ರಹಮತ್ ತರೀಕೆರೆ
ಬಿಜಿಎಲ್ ಸ್ವಾಮಿ ನನ್ನ ಪ್ರಿಯ ಲೇಖಕರು. ಅವರ ’ಹಸಿರುಹೊನ್ನು’, ‘ನಮ್ಮಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ’ ಅದೆಷ್ಟು ಬಾರಿ ಓದಿರುವೆನೊ. ‘ತಮಿಳು ತಲೆಗಳ ನಡುವೆ’ ಓದುವಾಗ ಮೊದಮೊದಲು ಖುಶಿಯಾಗಿತ್ತು. ಮತ್ತೆ ಓದುವಾಗ, ಅಲ್ಲಿನ ಹಾಸ್ಯ-ವ್ಯಂಗ್ಯಗಳಲ್ಲಿ ಸೂಕ್ಷ್ಮವಾಗಿ ಭಾಷಿಕ ಸಮುದಾಯವೊಂದರ ದ್ವೇಷದ ಎಳೆಗಳಿವೆ, ಬೌದ್ಧಿಕ ಅಹಂಕಾರದಲ್ಲಿ ತಮಿಳರನ್ನು ದಡ್ಡರೆಂದು ವಿಡಂಬಿಸುವ ದನಿಯಿದೆ, ಕೆಲವು ವ್ಯಕ್ತಿಗಳನ್ನು ಇಟ್ಟುಕೊಂಡು ಸಮುದಾಯವನ್ನು ದುರುಳೀಕರಿಸುವ ವಾಸನೆಯಿದೆ, ಎಂದು ಶಂಕೆ ಹುಟ್ಟಿತು. ಬಹುಶಃ ಈಗದನ್ನು ಹಿಂದಿನಂತೆ ಆಸ್ವಾದಿಸಲಾರೆ. ಕಾರಣ, ತಮಿಳರ ನಡುವೆ ಬೆಳೆದ ನಮ್ಮ ಕುಟುಂಬದ ಅನುಭವ ಬೇರೆಯೇ ಸತ್ಯ ಉಸುರುತ್ತಿದೆ.
ತಮಿಳುನಾಡಿನ ಗಡಿಗೆ ಲಗತ್ತಾಗಿರುವ ಕರ್ನಾಟಕದ ಜಿಲ್ಲೆಗಳಲ್ಲಿ ತಮಿಳರು ಇರುವುದು ಅರ್ಥವಾಗುತ್ತದೆ. ಆದರೆ ಗಡಿಗೆ ನೂರಾರು ಕಿಮೀ ದೂರದಲ್ಲಿ, ನಡುಗರ್ನಾಟಕಕ್ಕೆ ಸೇರಿದ ತರೀಕೆರೆ ಶಿವಮೊಗ್ಗ ಭದ್ರಾವತಿ ಹಿರಿಯೂರು ಹೊಸಪೇಟೆ ಸೀಮೆಗಳಲ್ಲಿ ಬಿಡಾರಕ್ಕೆ ಕಾರಣವೇನು? ಉತ್ತರ ಸರಳ: ಈ ಊರುಗಳೆಲ್ಲ ಡ್ಯಾಮಿನ ಕೆಳಗಿವೆ. ಜಲಾಶಯಗಳನ್ನು ಕಟ್ಟಲೆಂದೊ, ಅಚ್ಚುಕಟ್ಟು ಪ್ರದೇಶದಲ್ಲಿ ಕೆಸರುಗದ್ದೆಯಲ್ಲಿ ದುಡಿಯಲೆಂದೊ ಬಂದ ತಮಿಳರು ಅಲ್ಲಲ್ಲೇ ನೆಲೆನಿಂತರು. ನಮ್ಮ ತಾಲೂಕಿನ ಲಕ್ಕವಳ್ಳಿ; ಹಂಪಿ ಬಗಲಿನ ಕಡ್ಡಿರಾಂಪುರ, ಕಾಮಾಲಾಪುರ ತಮಿಳುನಾಡಿನ ತುಣುಕುಗಳು. ನಮ್ಮ ಸೀಮೆಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕಿದ್ದ ರೈಲುವ್ಯವಸ್ಥೆ ಇವರ ಗುಳೆಯನ್ನು ಸುಲಭಗೊಳಿಸಿತು. ‘ದೊಡ್ಡರೈಲು ಹತ್ಕೊಂಡು ಬಂದ್‍ಬಿಡ್ತಾರೆ’ ಎಂದು ನಮ್ಮಲ್ಲಿ ಕೆಲವರು ಅಸಹನೆಯಿಂದ ಹೇಳುತ್ತಿದ್ದರು. ಮಹಾ ಶ್ರಮಜೀವಿಗಳಾದ ತಮಿಳರು ಮೀನುಗಾರಿಕೆ, ಗಾರೆಕೆಲಸ, ಟೈಲರಿಂಗ್, ಮನೆಕಟ್ಟುವಿಕೆ, ಬೇಸಾಯ, ಬಡಗಿತನ ಮಾಡಿಕೊಂಡು ತಾವೂ ಬದುಕಿದರು. ಪರಿಸರವನ್ನೂ ಚಂದಗೊಳಿಸಿದರು.
ತಮಿಳರನ್ನು ಕೊಂಗರು ಎಂದು ಕರೆವ ಪದ್ಧತಿಯಿದೆ. ಕೊಂಗುನಾಡಾದ ಸೇಲಂ ಕೊಯಮತ್ತೂರು ಪ್ರದೇಶದಿಂದ ಬಂದವರಾದ ಕಾರಣ ಈ ಹೆಸರು. ಚರಿತ್ರೆಯಲ್ಲಿ ಈ ಪ್ರದೇಶ ವಿಜಯನಗರ ಮತ್ತು ಟಿಪ್ಪುವಿನ ಕಾಲದ ಮೈಸೂರು ರಾಜ್ಯಕ್ಕೆ ಸೇರಿತ್ತು. ಕೊಂಗರು ಶಬ್ದದಲ್ಲಿ ನಿಂದಾದನಿಯಿದೆ. ವಲಸಿಗರ ಬಗ್ಗೆ ಸ್ಥಳೀಕರಲ್ಲಿ ಇರುವ ಅಸಹನೆ ಮತ್ತು ಕಪ್ಪುಬಣ್ಣ ಕುರಿತ ವ್ಯಂಗ್ಯವೂ ಇದರಲ್ಲಿ ಸೇರಿದೆ. ಅಮ್ಮನನ್ನು ಅಪ್ಪ ಕೊಂಗಾಟಿ ಕಾಟ್ಪಾಡಿ ಎನ್ನುತ್ತಿದ್ದನು. ಸಮತಳದಲ್ಲಿ ಕುಳವಾಡಿ ಕೆಲಸ ಮಾಡಿಕೊಂಡಿದ್ದ ಚಿನ್ನತಂಬಿ- ಆದಿಮೂಲಂ ದಲಿತರು. ನಮ್ಮೂರ ಜನ ಹೆಂಗಸರಿಗೆ `ನಿನ್ನ ಚಿಂತಾಂಬಿ ಹೊತ್ಕೊಂಡು ಹೋಗ’ ಎಂದು ಬೈಯುತ್ತಿದ್ದರು. ಚಿನ್ನತಂಬಿ ಆದಿಮೂಲಂಗೆ ತಮ್ಮ ಅನುಮತಿಯಿಲ್ಲದೆ ಜನ ಯಾವೆಲ್ಲ ಕೆಲಸಕ್ಕೆ ನೇಮಿಸಿದ್ದಾರೆ ಎಂದು ಕೊನೆಗೂ ತಿಳಿಯಲಿಲ್ಲ.

ನಮಗೆ ತಮಿಳು ಸಂಪರ್ಕ ಬಂದಿದ್ದು, ಕುಲುಮೆಯಲ್ಲಿ ಬಡಗಿಯಾಗಿದ್ದ ಮುನಿಯಪ್ಪ ಹಾಗೂ ಅವನ ತಂಗಿ ಪಟ್ಟಮ್ಮಾಳ್ ದೆಸೆಯಿಂದ. ಮುನಿಯಪ್ಪ ಅಪ್ಪನ ಸ್ನೇಹಿತ; ಪಟ್ಟಮ್ಮಾಳ್ ಅಮ್ಮನ ಸಖಿ. ನಮ್ಮ ಕುಟುಂಬ ತರೀಕೆರೆಗೆ ಬಂದು ನೆಲೆಸಿದ ಮನೆಗಳು, ತಮಿಳು ಮಾತಾಡುವ ಬೆಸ್ತರು, ಗಾರೆಕೆಲಸಗಾರರು ಮತ್ತು ಮಂಡಕ್ಕಿ ಹುರಿವವರಿದ್ದ ಬೀದಿಗಳಲ್ಲಿದ್ದವು. ಪುರಕಾರಮ್ಮ ಎಂಬ ತಮಿಳಜ್ಜಿ, ಐದು ಪೈಸೆಗೊಂದು ಹೂಮೃದು ಇಡ್ಲಿಯನ್ನು ಮುತ್ತುಗದ ಎಲೆಯ ಮೇಲಿಟ್ಟು ಚಟ್ನಿ ಅಭಿಷೇಕಿಸಿ ಕೊಡುತ್ತಿದ್ದಳು. ಅವಳ ಕೈಯ ಆಂಬೊಡೆ ಗರಿಗರಿ. ಮಲ್ಲಿಗೆ ಮೊಗ್ಗಿನಂತಹ ಮಂಡಕ್ಕಿ ಉತ್ಪಾದಿಸುತ್ತಿದ್ದ ಕಲ್ಯಾಣಮ್ಮ ಮತ್ತು ಮಕ್ಕಳಾದ ಗೋವಿಂದ, ರಾಧಾ, ಪುಳುಮಟ್ಟೆ, ಬೆಂಕಿ ಹೊಗೆ ಧೂಳುಗಳಲ್ಲಿ ಒಣಗಿ ಅಕಾಲಿಕ ಮರಣಕ್ಕೆ ಸಂದರು.
ಇವರಿಗೆ ಹೋಲಿಸಿದರೆ, ಬೆಸ್ತರಾದ ಕಣ್ಣಪ್ಪ-ಕುಪ್ಪಮ್ಮ; ಸುಬ್ರಮಣಿ-ಮೀನಾಕ್ಷಿ ಕುಟುಂಬಗಳು ದೀರ್ಘ ಬದುಕಿದರು. ತಮಿಳರ ಮನೆಯಂಗಳ ಚಂದ. ನಿತ್ಯವೂ ಸಗಣಿಯಿಂದ ಸಾರಿಸಲ್ಪಟ್ಟು ರಂಗೋಲಿ ಇರಿಸಿಕೊಂಡು, ಎಳಗೂಸಿನ ಅಂಗೈಯಂತೆ ಸ್ವಚ್ಛ. ಕುಪ್ಪಮ್ಮ ತರಕಾರಿ ಸೊಪ್ಪು ಬೆಳೆಸಿದ್ದಳು. ತಮ್ಮ ಕಲೀಮ, ಕೊತ್ತಂಬರಿ ಸೊಪ್ಪನ್ನು ಕದ್ದು ಆಕೆಯ ಪಾಲಿಗೆ ಕೊತ್ತಂಬರಿ ಕಳ್ಳನೆಂದೇ ಪ್ರಸಿದ್ಧನಾದನು. ಕುಪ್ಪಮ್ಮ ದೊಡ್ಡ ಪಾತ್ರೆಯಲ್ಲಿ ಮೊಸರು ಅನ್ನವನ್ನು ಕಲಸಿ ಕ್ರಿಕೆಟ್ಟಿನ ಚೆಂಡಿನಂತೆ ಮಾಡಿ, ಸುತ್ತ ಮಕ್ಕಳನ್ನು ಕೂರಿಸಿಕೊಂಡು ಕೈತುತ್ತು ಕೊಡುತ್ತಿದ್ದಳು.
ಕುಪ್ಪಮ್ಮ ನಮ್ಮ ಬೀದಿಗೆ ವಾರ್ಡನ್ ಇದ್ದಂತೆ. ಹೊಸ ನಾಯಿ ಬಂದರೂ ಆಕೆಗೆ ಗೊತ್ತಾಗುತ್ತಿತ್ತು. ಊರಿನ ಮಹಿಳಾಲೋಕದ ರಹಸ್ಯಗಳೆಲ್ಲ ತಿಳಿದಿರುತ್ತಿದ್ದವು. ಗೂಢವಿಷಯ ಬಂದೊಡನೆ, ನಾಟಕೀಯವಾಗಿ ದನಿ ತಗ್ಗಿಸಿ ಕಣ್ಣನ್ನು ಕಳ್ಳನೋಟವಾಗಿಸಿ ತೊಡೆ ಭುಜತಟ್ಟಿ ಮಾತಾಡುವಳು. ಗಂಡ ಕಣ್ಣಪ್ಪ ಪುಂಡಿಯನ್ನು ಬೆಳೆದು ಹಳ್ಳದಲ್ಲಿ ಕೊಳೆಸಿ ನಾರನ್ನು ತೆಗೆದು ಹಗ್ಗ ಹೊಸೆಯುತ್ತಿದ್ದನು. ಆತ ಬೆಳಗಿನ ಜಾಗ ಕೆರೆಗೆ ಹೋದರೆ, ಹಿಡಿದ ಮೀನನ್ನು ಮಾರಿ ಮರಳುತ್ತಿದ್ದುದು ಸಂಜೆಗೇ. ಮೀನು ಮಾರುವ ಹೊತ್ತಲ್ಲಿ ಪೇಟೆಯಲ್ಲಿ ಅಪರಿಚಿತನಂತೆ ವರ್ತಿಸುತ್ತಿದ್ದ ಆತ, ರಾತ್ರಿ ಅಂಗಳದಲ್ಲಿ ಕೂತು, ಅರ್ಚನೆಯ ಸಾಮಗ್ರಿಗಳಂತೆ ಸಾರಾಯಿ ಕಾರ, ವಡೆ, ಒಣಮೀನು, ನೀರುಳ್ಳಿ ತುಂಡು, ಹಸಿಮೆಣಸನ್ನು ಸುತ್ತ ಹರಡಿಕೊಂಡು, ಸಾರಾಯಿ ಸೇವನೆ ಕಾರ್ಯಕ್ರಮ ನಡೆಸುತ್ತಿದ್ದನು. ನಮಗೆ ಸನ್ನೆಯಿಂದ ಕರೆದು ಮುಷ್ಟಿತುಂಬ ಕಾರ ದಯಪಾಲಿಸುತ್ತಿದ್ದನು. ನಾಯಿ ಬೆಕ್ಕುಗಳ ಜತೆ ಅವನ ಅಖಂಡವಾದ ಮಾತುಕತೆ. ಕೆರೆಗೆ ಹೋಗದ ದಿನ ಬಿಸಿಲಲ್ಲಿ ಹಾಲುಚಾಚಿ ಕೂತು ಹರಿದ ಬಲೆಯನ್ನು ರಿಪೇರಿಸುತ್ತಿದ್ದನು. ಕಬ್ಬಿಣದ ಗುಂಡುಗಳ ಅಂಚುಗಟ್ಟಿದ ನಸುಗೆಂಪು ನೈಲಾನ್ ಬಲೆಯನ್ನು ಸೊಳ್ಳೆಪರದೆ ಕಟ್ಟಿದಂತೆ ಒಣಗಲು ಹಾಕಿದರೆ, ಅದರೊಳಗೆ ನಾವು ಕೂತು ಆಟವಾಡುತ್ತಿದ್ದೆವು.
ಮುಂದೆ ಬೀದಿಗೆ ಕಣ್ಣಪ್ಪನ ಬಂಧುವಾದ ಸುಬ್ರಮಣಿ ಬಂದನು. ಬಹುಕಾಲ ಬ್ರಹ್ಮಚಾರಿಯಾಗಿದ್ದ ಮಣಿ, ತಮಿಳುನಾಡಿಗೆ ಹೋಗಿ ಮದುವೆಯಾಗಿ ಮೀನಾಕ್ಷಿಯನ್ನು ಕರೆತಂದನು. ಎತ್ತರ ನಿಲುವಿನ ದೊಡ್ಡ ಕಂಗಳ ಕೃಷ್ಣಸುಂದರಿ ಮೀನಾಕ್ಷಿ. ನಕ್ಕರೆ ಕಾರ್ಮೋಡದೊಳಗೆ ಮಿಂಚು ಬೆಳಗುತ್ತಿತ್ತು. ಫರ್ಲಾಂಗು ದೂರದಿಂದಲೇ ಮಿನುಗು ಮೂಗುತಿ ನೋಡಬಹುದಿತ್ತು. `ಶಿಲಪ್ಪದಿಕಾರಂ’ನಲ್ಲಿ ಕನ್ನಗಿಯನ್ನು ಆಕೆಯ ಪ್ರೇಮಿ `ಎನ್ ಕರುಂಬೇ ಎನ್ ತೇನೇ” (ನನ್ನ ಕಬ್ಬೇ ನನ್ನ ಜೇನೇ’) ಎಂದು ಹೇಳಿದ್ದು ಉತ್ಪ್ರೇಕ್ಷೆಯಲ್ಲ. ಮೀನಾಕ್ಷಿಯ ಕನ್ನಡ ಬಿಎಂಶ್ರೀಯವರ ಹಳಗನ್ನಡದಂತಿತ್ತು. ಯಾಕೊ ಮಣಿ-ಮೀನಾಕ್ಷಿ ಬಹಳ ಕಾದಾಡುತ್ತಿದ್ದರು. ಅವರ ಪ್ರೇಮದ ಪರಿಭಾಷೆಯೇ ಕಲಹರೂಪಿಯಾಗಿತ್ತೊ ಏನೊ? ಕುಪ್ಪಮ್ಮನ ಪ್ರಕಾರ `ಮಣಿ ಹುಲಿಯಂತಹ ಹುಡುಗ. ರಾಚಾಸಿಯನ್ನು ಕಟ್ಟಿಕೊಂಡು ಇಲಿಯಾಗಿಬಿಟ್ಟ’. ಮೀನಾಕ್ಷಿಯ ಮೇಲೆ ಪ್ರತಿ ಮಂಗಳವಾರ ರಾತ್ರಿ ಕಾಳಿಯಮ್ಮನ ಆವಾಹನೆ ಆಗುತ್ತಿತ್ತು. ಆಗ ಸಮಸ್ತ ಬೀದಿ ಮಣಿಯವರ ಮನೆಯಲ್ಲಿ. ಮೀನಾಕ್ಷಿ ಮೈದುಂಬಿ ಹೂಂಕರಿಸುತ್ತಿದ್ದಳು. ಕಟಕಟ ಹಲ್ಲುಕಡಿಯುತ್ತಿದ್ದಳು. ತಲೆಗೂದಲು ಬಿಚ್ಚಿಕೊಂಡು ಕಣ್ಣು ಕೆಕ್ಕರಿಸಿಕೊಂಡು ಹ್ಞುಹ್ಞುಹ್ಞು ಮಾಡುತ್ತ `ಅಡಾ ಮಣಿ, ವಾಡ ಇಂಗೆ’ ಎಂದು ಹುಕುಮಿಸುತ್ತಿದ್ದಳು. ಕಾರ್ಣಿಕಗಳನ್ನು ತಮಿಳಿನಲ್ಲಿ ಹೇಳುವಳು. ಮಣಿ ನಡುಗುತ್ತ ಕೈಮುಗಿದುಕೊಂಡು ಆಮ, ಆಯ್ಚಿ, ಎಂದು ವಿಧೇಯನಾಗಿ ಉತ್ತರಿಸುವನು. ದೇವಿ ಕಾರ್ಣೀಕ ವಾಣಿಯನ್ನೆಲ್ಲ ಮುಗಿಸಿದ ಬಳಿಕ ಹ್ಞುಹ್ಞುಹೂಂ ಎನ್ನುತ್ತ ಕೈಚಾಚಲು, ಮಣಿ ಉರಿತಾಗಿದ ಕರ್ಪೂರವನ್ನು ಅಂಗೈಯಲ್ಲಿಡುತ್ತಿದ್ದನು. ಮೀನಾಕ್ಷಿ ಗುಳಕ್ಕನೆ ನುಂಗಿ ಪೂರ್ವಾವಸ್ಥೆಗೆ ಮರಳುತ್ತಿದ್ದಳು. ಆಕೆಗೆ ಮಕ್ಕಳಾದ ಬಳಿಕ ದೇವಿ ಬರುವುದು ನಿಂತುಹೋಯಿತು.
ಮುಂದೆ ಮಣಿ-ಮೀನಾಕ್ಷಿ ತಮಿಳುನಾಡಿಗೆ ಮರಳಿದರು. ಕಣ್ಣಪ್ಪ ಕಾಲವಾದನು. ಅವಳ ಒಬ್ಬ ಮಗ ಪುಂಗಾನ, ಚೋರವೃತ್ತಿಗೆ ಬಿದ್ದು ಪೋಲಿಸರಿಂದ ಪೆಟ್ಟು ತಿಂದು ಸತ್ತುಹೋದನು.
ಪುಂಡಿನಾರಿನ ಉಂಡೆಯ ತಲೆಯುಳ್ಳ ಕುಪ್ಪಮ್ಮ ಬದುಕಿದ್ದಾಳೆ. ಈಚೆಗೆ ಅವಳನ್ನು ಕಾಣಲು ಹೋದೆ. ನಾನು ನೆಟ್ಟಿದ್ದ ರೈನ್‍ಟ್ರೀ ನೋಡುವುದೂ ನನ್ನ ಇರಾದೆ. ಕುಪ್ಪಮ್ಮ ಮರದಡಿ ಭಾರೀ ತ್ರಿಶೂಲ ನೆಟ್ಟು, ಕುಂಕುಮ ಅರಿಶಿಣ ಬಳಿದು, ದೀಪಹಚ್ಚಿ ಅದು ಕಾಳಿಯಮ್ಮನ ಗುಡಿಯಾಗಿದೆ. ಮನೆಯೊಳಗಿಂದ ಒಬ್ಬ ಹುಡುಗಿ ಹೊರಬಂದು `ಅಣ್ಣಾ ಅದು ದೇವರಮರ. ಅತ್ತ ಹೋಗಬೇಡ’ ಎಂದಳು. ಅವಳ ಹಿಂದಿನಿಂದ ತಲೆಹಾಕಿದ ಸಿ ಆಕಾರದಲ್ಲಿ ಬಾಗಿರುವ ಹಣ್ಣುಮುದುಕಿ ಕುಪ್ಪಮ್ಮ, ನನ್ನನ್ನು ದಿಟ್ಟಿಸುತ್ತ `ಅಯ್ಯಾ. ನಮ್ಮ ರಾಮತ್ತಲ್ಲವಾ? ಯಾವಾಗ ಬಂದೆ ಊರಿಗೆ? ಪೆಣ್ಣೇ, ಅಂದ ಚೇರ್ ಕೊಂಡುವಾ. ಅವನ್ ದಾ ನಟ್ಟರ್ ಮರತ್ತೈ ಅದು’ ಎಂದು ಸೊಸೆಗೆ ಹೇಳಿ, ಮರದಡಿ ಕುರ್ಚಿ ಹಾಕಿ ಕೂರಿಸಿದಳು. ಹಾಲು ತರಲು ಮೊಮ್ಮಕ್ಕಳನ್ನು ಅಂಗಡಿಗೆ ಅಟ್ಟಿದಳು. ತಂಪಾದ ನೆರಳು. ಎಲೆಗಳು ಗಾಳಿಗೆ ಗಲಗಲಿಸುತ್ತಿದ್ದವು. ಮೈನಾಗಳ ಕಚಪಿಚ ಗಲಭೆ. ಕುಪ್ಪಮ್ಮ ಬಾಗಿ ನನ್ನತ್ತ ನಿರಿಗೆಗಟ್ಟಿದ ಮುಖವನ್ನು ಹತ್ತಿರ ತಂದು `ಚಂದಗಿದೀಯಪ್ಪ? ಎಷ್ಟು ಮಕ್ಕಳು? ಲಗ್ನ ಮಾಡಿದೆಯಾ? ಸಂಬಳ ಎಷ್ಟು? ಮನಿಗಿನೆ ಕಟ್ಟಿದೀಯಾ?’ ಪ್ರಶ್ನೆಗಳ ಸರಮಾಲೆ. ಇದ್ದಕ್ಕಿದ್ದಂತೆ ದನಿ ಇಳಿಸಿ ಕೊಂಚ ಗದ್ಗದ ಮಾಡಿ `ನಿಮ್ಮಮ್ಮ ಎಂಥಾ ಮನಷಿ? ಇನ್ನ ನಿಮ್ಮಪ್ಪ ಹೇಳಬ್ಯಾಡ. ಕಿರಾತಕ’ ಎನ್ನುವಳು. ಅಮ್ಮ ಸತ್ತ ಹಿಂದೆಯೇ ಅಪ್ಪ ಮರುಮದುವೆ ಆಗಿದ್ದನ್ನು ನಾವು ಮರೆತಿದ್ದೆವು. ಕುಪ್ಪಮ್ಮ ಕ್ಷಮಿಸಿರಲಿಲ್ಲ. ನಾನು ಕೇಳಿದೆ:
`ಕುಪ್ಪಮ್ಮ ನೀವು ತಮಿಳುನಾಡಿನಲ್ಲಿ ಯಾವ ಕಡೆಯವರು?’
‘ಅದನ್ನ ಕಟ್ಕೊಂಡು ಏನ್ಮಾಡ್ತೀಯಾ? ಜೀವನ ಎಲ್ಲ ಇಲ್ಲೇ ಕಳೀತು. ಕಣ್ಣಪ್ಪನ ಪಕ್ಕ ಹೋಗಿ ಮಲಗೋಕೆ ಕಾಯ್ತಿದೇನೆ’
ಆಕೆ ಕೆಲಹೊತ್ತು ಮೌನಕ್ಕೆ ಜಾರಿದಳು. ಎಚ್ಚೆತ್ತು `ಒಳ್ಳೆ ಕಾಪಿ ಮಾಡ್ತೀನಿ ತಡಿ. ಕುಡಿಯನ’ ಎಂದು ಗುಡಿಸಲೊಳಗೆ ಹೋದಳು.
0 ಪ್ರತಿಕ್ರಿಯೆಗಳು