ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 13

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

13

ಕೋಮು ಗಲಭೆ

ಕೋಮುಗಲಭೆಗಳಿಗೆ ನಿಜವಾದ ಕಾರಣ ಕರ್ತರೆಂದರೆ ಹೊಟ್ಟೆ ತುಂಬಿದ ಜನ, ಧರ್ಮಾಂಧರು ಹಾಗೂ ವಿಘ್ನ ಸಂತೋಷಿಗಳು ಮತ್ತು ರಾಜಕಾರಣಿಗಳು. ತೀರಾ ಕೆಳವರ್ಗದವರಿಗೆ ಸಾಮಾನ್ಯ ಜನರಿಗೆ ಇದರ ಬಗ್ಗೆ ಕಿಂಚಿತ್ತೂ ಗಮನವಿರುವುದಿಲ್ಲ. ಆದರೆ ಇಂಥ ಗಲಭೆಗಳು ನಡೆದಾಗ ಅಲ್ಲೋಲ-ಕಲ್ಲೋಲವಾಗುವುದು ಮಾತ್ರ ಇಂಥ ಸಾಮಾನ್ಯ ಜನರ ಬದುಕೇ. ಬಡಜನರಿಗೆ ತಮ್ಮ ಹೊಟ್ಟೆ ಪಾಡಲ್ಲದೆ ಬೇರೆ ಯಾವುದೂ ಮುಖ್ಯವಲ್ಲ. ಆದರೂ ಇಂಥ ಗಲಭೆಗಳು ನಡೆದಾಗ ಅವರನ್ನೂ ನಿರ್ದಿಷ್ಟ ಕೋಮಿನ ಗುಂಪಿಗೇ ಸೇರಿಸಿ ನೋಡಲಾಗುತ್ತದೆ.

ಈಗ ಹಲವಾರು ವರ್ಷಗಳ ಹಿಂದೆ ಅದೊಂದು ದಿನ ಬಹುಶಃ ಅದು ಅಯೋಧ್ಯೆಯ ತೀರ್ಪಿನ ಸಂಬಂಧವೋ ಏನೋ. ಎಲ್ಲಾ ಕಡೆಯೂ ಬಂದ್‌ನ ವಾತಾವರಣ. ಆಟೋಗಳು ಸಿಗುವುದೇ ಕಷ್ಟವಾಗಿತ್ತು. ಅಪರೂಪಕ್ಕೆ ಒಂದು ಆಟೋ ಕಂಡಿತು. ಅವನು ಅಪ್ಪಟ ಮುಸ್ಲಿಂ ಎಂದು ಅವನ ವೇಷಭೂಷಣಗಳೇ ಹೇಳುತ್ತಿದ್ದವು. ನಾನು ಆಟೋ ಹತ್ತಿ ಕುಳಿತು ಸ್ವಲ್ಪ ದೂರ ಹೋದ ನಂತರ ಅವನೇ ಮಾತು ಆರಂಭಿಸಿದ. ನಮ್ಮ ಮುಖ ನೋಡಿದರೆ ಸಾಕು ಯಾರೂ ನಮ್ಮ ಆಟೋ ಹತ್ತಲ್ಲ, ಯಾರೋ ಮಾಡಿದ ತಪ್ಪಿಗೆ ನಾವು ಅನುಭವಿಸಬೇಕು ಅಂದ. ನಾನು ಅವನ ಮಾತಿಗೆ ಜೊತೆಗೂಡಿಸಿ ಮಾತಾಡುತ್ತಲೇ ಕ್ಷೇಮವಾಗಿ ಮನೆ ಸೇರಿದೆ.

ಇನ್ನೊಂದು ಸಲ ಚಾಮರಾಜ ಪೇಟೆ ೧೦ನೇ ಕ್ರಾಸ್‌ನಲ್ಲಿರುವ ಸ್ವ್ಯಾನ್ ಪ್ರಿಂಟರ್ಸ್‌ ಗೆ ಹೋಗಿ ಕೆಲಸ ಮುಗಿಸಿ ಬರುವ ಹೊತ್ತಿಗೆ ರಾತ್ರಿ ೭-೩೦ ದಾಟಿತ್ತು. ಸಾಮಾನ್ಯವಾಗಿ ಮನೆಯಿಂದ ಹೋಗುವಾಗ ಕರೆದ ಆಟೋಗಳೆಲ್ಲ ಬರುತ್ತವೆ. ಆದರೆ ಹಿಂದಿರುಗುವಾಗ ಮಾತ್ರ ಏಳೆಂಟು ಆಟೋಗಳನ್ನಾದರೂ ಕರೆಯಬೇಕು.

ಸಂಜೆ ಕಳೆದು ಕತ್ತಲು ಕವಿಯುತ್ತಿದ್ದಂತೆ ಆಟೋ ಸಿಗುವ ಸಾಧ್ಯತೆ ಇನ್ನಷ್ಟು ಕಡಿಮೆಯಾಗುತ್ತಾ ಹೋಗುತ್ತದೆ. ಸಿಟಿ ಬಸ್‌ಗಳಾವುವೂ ನಾನು ಹೋಗುವ ದಾರಿಯಲ್ಲಿ ಬರುವುದಿಲ್ಲ. ನಡೆದೇ ಮನೆ ತಲುಪುವುದು ಕಷ್ಟ. ದೂರವಾದರೂ ಇಬ್ಬರಿದ್ದರೆ ಹೇಗೋ ಮಾತಾಡಿಕೊಂಡು ಹೋಗಬಹುದು. ಇನ್ನೂ ವಿಶೇಷವೆಂದರೆ ಆ ದಾರಿಯಲ್ಲಿ ಜನ ಸಂಚಾರವೇ ಕಡಿಮೆ. ಇಕ್ಕೆಲಗಳಲ್ಲೂ ಸ್ಮಶಾನಗಳು. ಅದೆಲ್ಲವೂ ಸ್ಮಶಾನ ಭೂಮಿಯೇ.

ಸಾವಿನಲ್ಲಿ ಎಲ್ಲರೂ ಸಮಾನ ಎಂಬ ಮಾತಿದೆ. ಆದರೆ ಇಲ್ಲಿ ಬೇರೆ ಬೇರೆ ಜಾತಿ ಕೋಮುಗಳವರಿಗೆ ಬೇರೆ ಬೇರೆಯೇ ಸ್ಮಶಾನಗಳು. ಒಂದಲ್ಲ ಒಂದರಲ್ಲಿ ಹಗಲಿರುಳೂ ಅಂತ್ಯಕ್ರಿಯೆಗಳು ನಡೆದೇ ಇರುತ್ತವೆ. ಅಲ್ಲಿ ಬೀಸುವ ಗಾಳಿಯಲ್ಲಿ ಹೆಣ ಸುಡುವ ವಾಸನೆ, ಹೊಗೆ ಬರುತ್ತಿರುತ್ತದೆ. ಅಂತೂ ಅದೊಂದು ವಿಚಿತ್ರ ಅನುಭವ. ಹೀಗೇ ಆ ದಿನ ೧೦-೧೫ ಆಟೋಗಳಿಗಾದರೂ ಪ್ರಯತ್ನಿಸಿರಬೇಕು. ಎಲ್ಲವೂ ಮೆಜೆಸ್ಟಿಕ್ ಕಡೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದವು.

ನಾನು ನಿರಾಶೆಯ ಮುಖಮಾಡಿಕೊಂಡು ನೋಡುತ್ತಿದ್ದಾಗ ಎದುರುಗಡೆ ಸಂದಿಯಿಂದ ಒಂದು ಆಟೋ ನುಸುಳಿಕೊಂಡು ಬಂದಿತು. ನಾನು ನೋಡುತ್ತಲೇ ಇದ್ದೆ. ಅವನೂ ನೋಡಿದ. ಆದರೆ ಯಾವಾಗ ಅವನ ಆಟೋ ಆ ಕಡೆಯ ದಾರಿಗೆ ತಿರುಗಿತೋ ಇದೂ ಅಷ್ಟೇ ಎನ್ನುತ್ತಾ ಆಚೀಚೆ ಮತ್ಯಾವುದಾದರೂ ಆಟೋ ಬರುವುದೇನೋ ಎಂದು ಕಣ್ಣಾಡಿಸುತ್ತಾ ಇದ್ದೆ.

ಸ್ವಲ್ಪ ಹೊತ್ತಿನ ನಂತರ ಒಂದು ಆಟೋ ನನ್ನೆದುರು ಬಂದು ನಿಂತಿತು. ನಾನು ಬರ್ತೀರಾ ಅಂತ ನಮ್ಮ ಬೀದಿಯ ವಿಳಾಸ ಹೇಳಿ ಅವನು ತಲೆ ಆಡಿಸಿದ ಕೂಡಲೇ ಹತ್ತಿ ಕುಳಿತೆ. ಆಗಿನಿಂದ ನಿಂತೇ ಇದ್ದೀರಿ ಮತ್ತೆ ಕರೀಲೆ ಇಲ್ಲ. ನಾನು ಆಟೋ ತಿರುಗಿಸಿ ಅಲ್ಲೆ ಬೇಕರಿಗೆ ಹೋಗಿ ಇದನ್ನು ಕೊಂಡುಕೊಂಡು ಬಂದೆ. ನೋಡಿದರೆ ನೀವು ಇನ್ನೂ ಹಾಗೆ ನಿಂತಿದ್ದೀರಿ. ಆಟೋಗೇ ಕಾಯ್ತಿರಬೇಕು ಅಂತ ಬಂದೆ ಅಂದ. ಅವನೂ ಮುಸ್ಲಿಂ. ಸುಮಾರು ಆರವತ್ತರ ಅಂಚಿನ ವಯಸ್ಸು. ಇದೇನು ಇಷ್ಟು ಹೊತ್ತಾದ ಮೇಲೂ ಆಟೋ ಓಡಿಸ್ತಾ ಇದೀರಿ. ನಾಳೆ ರಂಜಾನ್ ಅಲ್ವಾ, ಹಬ್ಬಕ್ಕೆ ಏನೂ ತಯಾರಿ ಇಲ್ವಾ ಎಂದು ಕೇಳಿದೆ.

ನಮ್ಗೆಲ್ಲ ಏನು ಹಬ್ಬ ಮೇಡಂ, ಹಬ್ಬ ಅಂತ ಮನೆಲಿ ಕೂತ್ರೆ ಹೊಟ್ಟೆ ಕೇಳಬೇಕಲ್ಲ ಅಂದ. ಸಂಪ್ರದಾಯ ಎಂಬ ಕಾರಣಕ್ಕಾಗಿ ಇಂಥವರು ತಮ್ಮ ಧರ್ಮದ ಕೆಲವು ಆಚರಣೆಗಳನ್ನು ಪಾಲಿಸುತ್ತಾರಾದರೂ ಮಾನವೀಯತೆಯ ವಿಷಯ ಬಂದಾಗ ನೀವು ಸಹಾಯಕ್ಕಾಗಿ ನೆಚ್ಚಬಹುದಾದ ಜನರೆಂದರೆ ಇವರು ಮಾತ್ರ.

ಕರೋನಾದಿಂದ ಸಾವು ಸಂಭವಿಸಿದ ಸಂದರ್ಭದಲ್ಲಿ ಶವವನ್ನು ಸಾಗಿಸಲು ಯಾರೂ ತಯಾರಿಲ್ಲದಾಗ ಮುಸ್ಲಿಂ ಕೋಮಿನವರು ನೆರವಾಗಿದ್ದ ಅನೇಕ ಘಟನೆಗಳ ಬಗ್ಗೆ ಕೇಳಿದ್ದೆ ಮತ್ತು ಈಶಾನ್ಯ ದೆಹಲಿಯಲ್ಲಿ, ಕರೋನಾ ಪ್ರಾರಂಭದ ಕಾಲದಿಂದಲೂ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವ ಹಾಗೂ ಮೃತ ಪಟ್ಟವರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಕೆಲಸ ಮಾಡುತ್ತಿದ್ದ ಆ್ಯಂಬುಲೆನ್ಸ್ ಚಾಲಕ ಅರಿಫ್ ಖಾನ್ ಬಗ್ಗೆ ಪೇಪರ್ ನಲ್ಲಿ ಓದಿದ್ದೆ.

ಭಾರತ ಪಾಕಿಸ್ತಾನದ ವಿಭಜನೆಯಿಂದ ಹಿಡಿದು ಇಂದಿನವರೆಗೂ ಒಂದಲ್ಲ ಒಂದು ಕಡೆ ಕೋಮುಗಲಭೆಗಳು ನಡೆಯುತ್ತಲೇ ಇವೆ. ಅಮಾಯಕರು ಸಾಯುತ್ತಲೇ ಇದ್ದಾರೆ. ಹೆಣ್ಣುಮಕ್ಕಳ ಅತ್ಯಾಚಾರ, ನಿರಪರಾಧಿಗಳ ಜೈಲುಶಿಕ್ಷೆ, ಜೀವನೋಪಾಯದ ದಾರಿಯೇ ಮುಚ್ಚಿ ಹೋಗುವುದು, ಇವು ಹಾಗೆ ಹಾಗೇ ಮುಂದುವರೆದಿವೆ.

ಕೊನೆಗೆ ಎಲ್ಲಾ ಗಲಭೆಗಳು ರಾಜಕೀಯದ ಬಣ್ಣ ಪಡೆದು ಮೂಲ ಸತ್ಯವನ್ನು ಮರೆಮಾಚಿ ಬಿಡುತ್ತವೆ. ಇಂಥ ಗಲಭೆಗಳು ಎಲ್ಲಿ ಯಾವಾಗ ನಡೆದರೂ ಅದರ ಕಾರಣ ಪರಿಣಾಮಗಳು ಒಂದೇ ರೀತಿ. ಇದಕ್ಕೊಂದು ಸ್ಪಷ್ಟ ಪರಿಹಾರ ಮತ್ತು ನೊಂದವರು ತಮ್ಮ ಬದುಕು ಕಟ್ಟಿಕೊಳ್ಳುವುದಕ್ಕೆ ನೆರವಾಗುವಂಥ ಕಾರ್ಯಕ್ರಮಗಳು ಇಲ್ಲವೇ ಇಲ್ಲ.

ನಾನು ಆಸ್ಪತ್ರೆಯಲ್ಲಿದ್ದಾಗ ದಿನವೂ ಮನೆಯಿಂದಲೇ ಊಟ ತರಿಸುತ್ತಿದ್ದೆ. ಆದರೆ ಅದೇಕೋ ಏನೋ ನನಗೆ ಪತ್ರಿಕೆಯ ನೆನಪೇ ಬಂದಿರಲಿಲ್ಲ. ಲಾಕ್ ಡೌನ್ ಘೋಷಣೆಯಾದ ನಂತರ ಎಷ್ಟೋ ಮಂದಿ ಸೋಂಕಿನ ಹೆದರಿಕೆಯಿಂದ ಪೇಪರ್ ತರಿಸುವುದನ್ನೇ ನಿಲ್ಲಿಸಿದ್ದರು. ಕೆಲವರಂತೂ ಸುದ್ದಿ ಪತ್ರಿಕೆಗಳು ಈಗ ಪ್ರಕಟವಾಗುತ್ತಲೇ ಇಲ್ಲ ಅಂತ ತಿಳಿದಿದ್ದರು. ನಾವು ಮಾತ್ರ ನಮ್ಮ ದಿನಚರಿಯ ಯಾವೊಂದು ಅಂಶವನ್ನೂ ಬದಲಾಯಿಸಿರಲಿಲ್ಲ.

ಮಗಳು ಮೇಘ ಫೋನ್ ಮಾಡಿದಾಗ ಕೆ.ಜಿ. ಹಳ್ಳಿಯಲ್ಲಿ ನಡೆದ ಕೋಮು ಗಲಭೆ ಬಗ್ಗೆ ತಿಳಿಸಿದಳು. ಮಾತ್ರವಲ್ಲ ಇಂತಹ ದೊಡ್ಡ ಗಲಭೆ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದೇ ಇರಲಿಲ್ಲ ಎಂಬುದು ಅವಳು ಕೊಟ್ಟ ವಿವರಗಳಿಂದ ತಿಳಿಯಿತು. ಆಸ್ಪತ್ರೆಯಿಂದ ಮನೆಗೆ ಬರುವಷ್ಟರಲ್ಲಿ ಗಲಭೆಯ ಬಿಸಿ ಎಲ್ಲಾ ಆರಿ, ಆರೋಪ ಪ್ರತ್ಯಾರೋಪಗಳು ನಿಂತು, ಕೆಲವರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುವ ಹಂತಕ್ಕೆ ಬಂದಿತ್ತು. ನಾನು ಆಗಷ್ಟೇ ಸಿ.ಆರ್. ರೆಡ್ಡಿಯವರನ್ನು ಕುರಿತು ಪುಸ್ತಕವನ್ನು ಬರೆದು ಮುಗಿಸಿದ್ದೆ.

| ಇನ್ನು ನಾಳೆಗೆ |

‍ಲೇಖಕರು Avadhi

June 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: