ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 11

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

11

ಮಹಿಳಾ ಜಗತ್ತು

ಈ ಆಸ್ಪತ್ರೆಯಲ್ಲಿಯೂ ಮಹಿಳೆಯರದೇ ಸಾಮ್ರಾಜ್ಯ. ಎಲ್ಲೋ ಒಬ್ಬಿಬ್ಬರು ಮೇಲ್ ನರ್ಸ್ ಗಳು (ಬ್ರದರ್ಸ್), ಸೂಪರ್ ವೈಸರ್‌ಗಳು ಹಾಗೂ ಡಾಕ್ಟರ್‌ಗಳು. ನರ್ಸಿಂಗ್ ಕೆಲಸಗಳಷ್ಟೇ ಅಲ್ಲ ಎಕ್ಸರೆ, ಇ.ಸಿ.ಜಿ., ಇ.ಸಿ. ಗ್ರಾಫ್ ಎಲ್ಲ ತಾಂತ್ರಿಕ ಕೆಲಸಗಳನ್ನು ಹುಡುಗಿಯರೇ ಮಾಡುತ್ತಿದ್ದರು. ಇದು ನನಗೆ ಮೊತ್ತಮೊದಲ ಅನುಭವ. ಇಂದಿನ ವೈದ್ಯಕೀಯ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನದಲ್ಲಿ ಆಗಿರುವ ಬೆಳವಣಿಗೆ ಒಂದು ಕಡೆ ಬೆರಗು ಹುಟ್ಟಿಸಿದರೆ, ಅತ್ಯಂತ ತಾಂತ್ರಿಕ ಎನ್ನುವಂತಹ ಕೆಲಸಗಳನ್ನು ಹುಡುಗಿಯರೇ ಮಾಡುತ್ತಿದ್ದುದು ಇನ್ನೊಂದು ಬೆರಗು.

ನಾನು ಆಸ್ಪತ್ರೆಯಲ್ಲಿದ್ದ ಅವಧಿಯಲ್ಲಿ ಎರಡು ಸಲ ಎಕ್ಸ್-ರೆ ಎರಡು ಸಲ ಇ.ಸಿ.ಜಿ. ಒಂದು ಸಲ ಇ.ಸಿ. ಗ್ರಾಫ್‌ನ್ನು ಮಾಡಿದರು. ಈಗ ೩೦-೪೦ ವರ್ಷಗಳ ಹಿಂದಿನ ತಂತ್ರಜ್ಞಾನಕ್ಕೂ ಈಗಿನದಕ್ಕೂ ಅಪಾರ ವ್ಯತ್ಯಾಸ. ನನಗೆ ತಿಳಿದಂತೆ ಆಗ ಪ್ರತಿಯೊಂದು ಇಂಥ ಪರೀಕ್ಷೆಗೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಯಬೇಕಿತ್ತು. ಎಕ್ಸ್-ರೆ ವಿಷಯ ಬಹಳ ವರ್ಷಗಳಿಂದಲೂ ಇರುವಂಥದ್ದು. ಅದು ವಿಕಿರಣಕ್ಕೆ ಸಂಬಂಧಿಸಿದ್ದರಿಂದ ಬಹಳ ಎಚ್ಚರಿಕೆ ವಹಿಸಬೇಕಾಗಿತ್ತು.

ಬಹುಶಃ ನಾನು ಮೊದಲ ಬಾರಿ ಎಕ್ಸ್-ರೆ ತೆಗೆಸಿದ್ದು ಎನ್.ಜಿ.ಇ.ಎಫ್.ನಲ್ಲಿ ಕೆಲಸಕ್ಕೆ ಸೇರುವಾಗ. ನೇಮಕಾತಿಯ ಆದೇಶ ನೀಡುವ ಮೊದಲು ಅನೇಕ ರೀತಿಯ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಂಡು ಸಂಬಂಧಿಸಿದ ವರದಿಗಳನ್ನು ಸಲ್ಲಿಸಬೇಕಾಗಿರುತ್ತದೆ. ಬಹುಶಃ ಆಗ ನಾನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಕ್ಸ್-ರೆ ಮಾಡಿಸಿದ್ದೆ. ಎರಡು ದೊಡ್ಡ ಕೋಣೆಗಳು, ಕಪ್ಪು ಪರದೆಗಳು, ಒಂದು ಕಡೆ ಎಕ್ಸ್-ರೆ ಯಂತ್ರ, ಎಕ್ಸರೆ ಕೋಣೆಯಲ್ಲಿ ನಾನೊಬ್ಬಳೇ. ಉಳಿದವರು ಹೊರಗಿನಿಂದಲೇ ನಿಂತು ಅವಲೋಕಿಸುತ್ತ ಇದ್ದರೇನೋ… ಈಗ ಇವೆಲ್ಲ ಸರಳಾತಿ ಸರಳವಾಗಿವೆ. ಎಕ್ಸ್-ರೆ ಎಂಬುದು ಒಂದು ಸಂಚಾರೀ ಘಟಕ.

ತಳ್ಳುವ ಗಾಡಿಯ ಗಡಗಡ ಶಬ್ದ ಕೇಳುತ್ತಿದ್ದಂತೆಯೇ ಅದು ನನ್ನ ವಾರ್ಡಿಗೋ ಅಥವಾ ಪಕ್ಕದ ವಾರ್ಡಿಗೋ ಎಂಬ ಯೋಚನೆ. ಶಬ್ದವು ಜೋರಾಗಿ ನಾನಿದ್ದ ಕೋಣೆಗೇ ಬಂದಾಗ ಸರಿ ನನ್ನದೇ ಎಕ್ಸ್-ರೆ ಅಂತ ಗೊತ್ತಾಯಿತು. ನಾನು ಏನೇನು ಮಾಡಬೇಕು, ಕುಳಿತುಕೊಳ್ಳಬೇಕೋ ನಿಂತುಕೊಳ್ಳಬೇಕೋ, ಬಟ್ಟೆ ಸರಿಸಬೇಕೋ. ಉಹೂಂ ಅಷ್ಟು ಶ್ರಮದ ಅಗತ್ಯವೂ ಇಲ್ಲ. ಪಿ.ಪಿ.ಇ. ಧರಿಸಿದ್ದ ಆ ಹುಡುಗಿ ಅಂಡರ್ ಗಾರ್ಮೆಂಟ್ಸ್ ಏನೂ ಇಲ್ಲ ತಾನೇ ಎಂದು ಖಚಿತ ಪಡಿಸಿಕೊಂಡಳು.

ನಂತರ ಬೆನ್ನನ್ನು ಸ್ವಲ್ಪ ಎತ್ತರಿಸಿ ಬೆನ್ನಿನ ಕೆಳಗೆ ಆ ತೆಳುವಾದ ತಗಡಿನ ಎಕ್ಸ್-ರೆ ಫ್ರೇಮ್ ಇರಿಸಿ ಅದನ್ನು ಬೆನ್ನಿನ ಕೆಳಗೆ ಸರಿಯಾಗಿ ಕೂರುವಂತೆ ಸ್ವಲ್ಪ ಅತ್ತಿತ್ತ ಜರುಗಾಡಿಸಿ ನಂತರ ಪ್ಲಗ್ ಹೋಲ್‌ಗೆ ಪ್ಲಗ್ ಹಾಕಿ ಎಕ್ಸರೆ ಯಂತ್ರದ ಹಿಂದೆ ನಿಂತು ಒಂದು ಎಕ್ಸ್-ರೆ ನಿರೋಧಕ ಜಾಕೆಟ್ ಧರಿಸಿ, ಜೋರಾಗಿ ಉಸಿರೆಳೆದುಕೊಳ್ಳಿ ಅಲುಗಾಡಬೇಡಿ ಎಂದು ಹೇಳುತ್ತಲೇ ಉದ್ದನೆಯ ವೈರಿನ ತುದಿಯಲ್ಲಿದ್ದ ಸ್ವಿಚ್ಚ್ ನ್ನು ಅದುಮಿದ ಕೂಡಲೇ ಕೀಚ್ ಎಂಬ ಸದ್ದಿನೊಂದಿಗೆ ಫಳಕ್ಕನೆ ಒಂದು ಬೆಳಕು ಮಿಂಚಿ ಮಾಯವಾಯಿತು. ಅಷ್ಟೇ. ಅವಳೂ ಸರಸರ ಬಂದು ಪ್ಲಗ್ ತೆಗೆದು ಬೆನ್ನಿನ ಕೆಳಗಿದ್ದ ಫ್ರೇಮ್ ತಗೊಂಡು ಮುಂದಿನ ಕೋಣೆಗೆ ಹೊರಟೇ ಹೋದಳು. ಇದು ಕೇವಲ ೨ ನಿಮಿಷದ ಕೆಲಸವೂ ಆಗಿರಲಿಲ್ಲ.

ಇ.ಸಿ.ಜಿ.ಯನ್ನು ನಾನು ಬೇರೆ ಬೇರೆ ಸಂದರ್ಭದಲ್ಲಿ ನೋಡಿದ್ದೆ. ಡಾಕ್ಟರ್ ಟೇಬಲ್ ಪಕ್ಕದಲ್ಲಿಯೇ ಆ ಯಂತ್ರ, ಮತ್ತು ಮಾನಿಟರ್ ಮೇಲೆ ಆ ಕೋಚು-ಕೋಚಾದ ಗೆರೆಗಳು. ಆದರೆ ನನಗೆ ಎಲ್ಲಕ್ಕಿಂತ ಬಹಳ ಆಕರ್ಷಕ ಎನಿಸಿದ್ದು ಎಲೆಕ್ಟ್ರೋ ಕಾರ್ಡಿಯೋ ಗ್ರಾಫ್. ಇದನ್ನು ಮಾಡುವಾಗ ಎದೆ ತೋಳುಗಳ ಮೇಲೆ ಪ್ಲಗ್‌ಗಳನ್ನು ಕೂರಿಸಿ ಪಕ್ಕದ ಮಾನಿಟರ್ ಮೇಲೆ ಅದು ಇಸಿಜಿಯಂತೆಯೇ ಕೋಚುಕೋಚಾದ ಗೆರೆಗಳಲ್ಲಿರುತ್ತದೆ ಎಂದು ಕೊಂಡು ಸುಮ್ಮನೆ ಅತ್ತ ತಿರುಗಿ ನೋಡಿದರೆ ಅಲ್ಲೊಂದು ಅದ್ಭುತ ದೃಶ್ಯ. ಹೊಳೆಯುವ ಕೇಸರಿ ಬಣ್ಣದಲ್ಲಿ ಕಪ್ಪು ಹಿನ್ನೆಲೆಯ ಮುಂದೆ ಪುಟಿಪುಟಿಯುತ್ತಾ ಇರುವುದು ನನ್ನ ಹೃದಯವೇ ಎಂದು ನನಗೆ ಹೊಳೆಯು ವಷ್ಟರಲ್ಲಿ ಇಸಿ ಗ್ರಾಫ್ ಕೆಲಸ ಮುಗಿದೇ ಹೋಗಿತ್ತು.

ಒಂದು ಸಲ ಪೂರ್ಣ ರೂಪ, ಇನ್ನೊಂದು ೪-೫ರಲ್ಲಿ ಅರ್ಧಂಬರ್ಧದ ಚಿತ್ರಗಳು. ನಾನು ನೋಡಿದ್ದು ನನ್ನ ಹೃದಯವೇ ಎಂಬ ಅರಿವಾದಾಗ ರೋಮಾಂಚನದಿಂದ ಮೈ ಬೆಚ್ಚಗಾಯಿತು. ಇಷ್ಟು ಸುಲಭವಾಗಿ ನಮ್ಮ ಹೃದಯವನ್ನು ನಾವೇ ನೋಡಿಕೊಳ್ಳಲು ಸಾಧ್ಯಮಾಡಿದ ಈ ತಂತ್ರಜ್ಞಾನದ ಬೆಳವಣಿಗೆ ಅದೆಷ್ಟು ಅದ್ಭುತ. ಎಕ್ಸರೆಯ ಚಿತ್ರಗಳು ವೈದ್ಯರಿಗಷ್ಟೇ ಉಪಯುಕ್ತ. ಫಿಲ್ಮಂನಲ್ಲಿ ಬೂದು ಬೆಳಕಿನಲ್ಲಿ ಕಾಣುವ ನಮ್ಮ ಶರೀರದ ಭಾಗಗಳು ಯಾವುದೇ ವಾಸ್ತವಾನುಭವವನ್ನೂ ನೀಡುವುದಿಲ್ಲ. ಎಕ್ಸ್-ರೆಯ ಪ್ರತಿಯನ್ನು ನಮಗೆ ಕೊಡುವುದೂ ಇಲ್ಲ. ಆದರೆ ಇಸಿ ಗ್ರಾಫ್‌ನಲ್ಲಿ ನೈಜ ಚಿತ್ರವನ್ನು ನೋಡಿದ ರೋಮಾಂಚನ ಈಗಲೂ ಹಾಗೇ ಇದೆ.

ಒಬ್ಬಿಬ್ಬರನ್ನು ಬಿಟ್ಟರೆ ಈ ಆಸ್ಪತ್ರೆಯಲ್ಲಿದ್ದ ಹೌಸ್ ಕೀಪಿಂಗ್‌ನವರೆಲ್ಲ ಮುಸ್ಲಿಂ ಹೆಣ್ಣುಮಕ್ಕಳು. ಸುತ್ತ ಮುತ್ತಲಿನ ಇಲಿಯಾಸ್ ನಗರ, ಕದಿರೇನಹಳ್ಳಿ, ಮೊದಲಾದ ಪ್ರದೇಶಗಳಲ್ಲಿ ವಾಸಿಸುತ್ತಿರುವವರು. ಬೆಳಿಗ್ಗೆ ಸುಮಾರು ಆರೂವರೆಗೆ ಬಂದರೆ ರಾತ್ರೆ ಏಳೂವರೆವರೆಗೆ ಒಂದು ಪಾಳಿ. ರಾತ್ರಿ ೭-೩೦ ರಿಂದ ಬೆಳಿಗ್ಗೆ ೮ರ ವರೆಗೆ ಇನ್ನೊಂದು ಪಾಳಿ. ಕೋವಿಡ್‌ಗೇ ಮೀಸಲಾದ ಇಡೀ ಫ್ಲೋರ್‌ಗೆ ಜೀವ ತುಂಬುತ್ತಿದ್ದುದು ಇವರ ಮಾತು ಹಾಗೂ ಕಾರ್ಯ ಚಟುವಟಿಕೆ.

ಕಸ ಗುಡಿಸು, ನೆಲ ಒರೆಸು, ಡಸ್ಟ್ಬಿನ್ ಕ್ಲೀನ್ ಮಾಡುವುದರಿಂದ ಹಿಡಿದು ಟ್ರಾಲಿಯಲ್ಲಿ ಬರುತ್ತಿದ್ದ ಊಟ ತಿಂಡಿಯ ಪೊಟ್ಟಣಗಳನ್ನು ಆಯಾ ರೂಮಿಗೆ ತಲುಪಿಸುವುದೂ ಇವರದೇ ಕೆಲಸ. ಇವರೂ ಸಹ ಪಿ.ಪಿ.ಇ. ಧರಿಸಿ ಕೈಗಳಿಗೆ ಬಿಳಿಯ ದಪ್ಪನೆಯ ಗ್ಲೋವ್ಸ್ ಹಾಕಿ ಮಾಸ್ಕಿನಿಂದ ಮೂಗು ಬಾಯಿ ಮುಚ್ಚಿಕೊಂಡು ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರೆ ಅವರ ಪಿ.ಪಿ.ಇ.ಯ ಸರಬರ ಸದ್ದಿನಿಂದಲೇ, ಯಾವುದಾದರೂ ಸಹಾಯ ಬೇಕಾದಾಗ ಕೂಗಿ ಕರೆಯಲು ಸಾಧ್ಯವಾಗುತ್ತಿತ್ತು. ಬೆಳಿಗ್ಗೆ ತಿಂಡಿ ತಂದಿಡುವಾಗ ಮೇಡಂ ಬಿಸಿಬಿಸಿ ಇದೆ ತಿಂದು ಬಿಡಿ ಎಂಬ ಉಪಚಾರದ ಮಾತು ಬೇರೆ.

ಈ ಹೆಣ್ಣುಮಕ್ಕಳೆಲ್ಲ ಬಹಳ ಲವಲವಿಕೆಯ ದಷ್ಟಪುಷ್ಟ ಮೈಕಟ್ಟಿನವರು. ಎಲ್ಲರೂ ಮದುವೆಯಾಗಿ ಒಂದೆರಡು ಮಕ್ಕಳಿದ್ದವರು. ನನಗೆ ಮುಸ್ಲಿಂ ಹುಡುಗಿಯರ ಗೆಳೆತನ ಹೆಚ್ಚಾಗಿಲ್ಲದಿದ್ದರೂ ಸಂಪರ್ಕವಂತೂ ಬಹಳವೇ ಇತ್ತು. ನಾನು ಹುಟ್ಟಿ ಬೆಳೆದ ಚಿತ್ರದುರ್ಗದಲ್ಲಿ ಅಜ್ಜಿಯ ಮನೆಯ ಸಮೀಪವೇ ಮುಸ್ಲಿಂ ಹೆಣ್ಣು ಮಕ್ಕಳ ಮಾಧ್ಯಮಿಕ ಶಾಲೆ ಇತ್ತು. ಅಲ್ಲಿ ಪಾಠಮಾಡುತ್ತಿದ್ದ ಮೇಡಂಗಳು ತಾವು ಬುರ್ಖಾ ಹಾಕಿದ್ದಲ್ಲದೆ ಎರಡೂ ಕಡೆ ಪರದೆ ಹಾಕಿದ್ದ ಜಟಕಾಬಂಡಿಯಲ್ಲಿ ಬಂದಿಳಿಯುತ್ತಿದ್ದರು. ಮೇಡಂ ಹೇಳಿದ್ದನ್ನು ಆ ಮಕ್ಕಳೆಲ್ಲ ಪುನರುಚ್ಚರಿಸುತ್ತಿದ್ದರೆ ಅದೊಂದು ರೀತಿ ಮಲೆನಾಡಿನ ಕಡೆ ಸಂಜೆಯಾಗುತ್ತಲೇ ಗಿಡಮರಗಳ ಎಲೆಯ ಮರೆಯಿಂದ ಎಲ್ಲಾ ಜಾತಿಯ ಹಕ್ಕಿಗಳ ದನಿಯೂ ಒಟ್ಟಾಗಿ ಬೆರೆತು ಅದೇ ಒಂದು ವಿಶಿಷ್ಟ ರವವಾಗಿರುವಂತೆ ಇರುತ್ತಿತ್ತು.

ಬೆಳಿಗ್ಗೆ ಶಾಲೆಯ ಬೆಲ್ ಆಗುವವರೆಗೂ ಮತ್ತು ಮದ್ಯಾಹ್ನದ ಊಟದ ಬಿಡುವಿನಲ್ಲಿ ಈ ಹುಡುಗಿಯರೆಲ್ಲ ಅಜ್ಜಿಯ ಮನೆಯ ಕಾಂಪೌಂಡ್ ಮೇಲೆ, ಪಕ್ಕದಲ್ಲೆ ಇದ್ದ ದೊಡ್ಡ ಮರದ ನೆರಳಿನಲ್ಲಿ ಆಟವಾಡಿಕೊಂಡು ಇರುತ್ತಿದ್ದರು. ಆ ಮರದ ಕೆಳಗೆ ಒಬ್ಬನು ದೊಡ್ಡ ಅಗಲವಾದ ಅಲ್ಯೂಮಿನಿಯಂ ತಟ್ಟೆಯಲ್ಲಿ ಕಂಬಾರ್‌ಗೆಟ್ ಮಾರುತ್ತಿದ್ದ. ಅದೊಂದು ಚಾಕೋಲೆಟ್ ತರಹದ ಗಟ್ಟಿಯಾದ ಸಿಹಿಪಾಕ. ಕೊಟ್ಟಷ್ಟು ದುಡ್ಡಿಗೆ ಸರಿಯಾಗಿ ಅವನು ಅದರಿಂದ ಕತ್ತರಿಸಿಕೊಡುತ್ತಿದ್ದ. ಹೀಗೆ ಮಾರಾಟವಾಗುತ್ತಿದ್ದ ಉಳಿದ ತಿನಿಸುಗಳೆಂದರೆ ಬೋರೆಹಣ್ಣು, ಉಪ್ಪು ಹಚ್ಚಿದ ಕಡಲೆ, ಕತ್ತರಿಸಿದ ಸೌತೆಕಾಯಿ, ಕಡಲೆಕಾಯಿ ಇತ್ಯಾದಿ. ನಾವು ಅವರಿಗಿಂತ ಚಿಕ್ಕ ವಯಸ್ಸಿನ ಹುಡುಗಿಯರಾದ್ದರಿಂದ ಅವರ ಆಟಪಾಠಗಳನ್ನು ಅಜ್ಜಿಯ ಮನೆಯ ಕಿಟಕಿಯಿಂದ ನೋಡುವುದೇ ಒಂದು ವಿಶೇಷ ಅನುಭವ.

ನನಗೆ ಪುನಃ ಅವರ ಹತ್ತಿರದ ಸಂಪರ್ಕವಾಗಿದ್ದು ಹೈಸ್ಕೂಲ್ ಸೇರಿದ ಮೇಲೆ. ಉರ್ದು ಮೀಡಿಯಂ ಹೈಸ್ಕೂಲ್‌ಗಳು ಇರುತ್ತಿಲ್ಲವಾದ ಕಾರಣ ಅವರೆಲ್ಲ ಸರ್ಕಾರಿ ಹೈಸ್ಕೂಲಿಗೇ ಸೇರಬೇಕಾಗಿತ್ತು. ಉರ್ದು ಮೀಡಿಯಂನಿಂದ ಇವರನ್ನೆಲ್ಲಾ ಇಂಗ್ಲಿಷ್ ಮೀಡಿಯಂಗೆ ಹಾಕುತ್ತಿದ್ದರು. ಹೀಗಾಗಿ ‘ಎ’ ಸೆಕ್ಷನ್ ನಲ್ಲಿ ಇವರೇ ಬಹುಸಂಖ್ಯಾತರು. ಇನ್ನೂ ಹೆಚ್ಚಾದರೆ ‘ಬಿ’ ಸೆಕ್ಷನ್‌ಗೂ ಹಾಕುತ್ತಿದ್ದರು. ಈ ಹುಡುಗಿಯರಲ್ಲಿ ಬಹುತೇಕ ಮಂದಿ ತೀರಾ ಬಡವರು, ಕೆಲವರು ಮದ್ಯಮ ವರ್ಗದವರು. ಒಂದಿಬ್ಬರು ಮಾತ್ರ ಸಿರಿವಂತ ಮನೆತನದವರು.

ಸಿರಿವಂತ ಹುಡುಗಿಯರ ಸೌಂದರ್ಯ ಉಡುಗೆ ತೊಡುಗೆಗಳು ಆಗಿನ ಸಿನಿಮಾ ತಾರೆಯರಂತೇ ಇರುತ್ತಿದ್ದವು. ಯಾರಾದರೂ ಟೀಚರ್ ಬರದಿದ್ದರೆ ಸಾಕು ಮುಸ್ಲಿಂ ಹುಡುಗಿಯರು ಒಬ್ಬೊಬ್ಬರಾಗಿ ಸ್ಟೇಜ್ ಹತ್ತಿ ಆ ಕಾಲದ ಜನಪ್ರಿಯ ಹಿಂದಿ ಸಿನಿಮಾ ಹಾಡುಗಳನ್ನು ಹಾಡತೊಡಗುತ್ತಿದ್ದರು. ಅದರಲ್ಲಿಯೂ ಅವರಿಗೆ ಬಹಳ ಪ್ರಿಯವಾದುದು ಮೇರೆ ಮೆಹಬೂಬ್ ತುಜೆ… ಎಂಬ ಹಾಡು. ಅದು ಆ ಸಿನೆಮಾದ ನಾಯಕ ರಾಜೇಂದ್ರ ಕುಮಾರನಷ್ಟೇ ಬಹಳ ಸಪ್ಪೆ ಸಪ್ಪೆಯಾದ ನೀರಸವಾದ ಹಾಡು. ಒಂದೇ ಧಾಟಿಯ ಹತ್ತಾರು ಚರಣಗಳಿರುವ ಹಾಡು. ಆದರೂ ಅವರಿಗೆ ಬಹು ಪ್ರಿಯವಾದ ಹಾಡು. ನನಗೆ ಮಾತ್ರ ಅದು ಆಗಿನಂತೆಯೇ ಈಗಲೂ ಒಂದಿಷ್ಟೂ ಇಷ್ಟವಾಗದ ಹಾಡು. ಮುಸ್ಲಿಂ ಹುಡುಗಿಯರಿಗೆ ಹಿಂದಿ ಸಿನೆಮಾಗಳು ಹಾಗೂ ಹಿಂದಿ ಹಾಡುಗಳೆಂದರೆ ಬಹಳ ಹುಚ್ಚು. ಅದು ಈಗಲೂ ಬದಲಾಗಿಲ್ಲ.

| ಇನ್ನು ನಾಳೆಗೆ |

‍ಲೇಖಕರು Avadhi

June 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: