ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಗೆಳೆಯರೇ ಎಲ್ಲ ಗೆಳತಿಯರೇ ಇಲ್ಲ…

ಕೃಷ್ಣಮೂರ್ತಿ ಬಿಳಿಗೆರೆ

ಹೌದು ಈಗ ನೆನಪಿಸಿಕೊಂಡರೆ ಬೇಸರವಾಗುತ್ತದೆ, ನನ್ನ ಬಾಲ್ಯ ಕಾಲದಲ್ಲಿ ಇದ್ದದ್ದು ಕೇವಲ ಗೆಳೆಯರು ಮಾತ್ರ. ಗೆಳತಿಯರು ಇಲ್ಲವೇ ಇಲ್ಲ. ಎಂಥ ಲಿಂಗಭೇದದ ಕಾಲದಲ್ಲಿದ್ದೆವು ನಾವು ಎಂದು ವ್ಯಥೆಯಾಗುತ್ತದೆ. ವಿಷಾದದ ಭಾವ ಮೂಡುತ್ತದೆ. ಅವರು ನಮ್ಮನ್ನು, ನಾವು ಅವರನ್ನು ಮಾತಾಡಿಸುವ ಗೋಜಿಗೇ ಹೋಗುತ್ತಿರಲಿಲ್ಲ. ಹೆಚ್ಚೆಂದರೆ ಗೇಲಿಗೆ, ರೇಗಿಸುವುದ್ದಕ್ಕೆ, ಜಗಳಕ್ಕೆ ಹೀಗಳೆಯುವುದಕ್ಕೆ ನಮ್ಮ ಸಂಬಂಧ ಸೀಮಿತವಾಗಿತ್ತೆಂದು ತೋರುತ್ತದೆ. ಅದಕ್ಕೆ ಸ್ನೇಹ ಬೆಳೆಯುವ ಅವಕಾಶವೇ ಒದಗಿಬರುತ್ತಿರಲಿಲ್ಲ.

ಕುಳಿತುಕೊಳ್ಳುತ್ತಿದ್ದುದು ಬೇರೆ ಬೇರೆ, ಆಟದ ಗುಂಪು ನೂರಕ್ಕೆ ನೂರು ಬೇರೆಬೇರೆ, ಪ್ರೇಯರ್‌ನಲ್ಲಿ ನಿಲ್ಲುತ್ತಿದ್ದ ಸಾಲು ಬೇರೆ, ಮಾನೀಟರ್‌ ಗಳು ಬೇರೆಯೇ, ಹಾಡಿನ ಗುಂಪು, ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು. ಮೇಷ್ಟ್ರಗಳು ಈ ಭಿನ್ನ ಭೇದಗಳನ್ನು ಮಿಲಿಟರಿ ರೂಲ್ಸಿಗೂ ಮೀರಿ ಜಾರಿಮಾಡುತ್ತಿದ್ದರು. ಒಟ್ಟಿನಲ್ಲಿ ನಾವಾಗ ಪ್ರತ್ಯೇಕ ಪ್ರತ್ಯೇಕ ಗ್ರಹಗಳ ಜೀವಿಗಳಂತೆ ಇದ್ದದ್ದು ನಿಜ. ಎಲ್ಲೋ ಒಮ್ಮೊಮ್ಮೆ ಮಾತ್ರ ಸ್ಪೋಟ್ಸ್‌ ಮೀಟ್‌ ಗಳಿಗೆ ಹೊರ ಊರುಗಳಿಗೆ ಹೋದಾಗ ಮಾತ್ರ ನಾವು ಹುಡುಗಿಯರ ಜೊತೆ ಸ್ವಲ್ಪ ಜಾಲಿಯಾಗಿರುತ್ತಿದ್ದೆವು. ಇರಲಿ ಪಾಲಿಗೆ ಬಂದವರೆ ಪಾಲಾಕ್ಷರು.

ಬಾಲ್ಯ ಕಾಲದ ಸ್ನೇಹ ಹೇಗೆ ಬೆಳೆಯುತ್ತದೆ ಬೆಸೆದುಕೊಳ್ಳುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ ವ್ಯಕ್ತಿಯೊಬ್ಬರು ರೂಪುಗೊಳ್ಳುವುದು ಈ ಬಾಲ್ಯಕಾಲದ ಬಾಂಧವ್ಯದಿಂದಲೇ ಒಡನಾಟದಿಂದಲೇ ಎಂಬುದು ಮಾತ್ರ ನಿಜ. ತರಾವರಿ ಗೆಳೆಯರೊಂದಿಗೆ ಬೆಳೆಯುವ ಸ್ನೇಹವೇ ನಮ್ಮಭಾಷೆಯನ್ನು, ನಡವಳಿಕೆಯನ್ನು, ಬರುಬರುತ್ತಾ ಸಾಮಾಜಿಕ ತಿಳುವಳಿಕೆಯನ್ನು ರೂಪಿಸುತ್ತವೆ. 

ದಿನವಿಡೀ ಸ್ನೇಹಿತರ ಜೊತೆಗೇ ಇರಬೇಕೆಂಬ ಉತ್ಕಟ ಭಾವನೆ ಉಕ್ಕಿ ಹರಿಯುತ್ತಿರುತ್ತದೆ. ಒಡನಾಟದ ಭಾವಗಳು  ಸುಖಕರವಾಗಿಯೇ ಇರುತ್ತವೆಂಬ ಯಾವ ಖಾತ್ರಿ ಇರದಿದ್ದರೂ ಒಡನಾಟವಂತೂ ಅನಿವಾರ್ಯ. ಇದ್ದ ಊರು ಬಿಟ್ಟು ಪರ ಊರಿಗೆ ಹಬ್ಬಕ್ಕೋ ಜಾತ್ರೆಗೋ ಮದುವೆಗೋ ಹೋದಾಗ ಆಗುತ್ತಿದ್ದ ಚಡಪಡಿಕೆ ಏಕಾಕಿತನ ಬೆಸರಗಳಿಗೆ ಬಲಿಯಾಗುತ್ತಿದ್ದುದು ನೆನಪಾಗುತ್ತಿದೆ. 

ಸ್ನೇಹವೆಂದರೆ ಅದೊಂದು ಅನ್ಯೋನ್ಯ ಸಂಬಂಧವೆಂದು ತಿಳಿಯುವುದು ಅರ್ಧ ಮಾತ್ರ ಸರಿ. ಇನ್ನರ್ಧವು ಸ್ಪರ್ಧೆ, ಸಿಟ್ಟು, ಸೆಡವು, ವ್ಯಂಗ್ಯ, ಈರ್ಷೆ, ಅಹಂಕಾರ,ಸಣ್ಣತನಗಳೇ ಮುಂತಾದ ಭಾವ ಸಂಬಂಧಗಳು ಈ ಸ್ನೇಹದೊಳಗೆ ಬಿಲ ಕೊರೆದುಕೊಂಡು ಆಡಿಸುತ್ತಿರುತ್ತವೆ. ಪರಸ್ಪರ ಕಲಿಕೆ, ಮುನ್ನುಗ್ಗುವ ಗುಣ, ಅನುಕರಣೆ, ಹಂಚಿ ತಿನ್ನುವುದು ಮುಂತಾದುವೆಲ್ಲಾ ಇದರೊಳಗೆ ಬೆಸೆದುಕೊಂಡಿರುತ್ತಿದ್ದವು, ಅಂತೂ ಸ್ನೇಹದ ಶಕ್ತಿಯಂತೂ ದೊಡ್ಡದೆ. ಎಲ್ಲೋ ಕೆಲವರು ಮಾತ್ರವೇ ಈ ಸ್ನೇಹವೆಂಬ ಊರುಗೋಲಿಲ್ಲದೆ ನಡೆಯಬಲ್ಲರು. ಇವರ ಸಂಖ್ಯೆ ತುಂಬಾ ಕಡಿಮೆ. ಬಹುತೇಕ ಲೋಕ ಸ್ಣೇಹಪರಿಪಾಕವನ್ನು ಇಷ್ಟಪಡುತ್ತದೆ. ತನ್ನನ್ನು ನೋಡಿಕೊಳ್ಳಲು ತೋಡಿಕೊಳ್ಳಲು ಕಾಪಾಡಿಕೊಂಡು ಸಾಗಲು ಇದು ಅಷ್ಟು ಸ್ಪಷ್ಟವಾಗಿ ವಿವರಿಸಲಾಗದ ಶಕ್ತಿ ಕೊಡುತ್ತಿರುತ್ತದೆ.  

ಆ ಐದನೇ ಕ್ಲಾಸಿನಲ್ಲಿನ ಗೆಳೆಯನೇ ನನಗೆ ನೆನಪಿರುವ ಮೊದಲ ಗೆಳೆಯ. ಅವನು ನಾನು ಎಷ್ಟೇ ಕಷ್ಟವಾದರು ಅಕ್ಕಪಕ್ಕವೇ ಕೂರುತ್ತಿದ್ದೆವು. ಕೂಡುವ ಲೆಕ್ಕದಲ್ಲಿ ಅವನು ಕಳೆಯುವ ಲೆಕ್ಕದಲ್ಲಿ ನಾನು ಚುರುಕಾಗಿದ್ದೆವು. ಪರಸ್ಪರ ಸಹಕಾರದಿಂದ ಬೇಗ ಲೆಕ್ಕ ತೋರಿಸುತ್ತಿದೆವು. ಇಬ್ಬರು ತಂದ ತರಾವರಿ ತಿಂಡಿಯನ್ನು ಮೇಷ್ಟ್ರಿಗೆ ಯಾಮಾರಿಸಿ ಸ್ಕೂಲಿನೊಳಗೇ ತಿನ್ನುತ್ತಿದ್ದೆವು. 

ಈ ಗೆಳೆಯನ ಕಿವಿ ಸೋರುತ್ತಿತ್ತು. ಅದು ಅವನಿಗೆ ಹುಟ್ಟಿನಿಂದಲೇ ಬಂದಿದ್ದ ಸ್ಥಿತಿ. ಅವರ ಮನೆಯಲ್ಲಿ ಅವನ ಕಿವಿಗೆ ಹತ್ತಿ ಇಟ್ಟು ಸ್ಕೂಲಿಗೆ ಕಳಿಸುತ್ತಿದ್ದರು. ಅದ್ಯಾಕೋ ಏನೋ ಆಗ ಹೆಚ್ಚು ಜನರ ಕಿವಿ ಮೂಗು ಸೋರುತ್ತಲೇ ಇರುತ್ತಿತ್ತು, ಗೊಣ್ಣೆ ಸುರುಕರು ನಿಮಗೆ ಎಲ್ಲೆಂದರಲ್ಲಿಸಿಗುತ್ತಿದ್ದರು. ಹಾಗೆ ಕಿವಿ ಸೋರುವ ಬಾಧೆಯಿಂದಲೂ ನರಳುತ್ತಿದ್ದರು. ಈ ನರಳಾಟ ಕೇವಲ ಅವರಿಗಷ್ಟೆ ಇರಲಿಲ್ಲ. ಅವರ ಸುತ್ತಮುತ್ತಲವರಿಗೂ ಹಬ್ಬುತ್ತಿತ್ತು. ಇದರ ಜೊತೆಗೆ ಪ್ರತಿ ಹುಡುಗರ ಮಂಡಿ ಮೊಣಕೈಗಳಲ್ಲಿ ಒಂದಲ್ಲ ಒಂದು ಬಗೆಯ, ಒಂದಲ್ಲ ಒಂದು ಸ್ಟೇಜಿನಲ್ಲಿರುತ್ತಿದ್ದ ತರಾವರಿ ಗಾಯಗಳು ಮನೆ ಮಾಡಿಕೊಂಡಿರುತ್ತಿದ್ದವು. ಈ ಕಾರಣಗಳಿಂದ ಮಾಮೇರಿ ನೊಣಗಳು ಇಲ್ಲಿಗೆ ಜಮಾಯಿಸಿ ತಮ್ಮ ಶಕ್ತ್ಯಾನುಸಾರ ತೊಂದರೆ ಕೊಡುತ್ತಿದ್ದವು. ಅವು ಇಡೀ ವಾತಾವರಣವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದುದರಿಂದ, ನಾವೂ ಸಹ ಅವುಗಳ ವಿರುದ್ಧ ಸಮರ ಸಾರುತ್ತಿದ್ದೆವು. ನೊಣ ಹೊಡೆಯುವ ಕೆಲಸ ಭರದಿಂದ ನಡೆಯುತ್ತಿತ್ತು. ತಾ ಮುಂದು ನಾ ಮುಂದು ಎಂದು ನೊಣ ಹೊಡೆದು ಗುಡ್ಡೆ ಹಾಕಿ ಎಣಿಸುತ್ತಿದ್ದೆವು. ಮೇಷ್ಟ್ರು ಇದಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದು ನೊಣ ಹೊಡೆಯಲು ಸಮಯ ಕೊಡುತ್ತಿದ್ದರು, ಅವರೂ ಈ ನೊಣಗಳ ಕಾಟದಿಂದ ಜರ್ಜರಿತವಾಗಿದ್ದುದು ಈ ಉದಾರತೆಗೆ ಕಾರಣವಾಗಿತ್ತು. 

ಈ  ಮೃದು ಸ್ವಭಾವದ ಗೆಳೆಯನನ್ನು ಇತರ ಕೆಲವು ಗೆಳೆಯರು ಸದಾ ರೋಸುತ್ತಿದ್ದರು. ಅವನ ಕಿವಿಯಿಂದ ಬರುತ್ತಿದ್ದ ಶಕ್ತಿಯುತವಾದ ಘಾಟು ವಾಸನೆಯನ್ನು ನೆಪ ಮಾಡಿಕೊಂಡು ಆಡಿಕೊಳ್ಳುತ್ತಿದ್ದರು. ಮಿಕ್ಕಂತೆ ಸಹಪಾಟಿಗಳು ನನ್ನಂತೆಯೇ ಆ ದಟ್ಟ ವಾಸನೆಯೊಂದಿಗೆ ಸಹಬಾಳ್ಮೆ ಮಾಡುವುದನ್ನು ರೂಢಿಮಾಡಿಕೊಂಡಿದ್ದರು. ಇವನನ್ನು ‘ಮಲ್ಲಿಗೆ ಹೂವ’ ಎಂದು ಅಡ್ಡ ಹೆಸರಿಟ್ಟು ಹೆಣ್ಣು ಮಕ್ಕಳೂ ಆಡಿಕೊಳ್ಳುತ್ತಿದ್ದರು. 

ಇಂಥ ಗೆಳೆಯ ಒಮ್ಮಿಂದೊಮ್ಮೆಗೇ ಸ್ಕೂಲು ಬಿಟ್ಟು ತನ್ನ ಕುಲ ಕಸುಬಾದ ಕುಂಬಾರಿಕೆಗೆ ಹಿಂದಿರುಗಿ ಅದರಲ್ಲಿ ಪರಿಣತಿ ಪಡೆದ. ಇವನು ಸ್ಕೂಲು ಬಿಟ್ಟ ಮೇಲೆ ಕಿವಿ ಸೋರುವುದು ನಿಂತಿತು. ಮಡಕೆ, ಕುಡಿಕೆ, ಬಾನಿ, ವಾಡೆ, ಮೂಡೆ ಇತ್ಯಾದಿ ಮಣ್ಣಿನ ಪಾತ್ರೆಗಳ ಕಾಲ ಕಣ್ಮರೆಯಾಗುತ್ತಿದ್ದುದನ್ನು ಕಂಡುಕೊಂಡ ಗೆಳೆಯ, ಕುಂಡಗಳು, ಊಜಿಗಳು, ಅಲಂಕಾರಿಕ ವಸ್ತುಗಳು ಇತ್ಯಾದಿಗಳನ್ನು ಮಾಡಿ ಪರ್ಯಾಯ ಮಾರ್ಗ ಕಂಡುಕೊಂಡು ಬದುಕು ಕಟ್ಟಿಕೊಂಡು ಒಳ್ಳೆ ಕಲಾವಿದನಾಗಿ ಬೆಳೆದ, ಇವನು ಮಾಡುತ್ತಿದ್ದ ಗಣೇಶ ಗೌರಮ್ಮರು ನಮ್ಮ ಸುತ್ತಿನಲ್ಲಷ್ಟೇ ಅಲ್ಲ ತುಮಕೂರು ಬೆಂಗಳೂರುಗಳಲ್ಲಿಯೂ ಜನಪ್ರಿಯರಾದರು. 

ವೇದಮೂರ್ತಿ ಲೋಕೋಪಯೋಗಿ ಇಲಾಖೆಯ ಸಬ್‌ ಓವರ್‌ ಸೀಯರ್‌ರವರ ಮಗ. ನಮ್ಮೂರಲ್ಲಿ ಇವರನ್ನು ಸಬೋರ್ಸೆ ರು  ಎಂದು ಎಲ್ಲರು ಕರೆಯುತ್ತಿದ್ದರು. ಆಗ ಇಂಥ ಸರ್ಕಾರಿ ಹುದ್ದೆಯಲ್ಲಿದ್ದ ಇಂಜಿನಿಯರ್‌, ಡಾಕ್ಟರ್‌, ಲೆಕ್ಚರರ್‌, ಹೈಸ್ಕೂಲ್‌ ಅಧ್ಯಾಪಕರು, ಸ್ಕೂಲ್‌ ಟೀಚರ್‌ ಮತ್ತಿತರರೆಲ್ಲ ಕೆಲಸದ ಸ್ಥಳಗಳಲ್ಲೇ ವಾಸವಿದ್ದು ನ್ಯಾಯವಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಮಕ್ಕಳನ್ನು ಇಲ್ಲಿಯೇ ಓದಿಸುತ್ತಿದ್ದರು. ಹೀಗಾಗಿ ಈ ವೇದಮೂರ್ತಿ ನನಗೆ ಸ್ಕೂಲಿನಲ್ಲಿ ಗೆಳೆಯನಾಗಿ ಲಭಿಸಿದ. ಸರ್ಕಾರಿ ಶಾಲೆಯ ಮಣೆಗಳ ಮೇಲೆ ಕೂತಾಗ ಯಾರು ಯಾರ ಮಕ್ಕಳಾದರೇನು ಎಲ್ಲಾ ಒಂದೇ. ಒಂದೇ ಪಾಠ ಒಂದೇ ಆಟ. 

ಇವನ ಜೊತೆಗಿನ ನನ್ನ ಒಡನಾಟ ತುಂಬಾ ಗಂಭೀರವೂ ಸೂಕ್ಷ್ಮವೂ ಆಗಿತ್ತು. ಶಾಲೆಯೊಳಗೆ ಸ್ಪರ್ಧಾತ್ಮಕ ಸ್ಥಿತಿಯಲ್ಲೇ ನಮ್ಮ ಗೆಳೆತನ ವಿಕಸನ ಹೊಂದುತ್ತಿತ್ತು. ಯಾವಾಗಲೂ ಅವನು ಮುಂದಿರುತ್ತಿದ್ದ. ನಾನು ಮಾನಿಟರ್‌ ಆದರೂ ಅವನು ಹೇಳಿದಂತೆ ಕೇಳುತ್ತಿದ್ದೆ. ಅವನ ಮಾತು ಮೀರಿ ನಡೆಯುವ ಶಕ್ತಿ ನನಗೆ ಹೈಸ್ಕೂಲ್‌ ತಲುಪುವವರೆಗೂ ಬರಲಿಲ್ಲ, ಅವರ ಅಪ್ಪ ಸಬ್ಬೋರ್ಸೆರಾಗಿದ್ದರು ತಾನೆ. ಆದರೆ ತೋಟದ ಸಾಲು, ಬೇಲಿ ಸಾಲು, ಕೆರೆ ಗುಡ್ಡ ಕಾಡು ಮೇಡುಗಳಲ್ಲಿ ನನ್ನ ಕೈ ಮೇಲಾಗುತ್ತಿತ್ತು. ಇಲ್ಲೆಲ್ಲಾ  ನಾವು ಜೊತೆಯಲ್ಲಿ ಅಲೆಯುತ್ತಿದ್ದೆವು. ಆಗ ನನ್ನ ಮಾತು ಕೃತ್ಯಗಳು ಮುಂಚೂಣಿಯಲ್ಲಿರುತ್ತಿದ್ದವು. ಆಗ ಅವನೂ ನನ್ನ ಮಾತಿಗೆ ಬೆಲೆ ಕೊಡುತ್ತಿದ್ದ. ಮರ ಹತ್ತುವುದು, ಈಜಾಡುವುದು, ಜೇನು ಬಿಚ್ಚುವುದು, ಗುರಿ ಇಟ್ಟು ಮಾವಿನ ಕಾಯಿಗೆ ಕಲ್ಲು ಹೊಡೆಯುವುದು ಇತ್ಯಾದಿ ಹತ್ತಾರು ವಿದ್ಯೆಗಳಲ್ಲಿ ಅವನು ನನ್ನನ್ನು ಮೀರಿಸುವುದು ಸಾಧ್ಯವಿರಲಿಲ್ಲ. ಹಾಗೆಂದು ಇವನಿಗೆ ಸದರಿ ವಿದ್ಯೆಗಳು ಬರುತ್ತಿರಲಿಲ್ಲ ಎಂದೇನಲ್ಲ. ಇರಲಿ ನಾನು ಕೃಷಿಕ ತಂದೆ ತಾಯಿಯರ ಮಗನಲ್ಲವೆ. ಹೀಗಾಗಿ ಸ್ನೇಹದ ಲೆವೆಲ್‌ ಹೊಂದಿಕೆಯಾಗುತ್ತಿತ್ತು.

ನಮ್ಮ ಮನೆಗೆ ಬಂದಾಗ ಅವನಿಗೆ ವಿಶೇಷ ಗೌರವ ದಕ್ಕುತ್ತಿತ್ತು. ರಾಗಿ ರೊಟ್ಟಿಯೇ ಆದರೂ ಬೆಣ್ಣೆ ಅಥವ ತುಪ್ಪವಿಲ್ಲದೆ ಕೊಡುತ್ತಿರಲಿಲ್ಲ ಅವನೂ ಜಂಬ ಮಾಡದೇ ತಿನ್ನುತ್ತಿದ್ದ. ಅವರ ಮನೆಯಲ್ಲಿ ನನಗೆ ಅವಲಕ್ಕಿ ವಗ್ಗರಣೆ ಕೊಡುತ್ತಿದ್ದರು, ಅವರ ಸರ್ಕಾರಿ ಕ್ವಾರ್ಟರ್ಸ್‌ ನಲ್ಲಿ ದಕ್ಕುತ್ತಿದ್ದ ಅವಲಕ್ಕಿ ಎಷ್ಟು ಜನಕ್ಕೆ ಸಿಗಲು ಸಾಧ್ಯ. ಇವರ ಈ ಕ್ವಾರ್ಟರ್ಸ್‌ ಮುಂದೆ ವಿಶಾಲವಾದ ಜಾಗವಿತ್ತು. ಇಂತದೇ ಹತ್ತಾರು ಕ್ವಾರ್ಟರ್ಸ್‌ ಗಳಲ್ಲಿ ಸರ್ಕಾರಿ ನೌಕರರು ವಾಸವಾಗಿದ್ದರು. ಅವರ ಮನೆಗಳ ಮುಂದೆಲ್ಲ ಡೇರಾ, ಗೆಡ್ಡೆಡೇರಾ, ದಾಸವಾಳ, ಸುಗಂಧರಾಜ, ಕಣಿಗಿಲೆ, ಕತರು ಚೆಂಡುಹೂವ, ದುಂಡು ಚೆಂಡುಹೂವ, ಚಿಂತಾಮಣಿ ಚೆಂಡುಹೂವ, ಬಟನ್ಸ್‌, ಕರ್ಣಕುಂಡಲ, ಸ್ಪಟಿಕ, ಗುಲಾಬಿ ಮುಂತಾದ ಹೂವಿನ ಗಿಡಗಳು ಹೂವಿನ ಜಾತ್ರೆ ನಡೆಸುತ್ತಿದ್ದವು. ಪಪ್ಪಾಯ, ಬಾಳೆ, ಸೀಬೆ, ಕರಿಬೇವು, ನಿಂಬೆ, ಯಳ್ಳಿ ಮುಂತಾದ ತರಾವರಿ ಸಸ್ಯಸಂಕುಲ ಅಲ್ಲಿ ನೆರೆದಿರುತ್ತಿದ್ದವು. ಶಾಲೆ, ಕಛೇರಿ, ಆಸ್ಪತ್ರೆಗಳ ಮುಂದೆಲ್ಲ ಹೂವಿನ ಗಿಡಗಳು ಶಿಸ್ತುಬದ್ಧ ಪಾತಿಗಳಲ್ಲಿ ಲಾಲ್‌ ಬಾಗಿನ ತುಣುಕುಗಳಂತೆ ನರ್ತಿಸುತ್ತಿದ್ದವು.

ನಮ್ಮೂರಿನ ಬಹುತೇಕರ ಮನೆಯ ಮುಂದೆಯೂ ಈ ಬಗೆಯ ಹೂವಿನ ಗಿಡಗಳ ಸಿಂಗಾರ ನೋಡಬಹುದಿತ್ತು. ಆಗ ಹೂವಿನ ಮತ್ತು ಹೂವಿನ ಸಸಿಗಳ ಕಳ್ಳತನ ರೋಮಾಂಚನ ಉಂಟುಮಾಡುತ್ತಿತ್ತು. ಈಗ ಎಲ್ಲೆಲ್ಲೂ  ಹೂವಿನ ಗಿಡಗಳ ಪ್ರೀತಿ ಕಡಿಮೆಯಾಗಿರುವುದು ಮುಖಕ್ಕೆಹೊಡೆದಂತೆ ತೋರಿಬರುತ್ತಿದೆ. ಇದಕ್ಕೆ ದುಡ್ಡಿನ ಗಿಡದ ಹುಡುಕಾಟ ಕಾರಣವೆಂದು ತೋರುತ್ತಿದೆ. ವೇದಮೂರ್ತಿ ಎಂಬ ಗೆಳೆಯ ಈ ಬಗೆಯ ಸಸಿಗಳನ್ನು ನಮಗೆ ಕೊಡುತ್ತಿದ್ದ.     

 ವೇದಮೂರ್ತಿ ಮತ್ತು ನಾನು ಒಟ್ಟಿಗೆ ನಮ್ಮ ಮೇಷ್ಟ್ರುಗಂಗಾಧರಚಾರ್ರ ಮನೆಗೆ ಸಂಜೆ ಏಳು ಗಂಟೆಗೆ ಪಾಠಕ್ಕೆ ಹೊಗುತ್ತಿದ್ದೆವು.  ಅದಕ್ಕು ಮುಂಚೆ ಮಬ್ಬುಗತ್ತಲ್ಲಲ್ಲಿ ಅವನ ಕ್ವಾರ್ಟರ್ಸ್‌ ಮನೆಯ ಮುಂಭಾಗದ ಹುಲ್ಲು ಹಾಸಿನ ಮೇಲೆ ಕುಸ್ತಿ ಏರ್ಪಡುತ್ತಿತ್ತು. ಕೊನೆಯಿಲ್ಲ ಮೊದಲಿಲ್ಲ ಎಂಬಂತೆ ನಡೆಯುತ್ತಿದ್ದ ಆ ಕುಸ್ತಿಯಲ್ಲಿ ಒಣಕಲು ದೇಹದ ನಾನು, ತುಂಬಿಕೊಂಡಿದ್ದ ಗೆಳೆಯ ಕುಸ್ತಿಪಟುಗಳಾಗಿ ಅಸಮಾನ ಸ್ಪರ್ಧಿಗಿಳಿಯುತ್ತಿದ್ದೆವು. ಆದರೆ ನನ್ನೊಳಗಿನ ಹಳ್ಳಿ ಕೆಚ್ಚು ಆ ಸಂದರ್ಭದಲ್ಲಿ ಹತ್ತಿ ಉರಿಯುತ್ತಿತ್ತು.ನಾನೂ ಬಿಟ್ಟುಕೊಡದೆ ಫೈಟ್‌ ಮಾಡುತ್ತಿದ್ದೆ. ಮುಖಮೂತಿಗಳಲ್ಲಿ ಬೆವರು ಕಿತ್ತುಕೊಂಡು ಅಳುವಲ್ಲದ ಅಳುವಿನಂತ ಭಾವ ಬೆವರಿನ ಜೊತೆ ಲೀನವಾಗುತ್ತಿತ್ತು. ಅವನು ತನ್ನ ಕಾಲುಗಳಿಂದ ಸಡನ್ನಾಗಿ  ಕುತ್ತಿಗೆಗೆ ಹಾಕುತ್ತಿದ್ದ ಪಟ್ಟು ನನ್ನನ್ನು ವಿಚಲಿತಗೊಳಿಸುತ್ತಿತ್ತು. ಬಿಡಿಸಿಕೊಳ್ಳಲಾಗದೆ ಮುಲುಕುತ್ತಿದ್ದೆ. ಕಣ್ಣು ಕಾಣದಂತಾಗುತ್ತಿತ್ತು. 

ಈ ನಮ್ಮ ಕುಸ್ತಿ ನೋಡಲು ಪಕ್ಕವೇ ಇದ್ದ ಪೆಟ್ಟಿಗೆ ಅಂಗಡಿ ಸಾಲಿನಲ್ಲಿರುತ್ತಿದ್ದ ಕ್ರೀಡಾಸಕ್ತರು ಬಂದು ಸೇರುತ್ತಿದ್ದರು. ಅವರ ಪುಸಲಾವಣೆ ಬೇರೆ ಪರಿಸ್ಥಿತಿಯನ್ನು ಗಂಭೀರಗೊಳಿಸುತ್ತಿತ್ತು. ಯಾಕೋ ಏನೋ ಅವರು ಹೆಚ್ಚುವರಿಯಾಗಿ ಆ ಗೆಳೆಯನಿಗೇ ಸಪೋರ್ಟ್‌ ಕೊಡುತ್ತಿದ್ದರು. ನನ್ನನ್ನು ಇನ್ನು ಇನ್ನು ಅಮುಕುವಂತೆ ಅವರು ಕೂಗುತ್ತಿದ್ದರು, ಈ ಅನ್ಯಾಯವನ್ನು ಸಹಿಸಲಾಗದೆ ಸಂಸ್ಕೃತ ಬೈಗುಳಗಳನ್ನು ಆ ಕಷ್ಟ ಸಂದರ್ಭದಲ್ಲಿಯೂ ಅವರ ಮುಖಕ್ಕೆ ಎಸೆಯುತ್ತಿದ್ದೆ. ಸರಳವಾಗಿ ಆರಂಭವಾಗುತ್ತಿದ್ದ ಕುಸ್ತಿ ತೀರಾ ಕಠಿಣವಾಗಿ ಕೊನೆಯಾಗುತ್ತಿತ್ತು, ಸಾಮಾನ್ಯವಾಗಿ ನಾನು ಫೈಟ್‌ ಕೊಟ್ಟು ಸೋಲುತ್ತಿದ್ದೆ. ಆಗ ಎಷ್ಟೋ ಹೊತ್ತು ನಾವಿಬ್ಬರು ಮಾತು ಬಿಡುತ್ತಿದ್ದೆವು, ಗಂಗಾಧರಚಾರ್‌ ಮೇಷ್ಟ್ರು ಒಂಬತ್ತು ಗಂಟೆಗೆ ಪಾಠ ಬಿಟ್ಟಾಗ ನಮ್ಮ ಸ್ನೇಹಗಂಗೆಯ ಮಟ್ಟ ಯಥಾಸ್ಥಿತಿಗೆ ಮರಳುತ್ತಿತ್ತು. 

ವೇದಮೂರ್ತಿಯ ಮನೆ ಮಾತು ತೆಲುಗು. ಒಂದು ದಿನ ಜಾರುಗುಪ್ಪೆಯ ಮೇಲೆ ಆಟವಾಡುತ್ತಿದ್ದಾಗ, ತೆಲುಗಿನ ಮೂರು ನಾಲ್ಕು ಸ್ಟ್ರಾಂಗ್‌ ಬೈಗುಳಗಳನ್ನು ಕಲಿಸಿಕೊಡುವಂತೆ ಅವನನ್ನು ಕೇಳಿಕೊಂಡೆ. ಎರಡೇ ದಿನದಲ್ಲಿ ನನ್ನ ಸಂಸ್ಕ್ರತ ಬೈಗುಳಗಳ ಬತ್ತಳಿಕೆಯಲ್ಲಿ ಮೂರು ತೆಲುಗು ಬೈಗುಳಗಳಸ್ತ್ರಗಳು ಸೇರಿ ನನ್ನ ಬೈಗುಳ ಶ್ರೀಮಂತಿಕೆ ಹೆಚ್ಚಿತು. ಅವು ಎಲ್ಲೆಂದರಲ್ಲಿ ಝಳಪಿಸಲ್ಪಟ್ಟು ನನ್ನ ಕುಖ್ಯಾತಿ ಮತ್ತೆಚ್ಚಿತು. 

ಗವ್ಗತ್ತಲೆಗೂ ಸೆಡ್ಡು ಹೊಡೆದು ರಾತ್ರಿಯನ್ನು ಗೆಲ್ಲುವುದನ್ನೂ, ಸ್ಕೂಲಿಗೆ ಚಕ್ಕರ್‌ ಹೊಡೆದು ಹೊಂಗೆ ಮತ್ತು ಹಲಸಿನ ಮರದ ಸಾಲಲ್ಲಿ ಸ್ವತಂತ್ರಾನಂದ ಪಡೆಯುವುದನ್ನು ಪ್ರಯೋಗಾತ್ಮಕವಾಗಿ ಕಲಿಸಿದ ಗುರು ಸ್ವರೂಪಿ ಗೆಳೆಯ ಲಿಂಗಮೂರ್ತಿ. ಗೋಲಿ ಆಟಕ್ಕೆ ಇಳಿದರೆ ಗೋಲಿಗಳನ್ನು ಚೂರಾಗುವಂತೆ ಹೊಡೆಯುವುದು, ಬಗುರಿ ಆಡಲು ಬಂದರೆ ಬಗುರಿಗಳನ್ನು ಓಳಾಗುವಂತೆ ಹೊಡೆಯುವುದು ಇವನ ವೈಖರಿ. ರಾಮಾಯಣದಲ್ಲಿ ದಶರಥನ ಪಾತ್ರ ಮಾಡುತ್ತಿದ್ದ ಧರ್ಮಯ್ಯ ಎಂಬುವವರ ಮಗನಾದ ಈ ಲಿಂಗಮೂರ್ತಿ ಆಗಾಗ್ಗೆ ಸ್ಕೂಲಿಗೆ ಬರುತ್ತಿದ್ದ. ಓದುವುದು ಬರೆಯುವುದೆಲ್ಲಾ ವೇಸ್ಟ್‌ ಎಂಬ ಅವನ ನಿರ್ಧಾರವನ್ನು ಅವರಪ್ಪ ಒಪ್ಪದ ಕಾರಣ ಪ್ರತಿದಿನವೂ ತಿರುಗಿಕೊಂಡು ಬೇರೆಲ್ಲೂ ಹೋಗಲು ಆಗದಿದ್ದಾಗ ಸ್ಕೂಲಿಗೆ ಬರುವುದು ಅವನಿಗೆ ಅನಿವಾರ್ಯವಾಗುತ್ತಿತ್ತು. ಈ ಬಗೆಯಾಗಿ ಅವನು ಸ್ಕೂಲಿಗೆ ಬಂದಾಗ ಅವನ ಸುತ್ತ ನಾವು ನೆರೆಯುತ್ತಿದ್ದೆವು. ಅವನ ಹೊಸ  ಸಾಹಸಾನುಭವಗಳ ಕತೆ ಕೇಳುವುದು ಅದರ ಉದ್ದೇಶವಾಗಿರುತ್ತಿತ್ತು. ಅವನ ಸಂಗ ಮಾಡಬೇಡಿರೆಂಬ ಮೇಷ್ಟ್ರುಗಳ ಮಾತುಗಳನ್ನು ನಾವು ಗಾಳಿಗೆ ತೂರುತ್ತಿದ್ದೆವು.

ಲಿಂಗಮೂರ್ತಿ ಸ್ಕೂಲಿಗೆ ಬಂದ ದಿನ ವಿಶೇಷ ಕಳೆ ಚೆಲ್ಲಾಡುತ್ತಿತ್ತು. ಕಬಡ್ಡಿಯೊಂದೆ ನಾವು ಆಡುತ್ತಿದ್ದ ಮುಖ್ಯ ಆಟವಾಗಿತ್ತು. ಕಬಡ್ಡಿಯಲ್ಲಿ ಲಿಂಗಮೂರ್ತಿಯನ್ನು ಹಿಡಿಯುವ ಭೂಪರು ಯಾರೂ ಇರಲಿಲ್ಲ. ಕಾರ್ನರ್‌ ಆಡುತ್ತಿದ್ದ ನಾನು ಕಂಡುಕೊಂಡಿದ್ದ ‘ಕೈ ಕಾಲು ಒಟ್ಟಿಗೆ ಹಿಡಿಯುವʼ ತಂತ್ರ ಬಳಸಿ  ಜಗೇಬಿದ್ದು ಒಮ್ಮೊಮ್ಮೆ ಅವನನ್ನು ಹಿಡಿಯುತ್ತಿದ್ದೆ. ಆಗ ಬೇಷ್‌ ಎಂದು ನನ್ನ ಬೆನ್ನು ತಟ್ಟುತ್ತಿದ್ದ.ನನಗೂ ಆ ತಂತ್ರ ಹೇಳಿಕೊಡು ಎನ್ನುತ್ತಿದ್ದ. ರೈಡ್‌ ಬಂದ ರೈಡರ್‌ನ ಗಮನವನ್ನು ಅವನ ಕೈಕಡೆಗೆ ಸೆಳೆದು ಕ್ಷಣ ಮಾತ್ರದಲ್ಲಿ ರೈಡರ್‌ನ ಒಂದು ಕಾಲಿಗೆ ನಮ್ಮೆರಡೂ ಕೈಗಳಿಂದ ಲಾಕ್‌ ಮಾಡಿ ಮೇಲೆತ್ತುವ ಈ ತಂತ್ರವನ್ನು ಹೇಳಿಕೊಡುವುದು ದುಸ್ಸಾದ್ಯ. ನಾನು ಹೇಳಿಕೊಡಲಾಗಲಿಲ್ಲ ಅವನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಅವನಿಗೆ ನನ್ನ ತಂತ್ರದ ಅಗತ್ಯವೇ ಇರಲಿಲ್ಲ. ಅವನ ನೇರ ಕಾರ್ಯಾಚರಣೆಯಿಂದಲೇ ಗೆಲ್ಲಬಲ್ಲವರಿಗೆ ತಂತ್ರ ಕುತಂತ್ರದ ಅಗತ್ಯವಾದರೂ ಏನು. ನಾನು ಇವನ ಜೊತೆಗಿದ್ದರೆ ನನ್ನ ವಿರೋಧಿ ಬಣದ ಯಾರೂ ಉಸಿರು ಕಿಸಿಯುತ್ತಿರಲಿಲ್ಲ.   

ಆಗಾಗ್ಗೆ ಸ್ಕೂಲಿಗೆ ಬರುತ್ತಿದ್ದ ಲಿಂಗಮೂರ್ತಿ ಮೇಲೆ ಸುಮಾರು ಎಲ್ಲಾ  ಟೀಚರ್‌ಗಳಿಗೂ ಎಲ್ಲಿಲ್ಲದ ಸಿಟ್ಟು. ಇವನ ಸ್ವತಂತ್ರ ವ್ಯಕ್ತಿತ್ವ ಯಾರಿಗೂ ಹಿಡಿಸುತ್ತಿರಲಿಲ್ಲ. ಯಾವ ಮೇಷ್ಟ್ರಿಗೆ ಒದೆ ಕೊಡುವ ಹುಮ್ಮಸ್ಸು ಬಂದರೂ ಲಿಂಗಮೂರ್ತಿಯನ್ನು ಎಬ್ಬಿಸಿ ಏನಾದರೂ ಪ್ರಶ್ನೆ ಕೇಳುತ್ತಿದ್ದರು. ಅವನು ಇವರು ಪ್ರಶ್ನೆ ಕೇಳಲಾರಂಭಿಸಿದ ತಕ್ಷಣ ಒದೆ ತಿನ್ನಲು ಸಿದ್ದನಾಗಿ ಕೈಒಡ್ಡುತ್ತಿದ್ದ. ಅವರಿಗೆ ಎಷ್ಟು ಬೇಕೋ ಅಷ್ಟು ಏಟು ಕೊಟ್ಟು ಸೋತು ಸುಮ್ಮನಾಗಬೇಕಾಗಿತ್ತು. ಅವನು ಮಾತ್ರ ಕಲ್ಲಿನಂತೆ ನಿಂತಿರುತ್ತಿದ್ದ. ಅಳುವ, ಗೋಗರೆಯುವ ಸೀನು ಇಲ್ಲವೇ ಇಲ್ಲ. ಸ್ಕೂಲು ಬಿಟ್ಟ ಮೇಲೆ ಆ ಟೀಚರ್‌ರನ್ನು ಗುರಾಯಿಸಿ ಹೊರನಡೆಯುತ್ತಿದ್ದುದು ಇನ್ನಷ್ಟು ಒದೆಗೆ ಕಾರಣವಾಗುತ್ತಿತ್ತು. ಇದು ನಮ್ಮ ನಾಯಕನ ಗುಣಧರ್ಮವಾಗಿತ್ತು. ಆಗ ಟೀಚರ್ ಗಳು ಮಕ್ಕಳನ್ನು ಹೊಡೆಯುವುದು ಮಾಮೂಲಾಗಿತ್ತು. ಕೆಲವರಂತೂ ಮಕ್ಕಳನ್ನು ಹಿಗ್ಗಾಮುಗ್ಗಾ ಚಚ್ಚುತ್ತಿದ್ದರು. ವಿಧವಿಧವಾಗಿ ಒದೆ ಕೊಡುವುದು ಮೇಷ್ಟ್ರುಗಳಿಗೆ ಭೂಷಣವಾಗಿದ್ದ ಕಾಲವದು. ಎಷ್ಟೋ ಮಕ್ಕಳು ಇವರ ಆರ್ಭಟಕ್ಕೆ ಹೆದರಿ ಬೇಲಿ ಸಾಲು, ಕೆರೆ ಸಾಲು, ದೇವಸ್ಥಾನ, ತೋಪು ಮುಂತಾದ ಕಡೆ ಅಲೆದು ಸಂಜೆ ಸ್ಕೂಲು ಬಿಡುವ ಹೊತ್ತಿಗೆ ಸರಿಯಾಗಿ ಸ್ಕೂಲಿಗೆ ಹೋದವರಷ್ಟೇ ಪ್ರಾಮಾಣಿಕವಾಗಿ  ಮನೆ ಸೇರುತ್ತಿದ್ದರು. ಕೊನೆಗೆ ಸ್ಕೂಲು ತೊರೆಯುತ್ತಿದ್ದರು. ಹೀಗೆ ಈ ದೊಣ್ಣೆ ಸಿದ್ದರಾಮಣ್ಣರಿಗೆ ಹೆದರಿ ಸ್ಕೂಲು ಬಿಟ್ಟವರು ಅದೆಷ್ಟು ಮಕ್ಕಳೋ…

ಊರಲ್ಲಿನ ಜಾತ್ರೆ, ಹಬ್ಬ, ಗಾಳಿ ಹಿಡಿಯುವುದು ಮುಂತಾದ ಅನೇಕ ಸಂದರ್ಭದಲ್ಲಿ ದೇವರು ಹೊರಟ ರಾತ್ರಿಗಳಲ್ಲಿ ನಾನು ಮತ್ತು ಲಿಂಗಮೂರ್ತಿ ಗುಂಟೋರಿಯೋ ಆಟ ಸಂಘಟಿಸುತ್ತಿದ್ದೆವು. ಇದು ಕತ್ತಲಲ್ಲಿ ಅಡಗಿ ಆಡುವ ಆಟವಾಗಿತ್ತು. ಇದು ಆಟವಷ್ಟೆ ಆಗಿರಲಿಲ್ಲ ಭೀಕರ ಹುಡುಕಾಟವಾಗಿತ್ತು. ಈ ಕಾಡಿನ ಕಾಲದ ಆಟವನ್ನು ನಾವು ಕತ್ತಲೆಯನ್ನೆ ಕಾಡೆಂದು ಭಾವಿಸಿ ಆಡುತ್ತಿದ್ದೆವು. ದನದ ಕೊಟ್ಟಿಗೆ, ಸಂದು, ಗೊಂದು, ಮೆಳೆ, ಹಾಳು ಮನೆ, ಹೊಂಗೆ ಮರದ ಸಾಲು ಇತ್ಯಾದಿಗಳಲ್ಲಿ ಹೊಕ್ಕಾಟ ಆಡುತ್ತಿದ್ದೆವು. ಎಷ್ಟೋ ಸಲ ನಾವು ಬಚ್ಚಿಟ್ಟುಕೊಂಡ ಜಾಗದಲ್ಲೆ ನಿದ್ದೆಗೆ ಜಾರಿದ ಉದಾಹರಣೆಗಳಿವೆ. ಅಕಿರ ಕೊರೊಸೋವೊ ಇದೆ ತರದ ಆಟದ ಹೆಸರಲ್ಲಿ ಸಿನೆಮಾ ಮಾಡಿದ್ದಾರೆ. ಅದರ ಹೆಸರು ‘ಮದದಾಯ’.

ಎಮ್‌ ಎಫ್‌ ಎಂಬ ಟೀಚರ್‌ ಏಳನೇ ಕ್ಲಾಸಿನಲ್ಲಿದ್ದ ಲಿಂಗಮೂರ್ತಿಗೆ ಒದೆ ಕೊಟ್ಟಾಗ ಅವನು ಪ್ರತಿಭಟಿಸಿ ಬಿದಿರುಕೋಲನ್ನು ಎರಡು ತುಂಡು ಮಾಡಿ ಕಿಟಕಿಯಾಚೆ ಎಸೆದ ಆ ದಿನ ಅವನ ಓದು ಕೊನೆಯಾಯಿತು. ಅವನು ತಮ್ಮಪ್ಪನ ವೃತ್ತಿ ಗಾರೆ ಕೆಲಸಕ್ಕಿಳಿದು ಈಗ ಮೇಸ್ತ್ರಿ ಹಾಗೂ ಬಿಲ್ಡಿಂಗ್‌ ಕಂಟ್ರಾಕ್ಟರ್‌ ಆಗಿ ದಿಮ್ಮಲೆರಂಗ ಎಂದುಕೊಂಡು ಬದುಕುತ್ತಿದ್ದಾನೆ.

‘ಮರದಲ್ಲಿ ಹಣ್ಣಾಗುವವರೆಗೆ ಬಿಟ್ಟರೆ, ಆ ಹಣ್ಣುಗಳು ಹಕ್ಕಿ ಪಕ್ಷಿಗಳ ಪಾಲು ಅಥವಾ ಮೊದಲು ನೋಡಿದ ಮನುಷ್ಯ ಮಕ್ಕಳ ಪಾಲು, ಯಾರು ಬೇಕಾದರೂ ಕಿತ್ತು ತಿನ್ನಬಹುದು, ಮಾರಬಾರದು ಅಷ್ಟೆ. ಹಲಸು, ಮಾವು, ಸೀಬೆ, ಪಪ್ಪಾಯ, ಬಾಳೆ ಮತ್ತಿನ್ಯಾವ ಮರ ಗಿಡಗಳಾದರೂ ಸೈ. ಯಾರ ಅಡ್ಡಿ ಆತಂಕಗಳು ಇರಬಾರದು. ಇದು ಮಕ್ಕಳಿಗೆ ವಿಶೇಷವಾಗಿ ಅನ್ವಯಿಸುತ್ತದೆ. ಸದರಿ ಕ್ರಿಯೆಯನ್ನು ಕಳ್ಳತನದ ವ್ಯಾಪ್ತಿಯಲ್ಲಿ ಸೇರಿಸಬಾರದು’. ಈ ಬಗೆಯ ನಿಲುವನ್ನು ನಮ್ಮೊಳಗೆ ಹುಟ್ಟುಹಾಕಿ ಧಾರಾಳವಾಗಿ ತನ್ನ ವ್ಯಾಪ್ತಿಗೆಳೆದುಕೊಂಡ ತತ್ವಜ್ಞಾನಿ ಗೆಳೆಯ ಮಾನವಸ್ವಾಮಿ ಉರುಫ್‌ ಚಿಟ್ಟೆ.

ನಮ್ಮೂರಿನವನೇ ಆದ ಈತ ಈಗಲೂ ಗುಂಪಿನಲ್ಲಿ ಎಲ್ಲಿ ಸಿಕ್ಕಿದರೂ ಹೇಳುತ್ತಿರುತ್ತಾನೆ ‘ಮೂರ್ತಿ ಇಲ್ಲದಿದ್ದರೆ ನಾನು ಏಳನೇ ಕ್ಲಾಸ್‌ ಪಾಸ್‌ ಮಾಡಲು ಆಗುತ್ತಿರಲಿಲ್ಲ’ ಎಂದು. ನಾನೇ ಇನ್ನೂ ಓಂ ನಾಮ ಬರೆಯುತ್ತಿದ್ದು ಅಕ್ಷರ ಕಾಗುಣಿತ ಕಲಿಯಲು ಮುಲುಕುತ್ತಿದ್ದ ಕಾಲದಲ್ಲಿ ಇವನ ವಿದ್ಯಾಭ್ಯಾಸದ ಮಾರ್ಗದರ್ಶಿ ಹೇಗಾಗಿದ್ದೆನೋ ಕಾಣೆ. ಯಾರು ನನ್ನ ಗೆಳೆಯರು ಅವನಿಗೆ ಪರಿಚಯವವದಾಗಲೂ ಮೇಲಿನ ಡೈಲಾಗ್‌ ಹೊಡೆದು ನನ್ನನ್ನು ಅನ್ಯಾಯವಾಗಿ ನಂಬಿಸಲು ಯತ್ನಿಸುತ್ತಾನೆ. ಇವನದು ಗ್ಯಾರಂಟಿಯಾಗಿ ಏಳನೇ ಕ್ಲಾಸ್‌ ಪಾಸಾಗಿದೆ ಎಂದು ಜಗ್ಗಜ್ಜಾಹೀರು ಮಾಡುವುದು ಇವನ ಉದ್ದೇಶವೇ ಗೊತ್ತಿಲ್ಲ.

ನಮ್ಮೆಲ್ಲರಿಗಿಂತಾ ಗಿಡ ಬೆಳೆಸುವುದು, ಚಿತ್ರ ಬರೆಯುವುದು, ಆಟ ಓಟ, ಟೀಚರ್‌ ಗಳಿಗೆ ಬೇಕಾದ ಸಕಲೆಂಟು (ಅವರೆ ಕಾಯಿ, ಎಳನೀರು, ಹಲಸಿನ ಹಣ್ಣು, ಮಾವಿನ ಹಣ್ಣು, ನುಗ್ಗೆ ಸೊಪ್ಪು, ಕರಿಬೇವು, ಕಾಯಿ ಕಸುರು ಇತ್ಯಾದಿ) ವಸ್ತುಳ ಸಪ್ಲೈ, ಇತ್ಯಾದಿ ವಿಷಯಗಳಲ್ಲಿ  ಚೂಟಿಯಾಗಿದ್ದ ಈ ಗೆಳೆಯನಿಗೆ ಓದು ಬರಹಗಳು ಒಲಿಯಲಿಲ್ಲ ಅಥವ ಇವನೇ ಒಣ ಅಕ್ಷರಗಳಿಗೆ ಒಲಿಯಲ್ಲಿಲ್ಲವೊ ಏನೋ ಯಾರಿಗೆ ಗೊತ್ತು. ಈಜು, ಮರ ಹತ್ತುವುದು, ಜೇನು ಬಿಚ್ಚುವುದು, ಹೀಗೆ ಅವನ ಒಡನಾಟ ಅನೇಕ ಪಾಠಗಳನ್ನು ಕಲಿಯಲು ಸಹಾಯಕವಾದದ್ದು ನಿಜ. 

ಎಷ್ಟೊಂದು ಜನ ಗೆಳೆಯರು

ಐದು ಪೈಸೆಗೆ ಕಲ್ಲಂಗಡಿ ಅಥವ ಸೌತೆಕಾಯಿ ಕೊಂಡು ಪೀಸ್‌ ಮಾಡಿಸಿ ಹಂಚಿ ತಿನ್ನಲು ಕರೆಯುತ್ತಿದ್ದ ಜಯಮೂರ್ತಿ, ನಾನು  ಏಳನೇ ಕ್ಲಾಸಿನಲ್ಲಿ ಗಣಿತದಲ್ಲಿ ಪಾಸಾಗುವುದು ದುಸ್ತರವಾಗಿದ್ದಾಗ ಇಂಬಾಗಿ ಕುಂತು ನಾನೊಂದು ಗತಿ ಕಾಣಲು ಕಾರಣನಾದ ಕಾಂತರಾಜ, ವಾರಕ್ಕೊಮ್ಮೆಯಾದರೂ ತನ್ನಹಾಸ್ಟೆಲ್‌ ಗೆ ಕರೆದುಕೊಂಡು ಹೋಗಿ ಗುಟ್ಟಾಗಿ ಕೇರ್‌ ಉಪ್ಪಿಟ್ಟು ಕೊಡುತ್ತಿದ್ದ ರಾಮಚಂದ್ರ, ಭಟ್ಟರ ಹೋಟೆಲಿನ ಕಾಸ್ಟ್ಲಿ ಉಪ್ಪಿಟ್ಟು ಕೊಡಿಸುತ್ತಿದ್ದ ಅರುಣ, ಬೀಡಿ ಸೇದಲು ಕಲಿಸಲು ಯತ್ನಿಸಿದ ಶಿವನಂಜ, ಕಬಡ್ಡಿ ಆಟದಲ್ಲಿ ನನ್ನಂತ ಸಣಕಲನನ್ನು ಕಾರ್ನರ್‌ ಆಡಲು ಬಿಟ್ಟು ಮಿಂಚಿಸಿದ ಕಬಡ್ಡಿ ಕ್ಯಾಪ್ಟನ್‌ ಕಲ್ಲಿಡ್ಲಿ ಉರುಫ್‌ ಮಾದೇವ…  

ಸಾಮಾನ್ಯವಾಗಿ ಬಾಲ್ಯಕಾಲದ ಬಹುತೇಕ  ಗೆಳೆಯರು ಕಳೆದುಹೋಗುತ್ತಾರೆ ಅಥವಾ ಅಪರೂಪಕ್ಕೆ ಸಿಕ್ಕಿ ಮಿಂಚಿಹೋಗುತ್ತಾರೆ. ಆದರೆ ನನಗೆ ಅವರ ಒಡನಾಟದ ಸದವಕಾಶವಿದೆ, ನೆನಪಿನಂಗಳದಲ್ಲಿ ಮತ್ತೆ ಆಡತೊಡಗುತ್ತೇನೆ.

‍ಲೇಖಕರು Admin

November 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: