ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 18

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

18

ಪುಸ್ತಕ ಲೋಕ

ನಮ್ಮ ದೇಹದ ಈ ರಕ್ಷಣಾ ವ್ಯವಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ನಾನು ಸೂಕ್ಷ್ಮ ಗಮನ ಹರಿಸುವಂಥಾಗಿದ್ದು ಈ ಕೋವಿಡ್ ಬಂದಮೇಲೆಯೆ. ನಾನು ಆಸ್ಪತ್ರೆಗೆ ಸೇರುವ ಮೊದಲಿನ ಏಳು ದಿನಗಳಲ್ಲಿ ಈ ಸೋಂಕಿನಿಂದ ಬಳಲುತ್ತಿರುವಾಗ ಕೊನೆಕೊನೆಗಂತೂ ಒಂದು ಬಿಸ್ಕತ್‌ನ್ನು ಅಗಿದು ನುಂಗುವುದೂ ಕಷ್ಟವೆನಿಸತೊಡಗಿತು. ಆಹಾರವನ್ನು ನುರಿಯುವುದಕ್ಕೆ ನುಂಗುವುದಕ್ಕೆ ಸಹಾಯ ಮಾಡುವ ಲಾಲಾರಸದ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿತ್ತು ಎಂದರೂ ಸರಿಯೇ.

ಆಸ್ಪತ್ರೆಯಲ್ಲಿ ಮೊದಲ ಮೂರ‍್ನಾಲ್ಕು ದಿನವೂ ಊಟ ತಿಂಡಿಯ ವಿಷಯದಲ್ಲಿ ನನ್ನ ಸ್ಥಿತಿ ಹೀಗೆಯೇ ಇತ್ತು. ಅಲ್ಲಿ ಊಟತಿಂಡಿಗಳ ಸರಬರಾಜು ಚೆನ್ನಾಗಿಯೇ ಇದ್ದರೂ ನನಗೆ ಮಾತ್ರ ಅದು ರುಚಿ ಎನ್ನಿಸದಿದ್ದಕ್ಕೆ ನನ್ನ ದೇಹಸ್ಥಿತಿಯೇ ಕಾರಣವಾಗಿತ್ತು. ಮಾತ್ರೆಗಳನ್ನು ನುಂಗುವುದೂ ಸಹ ಅಸಾಧ್ಯ ಕಷ್ಟವೆನಿಸಿ ಕೊನೆಗೆ ನೀರಿನಲ್ಲಿ ಮಾತ್ರೆಗಳನ್ನು ಕರಗಿಸಿ ನುಂಗಿದೆ. ಕೈಕಾಲುಗಳೆಲ್ಲ ಸಂವೇದನೆ ಕಳೆದುಕೊಂಡು ಮರಗಟ್ಟಿದಂತೆ ಆಗಿದ್ದವು.

ಎಣಿಸಬಹುದಾದಷ್ಟು ಉಬ್ಬಿಕೊಂಡಿದ್ದ ನರಗಳು ಎಲ್ಲೋ ತಲೆಮರೆಸಿಕೊಂಡಿದ್ದವು. ರಕ್ತ ತೆಗೆದುಕೊಳ್ಳಲು, ಇಂಜೆಕ್ಷನ್ ಕೊಡಲು ಬಂದ ಸಿಸ್ಟರ್‌ಗಳು ರಕ್ತನಾಳವೇ ಸಿಗುತ್ತಿಲ್ಲ ಎಂದು ನನ್ನ ಕೈಗಳನ್ನು ತೋಳುಗಳನ್ನು ಅತ್ತ ಇತ್ತ ತಿರುಚಿ ಹರಸಾಹಸಪಡುತ್ತಿದ್ದರು. ಕೊನೆಗೆ ಸರಿಯಾಗಿ ಸಿಗದೆ ಎರಡು ಮೂರು ಕಡೆ ಚುಚ್ಚಿ ಅಲ್ಲಲ್ಲಿ ಊತ, ರಕ್ತ ಹೆಪ್ಪುಗಟ್ಟಿದ ನೀಲಿಗೆಂಪಿನ ಕಲೆಗಳು ಹಲವಾರು ದಿನ ಉಳಿಯುವಂತಾಗಿದ್ದವು. ಆದರೆ ನನ್ನ ಸ್ಥಿತಿ ಸುಧಾರಿಸುತ್ತಾ ಬಂದಂತೆ ರಕ್ತ ನಾಳಗಳು ನರಗಳು ಒಂದೊಂದಾಗಿ ತಲೆ ಎತ್ತಲಾರಂಭಿಸಿದವು. ಸಿಸ್ಟರ್‌ಗಳು ಇಂಜಕ್ಷನ್ ಕೊಡುವಾಗ ಗಟ್ಟಿಯಾಗಿ ಕಣ್ಣುಮುಚ್ಚಿ ಮುಖ ಅತ್ತ ತಿರುಗಿಸಿಕೊಂಡಿರುತ್ತಿದ್ದ ನಾನು ಈಗ ಅದರ ನೋವೇ ಗೊತ್ತಾಗದೆ ಆಗಲೇ ಆಯಿತಾ ಎಂದು ಅಚ್ಚರಿಯಿಂದ ಕೇಳುತ್ತಿದ್ದೆ. ಕ್ರಮೇಣ ಆಸ್ಪತ್ರೆ ಊಟವೂ ಚೆನ್ನಾಗಿ ರುಚಿಸತೊಡಗಿತ್ತು. ಚಿಕಿತ್ಸೆ ಮುಗಿಸಿ ಮನೆಗೆ ಬಂದ ನಂತರ ಡ್ರಿಪ್‌ಗಾಗಿ ಚುಚ್ಚಿದ್ದ ನೋವು, ಊತ, ಹಾಗೂ ನೀಲಿಗೆಂಪು ಕಲೆಗಳು ಕ್ರಮೇಣ ಮಾಯವಾದವು.

ಒಂದು ದಿನ ಬೆಳಿಗ್ಗೆ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಬ್ರಶ್ ಮಾಡುವಾಗ ಕಣ್ಣಿನಲ್ಲಿ ಏನೋ ಒಂದು ಹೊಳಪಿನ ಚುಕ್ಕೆಯಂತೆ ಕಾಣಿಸಿತು. ಮತ್ತೆ ಮತ್ತೆ ನೋಡಬೇಕೆನಿಸುವಂಥಾ ಹೊಳಪು. ಹಾಗಿದ್ದರೆ ಇದು ಇಷ್ಟು ದಿನ ಖಾಯಿಲೆಯಿಂದಾಗಿ ಮರೆಯಾಗಿತ್ತಾ. ಆರೋಗ್ಯವಾಗಿರುವಾಗ ಯಾವಾಗಲೂ ಕಣ್ಣಿನಲ್ಲಿ ಸಹಜವಾಗಿಯೇ ಇರುವಂಥದ್ದೇ ಎಂಬ ಪ್ರಶ್ನೆ ಕಾಡತೊಡಗಿತು. ಆರೋಗ್ಯವಾಗಿರುವಾಗ ಇಂಥ ಸೂಕ್ಷ್ಮಗಳನ್ನೆಲ್ಲ ಗಮನಿಸಿಕೊಂಡಿದ್ದರೆ ಇಂಥ ಪ್ರಶ್ನೆ ಕಾಡುತ್ತಿರಲಿಲ್ಲವೇನೋ. ಆಗಿನಿಂದ ದಿನವೂ ಇಂಥ ಅಂಶಗಳ ಕಡೆ ಗಮನ ಕೊಡುತ್ತಿದ್ದೇನೆ. ಈ ಬೆಳಕಿನ ಚುಕ್ಕೆ ಕಾಣದಿದ್ದರೆ ಅದು ಅನಾರೋಗ್ಯದ ಸೂಚನೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ.

ಆಸ್ಪತ್ರೆಯಲ್ಲಿ ನಾನು ಸ್ವಲ್ಪ ಸ್ವಸ್ಥಳಾದ ನಂತರ ಮೊದಲು, ಕೈಗೆತ್ತಿಕೊಂಡಿದ್ದು ಓಶೋ ವಿಚಾರಗಳನ್ನು ಸಂಗ್ರಹಿಸಿದ್ದ ಎ ಸಡನ್ ಕ್ಲಾಶ್ ಆಫ್ ಥಂಡರ್ ಎಂಬ ಪುಸ್ತಕ. ಮೊದಲ ೪೦-೫೦ ಪುಟಗಳನ್ನು ಓದುತ್ತಿದ್ದಂತೆ ಆತನ ವ್ಯಾಪಕವಾದ ಓದು; ದೇಶವಿದೇಶಗಳ ಸಂಸ್ಕೃತಿಗಳನ್ನು ಕುರಿತಂತೆ ಆತನ ತಿಳುವಳಿಕೆ; ತೀರಾ ಸಾಮಾನ್ಯವೆಂದು ನಾವು ಅಂದುಕೊಂಡ ವಿಷಯಗಳನ್ನೂ ಸಹ ಆತ ಆಳವಾಗಿ ಬೆದಕಿನೊಡಿ ಏನೋ ಒಂದು ಹೊಸ ವಿಚಾರವನ್ನು ಪ್ರಸ್ತುತ ಪಡಿಸುವ ರೀತಿ; ಮನುಷ್ಯ ಸ್ವಭಾವ, ಇತಿಹಾಸ, ರಾಜಕೀಯ, ವಿಜ್ಞಾನ, ಸಾಹಿತ್ಯ ಇಂಥ ಯಾವುದೇ ವಿಷಯ ಕುರಿತಂತೆ ಆತನ ವಿಶಿಷ್ಟ ವ್ಯಾಖ್ಯಾನ; ಬೇರೆ ಬೇರೆ ಧರ್ಮಗಳ ಬಗ್ಗೆ ಆತನಿದ್ದ ಖಚಿತ ತಿಳುವಳಿಕೆ; ಆತ ಕೊಡುತ್ತಿದ್ದ ನಿತ್ಯ ಜೀವನಕ್ಕೆ ಸಂಬಂಧಿಸಿದಂಥ ಉದಾಹರಣೆಗಳಿಂದಾಗಿ…

ಕೊನೆ ಕೊನೆಯ ದಿನಗಳಲ್ಲಿ ಆತನ ಬರೀ ವಾದವಿವಾದಗಳ ಬಗ್ಗೆ, ಐಷಾರಾಮಿ ಜೀವನದ ಬಗೆಗೇ ಹೆಚ್ಚು ಕೇಳಿದ್ದ ನನಗೆ ಆತನ ಇನ್ನೊಂದು ಮುಖವನ್ನು ಈ ಓದು ಪರಿಚಯಿಸುತ್ತಾ ಹೋಯಿತು. ಆದರೆ ಪುಸ್ತಕಗಳನ್ನು ಪ್ರಕಟಿಸಿ ದುಡ್ಡು ಮಾಡಿಕೊಳ್ಳುವ ದಂಧೆಯವರಿಗೆ ಈ ಓಶೋ ಒಳ್ಳೆಯ ಲಾಭ ತರುವ ಸರಕಾಗಿ ಬಿಟ್ಟಿದ್ದಾನೆ ಅನ್ನಿಸಿತು. ಏಕೆಂದರೆ ನಾನು ತೆಗೆದುಕೊಂಡು ಹೋದ ಪುಸ್ತಕದಲ್ಲಿ ಓಶೋನ ಅದದೇ ವಿಚಾರಗಳು, ಆತ ತನ್ನ ವಿಚಾರಗಳನ್ನು ಸ್ಪಷ್ಟಪಡಿಸುವುದಕ್ಕಾಗಿ ಕೊಡುತ್ತಿದ್ದ ಉದಾಹರಣೆಗಳು, ಹೇಳುತ್ತಿದ್ದ ಉಪಕಥೆಗಳು ಇದೇ ಪುಸ್ತಕದಲ್ಲಿ ಹತ್ತಾರು ಸಲ ಪುನರಾವರ್ತನೆಯಾಗಿ ಪುಸ್ತಕದ ಗಾತ್ರ ಹೆಚ್ಚಿಸುವುದಕ್ಕೆ ಸಹಾಯಕವಾದಂತಿತ್ತು. ಬಹುಶಃ ಈ ಪುಸ್ತಕ ಹೆಚ್ಚೆಂದರೆ ೭೫ ಪುಟದಲ್ಲಿ ಮುಗಿಯುವಂಥದಾಗಿತ್ತು.

ಮುಂದೆ ಓದುತ್ತಾ ಹೋದಂತೆ ಅದದೇ ವಿಚಾರಗಳ ಪುನರಾವರ್ತನೆ ಯಾಗುತ್ತಿದ್ದರಿಂದ ಆ ಪುಸ್ತಕವನ್ನು ನಾನು ಪೂರ್ತಿ ಓದುವ ಗೋಜಿಗೆ ಹೋಗಲಿಲ್ಲ. ಮನೆಗೆ ಬಂದ ನಂತರ ಕ್ವಾರಂಟೈನ್ ನಲ್ಲಿದ್ದಾಗ ಏನಾದರೂ ಓದುವಂಥ ಪುಸ್ತಕಗಳನ್ನು ಒಂದುಕಡೆ ತೆಗೆದಿಟ್ಟುಕೊಂಡು ಒಂದೊಂದಾಗಿ ಮುಗಿಸಬೇಕು ಎಂದು ಕಪಾಟಿನತ್ತ ಕಣ್ಣು ಹಾಯಿಸಿದಾಗ ಓಶೋನವೇ ಇನ್ನೂ ಮೂರು ನಾಲ್ಕು ಪುಸ್ತಕಗಳು ನಮ್ಮ ಮನೆಯಲ್ಲಿಯೇ ಇರುವುದು ಕಂಡು ಅಚ್ಚರಿ ಯಾಯಿತು. ಇದನ್ನು ನಾನು ಎಂದೂ ಗಮನಿಸಿಯೇ ಇರಲಿಲ್ಲ. ಓಶೋ ಪುಸ್ತಕಗಳಲ್ಲದೆ ಕಾಫ್ಕಾ, ಮಾರ್‌ಕ್ವೆಜ್, ಚಿನುವಾ ಅಚಿಬೆಯವೇ ಅಲ್ಲದೆ ಅಮಿತಾವ್ ಘೋಷ್ ಮೊದಲಾದವವರ ವರೆಗೆ ಮಾತ್ರವಲ್ಲ ಇಂಗ್ಲಿಷಿನಲ್ಲಿ ಹೆಸರಿಸಬಹುದಾದ ಎಲ್ಲಾ ಶ್ರೇಷ್ಠ ಸಾಹಿತ್ಯ ಕೃತಿಗಳೂ ಕಪಾಟಿನಲ್ಲಿ ಕುಳಿತಿದ್ದವು.

ಇವೆಲ್ಲವುಗಳ ಬಗ್ಗೆ ನಾನು ಕೇಳಿದ್ದೆ. ಆದರೆ ಓದುವಷ್ಟು ಪುರುಸೊತ್ತು ನನಗೆ ಎಂದೂ ಸಿಕ್ಕಿರಲಿಲ್ಲ. ಮುಂದೆಯೂ ಸಿಗುವುದಿಲ್ಲ. ನಾನು ಒಪ್ಪಿಕೊಂಡ ಯಾವುದೋ ಒಂದು ಕೆಲಸ ಮುಗಿಯುವ ಹೊತ್ತಿಗೆ ಇನ್ನೊಂದು ಕೆಲಸ ಬಂದಿರುತ್ತದೆ ಮತ್ತು ಪ್ರತಿಯೊಂದಕ್ಕೂ ಒಂದು ಅಂತಿಮ ಗಡುವು ಇರುತ್ತದೆ. ಈ ಕೆಲಸಗಳ ಮಧ್ಯೆ ಸೆಮಿನಾರ್‌ಗಳು, ಅಭಿನಂದನಾ ಗ್ರಂಥಗಳಿಗೆ ಸ್ಮರಣ ಸಂಚಿಕೆಗಳಿಗೆ ಲೇಖನ, ಇದೆಲ್ಲದರ ಜೊತೆಗೆ ಸಾಂಪ್ರದಾಯಿಕವಾದ ಪಾರಂಪರಿಕವಾದ ಗೃಹಕೃತ್ಯಗಳು….

ಹೀಗಾಗಿ ನಾನು ಓದಿಲ್ಲದ ಮತ್ತು ಮುಂದೆ ಓದುವ ಸಾಧ್ಯತೆಯೂ ಇಲ್ಲದ ನಮ್ಮ ಮನೆಯ ಪುಸ್ತಕಗಳಲ್ಲಿ ಇವೆಲ್ಲವೂ ಸೇರಿವೆ. ಶಂಕರ್‌ಗೆ ಪುಸ್ತಕಗಳ ಗೀಳು ಯಾವ ಮಟ್ಟದ್ದೆಂದರೆ ಅದನ್ನು ವರ್ಣಿಸಲು ಸಾಧ್ಯವೇ ಇಲ್ಲ. ಇಂಗ್ಲಿಷ್ ಪುಸ್ತಕಗಳೇ ಒಂದು ಕಪಾಟಿನ ತುಂಬಾ ಇದ್ದವು. ನಮ್ಮ ಮನೆಯ ಗ್ರಂಥರಾಶಿಯಲ್ಲಿ ಇರುವ ಹೆಚ್ಚಿನ ಪುಸ್ತಕಗಳೆಲ್ಲ ಶಂಕರ್ ಸಂಗ್ರಹಿಸಿದವು, ಅಥವಾ ಖರೀದಿಸಿ ತಂದಂಥವು.

ಸುಮಾರು ೮೦-೯೦ ರ ದಶಕಗಳಲ್ಲಿ ನಡೆಯುತ್ತಿದ್ದ ಎಲ್ಲ ಪುಸ್ತಕ ಮೇಳಗಳಿಗೂ ಹೋಗಿ ಪುಸ್ತಕಗಳನ್ನು ಖರೀದಿಸುವುದು, ಅದರಲ್ಲಿಯೂ ನಂಬಲೂ ಸಾಧ್ಯವಾಗದಷ್ಟು ಅಗ್ಗದ ಬೆಲೆಗೆ ಸಿಗುತ್ತಿದ್ದ ಸೋವಿಯತ್ ರಷ್ಯಾ ಪ್ರಕಟಣೆಯ ಮಹತ್ವದ ಕೃತಿಗಳನ್ನು ಸೋವಿಯತ್ ಪುಸ್ತಕ ಮೇಳಗಳಲ್ಲಿ ಖರೀದಿಸಿ ತರುವುದು ಆ ದಿನಗಳ ಮುಖ್ಯ ಕಾರ್ಯ ಚಟುವಟಿಕೆಯಾಗಿತ್ತು. ಪುಸ್ತಕ ಖರೀದಿಯ ಇನ್ನೊಂದು ರೀತಿಯೆಂದರೆ ಭಾನುವಾರ ಬೆಳಿಗ್ಗೆ ತಿಂಡಿ ತಿಂದ ನಂತರ ಅವೆನ್ಯೂ ರಸ್ತೆಯ ಬೀದಿಬದಿಯ ಹಳೆ ಪುಸ್ತಕಗಳ ಖರೀದಿಗೆ ಹೋಗುವುದು. ಹೀಗೆ ತಂದ ಪುಸ್ತಕಗಳಿಗೆ ಹಳೆಯ ಕ್ಯಾಲೆಂಡರ್‌ಗಳ ವರ್ಣಮಯವಾದ ಬೈಂಡ್‌ಹಾಕಿ, ಸುಂದರವಾದ ಅಕ್ಷರಗಳಲ್ಲಿ ಪುಸ್ತಕದ ಹೆಸರು ಬರೆದಿಡುವುದೇ ಇಡೀ ಭಾನುವಾರದ ಕೆಲಸ.

ಹೀಗೆ ಪುಸ್ತಕಗಳ ಸಂಗ್ರಹಣೆಗೆ ಅವರಿಗೆ ಜೊತೆಯಾಗಿದ್ದ ಆತ್ಮೀಯ ಗೆಳೆಯ ಜಿ.ಆರ್. ತಿಪ್ಪೇಸ್ವಾಮಿ. ಮೈಸೂರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಈಗ ಕೆಲವು ವರ್ಷಗಳ ಹಿಂದೆ ತೀರಿಕೊಂಡರು. ಅವರಿಬ್ಬರೂ ಕೆಲಸ ಮಾಡುವ ಹೊತ್ತಿಗೆ ನಾನು ಭಾನುವಾರದ ವಿಶೇಷ ಮಟನ್ ಚಿಕನ್‌ಗಳನ್ನು ಮಾಡುತ್ತಿದ್ದರಿಂದ ಅವರಿಗೆ ಇನ್ನಷ್ಟು ಹುರುಪು. ಇಂದಿಗೂ ವರ್ಣಮಯವಾದ ಬೈಂಡಿಗ್‌ನ ಆ ಪುಸ್ತಕಗಳು ನಮ್ಮ ಮನೆಯಲ್ಲಿ ಜೋಪಾನವಾಗಿವೆ. ನಾನು ನನ್ನ ಲೇಖನಗಳ ರೆಫರೆನ್ಸ್ ಗೆಂದು ಅವುಗಳನ್ನು ಕೈಗೆತ್ತಿಕೊಂಡಾಗ ಅವು ಗತಿಸಿಹೋದ ಒಂದಾನೊಂದು ಕಾಲದ ಸುಂದರ ನೆನಪನ್ನು ತಂದು ಮನಸ್ಸನ್ನು ಮುದಗೊಳಿಸುತ್ತವೆ.

ನನ್ನ ಸಂಗ್ರಹದಲ್ಲಿರುವ ಪುಸ್ತಕಗಳಲ್ಲಿ ಕಾಂಪ್ಲಿಮೆಂಟರಿಯಾಗಿ, ಉಡುಗೊರೆಯಾಗಿ, ಸಂಭಾವನೆಯಾಗಿ ವಿಮರ್ಶೆಗಾಗಿ, ಬಹುಮಾನ ಸ್ಪರ್ಧೆಯ ತೀರ್ಪಿಗಾಗಿ ಬರುವ ಪುಸ್ತಕಗಳು ವರ್ಷಕ್ಕೆ ಏನಿಲ್ಲ ವೆಂದರೂ ಕನಿಷ್ಠ ನೂರು ಹೊಸ ಪುಸ್ತಕಗಳಾದರೂ ಸೇರ್ಪಡೆಯಾಗಿರುತ್ತವೆ. ಈ ಕಾಂಪ್ಲಿಮೆಂಟರಿಯಾಗಿ ಬಂದ ಪುಸ್ತಕಗಳ ವಿಷಯದಲ್ಲಿ ಒಂದು ತೊಂದರೆ ಎಂದರೆ ನಾವು ಅವುಗಳನ್ನು ಓದಿ ನಮ್ಮ ಅಭಿಪ್ರಾಯ ತಿಳಿಸಬೇಕು ಎಂಬುದಾಗಿರುತ್ತದೆ.

ಸುಮ್ಮನೆ ಪುಸ್ತಕ ಕೊಟ್ಟಿದ್ದರೆ ಪರವಾಗಿಲ್ಲ, ಆದರೆ ಒಪ್ಪಿಕೊಂಡ ನೂರೆಂಟು ಕೆಲಸಗಳ ಮಧ್ಯದಲ್ಲಿ ಈ ಅಭಿಪ್ರಾಯ ಬರೆಯುವುದಕ್ಕಾಗಿ ಅಂಥ ಪುಸ್ತಕಗಳನ್ನು ಓದುವುದು ನಿಜಕ್ಕೂ ತ್ರಾಸದಾಯಕ. ಹೀಗೆ ಒಂದು ಕಾರ್ಯಕ್ರಮದಲ್ಲಿ ತಮ್ಮ ಪುಸ್ತಕ ಕೊಟ್ಟಿದ್ದ ಒಬ್ಬರು, ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಅಂದರು. ಯಥಾಪ್ರಕಾರ ಅದರ ಮೇಲೆ ಕಣ್ಣಾಡಿಸುವಷ್ಟು ಸಮಯವೂ ನನಗೆ ಸಿಕ್ಕಿರಲಿಲ್ಲ. ಆದರೆ ಪ್ರತಿಯೊಂದು ಸಾಹಿತ್ಯಿಕ ಕಾರ್ಯಕ್ರಮದಲ್ಲಿಯೂ ಅವರು ಸಿಗುತ್ತಿದ್ದರು. ನನ್ನ ಪುಸ್ತಕ ಓದಿದಿರಾ ಎಂದು ಕೇಳುತ್ತಿದ್ದರು.

ಹೀಗೆ ಮೂರು ನಾಲ್ಕು ತಿಂಗಳಾಗುತ್ತ ಬಂದವು. ಏನೇನೋ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಮೂರು ನಾಲ್ಕು ಕಡೆ ಅವರ ಪುಸ್ತಕದ ಬಗ್ಗೆ ಬೇರೆ ಬೇರೆಯವರಿಂದ ಬಂದ ಅಭಿಪ್ರಾಯಗಳ ಪ್ರಕಟಣೆಯೂ ಆಗಿ (ಬಹುಶಃ ಅವರಿಗೂ ಹೀಗೆ ದುಂಬಾಲು ಬಿದ್ದು ಬರೆಸಿರಬಹುದು.) ಅವರಿಗೆ ತಾವೊಬ್ಬ ಬಹು ದೊಡ್ಡ ಸಾಹಿತಿ ಎಂಬ ಭಾವನೆ ಬೆಳೆದುಬಿಟ್ಟಿತ್ತು. ಇನ್ನು ನನಗೆ ಅದನ್ನು ಓದದೆ ಬೇರೆ ದಾರಿಯೇ ಇರಲಿಲ್ಲ. ಆದರೆ ಅಷ್ಟರಲ್ಲಿ ಆ ಪುಸ್ತಕ ನಮ್ಮ ಮನೆಯ ಗ್ರಂಥರಾಶಿಯಲ್ಲಿ ಎಲ್ಲೋ ಸೇರಿ ಹೋಗಿತ್ತು. ಇದು ಇನ್ನೂ ತಲೆನೋವಾಯಿತು. ಅದನ್ನು ಹುಡುಕುವುದಕ್ಕೆ ಹೋದರೆ ಬಹುಶಃ ಅವರ ಪುಸ್ತಕವನ್ನು ಇತರರಿಂದಾದರೂ ಪಡೆದು ಓದುವುದಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು. ಎಷ್ಟೋ ವೇಳೆ ನಾನು ಒಮ್ಮೊಮ್ಮೆ ನನಗೆ ಅಗತ್ಯವಾದ ಪುಸ್ತಕವನ್ನು ಬೇರೆಲ್ಲೋ ಇಟ್ಟು ಕೊನೆಗೆ ಅದನ್ನು ಹುಡುಕುವ ತಲೆನೋವು ತಪ್ಪಿಸಿಕೊಳ್ಳಲು ನೇರವಾಗಿ ಲೈಬ್ರರಿಗೇ ಹೋಗಿದ್ದೂ ಇದೆ.

ನನ್ನ ಅದೃಷ್ಟಕ್ಕೆ ಬೇರೆ ಏನೋ ಹುಡುಕುವಾಗ ಇವರ ಪುಸ್ತಕ ಸಿಕ್ಕಿತು. ಬದುಕಿದೆಯಾ ಬಡಜೀವ ಎಂದುಕೊಂಡು ನನಗೆ ಬೇಕಾದ ಪುಸ್ತಕದ ಹುಡುಕಾಟವನ್ನು ಆ ಕ್ಷಣಕ್ಕೆ ಅಲ್ಲೇ ನಿಲ್ಲಿಸಿ ಅವರ ಪುಸ್ತಕದ ಹತ್ತಾರು ಪುಟಗಳನ್ನು ಓದಿ ಅದರ ಮುಂದಿನ ಭಾಗ ಹೇಗಿರುತ್ತದೆ ಎಂಬುದು ಖಾತ್ರಿಯಾದ ನಂತರ ಇನ್ನು ಅವರು ಯಾವಾಗ ಎಲ್ಲಿ ಸಿಕ್ಕರೂ ಪರವಾಗಿಲ್ಲ ಅವರು ಕೇಳುವುದಕ್ಕಿಂತ ಮೊದಲು ನಾನೇ ಹೇಳಿಬಿಡುತ್ತೇನೆ ಎಂದು ಧೈರ್ಯತಂದುಕೊಂಡೆ. ಆದರೆ ಈ ಅವಕಾಶ ಒದಗಲೇ ಇಲ್ಲ.

ಕರೋನಾ ಬಂದು ಎಲ್ಲ ಸಾಹಿತ್ಯಿಕ ಕಾರ್ಯಕ್ರಮಗಳಿಗೂ ಒಂದು ಅರ್ಥದಲ್ಲಿ ಪೂರ್ಣ ವಿರಾಮ ಹಾಕಿತ್ತು. ಕರೋನಾಯುಗ ಮುಗಿದು ಎಲ್ಲವೂ ಮಾಮೂಲಿಯಂತೆ ನಡೆಯುವಂತಾದಾಗ ಅವರು ಪುನಃ ಸಿಕ್ಕಿ ತಮ್ಮ ಪುಸ್ತಕದ ಬಗ್ಗೆ ಕೇಳಿದರೆ, ಅಲ್ಲಿಯವರೆಗೆ ನನ್ನ ಅಭಿಪ್ರಾಯ ನೆನಪಿನಲ್ಲಿರುವುದೇ? ಎಂಬ ಹೊಸ ಚಿಂತೆ ಪ್ರಾರಂಭವಾಗಿದೆ…

| ಇನ್ನೂ ನಾಳೆಗೆ |

‍ಲೇಖಕರು Avadhi

June 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: