ಕೆಂಪಕ್ಕಿ, ಕರಿ ನವಣೆ, ಕೊರಲೆ ನಿಮ್ಮ ನೆನಪನ್ನು ಸದಾ ಜೀವಂತವಾಗಿಟ್ಟಿರುತ್ತವೆ..

ಪ್ರಿಸ್ಟೀನ್ ರಘು ಇನ್ನಿಲ್ಲ

ಅನ್ನದ ಋಣ ತೀರಿತು!

ಜಿ ಕೃಷ್ಣಪ್ರಸಾದ್

—-

2000 ಇಸವಿಯ ಆರಂಭದ ದಿನಗಳು. ಚನ್ನಪಟ್ಟಣದ ತೋಟವೊಂದರ ಸಭೆಯಲ್ಲಿ ಜನ್ಮ ತಾಳಿದ ‘ಸಹಜ ಸಮೃದ್ಧ’ ಪ್ರತಿ ತಿಂಗಳು ಸಾವಯವ ರೈತರ ತೋಟವೊಂದರಲ್ಲಿ ಸಭೆ ನಡೆಸುತ್ತಿತ್ತು. ಸಭೆಗೆ ನಿರಂತರವಾಗಿ ಬರುತ್ತಿದ್ದ ಪತ್ರಕರ್ತ ಗೆಳೆಯ ಮಂಜುನಾಥ್ ‘ಡೆಕ್ಕನ್ ಹೆರಾಲ್ಡ್’ಗೆ ಲೇಖನವೊಂದನ್ನು ಬರೆದರು. ಆಗ ಮೊಬೈಲ್ ಇಲ್ಲದ ಕಾಲ.

ಲೇಖನದಲ್ಲಿದ್ದ ದೂರವಾಣಿಯ ಜಾಡು ಹಿಡಿದು ಕೆ.ಸಿ.ರಘು ರೂಪೇನ ಅಗ್ರಹಾರದ ನಮ್ಮ ಮನೆಗೆ ಬಂದರು; ಗೆಳೆಯರಾದರು. ಆ ಆತ್ಮೀಯತೆ 22 ವರ್ಷದವರೆಗೂ ಅವರ ಜೊತೆ ಒಡನಾಡುವ ಅವಕಾಶ ಕಲ್ಪಿಸಿತು.

ತಮ್ಮ ಓದು , ಸುತ್ತಾಟ, ಪ್ರಿಸ್ಟೀನ್ ಆರ್ಗಾನಿಕ್ಸ್ ಕಂಪನಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ರಘು, ಸಾವಯವ ಜಗತ್ತಿನ ಜೊತೆ ಒಡನಾಟಕ್ಕೆ ಬರಲು ಸಹಜ ಸಮೃದ್ಧದ ಜೊತೆಗಿನ ಭಾಂದವ್ಯ ಪ್ರೇರಣೆಯಾಯಿತು. ಕೆ.ಸಿ. ರಘು ರವರ ಜೊತೆಗೂಡಿ ನಾವು ನಡೆಸಿದ ಪ್ರಯೋಗ, ಪುಸ್ತಕ, ಮೇಳ, ಸುತ್ತಾಟಗಳಿಗೆ ಲೆಕ್ಕವಿಲ್ಲ.

ಆಹಾರದ ವಿಷಯ ಬಂದಾಗಲೆಲ್ಲಾ ರಘು ನೆನಪಿಗೆ ಬರುತ್ತಿದ್ದರು. ಕೆಂಪಕ್ಕಿ, ಸಿರಿಧಾನ್ಯ, ಬಣ್ಣದ ಮುಸುಕಿನ ಜೋಳ, ಗೆಡ್ಡೆ ಗೆಣಸು ಮುಖ್ಯವಾಹಿನಿಗೆ ತರಲು ಇವರು ನೀಡಿದ ಮಾರ್ಗದರ್ಶನ ಮರೆಯಲಾಗದು. ಹೊಸ ಚಿಂತನೆ, ಬೆಚ್ಚಿ ಬೀಳಿಸುವ ಅಂಕಿ ಅಂಶಗಳ ಮೂಲಕ ತಮ್ಮ ಅರಿವಿನ ತಿಳಿವನ್ನು ಕೇಳುಗರ ಮುಂದಿಡುತ್ತಿದ್ದರು. ‘ಪ್ರಿಸ್ಟೀನ್ ರಘು’ ಎಂದರೆ ನಮ್ಮ ಬಳಗದ ರೈತರಿಗೆಲ್ಲಾ ಗೊತ್ತು. ತಮ್ಮ ಕೆಲಸಗಳನ್ನು ಬದಿಗಿಟ್ಟು ರೈತರು ಕರೆದರೆ ಸಭೆಗಳಿಗೆ ಹೋಗುತ್ತಿದ್ದರು. ಚಿಕ್ಕಾಸು ಸಂಭಾವನೆಯನ್ನು ಕೇಳದೆ, ತಾವೇ ದೇಣಿಗೆ ಕೊಟ್ಟು ಬರುತ್ತಿದ್ದರು.

2007 ರಲ್ಲಿ ಸಹಜ ಸಮೃದ್ದ ‘ ಭತ್ತ ಉಳಿಸಿ ಆಂದೋಲನ’ ಆರಂಭಿಸಿದಾಗ ದೊಡ್ಡ ಪ್ರಮಾಣದಲ್ಲಿ ರೈತರು ದೇಸಿ ಭತ್ತಗಳ ಬೆಳೆಯಲು‌ ಆರಂಭಿಸಿದರು. ಆ ಕಾಲಕ್ಕೆ ಈಗಿನಂತೆ ಸಾವಯವ ಮಾರುಕಟ್ಟೆ ಇರಲಿಲ್ಲ. ಒಂದು ಕ್ವಿಂಟಾಲ್ ಅಕ್ಕಿ ಮಾರಲು ನಾವು ಇನ್ನಿಲ್ಲದ ಸರ್ಕಸ್ ಮಾಡಬೇಕಿತ್ತು. ಶಿಕಾರಿಪುರದ ಚುರ್ಚುಗುಂಡಿಯ ಸಹಜ ಕೃಷಿಕ Nandish Churchigundi ಪ್ರತಿವರ್ಷ ಒಂದೆರೆಡು ಲಾರಿ ಲೋಡ್ ಭತ್ತ ಬೆಳೆಯುತ್ತಿದ್ದರು. ಅದನ್ನು ಮಾರಲಾಗದೆ ನಾವು ಕಂಗಾಲಾದಾಗ ರಘು ನೆರವಿಗೆ ಬಂದರು. ತಮ್ಮ ಪ್ರಿಸ್ಟೀನ್ ಆರ್ಗಾನಿಕ್ಸ್ ಗೆ ಲಾರಿಗಟ್ಟಲೆ ಅಕ್ಕಿ, ರಾಗಿ ಕೊಳ್ಳಲು ಆರಂಭಿಸಿದರು.

ವಿಷೇಷ ಎಂದರೆ ರಘು ಯಾವತ್ತೂ ರೈತರ ಉತ್ಪನ್ನಕ್ಕೆ ಬೆಲೆ ಕಟ್ಟಲಿಲ್ಲ. ಸಹಜ ಸಮೃದ್ಧ ರೈತರ ಜೊತೆ ಚರ್ಚಿಸಿ ಒಂದು ನ್ಯಾಯಯುತವಾದ ಬೆಲೆಯೊಂದನ್ನು ನಿಗದಿಪಡಿಸುತ್ತಿತ್ತು. ರಘು ಅದಕ್ಕೆ ಬದ್ಧರಾಗಿರುತ್ತಿದ್ದರು. ನಮ್ಮ ಪಾಲಿಗೆ ದಕ್ಕುತ್ತಿದ್ದ ಸಣ್ಣ ಕಮಿಷನ್ ನಲ್ಲೇ ಸಹಜದ ಖರ್ಚು ವೆಚ್ಚ ಸರಿದೂಗಿಸುತ್ತಿದ್ದೆವು.

2009 ರಲ್ಲಿ , ನಾವು Sahaja Organics ಕಟ್ಟಿದ ಸಂದರ್ಭದಲ್ಲಿ ರಘು ಸಂಸ್ಥಾಪಕ‌ ನಿರ್ದೇಶರಾಗಿ ನಮ್ಮ ಜೊತೆಗಿದ್ದರು. 50 ಸಾವಿರ ಷೇರು ಹಣ ಕೊಟ್ಟು ನಮ್ಮನ್ನು ಪ್ರೋತ್ಸಾಹಿಸಿದ್ದರು.

ಸಿರಿಧಾನ್ಯಗಳ ಬಗ್ಗೆ ಯಾರಿಗೂ ಅಷ್ಟು ಗೊತ್ತಿಲ್ಲದ ಕಾಲದಲ್ಲೇ ಸಹಜ ಸಮೃದ್ದ ಮತ್ತು ಪ್ರಿಸ್ಟೀನ್ ಆರ್ಗಾನಿಕ್ಸ್ ಜೊತೆಗೂಡಿ ಸಿರಿಧಾನ್ಯಗಳ ಮೇಳ, ಪುಸ್ತಕ ಮೊದಲಾದ ಅರಿವಿನ ಕಾರ್ಯಕ್ರಮಗಳ ರೂಪಿಸಿದ್ದವು. 2010 ರಲ್ಲಿ ಗಾಂಧಿ ಭವನದಲ್ಲಿ ಆಯೋಜಿಸಿದ ‘ ಸಿರಿಧಾನ್ಯ ಮೇಳ’ ದೊಡ್ಡ ಯಶಸ್ಸು ಕಂಡಿತು. ಈ ಸಂದರ್ಭದಲ್ಲಿ, ಸಿರಿಧಾನ್ಯಗಳ ಕುರಿತು ರಘು ರಚಿಸಿದ ಇಂಗ್ಲಿಷ್ ಪುಸ್ತಕ ಬಹಳಷ್ಟು ವರ್ಷಗಳ ಕಾಲ ಆಕರ ಗ್ರಂಥವಾಗಿ, ಸಿರಿಧಾನ್ಯ ಪ್ರಚಾರಕ್ಕೆ ಮುನ್ನುಡಿ ಬರೆಯಿತು. ಮುಂದೆ ರಘು ಪ್ರಿಸ್ಟೀನ್ ಆರ್ಗಾನಿಕ್ಸ್ ಮೂಲಕ ಸಿರಿಧಾನ್ಯಗಳ ಹೊಸ ಬ್ರಾಂಡ್ ಹೊರತಂದರು. ಬಹುಶಃ ಇಡೀ ಭಾರತದಲ್ಲಿ ಸಿರಿಧಾನ್ಯಗಳ ಬ್ರಾಂಡ್ ನ್ನು ಮಾರುಕಟ್ಟೆಗೆ ಪರಿಚಯಿಸಿದವರಲ್ಲಿ ರಘು ಮೊದಲಿಗರು.

ದೇಸಿ ಧಾನ್ಯಗಳ ಮುಖ್ಯವಾಹಿನಿಗೆ ತರುವ ನನ್ನೆಲ್ಲಾ ಕನಸುಗಳಿಗೆ ಜ್ಞಾನದ ಮತ್ತು ಆರ್ಥಿಕ ನೆರವು ನೀಡಿ ಬೆನ್ನಿಗೆ ನಿಂತವರು ಕೆ.ಸಿ.ರಘು. ‘ ಎಷ್ಟು ಹಣ ಬೇಕು’ ಎಂದಷ್ಟೇ ಕೇಳಿ, ನಾವು ಕೇಳಿದಷ್ಟನ್ನು ಪ್ರಿಸ್ಟೀನ್ ಆರ್ಗಾನಿಕ್ಸ್ ಕಡೆಯಿಂದ ಕೊಡಿಸುತ್ತಿದ್ದರು. ದೇಸಿ ಅಕ್ಕಿ ಕ್ಯಾಲೆಂಡರ್, ಸಿರಿಧಾನ್ಯ ಕ್ಯಾಲೆಂಡರ್, ಕೆಂಪಕ್ಕಿ ಸಂತೆ….ರಘು ನೆರವಿಗೆ ನಿಂತ ಗಳಿಗೆಗಳು ನೆನಪಾಗುತ್ತವೆ.

ದೇಸಿ ಅಕ್ಕಿ, ಸಿರಿಧಾನ್ಯ, ಬಣ್ಣದ ಮುಸುಕಿನ ಜೋಳದ ತಳಿಗಳ ಪೋಷಕಾಂಶಗಳ ಲ್ಯಾಬ್ ಟೆಸ್ಟ ಯಾರೂ ಮಾಡಿದ್ದಿಲ್ಲ. ಅದಕ್ಕೆ ದೊಡ್ಡ ಪ್ರಮಾಣದ ಹಣ ಬೇಕಿತ್ತು. ರಘು ತಮ್ಮ ಪ್ರಿಸ್ಟೀನ್ ಲ್ಯಾಬೋರೇಟರಿಯ ಮೂಲಕ ಕೈಗೆಟುಕುವ ದರದಲ್ಲಿ ದೇಸಿ ತಳಿಗಳ‌ ಲ್ಯಾಬ್ ಟೆಸ್ಟ್ ಮಾಡಿಸಿಕೊಟ್ಟರು. ದೇಸಿ ಧಾನ್ಯಗಳ ಪ್ರಚಾರಕ್ಕೆ ಇದೇ ನಮಗೆ ನೆರವಿಗೆ ಬಂದದ್ದು.

ಒಮ್ಮೆ ತುರುವೇಕೆರೆಗೆ ಸಭೆಗೆ ಹೋಗಿದ್ದೆವು. ಹೋಗುವ ಮುನ್ನವೇ ಸಂಜೆ ಕೃಷ್ಣಮೂರ್ತಿ ಬಿಳಿಗೆರೆಯವರ ಮನೆಯಲ್ಲಿ ಉಳಿಯುವುದು ಎಂದು ಮಾತಾಗಿತ್ತು. ಸಭೆ ಮುಗಿಸಿ ಬಿಳಿಗೆರೆಯವರ ಮನೆಯಲ್ಲಿ ಪಾನಗೋಷ್ಟಿ ಆರಂಭಿಸಿದಾಗ ಸಂಜೆ 7 ಘಂಟೆ. ರಘು, ಬೆಂಗಳೂರಿನಿಂದ ಒಂದು ಕೇಸ್ ಬಿಯರ್ ಬಾಟಲಿಗಳನ್ನೇ ತಂದಿದ್ದರು. ನಾವಾರೂ ದೊಡ್ಡ ಕುಡುಕರೇನಲ್ಲ. ತಂದ ಬಿಯರ್ ಬಾಟಲಿಗಳ ಕಾಲು ಭಾಗವೂ ಖರ್ಚಾಗಲಿಲ್ಲ. ಮಾತು, ಯೋಜನೆ, ಜೋಕುಗಳನ್ನೇ ಧ್ಯಾನಿಸುತ್ತ ಮೈ ಮರೆತಿದ್ದವರಿಗೆ ರಾತ್ರಿ 10 ಘಂಟೆಯಾದದ್ದು ತಿಳಿದದ್ದು ಬಿಳಿಗೆರೆಯವರ ಮಡದಿ ಮಂಜುಳ ಮೇಡಂ ಊಟಕ್ಕೆ ಕರೆದಾಗಲೇ. ಊಟ ಮುಗಿಸಿ ರಘು ಬೆಂಗಳೂರಿಗೆ ಹೊರಟು ನಿಂತರು. ನಾನು ಮತ್ತು ಅಣೆಕಟ್ಟೆ ವಿಶ್ವನಾಥ್ ಅವರ ಜೊತೆಗೂಡಿದೆವು. ತಮ್ಮ ಹೋಂಡಾ ಸಿಟಿಯನ್ನು ಹಾರಿಸುತ್ತಾ ಒಂದು ಘಂಟೆಯ ಅಂತರದಲ್ಲಿ ಬೆಂಗಳೂರು ತಲುಪಿಸಿದರು. ಅವರು ವಾಹನ ಚಾಲನೆಯ ಕೌಶಲ್ಯ ಕಂಡು ನಿಬ್ಬೆರಗಾದೆವು.

ಕುಲಾಂತರಿ ತಳಿಗಳು ಕರ್ನಾಟಕಕ್ಕೆ ಕಾಲಿಡದಂತೆ ರೂಪಿಸಿದ ‘ಕುಲಾಂತರಿ ಮುಕ್ತ ಕರ್ನಾಟಕ’ದ ಪ್ರಮುಖ ಚಿಂತಕರಾಗಿ, ರಘು ಕುಲಾಂತರಿ ಪರವಾಗಿದ್ದವರ ಬಾಯಿ ಮುಚ್ಚಿಸುತ್ತಿದ್ದರು. ಅವರ ವಾದ ಮಂಡಿಸುವ ಸೊಗಸು ,ಹಾಸ್ಯದ ಮಾತುಗಳಿಗೆ ಎದುರಾಳಿಗಳು ಮನಸೋತು ಸುಮ್ಮನಾಗಿ ಬಿಡುತ್ತಿದ್ದರು.

ರಘು ಪುಸ್ತಕ ಪ್ರೇಮಿ. ಅವರ ಮನೆಯಲ್ಲಿ 30 ಸಾವಿರಕ್ಕೂ ಮೀರಿದ ಪುಸ್ತಕಗಳ ಭಂಡಾರವೇ ಇತ್ತು. ಅವರ ಓದಿನ ದಾಹ ಅಗಾಧ.‌ ಹಾಗಾಗೇ ಅವರ ಮಾತು, ಅಭಿಪ್ರಾಯಗಳಿಗೆ ಗಟ್ಟಿತನವಿತ್ತು.

ಬೇರೆ ಆಹಾರ ತಜ್ಞರ ರೀತಿ ಬೀಸು ಹೇಳಿಕೆಗಳು, ಒಣ ಮಾತಿನ ಲಹರಿ ಇವರದಲ್ಲ. ಪ್ರತಿಯೊಂದು ಮಾತಿಗೂ ವೈಜ್ಞಾನಿಕ ಪುರಾವೆ ಇಟ್ಟುಕೊಂಡೇ ಮಾತಾಡುತ್ತಿದ್ದರು. ಹಾಸ್ಯದ ಲೇಪ ಹಚ್ಚಿ, ತಮ್ಮ ಮಾತು ಕೇಳುಗರ ಕುತೂಹಲ ಕೆರಳಿಸುವಂತೆ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು.

ರಘು ಇದ್ದಕಡೆ ನಗುವಿನ ಬುಗ್ಗೆ ಸಾಮಾನ್ಯ. ಪ್ರತಿ‌ ಮಾತಿಗೂ ‘ಪಂಚ್ ‘ ಕೊಟ್ಟು ಮಾತಾಡುತ್ತಿದ್ದ ಅವರು ಹಾಸ್ಯದ ಹೊನಲು‌ ಹರಿಸುತ್ತಿದ್ದರು. ಯಾರೊಂದಿಗೂ ಜಗಳವಾಡದ, ಸಮಾಜ ಮುಖಿ ಕಾರ್ಯಗಳ ಜೊತೆಗಿರುತ್ತಿದ್ದ, ಅನ್ನ- ಆಹಾರದ ಬಗ್ಗೆ ಅಪಾರ ತಿಳುವಳಿಕೆಯಿದ್ದ ರಘುರವರಿಗೆ ಕ್ಯಾನ್ಸರ್ ಆಗಿದೆ ಎಂಬ ಸುದ್ದಿ ಬಂದಾಗ ನಮಗೆ ನಂಬಲಾಗಲಿಲ್ಲ.

ಕಳೆದ ವರ್ಷದ ಜನವರಿಯಲ್ಲಿ ಕೇಂದ್ರ ಸರ್ಕಾರ ಕುಲಾಂತರಿ ತಳಿಗಳ ಪ್ರಯೋಗಕ್ಕೆ ಮುಂದಾದಾಗ ಜನಸಾಮಾನ್ಯರಿಗೆ ಅರಿವು ಮೂಡಿಸಲು ವೆಬಿನಾರ್ ಏರ್ಪಡಿಸಿದ್ದೆವು. ಆ ಸಂದರ್ಭದಲ್ಲಿ ರಘು ಮುಖ್ಯ ಭಾಷಣಕಾರರಾಗಿದ್ದರು. ಅವರ ಜೊತೆ ಮಾತಾಡಿದ್ದು ಅದೇ ಕೊನೆ.

ಕ್ಯಾನ್ಸರ್ ಬಂದ ನಂತರ ರಘು ಮೌನಿಯಾಗಿ ಬಿಟ್ಟರು. ಅವರ ಜೊತೆ ಮಾತಾಡುವ, ನೋಡುವ ಅವಕಾಶ ಸಿಗಲೇ ಇಲ್ಲ. ಇವತ್ತು ಅವರು ತೀರಿ ಹೋದ ಸುದ್ದಿ ಬಂದಾಗ ಅವರ ಅಂತಿಮ ದರ್ಶನಕ್ಕೆ ನಾನು ಹೋಗಬಾರದೆಂದು ನಿರ್ಧರಿಸಿದೆ. ಹಾಸ್ಯ ಚಟಾಕಿ ಹಾರಿಸುತ್ತಾ, ನಗು ಚೆಲ್ಲುತ್ತಾ ನಮ್ಮ ಜೊತೆಗಿದ್ದ ರಘು ರವರ ನೆನಪು ನನ್ನ ಜೊತೆ ಭದ್ರವಾಗಿರಬೇಕಿತ್ತು.

‘ನಿಮ್ಮ ಆಲೋಚನೆಗಳನ್ಲೆಲ್ಲಾ ಒಟ್ಟುಗೂಡಿಸಿ ಚೆಂದದ ಪುಸ್ತಕ ಬರೆಯಿರಿ. ಅದು ದಾಖಲಾಗಬೇಕು’ ಪ್ರತಿ ಬಾರಿ ನಾವು ಪೋನಿನಲ್ಲಿ ಮಾತಾಡಿದಾಗಲೆಲ್ಲಾ ಅವರಿಗೆ ಪ್ರೀತಿಯಿಂದ ಒತ್ತಾಯಿಸುತ್ತಿದ್ದೆ. ‘ ಮಾಡೋಣ…’ ಎಂದು ದೊಡ್ಡದಾಗಿ ನಕ್ಕು ಮರೆತು ಬಿಡುತ್ತಿದ್ದರು.

ಹೋಗಿ ಬನ್ನಿ ರಘು. ಕೆಂಪಕ್ಕಿ, ಕರಿ ನವಣೆ,ಕೊರಲೆ, ಬಣ್ಣದ ಮುಸುಕಿನ ಜೋಳ ನಿಮ್ಮ ನೆನಪುಗಳನ್ನು ಸದಾ ಜೀವಂತವಾಗಿಟ್ಟಿರುತ್ತವೆ.

‍ಲೇಖಕರು avadhi

October 16, 2023

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This