ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 21

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

21

ಕರೋನಾದತ್ತ ಸರ್ಕಾರದ ನಿಲುವು

ಸರ್ಕಾರದ ನೀತಿ ನಿರ್ಬಂಧಗಳ ಪ್ರವೇಶವಾದರೆ, ಇರುವೆಗಳಂತೆ ನೆಲದಮಟ್ಟದಲ್ಲಿ ತಮ್ಮ ಪಾಡಿಗೆ ತಾವು ನೆಮ್ಮದಿಯಿಂದ ಜೀವನ ಸಾಗಿಸುತ್ತಾ ಬಂದಿದ್ದ ಜನರ ಬದುಕು ಹೇಗೆ ಕದಡಿಹೋಗುತ್ತದೆ ಎಂಬುದನ್ನು ಕರೋನಾ ಬಿಚ್ಚಿ ತೋರಿಸಿತ್ತು. ನನಗಂತೂ ಈ ಕರೋನಾ ವೈರಸ್ಸಿಗಿಂತ ಸರ್ಕಾರಿ ವ್ಯವಸ್ಥೆಗಳು ನಡೆಸುವ ದೌರ್ಜನ್ಯ ಭ್ರಷ್ಟಾಚಾರ ಹಾಗೂ ಹಿಂಸಾಚಾರಗಳೇ ಭೀಕರಾತಿಭೀಕರ ವೆನಿಸಿದ್ದವು.

ಮೊತ್ತ ಮೊದಲಿಗೆ ಲಾಕ್‌ಡೌನ್ ಹೇರಿದಾಗ ಲಕ್ಷಾಂತರ ಸಂಖ್ಯೆಯಲ್ಲಿ ಬರಿಗಾಲಿನಲ್ಲಿ ಗುಳೆ ಹೊರಟಂಥ ವಲಸಿಗರ ಪಯಣ, ಅನ್ನ ನೀರಿಗೂ ಗತಿಯಿಲ್ಲದೆ ಸೊರಗಿ ಹೋದ ಮುಖಗಳು, ತಮ್ಮ ಜನರನ್ನೇ ತಮ್ಮ ಊರಿನೊಳಗೆ ಬಿಟ್ಟುಕೊಳ್ಳದ ಊರವರ ಅಜ್ಞಾನ, ಕ್ರೌರ್ಯ, ಊರು ಸೇರುವ ಮೊದಲೇ ಪ್ರಾಣಬಿಟ್ಟ ಜೀವಗಳು, ಇಲಿಗಳ ಮೇಲೆ ಸುರಿಯುತ್ತಿದ್ದಂತೆ ಜನರ ಮೇಲೆ ಸುರಿಯುತ್ತಿದ್ದ ಕ್ರಿಮಿನಾಶಕ’ ದ್ರಾವಕಗಳು. ನಮ್ಮ ನಿರ್ದಯ ಕ್ರೂರ ವ್ಯವಸ್ಥೆಯ ಮುಂದುವರಿಕೆ ಎಂಬಂತೆ ನಿರ್ಜೀವ ಮುಖ ಹೊತ್ತ ಅಸಹಾಯಕ ಜನರು ಕುಳಿತಿದ್ದ ಸಾಲುಸಾಲು ಸಿಟಿಬಸ್‌ಗಳು ಮೆಜೆಸ್ಟಿಕ್ ರೈಲ್ವೆ ಸ್ಟೇಶನ್ ಬಳಿ ನಿಂತಿದ್ದವು.

ಆ ಜನರು ರೈಲಿಗೆ ಹೋಗಲು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಎಷ್ಟು ಹೊತ್ತಿನಿಂದ ಹೀಗೆ ಕಾಯುತ್ತಿದ್ದರೋ, ಇನ್ನೂ ಎಷ್ಟು ಹೊತ್ತು ಅಥವಾ ಎಷ್ಟು ದಿನ ಹೀಗೆ ಕಾಯುತ್ತಿರಬೇಕೋ, ಅವರ ಅನ್ನಾಹಾರಗಳು, ದೈಹಿಕ ಬಾಧೆಗಳ ಗತಿಯೇನು? ಒಂದಿಷ್ಟೂ ಮುಂದಾಲೋಚನೆಯಿಲ್ಲದೆ ಕರುಣೆ ಇಲ್ಲದೆ ವಿಧಿಸಿದ ನಿರ್ಬಂಧಗಳ ಬಲಿಪಶುಗಳಾಗಿ ಈ ಜನ ಕಾಣುತ್ತಿದ್ದರು. ಇಡೀ ನಗರದ ಬದುಕನ್ನು ಹಸನಾಗಿಸಿದ ಜನ ಇವರು, ನಗರದ ಅಭಿವೃದ್ಧಿಗೆ ಬೆವರು ಸುರಿಸಿದ ಜನ ಇವರು. ಇಂಥ ಜನರನ್ನು ನಮ್ಮ ಆಡಳಿತ ವ್ಯವಸ್ಥೆ, ರಾಜಕೀಯ ವ್ಯವಸ್ಥೆ, ಪೋಲೀಸ್ ವ್ಯವಸ್ಥೆ ಮನುಷ್ಯರಂತೆಯೇ ನೋಡಲಿಲ್ಲ.

ನಮ್ಮದೇ ಸರ್ಕಾರ, ನಮ್ಮದೇ ದೇಶ, ನಾವೇ ಆರಿಸಿದ ಪ್ರಭುಗಳು, ನಮ್ಮದೇ ಜನರ ಬಗ್ಗೆ ಎಷ್ಟೊಂದು ಕ್ರೂರವಾಗಿ ನಿರ್ದಯವಾಗಿ ಅಮಾನವೀಯವಾಗಿ ವರ್ತಿಸಬಹುದು ಎಂಬುದನ್ನು ಈ ಅಮಾಯಕರ ವಲಸೆ ಸಾರಿಸಾರಿ ಹೇಳುತ್ತಿತ್ತು. ಚುನಾವಣೆಗಳು ಬಂದರೆ ಬೀದಿಬೀದಿಗಳಲ್ಲಿಯೂ ಇಂಥ ಜನರಿಗೆ ಹಣಕೊಟ್ಟು ಮೆರವಣಿಗೆಗೆ ಬಳಸಿಕೊಳ್ಳುವ ಮತ್ತು ಬಿರಿಯಾನಿ ಕುಡಿತಗಳ ನಿತ್ಯ ಸಂತರ್ಪಣೆ ಏರ್ಪಡಿಸುವ, ಮನೆಮನೆಗೂ ಕಾರ್ಯಕರ್ತರನ್ನು ಕಳುಹಿಸಿ ಮತಯಾಚನೆ ಮಾಡುವ ರಾಜಕೀಯದವರಿಗೆ ಕನಿಷ್ಠ ತಮ್ಮ ತಮ್ಮ ಮತ ಕ್ಷೇತ್ರಗಳ ಜನರ ಸಂಕಷ್ಟಗಳಿಗೆ ಪರಿಹಾರ ಒದಗಿಸುವುದು ಸಾಧ್ಯವಾಗುತ್ತಿರಲಿಲ್ಲವೇ? ಅಕ್ಕಪಕ್ಕದ ಬಡ ರೈತರ ಜಮೀನುಗಳನ್ನೆಲ್ಲ ದಬ್ಬಾಳಿಕೆಯಿಂದ ಕಬಳಿಸಿ ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸಿಕೊಂಡಿರುವ ಮಠಾಧಿಪತಿಗಳು ಇಂಥ ಜನರ ಕ್ವಾರಂಟೈನ್‌ಗಾಗಲೀ, ಅನ್ನಾಹಾರಗಳ ವ್ಯವಸ್ಥೆಯ ಬಗೆಗಾಗಲೀ ವ್ಯವಸ್ಥೆಮಾಡುವುದು ಸಾಧ್ಯವಾಗುತ್ತಿರಲಿಲ್ಲವೇ? ನಮ್ಮ ದೇಶ, ನಮ್ಮ ಧರ್ಮಗಳ ಬಗ್ಗೆ ಹೇಳಿಕೊಳ್ಳುವುದಕ್ಕೇ ನಾಚಿಕೆಯಾಗುವಷ್ಟು ಆದಃಪತನ ಕಂಡ ವ್ಯವಸ್ಥೆ ನಮ್ಮದು.

ಕೇವಲ ಒಬ್ಬ ರಾಜಕಾರಣಿಯೂ ಈ ಸಂದರ್ಭದಲ್ಲಿ ಜನನಾಯಕನಾಗಿ ವರ್ತಿಸಲಿಲ್ಲ. ಅವರ ಅದ್ದೂರಿ ವೇಷ ಭೂಷಣಗಳು, ಬೂಟಾಟಿಕೆಯ ಮಾತುಗಳು, ಐಷಾರಾಮಿ ಬದುಕು, ಯಾವ ರೀತಿಯಲ್ಲಿಯೂ ಬದಲಾಗಲಿಲ್ಲ. ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಐಎಎಸ್ ಅಧಿಕಾರಿಗಳು ಜನಸಾಮಾನ್ಯರ ಪಕ್ಕ ಕುಳಿತು ಅವರ ಕಷ್ಟಸುಖಗಳನ್ನು ಆಲಿಸಿದ ಉದಾಹರಣೆಗಳಿದ್ದವು. ಪ್ರವಾಹ ಪೀಡಿತರ ಸರಕು ಸಾಮಗ್ರಿಗಳನ್ನು ತಾವೇ ಹೊತ್ತು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ ಶಾಸಕರ ಉದಾಹಣೆಗಳಿದ್ದವು. ಎಂಥ ಸಂದರ್ಭದಲ್ಲಿಯೂ ಯಾವೊಬ್ಬ ಮನುಷ್ಯನಿಗೂ ಎಂದಿಗೂ ಅನ್ನಾಹಾರಗಳ ಸಮಸ್ಯೆಯಾಗದಂತೆ ನೋಡಿಕೊಂಡ ರಾಜ್ಯಗಳ ಉದಾಹರಣೆಗಳಿದ್ದವು.

ಶಾಸಕರು, ಸಂಸದರು, ಸ್ವಯಂಸೇವಾ ಕಾರ್ಯಕರ್ತರು ಸ್ವತಃ ನೊಂದ ಜನರ ಪರವಾಗಿ ನಿಂತು ಕೆಲಸಮಾಡಿದರು. ರೋಗದ ಸೋಂಕು ತಡೆಗಟ್ಟಲು ಸಾಧ್ಯವಾಗದಿದ್ದರೂ ಜನಸಾಮಾನ್ಯರ ಬದುಕು ಪೂರ್ಣ ಹೈರಾಣವಾಗದಂತೆ ನೋಡಿಕೊಂಡರು. ರೋಗಪಿಡಿತರಲ್ಲಿ ಯಾರೊಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಅಂತಹ ಒಂದೇ ಒಂದು ಉದಾಹರಣೆಯೂ ಕಂಡು ಬರಲಿಲ್ಲ. ಬಾಯಿ ಮಾತಿಗೂ ವಲಸೆ ಕಾರ್ಮಿಕರನ್ನು ಕುರಿತು ಒಂದು ಕರುಣೆಯ ಮಾತು ಬರಲಿಲ್ಲ. ಇದಕ್ಕೆ ಬದಲಾಗಿ ಸೋಂಕಿತರ ಹಾಗೂ ಸಾವಿಗೀಡಾದವರ ಸಂಖ್ಯೆಯ ದೃಷ್ಟಿಯಿಂದ ನಮ್ಮ ರಾಜ್ಯವು ಅಗ್ರಸ್ಥಾನ ಪಡೆಯಲು ಪೈಪೋಟಿ ನಡೆಸಿದಂತೆ ಕಾಣುತ್ತದೆ.

ಒಂದು ಕಡೆ ಸಾವಿರದ ಲೆಕ್ಕದಲ್ಲಿ ಬೆಡ್‌ಗಳು, ಪಿ.ಪಿ.ಇ.ಗಳು, ಮಾಸ್ಕ್ಗಳು, ಆಧುನಿಕ ಅಂಬುಲೆನ್ಸ್ ಗಳ ಖರೀದಿ, ಹಾಗೂ ವೆಂಟಿಲೇಟರ್‌ಗಳು, ಆಕ್ಸಿಜನ್ ಸಿಲಿಂಡರ್‌ಗಳ ಕಮಿಷನ್ ದಂಧೆಯಲ್ಲಿ ತೊಡಗಿ ಕಳಪೆ ವಸ್ತುಗಳನ್ನು ಖರೀಸುವ ಹಾಗೂ ೫ಸ್ಟಾರ್ ಮಾದರಿಯ ಚಿಕಿತ್ಸೆಯ ವ್ಯವಸ್ಥೆಯ ಚಿತ್ರಗಳನ್ನು ತೋರಿಸುವುದರಲ್ಲಿ ತೊಡಗಿರುವ ಸರ್ಕಾರ, ಇನ್ನೊಂದು ಕಡೆ ಸಕಾಲಕ್ಕೆ ಚಿಕಿತ್ಸೆ ದೊರಕದೆ, ಅಂಬುಲೆನ್ಸ್ ಬಾರದೆ ಮನೆಯ ಬಾಗಿಲಲ್ಲೆ ಸತ್ತ ಜನರು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅನ್ನ ನೀರಿಗೆ ಗತಿಯಿಲ್ಲದೆ ಆಸ್ಪತ್ರೆಯಲ್ಲೆ ಆತ್ಮಹತ್ಯೆ ಮಾಡಿಕೊಂಡ ಜನರೆಷ್ಟೋ, ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗಿ ಕೊನೆಗೆ ಆಸ್ಪತ್ರೆಗೆ ದಾಖಲಾತಿ ಸಿಗದೆ ಆಸ್ಪತ್ರೆಯ ಬಾಗಿಲಲ್ಲೆ ಕೊನೆಯುಸಿರೆಳೆದ ಜನರೆಷ್ಟೋ, ಅಷ್ಟೇಕೆ ಕೋವಿಡ್ ಟೆಸ್ಟ್ ಪ್ರಮಾಣಪತ್ರ ಇಲ್ಲ ಎಂಬ ಕಾರಣಕ್ಕೆ, ಕಣ್ಣೆದುರಿಗೇ ಉಸಿರಾಟದ ತೊಂದರೆಯಿಂದ ನರಳುತ್ತಿರುವ ವೈದ್ಯರಿಗೂ ಸಹ ಚಿಕಿತ್ಸೆ ಕೊಡದೆ ಕೊನೆಯುಸಿರೆಳೆಯುವಂತೆ ಮಾಡಿದ ಊಹೆಗೂ ನಿಲುಕದ ಕ್ರೂರ ವ್ಯವಸ್ಥೆ ನಮ್ಮದು.

ಇನ್ನು ಲಕ್ಷಾಂತರ ರೂ.ಗಳ ಬಿಲ್‌ಮಾಡಿ, ಶವವನ್ನೂ ನೀಡದೆ ಸತಾಯಿಸಿದ ಪ್ರಕರಣಗಳೆಷ್ಟೋ… ಆದರೆ ಇಂಥ ಯಾವೊಂದು ವಿಷಯದ ಬಗೆಗೂ ಕರುಣೆ, ಕಾಳಜಿ, ಕಳಕಳಿ ವ್ಯಕ್ತಪಡಿಸದೆ ಹಾಗೇ ತನ್ನ ದುಡ್ಡುಮಾಡುವ ದಂಧೆಯಲ್ಲಿ ಮುಂದುವರೆದಿರುವ ನಮ್ಮ ಸರ್ಕಾರದ ಸಾಧನೆಗಳು ಹೀಗಿವೆ: ಸೆಪ್ಟೆಂಬರ್ ಕೊನೆಯ ಹೊತ್ತಿಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈಗ ರಾಜ್ಯದಲ್ಲಿ ಸುಮಾರು ಆರು ಲಕ್ಷಕ್ಕೂ ಹೆಚ್ಚು ಸೋಂಕಿತರಿದ್ದು ಅದರಲ್ಲಿ ಬೆಂಗಳೂರು ನಗರವೊಂದರಲ್ಲೆ ಅವರ ಸಂಖ್ಯೆ ಎರಡೂವರೆ ಲಕ್ಷ ದಾಟಿದೆ.

ಮಹಾನಗರಗಳ ಪೈಕಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಹಾಸಿಗೆಗಳ ಕೊರತೆ ನೀಗಿಲ್ಲ. ಆಕ್ಸಿಜನ್ ಕೊರತೆ ಕಾಡುತ್ತಲೆ ಇದೆ. ಆಕ್ಸಿಜನ್ ಸಿಲಿಂಡರ್‌ಗಳ ಬೆಲೆ ಒಂದೇ ಸಮನೆ ಮೇಲೇರುತ್ತಿದೆ. ತಾವು ಮಾಡುತ್ತಿರುವುದೇನು? ಮಾಡಬೇಕಾಗಿದ್ದ ಕೆಲಸವೇನು ಎಂಬ ಬಗ್ಗೆ ಒಂದಿಷ್ಟೂ ತಿಳುವಳಿಕೆ ಅಥವಾ ಆತ್ಮಾವಲೋಕನ ವಿಲ್ಲದಂಥ ಸರ್ಕಾರದ ಅಡಿಯಲ್ಲಿ ಇರುವ ಜನರನ್ನು ದೇವರೇ ಕಾಪಾಡಬೇಕು. ಕರೋನಾ ಸೋಂಕು ಕಾಣಿಸಿಕೊಂಡ ಆರಂಭದ ಮೂರ‍್ನಾಲ್ಕು ತಿಂಗಳಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿತ್ತು. ಇದಕ್ಕಾಗಿ ಪ್ರತಿ ಪಾಲಿಕೆಗಳು ಮತ್ತು ಪಂಚಾಯತಿಗಳು ಔಷಧ ಸಿಂಪಡಣೆ ಕ್ಯಾನ್, ಡ್ರೋನ್‌ಗಳು, ಜೆಟ್ಟಿಂಗ್ ಯಂತ್ರ, ಸಿಂಪಡಣೆ ಯಂತ್ರ, ಅಗ್ನಿಶಾಮಕದಳದ ವಾಹನ ಹಾಗೂ ಬೃಹತ್ ಗಾತ್ರದ ಸಿಂಪಡಣೆ ವಾಹನ ಖರೀದಿಸಿದವು.

ಇವೆಲ್ಲ ಆಗಿದ್ದು, ರೋಗ ತೀರಾ ಪ್ರಾರಂಭಾವಸ್ಥೆಯಲ್ಲಿದ್ದಾಗ. ವಿಪರ್ಯಾಸವೆಂದರೆ ಸೋಂಕು ಕಾಳ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಈ ಮರ‍್ನಾಲ್ಕು ತಿಂಗಳುಗಳ ಅವಧಿಯಲ್ಲಿ ಈ ಔಷಧ ಸಿಂಪಡಣೆ ಕಾರ್ಯ ಹಾಗೂ ಯಂತ್ರಗಳು ಮೂಲೆ ಸೇರಿವೆ. ಕೆಲವೇ ವಾರ್ಡ್ಗಳಲ್ಲಿ ಮಾತ್ರ ಔಷಧ ಸಿಂಪಡಣೆ ಕಾರ್ಯ ನಡೆಯುತ್ತಿದೆ. ಬಿ.ಬಿ.ಎಂ.ಪಿ.ಯ ಬೃಹತ್ ಯಂತ್ರಗಳು ಕೆಲಸವಿಲ್ಲದೆ ಪಾಲಿಕೆ ಆವರಣದಲ್ಲಿ ನಿಂತಿವೆ. ಸರ್ಕಾರವು ಮಾಹಿತಿ ಒದಗಿಸುವುದಕ್ಕಾಗಿ ತಾನು ಮಾಡಿದ ವ್ಯವಸ್ಥೆಗಳ ತುತೂರಿ ಊದುತ್ತಲೇ ಇದೆ. ಆದರೆ ಎಲ್ಲರಲ್ಲಿಯೂ ಆಧುನಿಕ ಫೋನ್‌ಗಳು ಇರುವುದಿಲ್ಲ. ಪ್ರತಿಯೊಂದು ಸೂಚನೆಯೂ ಇಂಗ್ಲಿಷ್‌ನಲ್ಲಿರುವುದರಿಂದ ಫೋನ್ ಇದ್ದವರೂ ಸಹ ಅದನ್ನು ಓದಿಕೊಳ್ಳಲು ಸಾಧ್ಯವಿಲ್ಲ.

ತೀರಾ ವೃದ್ಧರೂ, ಬಡವರು, ಸಾಮಾನ್ಯರಿಗೆ ಸರಿಯಾದ ಮಾಹಿತಿ ತಿಳಿಸುವುದು ಅಗತ್ಯವಾಗಿರುವಂಥ ಸಂದರ್ಭದಲ್ಲಿ ಈ ಅ್ಯಪ್‌ಗಳ ಪಟ್ಟಿಯನ್ನು ನೋಡಿ ನನಗೇ ದಿಗಿಲಾಗುತ್ತಿತ್ತು. ನಾನು ಆಸ್ಪತ್ರೆ ಸೇರಬೇಕಾದ ದಿನದಂದು ಆಸ್ಪತ್ರೆಗಳ ಹುಡುಕಾಟಕ್ಕೆ ತೊಡಗಿದಾಗ ಈ ಅ್ಯಪ್‌ಗಳನ್ನು ಬಳಸುವ ಪ್ರಯತ್ನ ನಾನು ಶಂಕರ್ ಮಾಡಿದೆವು. ಅದು, ಅಲ್ಲಿ ಒತ್ತಿ ಇಲ್ಲಿ ಒತ್ತಿ ಎಂದು ಹೇಳುತ್ತಾ ಹೋದ ಮಾಹಿತಿ ಸಿಕ್ಕಿತೇ ಹೊರತು ಸ್ಪಷ್ಟವಾದ ಒಂದೇ ಒಂದು ಮಾಹಿತಿಯೂ ಸಿಗಲಿಲ್ಲ. ಎಲ್ಲವೂ ಧ್ವನಿಮುದ್ರಿತವಾದಂಥವು. ಕೊನೆಗೆ ಬಿಬಿಎಂಪಿ ಹೆಂಗಸು ಮಾತಾಡಿ ನೀವು ಸೀನಿಯರ್ ಸಿಟಿಜನ್ಸ್ ಮನೆಯಲ್ಲೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಉಪದೇಶಮಾಡಿದರು.

ಇಂದಿಗೂ ಸರ್ಕಾರದ ನೀತಿಯಲ್ಲಿ, ಬಿಬಿಎಂಪಿ ಕಾರ್ಯ ವೈಖರಿಯಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಅವರು ಮಾಡಿರುವ ಅವ್ಯವಹಾರಗಳ ಬಗ್ಗೆ ವಿರೋಧ ಪಕ್ಷದವರು ದೋಷಾರೋಪಗಳನ್ನು ಮಾಡುವುದರಲ್ಲಿ ತೊಡಗಿದ್ದಾರೆ. ಈ ಆರೋಪಗಳ ನಿರಾಕರಣೆಯಲ್ಲಿ ಹಾಗೂ ಸಮಜಾಯಿಷಿ ಕೊಡುವುದರಲ್ಲಿ ಆಡಳಿತ ಪಕ್ಷದವರು ನಿರತರಾಗಿದ್ದಾರೆ. ಇವರಿಬ್ಬರ ಮಧ್ಯೆ ಸಾಯುವವರು ಸಾಯುತ್ತಲೇ ಇದ್ದಾರೆ. ಅಕ್ಷರಶಃ ನಮ್ಮ ಆಡಳಿತಗಾರರು ಹೆಣಗಳ ಪಕ್ಕದಲ್ಲಿ ಮೃಷ್ಟಾನ್ನ ಭೋಜನಮಾಡುತ್ತಿರುವ ನರ ರಕ್ಕಸರ ಹಾಗೆ ಕಾಣುತ್ತಿದ್ದಾರೆ. ಇನ್ನು ಮುಂದಾದಾರೂ ಕನಿಷ್ಠ ಈ ಕೆಳಗಿನ ಸುಧಾರಣೆಗಳನ್ನು ಸರ್ಕಾರ ಜಾರಿಗೆ ತರುವಂತಾಗಲಿ:

೧. ಕೋವಿಡ್ ಪರೀಕ್ಷೆಯ ಪ್ರಮಾಣ ಪತ್ರವಿಲ್ಲದಿದ್ದರೂ ಕರೋನಾ ಪೀಡಿತರಿಗೆ ಚಿಕಿತ್ಸೆ ನೀಡುವುದು.

೨. ಹೊಸದಾದ ೫ಸ್ಟಾರ್ ರೀತಿಯ ಬೆಡ್‌ಗಳ ಆಸ್ಪತ್ರೆಯನ್ನು ನಿರ್ಮಿಸುವ ಬದಲು ವಿಕ್ಟೋರಿಯದಂಥಾ ಸಾರ್ವಜನಿಕ ಆಸ್ಪತ್ರೆಯನ್ನು ಶುದ್ಧೀಕರಣ ಮಾಡಿ ಮೇಲ್ದರ್ಜೆಗೇರಿಸಿ ಬಡವರಿಗೆ ಒಳ್ಳೆಯ ಚಿಕಿತ್ಸೆ ಕೊಡುವುದು. ಡಾ. ಮಂಜುನಾಥ್ ಅವರು ಜಯದೇವ ಹೃದ್ರೋಗ ಆಸ್ಪತ್ರೆಯನ್ನು ೫ ಸ್ಟಾರ್ ದರ್ಜೆ ಗೇರಿಸಿರೋಗಿ ಮೊದಲು ಹಣ ಆಮೇಲೆ’ (ಪೇಶಂಟ್ ಫಸ್ಟ್ ಪೇಮೆಂಟ್ ನೆಕ್ಸ್ಟ್) ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ನೇಮಿಸಿ ವಿಕ್ಟೋರಿಯದಂಥ ಸಾರ್ವಜನಿಕ ಆಸ್ಪತ್ರೆಗಳ ಜೀರ್ಣೋದ್ಧಾರ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕು.

೩. ಪೌಷ್ಟಿಕ ಆಹಾರ ಹಾಗೂ ಶುದ್ಧ ಕುಡಿಯುವ ನೀರಿನ ಸರಬರಾಜನ್ನು ಸರ್ಕಾರೀ ಕೃಪಾಪೋಷಿತ ವಲ್ಲದ ಸ್ವಯಂ ಸೇವಾ ಸಂಸ್ಥೆಗಳಿಗೆ ಒಪ್ಪಿಸಬೇಕು.

೪. ಯಾವ ಯಾವ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಏನೇನು ಕೊರತೆಗಳಿವೆ ಎಂಬುದರ ಸಮೀಕ್ಷೆ ನಡೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.

೫. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರವೂ ವಿವಿಧ ರೀತಿಯ ಅಡ್ಡ ಪರಿಣಾಮಗಳಿಗೆ ತುತ್ತಾಗಿರುವವರ ಚಿಕಿತ್ಸೆಗಾಗಿ ಹಾಗೂ ಅವರ ಕ್ವಾರಂಟೈನ್‌ಗಾಗಿ ಮಠಾಧಿಪತಿಗಳವರ ಜಾಗದಲ್ಲಿ ವ್ಯವಸ್ಥೆಮಾಡುವ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು.

೬. ತೀವ್ರ ನಿಗಾ ಘಟಕದಲ್ಲಿರುವವರ ಸ್ಥಿತಿಗತಿಗಳ ಬಗ್ಗೆ ತಿಳಿಸುವುದಕ್ಕಾಗಿ ಹಾಗೂ ಕುಟುಂಬದವರನ್ನು ರೋಗಿಗಳು ಪರಸ್ಪರ ನೋಡಲು ಮಾತಾಡಲು ಸಾಧ್ಯವಾಗುವಂತೆ ವಿಡೀಯೊ ಚಿತ್ರೀಕರಣದ ಸೌಲಭ್ಯವನ್ನು ಕಡ್ಡಾಯವಾಗಿ ಕಲ್ಪಿಸಬೇಕು.

೭. ಮೃತರಾದವರ ಅಂತ್ಯಕ್ರಿಯೆಯನ್ನು ವಿಡಿಯೋ ಮೂಲಕ ತೋರಿಸಬೇಕು ಮತ್ತು ಮೃತರ ಮುಖ ಕಾಣುವಂತೆ ಪಾರದರ್ಶಕ ಮುಖ ಕವಚವನ್ನು ಹಾಕಬೇಕು.

೮. ಪಿಪಿಇ ಒದಗಿಸುವ ಸಂಸ್ಥೆಗಳಿಗೆ ಇನ್ನು ಮುಂದೆ ಅದನ್ನು ಧರಿಸುವ ಯಾವುದೇ ಹಂತದ ಸಿಬ್ಬಂದಿಯ ಮುಖ ಕಾಣುವಂತೆ ಪಾರದರ್ಶಕವಾಗಿರುವ ಮುಖ ಭಾಗದ ಪಿಪಿಇ ತಯಾರಿಕೆ ಮಾಡುವಂತೆ ಸೂಚಿಸಬೇಕು.

೯. ಅಲೋಪತಿ, ಆಯುರ್ವೇದ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆಗೆ ಸಂಬಂಧಿಸಿದ ಪರಿಣತರು ಒಂದೇ ವೇದಿಕೆಯಲ್ಲಿ ಭಾಗವಹಿಸಿ ಪರಸ್ಪರ ಚರ್ಚೆ ನಡೆಸುವ ಮೂಲಕ ಕರೋನಾ ಸಂದರ್ಭದಲ್ಲಿ ಈ ವೈದ್ಯಪದ್ಧತಿಗಳನ್ನು ಹೇಗೆ ಸಂಯೋಜಿಸಬೇಕು ಎಂಬ ತಿಳುವಳಿಕೆಯನ್ನು ಜನರಿಗೆ ನೀಡುವಂತೆ ದೂರದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು.

೧೦. ಚುನಾವಣೆಗಳ ಸಂದರ್ಭದಲ್ಲಿ ಚುನಾವಣಾ ಸಿಬ್ಬಂದಿಗೆ ಪೂರ್ವ ತರಬೇತಿ ನೀಡುವಂತೆ, ಕರೋನಾ ಸ್ವರೂಪ, ಕ್ವಾರಂಟೈನ್, ರೋಗಿಗಳ ಆಹಾರ, ಆರೈಕೆ ಮೊದಲಾದವುಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ನೀಡುವಂಥ ಕಾರ್ಯಶಿಬಿರ (ವರ್ಕ್ಶಾಪ್) ಗಳನ್ನು ಅಯೋಜಿಸಬೇಕು. ಇದರಲ್ಲಿ ವೈದ್ಯರು, ಪೊಲೀಸರು, ಸ್ವಯಂಸೇವಾ ಕಾರ್ಯಕರ್ತರು, ಯುವಕ ಯುವತಿಯರು ಭಾಗಿಯಾಗಿ ಈ ತರಬೇತಿಯನ್ನು ಪಡೆದುಕೊಳ್ಳುವಂತಾಗಬೇಕು. ಕರೋನಾ ಕುರಿತು ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ದಿಸೆಯಲ್ಲಿ ಈ ರೀತಿಯ ಶಿಬಿರಗಳನ್ನು ಆಯಾ ನಗರ ಪಾಲಿಕೆಯ ಘಟಕಗಳಲ್ಲಿ, ವಾರ್ಡ್ಗಳಲ್ಲಿ ನಡೆಸುವುದು ಬಹಳ ಅಗತ್ಯ.

| ಇನ್ನು ನಾಳೆಗೆ |

‍ಲೇಖಕರು Avadhi

June 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: