ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 20

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

20

ಕರೋನಾ ಭಯವನ್ನೂ ಮೀರಿಸಿದ ವ್ಯವಸ್ಥೆ

ಲಾಕ್‌ಡೌನ್‌ನಿಂದ ಹಿಡಿದು ಮಾಸ್ಕ್ ಧರಿಸದವರಿಗೆ ೧೦೦೦ ರೂಗಳ ದಂಡ ಎನ್ನುವವರೆಗೆ ಜನ ಸಾಮಾನ್ಯರನ್ನು ಕರೋನಾದಷ್ಟೇ ಅಥವಾ ಕರೋನಾಗಿಂತ ಹೆಚ್ಚಾಗಿ ಹೆದರಿಸಿದ್ದು ನಮ್ಮ ಪೋಲಿಸ್ ವರ್ತನೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬ ಅಧಿಕಾರಿಗೂ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ಹಾಗೂ ವಿವೇಚನಾಯುತವಾಗಿ ತೀರ್ಮಾನಿಸಿ ಕೈಗೊಳ್ಳುವ ಅಧಿಕಾರವಿರುತ್ತದೆ. ಆದರೆ ಕರೋನಾ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಿಂದ ಹಿಡಿದು ಸಾಮಾನ್ಯ ಪೋಲಿಸ್ ಸಿಬ್ಬಂದಿಯವರೆಗೆ ಪ್ರತಿಯೊಬ್ಬರೂ ಎಲ್ಲೋ ದೂರದಿಂದ ಅಥವಾ ಮೇಲಿನಿಂದ ಬಂದ ಆದೇಶ, ಆಜ್ಞೆಯನ್ನು ಕಣ್ಣುಮುಚ್ಚಿ ಅನುಸರಿಸಿದರೇ ಹೊರತು ಯಾರೊಬ್ಬರೂ ಸ್ವಂತತ್ರವಾಗಿ ಮಾನವೀಯವಾಗಿ ವರ್ತಿಸಲಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಒಬ್ಬ ವೈದ್ಯೆ ತನ್ನ ವೃದ್ಧ ತಂದೆಯನ್ನು ಸ್ಕೂಟರಿನ ಹಿಂದೆ ಕೂರಿಸಿಕೊಂಡು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ಅವಳ ತಲೆ ಒಡೆಯುವಂತೆ ಪೋಲೀಸರು ಲಾಠಿ ಪ್ರಹಾರ ಮಾಡಿದ್ದರು.

ಲಾಕ್‌ಡೌನ್ ನಿರ್ಬಂಧವಿದ್ದಾಗಲೂ ಸುಂಕದ ಕಟ್ಟೆಗಳನ್ನು ದಾಟಿ ಹೋದವರಿಗೆ ಲೆಕ್ಕವೇ ಇಲ್ಲ. ದುಡ್ಡಿದ್ದವರಿಗೆ ಎಲ್ಲ ಕಾಲದಲ್ಲಿಯೂ ಎಲ್ಲವೂ ಸಲೀಸು. ಯಾಕೆ ನಮ್ಮ ವ್ಯವಸ್ಥೆಯಲ್ಲಿ ಎಲ್ಲರಿಗೂ ಬಡವರ ಬಾಳನ್ನು ಇನ್ನಷ್ಟು ದುರ್ಭರಗೊಳಿಸುವುದರಲ್ಲಿಯೇ ಹೆಚ್ಚು ಆಸಕ್ತಿ? ಇದೆಂಥ ವಿಚಿತ್ರ ಮನೋಭಾವ? ಬಡ ಪೂಜಾರಿಯನ್ನು ಕಂಡರೆ ಬಿಲ್ಪತ್ರೆಯೂ ಭುಸ್ ಅನ್ನುತ್ತೆ ಎಂಬ ಒಂದು ಗಾದೆಯಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬೀದಿಬದಿಯ ತರಕಾರಿ ವ್ಯಾಪಾರಿಗಳ ಬುಟ್ಟಿಗಳನ್ನು ಕಿತ್ತೆಸೆದು ತಮ್ಮ ಪ್ರತಾಪವನ್ನು ತೋರಿಸಿದ ಪೋಲಿಸರಿಗೆ ಇಂಥ ಒಬ್ಬ ಬಡ ವ್ಯಾಪಾರಿಯ ಜೀವನೋಪಾಯವನ್ನೇ ನಾವು ಹಾಳುಮಾಡುತ್ತಿದ್ದೇವೆ ಎಂಬ ಅರಿವು ಇಲ್ಲದಿದ್ದರೆ ಹೇಗೆ!

ಪೊಲೀಸ್ ವ್ಯವಸ್ಥೆಯಲ್ಲಿ ಅತ್ಯಂತ ಕೆಳ ಹಂತದಲ್ಲಿರುವ ಸಿಬ್ಬಂದಿ, ಸರ್ಕಾರಿ ಆಸ್ಪತ್ರೆಗಳ ಆಯಾಗಳು, ಆಟೋಚಾಲಕರು, ಬಸ್ ಕಂಡಕ್ಟರ್‌ಗಳು, ಸರ್ಕಾರಿ ಕಛೇರಿಗಳ ದಲಾಯಿತರು ಎಲ್ಲರೂ ಸಹ ಆರ್ಥಿಕವಾಗಿ ಬಡವರೇ. ಆದರೂ ಅವರಿಗೆ ತಮ್ಮಂಥ ಬಡವರನ್ನು ಕಂಡರೆ ಯಾವ ಕರುಣೆಯೂ ಇರುವುದಿಲ್ಲ. ಹಣ ಕೊಡುವ ಸಾಮರ್ಥ್ಯವಿರುವವರಿಗೆ ಮಾತ್ರ ಇವರ ಸಲಾಮು.

ಬಡವರು ಒಂದು ವೇಳೆ ನ್ಯಾಯಯುತವಾಗಿ ಕೊಡಬೇಕಾದಷ್ಟು ಹಣ ಕೊಟ್ಟರೂ ಅವರು ಮೇಲಿನ ಲಂಚಕೊಡಲಿಲ್ಲ ಎಂಬ ಕಾರಣಕ್ಕಾಗಿಯೇ ಇನ್ನಿಲ್ಲದ ನಿಯಮಗಳ ಮೂಲಕ ಅವರನ್ನು ಕಷ್ಟಕ್ಕೆ ಸಿಲುಕಿಸುತ್ತಾರೆ. ಒಂದು ಸಲ ನಾನು ಬೆಂಗಳೂರಿಂದ ಮೈಸೂರಿಗೆ ಸರ್ಕಾರಿ ಬಸ್ಸಲ್ಲಿ ಹೋಗುತ್ತಿದ್ದೆ. ವಯಸ್ಸಾದ ಮುಸ್ಲಿಂ ಮಹಿಳೆ ಮರ‍್ನಾಲ್ಕು ಮೊಮ್ಮಕ್ಕಳೊಂದಿಗೆ, ನನ್ನ ಪಕ್ಕದಲ್ಲಿಯೇ ಕೂತಿದ್ದಳು. ಅವಳು ಕೈ ಚಾಚಿ ತನ್ನ ಟಿಕೆಟ್‌ಗೆ ಹಣವನ್ನು ಕೊಡುತ್ತಿದ್ದಳು.

ಕಂಡಕ್ಟರ್ ಆಚೀಚಿನವರಿಗೆ ಟಿಕೆಟ್ ಕೊಡುತ್ತಿದ್ದನೇ ಹೊರತು ಈಕೆಯನ್ನು ತಾನು ನೋಡೇ ಇಲ್ಲವೆಂಬಂತೆ ನಟಿಸುತ್ತಿದ್ದ. ಬೇಕಿದ್ದರೆ ಎಲ್ಲರಿಗೂ ಟಿಕೆಟ್ ಕೊಟ್ಟ ನಂತರ ಈಕೆ ಟಿಕೆಟ್ ತೆಗೆದುಕೊಂಡಿಲ್ಲ ಎಂದು ಗಲಾಟೆ ಮಾಡುವುದೋ ಅಥವಾ ಮೊಮ್ಮಕ್ಕಳ ವಯಸ್ಸಿಗೆ ಸಂಬಂಧಿಸಿದಂತೆ ತಗಾದೆ ತೆಗೆಯುವುದೋ ಅಥವಾ ಟಿಕೆಟ್ ಕೊಡದೆ ಹಣ ಕಸಿಯುವುದೋ ಆತನ ಉದ್ದೇಶವಿರಬಹುದು. ಆ ಹೆಂಗಸು ಈ ರೀತಿ ಆಗ ಬಹುದಾದ ಅವಮಾನಕ್ಕೆ ಹೆದರಿ ಧನ್ ಸಬ್ ಕಮಾತೆ ಹೈ, ಇಜ್ಜತ್ ಕಮ್ ಕಮಾತೆ (ಹಣವನ್ನು ಎಲ್ಲರೂ ಸಂಪಾದಿಸಬಹುದು. ಆದರೆ ಗೌರವ ಸಂಪಾದಿಸುವವರ ಸಂಖ್ಯೆ ಕಡಿಮೆ) ಎಂದು ಹೇಳಿದ ಮಾತು ಈಗಲೂ ನನ್ನಲ್ಲಿ ಅಚ್ಚೊತ್ತಿದೆ.

ಬಡವರ ಬಾಳನ್ನು ದುರ್ಭರ ಗೊಳಿಸುವಲ್ಲಿ ಸರ್ಕಾರವೇ ಬಹಳ ಮುಂದು. ಅದು ಕರೋನಾ ಹೆಸರಿನಲ್ಲಿ ಜನಸಾಮಾನ್ಯರನ್ನು ಹೆದರಿಸುತ್ತಲೇ ಇದೆ. ಕರೋನಾ ಟೆಸ್ಟ್ ಕಡ್ಡಾಯ. ಮಾಡಿಸಿಕೊಳ್ಳದಿದ್ದವರಿಗೆ ಸಾವಿರಾರು ರೂ. ಗಳ ದಂಡ, ಜೈಲು ಶಿಕ್ಷೆ ಇತ್ಯಾದಿ. ಅದೇ ರೀತಿ ಮಾಸ್ಕ್ ಧರಿಸುವುದು ಕಡ್ಡಾಯ, ಇಲ್ಲದಿದ್ದರೆ ದಂಡ… ಇವಕ್ಕೆಲ್ಲಾ …. ಬಲಿಯಾಗುವವರು ತೀರಾ ಬಡವರು. ಕೆಳಮಧ್ಯಮ ವರ್ಗದವರು. ನಾನು ಖಾಸಗಿ ಆಸ್ಪತ್ರೆಗೆ ಹೋಗಿ ಕರೋನಾ ಟೆಸ್ಟ್ ಮಾಡಿಸಿದೆ. ಒಬ್ಬರಿಗೆ ರೂ. ೪೦೦೦/- ಖರ್ಚು.

ಒಂದು ಮನೆಯಲ್ಲಿ ೪-೫ ಜನ ಇದ್ದವರು ಸರ್ಕಾರಿ ವ್ಯವಸ್ಥೆಯ ಮೊರೆ ಹೋಗಬೇಕು. ಆದರೆ ಈ ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಿನ ನೈರ್ಮಲ್ಯೀಕರಣ ಪಾಲಿಸಲಾಗುತ್ತಿದೆ? ಸರಿಯಾದ ಫಲಿತಾಂಶ ಪ್ರಮಾಣ ಪತ್ರ ನೀಡಲಾಗುತ್ತಿದೆ ಮತ್ತು ಫಲಿತಾಂಶ ನೀಡಲು ತೆಗೆದುಕೊಳ್ಳುವ ದಿನಗಳೆಷ್ಟು. ಈ ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಸರ್ಕಾರದಿಂದ ಒಂದು ಒಳ್ಳೆ ಮಾತು ಇಲ್ಲ. ಕರೋನಾ ಹೆಸರಿನಲ್ಲಿ ನಡೆಯುತ್ತಿರುವ ಸುಳ್ಳು ಪ್ರಚಾರಗಳಿಗೆ, ಅವ್ಯವಹಾರಗಳಿಗೆ, ತಾರತಮ್ಯ ನೀತಿಗೆ ಕೊನೆಯೇ ಇಲ್ಲ.

ಲಾಕ್‌ಡೌನ್ ಸಮಯದಲ್ಲಿ ನಮಗೆ ಬೇರೆ ಯಾವುದೇ ಖಾಯಿಲೆ ಬರದಿರಲಿ ಎಂದು ದೇವರನ್ನು ಬೇಡಿಕೊಳ್ಳುವ ಹಾಗಾಗಿತ್ತು. ಚಿಕಿತ್ಸೆಗಾಗಿಯೂ ಹೊರಗೆ ಹೋಗುವಂತಿಲ್ಲ. ಒಂದು ಆಟೋ ವ್ಯವಸ್ಥೆಯಿಲ್ಲ. ಆಸ್ಪತ್ರೆಗಳಲ್ಲಿಯೂ ಕೋವಿಡ್ ಅಲ್ಲದೆ ಬೇರೆಯವರಿಗೆ ಚಿಕಿತ್ಸೆ ನೀಡುವಂತಿಲ್ಲ…. ಇದರಿಂದಾಗಿ ಆ ಸಂದರ್ಭದಲ್ಲಿ ಕರೋನಾ ಪೀಡಿತರಿಗಿಂತ ಬೇರೆ ತೊಂದರೆಗಳಿಂದಾಗಿಯೇ ಎಷ್ಟೋ ಮಂದಿ ಮೃತ ಪಟ್ಟಿದ್ದರು.

ಲೌಕ್‌ಡೌನ್ ಸಮಯದಲ್ಲಿ ಪೊಲೀಸರ ಲಾಠಿ ಪ್ರಹಾರ ಅದೆಷ್ಟು ಬಿರುಸಾಗಿತ್ತೆಂದರೆ, ಕೊನೆಗೆ ಸರ್ಕಾರವೇ ಪೊಲೀಸರು ಲಾಠಿ ಬೀಸಬಾರದೆಂಬ ಆದೇಶವನ್ನು ಮಾಡಬೇಕಾಯಿತು. ನಮ್ಮ ಪೋಲೀಸ್ ವ್ಯವಸ್ಥೆಯ ನ್ಯೂನತೆಗಳ ಬಗ್ಗೆ ಅಥವಾ ಯಾವುದೇ ಸಂದರ್ಭದಲ್ಲಿ ಅವರು ನಡೆಸಿದ ದೌರ್ಜನ್ಯಗಳ ಬಗ್ಗೆ ನಮ್ಮ ವಿಧಾನ ಸಭಾ ಕಲಾಪಗಳಲ್ಲಿ ಸುದ್ದಿಯೇ ಆಗುವುದಿಲ್ಲ. ತೀರಾ ಜನಸಾಮಾನ್ಯರಿಗೆ ಬಡವರಿಗೆ ಸಂಬಂಧಿಸಿದ ಇಂಥ ಪ್ರಶ್ನೆಯ ಬಗ್ಗೆ ಒಂದಿಷ್ಟೂ ಕಾಳಜಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ.

ನಿಜವಾಗಿಯೂ ಈ ಕುರಿತಾಗಿ ಗಂಭೀರವಾಗಿ ಪರಿಗಣಿಸಿದ್ದೇ ಆಗಿದ್ದರೆ ಪೊಲೀಸ್ ವ್ಯವಸ್ಥೆಯಲ್ಲಿ ಎಷ್ಟೋ ಸುಧಾರಣೆಗಳಾಗುತ್ತಿದ್ದವು. ತಾವು ಮಾಡಬೇಕಾದುದೇನು ಎಂಬ ಪ್ರಜ್ಞೆ, ಅರಿವು ಜನನಾಯಕರಲ್ಲಿರಬೇಕು. ಇದಕ್ಕೆ ಸಂಬಂಧಿಸಿದ ಒಂದು ವಿಧಾನ ಸಭಾ ನಡೆವಳಿಯನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ೧೯೫೦ರ ಮಾರ್ಚ್ ೨೯ರಂದು ಪೋಲಿಸ್ ಇಲಾಖೆಯ ಅಸಾಮರ್ಥ್ಯ ಕುರಿತು ಖೋತಾ ನಿರ್ಣಯದಲ್ಲಿ ವಿಧಾನಸಭಾ ಸದಸ್ಯರಾದ ಎಂ. ಗೋವಿಂದ ರೆಡ್ಡಿಯವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಈ ಕೆಳಗಿನಂತಿವೆ.

ಮಾನ್ಯರೆ,
ಈ ಖೋತಾ ನಿರ್ಣಯದಲ್ಲಿ ಮಂಡಿಸಲಾಗಿರುವ ಪೊಲೀಸ್ ಇಲಾಖೆಯ ಅಸಾಮರ್ಥ್ಯ ಎಂಬುದು ಬಹಳ ಹಳೆಯ ಕಾಯಿಲೆ (ಒಂದು ದನಿ: ಗುಣಪಡಿಸಲಾಗದ ಕಾಯಿಲೆ). ಗುಣಪಡಿಸಲಾಗದ್ದೇನಲ್ಲ. ಇದನ್ನು ಗುಣಪಡಿಸಬಹುದು. ಆದರೆ ಈ ಬಗ್ಗೆ ಸಾಕಷ್ಟು ಗಮನಹರಿಸಿಲ್ಲ ಅಷ್ಟೆ. ಈ ಅಂಶದ ಬಗ್ಗೆ ಮಾತ್ರ ನಾನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಪೊಲೀಸ್ ಇಲಾಖೆಯ ಅತ್ಯಂತ ಮುಖ್ಯವರ್ಗವೆಂದರೆ ಕಾನ್‌ಸ್ಟೇಬಲ್ ವರ್ಗ. ಉನ್ನತ ಅಧಿಕಾರಿಗಳಿಗೆ ತಮ್ಮ ಕರ್ತವ್ಯವೇನೆಂಬುದು ತಿಳಿದಿರುತ್ತದೆ ಮತ್ತು ತಮ್ಮ ಕರ್ತವ್ಯವನ್ನು ಹೇಗೆ ನಿರ್ವಹಿಸಬೇಕೆಂಬುದು ತಿಳಿದಿರುತ್ತದೆ. ಅವರು ತಮ್ಮ ಕರ್ತವ್ಯವನ್ನು ತೃಪ್ತಿಕರವಾಗಿ ಮಾಡದಿರಬಹುದು.

ಒಂದು ವೇಳೆ ತೃಪ್ತಿಕರವಾಗಿ ಮಾಡಿದರೂ ಕಾನೂನು ಹಾಗೂ ಸುವ್ಯವಸ್ಥೆಯ ಪಾಲನೆಗೆ ಅವರಷ್ಟೇ ಕಾರಣ ವಾಗಿರುವುದಿಲ್ಲ. ವಾಸ್ತವವಾಗಿ ಇಲ್ಲಿ ಕಾನ್‌ಸ್ಟೇಬಲ್ ವರ್ಗದವರ ಪಾತ್ರವೇ ಹೆಚ್ಚು ಗಣನೆಗೆ ಬರುವಂಥದ್ದು. ಯಾಕೆಂದರೆ ಕಾನ್‌ಸ್ಟೇಬಲ್‌ಗಳು ಎಲ್ಲ ಕಡೆಯೂ ಇರುತ್ತಾರೆ. ಉನ್ನತ ಅಧಿಕಾರಿಗಳು ಹೋಬಳಿ ಅಥವಾ ತಾಲೂಕು ಕೇಂದ್ರಗಳಲ್ಲಿ ಮಾತ್ರ ಇರುತ್ತಾರೆ.

ಹೀಗಾಗಿ ಸಾಮಾನ್ಯ ಜನರು ಉನ್ನತ ಅಧಿಕಾರಿಯನ್ನು ಭೇಟಿಯಾಗುವುದಕ್ಕಿಂತ ಕಾನ್‌ಸ್ಟೇಬಲ್‌ರನ್ನು ಹೆಚ್ಚು ಭೇಟಿಯಾಗುತ್ತಿರುತ್ತಾರೆ. ಈ ಕಾನ್‌ಸ್ಟೇಬಲ್‌ಗಳು ಪೊಲೀಸ್ ನಿಯಮಗಳ ಮುಖ್ಯ ಅಂಶಗಳ ಬಗ್ಗೆಯೂ ಸಹ ಅಜ್ಞಾನಿಗಳಾಗಿರುತ್ತಾರೆ. ಉದಾ: ಸಾರ್ವಜನಿಕ ರಸ್ತೆಗಳಲ್ಲಿ ಜನರು ಆಶ್ಲೀಲ ಭಾಷೆಯನ್ನು ಬಳಸುತ್ತಿರುವಾಗ ಕಾನ್‌ಸ್ಟೇಬಲ್‌ನೊಬ್ಬ ಆ ಕಡೆಯೇ ಹಾದು ಹೋಗುತ್ತಿದ್ದರೂ ಮಧ್ಯಪ್ರವೇಶಿಸಿ ಅದನ್ನು ತಡೆಯುವುದು ತನ್ನ ಕರ್ತವ್ಯವೆಂಬುದು ಆತನಿಗೆ ತಿಳಿದಿರುವುದಿಲ್ಲ.

ಬಸ್ಸಿನಲ್ಲಿ ನಿಯಮಾತೀತವಾಗಿ ಮಿತಿಮೀರಿದ ಜನರನ್ನು ಹೇರಿಕೊಂಡು ಹೋಗುತ್ತಿದ್ದರೆ ಆ ಬಸ್ಸನ್ನು ತಡೆದು ನಿಲ್ಲಿಸಿ ಆ ಬಗ್ಗೆ ಕ್ರಮಕೈಗೊಳ್ಳುವ ಅಧಿಕಾರ ತನಗಿದೆ ಎಂದು ಅವನಿಗೆ ಗೊತ್ತಿರುವುದಿಲ್ಲ. ಜಮೇದಾರ್ ಹಂತದಲ್ಲಿರುವವರಿಗೆ ಸ್ವಲ್ಪಮಟ್ಟಿಗೆ ಅರಿವಿರುತ್ತದೆ. ಆದರೆ ಕಾನ್‌ಸ್ಟೇಬಲ್‌ಗಳಿಗೆ ಮಾತ್ರ ಇದೇನೂ ಗೊತ್ತಿರುವುದಿಲ್ಲ. ಆದ್ದರಿಂದ, ನನ್ನ ಅಭಿಪ್ರಾಯದಲ್ಲಿ ಇವರಿಗೆ ಸರಿಯಾದ ತರಬೇತಿ ಇಲ್ಲದಿರುವುದೇ ಈ ದೋಷಕ್ಕೆ ಕಾರಣ.

ನಮ್ಮ ಪೊಲೀಸ್ ಇಲಾಖೆಯನ್ನು ಬ್ರಿಟಿಷರಲ್ಲಿರುವ ವ್ಯವಸ್ಥೆಯ ಪ್ರಕಾರ ಪುರ‍್ರೂಪಿಸ ಬೇಕಾದುದು ಅಗತ್ಯವಿದೆ ಎಂದು ಸನ್ಮಾನ್ಯ ಸಚಿವರಿಗೆ ತಿಳಿಸಬಯಸುತ್ತೇನೆ. ಬ್ರಿಟಿಷರ ವ್ಯವಸ್ಥೆ ತುಂಬ ದಕ್ಷ ವಾಗಿದೆ ಎಂಬುದು ನಮಗೆ ಗೊತ್ತು. ಬಹುಶಃ ಅದು ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮವಾದುದು. ಅಲ್ಲಿ ಕಾನ್‌ಸ್ಟೇಬಲ್ ಮುಖ್ಯವಾಗಿರುತ್ತಾನೆಯೇ ಹೊರತು ಉನ್ನತ ಅಧಿಕಾರಿಯಲ್ಲ. ಆತನು ಸಾರ್ವಜನಿಕರೊಂದಿಗೆ ವ್ಯವಹರಿಸಲು ತಿಳಿದಿರುತ್ತಾನೆ. ಅವರಿಗೆ ಬೇಕಾದಂಥ ಮಾಹಿತಿಯನ್ನು ಕೊಡಬಲ್ಲ ತಿಳುವಳಿಕೆ ಹೊಂದಿರುತ್ತಾನೆ.

ತಪ್ಪು ಮಾಡಿದವರನ್ನು ವಿಚಾರಣೆಗೊಳಪಡಿಸುವಲ್ಲಿ ಆತ ಅಧಿಕಾರಿಯಂತೆ ವರ್ತಿಸುವುದು ಮಾತ್ರವಲ್ಲ. ಅಗತ್ಯವಿರುವವರಿಗೆ ರಕ್ಷಣೆ ಒದಗಿಸುವಲ್ಲಿ ನೆರವು ನೀಡುವಲ್ಲಿಯೂ ಅಧಿಕಾರಿಯಂತೆ ವರ್ತಿಸುತ್ತಾನೆ. ಅಷ್ಟೇ ಅಲ್ಲ, ಆತ ಕ್ಷೇಮಾಭಿವೃದ್ಧಿ ಅಧಿಕಾರಿಯೂ ಆಗಿರುತ್ತಾನೆ. ಇಂತಹ ಒಂದು ವ್ಯವಸ್ಥೆಯನ್ನು ನಾನು ಸಿಲೋನಿನಲ್ಲಿ ನೋಡಿದೆ. ನಾನು ಅಲ್ಲಿ ಕೆಲವೊಂದು ಕಾನ್‌ಸ್ಟೇಬಲ್‌ಗಳೊಂದಿಗೆ ಮಾತಾಡಿದೆ. ಅವರು ಅಚ್ಚುಕಟ್ಟಾಗಿ ಇಂಗ್ಲಿಷಿನಲ್ಲಿ ವ್ಯವಹರಿಸಬಲ್ಲವರಾಗಿದ್ದರು. ಸಂಬಂಧಪಟ್ಟ ಪ್ರದೇಶದ ಅಂಕಿ ಅಂಶಗಳನ್ನು ಒದಗಿಸ ಬಲ್ಲವರಾಗಿದ್ದರು. ಮತ್ತಿತರ ವಿವರಗಳಲ್ಲಿ ಅವರಿಗೆ ಅತ್ಯುತ್ತಮ ತರಬೇತಿ ಇದ್ದುದನ್ನು ನೋಡಿ ನನಗೆ ಸಂತೋಷವಾಯಿತು.

ನಮ್ಮಲ್ಲಿ ಕೆಲವೊಂದು ನ್ಯೂನತೆಗಳಿವೆ. ಪುನರ್ ವ್ಯವಸ್ಥೆ ಕುರಿತ ಅಂಶಗಳ ಬಗ್ಗೆ ಸರ್ಕಾರವು ಹಿಂದೆ ಗಮನಹರಿಸಿಲ್ಲ. ಪೊಲೀಸ್ ಅಧಿಕಾರಿಗಳ ಹಣಕಾಸಿನ ಪರಿಸ್ಥಿತಿ ತೀರಾ ಕಳಪೆಯಾಗಿದೆ. ಕಾನ್‌ಸ್ಟೇಬಲ್‌ಗಳಿಗೆ ಕೊಡುವುದಂತೂ ಅತಿ ನಿಕೃಷ್ಟ. ಸಬ್‌ಇನ್‌ಸ್ಪೆಕ್ಟರ್‌ಗೆ ಸಿಗುವುದು ತೀರಾ ನಿಕೃಷ್ಟ. ಈ ಅಧಿಕಾರಿಗಳು ನಿರ್ವಹಿಸುವ ಗುರುತರವಾದ ಹಾಗೂ ಕಷ್ಟಕರವಾದ ಕೆಲಸವನ್ನು ನೋಡಿದಾಗ ಅವರಿಗೆ ಉತ್ತಮವಾದ ವೇತನಗಳನ್ನು ನೀಡುವ ಬಗ್ಗೆ ನಾವು ಗಮನ ಹರಿಸುವುದು ಅಗತ್ಯ. ಪ್ರಸ್ತುತ ಹಣಕಾಸಿನ ಸ್ಥಿತಿಯಲ್ಲಿ ತಕ್ಷಣವೇ ವೇತನ ಬಡ್ತಿಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಆದರೂ ಈ ಸಿಬ್ಬಂದಿಯ ಹಣಕಾಸು ಪರಿಸ್ಥಿತಿಗಳನ್ನು ಸುಧಾರಿಸುವುದಕ್ಕಾಗಿ ಸರ್ಕಾರ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ.

ಇನ್ನು ತರಬೇತಿ ಸೌಲಭ್ಯಗಳಿಗೆ ಸಂಬಂಧಿಸಿದಂತೆ, ತರಬೇತಿ ವಿಷಯಕ್ಕೆ ತಕ್ಷಣವೇ ಮಹತ್ವ ನೀಡುವುದು ಅತ್ಯವಶ್ಯಕವಾಗಿದೆ. ಸಮಾಜ ಘಾತುಕ ಶಕ್ತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ದಿನೇ ದಿನೇ ಸಾರ್ವಜನಿಕರ ಬದುಕು ಹಾಗೂ ಆಸ್ತಿಪಾಸ್ತಿಗಳಿಗೆ ಅಭದ್ರತೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂಥ ಅಂಶಗಳಿಗೆ ರಕ್ಷಣೆ ಒದಗಿಸಬಲ್ಲ ಏಕೈಕ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದು ಅತ್ಯಗತ್ಯ.

ಲಾಕ್‌ಡೌನ್ ಭಾಗಶಃ ತೆರವಾದ ನಂತರ ನಾನು ಪಜಾ/ಪಪಂ ಮೀಸಲಾತಿ ಏರಿಕೆ ಆಯೋಗದ ಕೆಲಸಕ್ಕಾಗಿ ಆಗಾಗ ಹೊರಗೆ ಹೋಗುತ್ತಿದ್ದುದರಿಂದ ನಗರದ ಒಟ್ಟು ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಒಂದು ನೋಟ ಸಿಗುತ್ತಿತ್ತು. ಯಾವಾಗಲೂ ಫುಟ್ ಬೋರ್ಡ್ಗಳಲ್ಲಿ ಜೋತಾಡುತ್ತಿದ್ದ ಜನರಿಂದ ಗಿಜಿಗುಡುತ್ತಿದ್ದ ಸಿಟಿಬಸ್‌ಗಳಲ್ಲಿ ಈಗ ಇಬ್ಬರೋ ಮೂವರೋ ಮಾತ್ರ ಪ್ರಯಾಣಿಕರು. ಅದಕ್ಕೆ ಬದಲಾಗಿ ಎಲ್ಲಿ ನೋಡಿದರೂ ದ್ವಿಚಕ್ರ ವಾಹನಗಳ ಭರಾಟೆ.

ಇಡೀ ಸಂಸಾರವೇ ದ್ವಿಚಕ್ರ ವಾಹನಗಳ ಮೇಲಿರುತ್ತಿತ್ತು. ಪೋಲೀಸರಿಗೆ ಮಾಸ್ಕ್ ಮೇಲೆ ಈಗ ಇನ್ನೊಂದು ಶೀಲ್ಡ್ ಬಂದಿತ್ತು. ಹೋಟೆಲ್‌ಗಳನ್ನು ತೆರೆಯಲು ಅನುಮತಿ ಕೊಟ್ಟಿದ್ದರೂ ಅಲ್ಲಿದ್ದ ಗ್ರಾಹಕರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ನಗರದಲ್ಲಿ ಸಂಚಾರ ವ್ಯವಸ್ಥೆಗೆ ಮುಕ್ತ ಅವಕಾಶ ಕಲ್ಪಿಸಿದ್ದರೂ, ಯಾವುದೋ ಒಂದು ಭಯದ ವಾತಾವರಣ ಇಡೀ ನಗರವನ್ನು ಕವಿದಂತೆ ಇತ್ತು. ಸರ್ಕಾರಿ ಕಚೇರಿಗಳಿಗೆ ಹೋಗಲೇ ಬೇಕಾದ ನೌಕರರು, ಈಗ ಸಾರ್ವಜನಿಕ ವಾಹನ ವ್ಯವಸ್ಥೆಯಲ್ಲಿ ಹೋಗಲು ಭಯಪಡುತ್ತಿದ್ದರಿಂದ ಎಷ್ಟೋ ಮಂದಿ ದಿನಕ್ಕೆ ಸಾವಿರಾರು ರೂಪಾಯಿಗಳಿಗೆ ಬಾಡಿಗೆ ವಾಹನಗಳನ್ನು ಗೊತ್ತುಪಡಿಸಿಕೊಂಡು ಆರ್ಥಿಕವಾಗಿ ಬಳಲುತ್ತಿದ್ದರು.

ಅವರವರ ಬಂಡವಾಳಕ್ಕೆ ತಕ್ಕಂತೆ ದುಡಿದು ನೆಮ್ಮದಿಯಾಗಿದ್ದ ಜನರ ಬದುಕನ್ನು ಕದಡಿದ್ದಕ್ಕೆ ಕರೋನಾ ಒಂದು ನೆಪವಾಗಿತ್ತು. ಇದಕ್ಕೆ ಮೊದಲು, ಕರ್ನಾಟಕವನ್ನು ಒಂದೇ ಸಮನೆ ನೈಸರ್ಗಿಕ ವಿಕೋಪಗಳು ಅಪ್ಪಳಿಸಿ ಜನಸಾಮಾನ್ಯರ ಬದುಕನ್ನು ಚಿಂದಿಚಿಂದಿಮಾಡಿದ್ದವು. ಕೊಡಗಿನಲ್ಲಿ ಆದ ಭೂಕುಸಿತ, ಉತ್ತರ ಕರ್ನಾಟಕದ ನೆರೆ ಹಾವಳಿ, ಈಗ ಕರೋನಾ. ಎಲ್ಲವನ್ನು ಹಣ ಮಾಡುವುದಕ್ಕೆ ಬಳಸಿಕೊಳ್ಳುವ ಆಡಳಿತಗಾರರು…, ಒಳ್ಳೆಯ ಬರಗಾಲ ಎಂದರೆ ಎಲ್ಲರಿಗೂ ಇಷ್ಟ ಎಂಬ ಮಾತಿಗೆ ಸಾಕ್ಷ್ಯ ಒದಗಿಸುವಂತೆ ಕಾಣುತ್ತಿದ್ದರು.

| ಇನ್ನು ನಾಳೆಗೆ |

‍ಲೇಖಕರು Avadhi

June 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಸಮಾಜದ ಬಡವರ್ಗದ ಬಗ್ಗೆ, ಪೊಲೀಸ್ ವ್ಯವಸ್ಥೆಯಲ್ಲಿ ಆಗಬೇಕಾದ ಸುಧಾರಣೆಗಳು ಬಗ್ಗೆ ಕಣ್ತೆರೆಯುವ ಅತ್ಯುತ್ತಮ ಕಂತು ಇದು, ಸಂಧ್ಯಾ. ಅಭಿನಂದನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: