ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 17

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

17

ದೇಹದೊಂದಿಗೆ ಮಾತುಕತೆ

ಆಕಳಿಕೆ, ಸಣ್ಣದಾದ ತೇಗು, ಸೀನು, ಸೊಂಪಾದ ನಿದ್ದೆ, ಇವೆಲ್ಲವೂ ನಾವು ಆರೋಗ್ಯವಾಗಿರುವುದರ ಮತ್ತು ನಮ್ಮ ದೇಹಸ್ಥಿತಿ ಸರಿಯಾಗಿರುವುದರ ಸೂಚನೆಗಳು. ನಾನು ಗುಣಮುಖಳಾಗಿ ಮನೆಗೆ ಬಂದು ಪುನಃ ೧೫ ದಿನಗಳವರೆಗೆ ಕ್ವಾರಂಟೈನ್‌ನಲ್ಲಿದ್ದರೂ ಸಂಪೂರ್ಣವಾಗಿ ಸರಿಹೋಗಿದ್ದೇನೆ ಎಂದು ಖಚಿತವಾಗಿದ್ದು ನನಗೆ ಸರಿಯಾಗಿ ಆಕಳಿಕೆ ಬಂದ ನಂತರವೇ.

ಇಷ್ಟಾಗುವಾಗ ಕ್ವಾರಂಟೈನ್‌ನ ಅವಧಿಯೂ ಮೀರಿ ಮತ್ತೂ ೧೦-೧೫ ದಿನಗಳಾಗಿದ್ದವು. ಅಲ್ಲಿಯ ತನಕ ಯಾವಾಗಲಾದರೂ ಆಕಳಿಕೆ ಬಂದಂತಾಗುವುದು. ಆದರೆ ಅದು ಎಲ್ಲೆಲ್ಲೋ ಸಿಕ್ಕಿಹಾಕಿಕೊಂಡು ಬಾಯಿಂದ ಹೊರಗೆ ಬರುವಷ್ಟರಲ್ಲಿ ಅದು ಆಕಳಿಕೆಯೇ ಆಗಿರುತ್ತಿರಲಿಲ್ಲ. ಆ ಎಂದು ಬಾಯಿತೆರೆದು ಸಶಬ್ದವಾಗಿ ಆಕಳಿಸಿದಾಗ ಉಂಟಾಗುವ ಆನಂದವೇ ಬೇರೆ. ಇಡೀ ಮೈಯ ಬಿಗುವೆಲ್ಲ ಸಡಿಲವಾದಂಥ ಸುಖಾನುಭವ. ಆದರೆ ನಾವು ಸಭ್ಯತೆಯ ಹೆಸರಿನಲ್ಲಿ ಮುಕ್ತವಾಗಿ ಆಕಳಿಸುವುದೇ ಇಲ್ಲ.

ಸಾರ್ವಜನಿಕವಾಗಿ ಹಾಗೆ ಯಾರಾದರೂ ಮುಕ್ತವಾಗಿ ಆಕಳಿಸಿದರೆ ಅಂಥವರ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತೇವೆ. ಸಭ್ಯತೆಯ ಹೆಸರಿನಲ್ಲಿ ನಾವು ಅದರ ನಿಜವಾದ ಆನಂದವನ್ನು ಸುಖವನ್ನು ಕಳೆದುಕೊಂಡಿರುತ್ತೇವೆ. ಆದರೆ ಮನೆಯಲ್ಲಿ ನಾವೇ ನಾವಾಗಿರುವಾಗ ಕೆಲವೊಮ್ಮೆ ನಮ್ಮ ಸಹಜ ಅಭಿವ್ಯಕ್ತಿಗಳು ಹಾಗೇ ಉಳಿದುಕೊಂಡಿರುತ್ತವೆ. ನನ್ನ ಮೊಮ್ಮಗು ಮಲಗಿದ್ದಾಗ ಹೀಗೇ ಮುಕ್ತವಾಗಿ ಆ ಎಂದು ಸಶಬ್ದವಾಗಿ ಆಕಳಿಸಿ ಮಗಳಿಂದ ಬೈಸಿಕೊಂಡದ್ದೂ ಇದೆ. ಆಕಳಿಕೆಯ ವಿಷಯ ಸ್ವಲ್ಪ ನಿಗೂಢವೂ ಹೌದು. ಆಕಳಿಸಿದಾಗ ಹೊರಬರುವ ಅಷ್ಟೊಂದು ಗಾಳಿ ಒಟ್ಟಾಗಿ ಹೇಗೆ ಬರುತ್ತದೆ ಅದು ಎಲ್ಲಿ ಸೇರಿಕೊಂಡಿರುತ್ತದೆ ಎಂಬುದೇ ಒಂದು ಕುತೂಹಲಕರ ಸಂಗತಿ. ಅದಕ್ಕಿಂತ ಮುಖ್ಯವಾಗಿ ಆಕಳಿಕೆ ಎಂಬ ಶಬ್ದವನ್ನು ಕೇಳಿದ ಕೂಡಲೇ ಅಥವಾ ನೆನೆಸಿಕೊಂಡ ಕೂಡಲೇ ನಮಗೂ ಆಕಳಿಕೆ ಬಂದು ಬಿಡುವುದೂ ಸಹ ಅಷ್ಟೇ ಖಚಿತ.

ಆಕಳಿಕೆಗಳು ಒಮ್ಮೊಮ್ಮೆ ಒಂದರ ಹಿಂದೊಂದರಂತೆ ಪುಂಖಾನುಪುಂಖವಾಗಿ ಬರುವುದುಂಟು. ಆಗ ಮಾತ್ರ ನಿಜಕ್ಕೂ ಹೆದರಿಕೆಯಾಗುತ್ತದೆ. ನನಗೆ ಹಾಗೇ ಆಯಿತು. ಸರಿಯಾಗಿ ಆಕಳಿಕೆ ಬಂದ ಮೇಲೆ ನಾಲ್ಕೆದು ಸಲ ಹಾಗೇ ಏಳೆಂಟು ಅದೇ ಪ್ರಮಾಣದ ಆಕಳಿಕೆಗಳು ಒಂದರ ಹಿಂದೊಂದರಂತೆ ಸತತವಾಗಿ ಬಂದಾಗ ಮತ್ತೇನಾದರೂ ಆಸ್ವಸ್ಥತೆಯ ಸೂಚನೆಯೇ ಇದು, ಹೀಗೇ ಮುಂದುವರೆದರೆ ಗತಿ ಏನು ಎಂದು ಹೆದರಿಕೆಯಾಯಿತು. ಆದರೆ ಅದು ಹಾಗೆ ಮುಂದವರೆಯಲಿಲ್ಲ. ನೆಮ್ಮದಿಯ ಉಸಿರುಬಿಟ್ಟೆ.

ಆದರೂ ಒಂದು ಕುತೂಹಲ. ಅಷ್ಟೊಂದು ದಿನ ಆಕಳಿಸದಿದ್ದ ಕಾರಣಕ್ಕೆ ಅಷ್ಟೆಲ್ಲ ಆಕಳಿಕೆಗಳು ಬಂದವೆ? ಆಕಳಿಕೆಯ ಮೂಲಕ ಹೊರ ಬರಬೇಕಾಗಿದ್ದ ಗಾಳಿ ಇಷ್ಟು ದಿನ ಒಳಗೇ ಸೇರಿಕೊಂಡಿದ್ದು ಹೀಗೆ ಒಟ್ಟೊಟ್ಟಾಗಿ ಹೊರಬಂದು ಮುಕ್ತವಾಯಿತೆ? ವಿವಿಧ ವಾಯುಗಳ ಬಗ್ಗೆ ಹೇಳಿರುವ ಯೋಗ ವಿಜ್ಞಾನದಲ್ಲಿ ಆಕಳಿಕೆಗೆ ಕಾರಣವಾಗುವ ದೇವದತ್ತ ವಾಯುವಿನ ಬಗ್ಗೆ ಇನ್ನಷ್ಟು ತಿಳಿದುಕೊಂಡರೆ ಈ ಪ್ರಶ್ನೆಗೆ ಉತ್ತರ ಸಿಗಬಹುದೇನೋ.

ಇನ್ನು ಸೀನುವಿಕೆ. ಇದರ ಕಥೆ ಆಕಳಿಕೆಗಿಂತ ಸ್ವಲ್ಪ ಭಿನ್ನ. ಆಕಳಿಕೆ ಸರಿಯಾದ ಮೇಲೆ ಇನ್ನೂ ಅನೇಕ ದಿನಗಳ ನಂತರ ಸರಿಯಾದ ಸೀನು ಬಂತು. ಸಾಮಾನ್ಯವಾಗಿ ಸೀನು ಬಂದಂತಾಗಿ ಬರದೇ ಹೋಗುವುದು ಬಹಳಷ್ಟು ಜನರ ಅನುಭವಕ್ಕೆ ಬಂದಿರುತ್ತದೆ. ಬರಬೇಕಾಗಿದ್ದ ಸೀನು ಬರದೇ ಹೋದರೆ ಒಂದು ಥರಾ ಹಿಂಸೆ. ಮುಕ್ತವಾಗಿ ಸೀನಿದಾಗ ಏನೋ ಒಂದು ಹಗುರವಾದ ಬಿಡುಗಡೆಯ ಭಾವನೆ. ಆದರೂ ಸೀನಿನ ವಿಷಯದಲ್ಲಿ ಆಕಳಿಕೆಗಿಂತ ಹೆಚ್ಚಿನ ಸಭ್ಯತೆ.

ಮುಕ್ತವಾಗಿ ಸೀನದೆ ಹಾಗೆಯೇ ಮೂಗನ್ನುಜ್ಜಿಕೊಂಡು ನುಂಗಿ ಕೊಳ್ಳುವವರ ಸಂಖ್ಯೆಯೇ ಬಹಳ. ನಾಗರಿಕತೆ ಹೆಚ್ಚಾದಷ್ಟೂ ಸೀನುವಿಕೆಯನ್ನು ನುಂಗಿಕೊಳ್ಳುವ ಸಭ್ಯತೆಯೂ ಹೆಚ್ಚು. ಪಾಶ್ಚಿಮಾತ್ಯರಲ್ಲಿ ಅದರಲ್ಲಿಯೂ ಮಹಿಳೆಯರಲ್ಲಿ ಈ ‘ಸಭ್ಯತೆ’ ಗರಿಷ್ಟ ಪ್ರಮಾಣದಲ್ಲಿದೆ. ಆದರೆ ನಾಗರಿಕತೆಯ ಪ್ರಮಾಣ ಕಡಿಮೆಯಾದಷ್ಟೂ ಈ ಸೀನಿನ ಆರ್ಭಟ ಎಷ್ಟು ಹೆಚ್ಚಾಗಿರುತ್ತದೆಂದರೆ ದೊಡ್ಡವರೂ ಸಹ ಈ ಆಕಸ್ಮಿಕ ಸದ್ದಿನಿಂದ ಬೆಚ್ಚಿ ಬೀಳುತ್ತಾರೆ. ಇನ್ನು ಶಸ್ತ್ರ ಚಿಕಿತ್ಸೆಯಾದವರಿಗೆ ಸೀನು ಬರಲೇ ಬಾರದು. ಹಾಗೇನಾದರೂ ಸೀನಿದರೆ ಹಾಕಿದ ಹೊಲಿಗೆಗಳೆಲ್ಲಾ ಬಿಚ್ಚಿಕೊಳ್ಳುವುದು ಶತಃಸಿದ್ಧವಾದ ಮಾತು.

ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಮೇಡಂ ಒಬ್ಬರಿಗೆ ವಿಪರೀತವಾದ ಸೀನಿನ ಖಾಯಿಲೆ ಇತ್ತು. ಪುಂಖಾನುಪುಂಖವಾಗಿ ಸೀನುತ್ತಿದ್ದರು. ಸಭೆ ಸಮಾರಂಭಗಳು ನಡೆಯುತ್ತಿರುವಾಗಲೂ ಅವರಿಗೆ ಧಾರಾಳವಾಗಿ ಸೀನುಗಳು ಬರುತ್ತಿದ್ದವು. ಅದನ್ನು ತಡೆದುಕೊಳ್ಳಲು ಅವರಿಗೆ ಆಗುತ್ತಿರಲಿಲ್ಲ. ಎಲ್ಲರ ಗಮನವೂ ಅವರತ್ತ ಹರಿದು ಒಂದಷ್ಟು ಹೊತ್ತು ಸಭೆಯ ವಾತಾವರಣವೇ ಬದಲಾಗಿ ಬಿಡುತ್ತಿತ್ತು. ಇದಿಷ್ಟೇ ಆಗಿದ್ದರೆ ಸರಿ, ದಿನವೂ ನಾವು ಶಾಲೆಯ ಆರಂಭಕ್ಕೆ ಪ್ರಾರ್ಥನೆ ಮಾಡಿ ಕೊನೆಗೆ ರಾಷ್ಟ್ರಗೀತೆ ಹಾಡುವಾಗ ಮೇಡಂ ಸೀನು ರಾಷ್ಟ್ರಗೀತೆಯ ಗಾಂಭರ‍್ಯವನ್ನು ಒಂದೇ ಕ್ಷಣದಲ್ಲಿ ಧೂಳೀಪಟ ಮಾಡುತ್ತಿತ್ತು.

ಅತಿಯಾದ ಆಕಳಿಕೆ ಅಥವಾ ಸೀನುವಿಕೆ ಅಥವಾ ಬಿಕ್ಕಳಿಕೆಗಳು ಕೆಲವರನ್ನು ಕಾಡುವುದುಂಟು. ಅಂತಹವುಗಳ ನಿವಾರಣೆಗೆ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಏನಾದರೂ ಪರಿಹಾರಗಳಿವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಕ್ಕಳಿಕೆಯ ವಿಷಯದಲ್ಲಿ ಮಾತ್ರ ಅನೇಕ ವಿಧದ ನಂಬಿಕೆಗಳಿವೆ. ಒಬ್ಬೊಬ್ಬರು ಒಂದೊಂದು ರೀತಿಯ ಪರಿಹಾರ ಕ್ರಮಗಳನ್ನು ಹೇಳುವುದೂ ಉಂಟು. ಒಂದೇ ಸಮನೆ ಬಿಕ್ಕಳಿಸುತ್ತಿದ್ದರೆ ನೀರು ಕುಡಿದರೆ ಸರಿ ಹೋಗುತ್ತದೆ, ಬಾಯಿಗೆ ಸಕ್ಕರೆ ಹಾಕಿಕೊಂಡರೆ ಸರಿಹೋಗುತ್ತದೆ. ಅವರು ಬೆಚ್ಚಿ ಬೀಳುವಂತೆ ಭಯ ಪಡಿಸಿದರೆ ಸರಿಹೋಗುತ್ತದೆ ಇತ್ಯಾದಿ.

ನಮ್ಮ ಪಾಪು, ಹೀಗೆ ಇಡೀ ಮನೆಗೇ ಕೇಳಿಸುವಂತೆ ಒಂದೇ ಸಮನೆ ಬಿಕ್ಕಳಿಸಿದಾಗ ನಮಗೆ ಹೆದರಿಕೆಯಾಗುತ್ತಿತ್ತು. ಆದರೆ ಬಾಣಂತನ ಮಾಡಲು ಹಳ್ಳಿಯಿಂದ ಬಂದಿದ್ದ ಸುಭದ್ರ (ಶಂಕರ್ ಅಣ್ಣನ ಮಗಳು) ಹೀಗೆ ಮಗು ಬಿಕ್ಕಳಿಸಿದಾಗ ಟವೆಲಿನಿಂದ ಒಂದು ದಾರದ ಎಳೆಯನ್ನು ಎಳೆದುಕೊಂಡು ಅದನ್ನು ಬಾಯಲ್ಲಿ ಒದ್ದೆಮಾಡಿ ಕೊಂಡು ಪಾಪುವಿನ ನೆತ್ತಿ ಮೇಲೆ ಹಾಕುತ್ತಿದ್ದಳು. ಅಂದರೆ ನೆತ್ತಿ ಒಣಗಿದಂತಾದಾಗ ಬಿಕ್ಕಳಿಕೆ ಬರುತ್ತದೆಯೇ? ಇವೆಲ್ಲ ವಿಧಾನಗಳು ಪ್ರಾಯೋಗಿಕವಾಗಿ ರುಜುವಾತು ಮಾಡಬೇಕಾದ ಸಂಗತಿಗಳಲ್ಲವೇ?

ಊಟವಾದ ನಂತರ ಸಣ್ಣನೆಯ ತೇಗು ಬರುವುದೂ ಸಹ ಆರೋಗ್ಯದ ಲಕ್ಷಣ. ಇಲ್ಲಿಯೂ ಸಭ್ಯತೆ ಅಸಭ್ಯತೆಯ ಪ್ರಶ್ನೆ ಇದ್ದೇ ಇದೆ. ಆದರೆ ಈ ತೇಗು ಬಹಳ ಮುಖ್ಯ. ಅದು ಆಹಾರವು ಸರಿಯಾದ ಮಾರ್ಗದಲ್ಲಿ ಜಠರಕ್ಕೆ ಇಳಿದಿದೆ ಎಂಬುದರ ಸೂಚನೆ. ಹಾಲು ಕುಡಿಯುವ, ಅದರಲ್ಲಿಯೂ ಬಾಟಲಿಯ ಹಾಲು ಕುಡಿಯುವ ಮಕ್ಕಳ ವಿಷಯದಲ್ಲಿ ಹಾಲು ಕುಡಿದ ನಂತರ ಈ ತೇಗು ಅಂದರೆ ಬರ್ಪ್ ಬರಲೇ ಬೇಕು. ಅದು ತಾನಾಗಿಯೇ ಬರುವುದಿಲ್ಲ. ಆಗ ಹೆಗಲ ಮೇಲೆ ಅದರ ತಲೆ ಆನಿಸಿಕೊಂಡು ಬೆನ್ನನ್ನು ನಯವಾಗಿ ಸವರುತ್ತಾ ಬರ್ಪ್ ಬರುವಂತೆ ನೋಡಿಕೊಳ್ಳಬೇಕು. ಬರ್ಪ್ ಬರದಿದ್ದರೆ ಹಾಲು ಇನ್ನೂ ಜಠರಕ್ಕಿಳಿಯದೆ ಎಲ್ಲಿಯೋ ಮಾರ್ಗದಲ್ಲಿ ಸಿಕ್ಕಿಕೊಂಡು ಮಗು ಹಾಲನ್ನು ಕಕ್ಕುವ ಸಂಭವವೇ ಹೆಚ್ಚು.

ಒಟ್ಟಿನಲ್ಲಿ ಈ ಎಲ್ಲ ಅಂಶಗಳು ನಮ್ಮ ದೇಹದ ಆರೋಗ್ಯ ವ್ಯವಸ್ಥೆ ಹಾಗೂ ಕಾರ್ಯ ಚಟುವಟಿಕೆ ಕುರಿತಂತೆ ನಾವು ದಿನನಿತ್ಯದ ಜೀವನದಲ್ಲಿ ಎಷ್ಟೊಂದು ಅಸೂಕ್ಷö್ಮವಾಗಿರುತ್ತೇವೆ ಎಂಬುದನ್ನು ತೋರಿಸುತ್ತವೆ. ಹೌದು, ನಾವು ನಮ್ಮ ಮುಖ ಸೌಂದರ್ಯದ ಬಗ್ಗೆ ವಹಿಸುವಷ್ಟು ಕಾಳಜಿಯನ್ನು ದೇಹದ ಇನ್ನಾವ ಭಾಗಗಳ ಬಗೆಗೂ ವಹಿಸುವುದಿಲ್ಲ. ನಮಗೆ ಬೇಕಾದ ಹಾಗೆ ಬದುಕಿರುತ್ತೇವೆ. ಆಮೋದ ಪ್ರಮೋದಗಳಲ್ಲಿ ಮುಳುಗಿರುತ್ತೇವೆ. ದೇಹದ ಆರೋಗ್ಯ ಕೆಟ್ಟಾಗಷ್ಟೇ ಅದರ ಇನ್ನಿತರ ವ್ಯವಸ್ಥೆ ಕಾರ್ಯ ಚಟುವಟಿಕೆಗಳತ್ತ ನಮ್ಮ ಗಮನ.

ನಮ್ಮ ಆಂತರಿಕ ವ್ಯವಸ್ಥೆಯ ಬಗ್ಗೆ ನಾವು ಒಂದಿಷ್ಟೂ ಕಾಳಜಿ ವಹಿಸದಿದ್ದರೂ ಈ ವ್ಯವಸ್ಥೆ ತನ್ನ ಪಾಡಿಗೆ ತಾನು ನಿಸ್ಪೃಹವಾಗಿ ತನ್ನ ಕೆಲಸಮಾಡಿ ಕೊಂಡಿರುತ್ತದೆ. ಅದರ ಕಾರ್ಯ ಚಟುವಟಿಕೆಯ ಮಹಿಮೆಯನ್ನರಿಯಬೇಕಾದರೆ ಆಗಾಗ ಜ್ವರ ಬಂದು ಒಂದೆರಡು ದಿನ ಮಲಗಬೇಕು. ಎಂಥ ಕಟ್ಟುಮಸ್ತಾದ ಆರೋಗ್ಯಪೂರ್ಣ ಉತ್ಸಾಹದ ಬುಗ್ಗೆಯಂಥ ವ್ಯಕ್ತಿಗಳೇ ಆಗಿರಲಿ ಒಂದು ಸಣ್ಣ ಜ್ವರ ಬಂದರೆ ಸಾಕು, ಹಿಡಿಯಷ್ಟಾಗಿ ಮುದುರಿ ಮುಲುಗುಟ್ಟುತ್ತಾ ಹಾಸಿಗೆಗೆ ಅಂಟಿಕೊಳ್ಳುತ್ತಾರೆ. ಒಳಗೊಳಗೇ ಸುಳಿಸುಳಿಯಾಗಿ ಹುಟ್ಟುವ ಚಳಿಗೆ ಥರಥರಗುಟ್ಟುತ್ತಾ ನಡುಗಲಾರಂಭಿಸುತ್ತಾರೆ.

ಕಣ್ಣರೆಪ್ಪೆ ಅಗಲಿಸುವುದೂ ಮಣಭಾರ ವೆತ್ತಿದಂಥ ಪ್ರಯಾಸವಾಗಿ ಬಿಡುತ್ತದೆ. ಹಲ್ಲುಗಳು ಒಂದೊಂದು ಅಗುಳನ್ನೂ ಲೆಕ್ಕ ಹಾಕಿ ಅಗಿಯುತ್ತಾ ಇನ್ನೂ ಎಷ್ಟಿದೆ ಎಂದು ಕೇಳುವಂತೆ ಆಯಾಸಪಡುತ್ತವೆ. ಈ ಎಲ್ಲ ಬದಲಾವಣೆ ದೇಹದ ಒಳಗಿಂದಲೇ ಒಂದೆರಡು ಗಂಟೆಗಳೊಳಗೆ ಸಂಭವಿಸಿ ನಾವು ಉತ್ಸಾಹದಿಂದ ಓಡಾಡಿ ತಿಂದುಕೊಂಡಿದ್ದ ದಿನಗಳು ಯಾವುದೋ ಯುಗದಲ್ಲಿ ಆಗಿಹೋದ ಸಂಗತಿಯೇನೋ ಎಂದು ಅನ್ನಿಸತೊಡಗುತ್ತದೆ.

ಇಷ್ಟೆಲ್ಲಾ ಬದಲಾವಣೆಗಳು ನಮ್ಮ ದೇಹದಲ್ಲಿ ನಡೆಯುವುದೂ ಸಹ ನಮ್ಮ ಆರೋಗ್ಯ ದೃಷ್ಟಿಯಿಂದಲೇ. ದೇಹದ ರಕ್ಷಣಾ ವ್ಯವಸ್ಥೆ ಈಗ ನಮ್ಮ ಪೂರ್ಣ ಶಕ್ತಿಯನ್ನು ವೈರಿಗಳ ವಿರುದ್ಧ ಹೋರಾಡಲು ಮೀಸಲಾಗಿಡಬೇಕಾಗಿರುವುದರಿಂದ ಅದು ನಮ್ಮ ಇತರ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸುವ ಉಪಾಯಗಳನ್ನು ಹೂಡುತ್ತದೆ. ಹೀಗಾಗಿಯೇ ನಮ್ಮ ಬಾಯಿ ರುಚಿ ಅಳಿದು ಸಿಕ್ಕಾಪಟ್ಟೆ ತಿನ್ನದಂತೆ ಮಾಡುತ್ತದೆ. ಮೈಕೈನೋವು, ಸುಸ್ತು, ಆಯಾಸಗಳ ಮೂಲಕ ನಮ್ಮ ಕಾರ್ಯ ಚಟುವಟಿಕೆಗಳನ್ನೆಲ್ಲ ಬದಿಗಿಟ್ಟು ಸುಮ್ಮನೆ ಮಲಗುವಂತೆ ಮಾಡುತ್ತದೆ. ಶತ್ರುವಿನೊಡನೆ ಹೋರಾಟ ಮುಗಿದ ನಂತರ ನೀವು ಸುಧಾರಿಸಿಕೊಂಡಿದ್ದೀರಿ ಎಂಬುದರ ಸೂಚನೆಗಳನ್ನು ಹಂತಹಂತವಾಗಿ ಕೊಡಲಾರಂಭಿಸುತ್ತದೆ.

| ಇನ್ನು ನಾಳೆಗೆ |

‍ಲೇಖಕರು Avadhi

June 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: