ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 19

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

19

ಕರೋನಾ ತಂದ ಪರಿವರ್ತನೆ

ನನ್ನ ಬರವಣಿಗೆ, ಪುಸ್ತಕ ಪ್ರಕಟಣೆಯ ಈ ದೀರ್ಘಾವಧಿಯಲ್ಲಿ ನಾನು ಕಲಿತ ಪಾಠವೆಂದರೆ ನಮ್ಮ ಪುಸ್ತಕದ ಬಗ್ಗೆ ಆಸಕ್ತಿ ವಹಿಸಿ ತಾವಾಗೇ ಕೇಳಿದವರನ್ನು ಬಿಟ್ಟು ಬೇರೆ ಯಾರಿಗೂ ನಾವಾಗೇ ಪುಸ್ತಕ ಕೊಡಲು ಹೋಗಬಾರದು. ಅದರಲ್ಲಿಯೂ ನಿಜವಾಗಿಯೂ ದೊಡ್ಡವರೆನಿಸಿದ ಸಾಹಿತಿಗಳಿಗೆ ನಮ್ಮ ಪುಸ್ತಕದ ಹೊರೆ ಹೊರಿಸಬಾರದು. ಯಾಕೆಂದರೆ ಒಂದು ಅವರ ವಯಸ್ಸು, ಇನ್ನೊಂದು ಅವರು ನಮ್ಮ ಪುಸ್ತಕ ಓದಿ ತಿಳಿದುಕೊಳ್ಳುವಂಥ ಹೊಸ ವಿಚಾರವೇನು ಅದರಲ್ಲಿರುವುದಿಲ್ಲ. ಒಂದು ವೇಳೆ ಇದ್ದರೂ ಅವರು ಅಷ್ಟರಲ್ಲಾಗಲೇ ಓದುವ ಆಸಕ್ತಿ ಕಳೆದು ಕೊಂಡಿರುತ್ತಾರೆ. ಇದೇ ರೀತಿ ನಮ್ಮ ಪುಸ್ತಕಗಳ ಮುನ್ನುಡಿಗಾಗಿ ದೊಡ್ಡವರಿಗೆ ಕೊಡುವುದು ಅಕ್ಷರಶಃ ಅವರ ಪಾಲಿಗೆ ಹಿಂಸೆಯೇ ಸರಿ.

ನಾನಂತೂ ನನ್ನ ಮೊಟ್ಟ ಮೊದಲ ಕವನ ಸಂಕಲನಕ್ಕಾಗಿ ಹೆಸರಾಂತ ಸಾಹಿತಿಯಿಂದ ಮುನ್ನುಡಿ ಬರೆಸಿದೆ. ಅದು ಮೂರು ಜನ್ಮಕ್ಕಾಗುವಷ್ಟು ಅನುಭವ ಕೊಟ್ಟಿತ್ತು. ಅವರು ಮುನ್ನುಡಿ ಬರೆಯುವುದಿರಲಿ ನನ್ನ ಹಸ್ತಪ್ರತಿಯನ್ನಾದರೂ ಹಿಂದೆ ಪಡೆದುಕೊಳ್ಳಲು ಆಗುತ್ತದೋ ಇಲ್ಲವೋ ಎಂಬ ಹೆದರಿಕೆಯಾಗತೊಡಗಿತು. ಅದೇನೋ ದೈವ ಸಹಾಯವೋ ಎಂಬಂತೆ ಅವರಿಗೆ ನನ್ನಿಂದ ಏನೋ ಕೆಲಸವಾಗಬೇಕಾಗಿ ಬಂದಾಗ ಅವರಿಗೆ ನನ್ನ ಮುನ್ನುಡಿಯ ನೆನಪಾಗಿ ಅಂತೂ ಬರೆದುಕೊಟ್ಟರು. ಇದಾದ ನಂತರ ನಾನು ನನ್ನ ಯಾವ ಪುಸ್ತಕಕ್ಕೂ ಯಾರಿಂದಲೂ ಮುನ್ನುಡಿ ಬರೆಸಿಲ್ಲ.

ಇನ್ನೂ ಒಂದು ತಮಾಷೆಯೆಂದರೆ ಮುನ್ನುಡಿ ಬರೆಯುವವರು ನಿಜವಾಗಿಯೂ ಪುಸ್ತಕವನ್ನು ಪೂರ್ಣವಾಗಿ ಓದಿರುತ್ತಾರೆಯೇ, ನಿಷ್ಪಕ್ಷವಾಗಿ ಬರೆದಿರುವರೋ ಅಥವಾ ಮುಲಾಜಿಗಾಗಿ, ಇಲ್ಲವೇ ತಮಗೆ ಬೇಕಾದವರನ್ನು ಹೊಗಳಿ ಅಟ್ಟಕ್ಕೇರಿಸುವುದಕ್ಕಾಗಿ ಬರೆದಿರುತ್ತಾರೋ ಎಂಬ ಪ್ರಶ್ನೆಗಳೆಲ್ಲಾ ಇವೆ. ಕೆಲವರಂತೂ ಪಾಪ ಇಂಥ ದೊಡ್ಡವರು ಇಲ್ಲಾ ಎನ್ನಲಾಗದೆ ಅಸಹಾಯಕತೆಯಿಂದ ಬರೆದುಕೊಟ್ಟ ಮುನ್ನುಡಿಯನ್ನೇ ತಮ್ಮ ಬಂಡವಾಳವಾಗಿಸಿಕೊಂಡು… ತಮಗಿಂತ ಬೇರೆ ಬರಹಗಾರರಿಲ್ಲ ಎಂಬ ಭ್ರಮೆಯಲ್ಲಿಯೇ ಬದುಕಿ ಬಿಡುತ್ತಾರೆ…

ನಮ್ಮ ಮನೆಯ ಪುಸ್ತಕದ ಸಂಗ್ರಹವೇ ಈಗಿನವರಿಗೆ ಅಪರೂಪದ ದೃಶ್ಯ. ಯಾಕೆಂದರೆ ಈಗಂತೂ ಎಲ್ಲೇ ನೋಡಿ, ಅಂದವಾಗಿ ಮನೆ ಕಟ್ಟಿಸಲು ಪೈಪೋಟಿ ನಡೆಯುತ್ತಿದೆಯೋ ಎಂಬಂತೆ ಒಂದಕ್ಕಿಂತ ಒಂದು ಸುಂದರವಾದ ಮನೆಗಳು. ಹೋರಾಂಗಣಗಳೇ ಗಂಟೆಗಟ್ಟಲೆ ನಿಂತು ನೋಡಬೇಕೆನಿಸುವಷ್ಟು ಸುಂದರವಾಗಿದ್ದರೆ ಒಳಾಂಗಣದ ಬಗ್ಗೆ ಹೇಳುವುದೇ ಬೇಡ. ಅದೊಂದು ಕಲಾಕೃತಿಗಳ ಮ್ಯೂಸಿಯಂನಂತೆ ಇರುತ್ತದೆ. ಈ ವಸ್ತುಗಳನ್ನು ಕಣ್ತುಂಬ ನೋಡಬಹುದು, ನೋಡುತ್ತಲೇ ಇರಬಹುದು. ಆದರೆ ಮುಟ್ಟುವುದು ಅಸಭ್ಯತೆಯಾಗುತ್ತದೆ.

ಈ ಮನೆಗಳಲ್ಲಿ ಇಲ್ಲದ ಏಕೈಕ ವಸ್ತುವೆಂದರೆ ಪುಸ್ತಕ. ಒಂದು ಪುಸ್ತಕಕ್ಕೂ ಅಲ್ಲಿ ಜಾಗವಿರುವುದಿಲ್ಲ. ಕಲಾಕೃತಿಗಳನ್ನು ನೋಡಿ ನೋಡಿ ಕಣ್ಣುಗಳು ಆಯಾಸಗೊಳ್ಳುವುದನ್ನು ಬಿಟ್ಟರೆ ಈ ನೋಟದಿಂದ ಏನೂ ಪ್ರಯೋಜನವಿಲ್ಲ. ಮಾತ್ರವಲ್ಲ ಮನೆಯವರಿಗೂ ಕೂಡ ಈ ವಸ್ತುಗಳ ಮೇಲೆ ಧೂಳು ಕೂರದಂತೆ ನೋಡಿಕೊಳ್ಳುವುದೇ ಇಡೀ ದಿನದ ಕೆಲಸವಾಗಿ ಬಿಡುತ್ತದೆ. ಶ್ರೀಮಂತರಾದರೆ ಪರವಾಗಿಲ್ಲ.

ಒಂದೊಂದು ಕೆಲಸಕ್ಕೆ ಒಬ್ಬೊಬ್ಬ ಆಳನ್ನಿಟ್ಟು ನಿಭಾಯಿಸಬಹುದು. ಆದರೆ ಮಧ್ಯಮ ವರ್ಗದವರಿಗೆ ಇಂಥ ಗೀಳು ಹಿಡಿದರೆ ನಮಗಾಗಿ ಮನೆಯೋ ಮನೆಗಾಗಿ ನಾವೋ ಎಂಬಂತಾಗಿ ಬಿಡುತ್ತದೆ. ಪುಸ್ತಕ ಪ್ರೀತಿಗೆ ಹೆಸರಾದ ಒಬ್ಬ ಸಾಹಿತಿ ಹೇಳುತ್ತಿದ್ದರು: ‘ಹೌದು ನನ್ನ ಮನೆ ಅಚ್ಚುಕಟ್ಟಾಗಿಲ್ಲ. ನನಗೆ ಬೇಕಾದ ಪುಸ್ತಕಗಳೆಲ್ಲ ನನ್ನ ಕೈಗೆಟಕುವಂತೆ ಸುತ್ತಮುತ್ತ ಹರಡಿದ್ದರೆ ನನಗೆ ನೆಮ್ಮದಿ. ಆದರೆ ಕೆಲವೊಂದು ಮನೆಗಳ ಚಪ್ಪಲಿ ಗೂಡೂ ಬಹಳ ಸುಂದರವಾಗಿರುತ್ತದೆ. ಅದು ಅವರವರ ಅಭಿರುಚಿ!’

ನಮ್ಮ ಮನೆಗೆ ಬಂದವರಿಗೆ ಈ ಪುಸ್ತಕಗಳ ಜೋಡಣೆ ಬೆರಗು ಹುಟ್ಟಿಸಿದರೆ ಓದುವ ಹವ್ಯಾಸವೇ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಇವುಗಳನ್ನೆಲ್ಲ ಯಾರಿಗೆ ದಾಟಿಸುವುದು ಎಂಬ ಸಮಸ್ಯೆ ನಮಗೆ. ನಮ್ಮ ಮೊಮ್ಮಕ್ಕಳಿಗೂ, ಮನೆಗೆ ಬಂದ ಚಿಕ್ಕಮಕ್ಕಳಿಗೂ ಈ ಪುಸ್ತಕಗಳ ದೃಶ್ಯ ಭಾರೀ ಅಚ್ಚರಿ ಉಂಟುಮಾಡುತ್ತದೆ. ಒಂದು ದಿನ ನನ್ನ ಮೊಮ್ಮಗ ದೈವಿಕ್, ಅಜ್ಜಿ ಇಷ್ಟೊಂದು ಬುಕ್ಸ್ ಇದೆಯಲ್ಲಾ ಇದನ್ನೆಲ್ಲಾ ನೀವು ಓದಿದ್ದೀರಾ ಅಂತ ಕೇಳಿದ. ನಾನು ತುಂಬ ಪುಸ್ತಕ ಬರೆದಿದ್ದೇನೆ ಎಂದು ತಮ್ಮ ತಾಯಿಯಿಂದ ಕೇಳಿದ್ದ ಇನ್ನೊಂದು ೧೧-೧೨ ವರ್ಷದ ಹುಡಗ, ಈ ಬುಕ್ಸ್ನೆಲ್ಲ ನೀವೇ ಬರೆದಿದ್ದಾ ಎಂದು ಕೇಳಿದ. ಇಲ್ಲ, ಇವುಗಳಲ್ಲಿ ಕೆಲವು ಮಾತ್ರ ನನ್ನವು ಅಂದೆ. ಹೌದಾ, ಹಾಗಾದ್ರೆ ಎಷ್ಟು ಎಂದ. ಸುಮಾರು ೬೫-೭೦ ಅಂದೆ. ಅವನು ತುಂಬಾ ನಿರಾಶೆಯ ದನಿಯಲ್ಲಿ ಓನ್ಲಿ ಸೆವೆನ್ಟಿ ಅಂದ!

ನನ್ನ ಖಾಯಿಲೆಯಿಂದ ನಮ್ಮ ದಿನಚರಿಯಲ್ಲಿ ಆದ ಒಂದು ಅಭೂತಪೂರ್ವ ಬದಲಾವಣೆಯೆಂದರೆ, ಯಾವಯಾವ ಕೆಲಸಗಳನ್ನು ನಾನು ಮಾತ್ರವೇ ಮಾಡಬೇಕಿತ್ತೋ ಮತ್ತು ಅದೇನೋ ದೈವನಿಯಾಮಕ ಎಂಬಂತೆ ನನ್ನಿಂದ ನೀರಿಕ್ಷಿಸಲಾಗುತ್ತಿತ್ತೋ ಅವೆಲ್ಲವೂ ಈಗ ಸದ್ದಿಲ್ಲದೆ ಸಂಪೂರ್ಣವಾಗಿ ಶಂಕರ್‌ಗೆ ವರ್ಗಾವಣೆಯಾಗಿದ್ದವು. ಶಂಕರ್ ತಾವೂ ಸಹ ತಲತಲಾಂತರದಿಂದಲೂ ತಾವೇ ಮಾಡುತ್ತಿದ್ದರೇನೋ ಎಂಬಷ್ಟು ಅಚ್ಚುಕಟ್ಟಾಗಿ ಈ ಕೆಲಸಗಳನ್ನು ನಿರ್ವಹಿಸುತ್ತಿದ್ದರು.

೧೫ ದಿನಗಳ ವರೆಗೆ ಕಟ್ಟುನಿಟ್ಟಾದ ಕ್ವಾರಂಟೈನ್ ಎಂದು ನನ್ನ ಬಿಡುಗಡೆಯ ಸಮಯದಲ್ಲಿ ಕೊಟ್ಟ ಮಾತ್ರೆ ಹಾಗೂ ಮತ್ತಿತರ ವಿವರಗಳ ಚೀಟಿಯಲ್ಲಿ ಬರೆದುಕೊಟ್ಟುಬಿಟ್ಟಿದ್ದರಿಂದ ಈಗ ನನ್ನ ವಾಸ್ತವ್ಯ ಸಂಪೂರ್ಣವಾಗಿ ಮೇಲಿನ ಕೋಣೆಗೆ ವರ್ಗಾವಣೆ ಗೊಂಡಿತ್ತು. ನನ್ನ ಉಟೋಪಚಾರವೆಲ್ಲ ನಾನಿದ್ದಲ್ಲಿಗೇ ನಡೆಯುತ್ತಿತ್ತು. ಶಂಕರ್ ಅಣ್ಣನ ಮೊಮ್ಮಗಳು ಕಾವ್ಯ ಕಾಲೇಜಿಗೆ ಸೇರಬೇಕಾಗಿತ್ತು. ಈಗ ಅವಳು ಬಿಡುವಾಗಿದ್ದರಿಂದ ಅಡುಗೆಯ ಜವಾಬ್ದಾರಿಯನ್ನು ಅವಳು ವಹಿಸಿಕೊಳ್ಳಲು ಬಂದಿದ್ದಳು.

ನಾನು ಮನೆಯಲ್ಲಿದ್ದುಕೊಂಡೇ ಈ ಸೋಂಕಿಗೆ ತುತ್ತಾಗಿದ್ದು ಮತ್ತು ಅದು ಆಸ್ಪತ್ರೆಯನ್ನು ಸೇರುವ ಹಂತಕ್ಕೂ ಹೋಗಿದ್ದನ್ನು ಕಂಡು ಶಂಕರ್‌ಗೆ ಈಗ ಕರೋನಾ ನಿಜವಾದ ಭಯವನ್ನುಂಟುಮಾಡಿತ್ತು. ನನಗೆ ಊಟ ಕೊಡಲು ಬಂದಾಗಲೂ ಅವರಿಗೆ ಎಷ್ಟು ಹೆದರಿಕೆಯಾಗುತ್ತಿತ್ತೆಂದರೆ ಅವರು ಅದನ್ನು ಇಟ್ಟು ಹೋಗುವ ರೀತಿ ನೋಡಿದಾಗ ಮೃಗಾಲಯಗಳಲ್ಲಿ ಪರಿಚಾರಕರು ಹುಲಿಯ ಬೋನಿಗೆ ಕೆಳಗಿನಿಂದ ಸರಕ್ಕನೆ ಆಹಾರವನ್ನು ತೂರಿಸಿ ಹೋಗುವ ದೃಶ್ಯ ನೆನಪಿಗೆ ಬರುತ್ತಿತ್ತು. ನಲವತ್ತೈದು ದಿನಗಳ ಕಾಲ ನಮ್ಮಲ್ಲಿ ಆಂಟಿಬಾಡಿಗಳು ಇರುತ್ತವೆ. ಆದ್ದರಿಂದ ಮತ್ತೆ ಸೋಂಕಾಗುವ ಭೀತಿ ಇಲ್ಲ ಎಂಬ ನಿರಾಳತೆ ನನಗಿತ್ತು. ಆದರೆ ಮನೆಯಲ್ಲಿರುವವರಿಗೆ ಇಂಥ ನಿರಾಳತೆ ಸಾಧ್ಯವಿರಲಿಲ್ಲ.

ಮದುವೆಯಾದಾಗಿಂದಲೂ ಮನೆಗೆಲಸ ಹಾಗೂ ಆಫೀಸು ಮತ್ತು ಬರವಣಿಗೆ, ಸಾಹಿತ್ಯಿಕ ಕಾರ್ಯಕ್ರಮಗಳು ಎಂದು ಸದಾಕಾಲ ತೊಡಗಿಕೊಂಡಿದ್ದ ನನಗೆ ಈಗ ನನ್ನ ಜೀವನದಲ್ಲಿಯೇ ಮೊತ್ತಮೊದಲ ಬಾರಿಗೆ ಏನೂ ಕೆಲಸದ ಭಾರವಿಲ್ಲದೆ ಇಡೀ ಸಮಯ ನನ್ನ ಮುಂದೆ ಕಾಲುಚಾಚಿ ಬಿದ್ದುಕೊಂಡಿರುವಂತೆ ಅನ್ನಿಸುತ್ತಿತ್ತು. ಮನೆಯವರೆಲ್ಲರಿಗೂ ಬಿಸಿಬಿಸಿಯಾಗಿ ದೋಸೆ ಮಾಡಿಕೊಟ್ಟು ಬಿಸಿ ದೋಸೆ ತಿನ್ನುವ ಭಾಗ್ಯದಿಂದ ಎಂದೆಂದಿಗೂ ವಂಚಿತಳಾಗಿದ್ದ ನನಗೆ ಈಗ ನಮ್ಮ ಅಡುಗೆಯ ಕಾರ್ಯಭಾರ ವಹಿಸಿಕೊಂಡ ಕಾವ್ಯಳಿಂದಾಗಿ ಚಪಾತಿಯನ್ನೂ ಸಹ ಬಿಸಿಬಿಸಿಯಾಗಿ ತಿನ್ನುವ ಸೌಭಾಗ್ಯ ಒದಗಿತ್ತು.

ಯಾವಾಗ ಬೇಕಾದರೆ ಅವಾಗ ನಾನು ಹಾಯಾಗಿ ಮಲಗಬಹುದು ಎಂಬ ನಿರಾಳತೆಯ ಅನುಭವವೇ ಇಲ್ಲದ ನನಗೆ ಈ ನಿರಾಳತೆಯಿಂದಾಗಿ ಈಗ ನಿದ್ದೆಯೇ ಬರುತ್ತಿರಲಿಲ್ಲ. ಬೆಳಗಿನ ಜಾವ ೩-೪ ಘಂಟೆಗೆ ಎಚ್ಚರವಾದರೆ ಹೇಗೆ ಸಮಯ ಕಳೆಯುವುದು ಎಂಬ ಸಮಸ್ಯೆ. ಈಗಾಗಲೇ ನಾನು ಕೇಳುತ್ತಿದ್ದ ಹಾಡುಗಳೂ ಸಹ ಬೇಡವೆನ್ನಿಸ ತೊಡಗಿದ್ದವು. ಉಸಿರಾಟದ ಅಭ್ಯಾಸವನ್ನು ಮೊದಲ ಹತ್ತು ಹನ್ನೆರಡು ದಿನಗಳವರೆಗೆ ಸಮಯಕ್ಕೆ ಸರಿಯಾಗಿ ಮಾಡುತ್ತಿದ್ದೆನಾದರೂ ಈಗ ಎಲ್ಲವೂ ಸರಿ ಹೋದಂತೆ ಆದ ಮೇಲೆ ಅಲ್ಲಿಯೂ ಸೋಮಾರಿತನ ಶುರುವಾಯಿತು. ಒಟ್ಟಿನಲ್ಲಿ ಮನುಷ್ಯ ಸ್ವಭಾವವೇ ವಿಚಿತ್ರ.

ಈ ೧೫ ದಿನಗಳಲ್ಲಿ ಆಗಿದ್ದ ಮತ್ತೊಂದು ಮಹತ್ತರ ಬದಲಾವಣೆಯೆಂದರೆ ನಮ್ಮ ತಾರಸಿ ತೋಟದ ಸ್ವರೂಪ. ಮೊದಲೆಲ್ಲಾ ಪ್ರತಿಯೊಂದು ಕುಂಡಕ್ಕೂ ಒಂದೊಂದು ಮಗ್ ನೀರು ಹಾಕಿದರೆ ತಮ್ಮ ಕರ್ತವ್ಯ ಮುಗಿದಂತೆ ಎಂದು ಭಾವಿಸುತ್ತಿದ್ದ ಶಂಕರ್ ಈಗ ಅದೆಷ್ಟು ಮತುವರ್ಜಿಯಿಂದ ಈ ಕೈ ತೋಟವನ್ನು ರೂಪಿಸಿದ್ದರೆಂದರೆ ಪ್ರತಿಯೊಂದು ಗಿಡವೂ ತಾನು ಹೇಗಿರಬೇಕೋ ಹಾಗೆ ಕಂಗೊಳಿಸುತ್ತಿತ್ತು. ಸರಿಯಾದ ಆಸರೆಯಿಲ್ಲದೆ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದ ಬಳ್ಳಿಗಳಿಗೆ ಈಗ ಸೂಕ್ತ ಆಸರೆ ಸಿಕ್ಕಿ ಮಾಟವಾದ ತಮ್ಮ ಎಲೆಗಳ ಆಕಾರದೊಂದಿಗೆ ಸಂತೋಷದಿಂದ ಬೀಗುತ್ತ ನಿಂತಿದ್ದವು.

ಬುಡದಲ್ಲಿನ ಕಳೆಗಿಡಗಳಿಂದಾಗಿ ಉಸಿರು ಸಿಕ್ಕಿಕೊಂಡಂತಾಗಿದ್ದ ಗುಲಾಬಿ ಗಿಡಗಳು ಕಳೆಕಿತ್ತ ಮೇಲೆ ಹೊಸ ಚಿಗುರಿನೊಂದಿಗೆ ನಳನಳಿಸುತ್ತಾ ನಗುತ್ತಿದ್ದವು. ಆದಷ್ಟು ಒಳ್ಳೆಯ ಗಾಳಿ ಸೇವನೆ ಮಾಡಿ ನಮ್ಮ ಪ್ರಾಣವಾಯುವಿನ ಕೊರತೆಯನ್ನು ನೀಗಿಕೊಳ್ಳಬೇಕು ಎಂದು ವಾಟ್ಸಪ್‌ಗಳ ಮೂಲಕ ಅನೇಕ ವೈದ್ಯರು ಹೇಳುತ್ತಿದ್ದ ವೀಡಿಯೋಗಳನ್ನು ನೋಡಿದ್ದೆ. ಈಗ ಅಂತಹ ಪ್ರಶಸ್ತ ವಾತಾವರಣ ನಮ್ಮ ಕೈ ತೋಟದಲ್ಲಿತ್ತು. ಬೆಳಿಗ್ಗೆ ಸಂಜೆ ಸ್ವಲ್ಪವಾದರೂ ಸುಂದರ ವಾತಾವರಣವನ್ನು ಅನುಭವಿಸುವ ಅವಕಾಶ ಈಗ ನನಗೆ ಸಿಕ್ಕಿತು.

ಒಟ್ಟಿನಲ್ಲಿ ಕರೋನಾ ತಂದ ಪರಿವರ್ತನೆಗಳು ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ರೀತಿ ಇವೆ. ಈ ಪರಿವರ್ತನೆಗಳ ರೀತಿ ತಿಳಿಯಬೇಕೆಂದರೆ ಕರೋನಾ ಸಂದರ್ಭದಲ್ಲಿ ಹುಟ್ಟಿಕೊಂಡ ವ್ಯಂಗ್ಯ ಚಿತ್ರಗಳು ಹಾಗೂ ಜೋಕ್‌ಗಳ ಬಗ್ಗೆ ಕಣ್ಣು ಹಾಯಿಸಬೇಕು, ಲಾಕ್‌ಡೌನ್ ಸಂದರ್ಭದಲ್ಲಿ ಯಾವುದೇ ಮನರಂಜನೆ, ಸಂತೋಷ ಕೂಟಗಳು, ಸ್ನೇಹಿತರೊಂದಿಗೆ ಬೆರೆಯುವಿಕೆ, ಪ್ರವಾಸ ಮೊದಲಾದ ಎಲ್ಲವೂಗಳಿಗೂ ಕರೋನಾ ತಡೆಯೊಡ್ಡಿತ್ತು. ತಿಂಗಳುಗಟ್ಟಲೆ ಮನೆಯಲ್ಲೆ ಕುಳಿತಿರಬೇಕಾದ ಏಕತಾನತೆ ಅನೇಕ ಸಂದರ್ಭಗಳಲ್ಲಿ ವಿವಿಧ ರೀತಿಯ ಒತ್ತಡಗಳನ್ನೂ ತಂದೊಡ್ಡಿತು. ಇಂಥ ಸಂದರ್ಭದಲ್ಲಿ ಕರೋನಾ ಕುರಿತಂತೆ ಹುಟ್ಟಿಕೊಂಡ ಹಾಸ್ಯ ಮನಸ್ಸನ್ನು ಹಗುರ ಮಾಡಲು ಬಹಳ ನೆರವಾಯಿತು ಅನ್ನಬಹುದು.

ಆಧುನಿಕ ಜಾನಪದದ ಬಹು ಮುಖ್ಯ ಪ್ರಕಾರವೆಂದರೆ ಹಾಸ್ಯ ಎಂದು ಜಾನಪದ ವಿದ್ವಾಂಸರು ಗುರುತಿಸುತ್ತಾರೆ. ಯಾರೋ ಸೃಷ್ಟಿಸಿದ ಒಂದು ನಗೆಹನಿ, ವ್ಯಂಗ್ಯ ಚಿತ್ರ ಒಬ್ಬರಿಂದೊಬ್ಬರಿಗೆ ಬರಹದ ಮೂಲಕವೋ ಮೊಬೈಲ್ ಮೂಲಕವೋ ಅಂತರ್ಜಾಲದಂಥ ಮಾದ್ಯಮಗಳ ಮೂಲಕವೋ ಪ್ರಸಾರವಾಗುತ್ತ ಒಂದು ನಿರ್ದಿಷ್ಟ ಜನಸಮುದಾಯದಲ್ಲಿ ಪ್ರಚಲಿತವಾಗಿರುತ್ತದೆ. ಜಾನಪದದ ಮೂಲ ಲಕ್ಷಣಗಳಾದ ಅನಾಮಧೇಯತೆ (ಬರಹ ರೂಪದಲ್ಲಿದ್ದರೂ ನಿರ್ದಿಷ್ಟ ವ್ಯಕ್ತಿಯ ಸೃಷ್ಟಿ ಎಂದು ಗುರುತಿಸಲಾಗದ ಅನಾಮಧೇಯತೆ) ಮತ್ತು ಪಾಠಾಂತರಗಳನ್ನು ಪಡೆದುಕೊಳ್ಳುವ ಸ್ವರೂಪದಿಂದಾಗಿ ಕರೋನಾ ಜಾನಪದವು ಆಧುನಿಕ ಜಾನಪದಕ್ಕೆ ಒಳ್ಳೆಯ ಉದಾಹರಣೆ.

ಈ ಸಂದರ್ಭದಲ್ಲಿ ಸೃಷ್ಟಿಯಾದ ಜೋಕುಗಳು, ವ್ಯಂಗ್ಯ ಚಿತ್ರಗಳು ಪ್ರತಿಭಾನ್ವಿತರ ಸೃಷ್ಟಿಯೇ ಆಗಿದ್ದು ಇವುಗಳ ಸಂಗ್ರಹ ಹಾಗೂ ದಾಖಲೀಕರಣವು ಈ ನಿರ್ದಿಷ್ಟ ಕಾಲಘಟ್ಟದ ಮೇಲೆ ಅಪಾರ ಬೆಳಕು ಚೆಲ್ಲುವುದರಲ್ಲಿ ಸಂದೇಹವಿಲ್ಲ. ಸೋಪಿನಿಂದ ಪದೇಪದೇ ಕೈ ತೊಳೆಯುತ್ತಿರಿ ಎಂಬ ಘೋಷ ವಾಕ್ಯವನ್ನು ಆಧರಿಸಿ ಅಸ್ತಿಪಂಜರದಂತಾದ ಕೈ ಬೆರಳುಗಳ ಚಿತ್ರದಿಂದ ಹಿಡಿದು ಮಾಸ್ಕ್ ಧರಿಸುವಿಕೆಯಿಂದಾದ ಅವಾಂತರಗಳು, ಮನೆಯಲ್ಲೆ ಕುಳಿತಿರಬೇಕಾದ ಗಂಡಂದಿರ ಪರಿಪಾಟಲುಗಳು, ಬ್ಯೂಟಿಪಾರ್ಲರ್‌ಗಳಿಲ್ಲದೆ ಹೆಣ್ಣು ಮಕ್ಕಳಲ್ಲಾದ ರೂಪಾಂತರಗಳು…. ಹೀಗೆ ಕರೋನಾಗೆ ಸಂಬಂಧಿಸಿದ ಹಾಸ್ಯವೂ ಸಹ ಜನಸಾಮಾನ್ಯರ ಬದುಕಿನಲ್ಲಾದ ಪಲ್ಲಟಗಳನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿಕೊಟ್ಟಿತು.

| ಇನ್ನೂ ನಾಳೆಗೆ |

‍ಲೇಖಕರು Avadhi

June 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

೧ ಪ್ರತಿಕ್ರಿಯೆ

  1. Prabhu

    ಕೊರೋನಾದಿಂದ ಬವಣೆ ಪಡುತ್ತಿದ್ದರೂ ತಮ್ಮ ಆಸಕ್ತಿಯ ವಿಷಯಗಳಲ್ಲೊಂದಾದ ಜಾನಪದದ ಬಗ್ಗೆಯೂ ಚಿಂತಿಸಿರುವದು ಲೇಖಕಿಯ ವೈಶಿಷ್ಟ್ಯ! ಕೊರೋನಾ ಜಾನಪದವು ಆಧುನಿಕ ಜಾನಪದದಲ್ಲಿ ಸೇರಿದೆ ಎನ್ನುವದು ಮನನೀಯ! ಹಾಗೆ ನೋಡಿದರೆ ಸಂಗೀತ ಕ್ಷೇತ್ರದಲ್ಲೂ ಕೊರೋನಾದ ಪ್ರವೇಶವಾಗಿದೆ. ಅಣಕು ಎಂದೆನ್ನಿಸಿದರೂ ಎಷ್ಟೊಂದು ಮನಃಪೂರ್ವಕವಾದ ರಚನೆಗಳಾಗಿವೆಯೆನ್ನುವದಕ್ಕೆ ಇಲ್ಲೊಂದು ಉದಾಹರಣೆ.

    ಹಮ್ ಸೆ ಆಯಾ ನ ಗಯಾ, ತುಮ್ ಸೆ ಬುಲಾಯಾ ನ ಗಯಾ

    ಇದು 1957ರ “ದೇಖ್ ಕಬಿರಾ ರೋಯಾ ” ಚಿತ್ರಕ್ಕೆ ತಲತ್ ಮೆಹಮೂದ್ ಅವರು ಮದನ್ ಮೋಹನ್ ಅವರ ಸಂಗೀತಕ್ಕೆ ಹಾಡಿದ ರಾಜೇಂದ್ರ ಕೃಷ್ಣರವರ ರಚನೆ. ಅದನ್ನೇ ಪದಗಳನ್ನು ಬದಲಾಯಿಸಿ, ಅಷ್ಟೇ ಮಧುರವಾಗಿ, ಹೀಗೆ ಹಾಡಿದ್ದಾರೆ:

    ಏಕ್ ಮುದ್ದತ್ ಸೆ ಮೇರೇ ಘರ್ ಕೋಈ ಆಯಾ ನ್ ಗಯಾ
    ಫೋನ್ ಸೆ ಹಾಲ್ ಹಿ ಬಸ್ ಪೂಛಾ ಬುಲಾಯಾ ನ ಗಯಾ

    ಈ ಕೆಳಗಿನ linkಲ್ಲಿ ಈ ಪುಟ್ಟ ಹಾಡನ್ನು ಕೇಳಬಹುದು:

    https://www.youtube.com/watch?v=ggi0pMoo5Xw

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This