“ನಿರಾಶ್ರಿತ”
ಇಂಗ್ಲೀಷ್ ಮೂಲ: ಎ ಜೆ ಥಾಮಸ್
ಕನ್ನಡಕ್ಕೆ: ಕಮಲಾಕರ ಕಡವೆ
ನಿರಾಶ್ರಿತನಂತೆ ಬಂದನವನು
ಇನ್ನೊಂದು ಜಗದಿಂದ, ಮಾನವ ಸಂಪರ್ಕಕ್ಕೆ ಹಾತೊರೆದು;
ಮಾರಕ ಅನಾರೋಗ್ಯವಿದ್ದ ಅವನು
ಹುರುಪು ಭರವಸೆಗಳ ಶೋಧಿಸುತ್ತಿದ್ದ
ಅವನ ಪೂರ್ವಕಾಲ ಅವನ ತುಟಿಗಳಿಂದ ತೊಟ್ಟಿಕ್ಕುತ್ತಿತ್ತು
ತಪ್ಪೊಪ್ಪಿಗೆಯೋ ಎಂಬಂತೆ
ನೋಡಿದರೆ ಹಗುರವಾಗಿ ನೆಮ್ಮದಿ ಸಿಕ್ಕವನಂತೆ ಕಾಣುತ್ತಿದ್ದ
ಬಾಳು ಮತ್ತು ಸಾವು – ಒಂದೇ ನಾಣ್ಯದ ಎರಡು ಮುಖಗಳು…
ಮಧ್ಯದ ತೆಳು ಭಾಗದಲ್ಲಿ ವಿಹರಿಸುವವನಂತಿದ್ದ;
ಗೋಪುರದ ಮೇಲೆ ನಿಂತು ರೈಲುರಸ್ತೆಯ ಇಬ್ಬಗೆಯಿಂದಲೂ
ಒಂದೇ ಕಂಬಿಯ ಮೇಲೆ ನುಗ್ಗುತ್ತಿರುವ ಎರಡು ಬಂಡಿಗಳ ಕಡೆ ನೋಡಿಯೂ
ಅವುಗಳನ್ನು ನಿಲ್ಲಿಸಲಾಗದ ಕಾವಲಿನವನಂತೆ
ನಿರುದ್ವೇಗದಲ್ಲಿ ಅವನಿದ್ದ.
ವಿಧಿಯ ತುರ್ತು, ಹಾಗೂ ಅದನು ಅರಿಯುವಲ್ಲಿನ ಹತಾಶೆ
ತನ್ನ ಶಬ್ದಗಳ ತಾನೇ ಮರೆಯುವಂತೆ ಮಾಡಿತು ಅವನಿಗೆ
ಹಿಂಜರಿಕೆಯಿಂದ, ನಿಶ್ಚಿತ ನಿರ್ಧಾರದ ರೀತಿಯ ಬಿಟ್ಟು ಕೊಟ್ಟ.
ಭೂಮಿ ಮೇಲಿನ ಅವನ ದಿನಗಳ ವ್ಯಾಖ್ಯಾನ ನೀಡಿಯಾಗಿತ್ತು
ಕುರುಡು ಬೀದಿಯಲ್ಲಿ ಇನ್ನೂ ಸಾಗುವವರಿಗೆ ನೆನಪಿರಲಿ ಎಂಬಂತೆ.
0 ಪ್ರತಿಕ್ರಿಯೆಗಳು