ಕೃಷ್ಣಾ ಮನವಲ್ಲಿ ಕಂಡಂತೆ ರಾಜೀವ್ ತಾರಾನಾಥ್

ಕೃಷ್ಣ ಮನವಲ್ಲಿ ಅನುವಾದದಲ್ಲಿ, ಸಾಂಸ್ಕೃತಿಕ ಚಿಂತನೆಯಲ್ಲಿ, ವಿಮರ್ಶೆಯಲ್ಲಿ ಬಹು ದೊಡ್ಡ ಹೆಸರು. ಡಾ ರಾಜೀವ್ ತಾರಾನಾಥ್ ಅವರನ್ನು ದಶಕಗಳ ಕಾಲ ತುಂಬಾ ಹತ್ತಿರದಿಂದ ಕಂಡವರು. ಅವರ ಗರಡಿಯಲ್ಲಿ ಸರೋದ್ ಕಲಿತವರು. ರಾಜೀವರ ಸಂಗೀತವನ್ನೂ, ಚಿಂತನೆಗಳನ್ನು ಸತತವಾಗಿ ಕೇಳಿ ದಕ್ಕಿಸಿಕೊಂಡವರು.

ಹನಿದುಂಬಿದ ಕಣ್ಣುಗಳಲ್ಲಿ ಅವರು ಬರೆದ ವಿದಾಯದ ನೆನಪುಗಳು ಇಲ್ಲಿವೆ-

 ನಾ ಕಂಡ ಗುರೂಜಿ : ಕೆಲವು ನೆನಪುಗಳು

ಕೃಷ್ಣಾ ಮನವಲ್ಲಿ

**

ಮೂವತ್ತಾರು ವರ್ಷಗಳ ಕಾಲ ಒಬ್ಬ ಗುರುವಾಗಿ, ತಂದೆಯಾಗಿ, ತಾಯಿಯಂತೆಯೇ ಅಕ್ಕರೆ ಕಾಳಜಿ ತೋರಿ ನನ್ನ ಬದುಕನ್ನ ರೂಪಿಸಿಕೊಟ್ಟವರು ಮೇರು ವ್ಯಕ್ತಿತ್ವದ ಪಂಡಿತ ರಾಜೀವ ತಾರಾನಾಥರು. ಸಂಗೀತ, ಸಾಹಿತ್ಯ, ಬದುಕಿನ ಬಗೆಗಿರುವ ಚಿಂತನೆಗಳು, ಜನಪರ ನಿಲುವಿನೊಂದಿಗೆ, ಜನರನ್ನು ಪ್ರೀತಿಸಿ, ಅವರೆಲ್ಲರನ್ನೂ ತನ್ನವರೇ ಎಂದು ಭಾವಿಸಿ ಬದುಕುವ ರೀತಿ…. ಇದೆಲ್ಲ  ಕಲಿಸಿ ತಿದ್ದಿ ತೀಡಿ ಬೆಳೆಸಿದವರು. ನನ್ನ ಇಡೀ identityಯನ್ನೇ ಕಟ್ಟಿಕೊಟ್ಟಿದ್ದಾರೆ. ಅವರ ಬಗ್ಗೆ, ಅದು ಅವರು ನಮ್ಮನ್ನು ಅಗಲಿದ ಕೆಲವೇ ದಿನಗಳಲ್ಲಿ ಬರೆಯುವುದು ಬಹಳ ಕಷ್ಟ. ಆದರೆ ಈಗ ಅವರನ್ನು ನೆನಪುಗಳಲ್ಲೇ ಹುಡುಕಿಕೊಳ್ಳಬೇಕಷ್ಟೆ.

ನಾನು ಪಂಡಿತ ರಾಜೀವ ತಾರಾನಾಥರನ್ನು ಮೊಟ್ಟಮೊದಲ ಬಾರಿ ಭೇಟಿ ಮಾಡಿದ ಘಟನೆ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ.  1988 ರಲ್ಲಿ ನಾನು ಓದು ಮುಂದುವರೆಸಲು ಅಮೇರಿಕಾಗೆ ಹೋಗಲು ಸಿದ್ದಳಾಗಿದ್ದೆ. ನನ್ನ ಇಂಗ್ಲಿಷ್ ಪ್ರೊಫೆಸರ್ T. G. ವೈದ್ಯನಾಥನ್ ಅವರ ಮನೆಗೆ ಅವರಿಂದ ಒಂದು recommendation letter ತೆಗೆದುಕೊಳ್ಳಲು ಹೋಗಿದ್ದೆ. ಅಲ್ಲಿ ಎಂದಿನಂತೆ Freud, ಸಾಹಿತ್ಯ, ಸಿನೆಮಾಗಳ ಚರ್ಚೆ ಜೋರಾಗಿ ನಡೆದಿತ್ತು. ಒಂದೇ ವ್ಯತ್ಯಾಸ. ಎದಿರಿನಲ್ಲಿ ಒಂದು ಬೆಟ್ಟದಂತಹ ವ್ಯಕ್ತಿ ನೆಲದ ಮೇಲೆ ಹಾಸಿದ ಚಾಪೆಯ ಮೇಲೆ ಕುಳಿತು ಮಾತಿನ ಮೋಡಿ ಹಾಕಿದ್ದರು. ಸಣ್ಣ ಕಿಟಕಿಗಳ, ಮಧ್ಯಾಹ್ನದಲ್ಲೂ ಬೆಳಕಿರದ, ಆ ಕೋಣೆಯಲ್ಲಿ ಮಾತಿನ ಮಿಂಚು ಹರಿದಾಡುತ್ತಿತ್ತು. ಧೂಮಲೀಲೆಯ  ಹಿಂದೊಂದು ಪ್ರಖರ ಬೆಳಕು! ಗುರುಗಳು ಮಾತನಾಡುತ್ತಿದ್ದರೆ ಸಾಮಾನ್ಯವಾಗಿ ಬೇರೆಯವರು ಕೇಳುತ್ತಾ ಕುಳಿತುಕೊಳ್ಳುವುದು ಪರಿಪಾಠ. ನಾನೂ, ಎಲ್ಲರೂ ಕೇಳುತ್ತಿದ್ದೆವು. ಮಧ್ಯೆ ಮಧ್ಯೆ TGV ಪ್ರಶ್ನೆಗಳು. ರಾಜೀವರ ವಿಚಾರಧಾರೆ, ಅರಿವಿನ ಹರವು, ಮಾತಿನ ಶೈಲಿ, ಎಲ್ಲಾ ತುಂಬಾ ವಿಶಿಷ್ಟ. ಸಂಗೀತ, ಸಾಹಿತ್ಯ ಎರಡೂ ತುಂಬಿದ್ದ ಮನೆಯಿಂದ ಬಂದ ನನಗೆ ಈ ವ್ಯಕ್ತಿಯ ಬಗ್ಗೆ ಆಗಲೇ ಗೊತ್ತಿತ್ತು. ಇಂಗ್ಲಿಷ್ ಸಾಹಿತ್ಯ ಓದುತ್ತಿದ್ದ ನನಗೆ ಸಂಗೀತದ ಬಗ್ಗೆಯೂ ತುಂಬಾ ಆಸಕ್ತಿ. ನಮ್ಮ ತಂದೆಗೆ ಸರೋದ್ ಕಲಿಯಬೇಕು ಅನ್ನುವ ಆಸೆ ಇತ್ತಂತೆ. ಆದರೆ, ಅದು ಸಾಧ್ಯವಾಗದೆ ಆ ಕನಸು ಹಾಗೆ ಉಳಿದಿತ್ತು. ಯಾವುದೇ ಸಂಗೀತ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದರೆ ನನ್ನನ್ನು ಮನೆಯ ಜನ ಕರೆದುಕೊಂಡು ಹೋಗುತ್ತಿದ್ದರು. ಹೀಗೆ, ಸಣ್ಣವಳಿದ್ದಾಗ ಗುರುಗಳು ಅವರ ಗುರುಗಳಾದ ಉಸ್ತಾದ್ ಅಲಿ ಅಕ್ಬರ್ ಖಾನ್ ಸಾಹೇಬ್ ಅವರೊಂದಿಗೆ ನುಡಿಸಿದ ಕಛೇರಿ ಕೂಡಾ ಕೇಳಿದ್ದೆ. ಆ ಬೆರಗು ವರ್ಷಗಳ ನಂತರ ಹಾಗೇ ಉಳಿದಿತ್ತು.

ನೀನು ನುಡಿಸುವ ಹಾಗೇ ಮಾತನಾಡ್ತೀಯಾ,  ಮಾತನಾಡುವ ಹಾಗೇ ನುಡಿಸ್ತೀಯಾ

ಆ ದಿನ, TGV ಮನೆಲ್ಲಿ ಮಾತು ಸಾಹಿತ್ಯದಿಂದ ಸಂಗೀತದ ಕಡೆಗೂ ಹೊರಳಿತ್ತು.  TGVಯವರು ತಮಿಳಿನಲ್ಲಿ ಹೇಳಿದ ಮಾತು “ರಾಜೀವ್ ನೀ ವಾಶಿಕರ ಮಾರಿಯೇ ಪೇಶ್ರೆ, ಪೇಶ್ರ ಮಾರಿಯೇ ವಾಶಿಕ್ರೆ” (ರಾಜೀವ್, ನೀನು ನುಡಿಸುವ ಹಾಗೇ ಮಾತನಾಡ್ತೀಯಾ,  ಮಾತನಾಡುವ ಹಾಗೇ ನುಡಿಸ್ತೀಯಾ) ಎಂದು ಅವರ ಮಾತು, ನುಡಿಸಾಣಿಕೆ ಎರಡರ brilliance ಅನ್ನೂ ಕುರಿತು ಹೇಳಿದ್ದು. ಚರ್ಚೆ, ಮಾತು ಮುಗಿದಿತ್ತು. ಅಪರೂಪದ ರಾಜೀವರ ಮಾತಿನ ಮಾಯೆ ಇನ್ನೂ ನಮ್ಮನ್ನೆಲ್ಲಾ ದಟ್ಟವಾಗಿ ಆವರಿಸಿತ್ತು. ಆರಡಿಯ ಆಜಾನುಬಾಹು ಎದ್ದು ನಿಂತರು. ನಾನು ಇದ್ದಕ್ಕಿದ್ದಂತೆ ಕೇಳಿಯೇ ಬಿಟ್ಟೆ. “ನೀವು ನನಗೆ ಸರೋದ್ ಹೇಳಿಕೊಡ್ತೀರಾ?”. ಒಂದು ಕ್ಷಣ ಸುಮ್ಮನಿದ್ದ ರಾಜೀವರು  “ಆಯ್ತು ನಾನು ಸ್ವಲ್ಪ ಯೋಚಿಸಬೇಕು. ನಿನ್ನಲ್ಲಿ ಕಲಿಯೋ ಶಿಸ್ತು, ಸ್ವರಜ್ಞಾನ ಎಲ್ಲಾ ಎಷ್ಟಿದೆ ನೋಡಬೇಕು. ನಾಳೆ ಬೆಳಿಗ್ಗೆ ನಮ್ಮ ಮನೆಗೆ ಬಂದು ಭೇಟಿ ಮಾಡು” ಎಂದರು. ಆ ಕ್ಷಣ ಅಮೇರಿಕಾ, ಎಲಿಯಟ್, MA ಮನಸಿನಿಂದ ಹಾರಿ ಹೋಗಿದ್ದವು. ಸರೋದಿನ ಮಾಂತ್ರಿಕ ಶಕ್ತಿ ನನ್ನನ್ನು ಆವರಿಸಿತ್ತು. ಆಮೇಲೆ, ನನ್ನ  ಹಿತೈಷಿಗಳು, ಕೆಲವು ಹಿರಿಯರು, ಪ್ರೊಫೆಸರುಗಳು ನನ್ನನ್ನು ಎಷ್ಟೋ ತಡೆಯಲು ನೋಡಿದ್ದರು. ಸಾಹಿತ್ಯದಲ್ಲಿ Gold Medal, rank ತೆಗೆದುಕೊಂಡು, ಈಗ ನಿನ್ನ career ಶುರುವಾಗೋ ಸಮಯ. ಅಮೇರಿಕಾಗೆ ಬೇರೆ ಹೋಗೋದಿದೆ. ನಿನಗೆ ಇದೇನಿದು ಹೊಸ ಹುಚ್ಚು? ಸಂಗೀತದಿಂದ ಬದುಕಲು ಸಾಧ್ಯನಾ? ಬೇಕಿದ್ದರೆ ಅದನ್ನು ಒಂದು ಹವ್ಯಾಸ ಅಂತಾ ಕಲಿ ಎಂದು ಬುದ್ಧಿ ಮಾತುಗಳನ್ನು ಹೇಳಿ ಹೇಳಿ ಸುಸ್ತಾಗಿದ್ದು ಆಯಿತು. ನನ್ನ ನಿರ್ಧಾರ ಗಟ್ಟಿಯಾಗಿತ್ತು. ಮಾರನೇ ದಿನ, ಬೆಳಿಗ್ಗೆ 5.30 ಘಂಟೆಗೆ ಬಸವನಗುಡಿಯ ನಮ್ಮ ಮನೆಯ ಹತ್ತಿರವೇ ಜಯನಗರದಲ್ಲಿದ್ದ ಗುರುಗಳ ಮನೆಗೆ ಹೆದರಿಕೆ, ಅಷ್ಟೇ ಕಾತರ, ಏನೋ ಉತ್ಸಾಹದಿಂದ ಹೊರಟೆ.

ಜಯನಗರದ ಒಂದನೇ ಬ್ಲಾಕ್ ನ ಹಳೇ ಮನೆ ಗುರೂಜಿಯವರ ತಾಯಿ ಸುಮತಿಬಾಯಿ ಕಟ್ಟಿಸಿದ್ದು. ಮುಂದೆ ಅವರ ತಾಯಿಯ ಬಗ್ಗೆ ಎಷ್ಟೋ ತಿಳಿದುಕೊಳ್ಳುತ್ತಾ ಬಂದೆ. ಗುರುಗಳ ತಂದೆಯವರಾದ ಪಂಡಿತ  ತಾರಾನಾಥರ ಬಗ್ಗೆ ಕರ್ನಾಟಕದಲ್ಲಿ ಎಲ್ಲರಿಗೂ ಗೊತ್ತು. ಆದರೆ ಅವರ ತಾಯಿ ಆಗಿನ ಕಾಲದಲ್ಲಿ ಕಾಲೇಜು ಓದಿ ಇಂಗ್ಲಿಷ್ ನಲ್ಲಿ ಉತ್ತಮ ವಾಗ್ಮಿಯಾಗಿ, ವೈದ್ಯರಾಗಿದ್ದವರು. ಸಮಾಜ ಸುಧಾರಣೆ, ಹೆಣ್ಣು ಮಕ್ಕಳ ಹಕ್ಕುಗಳಿಗಾಗಿ ಹೋರಾಡಿದವರು. ಬಹಳ ವರ್ಷಗಳ ನಂತರ, ನಾನು ಅಮೇರಿಕಾದಲ್ಲಿ PhD ಮಾಡುತ್ತಿದ್ದಾಗ ಆಕಸ್ಮಿಕವಾಗಿ ಪೆರಿಯಾರ್ ತೀಡಲ್ ನಲ್ಲಿ. ಅವರು 1920ರ ದಶಕದಲ್ಲಿ ಬರೆದಿದ್ದ ಲೇಖನಗಳನ್ನು ಓದಿದೆ. ಆ ವೈಚಾರಿಕತೆ, ಹೆಣ್ಣು ಮಕ್ಕಳ ಸ್ವಾತಂತ್ರದ ಬಗ್ಗೆ ಬರೆದ ಹರಿತವಾದ ಲೇಖನಗಳು ನನ್ನನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿದವು ಎಂದರೆ, ಅವರ ಬಗ್ಗೆ ಬರೆದೆ, ಎಷ್ಟೋ Conferenceಗಳಲ್ಲಿ ಕೆನಡಾ, ಅಮೇರಿಕಾದಲ್ಲೂ ಮಾತನಾಡಿದೆ. ಗುರೂಜಿಯವರ ತಾಯಿ ಬಹಳ ದೊಡ್ಡ ವ್ಯಕ್ತಿ. ಹಾಗೇ ಗುರೂಜಿ ಕೂಡಾ ತಾಯಿಯ ಬಗ್ಗೆ ಬಹಳ ಹೆಮ್ಮೆ ಪ್ರೀತಿಯಿಂದ ಮಾತನಾಡುತ್ತಿದ್ದರು. ಇಂತಹ  ಎತ್ತರದ ವ್ಯಕ್ತಿಗಳನ್ನು ತಂದೆ-ತಾಯಿಯಾಗಿ ಪಡೆದಿದ್ದ ಗುರೂಜಿ ತಾವು ಅವರೇರಿದ ಎತ್ತರಕ್ಕೆ ಏರಿ ಇಡೀ ವಿಶ್ವದಲ್ಲೇ ಸರೋದ್ ಸಂಗೀತದ ಛಾಪನ್ನು ಹಾಕಿದ್ದು ದೊಡ್ಡ ವಿಷಯ.

ಸಂಗೀತದಲ್ಲೇ ಅಲ್ಲದೆ, ಸಾಹಿತ್ಯ, ಭಾಷೆಗಳ ಪಾಂಡಿತ್ಯ, ಮಾನವೀಯತೆ….. ಈ ಎಲ್ಲ ಸ್ತರಗಳಲ್ಲೂ ಅವರಲ್ಲಿದ್ದ ಔತ್ತಮ್ಯ (ಔತ್ತಮ್ಯ ಅನ್ನುವುದು ಗುರುಗಳಿಗೆ ಪ್ರಿಯವಾದ ಪದ) ಎಲ್ಲದರ ಅನುಭವ ನನಗಾಗುತ್ತಾ ಬಂತು.  ಗುರೂಜಿ ಎಷ್ಟೋ ಸಲ ಮನೆ ಬದಲಾಯಿಸಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಅವರ ಮಾತು, ಸಂಗೀತ, ಜನರ ಬಗ್ಗೆ ಇಟ್ಟಿದ್ದ ಪ್ರೀತಿ ಎಲ್ಲಾ ತುಂಬಿರುತ್ತಿತ್ತು. ಈಗ, ನಾನಿರುವ ಮನೆಯಲ್ಲೂ ಹಾಗೆ. ಇಲ್ಲಿರುವ ಪ್ರತಿಯೊಂದು ವಸ್ತು ಅವರನ್ನು ನೆನಪಿಸುತ್ತದೆ. ಹಾಗೇ ಜಯನಗರದ, ನಾನು ಮೊದಲು ಗುರುಗಳನ್ನು ನೋಡಿದ ಮನೆಯ ನೆನಪುಗಳು ಈಗಲೂ ಕಾಡುತ್ತವೆ. ನಾನು ಮೊದಲು ಸರೋದ್ ಕಲಿಯಲು ಶುರು ಮಾಡಿದ ದಿನಗಳು, ಆ ಘಟನೆಗಳು ನನ್ನ ಮೇಲೆ ಗಾಢವಾದ ಪರಿಣಾಮ ಬೀರಿವೆ. ಇವತ್ತಿವರೆಗೂ, ಗುರೂಜಿ ನನಗೆ ಮೊದಲ ದಿನ ಹೇಳಿದ ಮಾತುಗಳು ನೆನಪಾಗುತ್ತವೆ. “ನಾನು ನಿನಗೆ ಒಂದು ಸರೋದ್ ಕೊಟ್ಟು ಹೇಗೆ ನುಡಿಸಬೇಕು ಅಂತ ಹೇಳ್ತೀನಿ. ಆ ಸಣ್ಣ ರೂಮಿನಲ್ಲಿ ಕೂತು practice ಮಾಡು. ನಾನು ಕರೆದಾಗ ಮಾತ್ರ ಹೊರಗೆ ಬಾ.” ಅವರು ಹೇಳಿ ಕೊಟ್ಟಿದ್ದು ಭೈರವ್ ರಾಗದ scale – “ಸ ರೆ ಗ ಮ ಪ ಧ ನೆ ಸ – ಸ ನೆ ಧ ಪ ಮ ಗ ರೆ ಸ.”….ಇಷ್ಟೇ… ಇದನ್ನು ನಾನು ಗಂಟೆಗಟ್ಟಲೆ ನುಡಿಸುತ್ತಲೇ ಇದ್ದೆ . ನನಗೆ ಸ್ವರಜ್ಞಾನ ಇತ್ತು.  ನುಡಿಸುತ್ತಿದ್ದೆ . ಒಂದೋ, ಎರಡೊ ಗಂಟೆ ಆದ ಮೇಲೆ ಕರೆಯುತ್ತಿದ್ದರು, ಊಟ ಹಾಕುತ್ತಿದ್ದರು. ಆಮೇಲೆ ಮಾತನಾಡುತಿದ್ದರು. ಆದರೆ ಆ ಎರಡು ಗಂಟೆಗಳ ಕಾಲ ನಾನು ಬರೀ ಏಕೆ ಸ ರಿ ಗ ಮ ಪ ದ ನೆ ಸ ಬಾರಿಸುತಿದ್ದೆ  ಎಂದು ಬಹಳ ಯೋಚನೆ ಮಾಡುತ್ತಿದ್ದೆ. ನಂತರ ಅರ್ಥ ಆಯಿತು. ಇದು ಶಿಸ್ತಿನ ಪಾಠ. ಈ ಪಾಠ ಕಲಿಯುವುದು ಬಹಳ ಮುಖ್ಯ ಎಂದು. ಹತ್ತು ದಿನಗಳ ನಂತರ ಕರೆದು ಹೇಳಿದರು “ಇವತ್ತಿಂದ ನೀನು ನನ್ನ ಶಿಷ್ಯೆ.” ಅದು ನನ್ನ ಜೀವನದ ಬಹಳ ಮುಖ್ಯ ದಿನ. ನಾನು ಸರೋದ್ ಹತ್ತು ವರ್ಷ ಕಲಿತೆ. ಅದಾದ ಮೇಲೆ, ನನಗೆ ಒಂದು ಸಣ್ಣ break ಬೇಕು ಅನ್ನಿಸಿತು. ಎರಡು ವರ್ಷ ಅಮೇರಿಕಾಗೆ ಹೋಗಿಬರಬೇಕು ಎಂದು ನಿರ್ಧರಿಸಿದೆ. ಸಾಹಿತ್ಯದ ಒಲವು ಕೂಡಾ ಇತ್ತಲ್ಲ? ಅಮೇರಿಕಾದಲ್ಲಿ MA ಮಾಡಲು ಹೊರಟೆ. ಆದರೆ ಎಷ್ಟೋ ವರ್ಷಗಳು ಅಲ್ಲೇ ಉಳಿದುಬಿಟ್ಟೆ.  ಮತ್ತೆ ನಾನು ಸರೋದ್ ನುಡಿಸಲಿಲ್ಲ. Practice ಮಾಡಲಾಗಲಿಲ್ಲ. ಇದು ನನ್ನ loss.  ಗುರುಗಳಿಗೆ ಅದರ ಬಗ್ಗೆ ಕೊನೆಯವರೆಗೂ ಬೇಜಾರಿತ್ತು. ಕೊನೆ ಕೊನೆಗೆ ಅವರು ಆಸ್ಪತ್ರೆಯಲ್ಲಿದ್ದಾಗ  ನಾನು promise ಮಾಡಿದ್ದೆ. “ನೀವ್ ಮನೆಗೆ ವಾಪಸ್ ಬನ್ನಿ. ನಾನು ಮತ್ತೆ ಸರೋದ್ ನುಡಿಸ್ತೀನಿ” ಎಂದು.  ಅವರು ಹಿಂತಿರುಗಿ ಬರಲಿಲ್ಲ

ಸಂಗೀತದ ಬಗ್ಗೆ ಮಾತನಾಡಬಾರದು. ಸಂಗೀತ ನುಡಿಸಬೇಕು

**

ಭಾಷೆ ಕಲಿಯಬೇಕಾದರೆ ಮೊದಲು ಹಿಡಿಯಬೇಕಾಗಿರುವುದು ಅದರ “ಸೊಲ್ಲು”

ಗುರೂಜಿಯವರ ಎಷ್ಟೋ ಮಾತು ಮತ್ತೆ ಮತ್ತೆ ಮರುಕಳಿಸಿ ನೆನಪಾಗುತ್ತೆ. “ಸಂಗೀತದ ಬಗ್ಗೆ ಮಾತನಾಡಬಾರದು. ಸಂಗೀತ ನುಡಿಸಬೇಕು” ಎಂದು ಹೇಳುತ್ತಿರುತಿದ್ದರು. ಆದರೆ ಸಂಗೀತದ ಬಗ್ಗೆ  ಅವರೇ ಹೇಳಿದ ಮಾತುಗಳನ್ನು ನಾನು ಯಾವಾಗಲೂ cherish ಮಾಡುತ್ತೇನೆ. ಸಂಗೀತದ ಅಭಿಜಾತತೆ ಬಗ್ಗೆ ಬಹಳ ಸಲ ಮಾತನಾಡಿದ್ದರು. ಅಭಿಜಾತ ಸಂಗೀತವನ್ನು ಅದರ ನಿಯಮ, ಕಟ್ಟಳೆಗಳ ಚೌಕಟ್ಟಿನಲ್ಲಿ ಬಾರಿಸಬೇಕು. ಆದರೆ ಒಂದು ವಾದ್ಯ, ರಾಗ, ತಾಳದ  ಸಾಧ್ಯತೆಗಳನ್ನು ಎಷ್ಟರ ಮಟ್ಟಿಗೆ ವಿಸ್ತರಿಸಬಹುದು ಅನ್ನುವುದು ನಮ್ಮ creativityಯನ್ನು ಅವಲಂಬಿಸಿದೆ. ಅದನ್ನು ಅತ್ಯಂತ  ಪರಿಣಾಮಕಾರಿಯಾಗಿ ಮಾಡಿ ತೋರಿಸಿದವರು ಗುರುಗಳು. ಗಾಯಕಿಯಾಗಲಿ, ಲಯಕಾರಿಯಾಗಲಿ ಅವರ ಕೈಯಲ್ಲಿ ನುಡಿದ ಹಾಗೆ ಬೇರೆಯವರ ಕೈಯಲ್ಲಿ ನಾನು ಕೇಳಿಲ್ಲ. ಗುರುಗಳ ಸಂಗೀತದ ಬಗ್ಗೆ ನಾನು ಮಾತನಾಡಬೇಕಾದರೆ, ನನಗೆ ಮತ್ತೆ-ಮತ್ತೇ ನೆನಪಾಗುವ ವಿಷಯ ಅವರಿಗೆ ಅವರ ಗುರುಗಳ ಬಗ್ಗೆ ಇದ್ದ ಅಪಾರವಾದ ಭಕ್ತಿ. ನಿಜವಾಗಲೂ ಅದು ಒಂದು ಮಾದರಿ. ಗುರೂಜಿ ಖಾನ್ ಸಾಹೇಬರನ್ನ “ಬಾಬಾ” ಎಂದು ಕರೆಯುತ್ತಿದ್ದರು. ಅವರು ಹೇಳುತ್ತಿದ್ದದ್ದು ಇಷ್ಟೇ “ಖಾನ್ ಸಾಹೇಬರ ಸಂಗೀತ ನನ್ನಲ್ಲಿ ಹರಿದು ಬಂತು.” ತಮ್ಮ ಗುರುಗಳನ್ನು ಮೊದಲ ಸಲ ನೋಡಿದ ಆ ಮಹತ್ತರ ಅನುಭವದ ಬಗ್ಗೆ ಬಹಳ ಕಡೆ ಬರೆದಿದ್ದಾರೆ ಮತ್ತು ಹೇಳಿದ್ದಾರೆ.

ಗುರುಗಳು ನನಗೆ “model” ಆಗಿ ಮಾರ್ಗದರ್ಶನ ಮಾಡಿದ್ದು ಸಾಹಿತ್ಯದ ಬಗ್ಗೆ ಕೂಡ. ಸಾಹಿತ್ಯದಲ್ಲಿನ ಅವರ  ಸಾಧನೆಗಳು ಬಹಳ ದೊಡ್ಡವು. ಕನ್ನಡದ ನವ್ಯಕ್ಕೆ ಒಂದು ಸೈದ್ಧಾಂತಿಕ ಚೌಕಟನ್ನು ಹಾಕಿ ಕೊಟ್ಟವರು. ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಯು. ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರರು ತಾವು ಏನೇ ಬರೆದರೂ  ಗುರುಗಳಿಗೆ ತೋರಿಸಿ ಅವರು ಸೈ ಅಂದ ಮೇಲೆ publish ಮಾಡುತ್ತಿದ್ದರು. ನಾನು  ಏನೇ ಬರೆದರೂ, ಯಾವ Conference, Lit Fest ಗೆ ಹೋಗಿ ಮಾತನಾಡಿದರೂ ಕೊನೆಗೆ ಪ್ರತಿದಿನ ಕ್ಲಾಸಿನಲ್ಲಿ ಪಾಠ ಮಾಡಿದ್ದರ ಬಗ್ಗೆ ಕೂಡಾ ಆಸ್ಥೆಯಿಂದ ಕೇಳಿ ತಿಳಿದುಕೊಳ್ಳುತ್ತಿದ್ದರು. ಅವರು ಮೆಚ್ಚಿದರೆ ಅದೇ ನನಗೆ ದೊಡ್ಡ ಹೆಮ್ಮೆ. ಹೀಗೆ ನನ್ನ ಅನುವಾದ ಕಾರ್ಯದಲ್ಲಿ ಸಹಿತ ಅವರೇ ನನ್ನ ಮೊದಲ ಮಾದರಿ. ಅವರ ಜೋಕುಮಾರಸ್ವಾಮಿ ಅನುವಾದದಲ್ಲಿ ಅವರು ಬಳಸಿರುವ ಭಾಷೆ – ಅದಕ್ಕಿರುವ ತನ್ನದೇ ಆದ ಲಯ, tone ಹಾಗು rhythm ಮತ್ತು ಅವರು ಹೇಳುತ್ತಿದ್ದ ಅನುವಾದದ “seamlessness” ಇವೆಲ್ಲಾ ನನಗೆ ಅಂತರ್ಗತ ಮಾಡಿಸಿದವರು ಗುರೂಜಿ. ಗುರುಗಳು ಭಾಷೆ ಕಲಿಯಬೇಕಾದರೆ ಮೊದಲು ಹಿಡಿಯಬೇಕಾಗಿರುವುದು ಅದರ “ಸೊಲ್ಲು” (intonation) ಎನ್ನುತ್ತಿದ್ದರು.  ಭಾಷೆಯ ಜೀವಾಳ ಈ “tone”.

ಇಷ್ಟೇ ಅಲ್ಲದೆ, ನಾನು ಅಮೇರಿಕಾದಲ್ಲಿ ಬರೆದಂತಹ ನನ್ನ doctoral ಪ್ರಬಂಧ ಕೂಡಾ ಅವರಿಂದಲೇ ಪ್ರಭಾವಿತವಾಗಿದ್ದು. ದಕ್ಷಿಣ ಭಾರತದ ಸಂಸ್ಕೃತಿಗಳು- ದ್ರಾವಿಡ ಸಂಸ್ಕೃತಿ ಬಗ್ಗೆ ಗುರೂಜಿಗೆ ಅತ್ಯಂತ ಗೌರವ, ಹೆಮ್ಮೆ ಹಾಗು ಪ್ರೀತಿ. ಇದೇ ಆಸಕ್ತಿ ನನ್ನಲ್ಲೂ ಹುಟ್ಟು ಹಾಕಿದ್ದರು. ಆಗ ನಾನು South Indian Cultural Formations- ದಕ್ಷಿಣ ಭಾರತದ ಸಾಂಸ್ಕೃತಿಕ ರೂಪರೇಷಗಳ ಬಗ್ಗೆ ಬರೆದೆ. ಗುರೂಜಿಯವರನ್ನು  ನೆನೆಯುತ್ತಾ ಹೋದರೆ ಸಾವಿರಾರು ನೆನಪುಗಳು. ಅವರ ಹಲವಾರು ಆಸಕ್ತಿಗಳು, ಜೀವನೋತ್ಸಾಹ – ಅಡಿಗೆ, ನಾಯಿ training, cricket, ಕೋಳಿ ಸಾಕಾಣಿಕೆ – ಒಂದೇ, ಎರಡೇ – ಎಲ್ಲವನ್ನು ತಿಳಿದುಕೊಳ್ಳುವ, relish ಮಾಡುವ ಆಸಕ್ತಿಯನ್ನು ಅವರಿಂದಲೇ ಕಲಿಯಬೇಕು. ಗುರೂಜಿಯಂತಹ  ವ್ಯಕ್ತಿ ಒಂದು ಶತಮಾನದಲ್ಲಿ ಒಬ್ಬರು ಹುಟ್ಟಬಹುದು. ಗುರುಗಳ ಬಳಗ – ಸಾಹಿತ್ಯ, ಸಂಗೀತ, ಬೇರೆ ಬೇರೆ ಸಾಮಾಜಿಕ ಸ್ತರಗಳಿಂದ ಅವರ ಹತ್ತಿರ ಬಂದು ಅವರ ನಂಟಾಗಿದ್ದವರು. ಇವರೆಲ್ಲರ ಮನಸಿನಲ್ಲಿ ಗುರುಗಳು ಯಾವಾಗಲೂ ಇರುತ್ತಾರೆ.

[ಮೂಲ: “ಹೇಳತೀನಿ ಕೇಳಾಮಾಲಿಕೆಯ ನುಡಿನಮನ ಕಾರ್ಯಕ್ರಮ]

‍ಲೇಖಕರು avadhi

July 16, 2024

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

2 Comments

  1. Dr. Shivanand Shettar

    ಕೃಷ್ಣಾ ನಿಮ್ಮ ಗುರುಗಳ ಕುರಿತ ಬರಹ ತುಂಬ ಆಪ್ತವಾಗಿ ಮೂಡಿಬಂದಿದೆ. ನೀವು ರಾಜೀವ್ ಜೀಯ ಆಪ್ತವಲಯದವರೆಂಬುದು ಗೊತ್ತಿತ್ತು. ಆದರೆ ನಿಮ್ಮ ಬದುಕನ್ನು, ಚಿಂತನೆಯನ್ನು ರೂಪಿಸುವಲ್ಲಿ ಅವರು ಎಷ್ಟು ನಿರ್ಣಾಯಕ ಪಾತ್ರ ವಹಿಸಿದ್ದರೆಂಬುದು ಪ್ರಸ್ತುತ ಲೇಖನ ಓದಿದಾಗಲೇ ಗೊತ್ತಾದದ್ದು. ನಿಮ್ಮ ಅಕೆಡೆಮಿಕ್ ಬದುಕಿನ ಕುರಿತ ವಿವರಗಳೂ ನನಗೆ ಅಷ್ಟಾಗಿ ತಿಳಿದಿರಲಿಲ್ಲ. ಇಲ್ಲಿ ಅದೆಲ್ಲವೂ ಸಂಕ್ಷಿಪ್ತವಾಗಿ ಮೂಡಿಬಂದಿದೆ. ನೀವು ಧಾರವಾಡದಲ್ಲಿರುವ ತನಕ ಏನನ್ನೂ ಹಂಚಿಕೊಳ್ಳಲಾಗಲಿಲ್ಲ. All of a sudden you went back to Mysore. We miss you very badly. ಮತ್ತೆ ಯಾವಾಗ, ಎಲ್ಲಿ ಭೇಟಿ ಹಾಗೂ ಮಾತು?

    Reply
    • S R Vijayashankar

      ಕೃಷ್ಣಾ, ನಿಮ್ಮ ಬರಹದ ಮೂಲಕ ರಾಜೀವ್‌ ತಾರಾನಾಥರ ಇನ್ನೊಮ್ಮೆ ಕಣ್ಣ ಮುಂದೆ ಜೀವಂತವಾದರು. ವಂದನೆಗಳು ವಿಜಯಶಂಕರ

      Reply

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This