದೇಶಗಳಿಗೆ ಕಳುಹಿಸಿಕೊಡಲಾಯಿತು. 

ಈ ಐಸ್ ವ್ಯಾಪಾರದಿಂದ, ತನ್ನ 2,10,000 ಡಾಲರ್ ಸಾಲವನ್ನು ಹಿಂತಿರುಗಿಸಿದ ಟೂಡರ್, ವರ್ಷಕ್ಕೆ 1,85,000 ಡಾಲರ್ ಸಂಪಾಧಿಸಿದನು. ಆದ್ದರಿಂದ, ಭಾರತದಲ್ಲಿ ಅವನು ಐಸ್ ಗೋದಾಮುಗಳನ್ನು ಸೂಕ್ತ ರೀತಿಯಲ್ಲಿ ಕಟ್ಟಿ ವ್ಯಾಪಾರವನ್ನು ಹೆಚ್ಚಿಸಿಕೊಂಡನು. 

ಈ ಐಸ್ ರಫ್ತು ವಿಷಯದಲ್ಲಿ ಮತ್ತೊಂದು ಸತ್ಯವೂ ಬೆಳಕಿಗೆ ಬರುತ್ತದೆ. ಅಂದು, ಅಮೇರಿಕಾಗೆ ಭಾರತದಿಂದಲೇ ಹೆಚ್ಚಿನ ಸಾಮಗ್ರಿಗಳು ರಫ್ತು ಮಾಡಲಾಗುತ್ತಿತ್ತು. ಅಮೇರಿಕಾದಿಂದ ಭಾರತಕ್ಕೆ ಬಂದ ಅರ್ಧ ಹಡಗುಗಳು ಖಾಲಿಯಾಗಿ ಬಂದವು. ಇಂದು, ಆ ಸ್ಥಿತಿ ತಲೆಕೆಳಕಾಗಿದೆ. 

ಐಸ್ ದಿಮ್ಮಿಗಳನ್ನು ಭಾರತಕ್ಕೆ ತಂದು ಇಳಿಸಿ, ಹತ್ತಿ, ಪರಿಮಳ ದ್ರವ್ಯಗಳು, ಸಾಂಬಾರ ಪದಾರ್ಥಗಳು, ತೇಗು, ಗಂಧ, ಮೆಣಸು ಮುಂತಾದವನ್ನು ತುಂಬಿಕೊಂಡು ಅಮೇರಿಕಾಗೆ ಹೋದ ಹಡಗುಗಳಲ್ಲಿ, ಭಾರತದಿಂದ ಜಿರಳೆಗಳೂ ಸಹ ಹೋದವು. 

ಈ  ಐಸ್ ವ್ಯಾಪಾರದ ಬಗ್ಗೆ ಪರಿಸರ ತಜ್ಞರಾದ ತೋರೂ (Henry D Thoreau) ‘ವಾಲ್ಡನ್’ (Waldon) ಎಂಬ ಪುಸ್ತಕದಲ್ಲಿ ವಿಸ್ತಾರವಾಗಿ ಬರೆದಿದ್ದಾರೆ. ಅವರು ವಾಲ್ಡನ್ ಎಂಬ ಕೆರೆಯ ಹತ್ತಿರ ಪರಿಸರದೊಂದಿಗೆ ಸಹಬಾಳ್ವೆ ಮಾಡಿದವರು. ತೆರಿಗೆ ನೀಡದಿರುವುದು, ಅಸಹಕಾರ ಚಳುವಳಿ ಮುಂತಾದ ಹೋರಾಟಗಳನ್ನು ಇವರೇ ಮೊದಮೊದಲು ನಡೆಸಿದವರು. ಇವರನ್ನು ಅನುಕರಿಸಿಯೇ ಗಾಂಧಿ ಅವನ್ನು ಭಾರತದಲ್ಲಿ ಅನುಷ್ಠಾನಕ್ಕೆ ತಂದರು. ವಾಲ್ಡನ್ ಕೆರೆಯ ಪ್ರದೇಶಗಳಲ್ಲಿ ದಿನವೆಲ್ಲಾ ಐಸ್ ಬಂಡೆಗಳನ್ನು ಒಡೆದು ತೆಗೆದು ಭಾರತಕ್ಕೆ ಕಳುಹಿಸುವುದನ್ನು ‘ಗಂಗೆ ಮತ್ತು ವಾಲ್ಡನ್ ನೀರಿನ ಸಂಗಮ’ ಎಂದು ಉಲ್ಲೇಖಿಸಿದ್ದಾರೆ. 

ನೀರಿನ ಆವಿಯನ್ನು ಬಳಸಿ ಕೃತಕ ಐಸ್ ತಯಾರಿಸಲು ಸಾಧ್ಯವಾಗುವವರೆಗೆ ಅಮೇರಿಕಾದಿಂದ ಐಸ್ ಆಮದು ಮಾಡಲಾಯಿತು. ಅದು ಭರತದಲ್ಲಿ ಪ್ರಮುಖ ವ್ಯಾಪಾರವಾಗಿ ನಡೆದು ಬಂದಿತು. 1878ರಲ್ಲಿ ಬೆಂಗಾಲ್ ಐಸ್ ಕಂಪನಿ ಎಂಬ ಕೃತಕ ಐಸ್ ತಯಾರಿಮಾಡುವ ಕಂಪನಿ ಪ್ರಾರಂಭವಾಯಿತು. ಆದ್ದರಿಂದ ಟೂಡರ್-ನ ಐಸ್ ವ್ಯಾಪಾರ ಪತನ ಹೊಂದಿತು. 1892ರಲ್ಲಿ ಟೂಡರಿನ ಐಸ್ ವ್ಯಾಪಾರ ಸಂಪೂರ್ಣವಾಗಿ ನಿಂತುಹೋಯಿತು. 

20 ವರ್ಷಗಳು ಭಾರತದಲ್ಲಿ ‘ಐಸ್ ರಾಜ’ ಎಂದು ಕೊಂಡಾಡಲ್ಪಟ್ಟ ಟೂಡರ್, ಕಲ್ಕತ್ತಾದಲ್ಲಿ ಬಹಳ ಜಾಗಗಳನ್ನು ಕೊಂಡುಕೊಂಡನು. ಅಮೇರಿಕಾದಲ್ಲಿ ದೊಡ್ಡ ಕೋಟೀಶ್ವರನಾಗಿ ಬದುಕಿದನು. 

ಚೆನ್ನೈಯಲ್ಲಿರುವ ಐಸ್ ಹೌಸ್ 1842ನೇಯ ಇಸವಿಯಲ್ಲಿ ಕಟ್ಟಲ್ಪಟ್ಟಿತು. ಹಡಗಿನಿಂದ ಇಳಿಸುವುದಕ್ಕೆ ಅನುಕೂಲವಾಗಿ, ಕಡಲ ತೀರದಲ್ಲೇ ದೊಡ್ಡ ಕಟ್ಟಡ ಒಂದನ್ನು ಟೂಡರ್ ನಿರ್ಮಾಣಿಸಿದನು. ಅಲ್ಲಿ, ದಿನ ಬೆಳಗ್ಗೆ 10ಗಂಟೆಯಿಂದ ಸಂಜೆ 4ಗಂಟೆಯವರೆಗೆ ಐಸ್ ಮಾರಲಾಗುತ್ತಿತ್ತು. ಭಾನುವಾರ ಬೆಳಗ್ಗೆ ಎರಡು ಗಂಟೆಗಳು ಮಾತ್ರ ಐಸ್ ವ್ಯಾಪಾರ ನಡೆಯಿತು. 

ಕೃತಕ ಐಸ್ ಬಂದ ನಂತರ, ಐಸ್ ಹೌಸನ್ನು ಮಾರಲು ಟೂಡರ್ ನಿರ್ಧಾರ ಮಾಡಿದನು. ಅಂದು ಮದರಾಸ್ ಹೈಕೋರ್ಟ್ ವಕೀಲರಾಗಿದ್ದ ಬಿಳಿಗಿರಿ ಐಯಂಗಾರ್, ಐಸ್ ಹೌಸನ್ನು ಖರೀದಿಸಿ, ವಾಸಕ್ಕೆ ತಕ್ಕಂತೆ ದೊಡ್ಡ ಬಂಗಲೆಯಾಗಿ ನಿರ್ಮಾಣಿಸಿದರು. ತನ್ನ ಮಾರ್ಗದರ್ಶಿಯಾದ, ಹೈಕೋರ್ಟ್ ನ್ಯಾಯಾದೀಶ ಕೆರ್ನನ್ (Kernan) ಸ್ಮರಣಾರ್ಥ ಕೆರ್ನನ್ ಕೋಟೆ (Castle Kernan) ಎಂದು ಅದಕ್ಕೆ ಹೆಸರಿಟ್ಟರು. 

1897ರಲ್ಲಿ ಚಿಕಾಗೋದಿಂದ ಭಾರತಕ್ಕೆ ಹಿಂತಿರುಗಿದ ಸ್ವಾಮಿ ವಿವೇಕಾನಂದರಿಗೆ ಮದರಾಸ್ ಎಳುಂಬೂರ್ (Egmore) ರೈಲು ನಿಲ್ಧಾನದಲ್ಲಿ ಸ್ವಾಗತ ನೀಡಲಾಯಿತು. ವಿವೇಕಾನಂದರ ಶಿಷ್ಯರಾದ ಬಿಳಿಗಿರಿ ಐಯಂಗಾರ್, ಅವರನ್ನು ತಮ್ಮ ಮನೆಯಲ್ಲಿ ಉಳಿದುಕೊಳ್ಳಬೇಕೆಂದು ಕೇಳಿಕೊಂಡರು. ಅಲ್ಲಿ ತಂಗಿದ್ದ ವಿವೇಕಾನಂದರು ದಿನವೂ ಒಂದು ಭಾಷಣ ಮಾಡಿದರು. 

1906ರಲ್ಲಿ ಬಿಳಿಗಿರಿ ಐಯಂಗಾರ್ ನಿಧನರಾದ ನಂತರ, ಅವರ ಮನೆ ಮಾರಲಾಯಿತು. ವಿಶಾಕಪಟ್ಟಣಕ್ಕೆ ಸೇರಿದ ಜಮೀನುದಾರರೊಬ್ಬರು ಆ ಕಟ್ಟಡವನ್ನು ಕೊಂಡುಕೊಂಡರು. ನಂತರ, 1917ರಲ್ಲಿ ಸರಕಾರ ಆ  ಕಟ್ಟಡವನ್ನು ಖರೀದಿಸಿ, ಬ್ರಾಹ್ಮಣ ವಿಧವೆಯರ  ಧರ್ಮಶಾಲೆಯಾಗಿಸಿತು. ನಂತರ, ಆ ಕಟ್ಟಡವನ್ನು ಅಧ್ಯಾಪಕಿ ತರಬೇತಿ ಪಡೆಯುವ ವಿದ್ಯಾರ್ಥಿ ನಿಲಯವಾಗಿ ಬದಲಾಯಿಸಿತು. 

1963ರಲ್ಲಿ ಸ್ವಾಮಿ ವಿವೇಕಾನಂದರ ಶತಮಾನೋತ್ಸವದ ಸಂದರ್ಭದಲ್ಲಿ, ಸರಕಾರ ಆ ಕಟ್ಟದ್ದ ಹೆಸರನ್ನು ‘ವಿವೇಕಾನಂದರ್ ಇಲ್ಲಮ್’ (ವಿವೇಕಾನಂದ ನಿಲಯ) ಎಂದು ಹೆಸರು ಬದಲಾಯಿಸಿತು. ಟೂಡರ್ ಬೊಂಬಾಯಿ, ಕಲ್ಕತ್ತಾಗಳಲ್ಲಿ ನಿರ್ಮಾಣ ಮಾಡಿದ್ದ ಐಸ್ ಹೌಸ್-ಗಳು ಇಂದಿಲ್ಲ. ಆದರೆ, ಚೆನ್ನೈಯಲ್ಲಿ ಮಾತ್ರವೇ ಐಸ್ ಹೌಸ್ ಇನ್ನೂ ಒಂದು ಸ್ಮರಣಾರ್ಥ ಚಿಹ್ನೆಯಾಗಿ ಉಳಿದುಕೊಂಡಿದೆ. 

1700ಇಸವಿಯ ಸಮಯದಲ್ಲಿ ರೆಫ್ರಿಜಿರೇಟರ್ ಸಾಧಾನದ ಬಗ್ಗೆ ಸಂಶೋಧನೆಯನ್ನು ಕೈಗೊಂಡವರು ಸ್ಕಾಟ್ಲಾಂಡಿನಲ್ಲಿ ವಾಸವಿದ್ದ ವಿಲಿಯಮ್ ಕಲ್ಲನ್ (William Cullen). 1805ರಲ್ಲಿ ಆಲಿವರ್ ಇವಾನ್ಸ್ (Oliver Evans) ಎಂಬ ಅಮೇರಿಕ ಪ್ರಜೆ ಮೊದಮೊದಲು ರೆಫ್ರಿಜಿರೇಟರ್-ಅನ್ನು ವಿನ್ಯಾಸ ಮಾಡಿದವರು. ಆದರೆ, ಅದು ಬಳಕೆಗೆ ಬರಲಿಲ್ಲ. 1834ನೇಯ ಇಸವಿಯಲ್ಲಿ ಜೇಕಬ್ ಪೆರ್ಕಿನ್ಸ್ (Jacob Perkins) ಎಂಬುವರು ಆ ವಿನ್ಯಾಸವನ್ನು ತಿದ್ದುಪಡಿಮಾಡಿ ರೂಪಿಸಿದರು. 

ಜನರಲ್ ಮೋಟಾರ್ಸ್ ಕಂಪನಿ 1911ರಲ್ಲಿ, ಜನಗಳು ಬಳಸುವ ರೆಫ್ರಿಜಿರೇಟರ್-ಅನ್ನು ಮಾರುಕಟ್ಟೆಗೆ ತಂದಿತು. 1918ರಲ್ಲಿ ಕೆಲ್ವಿನೇಟರ್ (Kelvinator) ಕಂಪನಿ ಮತ್ತಷ್ಟು ಸುದಾರಣೆಗಳನ್ನು ಮಾಡಿ ಹೊಸ ರೆಫ್ರಿಜಿರೇಟರ್-ಅನ್ನು ತಂದಿತು. 1958ರಲ್ಲಿ ಭಾರತದಲ್ಲಿ ರೆಫ್ರಿಜಿರೇಟರ್ ಉತ್ಪಾದನೆ ಮಾಡಿ ಮಾರಲಾಯಿತು. ಈ 50 ವರ್ಷಗಳಲ್ಲಿ ಈ ಒಂದು ಉಪಕರಣದಿಂದ, ಭಾರತದ ಪ್ರಜೆಗಳ ಉಷ್ಣ ಮಂಡಲದ ಆಹಾರ ಪದ್ದತಿಗಳು ಹೆಚ್ಚಾಗಿ ಬದಲಾಯಿತು. ಜತೆಯಲ್ಲಿಯೇ, ತಂಪಿಗೆ ಅಭ್ಯಾಸ ಮಾಡಿಕೊಳ್ಳುವ ಹೊಸ ಬಗೆಯ ಜೀವನ ಪದ್ದತಿ ಬೆಳೆಯಿತು. 

‘ಭಾರತದಲ್ಲಿ ಏನನ್ನು ಮುಟ್ಟಿದರೂ ಬಿಸಿಯಾಗೇ ಇದೆ. ಇಂತಹ ಉಷ್ಣದ ತಾಪಮಾನದ ಭಾಗದಲ್ಲಿ ಜೀವಿಸುತ್ತಾ, ಜನ ಬಿಸಿಬಿಸಿಯಾದ ಆಹಾರವನ್ನು ಉಣಲು ಬಯಸುತ್ತಾರೆ. ಶೆಕೆ ಇವರಿಗೆ ಸಮಸ್ಯೆಯೇ ಅಲ್ಲ. ತಂಪನ್ನು ಆಡಂಭರ ಎಂದು ಭಾರತದ ಜನ ಅಂದುಕೊಂಡಿದ್ದಾರೆ’ ಎಂದು ರೋಜರ್ (Roger) ತನ್ನ 1841ರ ಡೈರಿಯಲ್ಲಿ ಬರೆದಿದ್ದಾರೆ. ಆದರೆ, ಆ ಮನಸ್ಥಿತಿ ಇಂದು ಸಂಪೂರ್ಣವಾಗಿ ಬದಲಾಗಿದೆ. ತಂಪು ನೀಡುವ ಸಾಧನಗಳ ಬರುವಿನಿಂದ ಮುಚ್ಚಿದ ಕಿಟಕಿಗಳೂ, ದೂರ ಸರಿಸಿದ ಸೂರ್ಯನ ಬೆಳಕೂ, ಶಾಕ ಅರಿಯದ ದೇಹವೂ ಹಲವು ಹೊಸ ಖಾಯಿಲೆಗಳಿಗೆ ಕಾರಣವಾಗಿದೆ. 

ಒಮ್ಮೆ ಬಿಕ್ಷುಕನೊಬ್ಬ ಕೋಪದಿಂದ ಹೇಳಿದ ಮಾತು ಇನ್ನೂ ನೆನಪಿನಲ್ಲಿದೆ. ‘ಈ ಫ್ರಿಡ್ಜ್ ಬಂದ ಮೇಲೆ ಹಸಿದು  ಬರುವ ಬಿಕ್ಷುಕನಿಗೆ ಉಳಿಕೆ ಪಳಿಕೆಯಾದ ಆಹಾರವನ್ನು ನೀಡಲು ನಿರಾಕರಿಸುತ್ತಾರೆ. ಆಹಾರವನ್ನು ನಾಲ್ಕು ದಿನಗಳಾದರೂ ಫ್ರಿಡ್ಜಿನಲ್ಲಿಟ್ಟು ತಿನ್ನುತ್ತಾರೆ!’ 

ಆ ದನಿ ಸಮಾಜದ ಇತಿಹಾಸದಲ್ಲಿ ಆದ ಬದಲಾವಣೆಯನ್ನು ತೋರಿಸುತ್ತದೆ. ಈ ವಿಮರ್ಷಣೆಯ ದನಿಗೆ ನಮ್ಮಲ್ಲಿ ಉತ್ತರವಿಲ್ಲ. ವಿಜ್ಞಾನ ಮನುಷ್ಯನ ಅನುಕೂಲಕ್ಕೂ, ಆರ್ಥಿಕ ಉನ್ನತಿಗೂ ಜತೆ ನಿಲ್ಲುವಂತೆಯೇ, ಮನುಷ್ಯ ತನ್ನ ಸ್ವಭಾವಗಳನ್ನು ಕೈಬಿಡುವುದಕ್ಕೂ, ಸಹಮಾನವನನ್ನು ನಿರಾಕರಿಸುವುದಕ್ಕೂ ಕಾರಣವಾಗಿದೆ ಎಂಬುದೇ ಸತ್ಯ. 

ಪ್ರತಿ ಕಪ್ ಐಸ್ಕ್ರೀಮ್ ಸವಿಯುವಾಗಲೂ ನಾವು ಖಂಡಿತ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇ ಇತಿಹಾಸ ನಮಗೆ ಕಲಿಸಿಕೊಡುವ ಪಾಠ. 

‍ಲೇಖಕರು Admin

July 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: