ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಕುವೆಂಪುರವರ ಶೈಲಿಯಲ್ಲಿ
ಅಣಕು ಬರಹ ರಚನೆ : ಶಿವು

ಧನುರ್ವಿದ್ಯಾ ಚತುರ ಗುಡಾಕೇಶನಿಗೆ ದ್ವಾಪರ ಯುಗದಲ್ಲಿ ಗೀತೆಯನ್ನು ಬೋಧಿಸಿದ ಶ್ರೀ ಕೃಷ್ಣ ಪರಮಾತ್ಮನ ಪರಮ ಭಕ್ತ ಶ್ರೀ ಚೈತನ್ಯ ಮಹಾಪ್ರಭು ಮಿಂದು ಹರ್ಷಿಸಿದ, ಪಾವನ ಗಂಗೆಯ ತಂಗಿಯೆಂದೇ ಹೇಳಬಹುದಾದ ಗೋದಾವರಿ ನದಿ, ಆ ಕಾನನದ ಸೆರಗಿನಲ್ಲಿ ನಳನಳಿಸುತ್ತ ಹರಿಯುತ್ತಿರುವ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲವು. ವಾಸ್ತವದಲ್ಲಿ ಅಂದು ಆ ಕಾರ್ತೀಕಮಾಸದ ಸಂಜೆ ನೂರಾರು ಕಣ್ಣುಗಳು ಆ ಸುಂದರ ರಮಣೀಯತೆಯನ್ನು ಈಕ್ಷಿಸುತ್ತಿದ್ದರೂ ಆ ಕಣ್ಣುಗಳು ಮಾನವ ಕಣ್ಣುಗಳಾಗಿರಲಿಲ್ಲ. ಪವನಸುತ ಮಾರುತಿಯ ವಂಶಜರೂ ಮಾನವನ ಪೂರ್ವಜರೂ ಆದ ಕಪಿವರ್ಯರು ಆ ದಂಡೆಯಲ್ಲಿ ಕುಳಿತು ಸುತ್ತಲಿನ ಸೊಬಗನ್ನು ಅನುಭವಿಸುವ ಸಾಮರ್ಥ್ಯವಿಲ್ಲದೇ ಕೇವಲ ಉದರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ಆಸೀನರಾಗಿದ್ದ ಜಾಗೆಗೆ ಸ್ವಲ್ಪವೇ ದೂರದಲ್ಲಿ ಒಂದು ಕಾಡು. ಸೂರ್ಯಾಸ್ತದ ಸಂಜೆ ಬಿಸಿಲು ದೀರ್ಘ ತರುಚ್ಛಾಯೆಗಳ ಮಧ್ಯೆ ತೂರಿಬಂದು ಕುರುಚುಲು ಗಿಡಗಳ ಮೇಲೆಯೂ ಪಿಣಿಲಾಗಿ ಹೆಣೆದುಕೊಂಡಿದ್ದ ಬಳ್ಳಿ ಹೊದರುಗಳ ಮೇಲೆಯೂ ಶುಷ್ಕಪರ್ಣಾವೃತವಾಗಿದ್ದ ನೆಲದ ಮೇಲೂ ಬಿದ್ದಿತ್ತು. ಇತರ ವನ್ಯ ಪಕ್ಷಿಗಳೂ ತಮ್ಮ ತಮ್ಮ ಧ್ವನಿ ಪ್ರದರ್ಶನದಲ್ಲಿ ತೊಡಗಿದ್ದವು. ಒಂದು ಕಡೆ ಕಾಜಾಣವು ತನ್ನ ಸ್ವರ್ಗೀಯ ಸುಮಧುರವಾದ ಗಾನಧಾರೆಯಿಂದ ಅರಣ್ಯ ಪರ್ವತಗಳನ್ನು ಸಂಗೀತ ಸ್ರೋತದಲ್ಲಿ ತೇಲಿಸುತ್ತಿತ್ತು.

ಆ ಕಾಡಿನಲ್ಲೊಂದು ಹೆಮ್ಮರ. ಆ ಮರದ ಮೇಲೆ ಗಿಳಿವಿಂಡೊಂದು ಸಂಸಾರ ಹೂಡಿತ್ತು. ಸಂಸಾರವೆಂದಮೇಲೆ ಅಸಮಾಧಾನ ಕಟ್ಟಿಟ್ಟ ಬುತ್ತಿ ಎಂಬುದು ಸರ್ವವಿದಿತ. ಆ ಗಿಳಿ ಸಂಸಾರವೇನೂ ಇದಕ್ಕೆ ಹೊರತಾಗಿರಲಿಲ್ಲ. ಚಿಕ್ಕಪ್ಪ ಗಿಳಿ ಎಲ್ಲರ ಮಾತುಕತೆಗಳಲ್ಲೂ ಮೂಗುತೂರಿಸುತ್ತಾ ಬೇಡದ ಸಲಹೆ ಬುದ್ಧಿವಾದವನ್ನು ಬಹು ಧಾರಾಳವಾಗಿ ವಿತರಿಸುತ್ತಾ ಇದ್ದದ್ದು ಮನೆಯವರಿಗೆಲ್ಲಾ ಒಂದು ನುಂಗಲಾರದ ತುತ್ತಾಗಿತ್ತು. ಅಪ್ಪ ಗಿಳಿಗೆ ತನ್ನ ತಮ್ಮನನ್ನು ನಿಯಂತ್ರಿಸಲು ಇದ್ದ ಮುಖ್ಯ ಅಡಚಣೆಯೆಂದರೆ ಅವನ ಬಗ್ಗೆ ಇದ್ದ ಮಮಕಾರ. ಆ ಸಂಜೆ ಯಾವುದೋ ಕಾರಣಕ್ಕೆ ಚಿಕ್ಕಪ್ಪ ಗಿಳಿ ಮೌನವ್ರತವನ್ನು ಕೈಗೊಂಡಿದ್ದರಿAದ ಸಂಸಾರದಲ್ಲಿ ಕ್ಷಣಿಕವಾಗಿಯಾದರೂ ಶಾಂತಿ ನೆಲಸಿತ್ತು.

ಸೂರ್ಯದೇವ ತನ್ನ ಪಡುವಲ ಕುಟೀರಕ್ಕೆ ನಿರ್ಗಮಿಸುತ್ತಿದ್ದಂತೆಯೇ ಗಾಢ ನಿಶೀಥ ಕಾನನವನ್ನು ಆವರಿಸಿತು. ಒಮ್ಮೆಲೇ ಧೋ ಧೋ ಎಂದು ವರುಣದೇವ ಜಲವರ್ಷವನ್ನು ಧಾರೆಯೆರೆದ. ಆ ಬಿರುಮಳೆಯ ರಭಸಕ್ಕೆ, ಅದರ ಕುಳಿರಿಗೆ ಕಂಗಾಲಾಗಿ ನಮ್ಮ ವಾನರಮಿತ್ರರು ಓಡೋಡಿ ಬಂದು ಆ ಹೆಮ್ಮರದ ಬುಡದಲ್ಲಿ ಆಶ್ರಯಪಡೆದರು. ಅವರ ಕಿಚಿಪಿಚಿ, ಗಾಬರಿಯ ಸಂಭಾಷಣೆ ಚಿಕ್ಕಪ್ಪ ಗಿಳಿಯ ಮೌನವನ್ನು ಮುರಿಯುವುದರಲ್ಲಿ ಯಶಸ್ವಿಯಾಯಿತು. ಚಿಕ್ಕಪ್ಪ ಗಿಳಿ ಕುತೂಹಲದಿಂದ ಗೂಡಿನಿಂದ ಹೊರಕ್ಕೆ ಇಣುಕಿ ಚಳಿಯಿಂದ ನಡುಗುತ್ತಿದ್ದ ವಾನರವೃಂದವನ್ನು ಈಕ್ಷಿಸಿದ. ಅವರ ಪರಿಸ್ಥಿತಿ ನೋಡಿ ಅವನ ಹೃದಯ ಕರಗಿತು. ಆ ಮಂಗಗಳನ್ನುದ್ದೇಶಿಸಿ, “ಅಪ್ಪಗಳಿರಾ, ಭಗವಂತನು ನಮ್ಮಗಳಿಗಿಲ್ಲದ ಅತ್ಯಂತ ಉಪಯುಕ್ತವಾದ ಪಾಣಿಪಾದಗಳನ್ನು ನಿಮಗೆ ಕರುಣಿಸಿದ್ದಾನೆ. ಏಕೆ ವೃಥಾ ಕಷ್ಟಕೋಟಲೆಗಳನ್ನು ಅನುಭವಿಸುವಿರಿ. ಒಂದು ಭವ್ಯ. ಗೃಹವನ್ನು ಅಥವಾ ಕಡೆಯ ಪಕ್ಷ ಒಂದು ಕುಟೀರವನ್ನು ನಿರ್ಮಿಸಿಕೊಂಡು ಅದರಲ್ಲಿ ನಿಮ್ಮ ಜೀವಯಾತ್ರೆಯನ್ನು ನಡೆಸಲಾಗದೇ” ಎನ್ನುವಷ್ಟರಲ್ಲಿ ಅಪ್ಪ ಗಿಳಿ ಹಿಂದಿನಿಂದ ಬಂದು ಅವನ ಬಾಯನ್ನು ತನ್ನ ರೆಕ್ಕೆಯಿಂದ ಮುಚ್ಚಿ ಚಿಕ್ಕಪ್ಪನನ್ನು ಹಿಂದಕ್ಕೆಳೆದ. ಆದರೇನು, ವಿಧಿಲಿಖಿತ. ಆಗುವ ಅನಾಹುತ ಆಗಿಯೇ ಹೋಗಿತ್ತು.

ಶುಕೋಪದೇಶ ಆ ವಾನರ ಅಂತಃಕರಣಗಳಲ್ಲಿ ಕಾದ ಸೀಸದಂತೆ ಒಳಹೊಕ್ಕು ಮುಂದೆ ಕಲಿಯುಗದಲ್ಲಿ ಆ ವಾನರರ ವಂಶಜರು ” ಕುಲಕ್ಕೆ ಮೃತ್ಯು ಕೊಡಲಿ ಕಾವು “ಎಂಬ ಗಾದೆಯಂತೆ ಆ ಗೋದಾವರಿ ತಟದ ಕಾಡನ್ನೆಲ್ಲಾ ನಾಶಮಾಡಿ ಪಕ್ಷಿಸಂಕುಲವನ್ನು ನಿರ್ನಾಮಗೊಳಿಸಿ, ಭವ್ಯಸೌಧಗಳನ್ನು ನಿರ್ಮಿಸಿಕೊಂಡು ಅದೇ ಸುಖವೆಂಬ ಮಿಥ್ಯಾ ಆನಂದದಲ್ಲಿ ಮುಳುಗಿದವು.

‍ಲೇಖಕರು avadhi

October 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

೧ ಪ್ರತಿಕ್ರಿಯೆ

  1. Vasundhara k m

    ಆಹಾ..! ಕುವೆಂಪು ಅವರ ಗದ್ಯದ ಗಂಭೀರ ಸೊಗಸೇ…. !! ಬಹಳ ಚೆನ್ನಾಗಿದೆ ಅನುಕರಣಾ ಶೈಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: