ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 12

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

12

ನರ್ಸಿಂಗ್ ಲೋಕ

ನಾನು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕರ್ನಾಟಕ ಸಾಹಿತ್ಯ ಅಕಾಡಮಿಯ ‘ಸಾಲು ದೀಪಗಳು’ ಗ್ರಂಥಕ್ಕಾಗಿ ಕರೀಂಖಾನರ ಬಗ್ಗೆ ಲೇಖನ ಬರೆಯಲು ಕರೀಂಖಾನರು ನೆಲೆಸಿದ್ದ ಅಲಸೂರಿನಲ್ಲಿಯ ಅವರ ತಮ್ಮನ ಮನೆಗೆ ಹೋಗಿದ್ದೆ. ಆ ಮನೆಯ ಹೊರಗಿನ ಕೋಣೆ ಕರೀಂಖಾನರಿಗೇ ಮೀಸಲಾಗಿತ್ತು. ನಾನು ಮಧ್ಯಾಹ್ನದಿಂದ ಸಂಜೆಯವರೆಗೆ ಕರೀಂಖಾನರೊಂದಿಗೆ ಮಾತುಕಥೆ ನಡೆಸುತ್ತಾ ಕುಳಿತಿದ್ದಷ್ಟು ಹೊತ್ತು, ಒಳಗಿನ ಕೋಣೆಯಿಂದ ೫೦-೬೦ರ ದಶಕದ ಹಿಂದಿ ಸಿನೆಮಾ ಹಾಡುಗಳು ಕೇಳಿಬರುತ್ತಿದ್ದವು. ಉರ್ದು ಸಾಹಿತ್ಯದ ಬಗ್ಗೆ ಬಹಳ ಆಳವಾಗಿ ತಿಳಿದುಕೊಂಡಿದ್ದ ಕರೀಂಖಾನರ ಸಾಹಿತ್ಯದಲ್ಲಿಯೂ ಹಿಂದಿ ಹಾಗೂ ಉರ್ದು ಸಾಹಿತ್ಯ ಮತ್ತು ಗೀತೆಗಳ ಪ್ರಭಾವ ಇರುವುದನ್ನು ಗುರುತಿಸಬಹುದು.

ನನಗೂ ಚಿಕ್ಕಂದಿನಿಂದಲೇ ಹಿಂದಿ ಸಿನೆಮಾ ಹಾಡುಗಳನ್ನು ಕೇಳುವ ಹುಚ್ಚು. ನಾನು ಆಸ್ಪತ್ರೆಯಲ್ಲಿ ಹೀಗೇ ಹಿಂದಿ ಸಿನೆಮಾ ಹಾಡುಗಳನ್ನು ಮೊಬೈಲ್‌ನಲ್ಲಿ ಕೇಳುತ್ತಿದ್ದಾಗ ನೆಲ ಒರೆಸಲು ಬಂದಿದ್ದ ಸಾದಿಯಾ ಏನು ಮೇಡಂ ನಿಮಗೂ ಈ ಹಾಡುಗಳು ಇಷ್ಟಾನಾ, ನಮ್ಮ ತಾಯಿ ಯಾವಾಗಲೂ ಇವುಗಳನ್ನು ಕೇಳುತ್ತಿರುತ್ತಾರೆ ಅಂದಳು. ಈ ಹಾಡುಗಳ ಕಾರಣದಿಂದಲೇ ಸಾದಿಯಾ ನನಗೆ ಹತ್ತಿರದವಳಾದಳು.

ಮದುವೆಯಾಗಿ ಈಗಾಗಲೇ ಎಸ್.ಎಸ್.ಎಲ್.ಸಿ. ಓದುವಷ್ಟು ದೊಡ್ಡ ಮಕ್ಕಳಿದ್ದ ಅವಳು ಥೇಟ್ ಹಿಂದಿ ಸಿನಿಮಾದ ಫರೀದ ಜಲಾಲ್ ಥರಾನೇ ಇದ್ದಳು. ಒಂದೊಂದು ಸಲ ನಾನು ಬೇರೆ ಹಾಡುಗಳನ್ನು ಕೇಳುತ್ತಿದ್ದರೂ ಅವಳು ಬಂದಾಗ ಮಾತ್ರ ಅವಳು ಕೇಳುವಂಥ ಹಾಡುಗಳನ್ನು ಹಾಕುತ್ತಿದ್ದೆ. ಕಾರಿಡಾರಿನಲ್ಲಿ ಕೆಲಸ ಮಾಡುವಾಗಲೂ ಅವಳು ಈ ಹಾಡುಗಳಿಗೆ ಕಿವಿಗೊಡುತ್ತಿದ್ದಳು.

ಈ ಸಾದಿಯಾ ಅಕ್ಕ ನುರೇನ್. ಅವಳು ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಅವಳು ಸಾದಿಯಾಗಿಂತ ಎತ್ತರವಾಗಿದ್ದಳು. ಇನ್ನೂ ದಷ್ಟಪುಷ್ಟವಾಗಿದ್ದಳು. ಬೇಕಿದ್ದರೆ ಒಂದು ಬೆಟ್ಟವನ್ನೇ ನಿರಾಯಾಸವಾಗಿ ಎತ್ತಿ ಬಿಡುವಳೇನೋ ಎಂಬಂತಹ ಚೈತನ್ಯ ಅವಳಲ್ಲಿ.

ನಾನು ಮೊದಲಿದ್ದ ವಾರ್ಡ್ ನಲ್ಲಿದ್ದ ಪೇಶಂಟ್ ಸೀತಮ್ಮನವರು ಅಲ್ಲಿಗೆ ಬಂದು ಆಗಲೇ ೩-೪ ದಿನಗಳಾಗಿದ್ದವು. ಹೀಗಾಗಿ ಅವರು ಈಗಾಗಲೇ ಆಸ್ಪತ್ರೆಯ ವಾತಾವರಣಕ್ಕೆ ಮತ್ತು ಆಸ್ಪತ್ರೆಯವರು ಇವರಿಗೆ ಬಹಳ ಪರಿಚಿತರಾಗಿ ಬಿಟ್ಟಿದ್ದರು. ಸಾದಿಯಾಳ ಈ ಅಕ್ಕ ನುರೇನ್ ಬಹಳ ಜಾಣೆ. ಸೀತಮ್ಮನವರಿಗೂ ಮತ್ತು ಅವರ ಬಗ್ಗೆ ವಿಚಾರಿಸಿಕೊಳ್ಳಲು ಪ್ರತಿದಿನ ಬೆಳಿಗ್ಗೆ ಬಂದು ಆಸ್ಪತ್ರೆಯ ಹೊರಗೆ ಕಾದಿರುತ್ತಿದ್ದ ಸೀತಮ್ಮನವರ ಮಗ ರಾಜಾರಾಮಣ್ಣನಿಗೂ ನಡುವೆ ಇವಳು ಸಂದೇಶ ವಾಹಕಿಯಾಗಿದ್ದಳು.

ಸೀತಮ್ಮನವರಿಗೆ ಕಳೆದ ವರ್ಷ ಕುತ್ತಿಗೆಯ ಶಸ್ತ್ರ ಚಿಕಿತ್ಸೆಯಾಗಿತ್ತು. ಸಂಧಿವಾತ, ಮಧುಮೇಹ, ಮೊದಲಾದ ತೊಂದರೆಗಳೂ ಅವರಿಗಿದ್ದವು. ಅವರಿಗೆ ಎದ್ದು ಓಡಾಡುವುದಾಗಲೀ, ಕೆಳಗೆ ಏನಾದರೂ ಬಿದ್ದರೆ ಅದನ್ನು ಬಗ್ಗಿ ಎತ್ತಿಕೊಳ್ಳುವುದಕ್ಕಾಗಲೀ ಆಗುತ್ತಿರಲಿಲ್ಲ. ಹೀಗಾಗಿ ಅವರು ಇನ್ನೊಬ್ಬರನ್ನು ಆಶ್ರಯಿಸುವುದು ಅನಿವಾರ್ಯವಾಗಿತ್ತು.

ಈ ಅವಕಾಶವನ್ನು ನುರೇನ್ ಬಹಳ ಚೆನ್ನಾಗಿ ಬಳಸಿಕೊಂಡಿದ್ದಳು. ಅವಳದು ಅತ್ಯಂತ ಮಧುರವಾದ ದನಿ. ಸೀತಮ್ಮನವರ ನೈಟಿ, ಡೈಪರ್‌ನ್ನು ಬದಲಾಯಿಸುತ್ತಾ, ಬೆಳಿಗ್ಗೆ ರಾಜಾರಾಮಣ್ಣ ಸಿಕ್ಕಿದ್ದರು ಎಂದು ಮಾತು ಆರಂಭಿಸಿ, ಯಾವುದೇ ರೀತಿಯ ನೋವಾಗದಂತೆ ಮಾತಾಡುತ್ತಲೇ ಅವರ ಆರೈಕೆಯನ್ನು ಮಾಡಿ ಮುಗಿಸುತ್ತಿದ್ದಳು. ಅವಳು ಯಾವಾಗಲೂ ನೈಟ್ ಡ್ಯೂಟಿನೇ ಮಾಡುತ್ತಿದ್ದುದು. ಈ ಬಗ್ಗೆ ವಿಚಾರಿಸಿದಾಗ ಗೊತ್ತಾಗಿದ್ದು ಅವಳ ಗಂಡ ಬೋರ್ಡ್ಗಳಿಗೆ ಪೇಯಿಂಟ್‌ಮಾಡುವ ಕೆಲಸ ಮಾಡುತ್ತಿದ್ದ. ಈಗಾಗಲೇ ೫ ವರ್ಷದ ಹಿಂದೆ ವಿಪರೀತ ಕುಡಿತದಿಂದಾಗಿ ಸತ್ತಿದ್ದ. ನಿಮ್ಮ ಜನರೂ ಕುಡಿತಾರಾ ಅಂದಾಗ ಅದಕ್ಕೆ ಜಾತಿಯೇನು ಬಂತು ಅಂದಿದ್ದಳು. ಅವಳಿಗೆ ಸಂಪೂರ್ಣ ಅಂಗವಿಕಲನಾದ ಒಬ್ಬ ಮಗನಿದ್ದ. ಡೈಪರ್ ಬದಲಾಯಿಸುವುದರಿಂದ ಹಿಡಿದು ಪ್ರತಿಯೊಂದನ್ನೂ ಇನ್ನೊಬ್ಬರು ನೋಡಿಕೊಳ್ಳಬೇಕಾಗಿತ್ತು.

ಈಗಾಗಲೇ ೧೫ ವರ್ಷ ಆವನಿಗೆ. ಇವಳ ಗಂಡ ಇದ್ದಾಗ ಯಾವುದೇ ರೀತಿಯ ಹಣಕಾಸಿನ ಸಹಾಯವಾಗದಿದ್ದರೂ ಮಗನ ಸಂಪೂರ್ಣ ಆರೈಕೆಯನ್ನು ಮಾತ್ರ ಅವನೇ ಮಾಡುತ್ತಿದ್ದನಂತೆ. ಈಗ ಆತ ತೀರಿಕೊಂಡ ಮೇಲೆ ಬೆಳಿಗ್ಗೆ ಎಲ್ಲ ಇವಳು ಮನೆಯಲ್ಲಿದ್ದು ನೋಡಿಕೊಳ್ಳುತ್ತಾಳೆ. ಇವಳು ರಾತ್ರಿ ಡ್ಯೂಟಿಗೆ ಬಂದಾಗ ತಾಯಿ ಬಂದು ಇರುತ್ತಾರಂತೆ.

ಮಗಳಿಗೆ ಮದುವೆಯಾಗಿ ಬೇರೆ ಕಡೆ ಇದ್ದಾಳೆ. ಅವಳ ಗಂಡನಿಗೆ ಸಂಪಾದನೆ ಚೆನ್ನಾಗಿರುವುದರಿಂದ ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡು ಇರು ಅಂದಿದ್ದಕ್ಕೆ ಮನೆಯಲ್ಲೇ ಇದ್ದು ಸುತ್ತಮುತ್ತಲಿನ ನಾಲ್ಕಾರು ಮಕ್ಕಳನ್ನು ಸೇರಿಸಿಕೊಂಡು ಮದ್ರಾಸಾ ನಡೆಸುತ್ತಾಳಂತೆ. ನುರೇನ್ ಮಾಡುವ ಸೇವೆಗಾಗಿ ಸೀತಮ್ಮನೂ ಪ್ರತಿ ಸಲ ಹಣ ಕೊಡುತ್ತಿದ್ದರು. ಅತ್ತ ಅವರ ಮಗನೂ ಕೊಡುತ್ತಿದ್ದ. ನುರೇನ್ ಹೋದ ನಂತರ ಸೀತಮ್ಮ ನೋಡಿ ನಾನಂತೂ ಕೊಡುತ್ತೀನಿ. ಕೊಡಬೇಡ ಅಂದರೂ ಅವನು ಕೊಡುತ್ತಾನೆ ಎಂದು ಗೊಣಗಿಕೊಳ್ಳುತ್ತಿದ್ದರು.

ನನ್ನ ವಾರ್ಡ್ ಬದಲಾದ ನಂತರ ಒಮ್ಮೆ ಅವಳು ನಾನಿದ್ದ ಕಡೆ ಬಂದಾಗ ಸೀತಮ್ಮ ಹೇಗಿದ್ದಾರೆ ಅಂತ ಕೇಳಿದೆ. ಅವರನ್ನು ಐಸಿಯುಗೆ ಹಾಕಿದ್ದಾರೆ ಅಂದಾಗ ಬೆಚ್ಚಿಬಿದ್ದೆ. ಐ.ಸಿ.ಯು.ಗೆ ನಾವು ಹೋಗುವ ಹಾಗಿಲ್ಲ. ಮತ್ತು ಬೇರೆ ಯಾರೂ ನೋಡುವ ಹಾಗಿಲ್ಲ. ಅದಕ್ಕೇ ಅವರನ್ನು ಅಲ್ಲಿಗೆ ಹಾಕುವ ಮೊದಲು ಅವರ ಮಗನಿಗೆ ಹೇಳಿ ವಿಡಿಯೋ ಮಾಡಿ ಮಾತಾಡಿಸಿದೆ, ಅಯ್ಯೋ ಅವರ ಮಕ್ಕಳು ಮೊಮ್ಮಕ್ಕಳೂ ಸೊಸೆಯಂದಿರೂ ಎಷ್ಟು ಅತ್ತರು ಗೊತ್ತಾ ಮೇಡಂ ಅಂದಳು. ಅವಳ ಸಜ್ಜನಿಕೆಗೆ ನಾನು ಕರಗಿಹೋದೆ. ಐ.ಸಿ.ಯು. ನಲ್ಲಿದ್ದವರ ಸ್ಥಿತಿಗತಿ ಹಾಗೂ ಒಂದು ವೇಳೆ ಅವರು ಸಾವಿಗೀಡಾದರೆ ಈ ರೀತಿ ವಿಡಿಯೋ ಮೂಲಕವಾದರೂ ಅವರ ಕುಟುಂಬದವರಿಗೆ ಮುಖದರ್ಶನ ಮಾಡಿಸುವ ವ್ಯವಸ್ಥೆಯನ್ನು ಮಾಡುವ ಪ್ರಜ್ಞೆ ನಮ್ಮ ಸರ್ಕಾರಕ್ಕೆ ಎಂದಾದರೂ ಬಂದೀತೇ?

ಒಂದು ಸಲ ಸೀತಮ್ಮನವರು ತಮ್ಮ ಎರಡನೇ ಮಗ ತಮಗಾಗಿ ಊಟ ಬಿಟ್ಟು ಅಳುತ್ತಾ ಇದ್ದುದನ್ನು ತಿಳಿದು ಫೋನಿನಲ್ಲಿ, ನೋಡು ಹೀಗೆಲ್ಲ ಮಾಡಿದರೆ ನಾನು ಮನೆಗೇ ಬರಲ್ಲ. ಇಲ್ಲೆ ಇದ್ದು ಬಿಡುತ್ತೀನಿ ಅಂದಿದ್ದರು. ಆ ಮಾತು ನಿಜವೇ ಆಯಿತು. ಐಸಿಯುಗೆ ಹಾಕಿದ ಕೆಲವೇ ದಿನಗಳಲ್ಲಿ ಸೀತಮ್ಮ ತೀರಿಕೊಂಡಿದ್ದರು. ನಾನು ಆಸ್ಪತ್ರೆಯಲ್ಲಿರುವಾಗಲೇ ಅವರು ತೀರಿಕೊಂಡಿದ್ದರು. ನಾನು ಹೆದರಬಹುದು ಎಂದು ಅದನ್ನು ನನಗೆ ತಿಳಿಸಿರಲಿಲ್ಲ. ಸೀತಮ್ಮ ಅವರ ಮಕ್ಕಳು ಹಾಗೂ ನುರೇನ್ ನನ್ನ ನೆನಪಿನಿಂದ ಎಂದೂ ಅಳಿದು ಹೋಗುವುದಿಲ್ಲ.

ಮೈಸೂರನ್ನು ತನ್ನ ಪ್ರಾಣದಷ್ಟೇ ಪ್ರೀತಿಸುತ್ತಿದ್ದ ಸುದೀಪ್ ವಾರದ ಕೊನೆಯ ದಿನ ಬಂದರೆ ಮೈಸೂರಿಗೆ ಹೋಗಿ ಅಲ್ಲಿ ಎರಡು ದಿನವಿದ್ದು ಮುಂದಿನ ಐದು ದಿನಗಳಿಗಾಗುವಷ್ಟು ಉತ್ಸಾಹ, ಉಲ್ಲಾಸ ತುಂಬಿಕೊಂಡು ಕೆಲಸಕ್ಕೆ ಮರಳುತ್ತಿದ್ದ. ನಾನು ಮೈಸೂರಿನಲ್ಲಿ ಪಿಎಚ್.ಡಿ ಮಾಡಿದ್ದು ಗಂಗೋತ್ರಿಯಲ್ಲಿ ಅಂದಾಗಂತೂ ನನ್ನ ಪುಣ್ಯವನ್ನು ಅವನು ಕೊಂಡಾಡಿದ್ದೇ ಕೊಂಡಾಡಿದ್ದು. ಎಷ್ಟು ಪುಣ್ಯವಂತರು ಮೇಡಂ ನೀವು. ನನಗೆ ಏನಾದರೂ ಸರಿ, ಗಂಗೋತ್ರಿಯಲ್ಲಿ ಯಾವುದಾದರೂ ಒಂದು ಎಂ.ಎ. ಮಾಡಬೇಕು ಅಂತ ಎಷ್ಟು ಆಸೆಯಿತ್ತು. ಏನೋ ನೋಡಿ ಈ ಕೆಲಸದಲ್ಲಿ ಸಿಕ್ಕಿಹಾಕಿಕೊಂಡೆ ಎನ್ನುತ್ತಾ ತನ್ನ ಸಂಕಟವನ್ನು ತೋಡಿಕೊಂಡ. ಇಷ್ಟಾಗಿಯೂ ಅವನು ಅತ್ಯಂತ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ.

ಈ ಕರೋನಾ ವೈರಸ್ ತುಂಬ ವೀಕ್ ಮೇಡಂ. ಮೆಣಸು, ಬೆಳ್ಳುಳ್ಳಿ, ಶುಂಠಿ, ಪುದೀನಾ, ಹಸಿ ಮೆಣಸಿನಕಾಯಿ, ಚಕ್ಕೆ, ಲವಂಗ, ಅರಿಷಿಣ ಮಿಕ್ಸಿಗೆ ಹಾಕಿ ಒಂದು ಲೋಟ ಬೆಳಿಗ್ಗೆ ಒಂದು ಲೋಟ ರಾತ್ರಿ ಖಾರಖಾರವಾಗಿ ಕಷಾಯ ಕುಡಿದುಬಿಡ್ತೀನಿ. ಅದರ ರುಚಿ ಬಗ್ಗೆ ಯೋಚಿಸುವುದಿಲ್ಲ. ನೀವು ನಾನ್‌ವೆಜ್ ನವರು. ಇದೇ ಥರಾ ಮಸಾಲೆ ಹಾಕಿ ಚಿಕನ್ ಮಾಡಿಕೊಂಡು ತಿನ್ನಿ ಅಂತ ನನಗೂ ರೆಸಿಪಿ ಹೇಳಿಕೊಟ್ಟ.

ಇಂಥಾ ಯುವಕರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸಕ್ಕೆ ಸರಿಯಾದ ಸಂಭಾವನೆಯಿಲ್ಲದೆ ದುಡಿಯುವಾಗ ಅವರ ಅಳಲು ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ಕೆಲಸದ ಭದ್ರತೆಯಿಲ್ಲ, ಹೊಸ ಯೋಜನೆಗಳಿಗೆ ಕೈ ಹಾಕುವಂತಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರು ಮಾಡುವ ಕೆಲಸಕ್ಕೆ ಸರಿಯಾದ ಮನ್ನಣೆಯೂ ಇರುವುದಿಲ್ಲ. ಸಂಭಾವನೆಗಿಂತ ಹೆಚ್ಚಾಗಿ ತಮ್ಮ ಶ್ರಮಕ್ಕೆ ಮನ್ನಣೆಯಿಲ್ಲದಿರುವ ಕಡೆ ದುಡಿಯಬೇಕಾದ ಅನಿವಾರ್ಯತೆಯೇ ಆತನಿಗೆ ಹೆಚ್ಚು ದುಃಖ ತಂದಿತ್ತು.

ಈಗಲಾದರೂ ವಯಸ್ಸು ದಾಟುತ್ತಿದೆ. ಕೆ.ಪಿ.ಎಸ್.ಸಿ. ಯವರೂ ಕಾಲ್ ಮಾಡುತ್ತಿಲ್ಲ, ನಮಗೆ ಭವಿಷ್ಯವೇ ಇಲ್ಲ ಅನ್ನಿಸುತ್ತದೆ. ಫಾರಿನ್‌ನಲ್ಲಿ ಈ ಕೆಲಸಕ್ಕೆ ಎಷ್ಟೊಂದು ಗೌರವವಿದೆ. ನಾನು ಅದಕ್ಕೆ ಟ್ರೈ ಮಾಡೋಣ ಅಂತ ಇದೀನಿ. ಅದಕ್ಕೆ ಇಂಗ್ಲಿಷ್ ಎಕ್ಸಾಂನ ಪಾಸ್ ಮಾಡಬೇಕು. ನೋಡೋಣ ಏನಾಗುತ್ತೋ ಎಂಬ ಆಶಾಭಾವನೆಯಿಂದಲೇ ಹುರುಪಿನಿಂದ ದುಡಿಯುತ್ತಿರುವ ಅಂಥ ಯುವಕರ ಅಳಲನ್ನು ಗುರುತಿಸುವವರು ಯಾರು? ಇದುವರೆಗೂ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿನ ನರ್ಸ್ ಗಳು ಬರೀ ಮಲಯಾಳಿಗಳೇ ಆಗಿರುತ್ತಾರೆ ಎಂಬ ನನ್ನ ಗ್ರಹಿಕೆಗೆ ವಿರುದ್ಧವಾಗಿ ಇಲ್ಲಿದ್ದವರೆಲ್ಲಾ ಕನ್ನಡದ ಹುಡುಗಿಯರೇ ಆಗಿದ್ದರು.

ಮೊದಲೆಲ್ಲಾ ನರ್ಸಿಂಗ್ ಹೋಂಗಳಲ್ಲಿ ಮಲಯಾಳಿಗಳು ಕನ್ನಡ ಗೊತ್ತಿಲ್ಲದೆ ಕಷ್ಟ ಪಡುತ್ತಿದ್ದರು. ಆದರೂ ಇಂಥ ಮಲಯಾಳಿ ಹುಡುಗಿಯರೇ ಕನ್ನಡೇತರರಿಗೆ ಕನ್ನಡ ಕಲಿಸುವ ತರಗತಿಗಳಿಗೆ ಹೆಚ್ಚಾಗಿ ಸೇರುತ್ತಾರೆ ಎಂಬುದು ನನಗೆ ತಿಳಿದಿತ್ತು. ಎನ್.ಜಿ.ಇ.ಎಫ್.ನ ನನ್ನ ಸಹೋದ್ಯೋಗಿ ರಾಘವನ್ ಅವರು ಬಹಳ ಆಸಕ್ತಿ ಶ್ರದ್ಧೆಗಳಿಂದ ಈ ತರಗತಿಗಳನ್ನು ನಡೆಸುತ್ತಾ ಸೆಂಟ್‌ಮಾರ್ಥಸ್, ಫಿಲೋಮಿನಾಸ್, ಬೌರಿಂಗ್, ಸೇಂಟ್ ಜಾನ್ಸ್ ಮೊದಲಾದ ಆಸ್ಪತ್ರೆಗಳಲ್ಲಿ ಕೆಲಸಮಾಡುವ ಮಲಯಾಳಿ ನರ್ಸ್ ಗಳ ಒಂದು ದೊಡ್ಡ ಶಿಷ್ಯ ವೃಂದವನ್ನೇ ಪಡೆದು ಅತ್ಯಂತ ಜನಾನುರಾಗಿಯಾಗಿರುವುದೂ ನನಗೆ ಗೊತ್ತಿತ್ತು.

ನರ್ಸಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಾ ಬಂದಂತೆ ಮಲಯಾಳಿಗಳಲ್ಲದೆ ಇತರೆಯವರೂ ಈ ಕಾಲೇಜುಗಳಿಗೆ ಹೆಚ್ಚು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಆದರೆ ಈ ಖಾಸಗಿ ಕಾಲೇಜುಗಳಲ್ಲಿ ನೀಡಬೇಕಾದ ಡೊನೇಶನ್ ಮೊತ್ತವೂ ಹೆಚ್ಚಾಗಿರುತ್ತದೆ. ಕನ್ನಡದ ಹುಡುಗಿಯರ ಕಾರ್ಯಶ್ರದ್ಧೆಯೂ ಅಷ್ಟೇ ಮೆಚ್ಚುವಂತದ್ದಾಗಿತ್ತು. ಅನಗತ್ಯವಾಗಿ ಮಾತಾಡುವ ಒಬ್ಬ ಹುಡುಗಿಯನ್ನೂ ನಾನು ನೋಡಲಿಲ್ಲ. ಮಾತ್ರವಲ್ಲ ಅವರು ಮಾತಾಡುವುದೇ ತೀರಾ ಕಡಿಮೆ ಎನ್ನಬಹುದಿತ್ತು. ಆದರೂ ಇಲ್ಲಿ ಮಲಯಾಳಿಗಳು ಒಬ್ಬರೂ ಇಲ್ಲದಿರುವುದು ನನಗೆ ಸ್ವಲ್ಪ ಅಚ್ಚರಿಯ ಸಂಗತಿಯೇ ಆಗಿತ್ತು.

ಈ ಬಗ್ಗೆ ಸುದೀಪನನ್ನು ಕೇಳಿದಾಗ ಮೇಡಂ ಅವರೂ ಬರ್ತಾರೆ, ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಚೆನ್ನಾಗಿ ಕೆಲಸ ಕಲಿತಮೇಲೆ ಫಾರಿನ್‌ಗೆ ಹೊರಟುಬಿಡುತ್ತಾರೆ. ಅಲ್ಲಿ ಬಹಳ ಬೇಡಿಕೆಯಿದೆ. ಗೌರವ ಸಂಬಳ ಎಲ್ಲ ಚೆನ್ನಾಗಿರುತ್ತದೆ. ಅವರಿಗೆ ಈ ರೀತಿಯ ಆಸ್ಪತ್ರೆಗಳೆಲ್ಲ ಟ್ರೈನಿಂಗ್ ಸೆಂಟರ್‌ಗಳಿದ್ದಂತೆ ಅಷ್ಟೆ. ಅಂದು ಸುದೀಪ್ ಹೇಳಿದ ಮಾತು ನಿಜಕ್ಕೂ ಗಮನಿಸುವಂತಿತ್ತು. ಈತನೂ ಯಾಕೆ ಫಾರಿನ್‌ನಲ್ಲಿ ಹೋಗಿ ಬದುಕು ಕಟ್ಟಿಕೊಳ್ಳಲು ಯೋಚಿಸುತ್ತಿದ್ದಾನೆ ಎಂಬುದಕ್ಕೆ ಉತ್ತರ ಸಿಕ್ಕಿತ್ತು.

| ಇನ್ನು ನಾಳೆಗೆ |

‍ಲೇಖಕರು Avadhi

June 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: