ಕೆ ಎನ್ ಲಾವಣ್ಯ ಪ್ರಭಾ ಓದಿದ ‘ಪುನರ್ನವ’

ಕೆ.ಎನ್. ಲಾವಣ್ಯ ಪ್ರಭಾ

**

ಹಿರಿಯ ಬರಹಗಾರ ಸಚಿನ್ ನಾಯಕ್ ಅವರ ‘ಪುನರ್ನವ’ ಕೃತಿಯ ಬಗ್ಗೆ –

” ಇವೆಲ್ಲಾ ಮುಗಿದ ಮೇಲೆ…ಬಹುಶಃ …

…ಈ ಉಸಿರಿನಾಚೆ…ಆ…ದಿಗಂತದಾಚೆ…ಸೇರುವವೇ..

ನಮ್ಮ ಹೆಜ್ಜೆಗಳು….ಭೀಮಾ?

….ಬೇರೊಂದು ಮನ್ವಂತರದಲ್ಲಿ….

….ಬಹುಶಃ ನಾವಿಬ್ಬರೂ ಸಂಧಿಸಿ…

….ಪುನರ್ನವ ಮಿಲನ…!

…ಪುನರ್ನವ ಪಯಣ…!!!

…..ಅಲ್ಲಿಯವರೆಗೂ …ಕಾಯುವೆ….

….ನಿನಗಾಗಿ….

….ಭೀಮಾ!!! “

ಪ್ರೇಮ ಪ್ರಣಯ ಶೃಂಗಾರ ವಿರಹ ವಿಷಾದಗಳು ಯುದ್ಧದ ಭೀಭತ್ಸತೆ….ಎಲ್ಲಾ ರಸ ಭಾವಗಳು ಎಲ್ಲೂ ಅತಿಯೆನಿಸದೆ ಹಿತಮಿತವಾದ ಹಿಡಿತದಲ್ಲಿ ರೂಪುಗೊಂಡು ಓದುಗರ ಮನ ಸೆಳೆಯುವ ಶ್ರೀಯುತ ಸಚಿನ್ ನಾಯಕ್ ಅವರ ” ಪುನರ್ನವ ” ಕೃತಿ ಮಹಾಭಾರತ ಕಥೆಯ ಎಳೆಯೊಂದನ್ನು ಆಧರಿಸಿ ರಚಿತವಾದ ಅನನ್ಯ ಕೃತಿ.

ಭಾರತದ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಪ್ರಪಂಚದ ಅತಿದೊಡ್ಡ ಮಹಾಕಾವ್ಯವೆನಿಸಿಕೊಂಡಿರುವ ಗ್ರೀಕ್ ನ ‘ಇಲಿಯಡ್’ ಮತ್ತು ‘ಒಡಿಸ್ಸಿ’ ಗಳಿಗಿಂತ ಹತ್ತಾರು ಪಟ್ಟು ದೊಡ್ಡದು ಎನ್ನುವುದು ನಮ್ಮ ಹೆಮ್ಮೆ. ಮಹಾಭಾರತದಲ್ಲಿಲ್ಲದ್ದು ಪ್ರಪಂಚದಲ್ಲೆಲ್ಲಿಯೂ ಇಲ್ಲ ಎಂಬ ಮಾತಿದೆ. ಅಸೂಯೆ, ಮೋಹ, ಪ್ರೇಮ, ಮತ್ಸರ, ನಿಷ್ಠೆ , ತ್ಯಾಗ, ಬಲಿದಾನ, ರಾಜಕೀಯ ಮುತ್ಸದ್ದಿತನ,  ಸಂಚು , ಯುದ್ಧದ ಭೀಕರತೆ , ಕುತಂತ್ರ , ಹೇಡಿತನ, ಧೀರತೆ , ನಾಟಕೀಯತೆ….ಏನುಂಟು ಏನಿಲ್ಲ? ತರ್ಕ ಜಿಜ್ಞಾಸೆ ಗಳ ಜೊತೆ ಪ್ರತಿಯೊಂದು ಓದಿನಲ್ಲೂ ಬದುಕಿಗೊಂದು ಹೊಸ ದೃಷ್ಟಿಕೋನ ನೀಡುವ ಮಹಾಭಾರತದ ಕಥೆಯ ಹಿನ್ನೆಲೆಯಲ್ಲಿ ರಚನೆಗೊಂಡ “ಪುನರ್ನವ” ಕೃತಿ ಬಹುಮುಖ್ಯವಾಗಿ ಭೀಮ ಮತ್ತು ಅವನ ಪತ್ನಿ ಬಲಂಧರೆಯ ಕಥೆಯಾಗಿದೆ. 

ಕಾಶೀ ಮಹಾರಾಜನ ಪುತ್ರಿ ಬಲಂಧರೆ ಸ್ವಯಂವರದಲ್ಲಿ ಭೀಮನನ್ನು ವರಿಸಿ ಖಾಂಡವಪ್ರಸ್ಥಕ್ಕೆ ತೆರಳಿದರೂ ಇವರಿಬ್ಬರ ವೈವಾಹಿಕ ಜೀವನ ಅಲ್ಪಾವಧಿಯಲ್ಲೇ ಕೊನೆಗೊಂಡು ಕಾಶಿಗೆ ಮರಳಿ ಕಾಶೀ ಸಾಮ್ರಾಜ್ಞಿ ಯಾಗಿ ಮಗನೊಂದಿಗೆ ಬದುಕುತ್ತಾ ಗಂಡನಿಂದ ದೂರವಾದ ದುರಂತದ ಕಥೆಯಾದರೂ ಭಾರತೀಯರ ಪುನರಪಿ ಮರಣಂ ಪುನರಪಿ ಜನನಂ ಎಂಬ ಜನ್ಮಜನ್ಮಾಂತರದ ಬಗೆಗಿನ ಬಲವಾದ ನಂಬಿಕೆಯಿಂದ ವಿಷಾದದ ಅಂತ್ಯದಲ್ಲಿಯೂ ಆಶಾವಾದದ ಕಲ್ಪನೆ “ಪುನರ್ನವ ಮಿಲನ” “ಪುನರ್ನವ ಪಯಣ” ನೋಟ ಬಹಳ ಸೊಗಸಾಗಿ ಮೂಡಿರುವುದರಲ್ಲಿ ಲೇಖಕರ ನೈಪುಣ್ಯತೆ ಕಲೆಗಾರಿಕೆಯನ್ನು ಕಾಣಬಹುದು.

ಮಹಾಭಾರತದ ಮುಖ್ಯ ಪಾತ್ರವಾಗಿದ್ದರೂ ತೆರೆಮರೆಯಲ್ಲುಳಿದ ಭೀಮನ ಪತ್ನಿ ‘ಬಲಂಧರೆ’ ಯ ದೃಷ್ಟಿಯಲ್ಲಿ ಇಡೀ ಕಥೆ ನಾಟಕೀಯ ಶೈಲಿಯಲ್ಲಿ ಮಹಾಭಾರತದ ಹಲವು ಪ್ರಸಂಗಗಳು ನಿರೂಪಿತವಾಗಿವೆ. ಬಹುಪಾಲು ಕಥೆ ಬಲಂಧರೆಯ ಸ್ವಗತವಾಗಿದೆ. ಊರ್ಮಿಳೆ ದ್ರೌಪದಿ ಕುಂತಿ ಮೊದಲಾದ ಸ್ತ್ರೀಪಾತ್ರಗಳ ಮೂಲಕ ಮಹಾಭಾರತದ ಕೃತಿಗಳು ಈಗಾಗಲೇ ಪ್ರಸಿದ್ಧ ಲೇಖಕರಿಂದ ಮೂಡಿದ್ದರೂ ಮಹಾಭಾರತ ಕಾವ್ಯದಲ್ಲಿ ಪ್ರಧಾನಪಾತ್ರವಾಗಬೇಕಿದ್ದೂ ಸಣ್ಣಪಾತ್ರದಲ್ಲಿ ಇಣುಕಿ ಮರೆಯಾಗಿರುವ ಬಲಂಧರೆ ಇಲ್ಲಿಯ ನಾಯಕಿಯಾಗಿ ಸಶಕ್ತ ಸ್ತ್ರೀ ಪಾತ್ರ ವಹಿಸಿ ಕೃತಿಯ ಅನನ್ಯತೆಗೆ ಕಾರಣವೆನಿಸುವ ಇಡೀ ಕೃತಿಯನ್ನು ಸ್ತ್ರೀ ಸಂವೇದನಾಶೀಲವಾಗಿಸಿರುವುದು ಲೇಖಕರ ಅದ್ಭುತ ಪ್ರತಿಭೆಗೆ ಸಾಕ್ಷಿ. ಇದು ಅವರ ಮೊಟ್ಟ ಮೊದಲ ಕೃತಿ ಎಂಬುದನ್ನು ನಾವಿಲ್ಲಿ ಮರೆಯುವಂತಿಲ್ಲ. ಓದುಗರಿಗೆ ಮತ್ತಷ್ಟು ಕೃತಿಗಳ ನಿರೀಕ್ಷೆ ಮೂಡುವುದು ಸುಳ್ಳಲ್ಲ.

ಕಾಶಿಯಲ್ಲಿ ಹರಿಯುವ ದೇವನದಿ ‘ಗಂಗೆ’ಯ ತಟದ ಮೇಲೆ ಬದುಕಿ ಮದುವೆಯ ನಂತರವೂ ಮತ್ತೆ ಗಂಗೆಯ ತಟದಲ್ಲೇ ಬದುಕಿನ ಪಯಣ ಮುಗಿಸಿದ ಬಲಂಧರೆಯ ಜೀವನದಲ್ಲಿ ಗಂಗೆ ಸಖಿ ಮಾತ್ರವಲ್ಲ ಅವಳ ಒಟ್ಟಾರೆ ಬದುಕಿನ ಸಾಕ್ಷಿಯೂ ಆಗಿ ನಿಲ್ಲುತ್ತಾಳೆ.

ಅರಮನೆ, ಉದ್ಯಾನವನಗಳು, ಪುರಗಳು, ಸ್ವಯಂವರ, ಯುದ್ಧ ಮೊದಲಾದವುಗಳ ವರ್ಣನೆ ಓದುಗರನ್ನು ಸೆಳೆಯುತ್ತವೆ.

ಪಾಂಡವಾದ್ವಿತೀಯ ಭೀಮ ಬಲಂಧರೆಗೆ ತನ್ನ ಸಾರಥಿ ವಿಶೋಕನ ಬಗ್ಗೆ ಹೇಳುವ ಮಾತುಗಳು ನನ್ನನ್ನು ಬಹಳಷ್ಟು ಸೆಳೆಯಿತು. “ರಥ ಓಡಿಸುವವರೆಲ್ಲ ಸಾರಥಿ ಎನಿಸಿಕೊಳ್ಳುವುದಿಲ್ಲ. ಅವರು ಎಷ್ಟು ನಿಷ್ಣಾತರಾಗಿರಬೇಕೆಂದರೆ ಕೇವಲ ಅಶ್ವ ಹೃದಯವನ್ನಷ್ಟೇ ಅಲ್ಲ ರಥಿಕನ ಮನಸ್ಸನ್ನೂ ಕೂಡ ಕ್ಷಣ ಕ್ಷಣವೂ ಅರಿಯುವಂಥವನಾಗಿರಬೇಕು!. ಯುದ್ಧದ ಸಂದರ್ಭದಲ್ಲಂತೂ ರಥಿಕನೊಬ್ಬನ ಅತ್ಯಂತ ಗಟ್ಟಿಯಾದ ಕವಚವೆಂದರೆ ಅವನ ಸಾರಥಿಯೇ!”

ಇಲ್ಲಿ ಬರುವ ವಿಶೋಕನ ಪಾತ್ರ ಭೀಮ ಬಲಂಧರೆಯ ವೈವಾಹಿಕ ಜೀವನದಲ್ಲಿ ಅವರಿಬ್ಬರ ನಡುವಿನ ಸೇತುವೆಯಂತಿದೆ. ಇಡೀ ಮಹಾಭಾರತದ ಸಾರಥಿಯೇ ಎನಿಸುವ ಶ್ರೀಕೃಷ್ಣನನ್ನೂ ಈ ಸಾಲುಗಳು ನೆನಪಿಸುವಂತಿದೆ.  

ಭೀಮ ಬಲಂಧರೆಯೊಂದಿಗಿದ್ದದ್ದು ಕೆಲವೇ ವರ್ಷಗಳಾದರೂ ಭೀಮನನ್ನು ಬಲಂಧರೆ ಇಡೀ ಬದುಕಿನಲ್ಲಿ ಪ್ರತಿ ಬಾರಿ ನೆನಪಿಸಿಕೊಳ್ಳುವಾಗೆಲ್ಲಾ ಬೀಸುವ ತಂಗಾಳಿಯ ಸ್ಪರ್ಶದಲ್ಲಿ ಮತ್ತು ಅವಳ ಬೆಚ್ಚಗಿನ‌ ಉಸಿರಿನ ಸ್ಪರ್ಶದಲ್ಲಿ ಮತ್ತೆ ಮತ್ತೆ ತನ್ಮಯಗೊಂಡು ರೋಮಾಂಚನಗೊಳ್ಳುವ ಕ್ಷಣಗಳಲ್ಲಿ ದೂರವಿರುವ ಭೀಮ ಬಲಂಧರೆಯರನ್ನು ಬೆಸೆಯುವ ಸುಂದರ ಕ್ಷಣಗಳು ಸೊಗಸಾಗಿ ಚಿತ್ರಿತಗೊಂಡಿದೆ.

ಮಹಾರಾಣಿ ಬಲಂಧರೆಯ ತರ್ಕಬದ್ಧವಾದ ಮಾತುಗಳು, ಅವಳ ವಿವೇಚನೆ , ಸಂಯಮ , ಪತಿಯಿಂದ ದೂರವಾದರೂ ತನ್ನ ತವರು ಕಾಶಿಯ ಸಾಮ್ರಾಜ್ಞಿಯಾಗಿ ಮಗನನ್ನು ಸಾಕಿ ಬೆಳೆಸಿ ಬದುಕಿದ ಪರಿ ಆಗಾಗ ಗತದ ಜೀವನವನ್ನು ಮೆಲುಕು ಹಾಕುತ್ತಾ ಕೊನೆತನಕ ಭೀಮನನ್ನು ನೋಡುವ ಹಂಬಲದಲ್ಲೇ ಅಸುನೀಗಿದರೂ ಮತ್ತೆ ತಾವಿಬ್ಬರೂ ಸೇರುವ ಆಶಾವಾದವೇ ಇಡೀ ” ಪುನರ್ನವ ” ಕೃತಿಯ ಮುಂದುವರಿಕೆಯಾಗಿ ಕೊನೆಯಿಲ್ಲದ ಅನನ್ಯ ಪ್ರೇಮವೊಂದು ಓದುಗರ ಹೃದಯವನ್ನು ಅರಳಿಸುತ್ತದೆ. ಇಡೀ ಕೃತಿ ವಿರಹ ಮತ್ತು ವಿಷಾದಗಾಥೆಯಂತಿದ್ದರೂ ಸಹಾ ಇಲ್ಲಿ ವಿಜೃಂಭಿಸಿರುವುದು ಪ್ರೇಮ ಮಾತ್ರ ಎಂಬುದು ಸತ್ಯ.  

ಇದು ಬಲಂಧರೆಯ ಕಥೆ ಮಾತ್ರವಲ್ಲ….ಪ್ರಪಂಚದ ಕೋಟ್ಯಾಂತರ ಹೆಣ್ಣುಗಳ ಕಥೆ ಕೂಡ ಇಲ್ಲಿ ಅಡಕಗೊಂಡಿದೆ. ಹೆಣ್ಣಿನ ಮನಸ್ಸಿನ ಪ್ರತಿ ತುಡಿತ ಮಿಡಿತವನ್ನು ಅತ್ಯಂತ ಸಶಕ್ತವಾಗಿ ಬಲಂಧರೆಯ ಪಾತ್ರದ ಮೂಲಕ ಕಟ್ಟಿಕೊಟ್ಟು ಪ್ರೇಮಕ್ಕೆ ಹೊಸ ಆಯಾಮವನ್ನೇ ಮೂಡಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅಂದಿನ ಮಹಾಭಾರತದ ಕಥೆಯನ್ನು ಇಂದಿಗೂ, ಎಂದೆಂದಿಗೂ ಪ್ರಸ್ತುತವೆನಿಸುವಂತೆ “ಪುನರ್ನವ” ಕೃತಿ ರಚಿಸಿರುವ ಲೇಖಕರಿಗೆ ಅಭಿನಂದನೆಗಳು. 

                       

                         

                               

‍ಲೇಖಕರು avadhi

January 17, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. R N Naik from Hanehalli

    Dr. ಲಾವಣ್ಯ ಪ್ರಭಾ ಅವರ ನೋಟವು ಪುನರ್ನವ ಅದನ್ನು ಬಲಪಡಿಸಿದೆ. ಪುಸ್ತಕ ಪುನರ್ನವ ನನ್ನ ಬಳಿ ಇಲ್ಲ. ಆದಾಗ್ಯೂ, ಡಾ. ಪ್ರಭಾ ಅವರ ಕಾಮೆಂಟ್ ಗಳನ್ನು ಓದುವುದರಿಂದ ಪುನರ್ನವ ಎಂದರೇನು ಅರ್ಥಮಾಡಿಕೊಳ್ಳಲು ನನಗೆ ಸಹಾಯವಾಯಿತು. ಬಲಂಧರೆ ಭೀಮನ ಹೆಂಡತಿ ಎಂದು ನನಗೆ ತಿಳಿದಿರಲಿಲ್ಲ. Sachin, ನಿಮ್ಮ ಕೊಡುಗೆ ಅನನ್ಯವಾಗಿದೆ. ಡಾ. ಲಾವಣ್ಯ ನನಗೆ ಅಪರಿಚಿತರಲ್ಲ. Thanks to Sachin from Agragone. Best.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: