ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 16

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

16

ಆಸ್ಪತ್ರೆಯಿಂದ ಬಿಡುಗಡೆಯ ಪ್ರಕ್ರಿಯೆ

ಒಟ್ಟಿನಲ್ಲಿ ಕರೋನಾ ಬಂದವರು ಎದುರಿಸಬೇಕಾದ ಮುಖ್ಯ ಸಮಸ್ಯೆಗಳಲ್ಲಿ ಇದೂ ಒಂದು. ನಮ್ಮ ಆಹಾರ, ಪಥ್ಯ ಇನ್ನಿತರ ವಿಷಯಗಳ ಬಗ್ಗೆ ವಿಚಾರಿಸಿಕೊಳ್ಳುವ ವ್ಯವಧಾನ ಇಲ್ಲಿ ಯಾರಿಗೂ ಇರುವುದಿಲ್ಲ. ನರ್ಸಿಂಗ್ ಸಿಬ್ಬಂದಿಗೆ ಅವರು ಮಾಡಬೇಕಾದ ಕೆಲಸಗಳೇ ಸಾಕು ಬೇಕಾದಷ್ಟಿರುತ್ತವೆ. ಈ ಕರೋನ, ಆಸ್ಪತ್ರೆ ವ್ಯವಸ್ಥೆ ಕುರಿತಂತೆ ನಮಗಿದ್ದ ಕಲ್ಪನೆಯನ್ನೇ ಬದಲಾಯಿಸಿತ್ತು. ಅತ್ಯಂತ ವೈಭವೋಪೇತ ಆಸ್ಪತ್ರೆಯಲ್ಲಿಯೂ ಸಹ ನಾವು ಕೆಲವೊಂದು ಅಂಶಗಳನ್ನು ನಿರೀಕ್ಷಿಸುವಂತಿಲ್ಲ ಅನ್ನಿಸಿತು.

ನಾನು ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಅದೇ ಒಂದೇ ಡಿಸ್‌ಪೋಸಬಲ್ ಬೆಡ್‌ಶೀಟ್. ನನ್ನನ್ನು ಬೇರೊಂದು ವಾರ್ಡಿಗೆ ಸ್ಥಳಾಂತರಿಸಿದಾಗಲಾದರೂ ಅಲ್ಲಿನ ಬೆಡ್‌ಶೀಟ್ ಬದಲಾಯಿಸಿದ್ದರೋ ಇಲ್ಲವೋ. ನನ್ನನ್ನು ಧಿಡೀರ್ ಆಗಿ ಸ್ಥಳಾಂತರಿಸಿದ್ದರು. ಬೆಡ್‌ಶೀಟ್ ನೋಡಿದರೆ ಬದಲಿಸಿದಂತೆ ಕಾಣಲಿಲ್ಲ. ಅದೆಲ್ಲವನ್ನೂ ಗಮನಿಸುವ ವ್ಯವಸ್ಥೆಯೂ ಅಲ್ಲಿಲ್ಲವೇನೋ ಅನ್ನಿಸಿತು. ಈ ಕರೋನ ಹೇಗೆ ಅಲ್ಲಿನ ಗಾಳಿಯಲ್ಲಿ ವ್ಯಾಪಿಸಿರುತ್ತದೆಂದರೆ ಇಂತಹ ಸ್ವಚ್ಛತೆಯನ್ನು ಮಾಡಿದರೂ ಒಂದೇ ಮಾಡದಿದ್ದರೂ ಒಂದೇ ಎಂದು ನಿರ್ಧರಿಸಿರಬಹುದು. ಏನಾದರಾಗಲಿ ನನಗೆ ಕೊಡುವ ಅಂಟಿಬಯಾಟಿಕ್‌ಗಳ ಮೇಲೆ ಎಲ್ಲ ಭಾರ ಹಾಕಿ ನಾನು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಪವಡಿಸಿದೆ.

ಆಸ್ಪತ್ರೆ ಎಂದರೆ ಸ್ವಚ್ಛ ಬಿಳಿಯ ಬೆಡ್‌ಶೀಟ್‌ಗಳು, ಬಿಳಿಯ ಸ್ಕರ್ಟ್, ಬಿಳಿಕ್ಯಾಪ್, ಬಿಳಿಸಾಕ್ಸ್ ಶೂಸ್ ತೊಟ್ಟು ಅಚ್ಚ ಬಿಳಿ ಕೊಕ್ಕರೆಗಳ ಹಿಂಡಿನಂತೆ ಓಡಾಡುತ್ತಿದ್ದ ನರ್ಸ್ ಗಳು ಎಂಬ ನಿರೀಕ್ಷೆಗೆ ಇಲ್ಲಿ ಅವಕಾಶವೇ ಇಲ್ಲ. ನಾನು ಎಸ್.ಎಸ್.ಎಲ್.ಸಿ. ಮುಗಿಸಿದಾಗ ಟೈಫಾಯಿಡ್‌ನಿಂದಾಗಿ ಒಂದು ವಾರಕ್ಕೂ ಹೆಚ್ಚು ಕಾಲ ಸರ್ಕಾರಿ ಆಸ್ಪತ್ರೆ ಸೇರಿದ್ದೆ. ಆಗೆಲ್ಲ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳ ಮಾತೇ ಇಲ್ಲ.

ಸರ್ಕಾರಿ ಆಸ್ಪತ್ರೆಗಳಲ್ಲೂ ಸಹ ನಿಯತ ಕಾಲಿಕವಾಗಿ ಎರಡು ದಿನಕ್ಕೊಮ್ಮೆ ರೋಗಿಯ ಬೆಡ್‌ಶೀಟ್‌ನ್ನು ಬದಲಾಯಿಸುತ್ತಿದ್ದ ದೃಶ್ಯ ನೆನಪಾಯಿತು. ಇಬ್ಬರು ನರ್ಸ್ ಗಳು ಮಂಚದ ಆಕಡೆ ಈಕಡೆ ನಿಂತು ರೋಗಿಯನ್ನು ಮೇಲೆಬ್ಬಿಸದೆ ನೋವಾಗದಂತೆ ರೋಗಿಯನ್ನು ಅತ್ತ ಹೊರಳಿಸಿ ಇತ್ತ ಹೊರಳಿಸಿ ಬೆಡ್‌ಶೀಟ್‌ನ್ನು ಬದಲಾಯಿಸುವುದೇ ಒಂದು ವಿದ್ಯೆ. ಡಾಕ್ಟರ್‌ಗಳು ರೌಂಡ್ಸ್ ಬರುವ ಹೊತ್ತಿಗೆ ಎಲ್ಲವೂ ಗುಡಿಸಿ, ಒರೆಸಿ, ಹಾಸಿಗೆ, ಹೊದಿಕೆ ಎಲ್ಲವೂ ನೀಟಾಗಿರುವ ವ್ಯವಸ್ಥೆ.

ಈ ಮಾತು ಜನರಲ್ ವಾರ್ಡ್ಗಳಿಗೇ ಹೆಚ್ಚು ಅನ್ವಯಿಸುತ್ತಿತ್ತು. ಆದರೆ ಈಗ ಸರ್ಕಾರಿ ಆಸ್ಪತ್ರೆಗಳೆಂದರೆ ಅಕ್ಷರಶಃ ತಿಪ್ಪೆಗುಂಡಿಗಳು. ಬಡವರನ್ನು ಕಿತ್ತುತಿನ್ನುವ ರಣಹದ್ದುಗಳು. ಕರೋನಾದಿಂದಾಗಿ ಇತರ ಅಂಶಗಳ ಬಗ್ಗೆ ಯಾರೂ ಹೇಳುವಂತಿಲ್ಲ, ಕೇಳುವಂತಿಲ್ಲ ಎಂಬಂತಾಗಿತ್ತು. ಇನ್ನು ಡಾಕ್ಟರ್‌ಗಳ ಕಥೆಯೂ ಅದೇ. ದಿನವೂ ಇಷ್ಟೊಂದು ಕರೋನಾ ವಾತಾವರಣಕ್ಕೆ ಒಡ್ಡಿಕೊಳ್ಳಬೇಕಾಗಿರುವ ಅವರು ಪಡುವ ಕಷ್ಟಗಳ ಕಲ್ಪನೆಯೇ ಯಾರಿಗೂ ಇಲ್ಲ.

ಬೆಳಗಿನಿಂದ ಸಂಜೆಯವರೆಗೆ ಅಥವಾ ನಿಗದಿಸಿದಷ್ಟು ಅವಧಿಯವರೆಗೆ ಪಿ.ಪಿ.ಇ. ಧರಿಸಿ ಒಳ್ಳೆಯ ಗಾಳಿಯನ್ನು ಉಸಿರಾಡುವುದಕ್ಕೂ ಆಗದಿರುವುದು ಮಾತ್ರವಲ್ಲ ಹೊತ್ತು ಹೊತ್ತಿಗೆ ಸರಿಯಾಗಿ ಒಂದು ಒಳ್ಳೆಯ ಕಾಫಿ, ತಿಂಡಿ, ಊಟ, ಪಾನೀಯಗಳನ್ನು ಸೇವಿಸುವುದೂ ಸಹ ಈ ಪಿ.ಪಿ.ಇ. ಯಿಂದಾಗಿ ಅವರಿಗೆ ಕಷ್ಟವಾಗಿರುತ್ತದೆ. ಅವರಿಗೆ ಹೋಲಿಸಿದರೆ ಪೇಶಂಟ್‌ಗಳಾದ ನಾವೇ ಹೆಚ್ಚು ಸುಖವಾಗಿದ್ದೆವು. ಮಾಸ್ಕ್ ಕೂಡ ಹಾಕಿಕೊಳ್ಳದೆ ಅರಾಮಾಗಿ ಹೊತ್ತಿಗೆ ಸರಿಯಾಗಿ ಊಟ, ತಿಂಡಿ ಮಾಡಬಹುದಿತ್ತು.

ಲಾಕ್ ಡೌನ್ ಮತ್ತು ಅನಂತರದ ಅವಧಿಯಲ್ಲಿ ಹೋಟೆಲ್‌ಗಳನ್ನು ತೆರೆಯುವ ಅವಕಾಶವೇ ಇರಲಿಲ್ಲ. ಒಂದು ಒಳ್ಳೆಯ ಕಾಫಿಗೂ ಗತಿಇಲ್ಲದ ಸ್ಥಿತಿ. ಕರೋನಾ ವಾರಿರ‍್ಸ್ ಎಂದು ಬರೀ ಬಾಯಿಮಾತಿನಲ್ಲಿ ಹೇಳಿದರೆ ಸಾಲದು, ಅವರ ಕಷ್ಟಗಳನ್ನು ಸಮಸ್ಯೆಗಳನ್ನು ಆಲಿಸಿ ಸರಿಯಾದ ವ್ಯವಸ್ಥೆಮಾಡಬಹುದಿತ್ತು. ಇಂತಹ ಸಂದರ್ಭದಲ್ಲಿ ಕೆಲವಾದರೂ ಹೋಟೆಲ್‌ನವರಿಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸರಿಯಾದ ರುಚಿಕರವಾದ ಊಟ ತಿಂಡಿಗಳನ್ನು ಪೂರೈಸುವ ವ್ಯವಸ್ಥೆ ಮಾಡಬಹುದಿತ್ತು.

ಪ್ರತಿಯೊಬ್ಬ ಮನುಷ್ಯನಿಗೂ ಬಹಳ ಮೂಲಭೂತ ಅಗತ್ಯತೆಗಳಾದ ಇಂಥ ವಿಷಯಗಳ ಬಗ್ಗೆ ಯಾರೊಬ್ಬರಿಗೂ ಗಮನವಿಲ್ಲ. ದೇಶದಲ್ಲಿ ೪೦೦ ಕ್ಕೂ ಹೆಚ್ಚುಮಂದಿ ವೈದ್ಯರು ಕರೋನಾಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಕರೋನಾ ವಾರಿಯರ್‌ಗಳ ಸಮಸ್ಯೆಗಳನ್ನು ಪರಿಹರಿಸುವುದಿರಲಿ, ಅಲ್ಲಿಯೂ ಈ ರಾಜಕಾರಣಿಗಳು ಶಿಸ್ತು ಕ್ರಮ ಮೊದಲಾದ ರಾಜಾಜ್ಞೆಗಳನ್ನು ಹೊರಡಿಸುವುದನ್ನು ನೋಡಿದರೆ ಅಂತಹ ಮಂತ್ರಿವರ್ಯರಿಗೆ ಪಿ.ಪಿ.ಇ. ಹಾಕಿ ಕೇವಲ ಒಂದೆರಡು ಗಂಟೆಗಳ ಕಾಲ ಅವರದೇ ಸಿಂಹಾಸನದಲ್ಲಿ ಕೂರಿಸಿದರೂ ಸಾಕು, ಈ ವಾರಿಯರ್‌ಗಳ ಸಂಕಟ ಅರ್ಥವಾಗಬಹುದು.

ಸರಿ ಆ ಮಧ್ಯಾಹ್ನವೇ ನನ್ನ ಸೈಡ್ ಟೇಬಲ್ ಮೇಲೆ ಕ್ಯಾಲ್ಶಿಯಂ ಸಂಯುಕ್ತದ ಆ ಪುಡಿಯ ಪ್ಯಾಕೆಟ್ನ್ನು ಸಿಸ್ಟರ್ ತಂದಿಟ್ಟು ಊಟದ ನಂತರ ಒಂದು ಲೋಟ ನೀರಿಗೆ ಹಾಕಿ ತೆಗೆದುಕೊಳ್ಳಿ ಎಂದು ಹೇಳಿ ಹೋದಳು. ಪ್ರತಿ ಸಲವೂ ೧೫ ಗ್ರಾಂನಷ್ಟು ಪುಡಿಯನ್ನು ದಿನಕ್ಕೆ ಮೂರು ಸಲ ಅಂದರೆ ತಿಂಡಿ, ಊಟ, ರಾತ್ರಿಯ ಊಟದ ನಂತರ ತೆಗೆದುಕೊಳ್ಳಬೇಕಿತ್ತು. ಅದು ಯಾವ ರುಚಿ ಇರುವುದೋ ಎಂದು ಮುಖ ಕಿವುಚುತ್ತಲೇ ಕುಡಿದೆ. ನಂಜನಗೂಡು ಹಲ್ಲುಪುಡಿಯ ಫ್ಲೇವರ್ ಇದ್ದುದರಿಂದ ಪರವಾಗಿಲ್ಲ. ಆದರೂ ಅಷ್ಟೊಂದು ಪ್ರಮಾಣದಲ್ಲಿ ಕುಡಿಯುವುದು ಹಿಂಸೆಯೇ ಆಗುತ್ತಿತ್ತು.

ಸಂಜೆ ಡಾ. ನರೇಂದ್ರಗೆ ಫೋನ್ ಮಾಡಿ ಕೇಳಿದಾಗ ತಪ್ಪದೆ ತೆಗೆದುಕೋ ಪೊಟಾಶಿಯಂನ ಬ್ಯಾಲೆನ್ಸ್ ಮಾಡುತ್ತೆ ಅಂದರು. ಎರಡು ದಿನ ಹೀಗೆ ತಪ್ಪದೆ ತೆಗೆದುಕೊಂಡ ನಂತರ ಮಾರನೇ ದಿನ ಕಾನ್ಸಿ ಸ್ಟೇಷನ್ ಶುರುವಾಗಿತ್ತು. ಇದಕ್ಕೆ ಬೇರೆ ಬೇರೆ ಕಾರಣಗಳೂ ಇರಬಹುದು. ಮೂರನೇ ದಿನ ಟಾಯ್ಲೆಟ್‌ನಲ್ಲಿ ರಣಹಿಂಸೆ ಅನುಭವಿಸಿದ ನಂತರ, ನಾಲ್ಕನೇ ದಿನ ಇದಕ್ಕೆ ಏನಾದರೂ ಪರಿಹಾರವನ್ನು ಡಾಕ್ಟರ್ ಹತ್ತಿರ ಕೇಳಲು ನಿರ್ಧರಿಸಿದೆ. ನನ್ನ ಪುಣ್ಯ, ಪೊಟಾಶಿಯಂ ನಿಯಂತ್ರಣಕ್ಕೆ ಬಂದಿತ್ತು.

ಪ್ರಾಣವಾಯುವಿನ ಮಟ್ಟವೂ ಸರಿಹೋಗುತ್ತಾ ಬಂದಿತ್ತು. ಆಕ್ಸಿಜನ್ ಲೆವೆಲ್ ಕಡಿಮೆಮಾಡಿ ಅಂದ ಡಾಕ್ಟರ್‌ಗೆ ನನ್ನ ಕಾನ್ಸಿ ಸ್ಟೇಷನ್ ಸಮಸ್ಯೆ ತಿಳಿಸಿದಾಗ ಅವರು ಪೊಟಾಶಿಯಂ ಲೆವೆಲ್ ಸರಿ ಹೋಗಿರುವುದನ್ನು ಖಚಿತ ಪಡಿಸಿಕೊಂಡರು. ಪುಡಿ ಸೇವನೆಯನ್ನು ನಿಲ್ಲಿಸಲು ಹೇಳಿದರು. ಜೊತೆಗೆ ಕಾನ್ಸಿ ಸ್ಟೇಷನ್ ಗೆ ಡುಫಾಲಿಕ್ ಕೊಡಿ ಎಂದು ಜೂನಿಯರ್ ಡಾಕ್ಟರ್‌ಗೆ ಹೇಳಿ ಮುಂದೆ ಹೋದರು. ಅಂತೂ ಗೊತ್ತಿಲ್ಲದೆ ಮಾಡಿದ ತಪ್ಪಿನಿಂದ ನನ್ನ ಆಸ್ಪತ್ರೆಯ ವಾಸ ಇನ್ನೂ ನಾಲ್ಕೈದು ದಿನ ಹೆಚ್ಚಾಯಿತು.

ಇಷ್ಟಾದ ನಂತರ ಇನ್ನು ಮುಂದೆ ಮನೆಯ ಊಟ ತರಿಸುವ ಅಗತ್ಯ ಕಾಣಲಿಲ್ಲ. ಈ ಹಣ್ಣುಗಳನ್ನು ಮೊದಲು ಅತ್ತ ಇಡಿ ಡಾಕ್ಟರ್‌ಗೆ ಕಾಣದಂತೆ ಎಂದು ಸುದೀಪ್ ಹೇಳಿದಾಗ ಎಲ್ಲವನ್ನೂ ಚೀಲಕ್ಕೆ ಹಾಕಿದೆ. ಇದರಿಂದ ಸ್ವಲ್ಪ ತೊಂದರೆ ಆಗಿದ್ದು ನನ್ನ ಪಕ್ಕದ ಪೇಶೆಂಟ್‌ಗೆ. ಆಕೆ ಊಟ ತಿಂಡಿ ಏನನ್ನೂ ಸೇವಿಸುತ್ತಿರಲಿಲ್ಲವಾದ್ದರಿಂದ ನಾನೇ ಮನೆಯಿಂದ ಬರುತ್ತಿದ್ದ ಹಣ್ಣುಗಳನ್ನು ಆಕೆಗೂ ಕೊಡುತ್ತಿದ್ದೆ. ವಾಸ್ತವವಾಗಿ ಆಕೆಗೂ ಪೋಟಾಶಿಯಂ ಸಮಸ್ಯೆ ಇತ್ತು.

ಬಾಳೆಹಣ್ಣು ಇದ್ರೆ ಕೊಡಿ ಮೇಡಂ ಎಂದು ರಾತ್ರಿ ಯಾವಾಗಲಾದರೂ ಬೇಡಿಕೆ ಇಡುತ್ತಿದ್ದರು. ಕೊನೆಗೆ ಯಾರಾದರೂ ಸಿಸ್ಟರ್‌ಗಳಿಗೆ ಹೇಳಿ ಆಕೆಗೆ ಏನಾದರೂ ಹಣ್ಣುಗಳನ್ನು, ಹಣ್ಣಿನ ಜ್ಯೂಸ್ ಅನ್ನು ಕೊಡಿ ಎಂದಾಗ ಒಮ್ಮೊಮ್ಮೆ ಅವರು ತಂದುಕೊಡುತ್ತಿದ್ದರು. ಸುದೀಪ್ ಹೇಳಿದಂತೆ ಇನ್ನು ಮುಂದೆ ಇಲ್ಲಿಯೇ ಊಟ ತರಿಸಿಕೊಳ್ಳುತ್ತೇನೆ ಎಂದು ಡಯಟೀಶಿಯನ್‌ಗೆ ತಿಳಿಸಬೇಕಿತ್ತು. ಅವರಿಗೆ ಫೋನ್ ಮಾಡಿ ನನಗಿದ್ದ ಪೊಟಾಶಿಯಂ ಹಾಗೂ ಡಯಾಬಿಟೀಸ್ ಬಗ್ಗೆ ಹೇಳಿದಾಗ ಆಲೂಗಡ್ಡೆ, ಟೊಮ್ಯಾಟೊ ಮತ್ತು ಸೊಪ್ಪುಗಳನ್ನು ತಿನ್ನಬೇಡಿ, ಅದಕ್ಕೆ ತಕ್ಕಂತೆ ನಿಮ್ಮ ಡಯೆಟ್ ಪ್ಲಾನ್ ಮಾಡಿಕೊಡುತ್ತೇನೆ ಎಂದರು. ಅಂದಿನಿಂದ ತರಕಾರಿ ಪಲ್ಯ, ಹಸಿಕಾಳಿನ ಕೋಸಂಬರಿಗಳು, ಮೆತ್ತನೆಯ ಚಪಾತಿ, ಮಜ್ಜಿಗೆ ಮೊಸರು ಇತ್ಯಾದಿ ನನ್ನ ಆಹಾರ ಪಥ್ಯದಲ್ಲಿ ಸೇರಿದವು.

ಸುಮಾರು ೧೪ನೇ ದಿನದ ಹೊತ್ತಿಗೆ ಡಾಕ್ಟರ್ ಹೇಳಿದಂತೆ ಆಕ್ಸಿಜನ್ ಪೂರೈಕೆಯನ್ನು ತೀರಾ ಕಡಿಮೆ ಮಟ್ಟಕ್ಕೆ ಇಳಿಸಲಾಗಿತ್ತು. ೧೫ನೇ ದಿನ ಆಕ್ಸಿಜನ್ ಸಂಪೂರ್ಣ ನಿಲ್ಲಿಸಿ ಎಂದು ಡಾಕ್ಟರ್ ಹೇಳಿದಂತೆ ಕೊಳವೆಯ ಸಂಪರ್ಕ ತೆಗೆದರು. ನನಗೆ ಹೆಚ್ಚಿನ ವ್ಯತ್ಯಾಸವೇನೂ ಗೊತ್ತಾಗಲಿಲ್ಲ. ೧೬ನೇ ದಿನ ಅಂದು ಸ್ವಾತಂತ್ರ್ಯ ದಿನಾಚರಣೆಯ ದಿನ. ಡಾಕ್ಟರ್ ಎಷ್ಟು ಹೊತ್ತಾದರೂ ಬರಲಿಲ್ಲ. ಈ ದಿನ ಬರಲಿಲ್ಲ ಎಂದರೆ ಮಾರನೇ ದಿನ ಭಾನುವಾರ.

ಬಹುಶಃ ನಾನು ಸೋಮವಾರದ ವರೆಗೆ ಇಲ್ಲಿರಬೇಕಾಗುತ್ತೇನೋ ಎಂದು ಚಡಪಡಿಸುತ್ತಿದ್ದೆ. ಏನಾದರಾಗಲಿ ನಿನ್ನ ಸಾಮಾನೆಲ್ಲ ಸರಿಯಾಗಿ ಪ್ಯಾಕ್ ಮಾಡಿಟ್ಟುಕೋ ಎಂದು ಮಕ್ಕಳು ಫೋನ್ ಮಾಡಿ ಹೇಳಿದರು. ಯಾವಾಗಲೂ ಸುಮಾರು ೧೧-೩೦ಕ್ಕೆ ಬರುತ್ತಿದ್ದ ಡಾಕ್ಟರ್ ಪರಿವಾರ ಅಂದು ೧೨-೩೦ಕ್ಕೆ ಬಂದಿತು. ನಾಳೆ ಡಿಸ್‌ಚಾರ್ಜ್ ಮಾಡಿ ಅಂದಾಗ ಅಯ್ಯೋ ಇವತ್ತೇ ಏಕಿಲ್ಲ ಎಂದು ಕೇಳುವಷ್ಟರಲ್ಲಿ ಜೂನಿಯರ್ ಲೇಡಿ ಡಾಕ್ಟರ್, ಈವತ್ತೇ ಮಾಡಬಹುದು, ಎರಡು ದಿನದಿಂದಲೂ ಆಕ್ಸಿಜನ್ ಲೆವೆಲ್ ಸರಿಯಾಗಿದೆ ಎಂದು ಹೇಳಿದ ನಂತರ ಯೆಸ್ ಅಂದರು.

ಅಲ್ಲಿಂದ ಬಿಡುಗಡೆಯ ಪ್ರಕ್ರಿಯೆ. ಎಲ್ಲಾ ಮುಗಿಯುವ ಹೊತ್ತಿಗೆ ಸಂಜೆ ನಾಲ್ಕು ಅಥವಾ ಐದು ಗಂಟೆ ಯಾಗಬಹುದು. ನನ್ನನ್ನು ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಮನೆಯಲ್ಲಿ ನಾನು ಕ್ವಾರಂಟೈನ್‌ನಲ್ಲಿ ಇರಬೇಕಾದ ಸಿದ್ಧತೆಗಳನ್ನು ಮಾಡಬೇಕು ಇತ್ಯಾದಿ ಇತ್ಯಾದಿ ಇದ್ದವು. ನಾವು ಯಾವ ಮೆಡಿಕಲ್ ಇನ್ಶೂರೆನ್ಸ್ ನ್ನು ಮಾಡಿಸಿರಲಿಲ್ಲ. ಮೇಘಾಗೆ ಇತ್ತು. ಆಸ್ಪತ್ರೆ ಬಿಲ್ಲಿನ ಅರ್ಧದಷ್ಟು ಅವಳ ಇನ್ಶೂರೆನ್ಸ್ ನಲ್ಲಿ ಪೂರೈಸಿತು. ಇನ್ನರ್ಧ ಆನ್‌ಲೈನ್‌ನಲ್ಲಿ ಸಂದಾಯ ಮಾಡಲು ಏನೋ ತೊಂದರೆಯಾಗಿ ಕೊನೆಗೆ ರಾತ್ರಿ ೭-೩೦ರ ಹೊತ್ತಿಗೆ ಶಂಕರ್ ಸ್ವತಃ ಬಂದು ನಗದು ಸಂದಾಯ ಮಾಡಿದ ನಂತರ ಆಸ್ಪತ್ರೆಯ ಋಣ ತೀರಿತು.

‍ಲೇಖಕರು Avadhi

June 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: