ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 14

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

14

ಸಿ ಆರ್ ರೆಡ್ಡಿಯವರ ಪತ್ರ

ಕೋಮುಗಲಭೆಯ ಸಂದರ್ಭದಲ್ಲಿ  ಸಿ.ಆರ್. ರೆಡ್ಡಿ ಅವರು ಶರತ್ ಚಂದ್ರಬೋಸ್ ಅವರಿಗೆ ಪತ್ರ ಬರೆದು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದರು. ರಾಜಕಾರಣಿ ಯಾದರೂ ಮಾನವೀಯ ದೃಷ್ಟಿಯನ್ನು ಕಳೆದುಕೊಳ್ಳದ ಒಬ್ಬ ಮುತ್ಸದ್ದಿ, ಬುದ್ಧಿಜೀವಿ ಹೇಗೆ ಇಂಥ ವಿಷಯಗಳ ಬಗ್ಗೆ ನಿಷ್ಪಕ್ಷಪಾತವಾಗಿ ಯೋಚಿಸುತ್ತಾನೆ ಮತ್ತು ಮುಂದಿನವರೂ ಸಹ ಇದನ್ನು ಗಂಭೀರವಾಗಿ ಪರಿಗಣಿಸುವಂತಾಗಬೇಕು ಎಂಬ ದೃಷ್ಟಿಯಿಂದ ಆ ಪತ್ರವನ್ನು ಇಲ್ಲಿ ಯಥಾವತ್ತಾಗಿ ಕೊಡುತ್ತಿದ್ದೇನೆ. ಇದು ೧೯೪೬ರ ಡಿಸೆಂಬರ್‌ನಲ್ಲಿ ಬರೆದ ವೈಯಕ್ತಿಕ ಪತ್ರ. ಬೋಸ್ ಅವರು ಆಗ ಬಂಗಾಳದ ಕೇಂದ್ರೀಯ ಪರಿಹಾರ ಸಮಿತಿಯ ಅಧ್ಯಕ್ಷರಾಗಿದ್ದರು.

ಪ್ರಿಯ ಶರತ್ ಬೋಸ್,
ನಾನು ನಿಮ್ಮನ್ನು ಭೇಟಿಯಾಗಿ ೨೦ ವರ್ಷಗಳೇ ಆದವು. ಕಲ್ಕತ್ತೆಯಲ್ಲಿ ನಾನು ಜೆ.ಸಿ. ಗುಪ್ತಾ ಅವರ ಅತಿಥಿಯಾಗಿ ಉಳಿದುಕೊಂಡಿದ್ದಾಗ ನಿಮ್ಮನ್ನು ಭೇಟಿಯಾಗಿದ್ದೆ. ಬಂಗಾಳವನ್ನು ಹಾಗೂ ದೇಶವನ್ನು ಕವಿದಿರುವ ತೀವ್ರ ಅಂಧಕಾರದ ಈ ಸಮಯದಲ್ಲಿ ನಾನು ಪುನಃ ನಿಮ್ಮನ್ನು ಅಂಚೆಯ ಮೂಲಕವಾಗಿ ಸಂಪರ್ಕಿಸುತ್ತಿದ್ದೇನೆ.

ನಾನು ಈ ಪತ್ರದೊಂದಿಗೆ ೧೧೬/- ರೂ. ಗಳ ಒಂದು ಚೆಕ್ ಕಳುಹಿಸಿದ್ದೇನೆ. ಇದು ಮಂತಾಂಧತೆ ಮತ್ತು ರಾಜಕೀಯ ದುರಾಕ್ರಮಣದಲ್ಲಿ ನಲುಗಿ ಹೋದ ಬಂಗಾಳದ ಕುಟುಂಬಗಳ ಪರಿಹಾರಾರ್ಥವಾಗಿ ನನ್ನ ಚಿಕ್ಕ ಸಹಾಯ. ಕಾಂಗ್ರೆಸ್ ತನ್ನ ಹಳೆಯ ಭಾವನಾತ್ಮಕ ಮನೋಧರ್ಮವನ್ನು ಮುಂದುವರೆಸುವುದರಲ್ಲಿ ಸಂಶಯವಿಲ್ಲ. ಅದು ಎಲ್ಲವನ್ನೂ ಸಾರಿಸಿ ಹಾಕುತ್ತದೆ. ಮರೆತುಬಿಡಿ, ಕ್ಷಮಿಸಿಬಿಡಿ ಎನ್ನುವುದು; ಆಗಿದ್ದು ಆಗಿ ಹೋಯಿತು ಎಂಬ ಧೋರಣೆ. ಆನಂತರ ಬಿಕ್ಕಳಿಸುವುದು, ಇದೆಲ್ಲ ಆತ್ಮವಂಚನೆ. ಮಹಾತ್ಮರ ಪ್ರಭಾವದಲ್ಲಿ ಇದು ದೇಶದ ಭ್ರಾಂತಿಯಾಗುತ್ತದೆ. ತಪ್ಪಿತಸ್ಥರು ಯಾವುದೇ ಕೋಮಿಗೆ ಸೇರಿದವರಾಗಿರಲಿ ಅವರನ್ನು ಶೀಘ್ರವಾಗಿ ಉಗ್ರವಾಗಿ ಶಿಕ್ಷಿಸದ ಹೊರತು ಭವಿಷ್ಯದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ.

1. ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಇದರಲ್ಲಿ ಹಿಂದೂ ಕೋಮಿನವರೂ ಇರಬಾರದು, ಮುಸ್ಲಿಂ ಕೋಮಿನವರೂ ಇರಬಾರದು. ಯೂರೋಪಿಯನ್ನರು, ಪಾರ್ಸಿಗಳು, ಆಂಗ್ಲೊ ಇಂಡಿಯನ್ನರು, ಕ್ರಿಶ್ಚಿಯನ್ನರು, ಸಿಖ್ಖರು ಇದರಲ್ಲಿರಬೇಕು. ತಮ್ಮ ಮುಂದೆ ಬಂದಂತಹ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಮಾಡುವ ಅಧಿಕಾರವನ್ನು ಈ ನ್ಯಾಯಾಲಯಗಳಿಗೆ ಕೊಡಬೇಕು. ಈ ನ್ಯಾಯಾಲಯಗಳ ತೀರ್ಪು ಕುರಿತು ಅಪೀಲು ಹೋಗುವ ಅವಕಾಶವಿರಬಾರದು. ಹಾಗೊಂದು ವೇಳೆ ಇದ್ದರೂ ಉಚ್ಚ ನ್ಯಾಯಾಲಯ ಗಳಿಗೆ ಇಲ್ಲವೇ ಗವರ್ನರ್ ಅವರಿಗೆ ಮಾತ್ರ ಅಪೀಲು ಸಲ್ಲಿಸಬಹುದು.

2. ಹಾಳಾದ ಆಸ್ತಿಪಾಸ್ತಿಗಳ ಪುನರ್ ಸ್ಥಾಪನೆಗಾಗಿ: ಹಿಂದೂಗಳು ಮುಸ್ಲಿಮರ ಆಸ್ತಿಗಳನ್ನು ನಾಶಪಡಿಸಿದರೆ ಹಿಂದೂಗಳ ಮೇಲೆ ಮತ್ತು ಮುಸ್ಲಿಮರು ಹಿಂದೂಗಳ ಆಸ್ತಿ ನಾಶಪಡಿಸಿದ್ದರೆ ಮುಸ್ಲಿಮರ ಮೇಲೆ ತೆರಿಗೆ ಹಾಕಬೇಕು.

3. ಎಲ್ಲಕ್ಕಿಂತ ಮುಖ್ಯವಾಗಿ ಹಿಂದೂಗಳು ಮುಸ್ಲಿಮರ ಮಸೀದಿಗಳನ್ನು ನಾಶಪಡಿಸಿದ್ದರೆ ಇವುಗಳ ದುರಸ್ತಿಗಾಗಿ ಹಿಂದೂಗಳು ಅಗತ್ಯವಾದ ಬಂಡವಾಳ ಹಾಗೂ ಕಾರ್ಮಿಕರನ್ನು ಒದಗಿಸಬೇಕು. ಅದೇ ರೀತಿ ಮುಸ್ಲಿಮರು ಹಿಂದೂ ದೇವಾಲಯಗಳನ್ನು ನಾಶಪಡಿಸಿದ್ದರೆ ಅವರು ದುರಸ್ತಿಗಾಗಿ ಹಣ ಮತ್ತು ಕಾರ್ಮಿಕರನ್ನು ಒದಗಿಸಬೇಕು. ಹೀಗೆ ಮಾಡದಿದ್ದರೆ ಈಗ ಯಾರೂ ಪಾಠ ಕಲಿಯುವುದಿಲ್ಲ ಮತ್ತು ಮುಂದೆಯೂ ಸುರಕ್ಷಣೆ ಸಾಧ್ಯವಾಗುವುದಿಲ್ಲ.

ಮೂರ್ತಿಪೂಜೆ ಮಾಡುವಂಥವರಿಗೆ ಸಹಾಯ ಮಾಡಕೂಡದು ಎಂದು ಇಸ್ಲಾಂ ಹೇಳುತ್ತದೆ ಎಂದು ವಾದ ಮಾಡುವುದರಲ್ಲಿ ಪ್ರಯೋಜನವಿಲ್ಲ. ಇಂತಹ ಕ್ರೂರ ನಡವಳಿಕೆಯನ್ನು ಇಸ್ಲಾಂ ಸಹ ಒಪ್ಪುವುದಿಲ್ಲ. ಆದ್ದರಿಂದ ಒಂದು ವಿಷಯದಲ್ಲಿ ಇಸ್ಲಾಂ ಧರ್ಮ ಹೇಳಿದ್ದಕ್ಕೆ ವಿರುದ್ಧವಾಗಿ ನಡೆದುಕೊಂಡು, ತಮಗೆ ಬೇಕಾದ ವಿಷಯದಲ್ಲಿ ಮಾತ್ರ ಇಸ್ಲಾಂ ಹೇಳಿದಂತೆ ನಡೆಯುತ್ತಿದ್ದೇವೆ ಎಂದು ವಾದಿಸುವುದರಲ್ಲಿ ಅರ್ಥವಿಲ್ಲ.

ಕೊನೆಯದಾಗಿ, ಹಿಂದೂ ಮುಸ್ಲಿಂ ಪರಸ್ಪರ ವಿರೋಧಿಗಳು ಎಂಬ ಭಾವನೆಯೇ ತಪ್ಪು. ಒಂದು ಒಳಿತಿಗಾಗಿ ಎಲ್ಲ ಭಾರತೀಯ ಸಜ್ಜನರೂ ಒಂದಾಗಿ ನಿಲ್ಲಬೇಕು, ಮತ್ತು ಸಾಮಾಜಿಕ ನ್ಯಾಯ ಹಾಗೂ ನಾಗರಿಕತ್ವವನ್ನು ಅರ್ಥಮಾಡಿಕೊಳ್ಳದ ಸಜ್ಜನಿಕೆಯ ವಿರೋಧಿ ಮನೋಭಾವದವರು ಇನ್ನೊಂದು ಕಡೆ ನಿಲ್ಲಬೇಕು. ಇದು ದುರ್ಜನರಿಗೆ ಪ್ರತಿಯಾಗಿ ಸಜ್ಜನಿಕೆ ಎಂಬ ನಿಲುವು. ಅಂಥ ದುರ್ಜನರಿಗೆ ಅರ್ಥವಾಗುವ ರೀತಿಯಲ್ಲೇ ಪಾಠ ಕಲಿಸಬೇಕು. ಅಂದರೆ ಮುಯ್ಯಿಗೆ ಮಯ್ಯಿ ಪೂರ್ವ ಸ್ಥಿತಿ ಪ್ರಾಪ್ತಿ. ಇದೇ ರೀತಿ ಪರಿಹಾರವೂ ಸಹ ಯಾವುದೇ ಒಂದು ಕೋಮಿಗೆ ಸೀಮಿತವಾಗಿರಬಾರದು. ಈ ಗಲಭೆಯಲ್ಲಿ ನೊಂದ ಎಲ್ಲಾ ಕೋಮಿನ ಸಜ್ಜನರಿಗೂ ಪರಿಹಾರ ಸಿಗಬೇಕು.

ಮುಸ್ಲಿಂ ಗುಂಪುಗಳು ಧಾಳಿಮಾಡಿದಾಗ ಹಿಂದೂಗಳು ತಮ್ಮ ಕುಟುಂಬಗಳಿಗೆ ಯಾವುದೇ ರಕ್ಷಣೆ ನೀಡದೆ ಹಾಗೆಯೇ ಓಡಿಹೋದರು ಎಂಬುದು ತೀರಾ ಅಪಮಾನಕಾರಿಯಾದ ಸಂಗತಿ. ಇಂಥ ಹೇಡಿ ಜನರು ರಾಷ್ಟ್ರೀಯತೆ ಅಥವಾ ಸ್ವಯಂ ಅಧಿಕಾರದ ಜವಾಬ್ದಾರಿಗಳನ್ನು ಹೊರುವುದಕ್ಕೆ ಅರ್ಹರಲ್ಲ. ಬರೀ ಭಾಷಣಗಳಿಂದ ಜಗತ್ತನ್ನು ನಡೆಸುವುದಕ್ಕಾಗುವುದಿಲ್ಲ. ಆದ್ದರಿಂದ ಎಲ್ಲ ಸಜ್ಜನರೂ ಸೇರಿ ಈ ಮುಸ್ಲಿಮೇತರ ಜನರನ್ನು ಅವರವರ ಕುಟಂಬ ಹಾಗೂ ಜೀವಗಳನ್ನು ಕಾಪಾಡಿಕೊಳ್ಳುವ ಹಾಗೆ ಸಂಘಟಿಸುವುದು ಅಗತ್ಯ.

ಪ್ರಸ್ತುತ ಸ್ಥಿತಿಯಲ್ಲಿ, ಬಂಗಾಳದಲ್ಲಿ ಶಾಂತಿ ನೆಲೆಸುವವರೆಗೆ ಮಾತ್ರವಲ್ಲ ಶಾಂತಿಯಿಂದ ಬಾಳುವ ಕಲೆಯನ್ನು ಜನರು ಕಲಿತು, ಮೈಗೂಡಿಸಿಕೊಂಡು, ಆಚರಣೆಗೆ ತರುವವರೆಗೂ ಬಂಗಾಳವನ್ನು ರಾಜ್ಯಪಾಲರ ನೇರ ಆಳ್ವಿಕೆಯ ಅಡಿಯಲ್ಲಿ ಇಡುವುದು ಒಳ್ಳೆಯದು ಎಂದು ನನ್ನ ಭಾವನೆ. ಬಲವಂತವಾಗಿ ಮತಾಂತರಗೊಂಡ ಜನರನ್ನು ಅಥವಾ ಮುಸ್ಲಿಮರ ವಿವಾಹ ವಿಧಿಗೆ ಬಲಾತ್ಕಾರವಾಗಿ ಒಳಪಟ್ಟಂಥವರನ್ನು ಪುನಃ ಹಿಂದೂ ತೆಕ್ಕೆಗೆ ಸೇರಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪರಿಶುದ್ಧತೆ, ಧರ್ಮಗಳ ಹೆಸರಿನಲ್ಲಿ ನಿರಾಕರಿಸುತ್ತಿರುವುದು ಬಹುದೊಡ್ಡ ವಿಪರ್ಯಾಸ. ಯಾರು ತಮ್ಮ ಮಹಿಳೆಯರ ಗೌರವವನ್ನು ಕಾಪಾಡಲು, ಅಥವಾ ತಮ್ಮ ಧಾರ್ಮಿಕ ಶ್ರದ್ಧೆಯನ್ನು ಕಾಪಾಡಲು ವಿಫಲರಾದರೋ ಅಂಥವರು ಪರಿಶುದ್ಧತೆಯ ಹೆಸರಿನಲ್ಲಿ ಧರ್ಮಕ್ಕೆ ಅಂಟಿಕೊಂಡಿರುವುದು ನಾಚಿಕೆಗೇಡು.

ಇಂಥವರು ಮುಕ್ತವಾಗಿ ತಮ್ಮ ಧರ್ಮಕ್ಕೆ ಹಿಂದಿರುಗುವಂತಾಗಬೇಕು ಎಂದು ಮಹಾತ್ಮಾಗಾಂಧಿ ಮೊದಲಾದವರು ಪ್ರತಿಪಾದಿಸುತ್ತಿರುವುದು ತುಂಬ ಸಮಾಧಾನಕರ ಸಂಗತಿ. ವಕೀಲರಾಗಿ ನಿಮಗೆ ಗೊತ್ತಿದೆ. ಅನಂತರದ ಸ್ಮೃತಿಕಾರರಲ್ಲಿ ಒಬ್ಬನಾದ ದೇವಲ ಒಬ್ಬ ಕ್ರಾಂತಿಕಾರಿ, ದೇಶಭಕ್ತ ಸುಧಾರಕನಾಗಿದ್ದ. ಆತ ತನ್ನ ದೇವಲಸ್ಮೃತಿಯಲ್ಲಿ, ಅಪಹರಿಸಲ್ಪಟ್ಟ ಹೆಣ್ಣು, ಕೆಲವು ವರ್ಷಗಳ ಕಾಲ ಮುಸ್ಲಿಮನ ಜೊತೆಯಲ್ಲಿದ್ದರೂ ಸಹ ಆಕೆಯನ್ನು ಪುನಃ ಮಾತೃಧರ್ಮದಲ್ಲಿ ಅಂಗೀಕರಿಸ ಬಹುದು ಎಂದು ಹೇಳಿದ್ದಾನೆ.

ದೇವಲನ ಈ ಪರಿಹಾರಕ್ರಮ ನಿಜಕ್ಕೂ ವಿವೇಕಯುತವಾದುದು. ಗೌರವವೂ ಮತ್ತು ಸಕಾಲಿಕವೂ ಆದುದು ಎಂದು ನಾನು ಭಾವಿಸುತ್ತೇನೆ. ಈ ರೀತಿಯ ದುರಂತಗಳು ನಡೆದಿದ್ದರೆ ಅದಕ್ಕೆ ಸಂಬಂಧಪಟ್ಟ ಕೋಮಿನ ದುರ್ಬಲತೆ ಹಾಗೂ ಹೇಡಿತನವೇ ಕಾರಣ. ನಾವು ಅಂತಹ ಹೆಣ್ಣು ಮಕ್ಕಳನ್ನು ತಿರಸ್ಕರಿಸುವುದಕ್ಕೆ ಬದಲು ಆ ತಿರಸ್ಕಾರವನ್ನು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದ ಗಂಡಸರತ್ತ ತಿರುಗಿಸಬೇಕು.

ಕೆಲವರು ಒಂದು ಮೂಲಭೂತ ಅಂಶ ಕುರಿತಂತೆ ನನ್ನನ್ನು ಪ್ರಶ್ನಿಸಬಹುದು. ಆಕ್ರಮಣ ಮಾಡಿದವರು ಮುಸ್ಲಿಮರೇ ಹೊರತು ಹಿಂದೂಗಳಲ್ಲ. ಹಿಂದೂಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕೆಲಸಮಾಡಿದ್ದಾರೆ. ಇದು ನಿಸರ್ಗ ಸಹಜವಾದುದು. ಇದಕ್ಕೆ ಹಿಂದೂಗಳನ್ನು ಶಿಕ್ಷಿಸುವುದೇಕೆ ಎಂದು ಅವರು ಕೇಳಬಹುದು. ಈ ಪ್ರಶ್ನೆಯನ್ನು ಸುಲಭವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ. ಆದರೂ ನನ್ನ ಪ್ರಶ್ನೆ ಏನೆಂದರೆ ಮುಸ್ಲಿಮೇತರರಿಗೆ ನಿಸರ್ಗ ನ್ಯಾಯವನ್ನಾಗಲೀ ಅಥವಾ ಇನ್ನಾವುದೇ ನ್ಯಾಯವನ್ನಾಗಲೀ ಪ್ರಯೋಗಿಸುವಷ್ಟು ಸಾಮರ್ಥ್ಯವಿದೆಯೇ ಎಂಬುದು.
ನಿಮ್ಮ ವಿಶ್ವಾಸಿ
ಸಿ.ಆರ್. ರೆಡ್ಡಿ

| ಇನ್ನು ನಾಳೆಗೆ |

‍ಲೇಖಕರು Avadhi

June 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: